ಬೆಂಗಳೂರು: ಕಾಂಗ್ರೆಸ್ ಶಾಸಕರೊಬ್ಬರ ಮಾಲೀಕತ್ವದ ಪ್ರಜಾ ಟಿವಿ(prajaa tv) ರಾತ್ರೊರಾತ್ರಿ “ಮಾದ್ಯಮ ಉದ್ಯಮಿ” ವಿಜಯ್ ತಾತಾ(vijay tata) ಮಡಿಲಿಗೆ ಬಿದ್ದ ಮೇಲೆ ಅವರದೇ ಮಾಲೀಕತ್ವದ ಮತ್ತೊಂದು ಸುದ್ದಿ ವಾಹಿನಿ ಸಮಯ ಟಿವಿ ಜತೆ ಹೊಸ ರೂಪದಲ್ಲಿ ಲೋಕಾರ್ಪಣೆಯಾಗಲು ಮುಹೂರ್ತ ಫಿಕ್ಸ್ ಆಗಿದೆ. ಇದೇ ಗುರುವಾರ ಅಂದರೆ ಮಾರ್ಚ್ 6 ರಂದು ಹೊಸ ರೂಪ-ವಿನ್ಯಾಸದಲ್ಲಿ ಚಾನೆಲ್ ರೀ ಲಾಂಚ್ ಆಗುತ್ತಿದೆ. ಚಾನೆಲ್ ಆಡಳಿತ ಮಂಡಳಿಯೇ ಘೋಷಿಸಿಕೊಂಡಿರುವಂತೆ, ಮೇಕ್ರಿ ಬಸ್ ನಿಲ್ದಾಣ,4ನೇ ಮಹಡಿ, ಬಿಇಎಲ್ ಆರ್ ಡ್ರೈವ್, ಮೇಕ್ರಿ ಸರ್ಕಲ್ ಬಸ್ ನಿಲ್ದಾಣದ ಗಂಗಾನಗರ ಸ್ಕೈ ವಾಕ್ ಹತ್ತಿರ , ಬೆಂಗಳೂರು 560032 ವಿಳಾಸದಲ್ಲಿ ಚಾನೆಲ್ ಕಾರ್ಯಾರಂಭ ಮಾಡುತ್ತಿದೆಯಂತೆ..ಸೋ ಹೊಸ ವಿನ್ಯಾಸದಲ್ಲಿ ಮೂಡಿಬರುತ್ತಿರುವ ಚಾನೆಲ್ ಗೆ ಶುಭ ಹಾರೈಸಲೇಬೇಕು..ಅದು ನಮ್ಮ ಸಂಸ್ಕ್ರತಿ-ಸಂಸ್ಕಾರ ಕೂಡ.ಹಾಗಾಗಿ ಚಾನೆಲ್ ನ ಆಡಳಿತ ಮಂಡಳಿಗೂ ಹೊಸ ಹುರುಪು-ಹೊಸ ನಿರೀಕ್ಷೆಯಲ್ಲಿ ಕೆಲಸ ಮಾಡಲು ಮುಂದಾಗಿರುವ ಉದ್ಯೋಗಿಗಳಿಗೊಂದು ಆಲ್ ದಿ ಬೆಸ್ಟ್ ನಮ್ಮ ಕಡೆಯಿಂದ.


ಹೊಸ ರೂಪದಲ್ಲಿ ಬರಲು ಸಿದ್ದವಾಗಿರುವ ಪ್ರಜಾ ಹಾಗೂ ಸಮಯ ಸುದ್ದಿ ವಾಹಿನಿಗಳಿಗೆ ಶುಭ ಕೋರುತ್ತಲೇ ಒಂದಷ್ಟು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ ಕನ್ನಡ ಫ್ಲ್ಯಾಶ್ ನ್ಯೂಸ್.( ಮಾದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳು ಅದು ಒಳ್ಳೆಯದಿರಲಿ, ಕೆಟ್ಟದಿರಲಿ ಅದರ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಮೊದಲಿಂದಲೂ ಮಾಡುತ್ತಾ ಬಂದಿದೆ..ಮುಂದೆಯೂ ಮಾಡಲಿದೆ)..ಹೊಸ ಉತ್ಸಾಹದೊಂದಿಗೆ ಕೆಲಸ ಮಾಡಲು ಹೊರಟಿರುವ ಅದೇ ಸಂಸ್ಥೇಯ ಸಾಕಷ್ಟು ಉದ್ಯೋಗಿಗಳ ಮನಸಿನಲ್ಲಿ ಈ ಕ್ಷಣಕ್ಕೂ ಒಂದು ಗೊಂದಲ ಕಾಡುತ್ತಲೇ ಇದೆಯಂತೆ.ನಾವು ಕೆಲಸ ಮಾಡಬೇಕಿರುವುದು ಪ್ರಜಾ ಟಿವಿಗೋ…ಅಥವಾ ಸಮಯ ಟಿವಿಗೋ ಎನ್ನುವುದೇ ಆ ಗೊಂದಲವಂತೆ .ಏಕೆಂದರೆ ಪ್ರಜಾ ಟಿವಿ ಹಾಗೂ ಸಮಯ ನ್ಯೂಸ್ ಚಾನೆಲ್ ಗಳು ಅವುಗಳದೇ ಕಾಲಘಟ್ಟದಲ್ಲಿ ಪ್ರತ್ಯೇಕ ಶೀರ್ಷಿಕೆ- ಲೋಗೋಗಳಡಿಯಲ್ಲಿ ಕೆಲಸ ಮಾಡಿದ್ದವು. ಸುದ್ದಿ ಕ್ಷೇತ್ರದಲ್ಲಿ ಒಂದಷ್ಟು ಸದ್ದನ್ನು ಕೂಡ ಮಾಡಿದ್ದವು.ಆದರೆ ಆಡಳಿತ ಮಂಡಳಿಗಳ ತಪ್ಪಿನಿಂದಾಗಿಯೇ ಜನಾಕರ್ಷಣೆ ಕಳೆದುಕೊಂಡವು. ಉದ್ಯೋಗಿಗಳಲ್ಲಿ ಅಸ್ಥಿರತೆ-ಅಭದ್ರತೆ-ಅತಂತ್ರ ಭಾವನೆಯನ್ನು ಮೂಡಿಸಿದ್ದವು.ಇದರ ಬಗ್ಗೆ ಇವತ್ತಿಗೂ ಅಲ್ಲಿ ಕೆಲಸ ಮಾಡಿ ಹೊರಬಂದವರೇ ಆಕ್ರೋಶದಿಂದ ಮಾತನಾಡುತ್ತಾರೆ.
ಪ್ರಜಾ ಟಿವಿನೇ ಸಪರೇಟಾ…ಸಮಯ ಚಾನೆಲ್ಲೇ ಸಪರೇಟಾ..?ಮೇಲ್ಕಂಡ ವಿಳಾಸದಲ್ಲಿ ಕಾರ್ಯಾರಂಭ ಮಾಡುತ್ತಿರುವ ಪ್ರಜಾ-ಸಮಯ ಚಾನೆಲ್ ಗಳ ಕಾರ್ಯಾಚರಣೆ-ಕಾರ್ಯವೈಖರಿ-ಸ್ವರೂಪದ ಬಗ್ಗೆ ವೀಕ್ಷಕರಿಗಷ್ಟೇ ಅಲ್ಲ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೇನೆ ಗೊಂದಲವಿದೆ ಎನ್ನುವ ಮಾತಿದೆ.ಏಕೆಂದರೆ ಮೊದಲೇ ಹೇಳಿದಂತೆ ಎರಡು ಚಾನೆಲ್ ಗಳು ಪ್ರತ್ಯೇಕ ಸಿಬ್ಬಂದಿ-ಪ್ರತ್ಯೇಕ ಟೆಕ್ನಾಲಜಿ ಇಟ್ಟುಕೊಂಡು ಕೆಲಸ ಮಾಡಿದಂತವು.ಆದರೆ ಇದೀಗ ಎರಡು ಚಾನೆಲ್ ಗಳನ್ನು ಒಂದೇ ಕಟ್ಟಡದಲ್ಲಿ ನಡೆಸುತ್ತಿರುವ ಬಗ್ಗೆ ಸ್ಪಷ್ಟತೆಯಾಗಲಿ, ನಿಖರತೆಯಾಗಲಿ ದೊರೆತಿಲ್ಲ .ಇದರ ಬಗ್ಗೆ ಮ್ಯಾನೇಜ್ಮೆಂಟ್ ಆಂತರಿಕವಾಗಿ ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ತಿಳಿಸಿರಬಹುದೇನೋ ಗೊತ್ತಿಲ್ಲ..ಆದರೆ ಆ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ವಿಚಾರಿಸಿದಾಗ ಸರ್ ಇದರ ಬಗ್ಗೆ ನಮಗೇ ಸ್ಪಷ್ಟತೆಯಿಲ್ಲ. ನಾವು ಮಾಡುವ ಸುದ್ದಿ ಪ್ರಜಾ ಟಿವಿಯಲ್ಲಿ ಹೋಗುತ್ತೋ…ಸಮಯ ಚಾನೆಲ್ ನಲ್ಲಿ ಹೋಗುತ್ತೋ ನಮಗೆ ಖಂಡಿತಾ ಗೊತ್ತಿಲ್ಲ.ನಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಅಷ್ಟೆ..ಇದರ ಮಾಹಿತಿಯನ್ನು ನಮಗೆ ಚಾನೆಲ್ ಆರಂಭದ ಹಿಂದಿನ ದಿನ ಹೇಳಬಹುದೇನೋ ಗೊತ್ತಿಲ್ಲ ಎಂಬ ಉತ್ತರ ನೀಡಿದ್ದಾರೆ.ಚಾನೆಲ್ ಸಿಬ್ಬಂದಿ ಮುಂದೆ ಸೃಷ್ಟಿಯಾಗಿರುವ ಈ ಗೊಂದಲವನ್ನು ಮ್ಯಾನೇಜ್ಮೆಂಟೇ ಬಗೆಹರಿಸಬೇಕು.
ಎರಡು ಪ್ರತ್ಯೇಕ ಚಾನೆಲ್ ಗಳಿಗೆ ಪ್ರತ್ಯೇಕ ಸಿಬ್ಬಂದಿ ಇರುತ್ತಾರೋ..ಪ್ರತ್ಯೇಕ ರಿಪೋರ್ಟರ್ –ಕ್ಯಾಮೆರಾಮನ್ ಇರುತ್ತಾರೋ..ಅದಕ್ಕೆ ಅದರದೇ ಆದ ಸ್ಟೈಲ್ ಶೀಟ್ ಗಳಿರುತ್ತವೋ..ಒಬ್ಬರೇ ಎರಡು ಚಾನೆಲ್ ಗಳಿಗೆ ಕೆಲಸ ಮಾಡುತ್ತಾರೋ..ಒಬ್ಬ ರಿಪೋರ್ಟರ್ರೇ ಎರಡು ಚಾನೆಲ್ ಗಳ ಲೋಗೋ ಹಿಡಿದು ಕೆಲಸ ಮಾಡಬೇಕೋ.. ಚಿಟ್ ಚಾಟ್- ಪಿಟುಸಿ ಕೊಡಬೇಕಾದ್ರೆ ಎರಡು ಚಾನೆಲ್ ಗಳ ಹೆಸ್ರನ್ನು ಒಮ್ಮೆಗೆ ಉಚ್ಚರಿಸಬೇಕೋ.. ಹೀಗೆ ಸಾಕಷ್ಟು ವೃತ್ತಿಪರ ಸವಾಲುಗಳು ಸೃಷ್ಟಿಯಾಗಬಹುದು.ಆದರೆ ಮಾದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಪರಿಣಿತಿ ಹೊಂದಿರುವ ಮಾದ್ಯಮ ಉದ್ಯಮಿ ವಿಜಯ್ ತಾತಾ ಈ ಎಲ್ಲಾ ಗೊಂದಲಗಳಿಗೂ ತಮ್ಮದೇ ಆದ ಸ್ಟೈಲ್ ನಲ್ಲಿ ಪರಿಹಾರ ಕಂಡುಕೊಂಡಿರಬಹುದೇನೋ..ಗೊತ್ತಿಲ್ಲ..ಆದರೆ ಗೊಂದಲ ಬಗೆಹರಿಸದಿದ್ದರೆ ಫೀಲ್ಡ್ ನಲ್ಲಿ ಕೆಲಸ ಮಾಡುವ ರಿಪೊರ್ಟರ್-ಕ್ಯಾಮೆರಾಮನ್ ಕೆಲಸ ಮಾಡುವುದು ವಾಸ್ತವದಲ್ಲಿ ತುಂಬಾ ಕಷ್ಟವಾಗೋದಂತೂ ಸತ್ಯ.

ಮ್ಯಾನೇಜ್ಮೆಂಟನ್ನು ಯಾರೇ ವಹಿಸಿಕೊಳ್ಳಲಿ..ಯಾರೇ ಚಾನೆಲ್ ಮಾಡಲಿ ಸರ್..ನಮಗೆ ಬರಬೇಕಿರುವ ಸಂಬಳ ಕೊಟ್ಟರೆ ಸಾಕು..ಪ್ರಜಾ ಟಿವಿಯಾಗಲಿ, ಸಮಯವಾಗಲಿ ಅಥವಾ ಇನ್ನೊಂದಾವುದೇ ಚಾನೆಲ್ ಇರಲಿ, ಅಲ್ಲಿ ಕೆಲಸ ಮಾಡುವ ಪ್ರತಿ ಉದ್ಯೋಗಿಯ ನಿರೀಕ್ಷೆ ತಿಂಗಳಿಗೊಮ್ಮೆ ಸಂಬಳ-ಭತ್ಯೆ.ಒಂದು ಚಾನೆಲ್ ನಲ್ಲಿ ಕೆಲಸ ಮಾಡುವ ಶೇಕಡಾ 90 ರಷ್ಟು ಉದ್ಯೋಗಿಗಳ ಮನಸ್ಥಿತಿ ಹೀಗೆಯೇ ಇರುತ್ತದೆ. ಅದರಾಚೆ ಏನೇ ನಡೆದರೂ ಅದರ ಬಗ್ಗೆ ಅವರಲ್ಲಿ ಯಾರೊಬ್ಬರೂ ತಲೆಕೆಡಿಸಿಕೊಳ್ಳುವುದಿಲ್ಲ.. ಏಕೆಂದರೆ ಅವರಿಗೆ ತಿಂಗಳ ಕೊನೆಯಾಗುತ್ತಿದ್ದಂತೆ ಸಂಬಳ ಸಿಕ್ಕಿಬಿಡಬೇಕೆನ್ನುವುದೇ ಇವರೆಲ್ಲರ ನಿರೀಕ್ಷೆ ಆಗಿರುತ್ತದೆ.ಆದರೆ ಬಹುತೇಕ ಅದು ಸಾಧ್ಯವಾಗದಿರುವುದು ವಿಷಾದನೀಯ.ಪ್ರಜಾ ಟಿವಿ ಹಾಗು ಸಮಯ ಟಿವಿಗಳಲ್ಲಿ ಅಂತದ್ದೊಂದು ಸಮಸ್ಯೆ ಅನುಭವಿಸಿರುವ ಉದ್ಯೋಗಿಗಳಿದ್ದಾರೆ ಎನ್ನುವ ಮಾತಿದೆ.
ಪ್ರಜಾ ಟಿವಿಯ ಮ್ಯಾನೇಜ್ಮೆಂಟ್ ಬದಲಾಗಿ ಅದನ್ನು ಇನ್ನೊಬ್ಬರು ವಹಿಸಿಕೊಂಡಿರುವಾಗಲೂ ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಕೇಳುವ ಪ್ರಶ್ನೆ ಮತ್ತು ಮಾಡಿಕೊಳ್ಳುವ ಮನವಿ ಒಂದೇ ಸರ್ ಚಾನೆಲ್ ನ್ನು ಯಾರೇ ಕೊಂಡುಕೊಳ್ಳಲಿ..ಯಾರೇ ನಿರ್ವಹಣೆ ಮಾಡಲಿ,ಅವರು ಅದನ್ನು ಇಟ್ಟುಕೊಂಡು ಏನ್ ಬೇಕಾದ್ರೂ ಮಾಡಲಿ, ಅದು ನಮಗೆ ಅಗತ್ಯವಿಲ್ಲ..ಅದನ್ನು ಕೇಳುವ ಯಾವುದೇ ನೈತಿಕತೆಯು ನಮಗಿಲ್ಲ..ನಾವು ನೀಯತ್ತಾಗಿ ಕೆಲಸ ಮಾಡುವುದು ಸಂಬಳಕ್ಕಾಗಿ ಅಷ್ಟೆ,ನಮ್ಮ ಹಕ್ಕಿನ ಸಂಬಳ ಕೊಟ್ಟರೆ ನಮಗೆ ಯಾರ ಗೊಡವೆಯೂ ಬೇಕಿಲ್ಲ ಸರ್.. ಪ್ರಜಾ ಟಿವಿ ಪ್ರತ್ಯೇಕವಾಗಿಯಾದ್ರೂ ಕೆಲಸ ಮಾಡಲಿ, ಸಮಯ ಟಿವಿನೂ ಸಪರೇಟ್ ಆಗಿ ಕಾರ್ಯಾಚರಣೆ ಮಾಡಲಿ,ಅಥವಾ ಎರಡೂ ಏಕಕಾಲಕ್ಕೆ ಟೆಲಿಕಾಸ್ಟ್ ಆಗಲಿ,ನಮಗೆ ಅದು ಅನಗತ್ಯ..ನಾವು ನಮ್ಮ ಮ್ಯಾನೇಜ್ಮೆಂಟ್ ನಿಂದ ನಿರೀಕ್ಷಿಸುವುದು ತಿಂಗಳ ಸಂಬಳ ಸಾರ್..ಅದನ್ನು ಕೊಟ್ಟರೆ ಸಾಕು..ನಮಗೆ ಯಾವ ಉಸಾಬರಿನೂ ಬೇಕಿಲ್ಲ ಸರ್ ಎನ್ತಾರೆ ಚಾನೆಲ್ ನ ಅನೇಕ ಸಿಬ್ಬಂದಿ.
ಇದು ಸತ್ಯ ಕೂಡ.ಸಿಬ್ಬಂದಿ ಕೇಳುವುದು ತಿಂಗಳ ಸಂಬಳ.ಅದನ್ನು ಸರಿಯಾದ ಸಮಯಕ್ಕೆ ಕೊಟ್ಟರೆ ಉದ್ಯೋಗಿಗಳು ಕೂಡ ಖುಷಿ ಖುಷಿಯಾಗಿ ಕೆಲಸ ಮಾಡ್ತಾರೆ.ಬೇರೆ ಚಾನೆಲ್ ಗಳತ್ತ ದೃಷ್ಟಿ ಹರಿಸುವ ಗೋಜಿಗೂ ಹೋಗುವುದಿಲ್ಲ.ಅದನ್ನು ಮ್ಯಾನೇಜ್ಮೆಂಟ್ ಗಳು ಅರ್ಥ ಮಾಡಿಕೊಳ್ಳಬೇಕಷ್ಟೆ. ಸಮಯ-ಪ್ರಜಾ ಟಿವಿ ಮ್ಯಾನೇಜ್ಮೆಂಟ್ ಬಗೆಗಿನ ಉದ್ಯೋಗಿಗಳ ನಿರೀಕ್ಷೆ ಕೂಡ ಇದೇ ಆಗಿದೆ.ಸಮಯ ಟಿವಿ ಸೇರಿದಂತೆ ಅನೇಕ ಚಾನೆಲ್ ಗಳ ಮ್ಯಾನೇಜ್ಮೆಂಟ್ ವಹಿಸಿಕೊಂಡು ಬಂಡವಾಳ ಹೂಡಿರುವ ಮಾದ್ಯಮ ಉದ್ಯಮಿ ವಿಜಯ್ ತಾತಾ ಅವರಿಗೂ ಇದರ ಅರಿವು ಸ್ಪಷ್ಟವಾಗಿದೆ ಎನ್ನುವ ಭಾವನೆ ನಮ್ಮದು.

ಸಮಯ ಹಾಗು ಪ್ರಜಾ ಟಿವಿ ರೀಲಾಂಚ್ ಆದರೂ ಅಂದುಕೊಂಡಷ್ಟು ದಾರಿ ಸುಗಮವಾಗಿಲ್ಲ.:ಮೊದಲು ಚಾನೆಲ್ ಗಳ ಬಗ್ಗೆ ಇರುವ ಮೂಲಭೂತ ಗೊಂದಲ ಸರಿಪಡಿಸಬೇಕಿದೆ.ಇದೆಲ್ಲಕ್ಕಿಂತ ಹೆಚ್ಚಾಗಿ ಸಂಸ್ಥೆಗಳು ಉದ್ಯೋಗಿಗಳ ಮಟ್ಟದಲ್ಲಿ ಕಳೆದುಕೊಂಡಿರುವ ನಂಬಿಕೆ-ವಿಶ್ವಾಸವನ್ನು ಮತ್ತೆ ಪಡೆದುಕೊಳ್ಳಬೇಕಿದೆ.ಅದು ಅಂದುಕೊಂಡಷ್ಟು ಸುಲಭವಲ್ಲ.ಈಗಾಗಲೇ ಮಾದ್ಯಮ ಮಾರುಕಟ್ಟೆಯಲ್ಲಿರುವ ಚಾನೆಲ್ ಗಳ ಪೈಕಿ ಒಂದಷ್ಟು ವಾಹಿನಿಗಳು ಸುದ್ದಿ ವಿಚಾರದಲ್ಲಿ ಎಷ್ಟೇ ಪೈಪೋಟಿ ನಡೆಸಿದ್ರೂ ಸ್ಥಿರತೆ ಕಂಡುಕೊಳ್ಳಲು ತಿಣುಕಾಡುತ್ತಿವೆ.ಅವುಗಳ ನಡುವೆ ಪ್ರಜಾ-ಸಮಯ ಹೇಗೆ ಪೈಪೋಟಿ ಕೊಡುತ್ತದೆ ಎನ್ನುವುದು ದೊಡ್ಡ ಪ್ರಶ್ನೆ.ವ್ಯಕ್ತಿಗತ ಹಿತಾಸಕ್ತಿಗಿಂತ ಸಾಮಾಜಿಕ ಹಿತಾಸಕ್ತಿ ಕಾಯ್ದುಕೊಂಡು ಸುದ್ದಿ ಮಾಡಬೇಕಿದೆ.ಸಾಮಾಜಿಕ ಬದ್ಧತೆ-ಮಾನವೀಯ ಕಳಕಳಿ ಕಾಪಾಡಿಕೊಳ್ಳಬೇಕಿದೆ.ವೃತ್ತಿಪಾವಿತ್ರ್ಯತೆ ಉಳಿಸಿಕೊಳ್ಳಬೇಕಿದೆ.ಇದರ ಜತೆ ಜತೆಗೇನೆ ಸಾಕಷ್ಟು ಸವಾಲುಗಳು ಕೂಡ ಚಾನೆಲ್ ಮುಂದಿದೆ.ಇದನ್ನು ಹೇಗೆ ಎದುರಿಸುತ್ತದೆ ಎನ್ನುವುದರ ಮೇಲೆಯೇ ಸಮಯ-ಪ್ರಜಾ ಟಿವಿಯ ಪುನರ್ಜನ್ಮ ಇನ್ನೆಷ್ಟು ಅವಧಿವರೆಗೆ ಜೀವಂತವಾಗಿರುತ್ತದೆ ಎನ್ನುವುದು ಅವಲಂಭಿತವಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಸಮಯ-ಪ್ರಜಾ ಟಿವಿ ನಂಬಿಕೊಂಡು ದುಡಿಯುತ್ತಿರುವ ಉದ್ಯೋಗಿಗಳ ಹಿತಾಸಕ್ತಿಯನ್ನು ಮ್ಯಾನೇಜ್ಮೆಂಟ್ ಗಳು ಕಾಯಬೇಕಿದೆ. ತಿಂಗಳಿಗೊಮ್ಮೆ ಸಂಬಳ-ಆಗಾಗ ಭತ್ಯೆಯನ್ನು ನೀಡುವ ಕೆಲಸಕ್ಕೆ ಯಾವುದೆ ತೊಡಕು ಎದುರಾಗದಿರಲಿ..ಏಕಂದರೆ ಒಂದು ಸಂಸ್ಥೆ ಅಪಾಯಕ್ಕೆ ಸಿಲುಕುವುದೆಂದರೆ ಅದು ಕೇವಲ ಸಂಸ್ಥೆಯ ಅಸ್ತಿತ್ವಕ್ಕೆ ಮಾತ್ರ ಕಂಟಕವಲ್ಲ. ಅಲ್ಲಿ ಕೆಲಸ ಮಾಡುತ್ತಿರುವ ನೂರಾರು ಉದ್ಯೋಗಿಗಳು..ಅವರನ್ನೇ ನಂಬಿರುವ ಕುಟುಂಬಗಳು-ಅವುಗಳ ಜೀವ-ಜೀವನಕ್ಕೂ ಮಾರಕವೇ…ಸಮಯ-ಪ್ರಜಾ ಟಿವಿ ವಿಷಯದಲ್ಲಿ ಹಾಗಾಗದಿರಲಿ… ಎರಡೂ ಚಾನೆಲ್ ಗಳು ಚೆನ್ನಾಗಿ ನಡೆದುಕೊಂಡು ಹೋಗಲಿ. ವೀಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲಿ, ಸಮಾಜದ ಸ್ವಾಸ್ಥ್ಯ ಕಾಪಾಡುವ ಜತೆಗೆ ಸಂಸ್ಥೆಯನ್ನೇ ನಂಬಿಕೊಂಡು ತಮ್ಮನ್ನೇ ಅದಕ್ಕಾಗಿ ಸಮರ್ಪಿಸಿಕೊಂಡು ಕೆಲಸ ಮಾಡುವ ಉದ್ಯೋಗಿಗಳ ಹಿತವನ್ನು ಕಾಯುವಂತ ಕೆಲಸ ಪ್ರಾಮಾಣಿಕವಾಗಿ ನಡೆಯಲಿ ಎನ್ನುವುದೇ ಕನ್ನಡ ಫ್ಲ್ಯಾಶ್ ನ್ಯೂಸ್ ನ ಅರಿಕೆ ಹಾಗೂ ಹಾರೈಕೆ.. ಶುಭವಾಗಲಿ ಒಳ್ಳೆಯ ಪ್ರಯತ್ನಕ್ಕೆ..