advertise here

Search

SAD DEMISE: ಕ್ರೈಂ ಪತ್ರಿಕೋದ್ಯಮದ “ಪದ-ಪಂಡಿತ” ಅಕ್ಷರಗಳಲ್ಲಿ ಲೀನ..


“ಕ್ರೈಂ ಬರಹಗಾರಿಕೆಗೊಂದು ಹೊಸ ಭಾಷ್ಯ ಬರೆದ ಅಕ್ಷರಗಾರುಡಿಗ-ಗಣೇಶ್  ಎನ್ನುವ ಗುರುಕುಲದಲ್ಲಿ ಬೆಳೆದ ಶಿಷ್ಯ ಕೋಟಿ ದೊಡ್ಡದು”

“ಶತೃತ್ವ ಕಟ್ಟಿಕೊಳ್ಳದ ಅಜಾತಶತೃ-ಮಹಾನ್ ಹಾಸ್ಯಪ್ರಜ್ನೆಯ  ಜೀವನ್ಮುಖಿ-ಇನ್ನೊಬ್ಬರ ಸಮಸ್ಗೆಗೆ ಮಿಡಿಯುವ ಮಹಾನ್ ಮಾನವತಾವಾದಿ”

ಬೆಂಗಳೂರು: ಕನ್ನಡ  ಕ್ರೈಂ ಪತ್ರಿಕೋದ್ಯಮದ ದೈತ್ಯಪ್ರತಿಭೆ ಶಾಶ್ವತಕ್ಕೂ ನೇಪಥ್ಯಕ್ಕೆ ಸರಿದಿದೆ. ಕ್ರೈಂ ವರದಿಗಾರಿಕೆಯ ಸಾಕ್ಷಿಪ್ರಜ್ನೆಯಂತಿದ್ದ ಗಣೇಶ್ ಅಕ್ಷರಗಳಲ್ಲಿ ಲೀನವಾಗಿದ್ದಾರೆ.ಬಹು ಅಂಗಾಗ ವೈಫಲ್ಯದಿಂದ ಇಂದು ಬೆಳಗ್ಗೆ ವಸಂತನಗರದ ಜೈನ್ ಆಸ್ಪತ್ರೆಯಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.ಕೇವಲ 41ರ ವಯಸ್ಸಿನಲ್ಲೇ ಪತ್ರಿಕೋದ್ಯಮದ ಅಪಾರ ಹಿರಿ-ಕಿರಿಯ ಸ್ನೇಹಿತರನ್ನು ಗಣೇಶ್ ಅಗಲಿದ್ದಾರೆ.ಅವರ ನಿಧನಕ್ಕೆ ಕನ್ನಡ ಪತ್ರಿಕೋದ್ಯಮವೇ ಕಂಬನಿ ಮಿಡಿದಿದೆ. ಕುಟುಂಬಸ್ಥರ ನಿಶ್ಚಯದಂತೆ ಅವರ ಅಂತ್ಯಕ್ರಿಯೆ ಮಾಗಡಿಯ ತಾಳಕೆರೆಯಲ್ಲಿ ನಡೆದಿದೆ.

ಕ್ರೈಂ ಬರಹಗಾರಿಕೆಗೊಂದು ಹೊಸ ಭಾಷ್ಯ ಬರೆದ ಅಕ್ಷರಗಾರುಡಿಗ.:ಮ್ಮ ನಡುವೆ ನಿತ್ಯವೂ ಸಂಭವಿಸುವ ಸಾವುಗಳಲ್ಲಿ ಕೆಲವರ ಸಾವುಗಳು ಮಾ್ತ್ರ ತೀವ್ರ ಕಾಡುತ್ತವೆ.ಅಂಥಾ ಅಪ್ಯಾಯಮಾನವಾದ ಸಾವುಗಳಲ್ಲಿ ಗಣೇಶ್ ಅವರದು ಕೂಡ ಒಂದು.ಕಿರಿಯ ವಯಸ್ಸಿನಲ್ಲೇ ಪತ್ರಿಕೋದ್ಯಮ ಪ್ರವೇಶಿಸಿ ತಮ್ಮ ವಿಶಿಷ್ಟ,ನಾವಿನ್ಯತೆ..ಲಾಲಿತ್ಯ…ಆಕರ್ಷಕ ಪದಪುಂಜಗಳ ಬರಹಗಾರಿಕೆ ಮೂಲಕ ಗಮನಸೆಳೆದವರು ಗಣೇಶ್.ಕ್ರೈಂ ಬರಹಗಾರಿಕೆಗೊಂದು ಹೊಸ ಭಾಷ್ಯ ಬರೆದ ಅಕ್ಷರಗಾರುಡಿಗ. ಏಕತಾನತೆ, ಪೇಲವತೆಯಿಂದ ಕ್ರೈಂ ಪತ್ರಿಕೋದ್ಯಮದ ಬರಹಗಾರಿಕೆಯನ್ನು ಮುಕ್ತಗೊಳಿಸಿ ಅದನ್ನು ಆಕರ್ಷಕಗೊಳಿಸಿದ ಕೀರ್ತಿ-ಹೆಗ್ಗಳಿಕೆ ಗಣೇಶ್ ಗೆ ಸಲ್ಲುತ್ತದೆ.ಕ್ರೈಂ ವರದಿಗಾರಿಕೆ-ಬರಹಗಾರಿಕೆಯಲ್ಲಿ ಗಣೇಶ್ ತುಂಬಾ ಸಕ್ರೀಯವಾಗಿದ್ದ ಸಂದರ್ಭಗಳಲ್ಲಿ ಅವರ ಅಕ್ಷರಕೃಷಿ ಗಮನಿಸಿದವರಿಗೆ ಇದರ ಪರಿಚಯವಿರದೆ ಇರಲಾರದು.ಬರಹಕ್ಕೊಂಡು  ಅಂತದ್ದೊಂದು ಅದ್ಭುತ ಸ್ಪರ್ಶ-ಶಕ್ತಿ ನೀಡಿದ ಗಣೇಶ್ ಅಗಲಿಕೆಯಿಂದ ಅಕ್ಷರಗಳು ಸೊರಗಿವೆ ಎಂದರೂ ಉತ್ಪ್ರೇಕ್ಷೆಯಾಗದು.

ಇವತ್ತಲ್ಲ..ನಾಳೆ…ಮುಂದೆಯೂ ಗಣೇಶ್ ಕ್ರೈಂ ಪತ್ರಿಕೋದ್ಯಮದಲ್ಲಿ ಹೆಸರುಳಿಸಿಕೊಳ್ಳಬಲ್ಲ ಕೆಪಾಸಿಟಿ ಇರುವ ಕೆಲಸಗಾರ.ಇದಕ್ಕೆ ಕಾರಣ ಕ್ರೈಂ ರಿಪೋರ್ಟಿಂಗ್ ಗೆ ನೀಡಿದ ವಿಶೇಷ ಪರಿಕಲ್ಪನೆ.ಕ್ರೈಂ ರಿಪೋರ್ಟಿಂಗ್ ಹೀಗೆಯೇ ಏಕೆ ಇರಬೇಕು..ಏಕೆ ಹೀಗೆ ಆಗಬಾರದು ಎನ್ನುವ ಆಲೋಚನೆಯಲ್ಲಿ ಕ್ರೈಂ ಎಲ್ಲರಿಗೂ ಅರ್ಥವಾಗುವಂಥ ಭಾಷೆಯಲ್ಲಿ ಬಿಂಬಿತವಾಗಬೇಕೆಂದು ಬಯಸಿದವರು ಅವರು.ಅದನ್ನು ತಮ್ಮ ಬರಹಗಾರಿಕೆ ಯಲ್ಲೇ ಸಾಬೀತುಪಡಿಸಿದರು.ಅದು ಜನರಿಗೂ ಇಷ್ಟವಾಯ್ತು.ಅವರು ಕೆಲಸ ಮಾಡಿದ ಚಾನೆಲ್ ಗಳಲ್ಲಿ ಬರುತ್ತಿದ್ದ ಕ್ರೈಂ ಸೆಗ್ಮೆಂಟ್ ಗಳ ಸ್ವರೂಪವೇ ಇದಕ್ಕೆ ಸಾಕ್ಷಿ ನುಡಿಯುತ್ತಿದ್ದವು.ಅವರ ಗರಡಿಯಲ್ಲಿ ಪಳಗಿದವರಿಗೆ ಅದರ ಪರಿಚಯವಿರುತ್ತೆ.

ಬಹುದೊಡ್ಡ  ಸುದ್ದಿಮೂಲ ಗಿಟ್ಟಸಿಕೊಂಡಿದ್ದ-ವಿಶ್ವಾಸ ಗಳಿಸಿಕೊಂಡಿದ್ದ ಗಣೇಶ್:  ಟಿವಿ-9 ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟರೂ ಅದಕ್ಕೆ ಮುನ್ನವೇ ಒಂದಷ್ಟು ಕ್ರೈಂ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಗಣೇಶ್ ಗೆ ಇತ್ತು.ಕ್ರೈಂ ನಲ್ಲಿ ಬರೆದರೆ ಹೆಚ್ಚು ಜನ ಇಷ್ಟಪಡುತ್ತಾರೆನ್ನುವ ಕಾರಣಕ್ಕೆ ಕ್ರೈಂ ಪತ್ರಿಕೋದ್ಯಮದ ಸೆಳೆತಕ್ಕೆ ಬಿದ್ದರು.ಅವರ ಬರಹದಲ್ಲಿದ್ದ ಕಸುವು ಎಷ್ಟೋ ಸುದ್ದಿಗಳಿಗೆ ದೈತ್ಯಶಕ್ತಿ ನೀಡಿದ್ದಿದೆ.ಅದಷ್ಟೇ ಅಲ್ಲ ಕ್ರೈಂ ಸಂಬಂಧದ ಸುದ್ದಿ ಬೆಂಗಳೂರಿನ ಯಾವುದೇ ಮೂಲೆಯಲ್ಲಿ   ನಡೆದರೂ ಸ್ಪಾಟ್ ನಲ್ಲೇ ಕುಳಿತುಕೊಂಡು ಅದರ ಸಂಪೂರ್ಣ ಮಾಹಿತಿಯನ್ನು ತೆಗೆದು ಅದನ್ನು ಇತರೆಲ್ಲಾ ಮಾದ್ಯಮಗಳಿಗಿಂತ ಡಿಫರೆಂಟ್ ಆಗಿ..ಪರ್ಫೆಕ್ಟಾಗಿ…ಕರಾರುವಕ್ಕಾಗಿ…ಅತ್ಯಾಕರ್ಷಕವಾಗಿ ನೀಡಬಲ್ಲ ಕೆಪಾಸಿಟಿ ಗಣೇಶ್ ಗೆ ಇತ್ತು.ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳವರೊಂದಿಗೂ ಅಂತಹದೊಂದು ಸಂಪರ್ಕವನ್ನು ಗಿಟ್ಟಿಸಿಕೊಂಡುಬಿಟ್ಟಿದ್ದರು ಗಣೇಶ್.ಬಹುಷಃ ಇಂತದ್ದೊಂದು ಕೆಪಾಸಿಟಿ ಇದ್ದುದ್ದು ಒನ್ ಅಂಡ್ ಒನ್ಲಿ ಗಣೇಶ್ ಗೆ ಎಂದ್ರೂ ಉತ್ಪ್ರೇಕ್ಷೆಯಾಗೊಲ್ಲ. ಕಸ್ತೂರಿ ಹಾಗು ಪ್ರಜಾ ಟಿವಿಗಳಲ್ಲಿ ಕೆಲಸ ಮಾಡುವಾಗ ಗಣೇಶ್ ಬ್ರೇಕ್ ಮಾಡುತ್ತಿದ್ದ ಸುದ್ದಿಗಳಿಗೆ ಸಂಬಂಧಿಸಿದ ವಿಷ್ಯುಯೆಲ್ಸ್ ನ್ನು ಪಡೆಯೊಕ್ಕೆ ಟಿವಿ-9, ಪಬ್ಲಿಕ್,ಸುವರ್ಣ ಟಿವಿ ರಿಪೋರ್ಟರ್ ಗಳು ಕ್ಯೂನಲ್ಲಿ ಕಚೇರಿ ಮುಂದೆ ನಿಂತುಕೊಂಡಿರುತ್ತಿದ್ದರೆಂದ್ರೆ ಗಣೇಶ್ ಗಿದ್ದ ಕೆಪಾಸಿಟಿ ಎಂತದ್ದೆನ್ನುವುದನ್ನು ಅಂದಾಜಿಸಬಹುದು.

ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ, ಆ ಲಿಮಿಟ್ಸ್  ಪೊಲೀಸ್ ಸ್ಟೇಷನ್  ನ ಆಪ್ತ ಮೂಲಗಳು   ಮೊದಲು ಸುದ್ದಿ ಕೊಡ್ತಿದ್ದುದೇ ಗಣೇಶ್ ಗೆ.ಅಂದರೆ ಗಣೇಶ್ ಗೆ ಸುದ್ದಿ ಕೊಟ್ಟರೆ ಅದಕ್ಕೊಂದು ನ್ಯಾಯ ಸಿಗುತ್ತದೆ ಎಂಬ ಭಾವನೆ ಅವರ ಆಪ್ತಮೂಲಗಳಿತ್ತು.ಗಣೇಶ್ ಕೂಡ ಅವರ ಆಪ್ತ ಮೂಲಗಳೊಂದಿಗೆ ಅಂತದ್ದೊಂದು ವಿಶ್ವಾಸಪೂರ್ಣ  ಸಂಬಂಧ ಹೊಂದಿದ್ದರು.ಅಲ್ಲದೇ ಅವರ ಆಪ್ತ ಮೂಲಗಳಿಗೆ  ಇಲಾಖೆ ಮಟ್ಟದಲ್ಲಿ ಏನಾದರೊಂದು ಸಮಸ್ಯೆಯಾದ್ರೆ ಅವರ ನೆರವಿಗೆ  ಗಣೇಶ್ ಹಿಂದೆ ಮುಂದೆ ನೋಡದೆ ಧಾವಿಸುತ್ತಿದ್ದರಂತೆ.ಆದ್ರೆ ಸುದ್ದಿ ಗಿಟ್ಟಿಸಿಕೊಳ್ಳಲಿಕ್ಕಷ್ಟೇ ನೆಟ್ ವರ್ಕ್ ಅನ್ನು ಬಳಸಿಕೊಳ್ಳದೆ ಅದರಾಚೆಗು ಇರಬೇಕಾದ ಮಾನವೀಯ ಸಂಬಂಧವನ್ನು ಇಟ್ಟುಕೊಂಡಿದ್ದರೆನ್ನುವುದು ಸಾಮಾನ್ಯವಾದ ಮಾತಾ..? ಖಂಡಿತಾ ಇಲ್ಲ..ಗಣೇಶ್ ಅವರ ಈ ಆದರ್ಶಪ್ರಾಯವಾದ ಸಂವೇದನಾಶೀಲತೆ ಇವತ್ತಿನ ಕ್ರೈಂ ಪತ್ರಕರ್ತರಿಗೆ ಮಾದರಿಯಾಗಬೇಕು..ಗಣೇಶ್ ಅವರ ಆಶಯವೂ ಇದೇ ಆಗಿತ್ತು.

ಪೊಲೀಸ್ ಇಂಟಲಿಜೆನ್ಸಿಗೂ ಸವಾಲಾಗಿದ್ದ ಗಣೇಶ್ ನೆಟ್ವರ್ಕ್:ಕೇವಲ ಪೊಲೀಸ್ ನೆಟ್ವರ್ಕ್ ನಲ್ಲಷ್ಟೇ ಅಲ್ಲ ಅಪರಾಧ ಜಗತ್ತಿನ ವಿದ್ಯಾಮಾನಗಳು ಗಣೇಶ್ ಗೆ ಅನಾಯಾಸವಾಗಿ ಸಿಕ್ಕುಬಿಡುತ್ತಿದ್ದವು.ಪತ್ರಕರ್ತರಿಗೆ ಒಳ್ಳೆಯವರೊಂದಿಗಷ್ಟೇ ಅಲ್ಲ ಸಮಾಜಘಾತುಕರೊಂದಿಗೂ ಸಂಪರ್ಕಗಳಿರುತ್ತವೆ.ಅದನ್ನು ಸಂಬಂಧದ ಮಟ್ಡಕ್ಕೆ ಕೊಂಡೊಯ್ದಾಗ ಸಮಸ್ಯೆಗಳಾಗುತ್ತವೆ.ಆದ್ರೆ ಗಣೇಶ್ ಪಾತಕ ಜಗತ್ತಿನಲ್ಲಿ ಆಕ್ಟೀವ್ ಆದ ಅದೆಷ್ಟೋ ಜನರೊಂದಿ್ಗೆ ಕೇವಲ ಸುದ್ದಿಗಷ್ಟೇ ಸಂಪರ್ಕ ಹೊಂದಿದ್ದರು. ಆ ಲಿಂಕ್ ನ್ನು ಸ್ವಾರ್ಥಕ್ಕೆಂದೂ ಬಳಸಿಕೊಂಡವರಲ್ಲ.ಫೀಲ್ಡ್ ನಲ್ಲಿರುವ ಘಟಾನುಘಟಿ ಪಾತಕಿಗಳ ಜತೆ ನೇರವಾಗಿ ಮಾತನಾಡಬಲ್ಲಂತ ಕೆಪಾಸಿಟಿ ಇದ್ದಿದ್ದು ಗಣೇಶ್ ಗೆ ಮಾತ್ರವೇನೋ..? ಅವರು ಕೂಡ ಅಷ್ಟೆ ಗಣೇಶ್ ರನ್ನು ಕೆಟ್ಟ ಉದ್ದೇಶಗಳಿಗೆಂದೂ ಬಳಸಿಕೊಳ್ಳಲಿಲ್ಲ.ಸುದ್ದಿಯ ಸೀಮಿತ ಉದ್ದೇಶದಲ್ಲಿಯೇ ಎಲ್ಲವೂ ನಡೆದೋಗುತ್ತಿತ್ತು.

ರೌಡಿಗಳ ಜತೆಗೆ ಅವರಿಗಿರುವ ಲಿಂಕ್ ಕೆಲವೊಮ್ಮೆ ಪೊಲೀಸರಿಗೇನೆ ತಲೆಬೇನೆ ಉಂಟು ಮಾಡಿದ್ದಿದೆಯಂತೆ.ಪಾತಕ ಜಗತ್ತಿನಲ್ಲಿ ಏನೇನೆಲ್ಲಾ ಆಗುತ್ತಿದೆ ಎನ್ನುವುದನ್ನು ಸುದ್ದಿಮೂಲಗಳಿಂದ ಗ್ರಹಿಸಿ ಕೊಡುತ್ತಿದ್ದ ಸುದ್ದಿಗಳಿಗೆ ಪೊಲೀಸರೇ ತಲೆಕೆಡಿಸಿಕೊಂಡಿದ್ದುಂಟು. ನೀವು ನಂಬಲಿಕ್ಕಿಲ್ಲ. ಅದೆಷ್ಟೋ ಹಿರಿಯ ಐಪಿಎಸ್ ಗಳು ಗಣೇಶ್ ರನ್ನು ವೈಯುಕ್ತಿಕವಾಗಿ ಕರೆದು ಸುದ್ದಿ ಮೂಲ ಕೆದಕ್ಕಿದಿದೆ.ಆದ್ರೆ ಸುದ್ದಿ ಮೂಲದ ಗೌಪ್ಯತೆ ಬಿಟ್ಟುಕೊಡದ  ವೃತ್ತಿಪರತೆಯಿದ್ದುದ್ದರಿಂದ ನಯವಾಗಿಯೇ ಸ್ಸಾರಿ ಸರ್ ಎನ್ನುತ್ತಿದ್ದ ರಂತೆ.ಕೆರಳಿ ಕೆಂಡವಾಗುತ್ತಿದ್ದ ಅಧಿಕಾರಿಗಳು ಹುಷಾರ್ ಅವರೊಂದಿಗೆ ನಿನ್ ಲಿಂಕ್ ಇದೇ ರೀತಿ ಮುಂದುವರುದ್ರೆ ಅವರ ಜತೆಗೆ ನಿನ್ನನ್ನು ಎನ್ ಕೌಂಟರ್ ಮಾಡಬೇಕಾಗ್ತದೆ ಎಂದು ಅಬ್ಬರಿಸಿದ್ದಿದೆಯಂತೆ. ಆದ್ರೆ ಅದ್ಯಾವುದಕ್ಕೂ ರಿಯಾಕ್ಟ್ ಮಾಡದೆ ತಾಳ್ಮೆಯಿಂದಲೇ ಥ್ಯಾಂಕ್ಸ್ ಸರ್ ಎಂದ್ಹೇಳಿ ಬಂದಿದ್ದುಂಟಂತೆ.ಅಂದ್ರೆ ಪೊಲೀಸ್ ಇಂಟಲಿಜೆನ್ಸಿಗೂ ಅಸಾಧ್ಯವಾಗಿದ್ದ ನೆಟ್ವರ್ಕ್ ಗಣೇಶ್ ಗೆ ಇತ್ತಂತೆ.

ಗಣೇಶ್  ಎನ್ನುವ ಗುರುಕುಲದಲ್ಲಿ ಬೆಳೆದ ಶಿಷ್ಯ ಕೋಟಿ ದೊಡ್ಡದು.. ಪತ್ರಿಕೋದ್ಯಮದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ಬಹುತೇಕರಿಗೆ ದೊಡ್ಡತನವೊಂದರ ಕೊರತೆ ಇರುತ್ತದಂತೆ.ಅದು ಪರಂಪರೆ ಬೆಳೆಸುವ ದೊಡ್ಡ ಗುಣ.ಒಂದಷ್ಟು ಪ್ರತಿಭೆಗಳನ್ನು ಬೆಳೆಸುವ ಅಧಿಕಾರ-ಅವಕಾಶ ಗಳಿದ್ದರೂ ಕೆಲವರು ಅಂತಹದೊಂದು ವಿಶಾಲ ಮನಸ್ತಿತಿ ಹೊಂದಿರುವುದಿಲ್ಲ.ಆದರೆ ಇದಕ್ಕೆ ಅಪವಾದವಾದಂತಿದ್ದರು ಗಣೇಶ್.ಇನ್ನೊಬ್ಬರಿಗೆ ಬೆಳೆಯುವ ಅವಕಾಶ ಕೊಡುವುದಷ್ಟೇ ಅಲ್ಲ,ಅವರನ್ನು ಸಮರ್ಥರನ್ನಾಗಿಸುವವರೆಗೂ ಅವರಿಗೆ  ಬೇಕಾದ ತಾಲೀಮು-ತರಬೇತಿ ಕೊಡುವ ಒಳ್ಳೇತನ ಅವರಲ್ಲಿತ್ತು. ಬದುಕಿಗೆ ಗುರಿ-ದಿಕ್ಕು-ನೆಲೆ ಕಲ್ಪಿಸಿಕೊಟ್ಟಿದ್ದಾರೆ. ಅವರ ಗರಡಿಯಲ್ಲಿ ಪಳಗಿ-ಬೆಳೆದವರು ಅದೆಷ್ಟೋ.ಅವರೆಲ್ಲಾ ಇವತ್ತು ಪ್ರತಿಷ್ಟಿತ ಚಾನೆಲ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಹಾಗಾಗಿನೇ ಗಣೇಶ್ ಎನ್ನುವುದು ಕೇವಲ ವ್ಯಕ್ತಿಯಾಗಿರದೆ ದೊಡ್ಡ ಸಮೂಹವೊಂದನ್ನು ಬೆಳೆಸುವ ಗುರುಕುಲವಾಗಿತ್ತು. ನೂರಾರು ಪ್ರತಿಭೆಗಳಿಗೆ ಆಶ್ರಯ ನೀಡುವ ಆಲದ ಮರವಾಗಿತ್ತು.ಅದನ್ನು ಅವರ   ಕ್ರೈಂ ಬಳಗದ ಶಿಷ್ಯಕೋಟಿ  ಆಸ್ಪತ್ರೆಗೆ ಸೇರಿದ ದಿನಗಳಿಂದಿಡಿದು ಸಾವಿನ ಅಂತಿಮಯಾತ್ರೆಯವರೆಗೂ ಜತೆಗಿದ್ದು ಗುರುವಿನ ಋಣ ತೀರಿಸಿದೆ. ಗುರುವಿನ ಅಗಲಿಕೆಗೆ ಕಂಬನಿ ಮಿಡಿದಿದೆ.

ALSO READ :  ಏಕಾಂತ್ ಶಿಂಧೆ ಬಣದ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾದ ಗೌರಿ ಲಂಕೇಶ್ ಹತ್ಯೆಯ ಆರೋಪಿ!

ಶತೃತ್ವ ಕಟ್ಟಿಕೊಳ್ಳದ ಅಜಾತಶತೃ-ಮಹಾನ್ ಹಾಸ್ಯಪ್ರಜ್ನೆಯ  ಜೀವನ್ಮುಖಿ-ಇನ್ನೊಬ್ಬರ ಸಮಸ್ಗೆಗೆ ಮಿಡಿಯುವ ಮಹಾನ್ ಮಾನವತಾವಾದಿ  :ಗಣೇಶ್ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದು, ಆತ್ಮೀಯ ವಾಗಲು ಕಾರಣವೇ ಅವರಲ್ಲಿದ್ದ ಅಜಾತಶತೃವಿನ ಗುಣ.ಅವರಿವರನ್ನು ಕಿಚಾಯಿಸಿ,ಕಾಲೆಳೆದು ಮಜಾ ತೆಗೆದುಕೊಳ್ಳುವ ಗುಣ ಬಿಟ್ಟರೆ ಬೇರೆಯವರ ವೈಯುಕ್ತಿಕ ವಿಚಾರಗಳಿಗೆ ಅನಗತ್ಯವಾಗಿ ತಲೆ ಹಾಕುವ,ಇಬ್ಬರ ನಡುವೆ ತಂದಿಕ್ಕಿ ತಮಾಷೆ ನೋಡುವ ಕೆಟ್ಟ ಗುಣಗಳು ಗಣೇಶ್ ರಕ್ತದಲ್ಲೇ ಇರಲಿಲ್ಲ.ಗಣೇಶ್ ಎಲ್ಲರಿಗೂ ಇಷ್ಟವಾಗುತ್ತಿದ್ದುದೇ ಇದೇ ಕಾರಣದಿಂದ. ಆತ್ಮೀಯರ ವಲಯದಲ್ಲಿ ಲೇ ಗಣೇಶ.. ಸಹದ್ಯೊಗಿಗಳ ವಲಯದಲ್ಲಿ ಗಣೇಶ್ ಸರ್.ಕಿರಿಯರ ವಲಯದಲ್ಲಿ ಗಣೇಶಣ್ಣ ಎಂದು ಕರೆಯಿಸಿಕೊಳ್ಳೊಕ್ಕೆ ಕಾರಣವೇ ಅವರ ಒಳ್ಳೇತನ.

ಇದರ ಜತೆಗೆ ಎಲ್ಲರನ್ನು ತನ್ನತ್ತ ಸೆಳೆಯಬಲ್ಲ ಹಾಸ್ಯಪ್ರಜ್ನೆ ಅವರಲ್ಲಿ ಸದಾ ಜಾಗೃತವಾಗಿತ್ತು.ಗಣೇಶ್ ಇದ್ದಾರೆಂದರೆ ಅಲ್ಲಿ ಹಾಸ್ಯ..ನಗೆಚಟಾಕಿ..ಕಾಲೆಳೆಯುವ ಪ್ರವೃತ್ತಿ…ಪೋಲಿತನ ಎಲ್ಲವೂ ಇರ್ತಿತ್ತು.ತನ್ನ ಜತೆ ಇದ್ದಾಗ ಯಾರನ್ನೂ ಬೋರ್ ಹೊಡೆಯಿಸುತ್ತಿರಲಿಲ್ಲ.ಎಲ್ಲರನ್ನು ಹೊಟ್ಟೆ ಬಿರಿಯುಂತೆ ನಗಿಸುತ್ತಾ ತಾನು ನಕ್ಕು ಮನಸಿನ ಭಾರವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು.ಗಣೇಶ್ ಡೈಲಾಗ್ ಕೇಳಲಿಕ್ಕೆಂದೇ ಅವರ ಜತೆ ಸೇರಿಕೊಳ್ಳುತ್ತಿದ್ದ ಗೆಳೆಯರು ಅದೆಷ್ಟೋ..ಆದರೆ ಅವೆಲ್ಲಾ ಇನ್ಮುಂದೆ ಕೇವಲ ನೆನಪುಗಳಷ್ಟೇ ಎನ್ನುವಾಗ ದೊಡ್ಡ ಶೂನ್ಯ ಆವರಿಸಿಬಿಡುತ್ತದಲ್ವಾ..?

ಇದೆಲ್ಲಕ್ಕಿಂತ ಹೆಚ್ಚಾಗಿ ಇನ್ನೊಬ್ಬರ ಸಮಸ್ಯೆಗೆ ಮಿಡಿಯುವಂತ ದೊಡ್ಡ ಮನಸು ಗಣೇಶ್ ಅವರಲ್ಲಿತ್ತು.ಸಮಸ್ಯೆ ಸರ್.ಸಮಸ್ಯೆ ಅಣ್ಣಾ ..ಸಮಸ್ಯೆ ಕಣೋ ಎಂದು ಯಾರೇ ಬಂದ್ರೂ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರೇ ಹೊರತು ನೋಡೋಣ ಎಂದು ಹೇಳಿದವರೇ ಅಲ್ಲ.ಅವರಿಂದ ಹಣಕಾಸಿನ ಪ್ರಯೋಜನ ಪಡೆದವರು ಹಾಗೆ ಬಾಕಿ ಉಳಿಸಿಕೊಂಡಿರಬಹುದಾದ ಮೊತ್ತವೇ ಅದೆಷ್ಟು ಲಕ್ಷಗಳಾಗಬಹುದು.ಒಂದು ಹಂತದವರೆಗೆ ಅದನ್ನು ಕೇಳಿ ನಂತರ ಅದನ್ನು ಮರೆತೇ ಬಿಡುತ್ತಿದ್ದ ದೊಡ್ಡ ಮರೆಗುಳಿ ಗಣೇಶ್..ಆ ಒಳ್ಳೇತನವನ್ನೇ ಅನೇಕರು ಮಿಸ್ ಮಾಡಿಕೊಂಡರೆನ್ನುವುದು ದುರಂತ.ಮೋಸ ಮಾಡಿದರೂ ಅವರಿಗೆಂದೂ ಗಣೇಶ್ ಹಿಡಿಶಾಪ ಹಾಕುತ್ತಲೇ ಇರಲಿಲ್ಲ.ಎದುರಿಗೆ ಸಿಕ್ಕಾಗ ಒಂದ್ ಮಾತು ಬೈದು, ನಂತರ ಹಣ ಕೇಳಿದ್ದಕ್ಕೆ ಬೇಜಾರಾಯ್ತೇನೋ ಎಂದು ಹೇಳಿ ಸಮಾಧಾನಿಸುವಂತ ವಿಚಿತ್ರ ಮನಸ್ಸು ಅವರಲ್ಲಿತ್ತು.

“ಎಲ್ಲಾ ಅಂದುಕೊಂಡಂತಾಗಿದ್ರೆ ಸೋಮವಾರದಿಂದ ಚಾನೆಲ್ ವೊಂದರ ಚೀಫ್ ಆಗಿ ಹೋಗ್ಬೇಕಿತ್ತಂತೆ: ಹೌದು…ಇನ್ನೊಂದೆರೆಡು ದಿನಗಳು ಕಳೆದಿದ್ದರೆ ಗಣೇಶ್ ನ್ಯೂಸ್ ಚಾನೆಲ್ ವೊಂದರ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತಂತೆ.ಆ ನಿಟ್ಟಿನಲ್ಲಿ ಮಾತುಕತೆ ಯಶಸ್ವಿಯಾಗಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದ್ದವಂತೆ.ಗಣೇಶ್ ಕೂಡ ಈಗ ಕೆಲಸ ಮಾಡುತ್ತಿರುವ ಚಾನೆಲ್ ಗೆ ಗುಡ್ ಬೈ ಹೇಳಿ ಹೊಸ ಚಾನೆಲ್ ಜವಾಬ್ದಾರಿ ತೆಗೆದುಕೊ ಳ್ಳಬೇಕಿತ್ತಂತೆ.ಚಾನೆಲ್ ನ ಹೊಸ ಜವಾಬ್ದಾರಿ ತೆಗೆದುಕೊಂಡ ಮೇಲೆ ಅದಕ್ಕೊಂದು ಹೊಸ ರೂಪ ನೀಡುವ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದರಂತೆ. ಅದಕ್ಕೊಂದು ತಂಡ ರೂಪಿಸುವ ಆಲೋಚನೆಯಲ್ಲಿದ್ದರಂತೆ.ಎಲ್ಲಾ ಚಾನೆಲ್ ಗಳಿಗಿಂತಲೂ ವಿಭಿನ್ನವಾಗಿ ಏನಾದರೊಂದು ಮಾಡಬೇಕು ಎಂದು ಆತ್ಮೀಯರ ಬಳಿ ಹೇಳಿಕೊಳ್ಳುತ್ತಿದ್ದರಂತೆ. ಆದರೆ ಅದಕ್ಕು ಮುನ್ನವೇ ಇಹಲೋಕದ ಆಟ ಮುಗಿಸಿ ತೆರಳಿಬಿಟ್ಟಿದ್ದಾರೆ”

ಕಷ್ಟದ ದಿನಗಳಲ್ಲಿ ಕೆಲಸಕ್ಕೆ ಪರದಾಡಿದ್ದ ಗಣೇಶ್: ನೀವು ನಂಬೊಲ್ಲ.. ಪ್ರತಿಷ್ಟಿತ ಚಾನೆಲ್ ಗಳಲ್ಲಿ ಕೆಲಸ ಮಾಡಿದ, ನೂರಾರು ಹುಡುಗರ  ಬದುಕಿಗೆ ದಿಕ್ಕಾದ ಗಣೇಶ್ ಮಾದ್ಯಮ ಲೋಕದ ಪಲ್ಲಟಗಳ ಕಾರಣಕ್ಕೆ ಕೆಲಸವಿಲ್ಲದೆ ನಿರುದ್ಯೋಗಿಯಾಗಿಬೇಕಾದ ದಿನಗಳಿದ್ದವೆನ್ನುವುದು ತುಂಬಾ ಜನರಿಗೆ ಗೊತ್ತಿಲ್ಲ.ಕಸ್ತೂರಿ ಟಿವಿಯ ಮುಖ್ಯಸ್ಥರಾಗಿದ್ದ ವೇಳೆ ಚಾನೆಲ್ ನ ಪ್ರಗತಿಗೆ ಶ್ರಮಿಸಿದ್ದ ಗಣೇಶ್, ಇದ್ದಕ್ಕಿದ್ದಂತೆ ಮಾಲಿಕರು ಚಾನೆಲ್ ನ್ನು ಬೇರೊಬ್ಬರಿಗೆ ಮಾರಿದ ದಿನಗಳಲ್ಲಿ ಗಣೇಶ್ ಕೆಲಸವಿಲ್ಲದೆ ಬೀದಿಗೆ ಬಿದ್ದರು.ಲಕ್ಷಾಂತರ ಸಂಬಳ ಪಡೆಯುತ್ತಿದ್ದ ಕೈಗಳು ಬರಿದಾಗಿಬಿಟ್ವು.ಒಂದಷ್ಟು ತಿಂಗಳು ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ ಗಣೇಶ್ ತನ್ನ ಆತ್ಮೀಯರ ಬಳಿ ಯಾವ್ ಚಾನೆಲ್ ಗಳಾದ್ರೂ ಪರ್ವಾಗಿಲ್ಲ,ಕೆಲಸ ಕೊಡ್ಸಿ ಎಂದು ಮನವಿ ಮಾಡಿದ್ದಿದೆ.ಆದ್ರೆ ದುರಾದೃಷ್ಟಕ್ಕೆ ಅನೇಕ ತಿಂಗಳು ಕೆಲಸವೇ ಸಿಗಲಿಲ್ಲ..ಈ ಹಂತದಲ್ಲಿ ಮಹಾನ್ ಸ್ವಾಭಿಮಾನಿಯಾಗಿದ್ದ ಗಣೇಶ್ ಜೀವನ ನಿರ್ವಹಣೆಗೆ ಪತ್ರಿಕೋದ್ಯಮವನ್ನು ಬಿಟ್ಟು ಕೆಲ ಸಾವಿರಗಳ ದುಡಿಮೆಗೆ ಬೇರೆ ಕೆಲಸ ಮಾಡಿದ್ದಿದೆ.ಅದನ್ನು  ಆತ್ಮೀಯರ ಬಳಿ ಹೇಳಿಕೊಂಡು ಕಣ್ಣಿರಿಟ್ಟಿದ್ದಿದೆ.

ಗಣೇಶ್ ದು ಸಾಯತಕ್ಕ ವಯಸ್ಸಲ್ಲವೇ ಅಲ್ಲ..ಗಣೇಶ್ ಅಕಾಲಿಕ ಸಾವನ್ನಪ್ಪಿದ್ದಾರೆನ್ನುವ ಸುದ್ದಿ ಬಾಯಿಂದ ಬಾಯಿಗೆ ಹರಡುತ್ತಿದ್ಗಂತೆ ಪ್ರತಿಯೊಬ್ಬರಿಂದ ವ್ಯಕ್ತವಾದ ಮಾತಿದು.. ಹೌದು..ಗಣೇಶ್ ಅವರದು  ಬದುಕಿಗೆ ಬೆನ್ನಾಕಿ ಸಾವಿನತ್ತ  ಮುಖಮಾಡುವ ವಯಸ್ಸಲ್ಲವೇ ಅಲ್ಲ.ಜೀವನಶೈಲಿಯನ್ನು ಸರಿಯಾಗಿಟ್ಟುಕೊಂಡಿದ್ದರೆ ಒಂದಷ್ಟು ವ್ಯಸನಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದರೆ ಗಣೇಶ್ ಇನ್ನೊಂದಷ್ಟು ವರ್ಷ ಖಂಡಿತಾ ಬದುಕುತ್ತಿದ್ದರೇನೋ..? ಆದರೆ ಅವರನ್ನು ದೂಷಿಸಬೇಕೋ. ಕೈಕೊಟ್ಟ ಆರೋಗ್ಯಕ್ಕೆ ಶಾಪ ಹಾಕಬೇಕೋ ಅಥವಾ  ಅಕಾಲಿಕವಾಗಿ ಕರೆದುಕೊಂಡ ಆ ವಿಧಿಯನ್ನು ಶಪಿಸಬೇಕೋ ಗೊತ್ತಾಗುತ್ತಿಲ್ಲ.ಏಕಂದರೆ ಗಣೇಶ್ ಎನ್ನುವ ಜೀವವೇ ನಮ್ಮೊಡನೆ ಇಲ್ಲವಾದ ಮೇಲೆ ಯಾರನ್ನೂ.. ಏನನ್ನೂ ದೂಷಿಸಿ ಪ್ರಯೋಜನವಿಲ್ಲ.ಏಕೆಂದರೆ ಅದೆಲ್ಲಾ ಈಗ ಮುಗಿದ ಅಧ್ಯಾಯ.

ಬದುಕನ್ನೇ ಬಲಿತೆಗೆದುಕೊಂಡ್ವಾ ವ್ಯಸನಗಳು: ಎಲ್ಲಾ ಹೇಳುವಾಗ ಇದನ್ನು ಕೂಡ ಹೇಳಲೇಬೇಕೆನಿಸುತ್ತದೆ.ಚೆನ್ನಾಗಿ ಬಾಳಿ ಬದುಕಬೇಕಿದ್ದ ಗಣೇಶ್  ಅಕಾಲಿಕವಾಗಿ ಸಾವನ್ನಪ್ಪಲು  ಕಾರಣವೇ ಅವರನ್ನು ಅಂಟಿಕೊಂಡಿದ್ದ ವ್ಯಸನಗಳು. ಕುಡಿತ, ಗುಟ್ಕಾ,ಸಿಗರೇಟ್ ಗೆ ಅಗತ್ಯಕ್ಕಿಂತ ಹೆಚ್ಚು ಅಡಿಕ್ಟ್ ಆಗಿದ್ದ ಗಣೇಶ್ ಅದರ ಸಹವಾಸ ಬಿಡ್ಲಿಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟಿದ್ದರೆ,ಅವರೊಂದಿಗಿರುವವರು ಅವರನ್ನು ಸರಿಯಾಗಿ ಕಂಟ್ರೋಲ್ ಮಾಡಿದಿದ್ದರೆ ಗಣೇಶ್ ಗೆ ವಯಸ್ಸಲ್ಲದ ವಯಸ್ಸಲ್ಲಿ ಸಾವು ಬರುತ್ತಿರಲಿಲ್ಲವೇನೋ..? ಕುಡಿತ-ಗುಟ್ಕಾ.ಸಿಗರೇಟ್ ನ್ನು ಬಿಟ್ಟುಬಿಡದೆ ಚಟವಾಗಿಸಿಕೊಂಡಿದ್ದರಿಂದಲೇ ಸಾವಿನ ದವಡಗೆ ಸಿಲುಕಿಬಿಟ್ಟರೇನೋ..? ಇದಕ್ಕು ಮುನ್ನ ಮೂರ್ನಾಲ್ಕು ಬಾರಿ  ಸಾವಿನ ಮನೆ ಬಾಗಿಲು ತಟ್ಟಿ ಬಂದಿದ್ದರಂತೆ   ಗಣೇಶ್.

ಸಾವಿನ ದವಡೆಯಿಂದ ಪಾರಾಗಿ ಬಂದ ಮೇಲೆ ಸ್ವಲ್ಪ ಎಚ್ಚರ ವಹಿಸಿದ್ದರೆ, ಸಂಗ-ಸಹವಾಸಗಳನ್ನು ಕಂಟ್ರೋಲ್ ಮಾಡಿದ್ದರೆ, ವ್ಯಸನಗಳಿಂದ ಅಂತರ ಕಾಯ್ದುಕೊಂಡಿದ್ದರೆ, ಆರೋಗ್ಯದಲ್ಲಿ ಆಗುತ್ತಿದ್ದ ಏರುಪೇರುಗಳನ್ನು ಗಮನಿಸಿ ಆಯಾ ಸಂದರ್ಭದಲ್ಲೇ ಚಿಕಿತ್ಸೆ ಪಡೆದಿದ್ದರೆ,ಜೀವನಶೈಲಿಯನ್ನು ಚೆನ್ನಾಗಿ ಇಟ್ಟುಕೊಂಡಿದ್ದರೆ ಗಣೇಶ್ ಇನ್ನೊಂದಷ್ಟು ವರ್ಷ ಬದುಕುಳಿಯುತ್ತಿದ್ದರೇನೊ..ನಮ್ಮ ನಡುವಿದ್ದು ಹೊಟ್ಟೆ ತುಂಬಾ ನಗಿಸುತ್ತಾ, ಅವರಿವರ ಕಾಲೆಳೆಯುತ್ತಾ.ಆತ್ಮೀಯರನ್ನು ಕಿಚಾಯಿಸುತ್ತಾ ಇರುತ್ತಿದ್ದರೇನೋ..? ನಮ್ಮೊಳಗೆ ಸಾಮಾನ್ಯ ಮನುಷ್ಯನಂತೆ ಬದುಕಿ..ಮಾನವ ಸಂಬಂಧ-ಮೌಲ್ಯಗಳಿಗೆ ಬೆಲೆ ಕೊಟ್ಟು, ಪರಸ್ಪರ ಗೌರವಿಸುವುದನ್ನು, ಕಷ್ಟದಲ್ಲಿರುವವರಿಗೆ ಮಿಡಿಯುವ ಜೀವನಾದರ್ಶವನ್ನು ಹೇಳಿಕೊಟ್ಟು ಹೋದ ಗಣೇಶ್ ನಮ್ಮ ನಡುವೆ ಸದಾಕ್ಕೂ ಪ್ರಾತಃಸ್ಮರಣೀಯ..


Political News

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

Sahyadri science College alumni meet: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಮಹಾಸಮಾಗಮಕ್ಕೆ ಮುಹೂರ್ತ ಫಿಕ್ಸ್

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ

Deepavali pollution Decrease! ಬೆಂಗಳೂರಿಗೆ ಬೆಂಗಳೂರೇ ಪಟಾಕಿ ಹೊಗೆಯಲ್ಲಿ ಕಳೆದೋದರೂ ಕಳೆದ ವರ್ಷದಷ್ಟು ಮಾಲಿನ್ಯ ಆಗಿಲ್ವಂತೆ!?

Rajyotsava awards 2024: ರಾಜ್ಯೋತ್ಸವ ಪ್ರಶಸ್ತಿ ಪ್ರಕಟ- ಹೇಮಾ ಚೌಧರಿ, ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಪ್ರಶಸ್ತಿಯ ಗರಿ

ದಸರಾ ನಂದಿಧ್ವಜದ ಮಹಾದೇವಣ್ಣರನ್ನು ಮರೆತೇ ಬಿಡ್ತಾ ಸರ್ಕಾರ? ಜೀವನ್ಮರಣ ಹೋರಾಟದಲ್ಲಿ ಮಹದೇವಣ್ಣ

Scroll to Top