ನಳಂದ (ಬಿಹಾರ): ಚೈತ್ರ ಮಾಸದ ಕೊನೆಯ ಮಂಗಳವಾರ ಮತ್ತು ಮಹಾವೀರ ಜಯಂತಿಯ ಶುಭ ಸಂದರ್ಭದಲ್ಲಿ ಶೀತಲ ಮಾತೆಯ ದರ್ಶನ ಪಡೆದು ಪುನೀತರಾಗಬೇಕೆಂದು ಬಂದಿದ್ದ ಭಕ್ತರ ಪಾಲಿಗೆ ಈ ದಿನ ಕರಾಳವಾಗಿ ಪರಿಣಮಿಸಿದೆ. ಬಿಹಾರದ ನಳಂದ ಜಿಲ್ಲೆಯ ಮಘ್ರ ಗ್ರಾಮದಲ್ಲಿರುವ ಪ್ರಸಿದ್ಧ ಶೀತಲ ಮಾತೆ ದೇವಾಲಯದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 8 ಜನರು ಪ್ರಾಣ ಕಳೆದುಕೊಂಡಿದ್ದಾರೆ. 12ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.
ಇಂದು ಚೈತ್ರ ಮಾಸದ ಕೊನೆಯ ಮಂಗಳವಾರವಾಗಿದ್ದರಿಂದ ಮತ್ತು ಜೊತೆಗೆ ಮಹಾವೀರ ಜಯಂತಿಯೂ ಇದ್ದಿದ್ದರಿಂದ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಹರಿದುಬಂದಿದ್ದರು. ಸಾಲಿನಲ್ಲಿ ನಿಲ್ಲಲು ಯಾರೂ ತಯಾರಿರಲಿಲ್ಲ, ಪ್ರತಿಯೊಬ್ಬರೂ ಮೊದಲಿಗರಾಗಿ ದರ್ಶನ ಪಡೆಯಲು ನುಗ್ಗಿದ್ದರಿಂದ ಬ್ಯಾರಿಕೇಡ್‌ಗಳು ಮುರಿದು ಬಿದ್ದಿವೆ. ಈ ವೇಳೆ ಉಂಟಾದ ಗೊಂದಲ ಮತ್ತು ಕಾಲ್ತುಳಿತದಲ್ಲಿ ಮಹಿಳೆಯರು ನೆಲಕ್ಕೆ ಬಿದ್ದು ತುಳಿತಕ್ಕೊಳಗಾಗಿದ್ದಾರೆ.
ಸರ್ಕಾರದಿಂದ ಪರಿಹಾರ ಘೋಷಣೆ:
ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೃತರ ಕುಟುಂಬಕ್ಕೆ ತಲಾ 6 ಲಕ್ಷ ರೂ. (ವಿಪತ್ತು ನಿರ್ವಹಣಾ ಇಲಾಖೆಯಿಂದ 4 ಲಕ್ಷ ರೂ. ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂ.) ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಉಚಿತ ಮತ್ತು ಉತ್ತಮ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ. ಸದ್ಯ ದೇವಾಲಯದ ಆವರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ | ಬೆಂಗಳೂರಿನಲ್ಲಿ 18 ಸಾವಿರಕ್ಕೆ ಜೀವನ ಸಾಧ್ಯವೇ? ಜೆನ್-ಜಿ ಯುವತಿಯ ‘ರಿಯಲ್ ಲೈಫ್’ ಬಜೆಟ್ ಈಗ ವೈರಲ್!
ಕಳೆದ ವರ್ಷ ಆಂಧ್ರಪ್ರದೇಶದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಏಕಾದಶಿಯಂದು ಸಂಭವಿಸಿದ ಕಾಲ್ತುಳಿತದಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಆ ಘಟನೆಯ ಮಾಸುವ ಮುನ್ನವೇ ಈಗ ನಳಂದದಲ್ಲಿ ಇಂತಹದೇ ದುರಂತ ಸಂಭವಿಸಿರುವುದು ಶಿಕ್ಷಣ ಸಂಸ್ಥೆಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಜನಸಂದಣಿ ನಿರ್ವಹಣೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.










