ಬೆಂಗಳೂರು: ಎಲ್ಲಾ ಹವಾಮಾನಗಳಲ್ಲೂ ಕ್ರಿಯಾಶೀಲವಾಗಿ ಕೆಲಸ ಮಾಡುವ ನಮ್ಮ ವೀಡಿಯೋ ಜರ್ನಲಿಸ್ಟ್ ( ಮುಂಚೆಯೆಲ್ಲಾ ಕ್ಯಾಮೆರಾಮನ್ ಗಳನ್ನು ಈ ರೀತಿ ಗೌರವಯುತವಾಗಿ ಕರೆಯುತ್ತಿರಲಿಲ್ಲ) ಗಳಿಗೆ ರಿಪೋರ್ಟರ್ ಗಳ ಹೋಲಿಕೆಯಲ್ಲಿ ಸೌಲಭ್ಯ-ಸವಲತ್ತು-ಸಹಕಾರ-ನೆರವು ಸಿಗೋದು ತೀರಾ ಕಡಿಮೆ.ಆದರೂ ಈ ಬೇಸರ-ಅಸಮಾಧಾನ-ನೋವನ್ನೆಲ್ಲಾ ಮರೆತು ಸಂಸ್ಥೆ ವಹಿಸಿದ ಕೆಲಸ ಹಾಗೂ ಫೀಲ್ಡ್ ನಲ್ಲಿ ರಿಪೋರ್ಟರ್ ಹೇಳಿದ ಅಸೈನ್ಮೆಂಟನ್ನು ಶೂಟ್ ಮಾಡಿಕೊಡುವ ಕೆಲಸ ಮಾಡುತ್ತಾ ಬಂದಿದ್ದಾರೆ.ರಿಪೋರ್ಟರ್ ಗಳಂತೆ ತಮಗೂ ಎಲ್ಲಾ ರೀತಿಯ ಸ್ಥಾನಮಾನ ಸಿಗಬೇಕೆನ್ನುವ ಮಹದಾಸೆ ಕ್ಯಾಮೆರಾಮನ್ ಗಳಿಗೆ ಇದ್ದರೂ ಅನೇಕ ಕಾರಣಗಳಿಂದ ಅದು ಸಾಧ್ಯವಾಗುತ್ತಿಲ್ಲ( ರಿಪೋರ್ಟರ್ ಗಳಿಗೆ ಮಾದ್ಯಮಗಳ ಪ್ರಾತಿನಿಧಿಕ ಸಂಘ-ಸಂಸ್ಥೆಯನ್ನು ಪ್ರತಿನಿಧಿಸಲು-ಅಧಿಕಾರ ಅನುಭವಿಸಲು ಇರುವಷ್ಟು ಅವಕಾಶ ಕ್ಯಾಮೆರಾಮನ್ ಗಳಿಗೆ ಇಲ್ಲ..ಮ್ಯಾನೇಜ್ಮೆಂಟ್ ಗಳು ಅದಕ್ಕೆ ಅವಕಾಶವನ್ನೂ ಮಾಡಿಕೊಡೊಲ್ಲ ಬಿಡಿ).ಸಂಘಟನೆಯ ಕೊರತೆಯಿಂದಲೋ ಅಥವಾ ಅವಕಾಶಗಳ ಅಲಭ್ಯತೆಯಿಂದಲೋ ಕ್ಯಾಮೆರಾಮನ್ ಗಳಿಗೆ ಸಿಗಬೇಕಿರುವುದು ಸಿಗುತ್ತಿಲ್ಲ ಎನ್ನುವುದು ಕೂಡ ವಾಸ್ತವವೇ..


ಹಾಗೆಂದು ಕ್ಯಾಮೆರಾಮನ್ ಗಳು ತಮ್ಮ ಹಕ್ಕೊತ್ತಾಯಕ್ಕಾಗಿ ಹೋರಾಡುವುದನ್ನು ಬಿಟ್ಟಿಲ್ಲ.ತಮ್ಮ ಚಾನೆಲ್ ಗಳಲ್ಲಿ ತಮ್ಮನ್ನು ಬೆಳೆಯೊಕ್ಕೆ ಅವಕಾಶ ಕೊಡದ ಸನ್ನಿವೇಶದಲ್ಲೂ ಯಾರಿಗೂ ನೋವುಂಟುಮಾಡದೆ ಹಾಗೂ ಸಂಸ್ಥೆಯ ಶಿಷ್ಟಾಚಾರವನ್ನು ದಿಕ್ಕರಿಸದೆ ಸೀಮಿತ ಅವಕಾಶಗಳೊಳಗೆ ತಮ್ಮ ಹಕ್ಕೊತ್ತಾಯಗಳ ಬಗ್ಗೆ ಮೌನ ಸಂಗ್ರಾಮವೊಂದನ್ನು ದಶಕಗಳಿಂದಲೂ ಮಾಡುತ್ತಲೇ ಬಂದಿದ್ದಾರೆ.ಸಂಘಟನೆಯನ್ನು ಬಲಿಷ್ಟಗೊಳಿಸುತ್ತಿದ್ದಾರೆ.ಅವರಿಗೆ ನೈಜವಾಗಿ ಸಿಗಬೇಕಿರುವ ಹಕ್ಕು-ಅಧಿಕಾರ-ಅವಕಾಶ-ಸೌಲತ್ತುಗಳನ್ನು ಗಿಟ್ಟಿಸಿಕೊಳ್ಳಲು ಹೋರಾಡುತ್ತಲೇ ಇದ್ದಾರೆ.ಇದೆಲ್ಲದರ ನಡುವೆಯೇ ಪತ್ರಕರ್ತರ ಯಾವ ಸಂಘ-ಸಂಘಟನೆಗಳಿಂದಲೂ ಸಾಧ್ಯವಾಗಿರದಿದ್ದ ಹೊಸತೊಂದು ಬೆಳವಣಿಗೆಗೆ ನಾಂದಿ ಹಾಡಿದ್ದಾರೆ.ಇದನ್ನು ನೋಡಿದ್ರೆ ಕ್ಯಾಮೆರಾಮನ್ ಗಳಲ್ಲಿರುವ ಒಗ್ಗಟ್ಟು-ಸಂಘಟನೆ-ಐಕ್ಯತೆಯ ಪರಿಚಯವಾಗುತ್ತದೆ.
ಹೌದು..ಖಂಡಿತಾ ಬೆಂಗಳೂರಿನ ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲಿ ಕೆಲಸ ಮಾಡುವ ವೀಡಿಯೋ ಜರ್ನಲಿಸ್ಟ್ ಗಳಿರುವ ವೀಡಿಯೋ ಜರ್ನಲಿಸ್ಟ್ ಅಸೋಸಿಯೇಷನ್ ಇಂಥದ್ದೊಂದು ವಿಶಿಷ್ಟ ಹಾಗು ಐತಿಹಾಸಿಕವಾದ ಕಾರ್ಯಕ್ಕೆ ನಾಂದಿ ಹಾಡಿದೆ.ಇದೇ ಮೊದಲ ಬಾರಿಗೆ ಸಂಘದಲ್ಲಿ ಸದಸ್ಯರಾಗಿರುವ ಎಲ್ಲಾ ವೀಡಿಯೋ ಜರ್ನಲಿಸ್ಟ್ ಗಳಿಗೆ ಬೆಲೆ ಬಾಳುವ ಹಾಗೂ ನೋಡಲು ಆಕರ್ಷಕವಾಗಿರುವ ಫೋಟೋಗ್ರಫಿ ಜಾಕೆಟ್ ನ್ನು ನೀಡಿದ್ದಾರೆ.ಎಲ್ಲಾ ವೀಡಿಯೋ ಜರ್ನಲಿಸ್ಟ್ ಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಇದನ್ನು ಧರಿಸಿ ಕೆಲಸ ಮಾಡುವ ಮೂಲಕ ತಮ್ಮ ಅಸ್ತಿತ್ವವನ್ನು ರುಜುವಾತುಪಡಿಸುವುದು ಹಾಗು ಒಗ್ಗಟ್ಟನ್ನು ಪ್ರದರ್ಶಿಸುವುದು ಇದರ ಮೂಲ ಉದ್ದೇಶ.

ನೋಡಲು ಅತ್ಯಾಕರ್ಷಕವಾಗಿರುವುದಷ್ಟೆ ಅಲ್ಲದೆ ಬೆಲೆಬಾಳುವ ಹಾಗೂ ಧೀರ್ಘ ಬಾಳಿಕೆ ಬರುವಂತ ಫೋಟೋಗ್ರಫಿ ಜಾಕೆಟ್ ಗಳನ್ನು ಇವತ್ತು ಪ್ರೆಸ್ ಕ್ಲಬ್ ನಲ್ಲಿ ಅನಾವರಣ ಮಾಡಲಾಯಿತು.ಒಂದೇ ಬಣ್ಣದ ಫೋಟೋಗ್ರಫಿ ಜಾಕೆಟ್ ಗಳನ್ನು ಧರಿಸಿ ವೀಡಿಯೋಗ್ರಾಫರ್ ಗಳು ಮಿರಮಿರ ಮಿಂಚಿದ್ರು. ಒಂದೇ ವೇದಿಕೆಯಲ್ಲಿ ಎಲ್ಲಾ ಕ್ಯಾಮೆರಮನ್ ಗಳನ್ನು ನೋಡುವಂತಾಗಿದ್ದು ಅಪರೂಪದ ಸನ್ನಿವೇಶವಾಗಿ ಕಂಡುಬಂದಿತು.ವೇದಿಕೆಯಲ್ಲಿ ಫೋಟೋಗ್ರಫಿ ಜಾಕೆಟ್ ಗಳನ್ನು ಅನಾವರಣಗೊಳಿಸಿದ ಬಳಿಕ ಹಿರಿಯ ಕ್ಯಾಮೆರಾಮನ್ ಗಳು ಮಾದ್ಯಮ ಕ್ಷೇತ್ರದಲ್ಲಿ ಅತ್ಯಂತ ಕ್ಲಿಷ್ಟ-ಕಠಿಣ ಹಾಗು ಸವಾಲಿನ ಕೆಲಸ ಮಾಡುವಂಥ ಕ್ಯಾಮೆರಾಮನ್ ಗಳಿಗೆ ನೈಜವಾಗಿ ಸಿಗಬೇಕಾದ ಸೌಲಭ್ಯ ಸವಲತ್ತುಗಳ ಬಗ್ಗೆ ಸಂಘಟಿತವಾಗಿ ಹೋರಾಡಬೇಕಾದ ಸನ್ನಿವೇಶವನ್ನು ನೆನಪು ಮಾಡಿಕೊಟ್ಟರು.

ಕ್ಯಾಮೆರಾಮನ್ ಗಳಿಗೆ ಫೋಟೋಗ್ರಫಿ ಜಾಕೆಟ್ ಗಳನ್ನು ನೀಡಬೇಕು..ಫೀಲ್ಡ್ ನಲ್ಲಿ ಅದನ್ನು ಧರಿಸಿ ಕೆಲಸ ಮಾಡುವ ಮೂಲಕ ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕೆನ್ನುವ ಪರಿಕಲ್ಪನೆಯ ರೂವರಿಗಳೆನ್ನಲಾದ ಅಸೋಸಿಯೇಷನ್ ಗೌರವಾಧ್ಯಕ್ಷರಾ ರವಿಪ್ರಸಾದ್( ಈಟಿವಿ),ಪ್ರಧಾನ ಕಾರ್ಯದರ್ಶಿಗಳಾದ ಎಸ್ .ಜಿ ವಿನೋದ್ ಕುಮಾರ್,ಟಿವಿ9 ಸಂದೇಶ್,ಮಂಜು, ನ್ಯೂಸ್ 18 ಕನ್ನಡದ ಶ್ರೀನಿವಾಸ್,ಮೋಹನ್ ರೆಡ್ಡಿ, ಗಣೇಶ್,ಟಿವಿ 5 ಚಂದ್ರು,ರಾಜ್ ಟಿವಿ ಶ್ರೀನಿವಾಸ್,ಬಿಟಿವಿ ರಾಜು, ಪಬ್ಲಿಕ್ ಟಿವಿ ಗಣೇಶ್,ನ್ಯೂಸ್ ಫಸ್ಟ್ ನ ಪವನ್ ಕುಮಾರ್,ಅವಿರಾಜ್, ಝೀ ಟಿವಿಯ ಶಂಕರ್, ಸೇರಿದಂತೆ ಹಿರಿ ಕಿರಿಯ ವೀಡಿಯೋ ಜರ್ನಲಿಸ್ಟ್ ಗಳು ಉಪಸ್ತಿತರಿದ್ದರು.

ಸಚಿವ ಝಮೀರ್ ಶ್ಲಾಘನೆ-ಸಹಾಯ ಹಸ್ತದ ಭರವಸೆ:ಇದಕ್ಕು ಮುನ್ನ ವಸತಿ ಸಚಿವ ಝಮೀರ್ ಅಹಮದ್ ಅವರನ್ನು ಭೇಟಿ ಮಾಡಿ ವೀಡಿಯೋ ಜರ್ನಲಿಸ್ಟ್ ಜಾಕೆಟ್ ಗಳನ್ನು ಅವರ ಕೈಯಿಂದ ಅನಾವರಣ ಮಾಡಲಾಯಿತು.ರಿಪೋರ್ಟರ್ ಗಳಷ್ಟೇ ಎಫರ್ಟ್ ಹಾಕಿ ಕೆಲಸ ಮಾಡುವ ಕ್ಯಾಮೆರಾಮನ್ ಗಳು ಸರ್ಕಾರದ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ.ಅವರಿಗೆ ವಸತಿ ನಿವೇಶನ ಕಲ್ಪಿಸಬೇಕೆನ್ನುವ ಪ್ರಸ್ತಾವನೆ ಅನೇಕ ವರ್ಷಗಳಿಂದಲೂ ಸರ್ಕಾರದ ಮಟ್ಟದಲ್ಲಿದೆ.ಅದರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ಕೊಟ್ಟರೆನ್ನಲಾಗಿದೆ.ಇದೇ ವೇಳೆ ಮಾಜಿ ಎಮ್ಮೆಲ್ಸಿ ವೇಣುಗೋಪಾಲ್ ಕೂಡ ವೀಡಿಯೋ ಜರ್ನಲಿಸ್ಟ್ ಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.