ಹಾಳೆದ್ದು ಹೋಗಿರುವ ಪಿಯು ಬೋರ್ಡ್ ಗೆ ಕಾಯಕಲ್ಪ-ಲಂಗುಲಗಾಮಿಲ್ಲದಂತಾಗಿರುವ ಇಲಾಖೆಯ ಕೆಲವು ಭ್ರಷ್ಟರ ಅಂದಾದರ್ಬಾರ್-ಅಟ್ಟಹಾಸಕ್ಕೆ ಕಡಿವಾಣ ಹಾಕುವರಾ..?


ಪಿಯು ಬೋರ್ಡ್ ಗೆ ನೂತನ ನಿರ್ದೇಶಕರಾಗಿ ಕಿರಿಯ ಐಎಎಸ್ ಅಧಿಕಾರಿ ಭರತ್ ನಿಯೋಜನೆಗೊಂಡಿದ್ದಾರೆ. ಅನೇಕ ಇಲಾಖೆಗಳಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕೆಲಸ ಮಾಡಿರುವ ಯುವ ಹಾಗೂ ಉತ್ಸಾಹಿ ಐಎಎಸ್ ಅಧಿಕಾರಿ ಭರತ್ ಅವರನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಹೃತ್ಪೂರ್ವಕವಾಗಿ ಅಭಿನಂದಿಸಿ,ಸ್ವಾಗತಿಸುವುದಲ್ಲದೇ ಹೇಳೋರ್..ಕೇಳೋರ್ ಇಲ್ಲದೆ ತಬ್ಬಲಿಭಾವದಿಂದ ಬಳಲುತ್ತಿರುವ ಇಲಾಖೆಯ ಬಗ್ಗೆ ಕಾಳಜಿ ವಹಿಸಿ ಅಗಾಧ ಪ್ರಮಾಣದ ಸುಧಾರಣೆಗೆ ಶ್ರಮಿಸುವಂತೆ ಮನವಿ ಮಾಡುತ್ತದೆ.
ಸರ್ಕಾರದಿಂದ ಹೊರಬಿದ್ದಿರುವ ವರ್ಗಾವಣೆ ಆದೇಶದನ್ವಯ ಗದಗ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವ 2017ನೇ ಸಾಲಿನ ಐಎಎಸ್ ಅಧಿಕಾರಿ ಭರತ್ ಎಸ್ ಅವರನ್ನು ತಕ್ಷಣಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್ ಗೆ ನಿರ್ದೇಶಕರಾಗಿ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ. ನಾಳೆ ಅಂದರೆ ಸೋಮವಾರ(24-08-2025) ರಂದು ಭರತ್ ಅವರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಇದೆ.
ಪಿಯು ಬೋರ್ಡ್ ಎನ್ನುವುದು ಹೇಳೋರು ಕೇಳೊರು ಇಲ್ಲದೆ ಹಾಳೆದ್ದು ಹೋಗಿದೆ ಎನ್ನುವುದಕ್ಕೆ ಕಾರಣವಿದೆ. ಮಲ್ಲೇಶ್ವರಂ 18ನೇ ಕ್ರಾಸ್ ನಲ್ಲಿರುವ ಪಿಯು ಬೋರ್ಡ್ ಗೆ ಈ ಹಿಂದೆ ನಿರ್ದೇಶಕರಾಗಿದ್ದವರು ಆ ಒಂದು ಅವ್ಯವಸ್ಥೆಯನ್ನು ನಿರ್ಮಿಸಿ ಹೋಗಿದ್ದಾರೆನ್ನುವ ಆಪಾದನೆ ಅದೇ ಬಿಲ್ಡಿಂಗ್ ನಲ್ಲಿ ಕೆಲಸ ಮಾಡುತ್ತಿರುವ ಅನೇಕ ಸಿಬ್ಬಂದಿಯಿಂದಲೇ ಕೇಳಿಬಂದಿದೆ.ನಿರ್ದೇಶಕರಾಗಿ ದೀರ್ಘಾವಧಿಗೆ ಕೆಲಸ ಮಾಡಿದ್ದ ಸಿಂಧೂ ರೂಪೇಶ್ ಅದ್ಯಾವ ಒತ್ತಡಕ್ಕೆ ಒಳಗಾಗಿದ್ದರೋ ಗೊತ್ತಿಲ್ಲ.ಸದಾ ನಿರುತ್ಸಾಹಿಯಾಗಿಯೇ ಕಾಣುತ್ತಿದ್ದರು. ಕೆಲಸ ಮಾಡುವ ಶೈಲಿಯೂ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ ಎನ್ನುವ ಆಪಾದನೆ ಸರ್ಕಾರದ ಮಟ್ಟಕ್ಕೂ ತಲುಪಿತ್ತು.ಅಕ್ರಮ ಶಾಲಾ ಕಾಲೇಜುಗಳ ಬಗ್ಗೆ ದಂಡಿದಂಡಿಯಾಗಿ ದೂರುಗಳು ಬಂದರೂ ಅವುಗಳ ವಿರುದ್ಧ ಇಲಾಖೆ ನಿಯಾಮವಳಿಗಳ ಅಡಿಯಲ್ಲೇ ಕ್ರಮ ಕೈಗೊಳ್ಳಲಿಲ್ಲ ಎನ್ನುವ ಮಾತು ಕೇಳಿಬಂದಿತ್ತು.ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಅವರನ್ನು ನಿಯೋಜಿಸಿದ್ದ ಸರ್ಕಾರಕ್ಕೇನೆ ಅವರ ಬಗ್ಗೆ ಸದಾಭಿಪ್ರಾಯಗಳಿಲ್ಲದ ಕಾರಣ ಅವರನ್ನು ಎತ್ತಂಗಡಿ ಮಾಡಿ ಅವರ ಸ್ಥಾನಕ್ಕೆ ಉತ್ಸಾಹಿ ಐಎಎಸ್ ಭರತ್ ಅವರನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ.

ಸಿಂಧೂ ರೂಪೇಶ್ ಅವರು ಆರಂಭದಲ್ಲಿ ಉತ್ತಮ ಕೆಲಸ ಮಾಡಿ ನಿರೀಕ್ಷೆ ಸೃಷ್ಟಿಸಿದ್ದರು.ಅಕ್ರಮಗಳ ವಿರುದ್ದ ಸಮರ ಸಾರುವ ಕೆಲಸ ಮಾಡಿದ್ದರು.ಆದರೆ ಆ ಉತ್ಸಾಹ ಹಾಘೂ ಝೀಲ್ ನಂತರದ ದಿನಗಳಲ್ಲಿ ಕ್ಷೀಣಿಸುತ್ತಾ ಹೋಗಿದ್ದು ಅವರ ಬಗ್ಗೆ ಅಸಮಾಧಾನ-ಅಸಹನೆಗೆ ಕಾರಣವಾಗಿತ್ತು.ಬೆಂಗಳೂರಿನಲ್ಲಿ ಅಕ್ರಮ ಶಾಲಾ ಕಾಲೇಜುಗಳ ಬಗ್ಗೆ ವ್ಯಾಪಕ ದೂರುಗಳು ಸಾಕ್ಷ್ಯ ಸಮೇತ ಬಂದ್ರೂ ಅವುಗಳ ಬಗ್ಗೆ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸಲು ಆರಂಭಿಸಿಬಿಟ್ರು.ಹೋರಾಟಗಾರರು-ದೂರುದಾರರು ಕೊನೆಗೆ ಮಾದ್ಯಮಗಳಿಂದಲೂ ( ತಮಗೆ ಆಪ್ತರಾಗಿದ್ದ, ತಾವು ಹೇಳಿದ್ದನ್ನು ಮಾತ್ರ ಬರೆಯುತ್ತಿದ್ದ,ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಕೆಲವೇ ಕೆಲವು ಪತ್ರಕರ್ತರನ್ನು ಮಾತ್ರ ಕರೆದು ಆತ್ಮೀಯವಾಗಿ ಮಾತನಾಡಿಸು ತ್ತಿದ್ದರೆನ್ನುವ ಆಪಾದನೆ ಪತ್ರಕರ್ತರ ವಲಯದಲ್ಲಿದೆ) ಅಂತರ ಕಾಯ್ದುಕೊಳ್ಳಲಾರಂಭಿಸಿಬಿಟ್ರು. ಕಚೇರಿಯಲ್ಲಿದ್ದರೂ ಮೀಟಿಂಗ್ ನಲ್ಲಿ ಬ್ಯುಸಿ ಎಂದು ಕಥೆ ಕಟ್ಟಿ ತನ್ನ ಆಪ್ತಸಹಾಯಕರ ಮೂಲಕ ಸಾಗಾಕಿ ಕಳುಹಿಸುತ್ತಿದ್ದರೆನ್ನುವುದೆಲ್ಲಾ ಕೇಳಿಬಂದಿತ್ತು.

ಶೈಕ್ಷಣಿಕ ನಿಯಮಗಳನ್ನು ಧಿಕ್ಕರಿಸಿ ರಾಜಧಾನಿ ಬೆಂಗಳೂರೊಂದರಲ್ಲೇ ನಾಯಿ ಕೊಡೆಗಳಂತೆ ಶಾಲಾ ಕಾಲೇಜುಗಳು ಪ್ರತಿ ವರ್ಷ ನಿರ್ಮಾಣವಾಗುತ್ತಲೇ ಇವೆ.ಆದರೆ ಇಲಾಖೆ ಮಾತ್ರ ಕಣ್ಮುಚ್ಚಿಕೊಂಡು ಅವುಗಳಿಗೆ ಮಾನ್ಯತೆ ನೀಡುತ್ತಿದೆ.ಪ್ರತಿ ಶಾಲಾ-ಕಾಲೇಜುಗಳ ಜತೆ ಇಷ್ಟು ಎಂದು ಮಂತ್ಲಿ-ಇಯರ್ಲಿ ಅಥವಾ ಇನ್ಸ್ ಪೆಕ್ಷನ್ ಗೆ ಬಂದಾಗ ಹಣ ಫಿಕ್ಸ್ ಮಾಡಿಕೊಂಡು ಅಕ್ರಮಕ್ಕೆ ಸಾಥ್ ಕೊಡುತ್ತಿರುವ ಕೆಲವು ಭ್ರಷ್ಟರು-ಅಪ್ರಾಮಾಣಿಕರು-ನಾಲಾಯಕ್ ಗಳು ಇವತ್ತಿಗೂ ಇಲಾಖೆಯಲ್ಲಿ ಇದ್ದಾರೆ.ಅವರ ಬಗ್ಗೆ ವ್ಯಾಪಕ ದೂರುಗಳು ಬಂದ್ರೂ ಮೇಡಮ್ ಕ್ರಮ ಜರುಗಿಸಿದ್ದೇ ಕಡಿಮೆ.ಅನೇಕ ವರ್ಷಗಳಿಂದ ಗೂಟಾ ಹೊಡೆದು ಕೊಂಡು ಇಲಾಖೆಯಲ್ಲೇ ಕೂತಿರುವ ಕೆಲವು ಹೊಗಳುಭಟ್ಟರನ್ನು ತಮ್ಮ ಸುತ್ತಮುತ್ತ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು.ಅವರು ಇವರನ್ನು ಯಾಮಾರಿಸಿದ್ರೂ..ದಾರಿ ತಪ್ಪಿಸುತ್ತಿದ್ದಾರೆಂದು ಗೊತ್ತಿದ್ರೂ ಮೌನಕ್ಕೆ ಶರಣಾಗಿದ್ರೆನ್ನುವ ಮಾತಿದೆ.
ಅಧಿಕಾರ ವಹಿಸಿಕೊಳ್ಳುವಾಗ ಇದ್ದ ಉತ್ಸಾಹ ದಿಢೀರ್ ಅವರಲ್ಲಿ ಕಡಿಮೆಯಾಗಿದ್ದು ಯಾಕೆ..? ಅದಕ್ಕೆ ಕಾರಣವೇನು ಎನ್ನುವುದು ಇವತ್ತಿಗೂ ನಿಗೂಢವಾಗಿದೆ. ಅಕ್ರಮದ ವಿರುದ್ದ ಕ್ರಮ ಕೈಗೊಳ್ಳದಂತೆ ದೊಡ್ಡವರಿಂದ, ಪ್ರತಿಷ್ಟಿತರಿಂದ, ರಾಜಕಾರಣಿಗಳಿಂದ ಲೇನಾದ್ರೂ ಮೇಡಮ್ ಸಿಂಧೂ ಅವರ ಮೇಲೆ ಒತ್ತಡವಿತ್ತಾ.? ಗೊತ್ತಿಲ್ಲ.ಆದ್ರೆ ಒಂದಂತೂ ಸತ್ಯ, ಯಾವುದೇ ಕ್ರಮ ಕೈಗೊಳ್ಳದಂತೆ ತಮ್ಮ ಮೇಲೆ ಪ್ರೆಷರ್ ಇರುವಂತೆ ಅವರು ತೋರುತ್ತಿದ್ದರಂತೆ.ಏನೂ ಕೆಲಸ ಮಾಡದಂತೆ ತಮ್ಮ ಕೈಗಳನ್ನು ಕಟ್ಟಾಕಿದ್ದಾರೆನ್ನುವ ನೋವು-ಅಸಹಾಯಕತೆಯನ್ನು ಆತ್ನೀಯರೆನಿಸಿಕೊಂಡವರ ಜತೆ ತೋಡಿಕೊಂಡಿದ್ದರೆನ್ನುವ ಮಾತಿದೆ.ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಮಾತ್ರ ಗೊತ್ತಿಲ್ಲ.( ಶಾಲಾ ಕಾಲೇಜುಗಳು ಅದರಲ್ಲೂ ಅಕ್ರಮ ಶಿಕ್ಷಣ ಸಂಸ್ಥೆಗಳು ಬಹುತೇಕ ಪ್ರತಿಷ್ಟಿತರು-ಬಲಾಢ್ಯರು ಹಾಗೂ ರಾಜಕಾರಣಿಗಳ ಮಾಲೀಕತ್ವದಲ್ಲಿರುವುದರಿಂದ ಅವುಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾದ್ರೆ ತಮ್ಮ ಮನಿ-ಮಸಲ್ ಪವರ್ ಬಳಸ್ತಾರೆನ್ನುವುದು ಜಾಗತಿಕ ಸತ್ಯ..ಅದೇ ಅಸ್ತ್ರ ಇವರ ಮೇಲೂ ಪ್ರಯೋಗವಾಗಿತ್ತಾ..? ಗೊತ್ತಿಲ್ಲ).

ಬೆಂಗಳೂರಿನಲ್ಲಷ್ಟೇ ಅಲ್ಲ,ರಾಜ್ಯಾದ್ಯಂತ ಇರುವ ಅಕ್ರಮ ಶಾಲಾ-ಕಾಲೇಜುಗಳ ವಿರುದ್ಧ ಹೋರಾಟ ಮಾಡುತ್ತಿರುವ ಶೈಕ್ಷಣಿಕ ಸ್ವಯಂಸೇವಾ ಸಂಸ್ಥೆ ಪಾಠಶಾಲೆಯ ಸಂಚಾಲಕ ಗಂಗಾಧರ್ ಅವರೇ ಆಪಾದಿಸುವಂತೆ ಮೇಡಮ್ ಸಿಂಧೂ ಅವರಿಗೆ ಹತ್ತಿರತ್ತಿರ 50ಕ್ಕೂ ಹೆಚ್ಚು ಶಾಲಾ-ಕಾಲೇಜುಗಳ ಅಕ್ರಮದ ಬಗ್ಗೆ ದೂರನ್ನು ಸಾಕ್ಷ್ಯ ಸಮೇತ ನೀಡಿದ್ದೆ.ಮಾಧ್ಯಮಗಳ ಜತೆ ಭೇಟಿ ಮಾಡಲು ಹೋದಾಗಲಷ್ಟೇ ತುಂಬಾ ಆತ್ಮೀಯವಾಗಿ ಮಾತನಾಡಿ,ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ರು.ಆದ್ರೆ ನಂತರ ಚೇಂಬರ್ ಗೆ ಹೋದಾಗಲೆಲ್ಲಾ ದೊರೆಯುತ್ತಿದ್ದ ಉತ್ತರ.. ಇಲ್ಲ..ನಾಳೆ ಬನ್ನಿ…ಮೀಟಿಂಗ್ನಲ್ಲಿ ಬ್ಯುಸಿ.. ಸಿಂಧೂ ಅವರ ಬಗ್ಗೆ ಇದ್ದ ನಂಬಿಕೆಯೇ ನಮಗೆ ಸತ್ತು ಹೋಗ್ಬಿಡ್ತು.ಅವರ ಬಗ್ಗೆನೇ ದೂರು ಕೊಟ್ಟಿದ್ವು. ಅಕ್ರಮಗಳ ಬಗ್ಗೆ ಕ್ರಮ ಎಲ್ಲಿ ಮೇಡಮ್ ಎಂದ್ರೆ…ನೊಟೀಸ್ ಕೊಡಲಾಗಿದೆ..ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದರಂತೆ.
ಹತ್ತಾರು ಶಾಲೆ-ಕಾಲೇಜುಗಳು ಅಕ್ರಮ ಎಂದು ಟೂ ಮೆನ್ ಕಮಿಟಿ..ತ್ರಿಮೆನ್ ಕಮಿಟಿಗಳು ಅಂತಿಮ ವರದಿ ಕೊಟ್ಟರೂ ಆ ಕಡತಗಳಿಗೆ ಸಹಿ ಹಾಕದೆ ಕಾಲಹರಣ ಮಾಡುತ್ತಿದ್ದರಂತೆ.ಶೈಕ್ಷಣಿಕ ನಿಯಾಮವಳಿ ಗಳ ಪ್ರಕಾರವೇ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರೂ ಸಹಿ ಹಾಕಲೇ ಇಲ್ಲ..ಅವರು ಸಹಿ ಹಾಕದೆ ಹಾಗೆಯೇ ಪೆಂಡಿಂಗ್ ಇರುವ ಹತ್ತಾರು ಕಡತಗಳು ಟೇಬಲ್ ಮೇಲೆ ಹಾಗೆಯೇ ಇವೆ..ಕ್ರಮ ಕೈಗೊಳ್ಳಲು ಎಲ್ಲಾ ಸಾಕ್ಷ್ಯಗಳಿದ್ದಾಗ್ಯೂ ಅವನ್ನು ಪೆಂಡಿಂಗ್ ಇರಿಸಲಾಗುತ್ತೆ ಎಂದ್ರೆ ಅದರ ಅರ್ಥವೇನು..? ಇದಕ್ಕೆ ಮೇಡಮ್ ಅವರೇ ರಿಯಾಕ್ಟ್ ಮಾಡಬೇಕು.ಕ್ಲಾರಿಫಿಕೇಷನ್ ಕೊಡಬೇಕು ಎನ್ನುತ್ತಾರೆ ಗಂಗಾಧರ್.

ನೂತನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಭರತ್ ಅವರ ಮುಂದೆ ಹಾಳೆದ್ದು ಹೋಗಿರುವ ಇಲಾಖೆ ವ್ಯವಸ್ಥೆಯನ್ನೂ ಸಮಗ್ರವಾಗಿ ದುರಸ್ತಿ ಮಾಡುವ ದೊಡ್ಡ ಹೊಣೆಗಾರಿಕೆಯಿದೆ. ಹಿಂದಿನ ನಿರ್ದೇಶಕರ ನಿರ್ಲಿಪ್ತತೆ-ನಿರ್ಲಕ್ಷ್ಯವನ್ನೇ ಬಂಡವಾಳ ಮಾಡಿಕೊಂಡು ಕೊಬ್ಬಿ ಹೋಗಿರುವ ಅಧಿಕಾರಿ ಸಿಬ್ಬಂದಿಯ ಆಟಾಟೋಪಕ್ಕೆ ಬ್ರೇಕ್ ಹಾಕಬೇಕಿದೆ.ದೊಡ್ಡ ದೊಡ್ಡವರ ಹೆಸರನ್ನೇ ಬಂಡವಾಳ ಮಾಡಿಕೊಂಡು ಅಂದಾದರ್ಬಾರ್ ನಡೆಸುತ್ತಿರುವ ಕೆಲವು ಭ್ರಷ್ಟ ಅಧಿಕಾರಿ ಸಿಬ್ಬಂದಿ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಬಿಇಓ, ಡಿಡಿಪಿಐ ಹಾಗೂ ಡಿಡಿಪಿಯು ಕಚೇರಿಗಳಲ್ಲಿ ನಡೆಯುತ್ತಿದೆ ಎನ್ನಲಾದ ವ್ಯಾಪಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ.ಅಲ್ಲಿನ ಕಚೇರಿಗಳಲ್ಲಿ ದೊಡ್ಡವರ ಹೆಸರನ್ನೇ ಶ್ರೀರಕ್ಷೆ ಮಾಡಿಕೊಂಡು ಕೆಲವರು ನಡೆಸುತ್ತಿದ್ದಾರೆ ಎನ್ನಲಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ.
ಸಂಜೆಯಾಗುತ್ತಿದ್ದಂತೆ ಅಕ್ರಮಗಳ ಅಡ್ಡೆಯಾಗುತ್ತಿರುವ ಕಚೇರಿಗಳ ಮೇಲೆ ನಿಗಾ ಇಡಬೇಕು. ಎಲ್ಲಾ ಡಿಡಿಪಿಐ,ಡಿಡಿಪಿಯು ಹಾಗೂ ಬಿಇಓ ಕಚೇರಿಗಳಿಗೆ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು. ಇವರುಗಳ ದಿನವಹಿ ಚಲನವಲನದ ಮೇಲೆ ನಿಗಾ ಇಡಬೇಕು( ಕಚೇರಿ ಸಮಯಗಳಲ್ಲಿ ವಿಸಿಟಿಂಗ್ ಎನ್ನುವ ನೆವ ಹೇಳಿಕೊಂಡು ಕೆಲವರು ಇಲಾಖೆಯ ವಾಹನವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ನಡೆಸುತ್ತಿದ್ದಾರೆನ್ನುವ ಆಪಾದನೆ ಕೂಡ ಇದೆ.)..ಹೀಗೆ ನೂತನ ನಿರ್ದೇಶಕರು ಮಾಡಬೇಕಿರುವ ಸಾಕಷ್ಟು ಕೆಲಸಗಳಿವೆ.ಆದರೆ ಅದನ್ನು ನಡೆಸುವುದು ಕೂಡ ಅವರು ಅಂದುಕೊಂಡಷ್ಟು ಸುಲಭ ಹಾಗೂ ಅನಾಯಾಸವಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ..ಆದರೆ ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಅದನ್ನು ಅವರು ಮಾಡಲಿ ಎನ್ನುವುದೇ ಎಲ್ಲರ ಮನವಿ.