advertise here

Search

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?


-ಬೆಲ್ಲಕ್ಕೆ ನೊಣಗಳಂತೆ ಚಂದ್ರುವನ್ನು ಮುತ್ತಿಕೊಳ್ಳುತ್ತಿದ್ದ ಆ ಸಾರಿಗೆ ಸಿಬ್ಬಂದಿ ಎಲ್ಲೋದರು.?

-ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತರಾ ಚಂದ್ರು-ಕಚೇರಿ ಬಾಡಿಗೆ ಕಟ್ಟಲಿಕ್ಕೂ ಪರದಾಡುತ್ತಿದ್ದಾರಾ..?

-ನಾಯಕತ್ವದ ಗುಣಗಳಿಗೆ ತಿಲಾಂಜಲಿ ಇಟ್ಟು,ಸಾಮೂಹಿಕ ನಾಯಕತ್ವ ಮರೆತು ಸರ್ವಾಧಿಕಾರಿಯಂತಾಗಿದ್ದಕ್ಕೆ ಆಪ್ತರೇ ಕೊಟ್ಟ ಶಿಕ್ಷೆನಾ ಇದು..?!

ಇಂಥಾ ಸ್ಥಿತಿ ಯಾವೊಬ್ಬ ವ್ಯಕ್ತಿಗೂ ಬರಬಾರದು..ಅದರಲ್ಲೂ ಅತೀ ಕಡಿಮೆ ಅವಧಿಯಲ್ಲಿ ರಾತ್ರೋ ರಾತ್ರಿ ದೊಡ್ಡ ಲೀಡರ್‌ ಆಗಿ ಬೆಳೆದು ಹೆಸರು ಮಾಡಿ, ಶ್ರಮಿಕ ಸಮುದಾಯದ ಪ್ರೀತಿಗೆ ಪಾತ್ರವಾಗಿ, ತನ್ನ ಮಾತಿಗೆ ತಲೆ ಬಾಗುವ ಮಟ್ಟದಲ್ಲಿ ಅವರ ಮನಸಿನಲ್ಲಿ ಉಳಿದುಕೊಂಡಿದ್ದ ಒಬ್ಬ ಲೀಡರ್‌ ಗೆ ಇಂಥಾ ಸ್ಥಿತಿ ಬರಲೇಬಾರದಿತ್ತು ಅನ್ನಿಸುತ್ತೆ.ಈ ಮಾತನ್ನು ಯಾರ ಬಗ್ಗೆ ಹೇಳುತ್ತಿದ್ದೇವೆ ಎಂದು ಸಾರಿಗೆ ಸಮೂಹ ಯೋಚಿಸುತ್ತಿದ್ದರೆ ಆ ಹೆಸರೇ ಚಂದ್ರಶೇಖರ್‌..ಕೂಟದ ಚಂದ್ರು..ಸಾರಿಗೆ ಕೂಟದ ಚಂದ್ರಶೇಖರ್‌.ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ದೊರೆತಿರುವ ಮಾಹಿತಿಗಳ ಪ್ರಕಾರ ಯಾರ ವಲಯದಲ್ಲಿ ದೊಡ್ಡ ಲೀಡರ್‌ ಆಗಿ ಗುರುತಿಸಿಕೊಂಡಿದ್ದರೋ ಆ ನಾಯಕನೇ ಇವತ್ತು ಅನಾದಾರ, ನಿರ್ಲಕ್ಷ್ಯ,ತಾತ್ಸಾರಕ್ಕೆ ಒಳಗಾಗಿದ್ದಾನೆನಂತೆ. ಯಾರೆಲ್ಲಾ ಚಂದ್ರಣ್ಣ ಎಂದು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತ್ತಿದ್ರೋ ಅವರೇ ಬಹುತೇಕ ಚಂದ್ರು ಅವರನ್ನು ಮರೆತುಬಿಟ್ಟಿದ್ದಾರಂತೆ.

ಹೌದು..ಇದು ಆಶ್ಚರ್ಯ ಎನಿಸಿದ್ರೂ ಸತ್ಯವಂತೆ. ಕೆಲ ತಿಂಗಳುಗಳ ಹಿಂದಿನ ತನಕವೂ ಯಾವ ಚಂದ್ರಶೇಖರ್‌ ಸುತ್ತ ಬೆಲ್ಲಕ್ಕೆ ನೊಣಗಳಂತೆ ಸಾರಿಗೆ ಸಿಬ್ಬಂದಿ ಮುತ್ತಿಕೊಂಡಿರುತ್ತಿದ್ದರೋ ಅವರೆಲ್ಲಾ ಇವತ್ತು ದೂರ ಸರಿದಿದ್ದಾರಂತೆ.ಯಾವ ಚಂದ್ರಶೇಖರ್‌ ಒಂದು ಕೂಗಾಕಿದ್ರೆ ಸಾಕು ದಂಡು ದಂಡಾಗಿ ಸಾರಿಗೆ ಸಿಬ್ಬಂದಿ ಬರುತ್ತಿದ್ದರೋ ಅವರೆಲ್ಲಾ ಇವತ್ತು ಬೆರಳೆಣಿಕೆಯಾಗಿದ್ದಾರೆ.ಯಾರ ವಲಯದಲ್ಲಿ ಲೀಡರ್‌ ಆಗಿ ರಾರಾಜಿಸಿದ್ದನೋ ಆ ಚಂದ್ರು ಇವತ್ತು ಅಕ್ಷರಶಃ ಒಂಟಿಯಾಗಿ ಹೋಗಿದ್ದಾರೆನ್ನುವ ಮಾತುಗಳಿವೆ. ನೂರಾರು ಸಂಖ್ಯೆಯಲ್ಲಿ ಆತನನ್ನು ಸುತ್ತುವರೆದುಕೊಂಡು “ಝೀ ಹುಜೂರ್‌” ಎನ್ನುತ್ತಿದ್ದವರಲ್ಲಿ ಬಹುತೇಕ ಚಂದ್ರುವಿಂದ ಚೆದುರಿ ಹೋಗಿದ್ದಾರೆನ್ನುವ ಮಾತುಗಳಿವೆ.

ಚಂದ್ರು ಅಬ್ಬರದ ಎದುರು ತಣ್ಣಗಾಗಿದ್ದ ಅನಂತ ಸುಬ್ಬರಾವ್‌: ಸಾರಿಗೆ ಹೋರಾಟದ ಇತಿಹಾಸವನ್ನು ಗಮನಿಸಿದ್ರೆ,ಹೋರಾಟದ ಹಾದಿಯಲ್ಲಿ  ಹೆಜ್ಜೆ ಗುರುತುಗಳನ್ನು ಮೂಡಿಸಿದ್ದುದೇ ಎಐಟಿಯುಸಿ ಹಾಗೂ ಅನಂತ ಸುಬ್ಬರಾವ್‌ ಅವರಂಥ ಹೋರಾಟಗಾರರು.ಸಿಐಟಿಯು, ಬಿಎಂಎಸ್‌,ಐಎನ್‌ ಟಿಯುಸಿ ಅಂಥ ಸಂಘಟನೆಗಳಿದ್ದರೂ ಅವುಗಳ ತೂಕ ಎಐಟಿಯುಸಿ ಮುಂದೆ ತೂಗಲಾರದಷ್ಟು ದುರ್ಬಲವಾಗಿದ್ದುದು ಸತ್ಯ.ಇಂಥಾ ಸನ್ನಿವೇಶದಲ್ಲಿ ಸಾರಿಗೆ ಕೂಟ ಎನ್ನುವ ಸಂಘಟನೆಯನ್ನು ರಾತ್ರಿ ರಾತ್ರಿ ಕಟ್ಟಿ ಪ್ರವರ್ಧಮಾನಕ್ಕೆ ಬಂದವರೇ ಚಂದ್ರಶೇಖರ್. ವೇತನ ಪರಿಷ್ಕರಣೆಯಾದರೆ ಸಾಕು ಎನ್ನುವ ಮಟ್ಟಕ್ಕೆ ಸೀಮಿತವಾದ ಹೋರಾಟದ ಕೂಗನ್ನು ಸರ್ಕಾರಿ ನೌಕರರ ಮಾನ್ಯತೆ ಮಟ್ಟಕ್ಕೆ ವಿಸ್ತರಿಸಿ ಸರ್ಕಾರದ ವಲಯದಲ್ಲಿ ಮಿಂಚಿನ ಸಂಚಲನ ಮೂಡಿಸಿ ಲೀಡರ್‌ ಆಗಿ ಬೆಳೆದಾತ.ಸಾರಿಗೆ ಹೋರಾಟದ ಕಿಚ್ಚನ್ನು ಹೆಚ್ಚಿಸಿ ಸರ್ಕಾರವನ್ನೇ ನಡುಗಿಸುವ ಮಟ್ಟಕ್ಕೆ ಬೆಳೆದಾತ. ದಶಕಗಳ ಕಾಲ ಅನಂತ ಸುಬ್ಬರಾವ್‌ ಅವರಂಥ ನಾಯಕರನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿಸಿದ್ದ ಸಾರಿಗೆ ಸಿಬ್ಬಂದಿನೇ ಅವರನ್ನು ದಿಕ್ಕರಿಸುವಷ್ಟರ ಮಟ್ಟಕ್ಕೆ  ಸಾರಿಗೆ ಸಿಬ್ಬಂದಿ ಈತನ ಹವಾಕ್ಕೆ ಫಿದಾ ಆಗಿದ್ರು. ಅನಂತ ಸುಬ್ಬರಾವ್‌ ಅವರ ಬಳಗವನ್ನೇ ತ್ಯಜಿಸಿ ಚಂದ್ರು ಹಿಂಬಾಲಿಸಿದ್ದರು.

ಅನಂತ ಸುಬ್ಬರಾವ್‌ ಅವರಂಥ ಹಿರಿಯ ಜೀವಕ್ಕೆ ಆಗ ಆದಂತ ಅವಮಾನ,ಮರ್ಮಾಘಾತ,ಮುಜುಗರ ಅಷ್ಟಿಷ್ಟಲ್ಲ.ಚಂದ್ರು ಮಾತಿಗೆ ಕಟ್ಟುಬಿದ್ದು ಅನಂತ ಸುಬ್ಬರಾವ್‌ ಅವರ ಫೋಟೋಕ್ಕೆ ಚಪ್ಪಲಿ ಸೇವೆ, ಶೃದ್ಧಾಂಜಲಿಯನ್ನೂ ಸಲ್ಲಿಸಿದ್ರು.ತುಂಬಾ ನೊಂದುಕೊಂಡಿದ್ದ ಸುಬ್ಬರಾವ್‌ ಅಂದೇ ಚಂದ್ರು ಅವರಂಥ ದಿಢೀರ್‌ ಸೃಷ್ಟಿಯಾದ ನಾಯಕರು ಅಷ್ಟೇ ಶೀಘ್ರ ನಾಮಾವ ಶೇಷಗೊಳ್ಳುತ್ತಾರೆ.ಕಾದು ನೋಡಿ ಎಂದಿದ್ರು..ಬಹುಷಃ ಅದೆಲ್ಲಾ ಇವತ್ತು ಸತ್ಯವಾದಂತಿದೆ ಎನ್ನಿಸುತ್ತದೆ. ಸಾರಿಗೆ ಕೂಟ ಒಡೆದಿರುವುದಷ್ಟೇ ಅಲ್ಲ,ಅಲ್ಲಿನ ಸಂಘಟನೆ ಶಿಥಿಲಗೊಂಡಿದೆ. ಲೀಡರ್ಸ್‌ ಗಳೆಂದು ಕರೆಯಿಸಿಕೊಳ್ಳುತ್ತಿದ್ದವರು ಬಹುತೇಕ ಚಂದ್ರಶೇಖರ್‌ ಅವರನ್ನು ತೊರೆದಿದ್ದಾರಂತೆ. ಸದಾ ಮುಖಂಡರು, ಸಾರಿಗೆ ಸಿಬ್ಬಂದಿಯಿಂದ ತುಂಬಿರುತ್ತಿದ್ದ  ವಿಲ್ಸನ್‌ ಗಾರ್ಡನ್‌ ನಲ್ಲಿದ್ದ ಸಾರಿಗೆ ಕೂಟದ ಕಚೇರಿ ಬಿಕೋ ಎನ್ನುತ್ತಿದೆ.ಅಲ್ಲಿ ದೂರು ಹೇಳಿಕೊಂಡು ಹೋಗುವವರೇ ಇಲ್ಲವಾಗಿ ಹೋಗಿದೆ. ಅಲ್ಲಿ ಏಕಾಂಗಿಯಾಗಿ ಹೋಗಿದ್ದಾರಂತೆ ಚಂದ್ರಶೇಖರ್.

ಸಂಘದ ಕಚೇರಿಯ ಬಾಡಿಗೆ ಕಟ್ಟಲಿಕ್ಕೂ ದುಡ್ಡಿಲ್ಲವಂತೆ..!?:ಇನ್ನು ಕೆಲವು ಮೂಲಗಳ ಪ್ರಕಾರ ಚಂದ್ರಶೇಖರ್‌ ಅವರನ್ನು ದೂರ ಮಾಡಿದ್ದಾರೆ ಎನ್ನಲಾಗುತ್ತಿರುವ ಲೀಡರ್ಸ್‌ ಗಳು ಕಚೇರಿಗೆ ಸುಳಿಯುತ್ತಿಲ್ಲವಂತೆ.ಅವರೆಲ್ಲರನ್ನು ನಂಬಿಕೊಂಡು ಮನೆ ಮಾಡಿದ್ದ ಚಂದ್ರುಗೆ ಆದಾಯದ ಮೂಲ ಇಲ್ಲವಾಗಿ ಹೋಗಿದೆಯಂತೆ. ಸಧ್ಯಕ್ಕೆ ಡ್ಯೂಟಿ ಇಲ್ಲದಿರುವ ಕಾರಣ ಬೇರೆ ವರಮಾನಗಳೂ ಇಲ್ಲ.ಕಚೇರಿ ಬಾಡಿಗೆ, ನಿರ್ವಹಣೆ ವೆಚ್ಚದ ಜತೆಗೆ ಚಂದ್ರಶೇಖರ್‌ ಅವರ ಓಡಾಟ ಹಾಗೂ ಜೀವನ ನಿರ್ವಹಣೆಗೆ ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ತಿಂಗಳಿಗಿಷ್ಟು ಎಂದು ಹಣ ಕೊಡುವ ಮಾತುಗಳಾಗಿದ್ದವಂತೆ. ಒಂದಷ್ಟು ತಿಂಗಳು ಹಾಗೆಯೇ ನಡೆಯಿತು..ಆದರೆ ಇತ್ತೀಚೆಗೆ ಒಂದಷ್ಟು ತಿಂಗಳಿಂದ ಬಹುತೇಕ ಪದಾಧಿಕಾರಿಗಳು ಚಂದ್ರಶೇಖರ್‌ ಸಹವಾಸವನ್ನೆ ಬಿಟ್ಟುಬಿಟ್ಟಿದ್ದಾರಂತೆ. ಚಂದ್ರಶೇಖರ್‌ ಅವರನ್ನು ವಿಚಾರಿಸಿಕೊಳ್ಳುವವರೇ ಇಲ್ಲವಾಗಿದೆಯಂತೆ. ಕೂಟದ ಸದಸ್ಯರು ಹಾಗೂ ಸಾರಿಗೆ ಸಿಬ್ಬಂದಿಯ ದೇಣಿಗೆಯನ್ನೇ ನಂಬಿಕೊಂಡಿದ್ದ ಚಂದ್ರಶೇಖರ್‌ ಪರಿಸ್ಥಿತಿ ತೀವ್ರ ಶೋಚನೀಯವಾಗಿದೆಯಂತೆ. ಕಚೇರಿಯ ಬಾಡಿಗೆ ಕಟ್ಟಲಿಕ್ಕೂ ಹಣ ಇಲ್ಲದಂತಾಗಿದೆ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ.

ALSO READ :  ಕೆಂಗೇರಿ ಕೆರೆಪಾಲಾಗಿದ್ದ ಅಣ್ಣ-ತಂಗಿ ಶವ ಪತ್ತೆ: ಪೌರಕಾರ್ಮಿಕ ತಾಯಿಯ ಆಕ್ರಂದನ!

ತನ್ನ ನಾಮಬಲದಿಂದ ಗೆದ್ದು ಬಂದವರಿಗೂ‌ ಬೇಡವಾದ ಚಂದ್ರಶೇಖರ್:‌ಸಾರಿಗೆ ಸಂಘಟನೆಗಳ ವಿಷಯದಲ್ಲಿ ದಶಕದಿಂದಲೂ ಪಾರಮ್ಯ ಸ್ಥಾಪಿಸಿದ್ದ ಎಐಟಿಯುಸಿಯಂಥ ಸಂಘಟನೆಯ  ಪ್ರತಿನಿಧಿಗಳನ್ನು ಸೊಸೈಟಿ ಎಲೆಕ್ಷನ್‌ ನಲ್ಲಿ ಮಣಿಸಿದ ಹೆಗ್ಗಳಿಕೆ ಚಂದ್ರಶೇಖರ್‌ ಸಾರಥ್ಯದ ಕೂಟಕ್ಕೆ ಸಲ್ಲುತ್ತದೆ.ಆದರೆ ದುರಂತ ಏನ್‌ ಗೊತ್ತಾ,ಯಾವ ಚಂದ್ರಶೇಖರ್‌ ಹವಾ-ನಾಮಬಲದಿಂದ ಗೆದ್ದು ಬಂದಿದ್ರೋ ಅವರಲ್ಲಿ ಬಹುತೇಕ ಇವತ್ತು ಚಂದ್ರುವನ್ನೇ ಮರೆತಿದ್ದಾರಂತೆ.ಒಂದಿಬ್ಬರನ್ನು ಬಿಟ್ಟರೆ ಬಹುತೇಕರು ಆತನ ಜತೆಗಿಲ್ಲ.ಆತನ ನಾಮಬಲವಿಲ್ಲದಿದ್ದರೆ ಅವರ್ಯಾರು ಗೆಲ್ಲುವ  ಮಟ್ಟದಲ್ಲೂ ಇರಲಿಲ್ಲ.ಆದರೆ ಅವರ ಪರವಾಗಿ ಕ್ಯಾನ್ವಾಸ್‌ ಮಾಡಿ ಗೆಲ್ಲಿಸಿದ ನಾಯಕನೇ ಇವತ್ತು ಬೇಡವಾಗಿ ಹೋಗಿದ್ದಾನೆ.ಹಣಕ್ಕಾಗೇ  ಫೋನ್‌ ಮಾಡ್ತಾನೆ ಎನ್ನುವ ಕಾರಣದಿಂದ ಬಹುತೇಕರು ಚಂದ್ರಶೇಖರ್‌ ಅವರ ಕರೆಯನ್ನೇ ರಿಸೀವ್‌ ಮಾಡ್ತಿಲ್ಲ ಎನ್ನುವ ಮಾತಿದೆ.ಸೊಸೈಟಿ ಎಲೆಕ್ಷನ್‌ ನಲ್ಲಿ ಜಯಭೇರಿ ಬಾರಿಸಿದ ಪದಾಧಿಕಾರಿಗಳು ಈ ರೀತಿ ನಾಯಕನನ್ನು ಮೂಲೆಗುಂಪು ಮಾಡಿದ್ದು ನಿಜಕ್ಕೂ ಸರಿನಾ..? ಇದು ಮಾನವೀಯತೆನಾ..? ಅವರೇ ಹೇಳಬೇಕು.

ಸ್ವಯಂಕೃತಪರಾಧಕ್ಕೆ ಬೆಲೆ ತೆತ್ತರಾ ಚಂದ್ರಶೇಖರ್‌..!?: ಚಂದ್ರಶೇಖರ್‌ ಅವರ ‍ಸಧ್ಯದ ಸ್ಥಿತಿಯನ್ನು ಹೀಗೆ ವಿಶ್ಲೇಷಿಸಬಹುದೇನೋ..? ನಾಯಕ ಎನಿಸಿಕೊಂಡಾತನಿಗೆ ರಾತ್ರೋ ರಾತ್ರಿ ಬಂದ ಹೆಸರು-ಪ್ರತಿಷ್ಟೆ-ಗೌರವವನ್ನು ಜತನದಿಂದ ಕಾಪಾಡಿಕೊಂಡು ಹೋಗುವ ಸಂಯಮ-ವಿಧೇಯತೆ-ಬದ್ಧತೆ ಬೇಕಾಗುತ್ತದೆ. ವಿಶ್ವದ ಬಹುತೇಕ ನಾಯಕರು ಹೇಳಹೆಸರಿಲ್ಲದಂತೆ ಇತಿಹಾಸದ ಗರ್ಭ ಸೇರಲು ಕಾರಣವಾಗಿದ್ದೇ ಈ ಗುಣಗಳ ಕೊರತೆಯಿಂದ.ಸಾರಿಗೆ ಸಂಘಟನೆಗಳ ಇತಿಹಾಸದಲ್ಲಿ ದಿಢೀರ್‌ ಹೆಸರು ಮಾಡಿದ ಚಂದ್ರಶೇಖರ್‌ ಗೆ ಅದನ್ನು ಹೇಗೆ ನಿಭಾಯಿಸಿಕೊಂಡು ಹೋಗ ಬೇಕೆನ್ನುವ ಅರಿವೇ ಇರಲಿಲ್ಲ ಎನ್ನಿಸುತ್ತೆ.ತಾನು ಹೇಳಿದ್ರೆ ಏನ್‌ ಬೇಕಾದ್ರೂ ಮಾಡುತ್ತಾರೆ ಎನ್ನುವ ಉಡಾಫೆಯ ಮನಸ್ಥಿತಿ ಬಂದ್‌ ಬಿಡ್ತು.ಸಾರಿಗೆ ಸಿಬ್ಬಂದಿಯ ಸಮಸ್ಯೆಗೆ ಸ್ಪಂದಿಸದಂಥ ಉಪೇಕ್ಷೆ ಮನೋಭಾವ ಹೆಚ್ಚುತ್ತಾ ಹೋಯ್ತೆನ್ನಿಸುತ್ತೆ.ಸಾರಿಗೆ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಲ್ಲಿ ಎಡವಿದರು ಎನ್ನಿಸುತ್ತೆ.

ಅದರಲ್ಲೂಇತ್ತೀಚೆಗೆ ಸಾರಿಗೆ ಮುಷ್ಕರದ ವಿಚಾರದಲ್ಲಿ ಸಾರಿಗೆ ಸಿಬ್ಬಂದಿಯ ಹಿತ ಕಾಯುವುದರ ಬದಲು,ಸರ್ಕಾರ ಮತ್ತು ಆಡಳಿತ ಮಂಡಳಿ ಪರವಾಗಿ ಬ್ಯಾಟಿಂಗ್‌ ಮಾಡಿದರೆನ್ನುವ ಸಂದೇಶವೊಂದು ರವಾನೆಯಾಗಿಬಿಡ್ತು. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಸಾರಿಗೆ ಮುಷ್ಕರದ ಬಗ್ಗೆ ಚರ್ಚೆಗಳಾಗುತ್ತಿದ್ದರೆ ಚಂದ್ರಶೇಖರ್‌ ಮಾತ್ರ ತಟಸ್ಥರಾಗಿ ಉಳಿದಿದ್ದು ಅವರಿಗೆ ದೊಡ್ಡ ಮಟ್ಟದ ಹಿನ್ನಡೆ ಉಂಟುಮಾಡಿರುವುದಂತೂ ಸತ್ಯ..ಇದೆಲ್ಲದರ ಜತೆಗೆ ಅನೇಕ ವಿಚಾರ-ಸನ್ನಿವೇಶಗಳಲ್ಲಿ ನಾಯಕನಾಗಿ ಅವರು ನಡೆದುಕೊ‍ಳ್ಳಬೇಕಿದ್ದ ರೀತಿಗೆ ವಿರುದ್ಧವಾಗಿ ನಡೆದುಕೊಂಡರು,ನಾಯಕನೊಬ್ಬನಿಗೆ ಇರಬೇಕಾದ ಕ್ವಾಲಿಟಿಸ್‌ ಗಳನ್ನು ಕಳೆದುಕೊಳ್ಳುತ್ತಾ ಹೋದರು ಎನ್ನಿಸುತ್ತೆ.ಇದೆಲ್ಲದರ ಪರಿಣಾಮ ಎನ್ನುವಂತೆಯೇ ಅವರೊಂದಿಗಿದ್ದ ಬಹುದೊಡ್ಡ ಸಾರಿಗೆ ಸಮುದಾಯ ಅವರಿಂದ ದೂರವಾಗುತ್ತಾ ಹೋಯ್ತಾ ಗೊತ್ತಿಲ್ಲ..ಆದರೆ ಅಷ್ಟೊಂದು ದೊಡ್ಡ ಮಟ್ಟದ ಸಾರಿಗೆ ಸಮುದಾಯ ಕಾಲಕ್ರಮೇಣ ಚಂದ್ರಶೇಖರ್‌ ಅವರಿಂದ ದೂರವಾಗುತ್ತೆ ಎಂದರೆ ಅದು ಸುಮ್ಮನೆ ಆಗೊಲ್ಲ..ಚಂದ್ರಶೇಖರ್‌ ಅವರಿಂದಲೂ ತಪ್ಪುಗಳಾಗಿರುವ ಸಾಧ್ಯತೆಗಳಿದ್ದೇ ಇರುತ್ತದೆ.ಅದೆಲ್ಲದರ ಪರಿಣಾಮವೇ ಇವತ್ತಿನ ಚಂದ್ರುವಿನ ಪರಿಸ್ಥಿತಿ.

ಸಾರಿಗೆ ಸಂಘಟನೆ-ಹೋರಾಟಗಳ ವಿಚಾರದಲ್ಲಿ ದೊಡ್ಡಮಟ್ಟದ ನಾಯಕನಾಗಿ ಬೆಳೆಯುವ ಎಲ್ಲಾ ಅರ್ಹತೆ-ಸಾಮರ್ಥ್ಯ-ಅವಕಾಶಗಳಿದ್ದಾಗ್ಯೂ ಎಲ್ಲೋ ಒಂದೆಡೆ ಅಹಂಕಾರ-ಅತಿಯಾದ ಆತ್ಮವಿಶ್ವಾಸಗಳೇ ಚಂದ್ರಶೇಖರ್‌ ಗೆ ಮುಳುವಾಯ್ತು ಎನ್ನಿಸುತ್ತೆ.ಆದರೆ ಕಾಲ ಇನ್ನೂ ಮಿಂಚಿಲ್ಲ, ಆದಂತ ಎಲ್ಲಾ ಪ್ರಮಾದಗಳನ್ನು ಸರಿಪಡಿಸಿಕೊಂಡು ಚೆದುರಿ ಹೋದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕ ನಾಯಕತ್ವದಲ್ಲಿ ಮುಂದುವರೆದರೆ ಸಾರಿಗೆ ಕೂಟಕ್ಕೂ ಭವಿಷ್ಯವಿದೆ. ಚಂದ್ರಶೇಖರ್‌ ಅಸ್ಥಿತ್ವಕ್ಕೂ ಗೌರವ-ಬೆಲೆ  ಸಿಗಬಹುದೇನೋ..?


Political News

Scroll to Top