ವೈಯುಕ್ತಿಕ ಅಭಿಪ್ರಾಯಗಳನ್ನೇ ವೀಕ್ಷಕರ ಮೇಲೆ ಬಲವಂತವಾಗಿ ಹೇರುವ ದುಸ್ಸಾಹಸ..!-ಸತ್ಯದ ಅನ್ವೇಷಕರಾಗದೆ ಕೋರ್ಟ್-ಜಡ್ಜ್ ಗಳಾಂತಾದ ನಿರೂಪಕರು..?
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಪಾತ್ರದಲ್ಲಿನ ಅಸಹಜ ಸಾವುಗಳು,ತಲೆ ಬುರುಡೆ ಪ್ರಕರಣದ ಬಗ್ಗೆ ಎಸ್ ಐಟಿ ತನಿಖೆಯನ್ನೇನೋ ನಡೆಸುತ್ತಿವೆ.ಆದರೆ ಈ ವಿಷಯದಲ್ಲಿ ಮಾದ್ಯಮಗಳ ಧೋರಣೆ-ನಿಲುವು ಮಾತ್ರ ರಾಜ್ಯದ ಜನರಲ್ಲಿ ಗೊಂದಲವನ್ನಷ್ಟೆ ಅಲ್ಲ, ಹೇಸಿಗೆ ತರಿಸುವ ಜತೆಗೆ ವಾಕರಿಕೆಯನ್ನು ಮೂಡಿಸುತ್ತಿವೆ.ಪ್ರ ಕರಣದಲ್ಲಿ ಹೀಗೆಯೇ ಆಗಿದೆ ಎನ್ನೋದನ್ನು ತುಂಬಾ ರೋಚಕವಾಗಿ ಬಿಂಬಿಸುವ ಆತುರದಲ್ಲಿ ಪತ್ರಿಕೋದ್ಯಮದ ನೈತಿಕತೆ ಹಾಗು ಸೈದ್ಧಾಂತಿಕತೆಯನ್ನೇ ಗಾಳಿಗೆ ತೂರುತ್ತಿದ್ದಾರೆ.ಸತ್ಯದ ಅನ್ವೇಷಕರಾಗದೆ ತಮ್ಮದೇ ಅಭಿಪ್ರಾಯವನ್ನು ಒಪ್ಪಿಕೊಳ್ಳಬೇಕೆನ್ನುವ ಬಲವಂತಿಕೆಯನ್ನು ವೀಕ್ಷಕರ ಮೇಲೆ ಹೇರುತ್ತಿದ್ದಾರೆ.ತನಿಖೆ ಮುಗಿದೇ ಹೋಯ್ತು ಎನ್ನುವಂತೆ ಪ್ರಕರಣದ ಬಗ್ಗೆ ಅಂತಿಮ ತೀರ್ಪು ನೀಡುವ ನ್ಯಾಯಾಧೀಶರಾಗಿ ಬಿಟ್ಟಿದ್ದಾರೆ.ಇದಕ್ಕೆ ಬಲಪಂಥೀಯರು-ಎಡಪಂಥೀಯರು ಹೊರತಲ್ಲ. ಧರ್ಮಸ್ಥಳ ಪ್ರಕರಣದಲ್ಲಿ ಮಾದ್ಯಮಗಳ ಹೊಣೆಗೇಡಿತನ ಬಟಾಬಯಲಾಗಿದೆ.

ಧರ್ಮಸ್ಥಳದ ಬಗ್ಗೆ ಮಾತನಾಡುವುದೇ ತಪ್ಪು..ಮಹಾಪ್ರಮಾದ-ಘನಘೋರ ಕೃತ್ಯ ಎನ್ನುವಂತಿದ್ದ ಮಡಿವಂತಿಕೆಯ ಸ್ಥಿತಿ ಮಾದ್ಯಮಗಳ ಮದ್ಯಪ್ರವೇಶದಿಂದ ದೂರವಾದದ್ದುಸಮಾಧಾನದ ಸಂಗತಿ.ಈ ವಿಚಾರದಲ್ಲಿ ಮಾದ್ಯಮಗಳ ಹೊಣೆಗಾರಿಕೆ ಗಮನಾರ್ಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾರ್ವಜನಿಕ ವಾಗಿ ಅದರ ಮತ್ತೊಂದು ಮುಖದ ಅನಾವರಣ ಆಗಿದ್ದು ಕೂಡ ಮಾದ್ಯಮಗಳಿಂದಲೇ.. ಸ್ವಲ್ಪ ತಡವಾಯಿತು ಎನ್ನಬಹುದಾದ್ರೂ, ಧರ್ಮಸ್ಥಳದ ವಿಚಾರವನ್ನು ಬಿಂಬಿಸುವ ಮೂಲಕ ಮಾದ್ಯಮಗಳ ನೈತಿಕ ಜವಾಬ್ದಾರಿ ಜಗಜ್ಜಾಹೀರಾಗಿದ್ದು ಕೂಡ ಸುಳ್ಳೆನಲ್ಲ.ಸಂಘಟನೆಗಳ ಹೋರಾಟದ ಜತೆಗೆ ಮಾದ್ಯಮಗಳ ಪಾತ್ರವಿಲ್ಲದಿದ್ದರೆ ಸರ್ಕಾರ ಪ್ರಕರಣವನ್ನು ಬಹುಷಃ ಎಸ್ ಐ ಟಿ ತನಿಖೆಗೆ ಒಪ್ಪಿಸುತ್ತಿರಲಿಲ್ಲವೇನೋ..ಮಾದ್ಯಮಗಳು ಮನಸು ಮಾಡಿದ್ರೆ ಏನ್ ಬೇಕಾದ್ರೂ ಮಾಡಬಲ್ಲವು ಎನ್ನುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಉತ್ತಮ ನಿದರ್ಶನ ಈ ಧರ್ಮಸ್ಥಳ ತಲೆ ಬುರುಡೆ ಪ್ರಕರಣ ಇರಬಹುದೇನೋ.,.?

ಎಲ್ಲಾ ಸರಿ, ಆದ್ರೆ ತಲೆ ಬುರುಡೆ ಪ್ರಕರಣದಲ್ಲಿ ಕೆಲವು ಮಾದ್ಯಮಗಳು ತಮ್ಮ ಅತಿರೇಕತನ ಪ್ರದರ್ಶಿಸುತ್ತಿರುವುದು ಮಾತ್ರ ಅಸಹ್ಯ ಹುಟ್ಟಿಸುತ್ತೆ ಹಾಗೆಯೇ ಅಭಾಸ ಮೂಡಿಸುತ್ತೆ.ಕ್ಷೇತ್ರದ ಬಗ್ಗೆ ಇರುವ ಅತಿಯಾದ ವ್ಯಾಮೋಹದಿಂದ ಅಭಿಪ್ರಾಯ ಮೂಡಿಸುವವರು ಒಂದ್ ರೀತಿಯ ಅಸಹ್ಯವಾದ್ರೆ,ಕ್ಷೇತ್ರದ ಬಗ್ಗೆಯಲ್ಲದಿದ್ದರೂ ಅಲ್ಲಿ ನಡೆದ ಘಟನೆಗಳ ಬಗ್ಗೆ ಬೇಸರ-ಅಸಮಾಧಾನ ಹೊಂದಿರುವಂಥ ಮನಸ್ತಿತಿಯ ಮಾದ್ಯಮಗಳು ಆಕ್ರೋಶ ಮೂಡಿಸುತ್ತಿರುವುದು ಕೂಡ ವಾಕರಿಕೆ ಮೂಡಿಸುತ್ತದೆ.ವ್ಯಕ್ತಿಗತ ಅಭಿಪ್ರಾಯ ಇಟ್ಟುಕೊಳ್ಳುವುದಕ್ಕೆ ಪ್ರತಿಯೊಬ್ಬರಿಗೂ ಅವಕಾಶವಿದೆ.ಅದನ್ನು ವೈಯುಕ್ತಿಕ ನೆಲೆಗಟ್ಟಿನಲ್ಲಿಯೇ ಇಟ್ಟುಕೊಳ್ಳುವುದಕ್ಕೆ ಆಕ್ಷೇಪವಿಲ್ಲ.ಆದರೆ ಅದನ್ನು ಸಾರ್ವಜನಿಕವಾಗಿ ಪ್ರತಿಪಾದಿಸುವುದು, ತಮ್ಮ ನಿಲುವು-ಧೋರಣೆಗಳನ್ನೇ ಒಪ್ಪಿಕೊಳ್ಳಬೇಕೆಂದು ಮೊಂಡುತನ-ಹಠಕ್ಕೆ ಬೀಳುವುದಿದೆಯೆಲ್ಲಾ ಅದೇ ಅಪಾಯಕಾರಿ.ಧರ್ಮಸ್ಥಳ ತಲೆ ಬುರುಡೆ ಪ್ರಕರಣದಲ್ಲಿ ಬಹುತೇಕ ಮಾದ್ಯಮಗಳಿಂದ ಆಗುತ್ತಿರುವುದೇ ಆ ಅಸಹ್ಯ ಹಾಗೂ ಅಪಾಯ.
ಧರ್ಮಸ್ಥಳದ ವಿಚಾರದಲ್ಲಿ ಯಾವೆಲ್ಲಾ ಮಾದ್ಯಮಗಳು..ಯಾರ ಪರ..ಯಾರ ವಿರೋಧ..!?
ಧರ್ಮಸ್ಥಳದ ವಿಚಾರದಲ್ಲಿ ಯಾವೆಲ್ಲಾ ಮಾದ್ಯಮಗಳು ಯಾರ ಪರವಾಗಿ, ಯಾರ ವಿರುದ್ದವಾಗಿ ವರದಿಗಾರಿಕೆ ಮಾಡುತ್ತಿವೆ ಎನ್ನೋ ಕುತೂಹಲ ಸರ್ವೇಸಾಮಾನ್ಯವಾಗಿದೆ. ಇದನ್ನು ನಾವೇ ಹೇಳಬೇಕಿಲ್ಲ.ಯಾರು ಯಾರ ಪರ..ಯಾರ ವಿರೋಧ ಎನ್ನುವುದನ್ನು ದಿನನಿತ್ಯ ಚಾನೆಲ್ ನೋಡಿ ಜನರೇ ಅರ್ಥ ಮಾಡಿಕೊಂಡಿದ್ದಾರೆ..ಜನರ ಯೋಚನಾಲಹರಿಯನ್ನು ಅವಲೋಕಿಸಿ ಹೇಳುವುದಾದರೆ, ಘಟನಾ ಸ್ಥಳದಲ್ಲೇ ಬೀಡುಬಿಟ್ಟಿರುವ ಗ್ಯಾರಂಟಿ ಟಿವಿಯ ರಾಧಾ ಹಿರೇಗೌಡರ್ ವಾಸ್ತವತೆಯ ನೆಲೆಗಟ್ಟಿ ನಲ್ಲಿ ವರದಿಗಾರಿಕೆ ಮಾಡುವಂತೆ ತೋರ್ತಿದೆ.ಸತ್ಯದ ಸೂಕ್ಷ್ಮಗಳನ್ನು ಹೆಕ್ಕಿ ತೆಗೆಯುವ ಕೆಲಸವನ್ನು ಧೈರ್ಯವಾಗಿ ಮಾಡುತ್ತಿದ್ದಾರೆ.ಸೌಜನ್ಯಪರ ಹಾಗೂ ಹೋರಾಟಗಾರರ ಬಗ್ಗೆ ಒಂದು ಸಾಫ್ಟ್ ಆದ ಕಾರ್ನರ್ ಇಟ್ಕೊಂಡು ವರದಿಗಾರಿಕೆ ಮಾಡುತ್ತಿದ್ದರಾದ್ರೂ ನೋಡುಗರಿಗೆ ಧರ್ಮಕ್ಷೇತ್ರದ ಮುಖಂಡರ ವಿರುದ್ದ ಹೋರಾಟಕ್ಕಿಳಿದಿರುವವವರ ಬೆನ್ನಿಗೆ ನಿಂತಿದ್ದಾರಾ ಎನ್ನುವ ಶಂಕೆ ಕಾಡುತ್ತದೆ.

ಬಿಟಿವಿ, ಟಿವಿ5ನಲ್ಲಿನ ವರದಿಗಳು ಕೂಡ ಇದೇ ನೆರಳನ್ನು ಹೊಂದಿರುವಂತಿದೆ. ಆದರೆ ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ, ತೀರಾ ಅತಿರೇಕ ಎನ್ನುವಂತೆ ವೀಕ್ಷಕರಲ್ಲಿ ಭಾಸವಾಗುತ್ತಿರುವುದು ಸುವರ್ಣ ಟಿ ವಿಯ ಅಜಿತ್ ಹನುಮಕ್ಕನವರ್ ಮತ್ತು ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರ ಧೋರಣೆ ಹಾಗೂ ನಿಲುವು.ಧರ್ಮಸೃಳ ಹಾಗೂ ಧರ್ಮಕ್ಷೇತ್ರದ ಮುಖ್ಯಸ್ಥರ ಬಗ್ಗೆ ಅತಿಯಾದ ಅಭಿಮಾನ ಇಟ್ಟಿುಕೊಂಡವರಂತೆ ಧರ್ಮಕ್ಷೇತ್ರದ ಮುಖ್ಯಸ್ಥರಿಗೆ ಕ್ಲೀನ್ ಚಿಟ್ ಕೊಡುವ ಭರಾಟೆಯಲ್ಲಿ ಹೋರಾಟಗಾರರ ನೈತಿಕತೆಯನ್ನೇ ಪ್ರಶ್ನಿಸುತ್ತಿರುವುದು ಯಾಕೋ ಅತಿರೇಕ ಮತ್ತು ಅನಾವಶ್ಯಕ ಎನಿಸುತ್ತದೆ.
ಅಭಿಮಾನ ಇರಬೇಕು ನಿಜ..ಆದರೆ ಇಷ್ಟೊಂದು ಓಲೈಕೆ ಬೇಕಾ..? ಎನ್ನುವ ಪ್ರಶ್ನೆ ಸಹಜವಾಗಿ ಕಾಡುತ್ತದೆ. ವಿಷಯ ಮಂಡನೆಯನ್ನು ನಿಷ್ಪಕ್ಷಪಾತವಾಗಿ ಮಾಡಬೇಕೆನ್ನುವ ಪತ್ರಿಕಾಧರ್ಮಕ್ಕೆ ಬದ್ದರಾಗಿ ಅವರು ನಡೆದುಕೊಳ್ಳುತ್ತಿದ್ದಾರಾ..? ಇದಕ್ಕೆ ಅವರೇ ಉತ್ತರ ಕೊಡಬೇಕು. ಅರ್ನಾಬ್ ಗೋಸ್ವಾಮಿ ಅವರ ರಿಪಬ್ಲಿಕ್ ಚಾನೆಲ್ ನ ಧೋರಣೆ ಕೂಡ ಬಹುಪಾಲು ಈ ಎರಡು ಚಾನೆಲ್ ಗಳಿದ್ದಂತೆ ತೋರುತ್ತದೆ.ಟಿವಿ9 ಪಬ್ಲಿಕ್ ಟಿವಿ, ನ್ಯೂಸ್ 18 ಕನ್ನಡದಂಥ ಸುದ್ದಿವಾಹಿನಿಗಳು ಯಾವುದನ್ನುಅತಿಯಾಗಿ ವಿಜ್ರಂಭಿ ಸದೆ,ಯಾರನ್ನೂ ಟಾರ್ಗೆಟ್ ಮಾಡದೆ ಸುದ್ದಿಯನ್ನು ಸುದ್ದಿಯಾಗಿ ನೀಡುತ್ತಿವೆ.ಯಾರ ಪರವಾಗಿಯೂ ನಾವು ಇಲ್ಲ..ಯಾರ ವಿರುದ್ದವಾಗಿಯೂ ನಾವಿಲ್ಲ ಎನ್ನುವುದಾಗಿ ಪ್ರೊಜೆಕ್ಟ್ ಮಾಡಿಕೊಳ್ಳುತ್ತಿದ್ದರೂ ಅವರು ಯಾರ ಪರ..ಯಾರ ವಿರುದ್ದ ಎಂದು ಅರ್ಥೈಸಿಕೊಳ್ಳದಷ್ಟು ಕರ್ನಾಟಕದ ಜನ ದಡ್ಡರಲ್ಲ ಅಲ್ವಾ..?
ಧರ್ಮಸ್ಥಳದ ವಿಚಾರದಲ್ಲಿ ಮುಖ್ಯವಾಹಿನಿಯ ಮಾದ್ಯಮಗಳು ತುಟಿ ಬಿಚ್ಚೋದೇ ಪ್ರಮಾದಕಾರಿ-ಅನಾಹುತಕಾರಿ ಎಂದು ಕೂತಿದ್ದಾಗ ಸೋಶಿಯಲ್ ಮೀಡಿಯಾಗಳು ತೆಗೆದುಕೊಂಡ ನಿಲುವು-ನಿರ್ದಾರಗಳು ಸರ್ಕಾರವನ್ನೇ ಬಡಿದೆಬ್ಬಿಸಿದ್ದು ಈಗ ಇತಿಹಾಸ.ಇನ್ನೂ ಸುಮ್ಮನಿದ್ದರೆ ಸಾರ್ವಜನಿಕರು ಬಂಡಾಯ ಎದ್ದಾರು ಎನ್ನುವ ಭಯ-ಆತಂಕಕ್ಕೆ ಇಷ್ಟವಿಲ್ಲದಿದ್ದರೂ ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕಾಗಿ ಬಂದಿದ್ದನ್ನು ರಾಜ್ಯದ ಜನತೆ ನೋಡಿದ್ದಾರೆ.ಆದರೆ ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ದೈನಂದಿನ ಬೆಳವಣಿಗೆಗಳನ್ನು ಆಧರಿಸಿ ನೈಜತೆಯ ಹತ್ತಿರ ಎನ್ನುವಂತ ಸಂಗತಿಗಳನ್ನು ಬಿಂಬಿಸುವ ಕೆಲಸ ಮಾಡಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ.ಆದರೆ ಧರ್ಮಸ್ಥಳದ ಪರವೋ..ಅಥವಾ ವಿರುದ್ಧವೋ ಎನ್ನುವಂತೆ ಪೂರ್ವಾಗ್ರಹಕ್ಕೆ ಒಳಗಾದವರಂತೆ ಅಬ್ಬರಿಸುತ್ತಿರುವುದು,ಅಟ್ಟಹಾಸ ಮೆರೆಯುತ್ತಿರುವುದೇಕೋ ಅತಿರೇಕ-ಅಸಹ್ಯಕರ ಎನಿಸುತ್ತಿದೆ.ಈ ಅಬ್ಬರ-ಅತಿರೇಕ-ಅಸಹ್ಯಗಳ ಕಾರಣದಿಂದ ರಾಜ್ಯದ ಜನತೆಗೆ ಯಾವ ಸತ್ಯ ತಿಳಿಯಬೇಕಿತ್ತೋ ಅದು ತಿಳಿಯದೆ ಹೋಗ್ತಿದೆ ಎನ್ನುವುದೇ ಬೇಸರದಾಯಕ.


ಧರ್ಮಸ್ಥಳ ಎನ್ನೋದು ಕೆಲವು ಮಾದ್ಯಮಗಳಿಗೆ ಒಂದು ಭೌಗೋಳಿಕ ಪ್ರದೇಶ ಎನ್ನುವುದೇ ಮರೆತೋದಂತಿದೆ.ಅಲ್ಲಿ ನಡೆಯುತ್ತಿರುವ ಪ್ರಕರಣವನ್ನು ಆ ಸ್ಥಳ ಉಲ್ಲೇಖಿಸಿಯೇ ಹೇಳಬೇಕೆನ್ನುವ ಕಾಮನ್ ಸೆನ್ಸೂ ಅನೇಕರಿಗೆ ಇದ್ದಂತಿಲ್ಲ.ಧರ್ಮಸ್ಥಳ ಹೆಸರೇಳಿದಾಕ್ಷಣ ಧರ್ಮಕ್ಷೇತ್ರಕ್ಕೇನೋ ಅಪಚಾರ ಮಾಡಿದಂತೆ ಎಂದು ಪರಿಭಾವಿಸಲಾಗುತ್ತಿರುವುದು ಸರಿಯಲ್ಲ.ತನಿಖೆ ಅಂತಿಮವಾಗಿ ಈ ಬಗ್ಗೆ ತೀರ್ಪೊಂದು ಹೊರಬರುವವರೆಗೂ ಬುರುಡೆ ಪ್ರಕರಣಕ್ಕೂ ಧರ್ಮಕ್ಷೇತ್ರದವರ ಪಾತ್ರವಿದೆ ಎಂದು ಹೇಳಲಾಗುತ್ತಿರುವ ವಿಷಯಕ್ಕೂ ಸಂಬಂಧ ಇದೆಯೋ..ಇಲ್ಲವೋ ಎನ್ನುವುದರ ತೀರ್ಮಾನವಾಗಲಿದೆ. ದುರಂತ ಏನ್ ಗೊತ್ತಾ..ತನಿಖೆ ನಡೆಯುತ್ತಿರುವಾಗಲೇ ಮಾದ್ಯಮಗಳು ತಮ್ಮ ಮೂಗಿನ ನೇರದ ತೀರ್ಪು ನೀಡುವ ಅಪಾಯಕಾರಿ ಕೆಲಸ ಮಾಡುತ್ತಿವೆ.ತಾವೇ ಕೋರ್ಟ್-ಜಡ್ಜ್ ಗಳಂತೆ ವರ್ತಿಸ್ತಿವೆ.ಇದು ನಿಜಕ್ಕೂ ಅಗತ್ಯವಿದೆಯೇ..? ಧರ್ಮಸ್ಥಳದ ಬುರುಡೆ ಪ್ರಕರಣದ ಚರ್ಚೆ ಬಂದಾಗ್ಲಂತು ಮೈಮೇಲೆ ಯಾವುದೋ ಶಕ್ತಿ ಬಂದಂತೆ ವರ್ತಿಸುವ ಸಂಪಾದಕರು,ನಿರೂಪಕರು,ವರದಿಗಾರರನ್ನು ನೋಡಿದಾಗ ಎಲ್ಲಿಗೆ ಪತ್ರಿಕೋದ್ಯಮ ಯಾವ್ ಮಟ್ಟಕ್ಕೆ ಬಂದ್ ಬಿಡ್ತಲ್ಲ ಎನ್ನುವ ಬೇಸರ ಮೂಡುತ್ತೆ.
ಧರ್ಮಸ್ಥಳ ಬುರುಡೆ ಪ್ರಕರಣವನ್ನು ಒಂದು ಸುದ್ದಿಯಾಗಿ ಬಿತ್ತರಿಸಿ ಅದರೊಳಗಿನ ಸತ್ಯವನ್ನು ಅನ್ವೇಷಿಸಿ ಜನತೆಗೆ ಅಲ್ಲಿ ನಿಜವಾಗಿ ನಡೆದಿದ್ದು ಏನು ಎನ್ನುವುದನ್ನು ತಿಳಿಸಿಕೊಡಬೇಕಿರುವುದು ಮಾದ್ಯಮಗಳ ಹೊಣೆಗಾರಿಕೆ.ಆದರೆ ಅವುಗಳು ಮಾಡುತ್ತಿರುವುದೇನು..?ಸತ್ಯಾನ್ವೇಷಣೆ ಎನ್ನೋದು ಒತ್ತಟ್ಟಿಗಿರಲಿ,ತಮ್ಮ ಇಸಂಗಳನ್ನೇ ಬಲವಾಗಿ ಪ್ರತಿಪಾದಿಸುವ,ಅದನ್ನೇ ಜನ ನಂಬುವಂತೆ ಅವರ ಮೇಲೆ ಹೇರಿಕೆ ಮಾಡುವ ಅಪಾಯಕಾರಿ ಕೆಲಸ ಮಾಡುತ್ತಿದ್ದಾರೆ.ಬಹುತೇಕ ಮುಖ್ಯವಾಹಿನಿಯಲ್ಲಿರುವ ಸ್ಯಾಟಲೈಟ್ ಚಾನೆಲ್ ಗಳು ಅದರ ಆಂಕರ್ ಗಳು, ವರದಿಗಾರರು,ಸಂಪಾದಕರೆನಿಸಿಕೊಂಡವರು ತಾವೇಳಿದ್ದೇ ಸತ್ಯ ಎನ್ನುವಂತೆ ಕಟ್ಟುಕಥೆಗಳನ್ನು ರಸವತ್ತಾಗಿ ಪ್ರಸಾರ ಮಾಡುತ್ತಿದ್ದಾರೆ.ಇಲ್ಲಿ ಗೊಂದಲಕ್ಕೆ ಬಿದ್ದಿರೋದು ಯಾವುದು ಸತ್ಯ…ಯಾವುದು ಸುಳ್ಳು ಎಂದು ಅರ್ಥ ಮಾಡಿಕೊಳ್ಳಲಿಕ್ಕಾಗದ ವೀಕ್ಷಕರು. ಸತ್ಯಾನ್ವೇಷಣೆ ಮಾಡಬೇಕಾದ ಮಾದ್ಯಮಗಳೇ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿರುವುದು ವೀಕ್ಷಕರಲ್ಲಿ ಹೇಸಿಗೆ ಮೂಡಿಸಿಬಿಟ್ಟಿದೆ.
ಧರ್ಮಸ್ಥಳ ಒಂದು ಧಾರ್ಮಿಕ ಪುಣ್ಯಕ್ಷೇತ್ರ ಎನ್ನುವ ಕಾರಣಕ್ಕೆ ಎಲ್ಲರಿಗೂ ಅದರ ಬಗ್ಗೆ ಗೌರವವಿದ್ದೇ ಇದೆ.ಧಾರ್ಮಿಕ ಮುಖಂಡರ ವಿರುದ್ದ ಕೆಂಡದಂಥ ಕೋಪ ಹೊಂದಿರುವ ಮನಸ್ತಿತಿಯವರಿಗೂ ಧರ್ಮಸ್ಥಳದ ಬಗ್ಗೆ ಸಾತ್ವಿಕ ಭಾವನೆ ಇರೋದು ವಿಶೇಷ.ಹಾಗಂತ ಅಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘನಘೋರ ಕೃತ್ಯದ ಬಳಿಕವೂ ಅದೇ ಪೂಜ್ಯನೀಯ ಭಾವನೆ ಕ್ಷೇತ್ರವನ್ನು ಮುನ್ನಡೆಸುತ್ತಿರುವವರ ಬಗ್ಗೆ ಇರಲೇಬೇಕೆನ್ನುವ ನಿಯಮವೇನಿಲ್ಲ.ಆ ಕೃತ್ಯಗಳಲ್ಲಿ ಅವರ ಪಾತ್ರವಿದೆಯೋ ಇಲ್ಲವೋ ಎನ್ನುವುದು ರಾಜ್ಯದ ಜನತೆಗೆ ಗೊತ್ತಾಗಲು ಒಂದು ತನಿಖೆ ನಡೆಯಲೇಬೇಕಲ್ಲವೇ..? ಅದು ಆಗಲೇಬಾರದು ಎನ್ನುವ ವಾದ ಕಾನೂನಾತ್ಮಕವಾಗಿಯೂ ಸರಿಯಲ್ಲ..ಮಾದ್ಯಮಗಳನ್ನು ಗಮನಿಸಿದ್ರೆ ಕೆಲವರ ಮನಸ್ಥಿತಿ ಹಾಗೆ ಇದ್ದಂತಿದೆ. ಹೇಳಬೇಕಿರುವುದನ್ನು ಹೇಳದೆ ಸಧ್ಯಕ್ಕೆ ನಡೆಯುತ್ತಿರುವುದೆಲ್ಲಾ ಸರಿಯಲ್ಲ.. ಇದೊಂದು ಪಿತೂರಿ..ಷಡ್ಯಂತ್ರ.. ಧರ್ಮಕ್ಚೇತ್ರದ ಮೇಲಿನ ದೌರ್ಜನ್ಯ, ಹೆಸರು ಕೆಡಿಸುವ ದುಸ್ಸಾಹಸ, ತೇಜೋವಧೆಯ ಭಾಗ ಎಂದೆಲ್ಲಾ ಬೊಬ್ಬೆ ಹೊಡೆದುಕೊಳ್ಳುತ್ತಿರುವುದು, ಕೋರ್ಟ್, ನ್ಯಾಯಾಧೀಶರಂತೆ ತೀರ್ಪು ನೀಡುತ್ತಿರುವುದು ನಿಜಕ್ಕೂ ಪತ್ರಿಕಾಧರ್ಮನಾ..? ಖಂಡಿತಾ ಇಲ್ಲ.
ಧರ್ಮಸ್ಥಳದ ವಿಚಾರದಲ್ಲಿ ಮಾದ್ಯಮಗಳ ಇಬ್ಬಗೆಯ ಧೋರಣೆ-ಗೊಂದಲಕಾರಿ ನಿಲುವು-ಪೂರ್ವಾಗ್ರಹಪೀಡಿತ ಮನಸ್ತಿತಿಯ ವರದಿಗಳ ಪ್ರಸಾರ ನಿಜಕ್ಕೂ ರಾಜ್ಯದ ಜನತೆಯಲ್ಲಿ ಮಾದ್ಯಮಗಳ ಬಗ್ಗೆ ಇದ್ದ ಅಷ್ಟೂ ಇಷ್ಟು ನಂಬಿಕೆ-ವಿಶ್ವಾಸವನ್ನೇ ಹಾಳು ಮಾಡಿದೆ. ತನಿಖೆ ಮುಗಿಯುವ ಮುನ್ನವೇ ಜಡ್ಜ್ ಮೆಂಟ್ ಕೊಡುವ ನ್ಯಾಯಾಧೀಶರಾಗದೆ ವಾಸ್ತವಕ್ಕೆ ಕನ್ನಡಿಯಾಗಿ ಎಂದು ಜನ ಹೇಳುತ್ತಿದ್ದರೂ ತಮ್ಮ ವೈಯುಕ್ತಿಕ ತೀಟೆ-ತೆವಲುಗಳಿಗೆ-ಬಾಯಿ ಚಪಲಕ್ಕೆ ಪ್ರಕರಣವನ್ನು ಬಳಸಿಕೊಳ್ಳುತ್ತಿರುವುದು ಪ್ರತಿಯೋರ್ವ ಪತ್ರಕರ್ತ ಹೇಸಿಗೆ ಪಡುವಂತ ವಿಚಾರ.ವ್ಯಕ್ತಿಗಳ ಬಗ್ಗೆ ವೈಯುಕ್ತಿಕವಾಗಿ ಎಂತದ್ದೇ ಶೃದ್ಧೆಯಿದ್ದರೂ ಆ ನಂಬಿಕೆಯೇ ಸತ್ಯವನ್ನು ಹೇಳುವ ಗಟ್ಟಿತನಕ್ಕೆ ಬಾಧಕವಾಗಬಾರದು.ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಆಗುತ್ತಿರುವುದು ಅದೇ..
ಧರ್ಮಸ್ಥಳದ ಪ್ರಕರಣದ ಸುದ್ದಿ ಪ್ರಸಾರದಲ್ಲಿ ಬಹುತೇಕ ಮಾದ್ಯಮಗಳು ದಾರಿತಪ್ಪಿದ ಮಕ್ಕಳಂತಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.ಅದು ಧರ್ಮಕ್ಷೇತ್ರದ ಮುಖ್ಯಸ್ಥರೆನಿಸಿ ಕೊಂಡವರನ್ನು ಓಲೈಸುವ ಒಂದಷ್ಟು ಸುದ್ದಿ ಮಾದ್ಯಮಗಳ ವಿಷಯದಲ್ಲಿ ಎಷ್ಟು ಸತ್ಯವೋ, ಧರ್ಮಕ್ಚೇತ್ರದ ಮುಖ್ಯಸ್ಥರ ವಿರುದ್ದ ಜನಾಂದೋಲನ ಸಾರಿರುವ ಇನ್ನೊಂದಿಷ್ಟು ಮಾದ್ಯಮಗಳ ವಿಚಾರದಲ್ಲೂ ಅಷ್ಟೇ ನಿಜ.ಯಾರನ್ನೋ ಓಲೈಸುವುದಕ್ಕಾಗಿ,ಇನ್ನ್ಯಾರನ್ನೋ ತೇಜೋವಧೆ ಮಾಡಲಿಕ್ಕಾಗಿ ಸಮಾಜದ ಕನ್ನಡಿಯಾಗಿ ಕೆಲಸ ಮಾಡಬೇಕಿರುವ ಮಾದ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅಹಿತಕರವಷ್ಟೇ ಅಲ್ಲಾ ಅಪಾಯಕಾರಿ ಕೂಡ.
ಮಾದ್ಯಮಗಳು ತಮ್ಮ ಪಾಡಿಗೆ ವರದಿ ಮಾಡಲಿ, ಸತ್ಯಾಸತ್ಯತೆಯನ್ನು ಮೊಹಂತಿ, ಅನುಚೇತ್ ಅವರಂಥ ದಕ್ಷ-ಪ್ರಾಮಾಣಿಕ ಅಧಿಕಾರಿಗಳನ್ನೊಳಗೊಂಡ ಎಸ್ ಐಟಿ ತನಿಖೆ ಹೆಕ್ಕಿ ತೆಗೆಯಲಿದೆ.ಧರ್ಮಸ್ಥಳದಲ್ಲಿ ತಲೆ ಬುರುಡೆ ಪ್ರಕರಣಕ್ಕೆ ತಾರ್ಕಿಕ ಅಂತ್ಯವನ್ನು ತನಿಖೆ ನೀಡಲಿದೆ.ತಂಡ ಅಂತಿಮವಾಗಿ ನೀಡುವ ವರದಿಯೇ ಸತ್ಯದ ಮೇಲೆ ಬೆಳಕು ಚೆಲ್ಲಲಿದೆ.ಅಲ್ಲಿಯವರೆಗೆ ತೆಪ್ಪಗಿರುವುದನ್ನು ಬಿಟ್ಟು ತಮ್ಮನ್ನು ಯಾರೂ ಪ್ರಶ್ನಿಸ್ಲಿಕ್ಕಾಗೊಲ್ಲ..ತಾವು ಪ್ರಶ್ನಾತೀತರು ಎನ್ನುವ ಅಹಮಿಕೆಯಲ್ಲಿ ವಿವೇಚನೆ ಮರೆತು ಕೋಡಂಗಿಗಳಂತೆ ವರ್ತಿಸುವುದನ್ನು ಇನ್ನಾದರೂ ಬಿಡಿ.ಈಗಾಗಲೇ ಮಾದ್ಯಮಗಳ ಮಾನ ಮರ್ಯಾದೆ ಕೆಜಿಗಳಲ್ಲಿ ಹರಾಜಾಗಿದೆ.ಉಳಿದಿರುವ ಗ್ರಾಂನಷ್ಟು ಮರ್ಯಾದೆಗೂ ಧಕ್ಕೆ ತರುವಂತೆ ಕೆಲಸ ಮಾಡಬೇಡಿ ಎನ್ನುವುದೇ ಎಲ್ಲಾ ಮಾದ್ಯಮಗಳ ಪರ ಕನ್ನಡ ಫ್ಲ್ಯಾಶ್ ನ್ಯೂಸ್ ನ ಅರಿಕೆ-ಪ್ರಾರ್ಥನೆ.