
ಪದವಿಪೂರ್ವ ಶಿಕ್ಷಣ ಮಂಡಳಿ( ಪಿಯು ಬೋರ್ಡ್)ಗೆ ಮಿಸ್ಟರ್ ಕ್ಲೀನ್ ಎಂದೇ ಖ್ಯಾತಿ ಪಡೆದಿರುವ ಕಿರಿಯ ಐಎಎಸ್ ಅಧಿಕಾರಿ ಭರತ್ ಎಂಟ್ರಿ ಕೊಟ್ಟ ಮೇಲೆ ಭ್ರಷ್ಟರು-ಮೈಗಳ್ಳರು-ಇಲಾಖೆ ಕೊಡುವ ಸಂಬಳಕ್ಕೆ ನೀಯತ್ತಿಲ್ಲದೆ ಅಕ್ರಮಗಳಲ್ಲಿ ಭಾಗಿಯಾದವರ ಎದೆಯಲ್ಲಿ ನಡುಕ ಸೃಷ್ಟಿಯಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಖಡಕ್ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರ ಕಾರ್ಯನಿರ್ವಹಣೆಗೆ ವೇಗ ದೊರೆತಿದೆ.ಯಾವೊಬ್ಬ ಅಧಿಕಾರಿಯ ನಿರೀಕ್ಷೆಯಲ್ಲಿ ಅವರಿದ್ದರೋ ಅಂತದ್ದೇ ಅಧಿಕಾರಿಯ ಸ್ವರೂಪದಲ್ಲಿ ಭರತ್ ಸಿಕ್ಕಿದ್ದಾರೆ ಎಂದೇ ಶಿಕ್ಷಣ ಇಲಾಖೆ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.

ಕಿರಿಯ ಐಎಎಸ್ ಅಧಿಕಾರಿ ಭರತ್ ಪಿಯು ಬೋರ್ಡ್ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು ಒಂದೆರೆಡು ತಿಂಗಳಾಗಿರಬಹುದೇನೋ..?ಅಷ್ಟರಲ್ಲಾಗಲೇ ಅಮೂಲಾಗ್ರ ಬದಲಾವಣೆಯೊಂದು ಪಿಯು ಬೋರ್ಡ್ ನಲ್ಲಿ ಕಾಣಿಸಲಾರಂಭಿಸಿದೆ. ಮಂಡಳಿಯಲ್ಲಿ ನಡೆಯುತ್ತಿದೆ ಎನ್ನಲಾದ ವ್ಯಾಪಕ ಭ್ರಷ್ಟಾಚಾರ-ಹಗರಣ ಬಹುತೇಕ ನಿಂತ್ಹೋ್ಗಿದೆ. ಅನೇಕ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳ ಅಲೆದಾಟಕ್ಕೆ ಬ್ರೇಕ್ ಬಿದ್ದಿದೆ.ಭ್ರಷ್ಟರಷ್ಟೇ ಅಲ್ಲದೆ ಮೈಗಳ್ಳರಾಗಿ ಹೋಗಿದ್ದ ಬಹುತೇಕ ಅಧಿಕಾರಿ ಸಿಬ್ಬಂದಿ ಎಲ್ಲಕ್ಕೂ ತಿಲಾಂಜಲಿ ಇಟ್ಟು ಕಚೇರಿಯಲ್ಲೇ ಕೆಲಸ ಮಾಡಲಾರಂಭಿಸಿದ್ದಾರೆ.ಹಿಂದಿನ ನಿರ್ದೇಶಕರ ನಿರ್ಲಕ್ಷ್ಯವೋ ಅಥವಾ ಅನಾದಾರವೋ ಗೊತ್ತಿಲ್ಲ.ಹೇಳೋರು ಕೇಳೋರಿಲ್ಲದಂತೆ ಆಗಿದ್ದ ಅಧಿಕಾರಿ ಸಿಬ್ಬಂದಿಗೆ ಚುರುಕು ಮುಟ್ಟಿಸಿದ್ದಾರೆ.ಪಿಯು ಮಂಡಳಿ ಕಚೇರಿ ಒಂದು ರೀತಿ ನೋಡಲು ಸಹ್ಯ ಎನ್ನುವಂತ ವಾತಾವರಣ ಹೊದ್ದುಕೊಂಡಿದೆ.
ಪಿಯು ಮಂಡಳಿ ಎಂದರೆ ಅದು ಹಗರಣಗಳ ಗೂಡು..ಭ್ರಷ್ಟಾಚಾರದ ಕೊಂಪೆ..ದಲ್ಲಾಳಿಗಳ ಅಡ್ಡ..ಸೋಮಾರಿಗಳ ತಾಣ.. ಎಂಬೆಲ್ಲಾ ಆಪಾದನೆಗಳಿದ್ದವು. ಶೈಕ್ಷಣಿಕವಾದಂಥ ವಿಚಾರಗಳಿಗಿಂತ ಬೇರೆಯಾದ ವಿಚಾರಗಳಲ್ಲಿ ಬಹುತೇಕ ಅಧಿಕಾರಿ ಸಿಬ್ಬಂದಿ ಮುಳುಗಿ ಹೋಗಿರುತ್ತಿದ್ದರು.ನಿರ್ದೇಶಕರೇ ಕಣ್ಮುಂದೆ ಹೋದರೂ ಅದಕ್ಕೆ ಕ್ಯಾರೆ ಎನ್ನದಷ್ಟು ಇಲ್ಲಿನ ಬಹುತೇಕ ಸಿಬ್ಬಂದಿ ಉಢಾಳರಾಗಿದ್ದರು.ಇಲಾಖೆಯನ್ನು ಕಂಟ್ರೊಲ್ ನಲ್ಲಿಟ್ಟುಕೊಳ್ಳುವಲ್ಲಿ ನಿರ್ದೇಶಕರು ವಿಫಲವಾಗಿದ್ದೇ ಇದಕ್ಕೆಲ್ಲಾ ಕಾರಣವಾಗಿತ್ತು.ಇದರಿಂದಲೇ ಶೈಕ್ಷಣಿಕ ಅಕ್ರಮಗಳು ಏನೇ ನಡೆದರೂ ನಡೆದೇ ಇಲ್ಲ ಎನ್ನುವಂತ ಸನ್ನಿವೇಶ ಸೃಷ್ಟಿಸಲಾಗುತ್ತಿತ್ತು.ಒಂದಷ್ಟು ಅಧಿಕಾರಿ-ಸಿಬ್ಬಂದಿ ನೇರವಾಗಿ ಅಕ್ರಮಗಳಲ್ಲಿ ಶಾಮೀಲಾಗಿ ಯಾರಿಗೆ ಎಷ್ಟನ್ನು ತಲುಪಿಸಬೇಕೊ ಅಷ್ಟನ್ನು ಚಾಚೂ ತಪ್ಪದೇ ರವಾನಿಸಿ ತಮ್ಮ ಕೆಲಸ ಮಾಡಿಕೊಂಡು ಆರಾಮಾಗಿದ್ದರು( ಒಂದೆರೆಡು ವರ್ಷಗಳ ಅವಧಿಯಲ್ಲಿ ನಿರ್ದೇಶಕರ ಕಚೇರಿಗೆ ಬಂದ ದೂರುಗಳು-ಹಾಕಲ್ಪಟ್ಟ ಆರ್ ಟಿ ಐ ಅರ್ಜಿಗಳನ್ನು ಗಂಭೀರವಾಗಿ ಅವಲೋಕಿಸಿ-ಪರಿಶೀಲಸಿದ್ರೆ ಬಹುಷಃ ಅಲ್ಲಿ ನಡೆದಿರ ಬಹುದಾದ ಅಕ್ರಮ-ಅವ್ಯವಹಾರಗಳ ಅಂದಾಜು ಸಿಕ್ಕೋಗಬಹುದೇನೊ..?.
ಆದರೆ ಭರತ್ ಅವರು ಬಂದ ಮೇಲೆ ಅಂಥಾ ಅವ್ಯವಸ್ಥೆ-ಅಕ್ರಮಗಳಿಗೆ ಬ್ರೇಕ್ ಬೀಳಲಾರಂಬಿಸಿದೆ.ಇಲಾಖೆಯಲ್ಲಿ ನಡೆಯುತ್ತಿರುವ ಎಲ್ಲಾ ವ್ಯವಹಾರಗಳು ಅವರ ಗಮನಕ್ಕೆ ಈಗಾಗಲಾ ಬಂದಿವೆ.ಪಾಠಶಾಲೆ ಸೇರಿದಂತೆ ಅನೇಕ ಹೋರಾಟಗಾರರು ನೀಡಿರುವ ದಂಡಿ ದಂಡಿ ದೂರುಗಳನ್ನು ಅವಲೋಕಿಸುವ ಕೆಲಸವನ್ನು ಅವರೇ ಮಾಡುತ್ತಿದ್ದಾರಂತೆ. ಬೋರ್ಡ್ ನ ಅಧಿಕಾರಿಗಳನ್ನು ಕರೆದು ಅವರಿಗೆ ಚುರುಕು ಮುಟ್ಟಿಸುತ್ತಿದ್ದಾರಂತೆ.ದೂರುಗಳ ಮೇಲೆ ಏಕೆ ಕ್ರಮ ಜಾರಿ ಮಾಡುತ್ತಿಲ್ಲ ಎಂದು ಜಾಡಿಸುತ್ತಿದ್ದಾರಂತೆ.ಅವರ ಖಡಕ್ ತನಕ್ಕೆ ಇಲಾಖೆಯಲ್ಲಿರುವ ಭ್ರಷ್ಟರು ವಿಲ ವಿಲ ಒದ್ದಾಡುತ್ತಿದ್ದಾರಂತೆ,.ನಮ್ಮ ಬುಡವನ್ನೆಲ್ಲಿ ಕಾಯಿಸ್ತಾರೋ ಎನ್ನುವ ಆತಂಕ ಶುರುವಾಗಿದೆಯಂತೆ,.ಆದರೆ ಈ ಬೆಳವಣಿಗೆ ಮಂಡಳಿಯಲ್ಲಿ ಬೆರಳೆಣಿಕೆಯಷ್ಟಿರುವ ಪ್ರಾಮಾಣಿಕರು-ದಕ್ಷರಿಗೆ ನೆಮ್ಮದಿ ತರಿಸಿರುವುದಂತೂ ಸತ್ಯ.
ಭರತ್ ವಿರುದ್ದ ಪ್ರಭಾವಿ ಶಿಕ್ಷಣ ಸಂಸ್ಥೆಗಳ ಮಸಲತ್ತು-ವರ್ಗಾವಣೆಗೆ ಪಿತೂರಿ: ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಪಾಠಶಾಲೆ ಎನ್ನುವ ಶೈಕ್ಷಣಿಕ ಸೇವಾಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ಪ್ರಾಮಾಣಿಕ,ದಕ್ಷ ಅಧಿಕಾರಿ ಭರತ್ ಅವರು ಅಕ್ರಮಗಳಿಗೆ ಹಾಕುತ್ತಿರುವ ಕಡಿವಾಣ ಸಹಿಸಿಕೊಳ್ಳಲಾಗದೆ ಶೈಕ್ಷಣಿಕ ಅಕ್ರಮದಲ್ಲಿ ತೊಡಗಿಕೊಂಡಿರುವ ಅನೇಕ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳು ದೊಡ್ಡಮಟ್ಟದ ಮಸಲತ್ತು ಮಾಡುತ್ತಿವೆಯಂತೆ. ನಿಯಮಗಳನ್ನು ಪಾಲಿಸದೆ ಅಕ್ರಮ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಚಳಿ ಬಿಡಿಸಲು ಮುಂದಾಗಿರುವು ದರಿಂದ ಅವುಗಳ ಪ್ರಮುಖರು ಭರತ್ ಅವರನ್ನು ಟ್ರಾನ್ಸ್ ಫರ್ ಮಾಡಿಸಲು ಸರ್ಕಾರದ ಮಟ್ಟದಲ್ಲಿ ಲಾಭಿ ನಡೆಸುತ್ತಿದ್ದಾರೆನ್ನುವ ಮಾತಿದೆ.ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದೆ ಭರತ್ ಅವರು ಶೈಕ್ಷಣಿಕ ಅಕ್ರಮಗಳಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಿರಲಿ ಅವರುಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕ್ಕೆ ಆದೇಶ ನೀಡುತ್ತಿದ್ದಾರಂತೆ. ಸಚಿವ ಕುಮಾರ ಬಂಗಾರಪ್ಪ ಈ ಲಾಭಿಗೆ ಒಳಗಾಗುತ್ತಾರೋ ಅಥವಾ ಭರತ್ ಅವರಂಥ ದಕ್ಷ ಅಧಿಕಾರಿ ಬೆನ್ನಿಗೆ ನಿಲ್ಲುತ್ತಾರೆನ್ನೋದು ಮುಂದಾಗಬಹುದಾದ ಬೆಳವಣಿಗೆಗಳ ಮೇಲೆ ಅವಲಂಭಿತವಾಗಿದೆ.

ರಶ್ಮಿ ಮಹೇಶ್ ಅವರ ಒಳ್ಳೆಯ ಕೆಲಸಗಳಿಗೆ ಜತೆಯಾದ ಭರತ್: ರಶ್ಮಿ ಮಹೇಶ್ ಈ ನಾಡು ಕಂಡ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು.ಶಿಕ್ಷಣ ಇಲಾಖೆಗೆ ಬಂದ ಮೇಲೆ ಅವರಿಂದ ಕ್ರಾಂತಿಕಾರಿ ಕೆಲಸಗಳಾಗಿವೆ( ಪ್ರಚಾರ ಬಯಸುವ ಜಾಯಮಾನದವರಲ್ಲ ವಾದ್ದರಿಂದ ಅವರ ಕೆಲಸಗಳು ಸಾರ್ವಜನಿಕವಾಗಿ ಬಹಿರಂಗವಾಗುತ್ತಿಲ್ಲ).ಅವರ ಒಳ್ಳೆಯ ಕೆಲಸಗಳಿಗೆ ಸಾಥ್ ಕೊಡುವ ಅಧಿಕಾರಿಗಳ ಕೊರತೆ ಇಷ್ಟ್ ದಿನ ಇಲಾಖೆಯಲ್ಲಿತ್ತು.ಆದರೆ ಭರತ್ ಅವರ ಆಗಮನ-ದೂರದೃಷ್ಟಿ ಹಾಗು ಕಾರ್ಯವೈಖರಿ ರಶ್ಮಿ ಮಹೇಶ್ ಅವರ ಕಾರ್ಯವೈಖರಿಗೆ ಸಿಂಕ್ ಆಗುವುದರಿಂದ ಇಬ್ಬರು ಸೇರಿ ಇಲಾಖೆಯ ಭ್ರಷ್ಟಾಚಾರ-ಅಕ್ರಮವನ್ನು ಕ್ಲೀನ್ ಮಾಡುವ ಕೆಲಸದಲ್ಲಿ ನಿರತವಾಗಿದ್ದಾರೆ.ಅಕ್ರಮವಾಗಿ ತಲೆ ಎತ್ತಿರುವ ಶಿಕ್ಷಣ ಸಂಸ್ಥೆಗಳು, ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿರುವ ಟ್ಯೂಷನ್ ಕೇಂದ್ರಗಳು,ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನುಮತಿ ಪಡೆಯುತ್ತಿರುವಂಥ ಪ್ರಕರಣಗಳನ್ನು ಪತ್ತೆ ಮಾಡಿ ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಆದೇಶ ನೀಡಿರುವ ಬಗ್ಗೆ ಮಾಹಿತಿಗಳಿವೆ.

ಶೈಕ್ಷಣಿಕವಾಗಿ ಕೆಲಸ ಮಾಡುತ್ತಿರುವ ಪಾಠಶಾಲೆ,ಭರತ್ ಅವರ ಕಾರ್ಯವೈಖರಿಯನ್ನು ಅಭಿನಂದಿಸಿದೆ.ಪಾಠಶಾಲೆಯ ಸಂಚಾಲಕ ಗಂಗಾಧರ್ ಅವರು ಹೇಳುವಂತೆ, ಹೇಳೋರು ಕೇಳೋರು ಇಲ್ಲದೆ ಹಾಳೆದ್ದು ಹೋಗಿರುವ ಮಂಡಳಿಗೆ ಒಬ್ಬ ಪ್ರಾಮಾಣಿಕ ಅಧಿಕಾರಿಯ ಅಗತ್ಯವಿತ್ತು.ಅದರ ಕೊರತೆಯನ್ನು ಭರತ್ ನೀಗಿಸಿದ್ದಾರೆ.ಅವರು ಬಂದಾಗಿನಿಂದಲೂ ಕ್ರಾಂತಿಕಾರಿ ಎನ್ನುವಂತ ಕೆಲಸ ಮಾಡುತ್ತಿದ್ದಾರೆನ್ನುವ ಮಾಹಿತಿ ಇದೆ. ನಾನೇ ಈ ಹಿಂದೆ ನೂರಾರು ದೂರುಗಳನ್ನು ನಿರ್ದೇಶಕರಾಗಿದ್ದವರಿಗೆ ಕೊಟ್ಟಿದ್ದೆ.ಆದರೆ ಅದರ ಬಗ್ಗೆ ಯಾವುದೇ ಕ್ರಮ ಜಾರಿಯಾಗಲಿಲ್ಲ.ಇದರ ಹಿಂದೆ ಏನೇನೋ ನಡೆದಿತ್ತೆನ್ನುವ ಗುಸು ಗುಸು ಕೇಳಿಬಂದಿತ್ತು.ಆದರೆ ಪುರಾವೆಗಳಿಲ್ಲದೆ ಆಪಾದನೆ ಮಾಡುವುದು ತಪ್ಪಾಗುತ್ತದೆ.ಹಾಗಾಗಿ ಸುಮ್ಮನಾಗಿದ್ದೆವು. ಎಲ್ಲಾ ಪ್ರಕರಣಗಳಿಗು ಸಾಕ್ಷ್ಯ ಕೊಟ್ಟರೂ ಕ್ರಮ ಜಾರಿಯಾಗಲೇ ಇಲ್ಲ.ಆದರೆ ಭರತ್ ಅವರು ಬಂದ ಮೇಲೆ ಆ ಎಲ್ಲಾ ಪ್ರಕರಣಗಳಿಗು ಜೀವ ಬಂದಿದೆ ಎನ್ನುವ ಮಾಹಿತಿಯಿದೆ. ಹಿಂದಿನ ನಿರ್ದೇಶಕರಿಂದಾಗದಂಥ ಕೆಲಸ ಇವರ ಅವಧಿಯಲ್ಲಾದ್ರೂ ಆಗಲಿ ಎನ್ನುವುದು ನಮ್ಮ ಅರಿಕೆ..ಅದನ್ನು ಭರತ್ ಮಾಡ್ತಾರೆನ್ನುವ ವಿಶ್ವಾಸ ನಮಗಿದೆ ಎನ್ನುತ್ತಾರೆ.

ಡಿಡಿಪಿಯು-ಕಚೇರಿ ಅಧಿಕಾರಿ ಸಿಬ್ಬಂದಿಗಳ ಕಾರ್ಯವೈಖರಿ ಅವಲೋಕನವಾಗಬೇಕಿದೆ. ಕಾಲೇಜುಗಳ ಆರಂಭ,ಮಾನ್ಯತೆ,ನವೀಕರಣದಂತ ಕೆಲಸಗಳಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆಯುತ್ತಿರುವ ಬಗ್ಗೆ ದೂರುಗಳು ಇವೆ.ಇದೆಲ್ಲದರ ಕೇಂದ್ರವೇ ಡಿಡಿಪಿಯು ಕಚೇರಿಗಳೆನ್ನುವುದು ಗುಟ್ಟಾಗೇನು ಉಳಿದಿಲ್ಲ.ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಕಚೇರಿಗಳೆನ್ನುವುದು ಅಕ್ರಮಗಳ ತಾಣವಾಗಿ ಹೋಗಿದೆ ಎನ್ನುವ ಆಪಾದನೆಗಳಿವೆ.ಅಲ್ಲಿನ ಡಿಡಿಪಿಯುಗಳ ಮೇಲೆ ಗಂಭೀರ ಆಪಾದನೆಯಿದೆ.ಅದರಲ್ಲೂ ಬೆಂಗಳೂರು ದಕ್ಷಿಣದ ಡಿಡಿಪಿಯು ಮನೋಹರ ಕೊಳ್ಳಾ ಅವರ ಮೇಲಂತೂ ದಂಡಿ ದಂಡಿ ಆಪಾದನೆಗಳಿವೆ. ಕಚೇರಿಯನ್ನು ತನಗಿಷ್ಟ ಬಂದ ಕಡೆ ಶಿಫ್ಟ್ ಮಾಡಿಕೊಂಡಿರುವ ಗಂಭೀರ ಆಪಾದನೆಯಿದೆ.ಅತ್ಯಂತ ಅಪಾಯಕಾರಿ ಎನ್ನಬಹುದಾದ ಸ್ಥಳದಲ್ಲಿ ಡಿಡಿಪಿಯು ಕಚೇರಿ ಶಿಫ್ಟ್ ಮಾಡಿಕೊಂಡು ಅಲ್ಲಿ ಕೆಲವರನ್ನು ನೇಮಿಸಿಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆನ್ನುವ ಆಪಾದನೆಗಳಿವೆ.ತನಗೆ ಪ್ರಿಯಾಂಕ್ ಖರ್ಗೆ ಅವರ ಬೆಂಬಲವಿದೆ.ಅಲ್ಲಿವರೆಗೆ ನನ್ನನ್ನು ಏನು ಮಾಡಿಕೊಳ್ಳಲಿಕ್ಕಾಗೊಲ್ಲ ಎಂದು ಬಿಲ್ಡಪ್ ಕೊಟ್ಟಿಕೊಂಡು ಅಡ್ಡಾಡುತ್ತಿದ್ದಾರಂತೆ.
ಮನೋಹರ್ ಕೊಳ್ಳಾ ಅವರ ಕಚೇರಿಯಲ್ಲಿ ಅರುಣ್ ಎನ್ನುವ ಸಿಬ್ಬಂದಿಯಿದ್ದು ಆತನೇ ಇಡೀ ಕಚೇರಿಗೆ ಸೂಪರ್ ಡಿಡಿಪಿಯು ರೀತಿಯಲ್ಲಿ ವರ್ತಿಸ್ತಾನೆ. ಕಚೇರಿಗೆ ಬರುವ ಕಾಲೇಜುಗಳವರ ಜತೆ ಸಲಿಗೆ ಬೆಳೆಸಿಕೊಂಡು ಕೆಲಸ ಮಾಡುವ ವೇಳೆಯಲ್ಲೇ ಅವರನ್ನು ಕರೆದುಕೊಂಡು ಹೋಗಿಬರುತ್ತಿದ್ದಾನಂತೆ.ಸಂಜೆಯಾದ ಮೇಲೆಯು ಕಚೇರಿ ಬಾಗಿಲನ್ನು ರಾತ್ರಿವರೆಗೂ ತೆರೆದಿಟ್ಟುಕೊಂಡಿರುತ್ತಾರಂತೆ. ಕೊಳ್ಳಾ ಹಾಗೂ ಅರುಣ್ ಅವರಿಬ್ಬರೇ ಕಚೇರಿಯೊಳಗೆ ಇರುತ್ತಾರಂತೆ. ಸಂಬಂದವೆ ಪಡದ ಕೆಲಸವನ್ನು ಮಾಡುತ್ತಿರುವ ಅರುಣ್ ವಿರುದ್ದ ದಂಡಿ ಆಪಾದನೆಗಳಿದ್ದರೂ ಆತನ ವಿರುದ್ಧ ಕ್ರಮ ಜಾರಿಯಾಗಿಲ್ಲ.ಇದಕ್ಕೆ ಕಾರಣವೇ ಆತನಿಗೆ ಶ್ರೀರಕ್ಷೆಯಂತಿರುವ ಮನೋಹರ ಕೊಳ್ಳಾ..ಅಂತೆ. ಇಂಥವರ ವಿರುದ್ದ ಭರತ್ ಅವರು ಕ್ರಮ ಕೈಗೊಂಡ್ರೆ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ-ಸುಧಾರಣೆ ಎರಡೂ ಆಗಬಹುದು.
ಇದು ಕೇವಲ ಸ್ಯಾಂಪಲ್..ಇಂಥಾ ನೂರಾರು ಸಮಸ್ಯೆಗಳು ಪಿಯು ಮಂಡಳಿಯಲ್ಲಿವೆ.ಇದೆಲ್ಲದರ ವಿರುದ್ಧವೂ ಈಗಾಗಲೇ ಭರತ್ ಸಮರ ಸಾರಿದ್ದಾರೆ.ಅವರ ಅವಧಿಯಲ್ಲಿ ಸಾಕಷ್ಟು ಕ್ರಾಂತಿಕಾರಕ ಬದಲಾವಣೆಗಳಾಗಿವೆ.ಇನ್ನು ಕೆಲವು ಆಗುವ ಹಂತದಲ್ಲಿವೆ.ಈ ಸನ್ನಿವೇಶದಲ್ಲಿ ಅವರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರೆ ಪಿಯು ಬೋರ್ಡ್ ನಲ್ಲಿ ಹಿಂದೆಂದು ಕಂಡಿರದಿದ್ದಂತ ಬದಲಾವಣೆಗಳಾಗಲು ಸಾಧ್ಯ.ಈ ನಿಟ್ಟಿನಲ್ಲಿ ಮಿನಿಸ್ಟರ್ ಮಧು ಬಂಗಾರಪ್ಪ ಅವರು ಭರತ್ ಬೆನ್ನಿಗೆ ಶ್ರೀರಕ್ಷೆಯಾಗಿ ನಿಲ್ಲಬೇಕಿದೆಯಷ್ಟೆ..?!