ಕೆಜಿಎಫ್-3 ಖಂಡಿತ ಬರುತ್ತೆ. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಮಾತುಕತೆ ನಡೆಯುತ್ತಿದೆ ಎಂದು ನಟ ಯಶ್ ಹೇಳುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಇಮ್ಮಡಿಗೊಳಿಸಿದ್ದಾರೆ.
ಕೆಜಿಎಫ್, ಕೆಜಿಎಫ್-2 ಯಶಸ್ಸಿನ ನಂತರ ಯಶ್ ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರೆ, ಪ್ರಶಾಂತ್ ನೀಲ್ ಕೂಡ ಹಲವು ಚಿತ್ರಗಳಲ್ಲಿ ಬ್ಯೂಸಿ ಆಗಿದ್ದರು. ಇದರಿಂದ ಕೆಜಿಎಫ್-3 ಚಿತ್ರದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿದ್ದವು.
ಹಾಲಿವುಡ್ ಸಿನಿಮಾಗಳ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ಯಶ್, ಕೆಜಿಎಫ್-3 ಚಿತ್ರದ ಕುರಿತು ಅಪ್ ಡೇಟ್ ನೀಡಿದ್ದು, ಕೆಜಿಎಫ್-3 ಚಿತ್ರದ ಮಾತುಕತೆ ನಡೆಯುತ್ತಿದೆ. ಚಿತ್ರದ ಸಿಕ್ವೇಲ್ ಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ವರ್ಷಗಳಲ್ಲಿ ಈ ಚಿತ್ರ ಬರುವುದು ಖಚಿತ ಎಂದು ಹೇಳಿದ್ದಾರೆ.
ಪ್ರಸ್ತುತ ನಾನು ಟಾಕ್ಸಿಕ್ ಮತ್ತು ರಾಮಾಯಣ್ ಚಿತ್ರಗಳತ್ತ ಗಮನ ಹರಿಸಿದ್ದೇನೆ. ಕೆಜಿಎಫ್-3 ತುಂಬಾ ದೊಡ್ಡ ಮಟ್ಟದಲ್ಲಿ ಬರಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಏಕಾಗ್ರತೆ ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕಾಗಿದೆ. ಇದಕ್ಕೆ ಸಾಕಷ್ಟು ಕಾಲವಕಾಶ ಬೇಕು ಎಂದು ಯಶ್ ವಿವರಿಸಿದರು.
ಕೆಜಿಎಫ್ ಜನಪ್ರಿಯತೆಯನ್ನು ಕ್ಯಾಶ್ ಮಾಡಿಕೊಳ್ಳುವ ಆತುರ ನಮಗಿಲ್ಲ. ಜನರು ನಮಗೆ ಏನು ಬೇಕೋ ಅದಕ್ಕಿಂತ ಹೆಚ್ಚು ನೀಡಿದ್ದಾರೆ. ಇದೊಂದು ಅದ್ಭುತ ಚಿತ್ರವಾಗಿರುವುದರಿಂದ ಅದಕ್ಕೆ ತಕ್ಕಂತೆ ನಾವು ಸಿದ್ಧತೆ ಮಾಡಿಕೊಳ್ಳಬೇಕಿದೆ. ಕೆಜಿಎಫ್ ಪಾತ್ರಗಳನ್ನು ಜನರು ಒಪ್ಪಿರುವುದರಿಂದ ನಾವು ಈ ಬಾರಿ ತುಂಬಾ ದೊಡ್ಡ ಮಟ್ಟದಲ್ಲಿ ಚಿತ್ರಕ್ಕೆ ಕೈ ಹಾಕಲಿದ್ದೇವೆ ಎಂದು ಅವರು ವಿವರಿಸಿದರು.