
ಕನ್ನಡ ಸುದ್ದಿಕ್ಷೇತ್ರದಲ್ಲಿ “ವಿಸ್ತಾರ” ಮರು ಲೋಕಾರ್ಪಣೆ(19-04-2026), ಫ್ರೀಡಂ ಚಾನೆಲ್ ಲೋಕಾರ್ಪಣೆ ಯಾಗುತ್ತಿರುವಂಥ ಸನ್ನಿವೇಶದಲ್ಲೇ ಅಘಾತಕಾರಿ ಎನ್ನುವಂತ ಮತ್ತೊಂದು ಸುದ್ದಿ ಕೇಳಿಬಂದಿದೆ. ಅಲ್ಲಿನ ಪರಿಸ್ಥಿತಿ ಗಮನಿಸಿದ್ರೆ ಸಧ್ಯಕ್ಕೆ ಅಲ್ಲದಿದ್ದರೂ ಇನ್ನೊಂದೆರೆಡು ತಿಂಗಳಲ್ಲಿ ಚಾನೆಲ್ ಬಾಗಿಲು ಎಳೆದು ಕೊಳ್ಳುವ ಸಾಧ್ಯತೆಗಳು ದಟ್ಟವಾದಂತಿದೆ.ನೊಂದು-ಬೆಂದು-ಬಳಲಿ ಬೆಂಡಾಗಿರುವ ಅಲ್ಲಿನ ಸಂತ್ರಸ್ಥ ಮಾದ್ಯಮ ಸಿಬ್ಬಂದಿಯೇ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಇಂತದ್ದೊಂದು ಸುಳಿವು ನೀಡಿದ್ದಾರೆ.ಚಾನೆಲ್ ಗೆ ಬಂದೆಲ್ಲಾ ಲಾಭವನ್ನು ತಮ್ಮ “ಸ್ವಂತ”ಕ್ಕೆ ಹೂಡಿಕೆ ಮಾಡಿದ್ದಾರೆನ್ನಲಾಗಿರುವ ಆ ಮಾಲೀಕರು ಪಾಪ.! ನೀಯತ್ತಾಗಿ ದುಡಿಯುತ್ತಿರುವ “ಮಾದ್ಯಮ ಮಿತ್ರ”ರಿಗೆ ಅವರ ಪಾಲಿನ ಸಂಬಳ ಕೊಡದೆ ಸತಾಯಿಸ್ತಿರೋದಷ್ಟೇ ಅಲ್ಲ, ಅವರೆಲ್ಲಾ ಅನಿವಾರ್ಯವಾಗಿ ಕೆಲಸ ತೊರೆಯುವಂಥ ಅಸಹಾಯಕ ಸ್ತಿತಿಗೆ ತಂದು ನಿಲ್ಲಿಸಿದ್ದಾರಂತೆ.ನಮ್ಮ ಶ್ರಮದ ಹಣದಲ್ಲಿ “ಮೋಜು-ಮಸ್ತಿ” ಮಾಡ್ತಾ ನಮ್ಮ ಬದುಕುಗಳನ್ನು “ಬೀದಿಗೆ ತಂದು ಹೊಟ್ಟೆಗೆ ತಣ್ಣೀರು ಬಟ್ಟೆ” ಹಾಕಿಸಿರೋ ಮಾಲೀಕರು ಉದ್ದಾರವಾಗ್ತಾರಾ..ನಾಶವಾಗ್ತಾರೆ..? ಎಂದು ಆಕ್ರೋಶಭರಿತವಾಗಿ ಹಿಡಿಶಾಪ ಹಾಕ್ತಿದಾರೆಂದ್ರೆ ಮಾಲೀಕರು ಆ ಅಮಾಯಕ ಮತ್ತು ನಿಷ್ಪಾಪಿ ಮಾದ್ಯಮ ಮಿತ್ರರುಗಳ ಬದುಕುಗಳ ಜತೆ ಹೇಗೆಲ್ಲಾ ಚೆಲ್ಲಾಟ ಆಡ್ತಿರಬಹುದೆನ್ನುವುದನ್ನು ಅಂದಾಜಿಸಬಹುದು.ಅಲ್ವಾ..!

ಹೌದು..ಹಲವು ಸುದ್ದಿ ಮಾದ್ಯಮಗಳ ನಡುವೆ ಬಂದಂಥ ಆ ಚಾನೆಲ್ ನ “ಫಾಸ್ಟ್” ಗಮನಿಸಿದಾಗ ಎಲ್ಲರ ನ್ನು ಹಿಂದಿಕ್ಕಿ “ಫಸ್ಟ್ ಸ್ಥಾನ”ಕ್ಕೆ ಬಂದ್ ಬಿಡ್ತದಾ ಎಂದೇ ಎಲ್ಲರೂ ಊಹಿಸಿದ್ರು.ಯಾಕೆಂದ್ರೆ ಅಂಥ “ದಿಗ್ಗಜ”ರೆನಿಸಿಕೊಂಡವರ ಸಾರಥ್ಯ ಆ ಚಾನೆಲ್ ಗಿತ್ತು.ಹಾಗೆಯೇ ಬಲಿಷ್ಠ ಹಾಗೂ ನುರಿತ ವೃತ್ತಿಪರರ ತಂಡವೂ ಅವರ ಬೆನ್ನಿಗಿತ್ತು.ಆರಂಭದಲ್ಲಿ ಆ ಚಾನೆಲ್ ನ “ಖದರ್-ಜೋಶ್-ಹವಾ” ಎಲ್ಲವೂ ಹಾಗೆಯೇ ಇತ್ತು. ದೊಡ್ಡ ದೊಡ್ಡ ಚಾನೆಲ್ ಗಳಿಗೆ ಪೈಪೋಟಿ ಕೊಡುವ ಮಟ್ಟಕ್ಕೆ ಸುದ್ದಿಗಳು ಸ್ಪೋಟಗೊಳ್ಳುತ್ತಿದ್ದವು. ಸಿಬ್ಬಂದಿ ಕೂಡ ಖುಷ್ ಆಗಿದ್ರು.(ನೆನಪಿರಲಿ..ಆದರೆ ಅದೇ ಚಾನೆಲ್ ಅದಕ್ಕೂ ಮುನ್ನ ತನ್ನಲ್ಲಿ ಕೆಲಸ ಮಾಡಿದ ಅದೆಷ್ಟೋ ಸಿಬ್ಬಂದಿಗೆ ಸಂಬಳ-ಪಿಎಫ್-ಇಎಸ್ ಐ ಕೊಡದೆ ವಂಚಿಸಿತ್ತೆನ್ನುವ ಮತ್ತೊಂದು ಗಂಭೀರ ಆಪಾದನೆಯನ್ನು ಸಂತ್ರಸ್ಥರು ಈಗಲೂ ಮಾಡುತ್ತಾರೆ).ಟಿಆರ್ ಪಿಯಲ್ಲೂ ಕಳಪೆಯಾಗಿಲಿಲ್ಲ ಅದರ ಪ್ರದರ್ಶನ. ಮಾರ್ಕೆಟಿಂಗ್ ಟೀಮ್ ಕೂಡ ತಿಂಗಳಾದ್ರೆ ಹತ್ತಿರತ್ತಿರ ಕೋಟ್ಯಾಂತರ ಮೊತ್ತದ ಜಾಹೀರಾತನ್ನು ತಂದುಕೊಡ್ತಿತ್ತು.ಸುದ್ದಿಯಷ್ಟೇ ಅಲ್ಲ ಬೇರೆಯ ಮಾರ್ಗಗಳಿಂದಲೂ ಚಾನೆಲ್ ಗೆ ಅಪಾರ ಮೊತ್ತದ ಲಾಭ ಹರಿದುಬರ್ತಿತ್ತೆನ್ನುವುದು ಕೂಡ ಸುಳ್ಳಲ್ಲ.

ಚಾನೆಲ್ ಇವತ್ತಿಗೂ ಆರ್ಥಿಕವಾಗಿ ಲಾಭದಾಯಕವಾಗಿದೆಯಂತೆ….?! ಹೀಗೆ ಒಂದು ಚಾನೆಲ್ ವ್ಯವಸ್ಥಿತವಾಗಿ, ಯಾವುದೇ ತೊಂದರೆ ಇಲ್ಲದೆ ನಡೆದುಕೊಂಡು ಹೋಗಲು ಬೇಕಾದ ಎಲ್ಲಾ ವ್ಯವಸ್ಥೆಗಳಿರುವಾಗಲೇ ಮ್ಯಾನೇಜ್ಮೆಂಟ್, ಚಾನೆಲ್ ಲಾಸ್ ಅಲ್ಲಿ ಇದೆ ಎಂಬ ಸುದ್ದಿ ಹರಿಬಿಡ್ತಂತೆ.ಸಿಬ್ಬಂದಿಗೆ ಬರುತ್ತಿದ್ದ ಸಂಬಳದಲ್ಲಿ ಏರುಪೇರುಗಳಾಗಲಾರಂಭಿಸಿದ್ವಂತೆ.ತಿಂಗಳ ಮೊದಲ ವಾರದಲ್ಲಿ ಕೈ ಸೇರುತ್ತಿದ್ದ ಸಂಬಳ ಎರಡನೇ ವಾರ. ಮೂರನೇ ವಾರಕ್ಕೆ ಮುಂದೂಡಲಾಗ್ತಿತ್ತಂತೆ.ಕೊನೆ ಕೊನೆಗೆ ತಿಂಗಳಾದ್ರೂ ಸಂಬಳವೇ ಆಗ್ತಿರಲಿಲ್ಲವಂತೆ.ಸಹಜವಾಗೇ ಗಾಬರಿಗೊಂಡ ಸಿಬ್ಬಂದಿ ಈ ಬಗ್ಗೆ ವಿಚಾರಿಸಿದ್ರೆ ಮೊದ ಮೊದಲು ಬರ್ತಿದ್ದ ಸೌಜನ್ಯಯುತವಾದ ವಿವರಣೆ ಕೊನೆ ಕೊನೆಗೆ ನಿಷ್ಟೂರವಾಗ ಲಾರಂಭಿಸಿತಂತೆ.ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಆಗಾಗ ಆ ಚಾನೆಲ್ ಮ್ಯಾನೇಜ್ಮೆಂಟ್ ನ “ನೌಟಂಗಿತನ”-“ಸೋಗಲಾಡಿತನ”ದ ಬಗ್ಗೆ ವರದಿ ಮಾಡಿತ್ತು.ಮಾನಕ್ಕಂಜಿ ಸಂಬಳ ಕೊಟ್ಟ ನಿದರ್ಶನ ಗಳಿವೆ.(ಮಾದ್ಯಮ ಸಿಬ್ಬಂದಿಯ ನೋವಿಗೆ ಸ್ಪಂದಿಸಿದ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಹೆಮ್ಮೆಯಿದೆ).
ಆದರೆ ಕಳೆದೊಂದು ವರ್ಷದ ಇತ್ತೀಚೆಗಂತೂ ಚಾನೆಲ್ ನ ಮಾದ್ಯಮ ಮಿತ್ರರ ಹಿತಾಸಕ್ತಿಯನ್ನೇ ಸಂಪೂರ್ಣ ನಿರ್ಲಕ್ಷ್ಯಿಸಲಾರಂಭಿಸಿದ್ರಂತೆ ಅದರ ಮಾಲೀಕರು. ಸಂಬಳ ಕೇಳಿದ್ರೆ. ಚಾನೆಲ್ ಪರಿಸ್ತಿತಿ ಸ್ವಲ್ಪ ಹದಗೆಟ್ಟಿದೆ.ಅದನ್ನು ಸರಿ ಮಾಡುತ್ತೇವೆ.ನಿಮ್ಮ ಸಂಬಳ ಇಟ್ಟುಕೊಳ್ಳುವುದಿಲ್ಲ.. ಕೊಡ್ತೇವೆ…ಆದರೆ ಯಾವಾಗ ಎಂದು “ಗ್ಯಾರಂಟಿ” ಕೊಡಲ್ಲ.ನಮ್ಮ ಜತೆ ಇರೋರು ಇರಬಹುದು..ನಂಬಿಕೆ ಇಲ್ಲದವರಿಗೆ ಏನೂ ಹೇಳೊಲ್ಲ.ಅವರು ನಮ್ಮ ಜತೆ ಇರಬಹುದು..ಇಲ್ಲದವರು ಹೋಗಬಹುದು ..ಹಾಗೆ ಹೋಗೋರ ಸಂಬಳವನ್ನು ತಿಂದು ಹಾಕೊಲ್ಲ, ಬಾಕಿ ಉಳಿಸಿಕೊಂಡಿದ್ದನ್ನು ಕೊಡುವಾಗ ಕರೆದು ಕೊಡ್ತೇವೆ ಎನ್ನುವ ಉತ್ತರ ದೊರೆಯುತ್ತಿದೆಯಂತೆ.

ಆದರೆ ದುರಂತ ಏನ್ ಗೊತ್ತಾ, ಅವರ ಮಾತನ್ನು ಕೇಳಿ ಬೇರೆಡೆ ಕೆಲಸ ಹುಡುಕಿಕೊಂಡ ಅನೇಕ ಸಿಬ್ಬಂದಿ, ಸಂಬಳದ ನಿರೀಕ್ಷೆಯಲ್ಲಿ ತಿಂಗಳು ಬಿಟ್ಟು ಚಾನೆಲ್ ಗೆ ಹೋದರೆ ಅವರನ್ನೆಲ್ಲಾ ರಿಸಪ್ಷನ್ ನಲ್ಲೇ ತಡೆದು ವಾಪಸ್ ಕಳುಹಿಸಲಾಗಿದೆಯಂತೆ.ಎಚ್ ಆರ್ ಅವರನ್ನು ಸಂಪರ್ಕಿಸಲೂ ಬಿಟ್ಟಿಲ್ಲವಂತೆ.ಕೇಳಿದರೆ ಮ್ಯಾನೇಜ್ಮೆಂಟ್ ಹುಕುಂ ಎನ್ನುವ ಉತ್ತರ. ಮಾಲೀಕರೆನಿಸಿ ಕೊಂಡ ಮಹಾನುಭಾವರ ಮೊಬೈಲ್ ಗೆ ಕರೆ ಮಾಡಿದರೆ ಅವರ ಕರೆಗಳೆಲ್ಲಾ ನಾಟ್ ರೀಚಬಲ್, ಅವರ ನಂಬರ್ ಗಳೆಲ್ಲಾ ಬ್ಲಾಕ್ ಲೀಸ್ಟ್ ಗೆ ಸೇರೋಗಿವೆಯವಂತೆ.ಕೆಲಸ ಬಿಟ್ಟ ಮಾದ್ಯಮ ಮಿತ್ರರು ಲಕ್ಷಾಂತರ ಬಾಕಿಗೆ ಚಪ್ಪಲಿ ಸವೆಸುವಂತಾಗಿದೆಯಂತೆ.ಕೆಲಸ ಬಿಟ್ಟರೆ ಅನೇಕ ತಿಂಗಳುಗಳವರೆಗೆ ಬಾಕಿ ಉಳಿಸಿಕೊಂಡಿರುವ ಲಕ್ಷಾಂತರ ಸಂಬಳಕ್ಕೂ ಪಂಗನಾಮ ಗ್ಯಾರಂಟಿ ಎಂದುಕೊಂಡು ಪಾಪ ಅದೆಷ್ಟೋ ಮಾದ್ಯಮಮಿತ್ರರು ಚಾನೆಲ್ ನಲ್ಲೇ ಉಳಿದುಬಿಟ್ಟಿದ್ದಾರಂತೆ.ಅಂದ್ಹಾಗೆ ಅವರ ಸಂಬಳಗಳೆಲ್ಲಾ ನಾಲ್ಕೈದು ತಿಂಗಳುಗಳವರೆಗೂ ಪೆಂಡಿಂಗ್ ಇದೆ..ಬಾಕಿ ಸಂಬಳದ ಲೀಸ್ಟ್ ಗೆ ತಿಂಗಳು-ಹಣ ಸೇರೋಗ್ತಿದೆಯೇ ಹೊರತು ಪರಿಹಾರವಂತೂ ಸಿಕ್ಕಿಲ್ಲ.ಪಾಪ ಇವರ ಸ್ತಿತಿಯಂತೂ ಅಲ್ಲಿ ಉಳಿಯಲಿಕ್ಕೂ ಆಗದೆ, ಇತ್ತ ಕೆಲಸವನ್ನು ಬಿಡಲಿಕ್ಕೂ ಆಗದೆ ತೊಳಲಾಡುವಂತಾಗಿದೆ.
4-5 ತಿಂಗಳಿಂದಲೂ ಮಾದ್ಯಮ ಮಿತ್ರರಿಗೆ ಸಂಬಳವಾಗಿಲ್ಲವಂತೆ..!? ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿರುವ ಖಚಿತ ಮಾಹಿತಿ ಪ್ರಕಾರ ಆ ಚಾನೆಲ್ ನಲ್ಲಿ ಬಹುತೇಕ ಮಾದ್ಯಮಮಿತ್ರರಿಗೆ ಕಳೆದ 4-5 ತಿಂಗಳ ಸಂಬಳ ಬಾಕಿ ಉಳಿಸಿಕೊಳ್ಳಲಾಗಿದೆಯಂತೆ.ಆರ್ಥಿಕತೆ ಚೆನ್ನಾಗಿದ್ದರೂ, ಮಾಲೀಕರೆನಿಸಿಕೊಂಡವರು ಸಂತುಷ್ಟರಾಗಿದ್ರೂ ಚಾನೆಲ್ ನ ಪರಿಸ್ಥಿತಿಯನ್ನು ಮಾತ್ರ ತೀರಾ ಶೋಚನೀಯ ಎನ್ನುವಂತೆ ಬಿಂಬಿಸಲಾಗುತ್ತಿದೆಯಂತೆ.ಮಾಲೀಕರು ಚಾನೆಲ್ ಗೆ ಹರಿದುಬಂದ ಬಂಡವಾಳವನ್ನೆಲ್ಲಾ ಬೇರೆಡೆ ಹೂಡಿಕೆ ಮಾಡಿ ಲಾಭದಲ್ಲಿಯೇ ಇದ್ದಾರಂತೆ.ಆದರೆ ತೋರಿಕೆಗೆ ಮುಖದಲ್ಲಿ ವಿಷಾದ-ಬೇಸರದ ನಾಟಕೀಯ ಭಾವ ಮೂಡಿಸಿಕೊಂಡು, ಸಂಬಳದ ಬಗ್ಗೆ ಕೇಳಿದವರಿಗೆ ನೋವಿನಿಂದ ಪ್ರತಿಕ್ರಿಯಿಸುತ್ತಿದ್ದಾರಂತೆ.ತಮ್ಮದು ಪಕ್ಕಾ ನಾಟಕ-ಕುಹಕ-ಮೋಸ-ಸ್ವಾರ್ಥ-ವಂಚನೆ ಎನ್ನೋದು ಮಾದ್ಯಮಮಿತ್ರರಿಗೆ ತಿಳಿದೇ ಇಲ್ಲ ಎಂದು ಮಾಲೀಕರು ಅಂದುಕೊಂಡಿದ್ದಾರೆ.ಆದರೆ ಅವರ ನಾಟಕ ಚೆನ್ನಾಗಿ ತಿಳಿದಿರುವ ಮಾದ್ಯಮಮಿತ್ರರು ಮಾಲೀಕರಿಗೆ ಕಾನೂನು ಪ್ರಕಾರ ಹೇಗೆಲ್ಲಾ ಪಾಠ ಕಲಿಸಬೇಕು..ತಮ್ಮ ಬದುಕು-ಭಾವನೆಗಳ ಜತೆ ಚೆಲ್ಲಾಟ ಆಡಿದವರನ್ನು ಕಾನೂನಿನ ಕುಣಿಕೆಯಲ್ಲಿ ಸಿಲುಕಿ ಅಯ್ಯಯ್ಯೋ ಎನ್ನುವಂತೆ ಮಾಡಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರಂತೆ. ಮಾದ್ಯಮಮಿತ್ರರು ಇಂತದ್ದೊಂದು ಕಠಿಣವಾದ ಚಿಂತನೆ ನಡೆಸಿದ್ದಾರೆಂದ್ರೆ ಮಾಲೀಕರ ಅಮಾನವೀಯತೆ-ಕ್ರೌರ್ಯ-ದೌರ್ಜನ್ಯಕ್ಕೆ ಅವರು ಹೇಗೆಲ್ಲಾ ಎಷ್ಟೆಲ್ಲಾ ನಲುಗಿರಬೇಕು ಅಲ್ವಾ..?!

ಬಾಡಿಗೆ ಕಟ್ಟಿಲ್ಲವಂತೆ..ಕರೆಂಟ್-ವಾಟರ್ ಬಿಲ್ ಪಾವತಿಯಾಗಿಲ್ಲವಂತೆ-ಜಿಎಸ್ ಟಿ ಯನ್ನೂ ಪೆಂಡಿಂಗ್ ಇಟ್ಟುಕೊಳ್ಳಲಾಗಿದೆಯಂತೆ..!? ನೊಂದು-ಆಕ್ರೋಶ ದಿಂದ ಕೆಲಸ ಮಾಡುತ್ತಿರುವ ಮಾದ್ಯಮ ಮಿತ್ರರು ಹೇಳುವಂತೆ ಚಾನೆಲ್ ನ ಸ್ಥಿತಿ ಗಮನಿಸಿದ್ರೆ ಹೆಚ್ಚೆಂದ್ರೆ ಮೂರ್ನಾಲ್ಕು ತಿಂಗಳು ಚಾನೆಲ್ ನಡೆಯೋದು ಕಷ್ಟವಂತೆ. ಸುದ್ದಿ ಮನೆಯಲ್ಲಿ ಕೆಲಸ ಮಾಡಲು ಸಿಬ್ಬಂದಿಯೇ ಇಲ್ಲವಂತೆ. ಬಹುತೇಕರು ಚಾನೆಲ್ ಗೆ ಬರುತ್ತಿದ್ದರೂ ಪ್ರತಿಭಟನಾ ಮನಸ್ತಿತಿಯಲ್ಲೇ ಕೆಲಸ ಮಾಡುತ್ತಿಲ್ಲವಂತೆ.ರಿಪೋರ್ಟರ್ಸ್, ಆಂಕರ್ಸ್ ಗಳ ಕೊರತೆ ವಿಪರೀತವಾಗಿದೆ ಯಂತೆ. ಕ್ಯಾಮೆರಾಮನ್- ಡ್ರೈವರ್ಸ್ ಗಳು ಕೆಲಸ ಮಾಡೊಲ್ಲ ಎಂದು ಹಠ ಹಿಡಿದು ಕೂತಿದ್ದಾರಂತೆ. ಕ್ಯಾಬ್ ಗಳಿದ್ರೂ ಇಂಧನ ಪೂರೈಕೆ ಆಗ್ತಿಲ್ಲವಂತೆ. ಇದೆಲ್ಲದರ ನಡುವೆ ಕರೆಂಟ್-ವಾಟರ್ ಬಿಲ್ಲೂ ಕಟ್ಟಿಲ್ಲ ವೆಂದು ಸಂಪರ್ಕವನ್ನೇ ಕಡಿದು ಹಾಕಲಾಗಿದೆಯಂತೆ. ಸಧ್ಯಕ್ಕೆ ಜನರೇಟರ್ ನಲ್ಲಿ ಮೆಂಟೇನ್ ಮಾಡಲಾ ಗ್ತಿದೆಯಂತೆ.ಕಟ್ಟಡದ ಬಾಡಿಗೆ ಕಟ್ಟಿಲ್ಲವೆಂದು ಮಾಲೀಕ ಬೇರೆ ಆರತಿ ಎತ್ತಿ ಹೋಗಿದ್ದಾನಂತೆ.ಇದೆಲ್ಲದರ ಮನೆ ಹಾಳಾಗಿ ಹೋಗ್ಲಿ ಹಣಕಾಸಿನ ವಹಿವಾಟಿಗೆ ಪೂರಕವಾಗಿ ಕಟ್ಟಬೇಕಿರುವ ಜಿಎಸ್ ಟಿ ವ್ಯವಸ್ಥೆಯನ್ನೂ ಸರಿಯಾಗಿ ನಿರ್ವಹಣೆ ಮಾಡಿಲ್ಲವಂತೆ.ಒಂದು ಮೂಲದ ಪ್ರಕಾರ ಹತ್ತಿರತ್ತಿರ 60-70 ಲಕ್ಷ ಜಿಎಸ್ ಟಿ ಹಣವನ್ನೇ ಪಾವತಿಸಲಾಗಿಲ್ಲವಂತೆ.ಹಾಗಾಗಿ ಎಲ್ಲಾ ಟ್ರ್ಯಾನ್ಸ್ಯಾಂಕ್ಷನ್ ನ್ನು ಸ್ಥಗಿತ ಮಾಡಲಾಗಿದೆಯಂತೆ.ಬರಬೇಕಿರುವ ಹಣದ ಹರಿವು ಇದರಿಂದ ನಿಂತೋಗಿದೆಯಂತೆ.ಏನಾದ್ರು ವಹಿವಾಟು ಮತ್ತೆ ಶುರುವಾಗಬೇಕಾದ್ರೆ ಜಿಎಸ್ ಟಿ ಪಾವತಿ ಆಗಲೇಬೇಕೆನ್ನುವ ಮಾತು ಕೂಡ ಅಲ್ಲಿನ ಆಂತರಿಕ ಮೂಲಗಳಿಂದ ತಿಳಿದುಬಂದಿದೆ.

200 ರಷ್ಟಿದ್ದ ಸಿಬ್ಬಂದಿ ಇವತ್ತು 100ಕ್ಕಿಂತ ಕಡಿಮೆ..?! ನೆನಪಿರಲಿ.. ಸರಿ ಸುಮಾರು 200ರ ಗಡಿಯನ್ನು ದಾಟಿದ್ದ ಆ ಚಾನೆಲ್ ನಲ್ಲಿ ಇವತ್ತು 100 ಕ್ಕಿಂತಲೂ ಕಡಿಮೆ ಮಾದ್ಯಮಮಿತ್ರರಿದ್ದಾರೆ. ಬಾಕಿ ಉಳಿಸಿಕೊಂಡಿರು ವುದರಲ್ಲಿ ಸಮಾಧಾನಕರ ಎನ್ನುವಷ್ಟು ಪ್ರಮಾಣದ ಸಂಬಳ ಕೊಟ್ಟರೂ ಚಾನೆಲ್ ಸಹವಾಸ ಸಾಕಪ್ಪಾ ಎಂದು ಹಿಡಿಶಾಪ ಹಾಕಿ, ತೆರಳೊಕ್ಕೆ ಬಹುತೇಕ ಮಿತ್ರರು ಸಿದ್ದವಾಗಿ ದ್ದಾ ರಂತೆ. ಇದು ಗೊತ್ತಿದ್ದೇ ಸಂಬಳವನ್ನು ಪ್ರಜ್ಞಾ ಪೂರ್ವಕವಾಗಿ ಕೆಲವರಿಗೆ ತಡೆಹಿಡಿಯಲಾಗ್ತಿದೆ ಎನ್ನುವ ಮಾತಿದೆ.ಸಂಬಳ ಕೊಡಲು ಯೋಗ್ಯತೆ-ತಾಕತ್ತು ಇಲ್ಲದ ಮೇಲೆ ಮಾದ್ಯಮಮಿತ್ರರನ್ನು ಉಳಿಸಿ ಗೋಳೋ ಯ್ದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ..? ಯಾವ ನ್ಯಾಯ..? ಎಂದು ಅನೇಕರು ಕನ್ನಡ ಫ್ಲ್ಯಾಶ್ ನ್ಯೂಸ್ ಮೂಲಕ ಪ್ರಶ್ನಿಸಿದ್ದಾರೆ.
ಚಾನೆಲ್ ನಲ್ಲಿ ಕೆಲಸ ಮಾಡುತ್ತಿರುವ ಮಾದ್ಯಮ ಸಿಬ್ಬಂದಿ, ಮ್ಯಾನೇಜ್ಮೆಂಟ್ ವಿರುದ್ಧ ಬಂಡಾಯ ಏಳಲು ಬಹುತೇಕ ನಿರ್ದರಿಸಿದಂತಿದೆ. ಕಾನೂನಾತ್ಮಕ ಹೋರಾಟಕ್ಕೂ ಮುಂದಾದಂತಿದೆ.ಕನ್ನಡ ಫ್ಲ್ಯಾಶ್ ನ್ಯೂಸ್ ಗೂ ಇದನ್ನು ಪುಷ್ಟೀಕರಿಸುವಂತೆ ಅಲ್ಲಿನ ಮಾದ್ಯಮಮಿತ್ರರ ನಡುವೆ ಹರಿದಾಡಿರುವ ವಾಟ್ಸಪ್ ಚಾಟ್ ಗಳು ಕೂಡ ಲಭ್ಯವಾಗಿವೆ.ಆ ಚಾಟ್ ಗಳಲ್ಲೇ, ಆ ಚಾನೆಲ್ ನ ಸುದ್ದಿ ಮನೆಯಲ್ಲಿ ಕೆಲಸ ಮಾಡುತ್ತಿರುವ ಮಾದ್ಯಮಮಿತ್ರರಿಗೆ ಮಾಲೀಕರೆನಿಸಿಕೊಂಡವರು ಮಾಡಿರುವ ಮಹಾಮೋಸ, ಹಾಗೆಯೇ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳೊಕ್ಕೆ ಕಾದಿರುವ ಸಿಬ್ಬಂದಿಯ ಸೇಡಿನ ಮನಸ್ತಿತಿ ಅರ್ಥವಾಗುತ್ತದೆ.
ಅದೇನೇ ಇರಲಿ, ಕನ್ನಡ ಮಾದ್ಯಮ ಕ್ಷೇತ್ರದಲ್ಲಿ ತನ್ನ ವಿಶಿಷ್ಟ ಶೈಲಿ-ಮ್ಯಾನರಿಸಂ-ಸ್ಟೈಲ್ ನಿಂದ ಹೆಸರಾಗಿದ್ದ ಆ ಚಾನೆಲ್, ಮಾಲೀಕರೆನಿಸಿ ಕೊಂಡವರ ಸ್ವಾರ್ಥ-ಸಣ್ಣತನಕ್ಕೆ ಬಲಿಯಾಗಬೇಕಾಗಿ ಬಂದಿರುವುದು ಮಾತ್ರ ದುರಾದೃಷ್ಟಕರ. ಕನ್ನಡ ನ್ಯೂಸ್ ಚಾನೆಲ್ ಗಳ ಕ್ಷೇತ್ರದಲ್ಲೇ, ನುರಿತ-ಅನುಭವಿ ಹಾಗೂ ವೃತ್ತಿಪರರ ತಂಡವನ್ನು ಹೊಂದಿರುವ ಒಂದು “ವೃತ್ತಿಪರ-ಅತ್ಯದ್ಭುತ” ಚಾನೆಲ್ ಎಂದು ಕರೆಸಿಕೊಂಡಿದ್ದ ಆ ಚಾನೆಲ್ ನ ಸ್ತಿತಿ ಇಷ್ಟೊಂದು ಶೋಚನೀಯವಾದದ್ದು ದುರಾದೃಷ್ಟಕರ. ಹಾಗೆಯೇ ಅಲ್ಲಿ ಕೆಲಸ ಮಾಡ್ತಿರೋ ನೂರಾರು ಸುದ್ದಿಮಿತ್ರರ ಬದುಕುಗಳು ಬೀದಿಗೆ ಬರುವಂತಾಗಿದ್ದು ವಿಪರ್ಯಾಸ ಅಷ್ಟೇ ಅಲ್ಲ ದೌರ್ಭಾಗ್ಯಪೂರ್ಣವೂ ಹೌದು.










