ಅಲೆನ್ ಕೆರಿಯರ್ ಇನ್ಸಿಟ್ಯೂಟ್ ನ ಬ್ರಹ್ಮಾಂಡ ಶೈಕ್ಷಣಿಕ ಅಕ್ರಮ ಬಯಲು- ಎಲ್ಲಾ ಸೆಂಟರ್ಸ್ ಮುಚ್ಚುವಂತೆ ಶಿಕ್ಷಣ ಇಲಾಖೆಯಿಂದ ಖಡಕ್ ಆದೇಶ- ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಸರ್ಕಾರದ ಮಟ್ಟದಲ್ಲಿ ತೀವ್ರ ಲಾಭಿ..!..
ಎಲೆನ್ ಕೆರಿಯರ್ ಇನ್ಸಿಟ್ಯೂಟ್ …

ಈ ಹೆಸರು ಕೇಳದಿರೋರೇ ಕಡಿಮೆ ಬಿಡಿ..ನಿಮ್ಮ ಮಕ್ಕಳನ್ನು ಡಾಕ್ಟರ್ಸ್.ಎಂಜಿನಿಯರ್ಸ್ ಮಾಡಿಸುತ್ತೇವೆ ಎಂದು ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹೀರಾತು ಕೊಟ್ಟು ಪೋಷಕರು-ವಿದ್ಯಾರ್ಥಿಗಳಲ್ಲಿ ಸಾಮೂಹಿಕ ಸನ್ನಿ ಸೃಷ್ಟಿಸಿದ ಸಂಸ್ಥೆ.ಮಕ್ಕಳ ಭವಿಷ್ಯದ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಬಿತ್ತಿ, ಪ್ರತಿ ವಿದ್ಯಾರ್ಥಿಯಿಂದಲೂ ಲಕ್ಷಾಂತರ ರೂ ಪೀಕಿ ತಮ್ಮದೇ ಸಾವಿರಾರು ಕೋಟಿ ಸಾಮ್ರಾಜ್ಯ ಸೃಷ್ಟಿಸಿದ ಗುಜರಾತಿನ ಕೆಲವು ಖತರ್ನಾಕ್ ಮಾರ್ವಾಡಿ ಬಂಡವಾಳಶಾಹಿಗಳ ಅಬೇಧ್ಯ ಕೋಟೆ ಇದು.ವಿದ್ಯಾರ್ಥಿಗಳನ್ನೇ ನೆಚ್ಚಿಕೊಂಡಿದ್ದ ನೂರಾರು ಕಾಲೇಜುಗಳ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆದು ಆ ಕಾಲೇಜುಗಳೆಲ್ಲಾ ವಿದ್ಯಾರ್ಥಿಗಳಿಲ್ಲದೆ ಸಂಕಷ್ಟಕ್ಕೆ ದೂಡಿರುವ ಆಪಾದನೆ ಕೂಡ ಎಲೆನ್ ಮೇಲಿದೆ.ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಶಿಕ್ಷಣದ ಹೆಸರಲ್ಲಿ ಲೂಟಿ ಮಾಡುತ್ತಿರುವ ಎಲೆನ್ ಗೆ ಶಾಶ್ವತವಾಗಿ ಕಡಿವಾಣ ಹಾಕುವ ಕಠಿಣ ಹಾಗೂ ಸ್ವಾಗತಾರ್ಹ ನಿರ್ದಾರ ಕೈಗೊಂಡಿದೆ ಶಿಕ್ಷಣ ಇಲಾಖೆ.ಅಲೆನ್ ನ ಶೈಕ್ಷಣಿಕ ಅಕ್ರಮವನ್ನು ಬಯಲಿಗೆಳೆದ ಪಾಠಶಾಲೆ ಸ್ವಯಂಸೇವಾ ಸಂಸ್ಥೆ ದೂರಿನ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಎಲ್ಲಾ ಎಲೆನ್ ಟ್ಯೂಷನ್ ಸೆಂಟರ್ಸ್ ಗಳನ್ನು ಕ್ಲೋಸ್ ಮಾಡಬೇಕೆಂದು ಆದೇಶ ಹೊರಬಿದ್ದಿದೆ.ಅದರ ಎಕ್ಸ್ ಕ್ಲ್ಯೂಸಿವ್ ದಾಖಲೆಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.


ಈ ಸ್ಟೋರಿ ಬಗ್ಗೆ ಡೀಟೈಲ್ ಆಗಿ ಹೇಳೊಕ್ಕೆ ಮುನ್ನ ಎಲೆನ್ ಸೆಂಟರ್ ಗಳಿಗೆ ತಮ್ಮ ಮಕ್ಕಳನ್ನು ಶಾಲೆಗಳೊಂದಿಗೆ ಮಾತನಾಡಿಕೊಂಡು ಅಕ್ರಮವಾಗಿ ಸೇರಿಸಿರುವ ಪೋಷಕರಿಗೆ ಒಂದು ಎಚ್ಚರಿಕೆಯ ಕಿವಿ ಮಾತು. ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಭಾಗವಾಗಿ ಯಾವುದೇ ಕ್ಷಣದಲ್ಲಿಯೂ ಎಲೆನ್ ನ ಎಲ್ಲಾ ಸೆಂಟರ್ಸ್ ಗೂ ಬೀಗ ಬೀಳುವ ಸಾಧ್ಯತೆಗಳಿವೆ.ನೀವು ಅಲೆನ್ ನ್ನು ನಂಬಿಕೊಂಡು ಕಟ್ಟಿರುವ ಲಕ್ಷಾಂತರ ಫೀಸ್ ಗೂ ಉಂಡೆನಾಮ ಸಿಕ್ಕಬಹುದು..ಯಾರಿಗೆಲ್ಲಾ ಕೆಪಾಸಿಟಿ ಇದೆಯೋ ಅವರೆಲ್ಲಾ ಆದಷ್ಟು ಬೇಗ ಅಲೆನ್ ಮೇಲೆ ಒತ್ತಡ ಹೇರಿ ತಾವು ಪಾವತಿಸಿರುವ ಮೊತ್ತವನ್ನು ವಾಪಸ್ ವಸೂಲಿ ಮಾಡಿಕೊಳ್ಳುವುದು ಒಳ್ಳೆಯದೆನಿಸುತ್ತದೆ.ಏಕೆಂದರೆ ಇಲಾಖೆ ಹೊರಡಿಸಿರುವ ನೊಟೀಸ್ ನಲ್ಲಿ ಇರುವ ಕೆಲವು ಸಂಗತಿಗಳನ್ನು ಗಮನಿಸಿದಾಗ ಸದ್ಯದ ಪರಿಸ್ತಿತಿ ಹಾಗಿದೆ ಎನ್ನಿಸುತ್ತಿದೆ.

ಅಲೆನ್..ತಮ್ಮ ಮಕ್ಕಳನ್ನು ಎಂಜಿನಿಯರ್ಸ್..ಡಾಕ್ಟರ್ಸ್ ಮಾಡಬೇಕೆನ್ನುವ ಹಿರಿದಾಸೆ ಇಟ್ಟುಕೊಂಡವರಿಗೆ ಈ ಒಂದು ಹೆಸರು ಗೊತ್ತಿಲ್ದೆ ಇರಲು ಸಾಧ್ಯವೇ ಇಲ್ಲ. ನಿಮ್ಮ ಮಕ್ಕಳು ಡಾಕ್ಟರ್ಸ್-ಎಂಜಿನಿಯರ್ಸ್ ಆಗಬೇಕೆ..ಚಿಂತೆ ಬಿಡಿ..ನಾವಿದ್ದೇವೆ..ಅದು ನಮ್ಮ ಹೊಣೆ ಎನ್ನುವ ಬಿಲ್ಡಪ್..ಶೋ ಅಪ್ ಕೊಟ್ಟಿಕೊಂಡು ಪತ್ರಿಕೆಗಳಲ್ಲಿ ಪುಟಗಟ್ಟಲೇ-ಟಿವಿಗಳಲ್ಲಿ ನಿಮಿಷಗಟ್ಟಲೇ ಅಡ್ವರ್ಟೈಸ್ಮೆಂಟ್ ಕೊಡುವ ಅಲೆನ್ ಯಾರಿಗೆ ತಾನೇ ನೆನಪಿರೊಲ್ಲ ಹೇಳಿ…ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಬಣ್ಣಬಣ್ಣದ ಕನಸುಗಳನ್ನಿಟ್ಟು ಕೊಂಡ ಪೋಷಕರ ಪಾಲಿಗೆ ,ಅಲೆನ್ ತಮ್ಮ ದುಡಿಮೆಯ ಲಕ್ಷಾಂತರ ಹಣವನ್ನು ರಕ್ತದಂತೆ ಹೀರುವ ಜಿಗಣಿಯಿದ್ದಂತೆ ಎನ್ನುವ ಮಾತಿದೆ.( ಅಲೆನ್ ಗ್ರೂಪ್ ನಲ್ಲಿ ಪೋಷಕರು ನೀಡುವ ಫೀಡ್ ಬ್ಯಾಕ್ ಗಮನಿಸಿದವರಿಗೆ ಈ ಸತ್ಯ ಗೊತ್ತಿರುತ್ತೆ ಬಿಡಿ).ಇಂಥಾ ಅಲೆನ್ ಸಂಸ್ಥೆಗೆ ಬೀಗ ಬೀಳುವ ಸ್ತಿತಿ ನಿರ್ಮಾಣವಾಗಿದೆ.

ಇದನ್ನು ಕೇಳಿದ ಪೋಷಕರಿಗೆ ಗಾಬರಿ ಜತೆಗೆ ಎದೆ ಒಡೆದ ಅನುಭವವಾದರೂ ಅಚ್ಚರಿಯಿಲ್ಲ.ಮಕ್ಕಳನ್ನು ಅಲೆನ್ ಗೆ ದಾಖಲಿಸಿ ಲಕ್ಷಾಂತರ ಕಳೆದುಕೊಂಡವರಿಗೆ ಈ ರೀತಿ ಆಗೋದು ಸಹಜ ಬಿಡಿ.ಆದರೆ ಈ ಬಾರಿಯ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಯಾವ ಪೋಷಕರಾದ್ರೂ ಲಕ್ಷಗಟ್ಟಲೇ ಹಣವನ್ನು ಈ ರಾಜಸ್ಥಾನಿ ಮಾರ್ವಾಡಿಗಳ ಪಾದಕ್ಕೆ ಸುರಿದಿದ್ದರೆ ದಯವಿಟ್ಟು ನಿಮ್ಮ ಹಣವನ್ನು ವಾಪಸ್ ಮಾಡ್ಬಿಡಿ.. ಏಕೆಂದರೆ ಅಲೆನ್ ಸಂಸ್ಥೆ ಶೈಕ್ಷಣಿಕ ನಿಯಾಮವಳಿಗಳನ್ನು ಉಲ್ಲಂಘಿಸಿದ ಆಪಾದನೆ ಎದುರಿಸುತ್ತಿದೆ. ಅಷ್ಟೇ ಅಲ್ಲ ಈ ರೀತಿ ಉಲ್ಲಂಘನೆ ಮಾಡಿದ ಕಾರಣದಿಂದ ಎಲ್ಲಾ ಸೆಂಟರ್ಸ್ ಗಳನ್ನು ಕೂಡಲೇ ಮುಚ್ಚಬೇಕೆನ್ನುವ ಆದೇಶ ಶಿಕ್ಷಣ ಇಲಾಖೆಯಿಂದ ಹೊರಬಿದ್ದಿದೆ. ಈ ಆದೇಶ ಪ್ರತಿ ಎಕ್ಸ್ ಕ್ಲ್ಯೂಸಿವ್ ಆಗಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.

ಹೌದು..ಅಲೆನ್ ಕೆರಿಯರ್ ಇನ್ಸಿಟ್ಯೂಟ್ ನ ಶೈಕ್ಷಣಿಕ ಅಕ್ರಮ ಬಟಾಬಯಲಾಗಿದೆ.ಶೈಕ್ಷಣಿಕ ನಿಯಮ ಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ.ಅನುಮತಿ ಪಡೆಯದೇನೇ ಟ್ಯೂಷನ್ ಸೆಂಟರ್ಸ್ ಗಳನ್ನು ನಾಯಿಕೊಡೆಗಳಂತೆ ರಾಜಧಾನಿ ಬೆಂಗಳೂರಿನಾದ್ಯಂತ ನಿರ್ಮಿಸಿರುವುದು ದೃಡಪಟ್ಟಿದೆ. ಅಕ್ರಮವಲ್ಲ ಎನ್ನುವುದನ್ನು ಸಾಬೀತುಪಡಿಸಿ, ದಾಖಲೆ ಸಲ್ಲಿಸೊಕ್ಕೆ ಕೊಟ್ಟ ಅವಕಾಶಗಳ ಹೊರತಾಗ್ಯೂ ಯಾವೊಂದು ದಾಖಲೆ ಸಲ್ಲಿಸಲು ವಿಫಲವಾಗಿರುವ ಹಿನ್ನಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ದಕ್ಷಿಣ ಜಿಲ್ಲೆ ಉಪನಿರ್ದೇಶಕರ ಕಚೇರಿಯು ಎಲ್ಲಾ ಅಲೆನ್ ಸೆಂಟರ್ಸ್ ಗಳನ್ನು ಮುಚ್ಚುವಂತೆ ಆದೇಶಿಸಿದೆ.ಆದರೆ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಅಲೆನ್ ಆಡಳಿತ ಮಾತ್ರ ಮರಳಿ ಯತ್ನವ ಮಾಡು ಎನ್ನುವಂತೆ ಸರ್ಕಾರದ ಮಟ್ಟದಲ್ಲಿ ದೊಡ್ಡ ಲಾಭಿ ಮಾಡುತ್ತಿದೆಯಂತೆ.

ಶೈಕ್ಷಣಿಕ ಕಾಳಜಿಯಲ್ಲಿ ಕೆಲಸ ಮಾಡುತ್ತಿರುವ ಪಾಠಶಾಲೆ ಶೈಕ್ಷಣಿಕ ಸೇವಾ ಸಂಸ್ಥೆ ಅಲೆನ್ ನ ಬಂಡವಾಳವನ್ನು ಬಯಲು ಮಾಡಿದೆ.ಅಲೆನ್ ನಡೆಸುತ್ತಿರುವ ಶೈಕ್ಷಣಿಕ ಅಕ್ರಮಗಳನ್ನು ಎಳೆ ಎಳೆಯಾಗಿ ಇಲಾಖೆ ಗಮನಕ್ಕೆ ತಂದು ಹೋರಾಟ ನಡೆಸಿತ್ತು.ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಭಾರೀ ಪ್ರಭಾವಿಯಾಗಿರುವ ಅಲೆನ್ ಆಡಳಿತ , ಸರ್ಕಾರ ಮತ್ತು ಇಲಾಖೆ ಮೇಲೆ ಬೀರಬಹುದಾದ ಪ್ರಭಾವ-ಶಿಫಾರಸ್ಸುಗಳಿಂದ ಪ್ರಕರಣ ಹಳ್ಳ ಹಿಡಿಯದಂತೆ ಫಾಲೋ ಅಪ್ ಮಾಡಿ ಅಂತಿಮವಾಗಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆಯುವಂತೆ ಮಾಡಿದೆ. ಅಲೆನ್ ನಂತ ದೈತ್ಯ ಸಂಸ್ಥೆಯನ್ನು ಎದುರಾಕಿಕೊಂಡು ಇಲಾಖೆ ಮಟ್ಟದಲ್ಲೂ ಸಮನ್ವಯತೆ ಸಾಧಿಸಿ ಅಲೆನ್ ಬುಡಕ್ಕೆ ಕೊಡಲಿ ಪೆಟ್ಟು ನೀಡಿದ ಪಾಠಶಾಲೆಯ ಶೈಕ್ಷಣಿಕ ಕಾಳಜಿ ನಿಜಕ್ಕೂ ಮೆಚ್ಚುವಂತದ್ದು. ಇದಕ್ಕಾಗಿ ಸಂಸ್ಥೆಗೆ ಹ್ಯಾಟ್ಸಾಫ್ ಹೇಳಲೇಬೇಕಿದೆ.

ಶಿಕ್ಷಣ ಇಲಾಖೆ ಪಾಠಶಾಲೆ ನೀಡಿದ್ದ ದೂರನ್ನು ಹಾಗೂ ಆ ಸಂಬಂಧ ಸಲ್ಲಿಕೆಯಾಗಿದ್ದ ಅನೇಕ ದೂರುಗಳ ಹಿನ್ನಲೆಯಲ್ಲಿ ಅಲೆನ್ ಆಡಳಿತಕ್ಕೆ ಕಾರಣ ಕೇಳಿ ನೊಟೀಸ್ ಸರ್ವ್ ಮಾಡಿತ್ತು.ಆದರೆ ಬೆಂಗಳೂರು ದಕ್ಷಿಣ ಜಿಲ್ಲೆಯ ಪಿಯು ಮಂಡಳಿಯ ಉಪನಿರ್ದೇಶಕ ಮನೋಜ ಕುಮಾರ್ ಕೊಳ್ಳ ತಮ್ಮ ಬಗ್ಗೆ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ಬಯಸಿ ಪತ್ರ ವ್ಯವಹಾರ ಮಾಡಿದ್ದರು.ಆದರೆ ಇದಕ್ಕೆ ಪ್ರತಿಬಾರಿಯೂ we are engaged in student counseling and admission process for the academic session-2025-26, we need to study the notice ಎನ್ನುವ ಹೇಳಿಕೆ ಕೊಡುವ ಮೂಲಕ ಕಾಲಹರಣ ಮಾಡಿದ್ದರಂತೆ. ಕುಂಟು ನೆಪವೊಡ್ಡಿ ಜವಾಬ್ದಾರಿಯಿಂದ ನುಣುಚಿಕೊಂಡಿತ್ತಂತೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಕ್ಕೆ ಮುಂದಾಗಿತ್ತು.
ದಾಖಲೆ ಸಲ್ಲಿಸಲು ಸಾಕಷ್ಟು ಕಾಲಾವಕಾಶದೊಂದಿಗೆ, ಸಾಲದಕ್ಕೆ ನೆನಪೋಲೆ ಕೂಡ ಕಳುಹಿಸಲಾಗಿತ್ತು. ಆದರೆ ತಮ್ಮಿಂದ ಯಾವುದೇ ಮಾಹಿತಿ ಬಂದಿರುವುದಿಲ್ಲ.ಈ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿಲಾಗಿ ಕರ್ನಾಟಕ ಟ್ಯುಟೋರಿಯಲ್ಸ್ ಸಂಸ್ಥೆಗಳು( ನೊಂದಮತ್ತು ನಿಯಂತ್ರಣ) ನಿಯಮಗಳು 2001 ಹಾಗೂ ಷರತ್ತುಗಳನ್ನು ಉಲ್ಲಂಘಿಸಿರುವುದು ಸ್ಪಷ್ಟ. ಹಾಗಾಗಿ ಮೇಲ್ಕಂಡ ನಿಯಮಗಳ ಅಡಿಯಲ್ಲಿ ನನಗೆ ಪ್ರದತ್ತವಾಗಿರುವ ಅಧಿಕಾರದ ಅಡಿಯಲ್ಲಿ ನಿಮ್ಮ ಟ್ಯುಟೋರಿಯಲ್ ನೊಂದಣಿ ಅರ್ಜಿಯನ್ನು ತಿರಸ್ಕರಿಸಲಾಗಿದೆ.ಈ ಕೂಡಲೇ ತಾವು ಟ್ಯುಟೋರಿಯಲ್ ಕೇಂದ್ರವನ್ನು ಮುಚ್ಚಬೇಕು.ತಾವು ಸಂದಾಯ ಮಾಡಿದ್ದ ನೊಂದಾವಣೆ ಶುಲ್ಕವನ್ನು ನಿಯಮಾನುಸಾರ ಹಿಂಪಾವತಿಸಲಾಗುವುದು ಎನ್ನುವ ಖಡಕ್ ನೊಟೀಸ್ ನ್ನು ಸರ್ವ್ ಮಾಡಿ ಇಲಾಖೆ ದಿಟ್ಟತೆ ಹಾಗೂ ಎದೆಗಾರಿಕೆ ಪ್ರದರ್ಶಿಸಿದೆ.

ಅಲೆನ್ ನಡೆಸುತ್ತಿರುವ ಶೈಕ್ಷಣಿಕ ಅಕ್ರಮಕ್ಕೆ ಇದರಿಂದ ಸಧ್ಯಕ್ಕೆ ಬ್ರೇಕ್ ಬಿದ್ದಿದೆ.ಆದರೆ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಅಲೆನ್ ಸರ್ಕಾರದ ಮಟ್ಟದಲ್ಲಿ ದೊಡ್ಡ ಲಾಭಿ ನಡೆಸೊಕ್ಕೆ ಶುರುವಿಟ್ಟುಕೊಂಡಿದೆಯಂತೆ.ಮೇಲ್ಮನವಿ ಅಧಿಕಾರಿಯಾಗ ಪಿಯು ಬೋರ್ಡ್ ನಿರ್ದೆಶಕಿ ಸಿಂಧೂ ರೂಪೇಶ್ ಅವರ ಮೊರೆ ಹೋಗಿದ್ದಾರಂತೆ. ದುರಂತದ ಸಂಗತಿ ಏನ್ ಗೊತ್ತಾ,ಅಕ್ರಮಕ್ಕೆ ಬ್ರೇಕ್ ಹಾಕೋ ಕೆಲಸ ಮಾಡಬೇಕಾದ ಸರ್ಕಾರದ ಮಟ್ಟದಲ್ಲಿರುವ ಅಧಿಕಾರಿಗಳು ಹಾಗೂ ಚುನಾಯಿತರು ಅಲೆನ್ ಪರ ಲಾಭಿ ಮಾಡುತ್ತಿದ್ದಾರಂತೆ.ಇದರಿಂದಾಗಿ ಸರ್ಕಾರದ ಮಟ್ಟದಿಂದಲೂ ಸಿಂಧೂ ಅವರ ಮೇಲೆ ಸಾಕಷ್ಟು ಒತ್ತಡ ಹೇರಲಾಗುತ್ತಿದೆ ಎನ್ನುವ ಮಾತಿದೆ.ಸಿಂಧೂ ಅವರು ಏನ್ ಮಾಡುತ್ತಾರೆ..? ಯಾವ ನಿರ್ದಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.ಡಿಡಿಪಿಯು ಮನೋಹರ ಕೊಳ್ಳಾ ಕೊಟ್ಟ ವರದಿಯಂತೆ ಅಲೆನ್ ಮುಚ್ಚಿಸಿದರೆ ಒಳಿತೆನಿಸುತ್ತದೆ.ಒಂದ್ವೇಳೆ ಎಲ್ಲಾ ಮೀರಿ ಅಲೆನ್ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರೆ ಅಲೆನ್ ಅಕ್ರಮಕ್ಕೆ ಸರ್ಕಾರ ಮತ್ತು ಇಲಾಖೆನೇ ಸಾಥ್ ಕೊಡುತ್ತಿದೆ ಎನ್ನುವುದು ಸ್ಪಷ್ಟವಾಗಲಿದೆ..ಅಲ್ವಾ..?!