ಕನ್ನಡ ಪತ್ರಿಕೋದ್ಯಮದಲ್ಲಿ ಸತ್ತೇ ಹೋಗಿದ್ದ ತನಿಖಾ ಪತ್ರಿಕೋದ್ಯಮದ ಜೀವಂತಿಕೆಗೆ ಸಾಕ್ಷಿಯಾದ ಮೀಡಿಯಾ ಟ್ರಯಲ್ –ಆಸಕ್ತ ಪತ್ರಕರ್ತರ ಅಧ್ಯಯನಕ್ಕೆ ಉತ್ತಮ ನಿದರ್ಶನವಾಗಬಲ್ಲ ಮೀಡಿಯಾ ಕೇಸ್ ಸ್ಟಡಿ..
ಇದು ಮಾಧ್ಯಮ ತಾಕತ್ತು..ಹಾಗೆಯೇ ಗೆಲುವು ಕೂಡ..


ಮಾಧ್ಯಮಗಳು ಮನಸು ಮಾಡಿದ್ರೆ ತಮ್ಮ ಹೊಣೆಗಾರಿಕೆಯನ್ನು ದಿಟ್ಟವಾಗಿ ಪ್ರದರ್ಶಿಸಿದ್ರೆ,ಸತ್ಯ ಎಷ್ಟೇ ಆಳದಲ್ಲಿ ನಿಗೂಢವಾಗಿ ಹೂತೋಗಿರಲಿ,ಅದನ್ನು ಪಾತಾಳಗರಡಿ ಹಾಕಿ ಹೆಕ್ಕಿ ತೆಗೆಯಬಲ್ಲವು…ಜಗತ್ತಿಗೆ ಮಾಧ್ಯಮಗಳ ತಾಕತ್ತು ಅನೇಕ ಸನ್ನಿವೇಶಗಳಲ್ಲಿ ಸಾಬೀತಾಗಿದೆ. ಮತ್ತೊಂದು ಸನ್ನಿವೇಶದಲ್ಲಿ .ಪ್ರಪಂಚಕ್ಕೆ ಸತ್ಯದರ್ಶನವಾಗಿದೆ. ಇದಕ್ಕೆ ಧರ್ಮಸ್ಥಳನ ಸುಜಾತಾ ಭಟ್ ಅವರ ಕಾಲ್ಪನಿಕ ಮಗಳ ಕಟ್ಟುಕಥೆಯೇ ಸಾಕ್ಷಿ.ಬಹುಷಃ ಮಾಧ್ಯಮಗಳು ನಿಜವಾದ “ಟ್ರಯಲ್” ಮಾಡದೇ ಹೋಗಿದಿದ್ದರೆ ಇಂಟರ್ನಲ್ ಇನ್ವೆಸ್ಟಿಗೇಷನ್ ಎನ್ನೋದನ್ನು ನಡೆಸದೇ ಹೋಗಿದಿದ್ರೆ ಎಸ್ ಐಟಿ ತನಿಖೆವರೆಗೂ ಸತ್ಯಕ್ಕಾಗಿ ನಿರೀಕ್ಷೆ ಮಾಡಬೇಕಿತ್ತೇನೋ..? ಆದರೆ ಮಾಧ್ಯಮಗಳ “ಮೀಡಿಯಾ ಟ್ರಯಲ್” ಸಾಕ್ಷ್ಯ ಸಮೇತ ಹೊರಜತ್ತಿಗೆ ಸುಜಾತಾ ಭಟ್ ಪ್ರಕರಣದ ಅಸಲಿಯತ್ತನ್ನು ತೆಗೆದಿಟ್ಟಿವೆ..ಮಾದ್ಯಮಗಳ ಮುಂದೆಯೇ ಸುಜತಾಭಟ್ ತನ್ನ ಕಟ್ಟುಕಥೆಯನ್ನು ಒಪ್ಪಿಕೊಂಡು ಕ್ಷಮೆಯಾಚನೆ ಮಾಡಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಇಂತದೊಂದು ಸನ್ನಿವೇಶ ಕಾಣಲು ಸಿಗೋದು ತೀರಾ ಅಪರೂಪ. ಇಂಥಾ ಸನ್ನಿವೇಶಗಳು ಸೃಷ್ಟಿಯಾಗುವುದು ಕೂಡ ವಿರಳಾತೀವಿರಳ.ಮಾದ್ಯಮಗಳು ತಮ್ಮ ನೈತಿಕ-ಸೈದ್ಧಾಂತಿಕ ಹೊಣೆಗಾರಿಕೆ ಹಾಗು ಸಾಮಾಜಿಕ ಬದ್ಧತೆಯನ್ನೇ ಮರೆತು ಸಮೂಹ ಸನ್ನಿಯನ್ನು ಸೃಷ್ಟಿಸುತ್ತಿವೆ ಎನ್ನುವ ಆಪಾದನೆಗೆ ಅಪವಾದ ಎನ್ನುವಂತೆ, ಮಾದ್ಯಮಗಳ ನೈಜಶಕ್ತಿ ಏನು ಎನ್ನುವುದನ್ನು ಸಾಬೀತುಪಡಿಸ್ಲಿಕ್ಕೆ ಮಾಸ್ಕ್ ಮ್ಯಾನ್ ಕಟ್ಟಿದ ಬುರುಡೆ ಕಥೆ ಮತ್ತು ಸುಜತಾ ಭಟ್ ಅವರ ಅನನ್ಯ ಭಟ್ ಎನ್ನುವ ಕಾಲ್ಪನಿಕ ಮಗಳ ಕಥೆಗಳು ಬರಬೇಕಾಗುತ್ತವೆ.ಪೊಲೀಸ್ ಮತ್ತು ಎಸ್ ಐ ಟಿ ತನಿಖೆಗಿಂತ ಮುನ್ನವೇ ಪ್ರಕರಣಗಳ ಪೋಸ್ಟ್ ಮಾರ್ಟಮ್ ಮಾಡಿ ಸಾಕ್ಷ್ಯಸಮೇತ ಸತ್ಯದರ್ಶನ ಮಾಡಿಸಿದ್ದು ನಮ್ಮ ಮಾದ್ಯಮಗಳು. ಮೇಲ್ಕಂಡ ಪ್ರಕರಣಗಳಲ್ಲಿ ಮಾದ್ಯಮಗಳು ಸತ್ಯಾನ್ವೇಷಣೆಗೆ ನಡೆಸಿದ ಕಸರತ್ತು-ಸರ್ಕಸ್ ಇನ್ವೆಸ್ಟಿಗೇಷನ್ ಜರ್ನಲಿಸಂ ಅಥವಾ ತನಿಖಾ ಪತ್ರಿಕೋದ್ಯಮದ ಇನ್ನೂ ಬದುಕಿದೆ ಎನ್ನುವುದನ್ನು ನೆನಪಿಸಿಕೊಟ್ಟಿದ್ದು ಕೂಡ ಸುಳ್ಳಲ್ಲ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂತಿದ್ದು ಅದನ್ನು ಹೊರತೆಗೆಯುವುದಾಗಿ ಬುರುಡೆ ಕಥೆ ಕಟ್ಟಿದ್ದ ಮಾಸ್ಕ್ ಮ್ಯಾನ್ ನ ಮುಖವಾಡ ಕಳಚಿದೆ.ಆತನ ಅಸಲೀಯತ್ತು ಜಗಜ್ಜಾಹೀರಾಗಿದೆ. ಅದೊಂದು ವ್ಯವಸ್ಥಿತ ಷಡ್ಯಂತ್ರ ಎನ್ನುವ ಅನುಮಾನದ ಹಿನ್ನಲೆಯಲ್ಲಿ ಮಾಸ್ಕ್ ಮ್ಯಾನ್ ನ್ನು ಪೊಲೀಸ್ರು ಬಂಧಿಸಿ ನ್ಯಾಯಾಧೀಶರ ಮುಂದೆ ಪ್ರೊಡ್ಯೂಸ್ ಕೂಡ ಮಾಡಲಾಗಿದೆ.10 ದಿನಗಳ ಎಸ್ ಐಟಿ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ.ಬುರುಡೆ ಕಥೆ ಕಟ್ಟಿದ ಮಾಸ್ಕ್ ಮ್ಯಾನ್ ನ ಹಿಂದೆ ಇರಬಹುದಾದವರ ಹೆಡೆಮುರಿ ಕಟ್ಟೊಕ್ಕೆ ಸಿದ್ದತೆ ನಡೆಯುತ್ತಿರುವಾಗಲೇ ಸುಜಾತಾ ಭಟ್ ಎನ್ನುವ ಮ್ಯಾಜಿಕ್ ಅಜ್ಜಿಯ ಬಂಡವಾಳವೂ ಬಯಲಾಗಿದೆ.ಅಂದ್ಹಾಗೆ ಆಕೆ ಕಟ್ಟಿದ ಅನನ್ಯಾ ಭಟ್ ಎನ್ನುವ ಕಾಲ್ಪನಿಕ ಮಗಳ ಕಥೆಯ ನೈಜತೆಯನ್ನು ಜಗತ್ತಿಗೆ ಬಟಾಬಯಲು ಮಾಡಿದ್ದು ಯಾವುದೇ ಪೊಲೀಸ್ ತನಿಖೆಯಲ್ಲ..ಅಥವಾ ಎಸ್ ಐಟಿ ತನಿಖೆಯಲ್ಲ..ಬದಲಿಗೆ ಮೀಡಿಯಾ ಟ್ರಯಲ್ ಎನ್ನುವುದು ಗಮನಿಸಬೇಕಾದ ಸಂಗತಿ..ಸೋ..ಮಾದ್ಯಮಗಳ ತಾಕತ್ತು ಈ ಪ್ರಕರಣದಲ್ಲಿ ಮತ್ತೆ ಜಗಜ್ಜಾಹಿರಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆಯಿತೆನ್ನಲಾದ ಪ್ರಕರಣದ ವರದಿಗಾರಿಕೆ ವಿಚಾರದಲ್ಲಿ ಮಾದ್ಯಮಗಳಲ್ಲೇ ಲೆಫ್ಟ್ ಹಾಗು ರೈಟ್ ಎನ್ನುವ ವಿಭಿನ್ನ ಆಲೋಚನಾ ಲಹರಿಗಳಿದ್ದುದು.ಈಗಲೂ ಇರುವುದು ಒಪ್ಪಲೇಬೇಕಾದ ಸಂಗತಿ.ಇದನ್ನು ಸುಳ್ಳು ಎನ್ನಲಿಕ್ಕಾಗೊಲ್ಲ.ಅಥವಾ ತತ್ವನಿಷ್ಟ ಪತ್ರಿಕೋದ್ಯ ಮಕ್ಕೆ ಅಪವಾದ ಎಂದು ದೂರಲಿಕ್ಕೂ ಆಗೊಲ್ಲ.ಏಕೆಂದರೆ ಪ್ರತಿಯೊಂದು ಚಾನೆಲ್ ಗೂ ಅದರದೇ ಆದ ಸ್ಟೈಲ್ ಶೀಟ್ ಇರುತ್ತೆ.ಅದರ ಪ್ರಕಾರವೇ ಕೆಲಸ ಮಾಡಬೇಕಾಗುತ್ತದೆ.

ಪ್ರತ್ಯೇಕ ನ್ಯೂಸ್ ಚಾನೆಲ್ ಗಳ ಅಜೆಂಡಾ ಏನಿತ್ತೋ ಗೊತ್ತಿಲ್ಲ.ಆದರೆ ಪ್ರಕರಣವೊಂದರ ಸತ್ಯಾಂಶವನ್ನು ಹೊರಗೆಡಹುವಲ್ಲಿ ಮಾಡಿದ ಕೆಲಸ ಮಾತ್ರ ಅತ್ಯದ್ಭುತ ಎನ್ನಲೇಬೇಕು. ಅದರಲ್ಲೂ ಸುವರ್ಣ ಟಿವಿ ಈ ವಿಷಯವನ್ನು ಇಟ್ಟುಕೊಂಡು ನಡೆಸಿದ ಇನ್ವೆಸ್ಟಿಗೇಷನ್ ಸುಜಾತಾ ಭಟ್ ಅವರ ಬಂಡವಾಳವನ್ನೇ ಬಿಚ್ಚಿಟ್ಟಿತು.ಸುವರ್ಣ ಟಿವಿ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಪ್ರಕರಣದುದ್ದಕ್ಕೂ ಸುಜತಾ ಭಟ್ ಎನ್ನುವ ವೃದ್ದೆ ತನಗೊಬ್ಬಳು ಮಗಳಿದ್ದಳು.ಆಕೆ ಅನನ್ಯಾ ಭಟ್.ಆಕೆ ಕಸ್ತೂರಬಾ ಮೆಡಿಕಲ್ ಕಾಲೇಜ್ ನಲ್ಲಿ ಓದುತ್ತಿದ್ದಳು.ಧರ್ಮಸ್ತಳಕ್ಕೆ ಬಂದಾಗ ನಾಪತ್ತೆಯಾದ್ಲು..ಆಕೆ ಕೊಲೆಯಾಗಿದ್ದಾಳೋ..ಆಕೆ ಮೇಲೆ ಅತ್ಯಾಚಾರ ನಡೆದಿದೆಯೋ ಗೊತ್ತಿಲ್ಲ.ಆದರೆ ಮಾಸ್ಕ್ ಮ್ಯಾನ್ ನ ರಂಗಪ್ರವೇಶದಿಂದ ಆಕೆಯ ಶವವು ಧರ್ಮಸ್ಥಳದ ಆಸುಪಾಸಿನಲ್ಲಿ ಹೂತೋಗಿರಬಹುದು..ಹುಡುಕಿಕೊಟ್ಟರೆ ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡುತ್ತೇನೆ ಎಂದು ವಾದ ಮಾಡುತ್ತಲೇ ಬಂದಿದ್ದರ ಬಗ್ಗೆ ಮೂಡಿದ ಶಂಕೆಯ ಎಳೆಯನ್ನು ಇಟ್ಟು ಕೊಂಡು ಜಸ್ಟಿಸ್ ಫಾರ್ ಅನನ್ಯಭಟ್ ಎನ್ನುವ ಅಭಿಯಾನವನ್ನೇ ಸುವರ್ಣ ನ್ಯೂಸ್ ಶುರು ಮಾಡ್ತು.ಅನನ್ಯಭಟ್ ಗೆ ನ್ಯಾಯ ದೊರಕಿಸಿಕೊಡಲೇಬೇಕೆನ್ನುವ ಬಿಗಿಪಟ್ಟು ಇಟ್ಟುಕೊಂಡು ಅಜಿತ್ ಹನುಮಕ್ಕನವರ್ ತಮ್ಮ ತಂಡವನ್ನಿಟ್ಟುಕೊಂಡು ನಡೆಸಿದ ತನಿಖಾ ಪತ್ರಿಕೋದ್ಯಮದ ಮುಂದೆ ಸುಜತಾ ಭಟ್ ಅನಿವಾರ್ಯವಾಗಿ ಮಂಡಿಯೂರಲೇ ಬೇಕಾಯ್ತೆನ್ನುವುದು ಗಮನಾರ್ಹ.
ಘಳಿಗೆಗೊಂದರಂತೆ ಹೇಳಿಕೆ ಕೊಡುತ್ತಾ ಗೊಂದಲ ಸೃಷ್ಟಿಸುತ್ತಿದ್ದ ಸುಜಾತಾ ಭಟ್ ಅವರ ಹಿನ್ನಲೆಯನ್ನು ಕೆದಕಿ ಆಕೆ ಹೇಳುತ್ತಿರುವುದೆಲ್ಲಾ ಸುಳ್ಳು ಎನ್ನುವುದನ್ನು ಸಾಕ್ಷ್ಯ ಸಮೇತ ಪ್ರೂವ್ ಮಾಡಿದ್ರು.ಇದರ ಭಾಗವಾಗಿ ಟೀಮ್ ನ ಕ್ರೈಮ್ ವರದಿಗಾರ ರಮೇಶ್ ನಡೆಸಿದ ತನಿಖೆ ಸತ್ಯದಾಳಕ್ಕೆ ಇಳಿದು ವಾಸ್ತವಾಂಶವನ್ನು ತೆರೆದಿಡಲು ಸಹಕಾರಿಯಾಯ್ತು.ಯಾವ ಸುಜಾತಾ ಭಟ್ ತಾನು ಕಟ್ಟಿದ ಕಥೆಯ ಸುತ್ತಲೇ ಮೊಂಡಾಟ ಮಾಡ್ತಾ ಪ್ರದಕ್ಷಿಣೆ ಹಾಕುತ್ತಿದ್ದರೋ, ತಾವೇ ಹೆಣೆದ ಬಲೆಯಲ್ಲಿ ತಾವೇ ಸಿಕ್ಕಾಕಿಕೊಂಡ್ರೋ ಅದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.ತನಗೆ ಅನನ್ಯಾ ಭಟ್ ಎನ್ನುವ ಮಗಳಿರಲೇ ಇಲ್ಲ.ಆಕೆ ಇದ್ದಳೆನ್ನೋದೇ ಒಂದು ಕಾಲ್ಪನಿಕ ಕಥೆ.ಧರ್ಮಸ್ಥಳದ ಧರ್ಮಾಧಿಕಾರಿಗಳು ನಮ್ಮ ಪೂರ್ವಜನರಿಂದ ಕಸಿದುಕೊಂಡ ಭೂಮಿಯನ್ನು ವಾಪಸ್ ಪಡೆಯೊಕ್ಕೆ ಅನನ್ಯಾಭಟ್ ಎನ್ನುವ ಪಾತ್ರವನ್ನು ಸೃಷ್ಟಿಸಬೇಕಾಯ್ತು ನನ್ನನ್ನು ಕ್ಷಮಿಸಿ ಎಂದು ಒಪ್ಪಿಕೊಳ್ಳುವಂತೆ ಮಾಡಿದ್ದರಲ್ಲಿ ಸುವರ್ಣ ಟಿವಿ ತಂಡದ ನೈಜ ತನಿಖಾ ಪತ್ರಿಕೋದ್ಯಮದ ಪಾತ್ರ ಗಮನಿಸುವಂತದ್ದು.ಹಾಗಾಗಿ ಇದರ ಸಂಪೂರ್ಣ ಶ್ರೇಯಸ್ಸು ಸುವರ್ಣ ಟಿವಿಯ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಹಾಗೂ ತಂಡಕ್ಕೆ ಸಲ್ಲಲೇಬೇಕಾಗುತ್ತೆ.ಈ ತಂಡ ನಡೆಸಿ ರಾಜ್ಯದ ಜನತೆ ಮುಂದಿತ್ತ ಸತ್ಯಾಂಶಗಳೇ ಎಸ್ ಐಟಿ ತನಿಖೆ ಹಾದಿಯನ್ನು ಮತ್ತಷ್ಟು ಸುಗಮ-ಅನಾಯಾಸಗೊಳಿಸುವುದು ಕನ್ಫರ್ಮ್.

ಸುವರ್ಣ ಟಿವಿ ಜತೆಗೆ ರಿಪಬ್ಲಿಕ್ ಕನ್ನಡ ಕೂಡ ಸತ್ಯಾನ್ವೇಷಣೆ ನಡೆಸಿದ್ದನ್ನು ಮರೆಯುವಂತಿಲ್ಲ. ಸಂಪಾದಕಿ ಶೋಭಾ ಮಳವಳ್ಳಿ ಅವರ ತಂಡ ಪ್ರಕರಣದ ಹಿಂದೆ ಬಿದ್ದು ಸತ್ಯದರ್ಶನ ಮಾಡಿಸಿದ್ದು ಸುಳ್ಳಲ್ಲ.ಸುಜತಾಭಟ್ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಅದನ್ನು ಫಾಲೋ ಅಪ್ ಮಾಡ್ತಾ ಇದಕ್ಕಾಗಿ ತನ್ನ ತಂಡವನ್ನು ದುಡಿಸಿಕೊಂಡ್ರು.ಸುಜತಾಭಟ್ ಅವರನ್ನೇ ಸಂದರ್ಶಿಸಿ ಆಕೆಯ ಕಪೋಲಕಲ್ಪತ ಕಥೆಯ ಅಸಲೀಯತ್ತನ್ನು ಬಿಚ್ಚಿಟ್ಟರು.ಸುಜತಾ ಭಟ್ ಹೇಳಿದ ಪ್ರತಿಯೊಂದನ್ನು ಕೇಳಿಸಿಕೊಳ್ಳುತ್ತಲೇ ಅದರೊಳಗಿರುವ ಸುಳ್ಳನ್ನು ಪತ್ತೆ ಮಾಡಿ,ಅದಕ್ಕೊಂದಿಷ್ಟು ಪ್ರಶ್ನೆ ಹಾಕಿ ಅಂತಿಮವಾಗಿ ನಾನು ಅನನ್ಯಾಭಟ್ ಅವಳ ತಾಯಿಯೇ ಅಲ್ಲ..ಆಕೆ ನನ್ನ ಸ್ನೇಹಿತೆಯ ಮಗಳು.ಆಕೆಯ ಪೋಷಕರಿಗೆ ಆಗಿದೆ ಎನ್ನಲಾದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳೊಕ್ಕೆ ಧರ್ಮಸ್ಥಳಕ್ಕೆ ಬಂದು ಕಥೆ ಕಟ್ಟಬೇಕಾಯ್ತು ಎಂದು ಸ್ಟುಡಿಯೋದಲ್ಲಿಯೇ ರಾಜ್ಯದ ಜನರೆದುರು ಒಪ್ಪಿಕೊಳ್ಳುವಂತೆ ಮಾಡಿದ್ರು.

ಸ್ಟುಡಿಯೋದಲ್ಲಿ ಕೂತ ಸುಜತಾಭಟ್ ಅವರನ್ನು ತುಂಬಾ ಸಾವಧಾನದಿಂದಲೇ ಇನ್ವೆಸ್ಟಿಗೇಟ್ ಮಾಡ್ತಾ ಶೋಭಾ ನಡೆಸಿದ ಮೀಡಿಯಾ ಟ್ರಯಲ್ ನಿಜಕ್ಕೂ ಅತ್ಯದ್ಭುತವಾಗಿತ್ತು.ಒಂದು ಸುಳ್ಳು ಮುಚ್ಚಿಕೊಳ್ಳಲು ಇನ್ನೊಂದು ಸುಳ್ಳು ಹೆಣೆಯುತ್ತಾ ತನ್ನನ್ನೇ ತಾನು ಸುಳ್ಳಿನ ಚಕ್ರವ್ಯೂಹದಲ್ಲಿ ಬಂಧಿಯಾಗುವಂತೆ ಮಾಡಿದ ಶೋಭಾ ಅವರ ಚಾಕಚಕ್ಯತೆ ಹಾಗೂ ಪ್ರಶ್ನಾವಳಿಗಳು ಇವತ್ತಿನ ಪತ್ರಕರ್ತರಿಗೆ ಇರಬೇಕಾದ ದುರಾದೃಷ್ಟವಶಾತ್ ಇಲ್ಲದೇ ಹೋಗಿರುವ ತನಿಖಾ ಪತ್ರಿಕೋದ್ಯಮದ ಝೀಲ್ ಅಥವಾ ತುಡಿತದ ಅಗತ್ಯತೆಯನ್ನು ಒತ್ತಿ ಹೇಳುವಂತಿತ್ತು.ಕನ್ನಡ ಫ್ಲ್ಯಾಶ್ ನ್ಯೂಸ್ ಪ್ರಕಾರ ರಿಪಬ್ಲಿಕ್ ಸ್ಟುಡಿಯೋದಲ್ಲಿ ಸುಜಾತಾ ಭಟ್ ಅವರನ್ನು ಶೋಭಾ ನಡೆಸಿದ ಇನ್ವೆಸ್ಟಿಗೇಟ್ ಮಾಡಿದ ಆ ಮೀಡಿಯಾ ಟ್ರಯಲ್ ನ್ನು ಪ್ರತಿಯೊಬ್ಬ ಪತ್ರಕರ್ತ ನೋಡಲೇಬೇಕು.ಮಿಸ್ ಮಾಡಿಕೊಂಡಿದ್ದರೆ ಪತ್ರಕರ್ತ ಮಿತ್ರರೇ ಆ ವೀಡಿಯೋ ಲಿಂಕ್ ನ್ನು ಕೆಳಗೆ ನೀಡಲಾಗಿದೆ.
ಉಳಿದಂತೆ ಎಲ್ಲಾ ಚಾನೆಲ್ ಗಳು ಕೂಡ ಸುಜಾತಾ ಭಟ್ ಪ್ರಕರಣದ ಸತ್ಯಾಸತ್ಯತೆಯನ್ನು ಹೊರಜಗತ್ತಿಗೆ ಪ್ರಚುರಪಡಿಸುವಲ್ಲಿ ನಡೆಸಿದ ಮೀಡಿಯಾ ಟ್ರಯಲ್ ನಿಜಕ್ಕೂ ಮಾದ್ಯಮದ ಹೊಣೆಗಾರಿಕೆಯನ್ನು ಮತ್ತೊಮ್ಮೆ ಜಗತ್ತಿಗೆ ಪ್ರೂವ್ ಮಾಡಿದಂತಾಗಿದೆ.ಮಾದ್ಯಮಗಳು ಮನಸು ಮಾಡಿದ್ರೆ, ಒಂದು ಪ್ರಕರಣದ ಬೆನ್ನು ಹತ್ತಿದ್ರೆ ಏನ್ ಮಾಡಬಲ್ಲವು ಎನ್ನುವುದು ಸುಜತಾಭಟ್ ಪ್ರಕರಣದಿಂದಲೇ ಮತ್ತೊಮ್ಮೆ ಪ್ರೂ*ವ್ ಆಗಿದೆ.ಪ್ರತ್ಯೇಕ ಮಾಧ್ಯಮಗಳ ಇಸಂ-ಮನಸ್ತಿತಿ-ಧೋರಣೆ-ವಿಚಾರಧಾರೆಗಳು ಏನೇ ಇರಲಿ,ಅವುಗಳ ಉದ್ದೇಶ ಏನಾಗಿದೆಯೋ ಗೊತ್ತಿಲ್ಲ.ಆದ್ರೆ ಯಾವುದೋ ಹಿತಾಸಕ್ತಿಗಳ ಕಾರಣಕ್ಕೆ ಮುಚ್ಚಿ ಹೋಗಬಹು ದಾಗಿದ್ದ ಸತ್ಯವೊಂದನ್ನು ಜಗತ್ತಿನ ಮುಂದೆ ಇಡುವಲ್ಲಿ ವಹಿಸಿದ ಪಾತ್ರ,, ನಡೆಸಿದ ಮೀಡಿಯಾ ಟ್ರಯಲ್ ಮಾಧ್ಯಮ ಇತಿಹಾಸದಲ್ಲಿ ಮೈಲಿಗಲ್ಲಿನ ಘಟನೆಯಾಗಿ ದಾಖಲಾಗುವಂಥದ್ದನ್ನೆವುದರಲ್ಲಿ ಅನುಮಾನವಿಲ್ಲ.