ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!


ಅರವಿಂದ್ ಕೇಜ್ರಿವಾಲ್(arvind kejriwal) ಅವರ ಅತ್ಯಂತ ನಂಬಿಕಸ್ತ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸ್ಟಾರ್ ಸಂಸದ ಎಂದೇ ಗುರುತಿಸಿಕೊಂಡಿದ್ದ ರಾಘವ್ ಚಡ್ಡಾ (raghav chadha) ಅವರಿಗೆ ಪಕ್ಷವು ಭಾರಿ ಆಘಾತ ನೀಡಿದೆ. ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ಚಡ್ಡಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ. ಅವರ ಸ್ಥಾನಕ್ಕೆ ಪಂಜಾಬ್‌ನ ಉದ್ಯಮಿ ಹಾಗೂ ಸಂಸದ ಅಶೋಕ್ ಮಿತ್ತಲ್ (ashok mittal) ಅವರನ್ನು ನೇಮಕ ಮಾಡಿ ಪಕ್ಷವು ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದಿದೆ.

ಕಳೆದ ಕೆಲವು ವರ್ಷಗಳಿಂದ ಸಂಸತ್ತಿನಲ್ಲಿ ಆಮ್ ಆದ್ಮಿ ಪಕ್ಷದ ಪ್ರಬಲ ಧ್ವನಿಯಾಗಿ, ಕೇಂದ್ರ ಸರ್ಕಾರದ ವಿರುದ್ಧ ಹರಿತವಾದ ಮಾತುಗಳ ಮೂಲಕ ಗಮನ ಸೆಳೆಯುತ್ತಿದ್ದ ರಾಘವ್ ಚಡ್ಡಾ ಅವರನ್ನು ಈಗ ಪಕ್ಷವೇ ಮೂಲೆಗುಂಪು ಮಾಡಿರುವಂತೆ ಕಾಣುತ್ತಿದೆ. ಕೇವಲ ಉಪ ನಾಯಕನ ಸ್ಥಾನದಿಂದ ತೆಗೆದುಹಾಕುವುದು ಮಾತ್ರವಲ್ಲದೆ, ರಾಜ್ಯಸಭೆಯಲ್ಲಿ ಪಕ್ಷಕ್ಕೆ ಸಿಗುವ ನಿಗದಿತ ಸಮಯದ ಕೋಟಾದಲ್ಲಿ ರಾಘವ್ ಚಡ್ಡಾ ಅವರಿಗೆ ಮಾತನಾಡಲು ಅವಕಾಶ ನೀಡಬಾರದು ಎಂದೂ ಪಕ್ಷವು ಸಚಿವಾಲಯಕ್ಕೆ ಮನವಿ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Raghav Chadha News: AAP removes Raghav Chadha as Rajya Sabha deputy leader

ಕಾರಣಗಳೇನು? 

ಪಕ್ಷವು ಇದನ್ನು “ಸಾಂಸ್ಥಿಕ ಬದಲಾವಣೆ” ಎಂದು ಕರೆದಿದ್ದರೂ, ಇದರ ಹಿಂದೆ ದೊಡ್ಡ ಮಟ್ಟದ ಆಂತರಿಕ ಭಿನ್ನಾಭಿಪ್ರಾಯಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚೆಗೆ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ಜೈಲಿನಿಂದ ಬಿಡುಗಡೆಯಾದಾಗ ರಾಘವ್ ಚಡ್ಡಾ ಅವರು ಯಾವುದೇ ಬಹಿರಂಗ ಹೇಳಿಕೆ ನೀಡಿರಲಿಲ್ಲ. ಅಲ್ಲದೆ, ಪಕ್ಷದ ಪ್ರಮುಖ ಸಭೆಗಳಿಂದ ಅವರು ದೂರವುಳಿದಿದ್ದರು ಎನ್ನಲಾಗಿದೆ. ಚಡ್ಡಾ ಅವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ವದಂತಿಗಳು ಹಬ್ಬಿರುವ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ. ರಾಘವ್‌ ಚಡ್ಡಾ ಬಿಜೆಪಿಗೆ ಸೆರ್ಪಡೆಯಾಗಲಿದ್ದಾರಾ? ಎನ್ನುವುದು ರಾಜಕೀಯವಲಯದಲ್ಲಿ ತುಂಬಾ ಚರ್ಚೆಯ ವಿಷಯವಾಗಿದೆ.

ALSO READ :  ಬೆಂಚ್‌ನಿಂದ ವಿಶ್ವಕಪ್ ಕಿರೀಟದವರೆಗೆ: ಸಂಜು ಸ್ಯಾಮ್ಸನ್ ಅದ್ಭುತ ಕಥನ

ಬಡವರ ಧ್ವನಿಗೆ ಬ್ರೇಕ್?

ಸಂಸತ್ತಿನಲ್ಲಿ ಪಿತೃತ್ವ ರಜೆ (Paternity Leave), ಮುಟ್ಟು ಹಾಗೂ ನೈರ್ಮಲ್ಯದಂತಹ ಸಾಮಾಜಿಕ ವಿಷಯಗಳ ಬಗ್ಗೆ ದನಿ ಎತ್ತಿದ್ದ ಚಡ್ಡಾ, ಯುವಜನತೆ ಮತ್ತು ಮಧ್ಯಮ ವರ್ಗದವರ ನೆಚ್ಚಿನ ನಾಯಕನಾಗಿದ್ದರು. ಈಗ ಅವರ ಅಧಿಕಾರ ಕಸಿದುಕೊಂಡಿರುವುದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಮತ್ತೊಂದೆಡೆ, ನೂತನ ಉಪ ನಾಯಕ ಅಶೋಕ್ ಮಿತ್ತಲ್ ಅವರು ಎಲ್.ಪಿ.ಯು (LPU) ಸಂಸ್ಥಾಪಕರಾಗಿದ್ದು, ಪಕ್ಷದ ಆಂತರಿಕ ಶಿಸ್ತನ್ನು ಕಾಪಾಡಲು ಇವರನ್ನು ನೇಮಿಸಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ | ಶಿಕ್ಷಣ ಇಲಾಖೆಯ 3 “ದಕ್ಷ” ಅಧಿಕಾರಿಗಳ ದಿಢೀರ್‌ ವರ್ಗಾವಣೆ ..!.

2026ರ ಪಂಜಾಬ್ ಮತ್ತು ದೆಹಲಿಯ ರಾಜಕೀಯ ಸಮೀಕರಣಗಳು ಬದಲಾಗುತ್ತಿರುವ ಈ ಹೊತ್ತಿನಲ್ಲಿ, ರಾಘವ್ ಚಡ್ಡಾ ಅವರನ್ನು ಸೈಡ್‌ಲೈನ್ ಮಾಡಿರುವುದು ಎಎಪಿಗೆ ಲಾಭವಾಗಲಿದೆಯೇ ಅಥವಾ ಹಿನ್ನಡೆಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ರಾಘವ್ ಚಡ್ಡಾ ಅವರು ಶೀಘ್ರದಲ್ಲೇ ದೊಡ್ಡ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳೂ ದಟ್ಟವಾಗಿವೆ ಎನ್ನಲಾಗಿದೆ.


Leave a Comment