***ಆ “ಸುನಾಮಿ- ಸುಂಟರಗಾಳಿ” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ ಸಕ್ಸೆಸ್ ಪಕ್ಕಾ ಅಂತೆ..!?***
***ಮುನಿಸು ಮರೆತು, ಸ್ವಪ್ರತಿಷ್ಟೆ ಬದಿಗಿಟ್ಟು ಅನಂತ ಸುಬ್ಬರಾವ್- ಚಂದ್ರಶೇಖರ್ ಒಂದಾದ್ರೆ ಗೆಲುವು ಗ್ಯಾರಂಟಿ ಅಂತೆ..!***
***ಮುಷ್ಕರದ ಯಶಸ್ಸು-ವೈಫಲ್ಯ ಅವಲಂಭಿಸಿರೋದೇ ಸಾರಿಗೆ “ಕೂಟ-ಜಂಟಿಕ್ರಿಯಾಸಮಿತಿ” ಮೇಲೆ ಒಂದಾದ್ರಂತೆ..!***
ಬೆಂಗಳೂರು:ತಮ್ಮ ನ್ಯಾಯಯುತ ಬೇಡಿಕೆ ಹಾಗೂ ಹಕ್ಕೊತ್ತಾಯಕ್ಕಾಗಿ ಆಗಸ್ಟ್ 5 ರಿಂದ ರಾಜ್ಯಾದ್ಯಂತ ಸಾರಿಗೆ ವ್ಯವಸ್ಥೆಯನ್ನು ಅನಿವಾರ್ಯವಾಗಿ ಬಾಧಿತಗೊಳಿ ಸುವಂತ ನಿರ್ದಾರಕ್ಕೆ ಬಂದಿದ್ದಾರೆ ಸಾರಿಗೆ ಸಿಬ್ಬಂದಿ.ಇದರ ಝಲಕ್ ಎನ್ನುವಂತೆ ನಿನ್ನೆ ಅಂದರೆ ಬುಧವಾರ( 30-07-2025) ರಂದು ಜಂಟಿ ಕ್ರಿಯಾ ಸಮಿತಿ ಫ್ರೀಡಂ ಪಾರ್ಕ್ ನಲ್ಲಿ ನಡೆಸಿದಂಥ ಸಾಂಕೇತಿಕ ಮುಷ್ಕರಕ್ಕೆ ಅಕ್ಷರಶಃ ಸರ್ಕಾರ ಹಾಗೂ ಸಾರಿಗೆ ಇಲಾಖೆ ಪತರುಗಟ್ಟಿ ಹೋಗಿದೆ.ಇವರನ್ನು ಹೀಗೆಯೇ ಬಿಟ್ಟರೆ ಮುಷ್ಕರವನ್ನು ಸಕ್ಸೆಸ್ ಮಾಡೋದು ಪಕ್ಕಾ ಎಂಬ ಆತಂಕ ಕಾಡಲಾರಂಭಿಸಿದೆ.ಮುಷ್ಕರವನ್ನು ಪ್ಲಾಪ್ ಶೋಅನ್ನಾಗಿ ಮಾಡೊಕ್ಕೆ ತರೇವಾರಿ ಸರ್ಕಸ್-ಪ್ರಯತ್ನ ಮಾಡೊಕ್ಕೆ ಮುಂದಾಗಿದೆ ಸರ್ಕಾರ.


ನಾಲ್ಕು ವರ್ಷಗಳಿಗೊಮ್ಮೆ ಸಾರಿಗೆ ವೇತನ ಪರಿಷ್ಕರಣೆ ಮಾಡುತ್ತಾ ಬಂದಿರುವ ಸಂಪ್ರದಾಯಕ್ಕೆ ಸರ್ಕಾರ ವ್ಯತಿರಿಕ್ತವಾಗಿ ನಡೆದುಕೊಳ್ಳಲಾರಂಭಿಸಿ ನಾಲ್ಕು ವರ್ಷಗಳಾದ್ವು.2020ರ ಹೊತ್ತಿಗೆ ವೇತನ ಪರಿಷ್ಕರಣೆ ಆಗಬೇಕಿತ್ತು.ಆದರೆ ಸರ್ಕಾರ ಇಲ್ಲಸಲ್ಲದ ಸಬೂಬು ಹೇಳಿಕೊಂಡೇ ಕಾಗೆ ಹಾರಿಸುತ್ತಾ ಬಂತು.ಅನೇಕ ಬಾರಿ ಮನವಿ ಮಾಡಿದ್ದಾಯ್ತು..ಪ್ರತಿಭಟನೆ ನಡೆಸಿದ್ದಾಯ್ತು… ಆದರೆ ಸರ್ಕಾರ ತುಟಿಬಿಚ್ಚಲಿಲ್ಲ.. ಹಾಗಾಗಿ ತಾಳ್ಮೆ ಕಳೆದುಕೊಂಡ ಸಾರಿಗೆ ಸಿಬ್ಬಂದಿ ಮಾಡು ಇಲ್ಲವೇ ಮಡಿ ಎನ್ನುವಂತೆ ಸಾರಿಗೆ ಜಂಟಿ ಕ್ರಿಯಾಸಮಿತಿ ನೇತೃತ್ವದಲ್ಲಿ ಮುಷ್ಕರಕ್ಕೆ ನಿರ್ದರಿಸಿಯೇ ಬಿಟ್ಟಿದೆ. ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ದಾರ ಮಾಡಿದ್ದಾಗಿದೆ.ಏನೇ ಬರಲಿ, ಎಲ್ಲಕ್ಕೂ ಸಿದ್ದ ಎಂದು ಸಾರಿಗೆ ಸಿಬ್ಬಂದಿ ನಿರ್ದರಿಸಿರುವುದು ಸಂಘಟನೆಗಳ ಹುಮ್ಮಸ್ಸನ್ನು ಹೆಚ್ಚಿಸಿದೆ. ಸಂಘಟನೆಗಳಲ್ಲೇ ಒಡೆದಾಳುವ ನೀತಿ ಅನುಸರಿಸುತ್ತಾ ಬಂದಿರುವ ಸರ್ಕಾರಕ್ಕೆ ಇದು ಮರ್ಮಾಘಾತವನ್ನೇ ನೀಡಿದೆ.

ಆಗಸ್ಟ್ 4 ರಿಂದ ಮುಷ್ಕರ ಎನ್ನೋದು ಪಕ್ಕಾ ಆದರೂ,ಒಂದು ಬಣವೇಕೋ ತನ್ನನ್ನು ಈ ಬೆಳವಣಿಗೆ ಯಿಂದ ದೂರವಿಟ್ಟುಕೊಂಡಂತಿದೆ. ಸಾರಿಗೆ ಕೂಟದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿಲ್ಲವಂತೆ.ಇದು ಮುಷ್ಕರದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಬಹು ದೆನ್ನುವುದರ ಲೆಕ್ಕಾಚಾರ ಶುರುವಾಗಿದೆಯಂತೆ. ಇಡೀ ಸಾರಿಗೆ ಸಮೂಹ ಒಂದು ಉದ್ದೇಶಕ್ಕೆ ಒಂದಾಗಿರಬೇಕಾದರೆ ನಾವು ಸುಮ್ಮನಿದ್ದರೆ ತಪ್ಪು ಸಂದೇಶ ರವಾನೆ ಆಗಬಹುದೆನ್ನುವ ಆತಂಕಕ್ಕೆ ಚಂದ್ರಶೇಖರ್ ನೇತೃತ್ವದ ಸಾರಿಗೆ ಕೂಟ ಸಾಂಕೇತಿಕ ಬೆಂಬಲ ಸೂಚಿಸಿದೆಯಂತೆ.


ಆದರೆ ಅನಂತ ಸುಬ್ಬರಾವ್ ಅವರ ಬಣದೊಂದಿಗೆ ನಾವು ಗುರುತಿಸಿಕೊಳ್ಳಲು ಸಿದ್ದರಿಲ್ಲ. ಸರ್ಕಾರದ ವಿರುದ್ಧ ನಮ್ಮ ಹೋರಾಟ ಅದೇ ಉದ್ದೇಶಕ್ಕೆ ಇದ್ದರೂ ಸಹ, ನಾವು ಪ್ರತ್ಯೇಕವಾಗಿ ಹೋರಾಟ ಮಾಡುತ್ತೇವೆ.ಆದರೆ ಅವರೊಂದಿಗೆ ಬೆರೆಯುವುದಿಲ್ಲ ಎಂಬ ವರಾತ ಶುರುವಿಟ್ಟುಕೊಂಡಿದೆಯಂತೆ.ಆದರೆ ಮೊನ್ನೆ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಎಷ್ಟು ಜನ ಸೇರಿದ್ದರು ಎನ್ನುವುದರಲ್ಲೇ ಚಂದ್ರು ಜತೆಗೆ ಎಷ್ಟು ಸಾರಿಗೆ ಸಿಬ್ಬಂದಿ ಇದ್ದಾರೆ ಎನ್ನುವ ಪಕ್ಕಾ ಲೆಕ್ಕ ಸಿಗುತ್ತೆ ಎನ್ನುವಂತಿತ್ತು ಅವತ್ತಿನ ಚಿತ್ರಣ.
ಸಾರಿಗೆ ಕೂಟದ ಚಂದ್ರಶೇಖರ್ ಉದ್ಭವವಾಗುವವರೆಗೂ,ಸಾರಿಗೆ ಹೋರಾಟಗಳಲ್ಲೇ ತಮ್ಮ ಬಹುತೇಕ ಆಯಸ್ಸನ್ನು ಕಳೆದಿರುವ ಅನಂತ ಸುಬ್ಬರಾವ್ ಏಕಮೇವಾದ್ವಿತೀಯರಾಗಿ ಮೆರೆಯುತ್ತಿದ್ದರು. ಸರ್ಕಾರಿ ನೌಕರರ ಮಾನ್ಯತೆ ಕೊಡಿಸುತ್ತೇನೆ ಎನ್ನುವ ವಿಚಾರ ಇಟ್ಟುಕೊಂಡು ಸಾರಿಗೆ ವ್ಯವಸ್ಥೆಯನ್ನು ಸ್ಥಬ್ದಗೊಳಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರೆನ್ನೋ ಕಾರಣಕ್ಕೆ ಸುಬ್ಬರಾವ್ ಅವರನ್ನು ಚಂದ್ರಶೇಖರ್ ಬಣ ವಿಲನ್ ಆಗಿ ರೂಪಿಸಿಬಿಡ್ತು.ಅನಂತ ಸುಬ್ಬರಾವ್ ಅವರ ಶೃದ್ಧಾಂಜಲಿ, ತಿಥಿ ಎಲ್ಲವನ್ನೂ ಮಾಡಿಸಿಬಿಡ್ತು.ಸುಬ್ಬರಾವ್ ಅವರ ಬಗ್ಗೆ ವ್ಯಾಪಕ ಅಪಪ್ರಚಾರ ನಡೆದುಬಿಡ್ತು.

ದುರಂತ ಏನ್ ಗೊತ್ತಾ, ಅನಂತ ಸುಬ್ಬರಾವ್ ಅವರನ್ನು ಅಷ್ಟು ವರ್ಷಗಳವರೆಗೆ ಒಪ್ಪಿ ಕೊಂಡಿ ದ್ದ ಎಷ್ಟೋ ಸಾರಿಗೆ ಸಿಬ್ಬಂದಿ ಚಂದ್ರಶೇಖರ್ ಗೆ ಬಹುಪರಾಖ್ ಹಾಕಿಬಿಟ್ರು.ಅನಂತ ಸುಬ್ಬರಾವ್ ಪಾಲಿಗೆ ಇದು ಮರ್ಮಾಘಾತ ಎನಿಸಿದ್ರೂ ತಾಳ್ಮೆ ಕಳೆದುಕೊಳ್ಳದೆ ತಮ್ಮ ಪಾಲಿನ ಹೋರಾಟ ಮುಂದುವರೆಸಿದ್ದರ ಪರಿಣಾಮವೇ ಇವತ್ತು ತೊರೆದು ಹೋಗಿದ್ದವರಲ್ಲಿ ಬಹುಪಾಲು ಸಿಬ್ಬಂದಿ ಮತ್ತೆ ಅನಂತ ಸುಬ್ಬರಾವ್ ತೆಕ್ಕೆಗೆ ಮರಳಿದ್ದಾರೆ.ನಿಜವಾದ ಹೋರಾಟಗಾರನೊಬ್ಬನ ಜೀವನಾನುಭವಕ್ಕೆ ಸಂದ ಗೆಲುವು ಎಂದೇ ಇದನ್ನು ವ್ಯಾಖ್ಯಾನಿಸಲಾಗುತ್ತಿದೆ.
ಅನಂತ ಸುಬ್ಬರಾವ್ ನೇತೃತ್ವದ ಜಂಟಿ ಕ್ರಿಯಾಸಮಿತಿ ನಡೆಸಿದ ಸಾಂಕೇತಿಕ ಹೋರಾಟವನ್ನು ಕೂಟದ ಚಂದ್ರಶೇಖರ್ ನಡೆಸಿದ ಹೋರಾಟಕ್ಕೆ ತುಲನೆ ಮಾಡಿ ನೋಡಿದಾಗ ಆಶ್ಚರ್ಯ ವಾಗಿದ್ದು ಸತ್ಯ.ಅನಂತ ಸುಬ್ಬರಾವ್ ಅವರ ಮೇಲೆ ಸಾರಿಗೆ ಸಿಬ್ಬಂದಿಗೆ ನಂಬಿಕೆ ಬಂದಂತೆ ತೋರುತ್ತಿದೆ.ಆದರೆ ಚಂದ್ರಶೇಖರ್ ಜತೆಯಲ್ಲಿದ್ದವರು ದೂರವಾಗುತ್ತಿದ್ದಾರಾ..? ಎನ್ನುವ ಶಂಕೆ ಕಾಡಿದ್ದೂ ಸುಳ್ಳಲ್ಲ.
ಸರ್ಕಾರದ ವಿರುದ್ದ ತೊಡೆ ತಟ್ಟಿದ್ದ ಚಂದ್ರಶೇಖರ್ ಖ್ಯಾತಿ-ಪ್ರಸಿದ್ದಿ ಬಂದ ಮೇಲೆ ಸಾರಿಗೆ ಸಿಬ್ಬಂದಿಯ ಹಿತಾಸಕ್ತಿಯನ್ನೇ ಮರೆತುಬಿಟ್ಟಿದ್ದಾರೆ.ಸರ್ಕಾರದ ಏಜೆಂಟ್ ರಂತೆ ಕೆಲಸ ಮಾಡುತ್ತಿದ್ದಾರೆ.ಸರ್ಕಾರಿ ನೌಕರರ ಮಾನ್ಯತೆ ವಿಚಾರವನ್ನೇ ಬಂಡವಾಳ ಮಾಡಿಕೊಂಡು ಮಾತನಾಡುತ್ತಿದ್ದಾರೆ. ಅವರಿಗೆ ಸಾರಿಗೆ ಸಿಬ್ಬಂದಿ ಹಿತದ ಬಗ್ಗೆ ಕಾಳಜಿಯಿಲ್ಲ ಎಂಬ ಭಾವನೆ ಸಾರಿಗೆ ಸಿಬ್ಬಂದಿಯಲ್ಲಿ ಮೂಡಿರಲಿಕ್ಕೂ ಸಾಧ್ಯವಿದೆ.ಹೀಗಾಗಿ ಇವರಿಬ್ಬರಲ್ಲಿ ಯಾರು ಹಿತವರು ಎನ್ನುವ ಪ್ರಶ್ನೆ ಬಂದಾಗ ಬಹುತೇಕರು ಮತ್ತೆ ಅನಂತಸುಬ್ಬರಾವ್ ಅವರಿಗೆ ಬಹುಪರಾಖ್ ಹಾಕುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ.

ಅನಂತ ಸುಬ್ಬರಾವ್ ಅವರಿಗೆ ಆಗಿರುವಷ್ಟು ಅನುಭವ, ಬಹುಷಃ ಚಂದ್ರಶೇಖರ್ ಅವರ ವಯಸ್ಸೂ ಆಗಿರಲಿಕ್ಕಿಲ್ಲ. ಹಿರಿಯ ಜೀವ ಸುಬ್ಬರಾವ್ ಅವರಿಗೆ ಇರುವಷ್ಟು ಸಾರಿಗೆ ಹೋರಾಟಗಳ ಹಿನ್ನಲೆ-ಇತಿಹಾಸದ ಮುಂದೆ ಚಂದ್ರು ವಾಮನನಾಗಿ ಗೋಚರಿಸಬಹುದು. ಆದರೆ ದಿಢೀರ್ ಬೆಳವಣಿಗೆಗಳಲ್ಲಿ ಅನಂತ ಸುಬ್ಬರಾವ್ ಅವರನ್ನೇ ಸಾರಿಗೆ ಸಿಬ್ಬಂದಿ ತಿರಸ್ಕರಿಸುವಂತ ಮಟ್ಟಕ್ಕೆ ಬೆಳೆದಿದ್ದು ಚಂದ್ರಶೇಖರ್ ಸಾಧನೆ.ಇಬ್ಬರ ನಡುವೆ ಸಾಕಷ್ಟು ವಿಚಾರಗಳಲ್ಲಿ ಬೇಧ-ಭಿನ್ನಾಭಿಪ್ರಾಯಗಳಿವೆ. ಇಬ್ಬರೂ ತಮ್ಮ ತಮ್ಮ ವಿಚಾರಗಳಲ್ಲಿ ಬಲಾಢ್ಯರಂತಿದ್ದಾರೆ.ನಾನಾ..ನೀನಾ ಎಂದು ಸವಾಲು ಹಾಕಿ ನಿಲ್ಲುತ್ತಾರೆ.
ಆದರೆ ಪ್ರಶ್ನೆ ಇರುವುದು ಅದಲ್ಲ,ಇಬ್ಬರು ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮರೆತು ಸಾರಿಗೆ ಸಿಬ್ಬಂದಿಯ ಹಿತಾಸಕ್ತಿ-ಕಾಳಜಿಗಾಗಿ ಒಂದಾಗಬೇಕು.ನಮ್ಮ ವೈಯುಕ್ತಿಕ ಹಿತಾಸಕ್ತಿಗಿಂತ, ಪ್ರತಿಷ್ಟೆಗಿಂತ ನಮ್ಮನ್ನು ನಂಬಿರುವ ಸಾರಿಗೆ ಸಿಬ್ಬಂದಿಯ ಬದುಕು ಮುಖ್ಯ ಎಂದು ಉದಾರವಾಗಿ ಆಲೋಚಿಸುವ ಔದಾರ್ಯತೆ ಪ್ರದರ್ಶಿಸಬೇಕಿದೆ.ಅದು ಆಗಸ್ಟ್ 4 ರಿಂದ ಪ್ರಾರಂಭವಾಗಲಿರುವ ಸಾರಿಗೆ ಮುಷ್ಕರದ ಸನ್ನಿವೇಶದಲ್ಲೇ ಏಕಾಗಬಾರದು…? ಅವತ್ತೇ ಅವರಿಬ್ಬರು ತಮ್ಮ ಮುನಿಸು ಮರೆತು ಒಂದಾಗ್ತಾರಾ ಎನ್ನುವ ಕುತೂಹಲ ಮೂಡಿದೆ..ಒಂದ್ವೇಳೆ ಅಂದುಕೊಂಡಂತೆ ಆಗಿದ್ದೇ ಆದಲ್ಲಿ, ಮುಷ್ಕರ ಸಕ್ಸೆಸ್ ಪಕ್ಕಾ ಬರೆದಿಟ್ಟುಕೊಳ್ಳಿ ಎನ್ತಿದಾರೆ ಸಾರಿಗೆ ವಿಷಯಗಳಲ್ಲಿ ವ್ಯಾಪಕ ಅನುಭವ ಹೊಂದಿರುವ ಹಿರಿಯ ಸಾರಿಗೆ ಮುಖಂಡರು.

ಸಾರಿಗೆ ಮುಷ್ಕರಕ್ಕೆ ಪೂರ್ವಭಾವಿಯಾಗಿ ನಡೆದ ಹೋರಾಟಗಳಿಂದ ಅಕ್ಷರಶಃ ವಿಚಲಿತವಾದಂತೆ ತೋರಿರುವ ಸರ್ಕಾರ ಈ ಎರಡು ಬಣಗಳ ನಡುವೆಯೇ ಸಂಘರ್ಷ ಸೃಷ್ಟಿಸುವ ಕೆಲಸ ಮಾಡೋದರಲ್ಲಿ ಅನುಮಾನವಿಲ್ಲ.ಇಲ್ಲಿ ವ್ಯತ್ಯಾಸವಾದರೆ ಅನಂತ ಸುಬ್ಬರಾವ್ ಅವರಿಂದಾಗಲು ಸಾಧ್ಯವಿಲ್ಲ..ಹಾಗೇನಾದ್ರೂ ಆಗಿದ್ದೇ ಆದಲ್ಲಿ ಸಾರಿಗೆ ಸಚಿವರ ಜತೆ ತುಂಬಾ ಆತ್ಮೀಯವಾಗಿರುವ ಚಂದ್ರಶೇಖರ್ ಅವರಿಂದಲೇ ಆಗಬಹುದು ಎನ್ನುವ ವಿಶ್ಲೇಷಣೆ-ವ್ಯಾಖ್ಯಾನ ಕೇಳಿಬರುತ್ತಿದೆ.
ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದಕ್ಕೆ ನಿಖರತೆ ಇಲ್ಲ.ಅದೇನೇ ಆಗಲಿ,ಶಾಶ್ವತವಾಗಿ ಅಲ್ಲವಾದರೂ ಮುಷ್ಕರದ ಉದ್ದೇಶ ಈಡೇರುವವರೆಗೂ, ಸಾರ್ಥಕವಾಗುವವರೆಗೂ ಸಾರಿಗೆ ಸಿಬ್ಬಂದಿಯ ಹಿತಾಸಕ್ತಿಗಾಗಿ ತಮ್ಮ ಮುನಿಸುಗ ಳನ್ನೆಲ್ಲಾ ಮರೆತು, ಸ್ವ-ಪ್ರತಿ್ಷ್ಟೆ ಬದಿಗಿಟ್ಟು ಇಬ್ಬರು ನಾಯಕರು ಒಂದಾಗಲಿ.. ಅವರಿಬ್ಬರು ಜತೆಯಾದರೆ ಎಂಥಾ ಯುದ್ಧವನ್ನು ಬೇಕಾದ್ರೂ ನಾವು ಧೈರ್ಯದಿಂದ ಎದುರಿಸಿ ಗೆಲ್ಲುತ್ತೇವೆ ಎಂದು ಸಾರಿಗೆ ಸಿಬ್ಬಂದಿ ಹೇಳುತ್ತಿದ್ದಾರೆ.ಇದಕ್ಕೆ ಇಬ್ಬರೂ ಏಕೆ ಬೆಲೆ ಕೊಡಬಾರದು ಅಲ್ವಾ..?!