ಪ್ರಯಾಣಿಕರ ಜತೆಗೆ ಅಸಭ್ಯ-ದುರ್ವರ್ತನೆ.-ವೇಗ-ಅಜಾಗರೂಕತೆ ಚಾಲನೆ- ಹಣ ಪಡೆದು ಟಿಕೆಟ್ ನೀಡದೆ ವಂಚನೆ ಬಗ್ಗೆಯೇ ವ್ಯಾಪಕ ದೂರುಗಳು..

ಇದು ಸ್ವತಃ ಸಚಿವ ರಾಮಲಿಂಗಾರೆಡ್ಡಿ ಅವರೇ ಶಾಕ್ ಆಗುವಂಥ ಅಘಾತಕಾರಿ ಸುದ್ದಿ.ಇಲಾಖೆ ಸುಧಾರಣೆ ಮಾಡೊಕ್ಕಿಂತ ಮುನ್ನ ನಿಜವಾಗಿ ಸುಧಾರಣೆ ಆಗಬೇಕಿರುವುದು ಏನು ಎನ್ನುವುದು ಈ ಸ್ಟೋರಿ ಓದಿದ ಮೇಲೆ ಗೊತ್ತಾಗಬಹುದೇನೋ..? ತಾನು ನಿರ್ವಹಿಸುತ್ತಿರುವ ಖಾತೆಗೆ ಇಂತದ್ದೊಂದು ಕಳಂಕ ತಟ್ಟಿದೆಯೆಲ್ಲಾ ಎಂದು ಅವರಿಗೇ ಬೇಸರವಾಗಬಹುದು..ನನಗೆ ಇಂಥಾ ಖಾತೆ ನಿಜಕ್ಕೂ ಬೇಕಾ ಎಂದು ಅವರು ಒಂದ್ ಕ್ಷಣ ಆಲೋಚಿಸಿದ್ರೂ ತಪ್ಪೇನಿಲ್ಲ..ಏಕೆಂದರೆ ಅಂತಹದೊಂದು ಗಂಭೀರ ಮತ್ತು ಅಘಾತಕಾರಿಯಾದ ಆರೋಪ ಅವರ ಖಾತೆ ವ್ಯಾಪ್ತಿಗೊಳಪಡುವವರ ಮೇಲೆ ಕೇಳಿಬಂದಿದೆ.

ಮೊದಲೇ ಹೇಳಿದಂತೆ ಬಿಎಂಟಿಸಿ ಮಟ್ಟಿಗೆ ಇದು ಶಾಕಿಂಗ್ ನ್ಯೂಸೇ ಸರಿ..ಬಹುಷಃ ಇಂತಹದೊಂದು ಅಘಾತಕಾರಿಯಾದ ಸುದ್ದಿಯನ್ನು ಬಿಎಂಟಿಸಿ ಆಡಳಿತ ವ್ಯವಸ್ಥೆ ಅದ್ಹೇಗೆ ಅರಗಿಸಿಕೊಳ್ಳುತ್ತೋ ಗೊತ್ತಿಲ್ಲ.ಆದರೆ ಇಂತಹದೊಂದು ಆಪಾದನೆ ಸಂಸ್ಥೆ ಮೇಲೆ ಬರೊಕ್ಕೆ ಕಾರಣ ಅದೇ ಸಂಸ್ಥೆಯ ಆಡಳಿತ ವ್ಯವಸ್ಥೆ ಹಾಗೂ ಆ ಸಂಸ್ಥೆಯ ಬೆನ್ನೆಲುಬಾಗಿ ದುಡಿಯುವ ಸಿಬ್ಬಂದಿಯನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಧೋರಣೆ.ಇಲ್ಲವೆಂದರೆ ಅದು ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ಆದಿಯಾಗಿ ಎಲ್ಲರೂ ತಮಗೆ ತಾವೇ ಮಾಡಿಕೊಳ್ಳಬಹುದಾದ ಆತ್ಮವಂಚನೆ ಆಗಬಹುದೇನೋ..?
ಬೆಂಗಳೂರಿನ ಸಂಚಾರಿ ವ್ಯವಸ್ಥೆಯ ನಾಡಿ ಎಂದೇ ಕರೆಯಿಸಿಕೊಳ್ಳುತ್ತೆ ಬಿಎಂಟಿಸಿ.ಆದರೆ ಅದಕ್ಕೆ ಕಿಲ್ಲರ್ ಎನ್ನುವ ಕಳಂಕವೂ ಇದೆ ಎನ್ನುವುದನ್ನು ಮರೆಯಲಿಕ್ಕೆ ಆಗೊಲ್ಲ.ಾದರ ಜತೆಗೆ ಪ್ರಯಾಣಿಕರ ಜತೆ ಸರಿಯಾಗಿ ನಡೆದುಕೊಳ್ಳದ ದುರ್ವರ್ತನೆಯಿಂದಲೂ ಆಗಾಗ ಟೀಕೆ-ಆಕ್ರೋಶಕ್ಕೆ ತುತ್ತಾಗುತ್ತಲೇ ಬಂದಿದೆ.ಬಸ್ ನ್ನು ಪಡೆದು ರಸ್ತೆಗಿಳಿಯುವ ಚಾಲಕರು-ನಿರ್ವಾಹಕರೇ ಇವತ್ತು ಪ್ರಯಾಣಿಕರ ಪಾಲಿಗೆ ವಿಲನ್ ಆಗ್ಹೋಗಿದ್ದಾರಾ ಎನಿಸುತ್ತದೆ.ಆದರೆ ಸತ್ಯ ಆಗಿರೊಲ್ಲ..ಬಹುತೇಕ ಎನ್ನಲಾಗದಿದ್ದರೂ ಕೆಲವೊಂದು ಪ್ರಕರಣಗಳಲ್ಲಿ ತಪ್ಪು ಪ್ರಯಾಣಿಕರ ಕಡೆಯಿಂದಲೂ ಆಗಿರುತ್ತದೆ ಎನ್ನುವುದು ಕೂಡ ಒಪ್ಪಲೇಬೇಕಾದ ಸತ್ಯ.ಆದರೆ ಸಿಬ್ಬಂದಿ ಮೇಲೆ ಗುರುತರವಾದ ಆಪಾದನೆ ಕೇಳಿಬರುತ್ತಿದೆ ಎನ್ನುವುದಾದರೆ ಆ ಒಂದು ಮನಸ್ತಿತಿಗೆ ತಳ್ಳಿದ ಆಡಳಿತ ವ್ಯವಸ್ಥೆಯ ಕ್ರೌರ್ಯವೂ ಇದಕ್ಕೆ ಕಾರಣ ಆಗಿರಲೇಬೇಕಲ್ಲವೇ..?


ಬಿಎಂಟಿಸಿ ಸಿಬ್ಬಂದಿ ಮೇಲೆ ಕೇಳಿಬಂದಿರುವ ಗಂಭೀರ ಸ್ವರೂಪದ ಹಾಗೆಯೇ ಅಘಾತಕ್ಕೀಡು ಮಾಡುವಂತ ಆಪಾದನೆಯೇ ಅವರುಗಳ ವಿರುದ್ದ ದಾಖಲಾಗಿರುವ ದೂರುಗಳು. ದೂರುಗಳೇನು,ನಿತುವೂ ದಾಖಲಾಗುತ್ತಿರುತ್ತದೆ. ಬಹುತೇಕ ಪ್ರಕರಣಗಳಲ್ಲಿ ನೊಟೀಸ್ ನೀಡಿ ವಿವರಣೆ ಕೇಳಲಾಗುತ್ತದೆ.ಗಂಭೀರ ಸ್ವರೂಪದ ತಪ್ಪುಗಳಾಗಿರುವುದು ತನಿಖೆ ವೇಳೆ ಸಾಬೀತಾದ್ರೆ ಅಂಥವರ ವಿರುದ್ಧ ಅಮಾನತ್ತು-ವಜಾದಂಥ ಶಿಕ್ಷೆಯನ್ನು ಲಾಗೂ ಮಾಡಲಾಗುತ್ತದೆ.ಇದೆಲ್ಲಾ ಬಿಎಂಟಿಸಿಯಲ್ಲಿ ಮಾಮೂಲಾಗಿರುವದು.ಆದರೆ ಈಗ ನಾವು ಹೇಳಲಿಕ್ಕೆ ಹೊರಟಿರುವ ವಿಷಯ ಇದೆಯೆಲ್ಲಾ ಅದು ಒಂದ್ ಕ್ಷಣ ಸಚಿವ ರಾಮಲಿಂಗಾರೆಡ್ಡಿ ಅವರೇ ಶಾಕ್ ಆಗುವಂತದ್ದು.

ಬಿಎಂಟಿಸಿ ಡ್ರೈವರ್- ಕಂಡಕ್ಟರ್ ಗಳ ಮೇಲೆ ದೂರಿನ ಸುರಮಾಲೆ..ಅರರೆ..ಇದೇನು ಹೊಸ ವಿಷಯನಾ.?ಸಾವಿರಾರು ಬಸ್ ಗಳನ್ನು ಓಡಿಸುವ ಚಾಲಕರು ಮತ್ತು ನಿರ್ವಾಹಕರ ಮೇಲೆ ಗೊತ್ತಿದ್ದೋ..ಗೊತ್ತಿಲ್ಲದೆಯೋ ಇಂತಹದೊಂದು ಆಪಾದನೆ ಕೇಳಿಬರೋದು ಮಾಮೂಲು..ಹೀಗಂದುಕೊಂಡವರಿಗೆ ಶಾಕಿಂಗ್ ಕೊಡುವಂತ ಸುದ್ದಿ ಇನ್ನೊಂದಿಲ್ಲ. ಹೀಗೆ ಚಾಲಕರು ಹಾಗೂ ನಿರ್ವಾಹಕರ ವಿರುದ್ದ ಕೇಳಿಬಂದಿದೆ ಎನ್ನಲಾಗಿರುವ ಆಪಾದನೆಗಳ ಬಗ್ಗೆ ದೆ. ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸಂಖ್ಯೆ ಎಷ್ಟು ಗೊತ್ತಾ..? 10,000 ಅರ್ಥಾತ್ ಹತ್ತು ಸಾವಿರ. ಅದು ಕೂಡ ಎಷ್ಟು ಅವಧಿಯಲ್ಲಿ ಗೊತ್ತಾ..? ಕೇವಲ 8 ತಿಂಗಳಲ್ಲಿ ಎನ್ನುವುದು ಬಿಎಂಟಿಸಿ ಮೂಲಗಳಿಂದಲೇ ತಿಳಿದುಬಂದಿರುವ ಅಂಕಿಅಂಶ.
ಹೌದು..ಇದು ಅಘಾತಕಾರಿಯಾದರೂ ನಂಬಲೇಬೇಕಾದ ಸತ್ಯ.8 ತಿಂಗಳಲ್ಲಿ ಚಾಲಕರು-ನಿರ್ವಾಹಕರ ವಿರುದ್ದ ಪ್ರಯಾಣಿಕರಿಂದ ಕೇಳಿ ಬಂದಿ ರುವ ದೂರು-ಆಪಾದನೆಗಳ ಸಂಖ್ಯೆ ಬರೋಬ್ಬರಿ 10 ಸಾವಿರ ಅಂತೆ.ಕಳೆದ ವರ್ಷ ಪೂರ್ತಿ ಕೇಳಿಬಂದ ದೂರುಗಳು 11,412 ಅಂತೆ.ಈ ವರ್ಷ ಮುಗಿಯಲಿಕ್ಕೆ ಇನ್ನು ನಾಲ್ಕು ತಿಂಗಳಿದೆ.ಸಧ್ಯ ದಾಖಲಾಗಿರುವ ದೂರುಗಳ ಸಂಖ್ಯೆ ಗಮನಿಸಿದ್ರೆ ವರ್ಷ ಕಳೆಯುವುದರೊಳಗೆ ಕಳೆದ ವರ್ಷದ ದಾಖಲೆಯನ್ನೇ ಮುರಿಯುವ ಮಟ್ಟದಲ್ಲಿ ದೂರುಗಳು ದಾಖಲಾಗುವ ಸಾಧ್ಯತೆಗಳನ್ನೂ ಅಲ್ಲಗೆಳೆಯೊಕ್ಕೆ ಆಗೊಲ್ಲವೇನೋ..? ಅಂದ್ಹಾಗೆ ಇಂತ ಹದೊಂದು ಊಹೆ ಮಾಡ್ತಿರೋದು ನಾವಲ್ಲ..ಈ ಇಲಾಖೆಯನ್ನು ನಿರ್ವಹಿಸುವ ವಿಭಾಗದ ಕೆಲ ಹೆಸರು ಹೇಳಲಿಚ್ಛಿಸದ ಅಧಿಕಾರಿ ಸಿಬ್ಬಂದಿ.

ಅಘಾತ ಹುಟ್ಟಿಸುವ ರೀತಿಯಲ್ಲಿ ನಡೆಯುತ್ತಿರುವ ಅಪಘಾತ, ಪ್ರಯಾಣಿಕರು ಅದರಲ್ಲೂ ಮಹಿಳಾ ಪ್ರಯಾಣಿಕರ ಜತೆಗಿನ ದುರ್ವರ್ತನೆ- ಅಸಭ್ಯ ವರ್ತನೆ, ಅಪಘಾತಗಳಿಗೆ ಆಸ್ಪದ ಕೊಡುವ ಮಟ್ಟದಲ್ಲಿನ ಅಜಾಗರೂಕತೆ, ಅತಿ ವೇಗದ ಚಾಲನೆ…ಹಣ ಪಡೆದು ಟಿಕೆಟ್ ನೀಡದೆ ವಂಚನೆ…ಹೀಗೆ ಹಲವಾರು ಸ್ವರೂಪದ ಎಲ್ಲಾ ದೂರುಗಳನ್ನು ಕ್ರೋಢೀಕರಿಸಿ ನೋಡಿದ್ರೆ ಎಂಟು ತಿಂಗಳಲ್ಲಿ 10,000 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆಯಂತೆ.ಅಂದ್ಹಾಗೆ ಇದ್ರಲ್ಲಿ ಹೆಚ್ಚಿನವು 4093 (ಕಳೆದ ವರ್ಷ-5994 ದೂರು) ದೂರು.ಅವೆಲ್ಲಾ ಚಾಲಕ- ನಿರ್ವಾಹಕರ ವಿರುದ್ದವೇ ಕೇಳಿಬಂದಿವೆ. ಅನುಚಿತ ವರ್ತನೆ ತೋರಿದ್ರೆ ಶಿಸ್ತು ಕ್ರಮ ಎಚ್ಚರಿಕೆ ನೀಡಿದ್ದರೂ ಬಿಎಂಟಿಸಿ ಚಾಲಕರು-ನಿರ್ವಾಹಕರ ವಿರುದ್ದ ಇಷ್ಟೊಂದು ದೂರುಗಳು ದಾಖಲಾಗಿವೆಯಂತೆ.

ಕಳೆದ ವರ್ಷವೂ ಇಷ್ಟೇ ಪ್ರಮಾಣದ ದೂರುಗಳು ಕೇಳಿಬಂದಿದ್ದವು..ಈ ವರ್ಷ ಅದಕ್ಕಿಂತ ಕಡಿಮೆ ಇದೆ ಎಂದು ಸಮಾಧಾನ ಮಾಡಿಕೊಂಡರೆ ಅದಕ್ಕಿಂತ ದುರಂತದ ವಿಚಾರ ಮತ್ತೊಂದಿಲ್ಲ.ಇಷ್ಟೊಂದು ಪ್ರಮಾಣದ ದೂರುಗಳು ಏಕೆ ದಾಖಲಾಗುತ್ತಿವೆ..ಇದಕ್ಕೆ ನಿಜವಾದ ಕಾರಣವೇನು.? ಎಲ್ಲಾ ದೂರುಗಳಲ್ಲೂ ಸತ್ಯಾಂಶವಿದೆಯಾ..? ಎಲ್ಲಾ ತಪ್ಪುಗಳು ಚಾಲಕರು-ನಿರ್ವಾಹಕರಿಂದಲೇ ಆಗಿದೆಯಾ..? ಎನ್ನುವ ವಿಷಯಗಳ ಬಗ್ಗೆ ಅವಲೋಕನ ಆಗಬೇಕಿದೆ.ಅಂದ್ಹಾಗೆ ದೂರುಗಳು ಬಂದಾಕ್ಷಣ ಅವರನ್ನು ಶಿಕ್ಷೆಗೊಳಪಡಿಸಿದಾಕ್ಷಣ ಎಲ್ಲವೂ ಸರಿ ಹೋಗುತ್ತೆ ಎಂದು ಭಾವಿಸುವಂಗಿಲ್ಲ..ಇಷ್ಟೊಂದು ಪ್ರಮಾಣದ ದೂರುಗಳು ದಾಖಲಾಗಿರುವುದಕ್ಕೆ ನಿಜವಾದ ಕಾರಣವೇನು..? ಇದರಲ್ಲಿ ಚಾಲಕರು-ನಿರ್ವಾಹಕರು ಎಷ್ಟರ ಮಟ್ಟಿಗೆ ಬಾಧ್ಯಸ್ಥರಾಗಿದ್ದಾರೆ ಎನ್ನುವುದರ ತನಿಖೆ ನಡೆಯಬೇಕಿದೆ. ಚಾಲಕರು-ನಿರ್ವಾಹಕರ ಮನಸ್ತಿತಿ ತಪ್ಪೆಸಗುವುದಕ್ಕೆ ಕಾರಣ ಏಕೆ ಆಗುತ್ತಿದೆ ಎನ್ನುವುದಕ್ಕೆ ಉತ್ತರ ಕಂಡುಕೊಳ್ಳುವ ಕೆಲಸ ಮೊದಲ ಆಧ್ಯತೆಯಾಗಿದೆ. ಶಿಕ್ಷಿಸುವುದರಿಂದ ವ್ಯಕ್ತಿ ಮೊಂಡು ಬೀಳುತ್ತಾನೆ.ಅದನ್ನು ಬಿಟ್ಟು ಮನಸ್ತಿತಿ ಸುಧಾರಿಸುವತ್ತ ಆಡಳಿತ ಗಮನ ಹರಿಸಬೇಕಿದೆ. ತಮ್ಮ ಇಲಾಖೆಯ ಆಡಳಿತ ವ್ಯವಸ್ಥೆಯನ್ನು ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ದುಡಿಸಿಕೊಳ್ಳಬೇಕಿದೆ..ಈ ಪ್ರಯತ್ನ ಆಗದೆ ಎಲ್ಲವೂ ಸುಧಾರಣೆ ಆಗಬೇಕು ಎಂದು ನಿರೀಕ್ಷಿಸುವುದು ಮೂರ್ಖತನವಾಗಬಹುದೇನೋ..ಅಲ್ವಾ..?!