****ಸಾರಿಗೆ ಮುಷ್ಕರದ ನಿರ್ದಾರಕ್ಕೆ ಹೊಸ ಟ್ವಿಸ್ಟ್: ಅಧಿಕಾರಿಗಳಿಗೆ ಸವಾಲೆಸೆದ ಸಾರಿಗೆ ಸಿಬ್ಬಂದಿ
****ಸಾರಿಗೆ ಸಿಬ್ಬಂದಿ ಜತೆ ಅಧಿಕಾರಿ ವರ್ಗ ಕೈ ಜೋಡಿಸಿದ್ರೆ ಇತಿಹಾಸ ನಿರ್ಮಾಣ ಪಕ್ಕಾ
****ಪ್ರತಿ ಮುಷ್ಕರಕ್ಕು ಪ್ರಚೋದನೆ ಕೊಟ್ಟು, ಒಳಗೆ ಕುಳಿತುಕೊಳ್ಳುವ ಅಧಿಕಾರಿ ವರ್ಗಕ್ಕೆ ಸಿಬ್ಬಂದಿ ಠಕ್ಕರ್
****ಒಳ್ಳೇದಾದ್ರೆ ಇಬ್ಬರಿಗೂ ಆಗಲಿ..ಕೆಟ್ಟದಾದ್ರೂ ಇಬ್ಬರಿಗೂ ಆಗಲಿ..ಪ್ರತಿಫಲ ನಿಮ್ಗೆ-ಶಿಕ್ಷೆ ಭಾಗ್ಯ ನಮಗೆ ಮಾತ್ರ ಏಕೆ..?
ಬೆಂಗಳೂರು:ಪ್ರತಿ ಬಾರಿ ಮುಷ್ಕರ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಳ್ಳೋದು ನಾವು..ಸೇಫ್ ಆಗೋದು ಅಧಿಕಾರಿಗಳಾ..? ಇದ್ಯಾವ ಸೀಮೆಯ ನ್ಯಾಯ.ಇನ್ಮುಂದೆ ಹಾಗೆ ನಡೆಯೊಕ್ಕೆ ನಾವು ಬಿಡೊಲ್ಲ..ನಮಗೆ ಆಗುವಂತದ್ದು ಅವರಿಗೂ ಆಗಲಿ…ನಮ್ಮ ಮೇಲೆ ಆಗಬಹುದಾದ ಶಿಸ್ತು ಕ್ರಮಗಳು ಅವರ ಮೇಲೂ ಆಗಲಿ..ಒಬ್ಬರಿಗೊಂದು ನ್ಯಾಯ..ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಬೇಡವೇ ಬೇಡ…

ಹೀಗೊಂದು ಹೊಸ ವರಾತ ಶುರುವಿಟ್ಟುಕೊಂಡಿದ್ದಾರೆ ಸಾರಿಗೆ ಸಿಬ್ಬಂದಿ.ಆಗಸ್ಟ್ 5 ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರದಲ್ಲಿ ನಾವು ಪಾಲ್ಗೊಳ್ಳಬೇಕೆಂದರೆ ಮೊದಲು ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಬರಬೇಕು.ಬಸ್ ತೆಗೆಯದಂತೆ ನಮ್ಮನ್ನು ಪ್ರಚೋದಿಸಿ ಬೀದಿಗಿಳಿಸಿ ತಾವು ಮಾತ್ರ ಎಸಿ ಕಚೇರಿಗಳಲ್ಲಿ ಕುತ್ಕೊಂಡು ಮಜಾ ತೆಗೆದುಕೊಳ್ಳೋದಕ್ಕೆ ನಾವ್ ಬಿಡೊಲ್ಲ.ಗೆದ್ದರೆ ಆಡೊಕ್ಕೆ ಬಂದಿದ್ದೆ..ಸೋತ್ರೆ ನೋಡಲಿಕ್ಕೆ ಬಂದಿದ್ದೆ ಎನ್ನುವ ಅಧಿಕಾರಿಗಳ ಮನಸ್ತಿತಿ ಬದಲಾದರೆ ಮಾತ್ರ ನಾವು ಈ ಬಾರಿಯ ಮುಷ್ಕರದಲ್ಲಿ ಪಾಲ್ಗೊಳ್ಳುವ ಬಗ್ಗೆ ಗಂಭೀರವಾಗಿ ಆಲೋಚಿಸಬಹುದೆನ್ನುವುದು ಅವರ ವಾದ.ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಇದು ಸತ್ಯ ಕೂಡ.


ಸಾರಿಗೆ ಸಿಬ್ಬಂದಿ ಆಗಸ್ಟ್ 5 ರಿಂದ ಗಂಭೀರ ಸ್ವರೂಪದ ಮುಷ್ಕರಕ್ಕೆ ಮುಂದಾಗಿರುವುದು ನ್ಯಾಯೋಚಿತವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಆದ್ರೆ ಈ ಮುಷ್ಕರ ಯಶಸ್ವಿಯಾಗಬೇಕಾದ್ರೆ ಸಾಮಾಹಿಕ ಪಾಲ್ಗೊಳ್ಳುವಿಕೆ ಅಗತ್ಯಕ್ಕಿಂತ ಅನಿವಾರ್ಯ.ಏಕೆಂದ್ರೆ ಕಳೆದ ಬಾರಿ ಮುಷ್ಕರ ನಡೆಸಿದ ಸಾರಿಗೆ ಸಿಬ್ಬಂದಿ ಅನುಭವಿಸಿದ ಪಡಿಪಾಟಲು ಎಂತದ್ದೆನ್ನುವುದು ಗೊತ್ತು.ಸಾವಿರಾರು ಸಿಬ್ಬಂದಿ ಸಸ್ಪೆಂಡ್-ಡಿಸ್ಮಿಸ್ ಶಿಕ್ಷೆಗೆ ಒಳಗಾಗಿ ವರ್ಷಗಳವರೆಗೆ ಕೆಲಸವಿಲ್ಲದೆ ಕೂತು ನಂತರ ನಿಗಮಕ್ಕೆ ವಾಪಸ್ಸಾಗೋದ್ರಲ್ಲಿ ಅಯ್ಯಯ್ಯೋ ಎನ್ನುವಂತಾಗಿದ್ದು ಎಲ್ಲರಿಗೂ ಗೊತ್ತಿದೆ.
ಸೇವೆಗೆ ವಾಪಸ್ಸಾಗಬೇಕಾದ್ರೆ ಅನುಸರಿಸಬೇಕಾದ ಮಾನದಂಡಗಳಲ್ಲಿ ಮುಷ್ಕರದಲ್ಲಿ ಪಾಲ್ಗೊಳ್ಳಬಾರದು..ನಿಗಮದ ವಿರುದ್ಧ ಬಂಡಾಯ ಏಳಬಾರದು.. ಹಾಗೇನಾದ್ರು ಮಾಡಿದ್ರೆ ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ತೆಗೆದು ಹಾಕಲಾಗುತ್ತೆ ಎನ್ನುವ ಮರಣಶಾಸನ ಸ್ವರೂಪದ ನಿಯಮ-ನಿಬಂಧನೆ ಮಾಡಿ ಅದಕ್ಕೆ ಸಹಿ ಹಾಕಿಸಿಕೊಂಡಿಯೇ ಅವರನ್ನು ಒಳಗೆ ಸೇರಿಸಿಕೊಂಡಿದ್ದು ಎಲ್ಲರಿಗು ಗೊತ್ತಿದೆ.

ಸಾರಿಗೆ ಸಿಬ್ಬಂದಿಯ ಹಿತಾಸಕ್ತಿ ಮೇಲೆ ಚಪ್ಪಡಿ ಕಲ್ಲು ಎಳೆದು,ಅವರ ಪ್ರಜಾಸತ್ತಾತ್ಮಕ ಹೋರಾಟದ ಹಕ್ಕನ್ನು ಕಸಿದುಕೊಂಡ ಒಡಂಬಡಿಕೆಗೆ ಸಹಿ ಹಾಕಿದ ಸಾರಿಗೆ ಸಿಬ್ಬಂದಿ ಆಗಸ್ಟ್ 6ರ ಮುಷ್ಕರದಲ್ಲಿ ನಿಜಕ್ಕೂ ಪಾಲ್ಗೊಳ್ಳುತ್ತಾರಾ..?ಕಳೆದ ಬಾರಿಯ ಮುಷ್ಕರದಲ್ಲಿ ಸಂಘಟನೆಗಳನ್ನು ನೆಚ್ಚಿಕೊಂಡು ಯಾವ ರೀತಿ ಬದುಕುಗಳನ್ನು ಬರ್ಬಾದ್ ಮಾಡಿಕೊಂಡ ಕಹಿ ನೆನಪು ಮರೆತು ಮುಷ್ಕರದಲ್ಲಿ ಭಾಗವಹಿಸ್ತಾರಾ..? ಮುಷ್ಕರದಲ್ಲಿ ಪಾಲ್ಗೊಂಡ್ರೆ ಒಡಂಬಡಿಕೆ ಉಲ್ಲಂಘಿಸಿದಂತಾಗಿ ಆಡಳಿತ ಮಂಡಳಿ ಅತ್ಯಂತ ಕಠಿಣವಾದ ಶಿಸ್ತು ಕ್ರಮ ಜಾರಿಗೊಳಿಸಿದ್ರೆ ಆಗಬಹುದಾದ ಬಹುದೊಡ್ಡ ನಷ್ಟದ ಅರಿವಿದ್ದರೂ ಬೇಡಿಕೆಗಳ ಈಡೇರಿಕೆಗೆ ಆಗಸ್ಟ್ 5 ರ ಮುಷ್ಕರಕ್ಕೆ ಧುಮುಕುವ ಧೈರ್ಯ ಮಾಡ್ತಾರಾ..? ಈ ರೀತಿಯ ಸಾಕಷ್ಟು ಪ್ರಶ್ನೆಗಳು ಸಾರಿಗೆ ಸಿಬ್ಬಂದಿ ವಲಯದೊಳಗೆ ಚರ್ಚೆ ಆಗುತ್ತಿದೆ.


ಇದೆಲ್ಲದರ ಜತೆಗೆ ಒಂದ್ವೇಳೆ ಈ ಬಾರಿ ಮುಷ್ಕರದಲ್ಲಿ ಪಾಲ್ಗೊಂಡು ಕೆಲಸಕ್ಕೆ ಕುತ್ತು ಬಂದರೆ ನಮ್ಮ ಪರವಾಗಿ ಹೋರಾಡಿ ನ್ಯಾಯ ದೊರಕಿಸಿಕೊಡುವ ಭರವಸೆಯನ್ನು ಮುಚ್ಚಳಿಕೆಯಲ್ಲಿ ಯಾರಾದ್ರೂ ಬರೆದುಕೊಡ್ತೀರಾ ಹೇಳಿ ಎಂದು ಸಾರಿಗೆ ಸಿಬ್ಬಂದಿ ಕೇಳುತ್ತಿದ್ದರೂ ಸಂಘಟನೆಗಳಿಗೆ ಆ ಒಂದು ಭರವಸೆ ಕೊಡಲಿಕ್ಕೆ ಸಿದ್ದವಿಲ್ಲ.ಏಕೆಂದ್ರೆ ಸರ್ಕಾರಿ ಹಾಗು ನಾಲ್ಕು ನಿಗಮಗಳ ಆಡಳಿತ ಮಂಡಳಿಗಳು ಸಾರಿಗೆ ಸಂಘಟನೆಗಳ ಮಾತು ಕೇಳುವುದಿರಲಿ,ಅವುಗಳನ್ನು ನಿಗಮದ ಕಾಂಪೌಂಡ್ ನೊಳಗು ಬಿಟ್ಟುಕೊಳ್ಳದ ಸ್ತಿತಿಗೆ ಬಂದು ಬಿಟ್ಟಿವೆ.ಪರಿಸ್ತಿತಿ ಹೀಗೆ್ಲ್ಲಾ ಇರುವಾಗ ಯಾವ ಗ್ಯಾರಂಟಿಯಲ್ಲಿ..ಯಾರನ್ನು ನಂಬಿಕೊಂಡು ಆಗಸ್ಟ್ 6ರ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಹೇಳಿ ಎಂದು ಪ್ರಶ್ನಿಸ್ತಾರೆ ಸಾರಿಗೆ ಸಿಬ್ಬಂದಿ.
ಸಾರಿಗೆ ಸಿಬ್ಬಂದಿಯ ಪ್ರಶ್ನೆಯಲ್ಲು ನ್ಯಾಯವಿದೆ.ಅವರು ಕೇಳುತ್ತಿರುವದಕ್ಕು ಅರ್ಥವಿದೆ.ಏಕೆಂದ್ರೆ ಸಾರಿಗೆ ಸಂಘಟನೆಗಳು ಕಳೆದ ಬಾರಿಯ ಮುಷ್ಕರದ ಸಮಯದಲ್ಲೇ ಸಾರಿಗೆ ಸಿಬ್ಬಂದಿಯ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು.ಕಾನೂನಾತ್ಮಕ ಹೋರಾಟ ನಡೆಸ್ಲಿಕ್ಕೆ ಯಾವುದೇ ಸಹಕಾರ-ಸಹಾಯ-ಸಲಹೆಯನ್ನೂ ನೀಡಿರಲಿಲ್ಲವಂತೆ.ನಿಮ್ಮ ಪಾಡು ನಿಮಗೆ ಎನ್ನುವಂತೆ ಕೈ ಚೆಲ್ಲಿದ್ದವಂತೆ.ಕೆಲಸ ಹೋದರೂ ಪರ್ವಾ್ಗಿಲ್ಲ. ಸ್ವಾಭಿಮಾನ ಬಿಟ್ಟು ಆಡಳಿತ ಮಂಡಳಿಯ ಮರಣಶಾಸನದಂಥ ಒಡಂಬಡಿಕೆಗೆ ಸಹಿ ಹಾಕೊಲ್ಲ ಎಂದು ಕೂತಿದ್ದು ಸಿಬ್ಬಂದಿ ನೆರವಿಗೆ ಸಂಘಟನೆಗಳು ಬರಲೇ ಇಲ್ಲವತೆ.ವರ್ಷಗಳವರೆಗೆ ಕಾದು ಕಾದು ಸುಸ್ತಾದ ಮೇಲೆಯೇ ಸಾರಿಗೆ ಸಂಘಟನೆಗಳ ನೈಜ ಸ್ವರೂಪ ಕಂಡು ನಮಗೆ ಕಷ್ಟವಾದರೂ ಪರ್ವಾಗಿಲ್ಲ.ನಮ್ಮ ಹೆಂಡತಿ ಮಕ್ಕಳು ಬೀದಿಗೆ ಬೀಳಬಾರದೆನ್ನುವ ಉದ್ದೇಶದಲ್ಲಿ ಒಡಂಬಡಿಕೆಗೆ ಸಹಿ ಹಾಕಿದ್ರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಪರಿಸ್ತಿತಿ ಹೀಗಿರುವಲ್ಲಿ ಸಾರಿಗೆ ಸಂಘಟನೆಗಳು ಸಿಬ್ಬಂದಿಯನ್ನು ಮನವೊಲಿಸಿ ಮುಷ್ಕರದಲ್ಲಿ ಧುಮುಕಿಸೋದು ನಿಜಕ್ಕು ಸವಾಲೇ ಸರಿ.

ಇದೆಲ್ಲಕ್ಕಿಂತ ದೊಡ್ಡ ಸವಾಲು ಸಾರಿಗೆ ಸಂಘಟನೆಗಳಿಗೆ ಎದುರಾಗಿರೋದೇನು ಅಂದ್ರೆ ಮುಷ್ಕರದಲ್ಲಿ ನಾವು ಪಾಲ್ಗೊಳ್ಳಬೇಕು ಎಂದ್ರೆ ಅಧಿಕಾರಿಗಳನ್ನು ಮೊದಲು ಕೆಲಸ ಬಿಟ್ಟು ಬೀದಿಗೆ ಇಳಿಸಿ ಎನ್ನುವ ಷರತ್ತು.ಏಕೆಂದ್ರೆ ಪ್ರತಿ ಬಾರಿ ಮುಷ್ಕರ ನಡೆದಾಗಲೂ ಅಧಿಕಾರಿಗಳು ಹಿಂದೆ ನಿಂತು ಪ್ರಚೋದಿಸುವ ಕೆಲಸ ಮಾಡುತ್ತಾ ಬಂದಿದ್ದಾರೆಯೇ ಹೊರತು, ತಾವೇ ಮುಷ್ಕರಕ್ಕೆ ಧುಮುಕಿದ ಉದಾಹರಣೆಗಳೇ ಇಲ್ಲವಂತೆ.ಹಾಗಾಗಿ ಶಿಸ್ತು ಕ್ರಮವೇನಾದ್ರು ಜರುಗಿಸಲಾಗ್ತದೆ ಎಂದ್ರೆ ಅದು ಸಾರಿಗೆ ಸಿಬ್ಬಂದಿ ವಿರುದ್ದ.ಇಲ್ಲಿ ಪ್ರತಿ ಬಾರಿಯೂ ಅಧಿಕಾರಿ ವರ್ಗ ಸೇಫ್ ಆಗುತ್ತಲೇ ಬಂದಿದೆ.ಆದ್ರೆ ಶಿಕ್ಷೆ ಮಾತ್ರ ಬಸ್ ತೆಗೆಯದೆ,ಕೆಲ ಸ್ಥಗಿತ ಮಾಡಿ ಮುಷ್ಕರದಲ್ಲಿ ಪಾಲ್ಗೊಂಡ ಸಿಬ್ಬಂದಿಗೆ ಆಗುತ್ತಿದೆ. ಮುಷ್ಕರದಲ್ಲಿ ಪಾಲ್ಗೊಂಡು ಸಸ್ಪೆಂಡ್-ಡಿಸ್ಮಿಸ್ ಆಗೋದು ನಾವು..ಅಧಿಕಾರಿಗಳು ಮಾತ್ರ ಸೇಫ್ ಆಗ್ತಿದಾರೆ. ಆದರೆ ಇನ್ಮುಂದೆ ಹಾಗೆ ಆಗೊಕ್ಕೆ ನಾವ್ ಬಿಡೋದಿಲ್ಲ ಅಧಿಕಾರಿಗಳು ಕೆಲಸ ಬಿಟ್ಟು ರಸ್ತೆಗಿಳಿದ್ರೆ ಮಾತ್ರ ನಾವು ಕೂಡ ಕೆಲಸ ಬಿಟ್ಟು,ಮುಂದಾಗಬಹುದಾದ ಪರಿಣಾಮಗಳನ್ನು ಲೆಕ್ಕಿಸದೆ ಮುಷ್ಕರದಲ್ಲಿ ಭಾಗಿಯಾಗ್ತೇವೆ. :ಫಲ ಸಿಕ್ಕರೆ ಇಬ್ಬರಿಗೂ ಸಿಗಲಿ.ಹಾಗೆ ಶಿಕ್ಷೆಯಾದರೆ ಇಬ್ಬರಿಗೂ ಆಗಲಿ ಎಂಬ ಪಟ್ಟು ಹಿಡಿದಿದ್ದಾರಂತೆ…ಸಾಮಾಜಿಕ ನ್ಯಾಯದ ವಿಷಯ ಬಂದ್ರೆ ಸಾರಿಗೆ ಸಿಬ್ಬಂದಿಯ ಈ ಬೇಡಿಕೆ ನ್ಯಾಯೋಚಿತ ಹಾಗೂ ಸಮಂಜಸವಾಗಿದೆ.
ಆದರೆ ಸಾರಿಗೆ ಸಿಬ್ಬಂದಿಯ ಈ ಪಟ್ಟು ಕೇವಲ ಸಿಬ್ಬಂದಿಯನ್ನಷ್ಟೇ ಮುಂದಿಟ್ಟುಕೊಂಡು ಮುಷ್ಕರ ನಡೆಸುವ ಚಿಂತನೆಯಲ್ಲಿದ್ದ ಸಾರಿಗೆ ಸಂಘಟನೆಗಳಿಗೆ ಸಂಕಷ್ಟ ತಂದೊಡ್ಡಿದೆಯಂತೆ. ಏಕೆಂದರೆ ಸಾರಿಗೆ ಸಿಬ್ಬಂದಿಯನ್ನು ಮನವೊಲಿಸುವುದು ಸಲೀಸು..ಆದ್ರೆ ಅಧಿಕಾರಿಗಳನ್ನು ಮನವೊಲಿಸಿ ಮುಷ್ಕರಕ್ಕೆ ಕರೆ ತರುವುದು ತೀರಾ ಕಷ್ಟ ಹಾಗು ಸವಾಲಿನ ಕೆಲಸ ಎನ್ನುವುದು ಸಂಘಟನೆಗಳಿಗೂ ಗೊತ್ತಿದೆ.ಹಾಗಾಗಿ ಈ ಗೊಂದಲವನ್ನು ಹೇಗೆ ಬಗೆಹರಿಸುವುದು. ಸಾರಿಗೆ ಸಿಬ್ಬಂದಿಯನ್ನು ಹೇಗೆ ಮನವೊಲಿಸುವುದು,ಸಿಬ್ಬಂದಿ ತಮ್ಮ ಪಟ್ಟು ಸಡಿಲಿಸದೆ ಇದ್ದರೆ ಅಧಿಕಾರಿ ವರ್ಗವನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಎನ್ನುವುದು ಪೇಚು ತಂದೊಡ್ಡಿದೆ.ಒಂದ್ವೇಳೆ ಸಾರಿಗೆ ಸಿಬ್ಬಂದಿ ಜತೆಗೆ ಅಧಿಕಾರಿ ಸಮೂಹವು ಒಟ್ಟಾಗಿ ನಿಂತು ಮುಷ್ಕರ ನಡೆಸಿದ್ರೆ ಅದು ಸಾರಿಗೆ ನಿಗಮಗಳ ಇತಿಹಾಸದಲ್ಲಿ ಚರಿತ್ರಾರ್ಹ ಸಂಗತಿಯಾಗಲಿದೆ ಅಷ್ಟೇ ಅಲ್ಲ ಸಾರಿಗೆ ಸಮೂಹದ ಸಂಘಟಿತ ಶಕ್ತಿ ಎಂತದ್ದೆನ್ನುವುದು ಕೂಡ ಸರ್ಕಾರದ ಅರಿವಿಗೆ ಬರಬಹುದೇನೋ.. ಹಾಗಾಗಿ ಸಾರಿಗೆ ಸಿಬ್ಬಂದಿ ಮತ್ತು ಅಧಿಕಾರಿ ವರ್ಗ ಎರಡನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಷ್ಕರವನ್ನು ಹೇಗೆ ಯಶಸ್ವಿಗೊಳಿಸುವುದು ಎನ್ನುವ ದೊಡ್ಡ ಚಿಂತೆ ಸಾರಿಗೆ ಸಂಘಟನೆಗಳನ್ನು ಕಾಡುತ್ತಿದೆಯಂತೆ..