ಬೆಂಗಳೂರು: ಕನ್ನಡ ಸಿನೆಮಾ ಪತ್ರಿಕೋದ್ಯಮದ ಅತ್ಯಂತ ಪ್ರತಿಭಾನ್ವಿತ ಪತ್ರಕರ್ತ, ಅಕ್ಷರ ಮಾಂತ್ರಿಕ ಮಹೇಶ್ ದೇವಶೆಟ್ಟಿ ಸುವರ್ಣ ನ್ಯೂಸ್ ಚಾನೆಲ್ ನಿಂದ ಹೊರನಡೆದಿದ್ದಾರೆ. ಹತ್ತಿರತ್ತಿರ ಒಂದು ವರ್ಷದಿಂದಲೂ ಸಿನೆಮಾ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಮಹೇಶ್ ದೇವಶೆಟ್ಟಿ 15-04-2025 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಸುವರ್ಣ ನ್ಯೂಸ್ ಮ್ಯಾನೇಜ್ಮೆಂಟ್ ಗೆ ಪತ್ರ ಬರೆದಿದ್ದಾರೆ.ರಾಜೀನಾಮೆ ಪತ್ರದ ಪ್ರತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.


ಕನ್ನಡ ಸಿನೆಮಾ ಪತ್ರಿಕೋದ್ಯಮದ ಅತ್ಯಂತ ಅನುಭವಿ-ಅಸಾಧಾರಣ ಪ್ರತಿಭಾನ್ವಿತರಾಗಿರುವ ದೇವಶೆಟ್ಟಿ ಯಾವ ಕಾರಣಕ್ಕೆ ಸುವರ್ಣ ನ್ಯೂಸ್ ಚಾನೆಲ್ ತೊರೆಯುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.ಆದರೆ ಅವರ ರಾಜೀನಾಮೆಯಿಂದ ಚಾನೆಲ್ ಗೆ ಬಹುದೊಡ್ಡ ನಷ್ಟ ಉಂಟಾಗಿ ರುವುದಂತೂ ಸತ್ಯ.ಈ ಮುನ್ನ ಸಿನೆಮಾ ವಿಭಾಗದ ಮುಖ್ಯಸ್ಥರಾಗಿದ್ದ ಸುಗುಣ ಶ್ರೀನಿವಾಸ್ ಕೂಡ ರಾಜೀನಾಮೆ ನೀಡಿದ್ದರು.ಕೆಲ ತಿಂಗಳಿಂದ ಖಾಲಿ ಇದ್ದ ಸ್ಥಾನಕ್ಕೆ ಮಹೇಶ ದೇವಶೆಟ್ಟಿ ಆಗಮಿಸಿದ್ದರು.
ಸಿನೆಮಾ ಪತ್ರಿಕಾರಂಗದಲ್ಲಿ ತಮ್ಮ ಅಪ್ರತಿಮ ಬರವಣಿಗೆ-ಸುದ್ದಿ ಸಂಗ್ರಹ-ಸ್ಪೋಟಕ ಸುದ್ದಿಗಳ ವರದಿಗಾರಿಕೆಯಿಂದ ಮಹೇಶ ದೇವಿಶೆಟ್ಟಿ ಹೆಸರಾಗಿದ್ದರು.ಅವರು ಮಾಡಿದ ಕೆಲವು ಪ್ರಯತ್ನಗಳು ಇವತ್ತಿಗೂ ಸಿನಿ ಪತ್ರಿಕೋದ್ಯಮದಲ್ಲಿ ಪ್ರಥಮಗಳಾಗಿ ಉಳಿದಿವೆ.ನಾ ಭೂ ತೋ ನ ಭವಿಷ್ಯತಿ ಎನ್ನುವಂತಿದೆ.ಅದನ್ನು ಬೇರೆ ಯಾರೊಬ್ಬರಿಂದೂ ಮಾಡಲಿಕ್ಕಾಗದು ಕೂಡ.ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸಿನೆಮಾ ವರದಿಗಾರರಾಗಿ ಕೆಲಸ ಮಾಡುವಾಗ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೀವನವನ್ನು ಪರಿಣಾಮಕಾರಿಯಾಗಿ ಕಣ್ಣಿಗೆ ಕಟ್ಟುವಂತೆ ಬರೆದು ಖುದ್ದು ರಜನಿಕಾಂತ್ ಅವರಿಂದಲೇ ಶಹಬ್ಬಾಸ್ ಗಿರಿ ಪಡೆದುಕೊಂಡವರು ದೇವಶೆಟ್ಟಿ.ಕನ್ನಡ ಸಿನೆಮಾ ಜಗತ್ತಿನಲ್ಲಂತೂ ದೇವಶೆಟ್ಟಿ ಅವರದು ಮಾಸಲಾಗದ ಹೆಸರು.ಹಿತಿಕಿರಿಯ ಸಿನೆಮಾ ನಟರಿಗೆ ಏಕವಚನದಲ್ಲಿ ಸಂಬೋಧಿಸುವಷ್ಟು ಸಲಿಗೆ-ಆತ್ಮೀಯತೆ ದೇವಶೆಟ್ಟಿ ಅವರಿಗಿದೆ.ಆದರೆ ಯಾವತ್ತೂ ಈ ಸಂಪರ್ಕಗಳನ್ನು ತಮ್ಮ ಸ್ವಂತ ಲಾಭಕ್ಕಾಗಿ ದುರ್ವಿನಿಯೋಗಿಸಿಕೊಂಡವರಲ್ಲ ದೇವಶೆಟ್ಟಿ,ಅದನ್ನು ಈಗಲೂ ಸಿನಿಮಾ ರಂಗ ನೆನಪಿಸಿಕೊಳ್ಳುತ್ತದೆ.
ಪಬ್ಲಿಕ್ ಟಿವಿಗೆ ಬಂದ ಮೇಲೆ ಟಿವಿ 9, ಸುವರ್ಣ ನ್ಯೂಸ್ ಚಾನೆಲ್ ಗಳ ಸಿನೆಮಾ ವಿಶೇಷಗಳನ್ನೇ ಹಿಂದಿಕ್ಕಿ ಅವರು ಇರುವವರೆಗೂ ಬೇರೊಂದು ಚಾನೆಲ್ ಗೆ ಟಿಆರ್ ಪಿ ಜಂಪ್ ಆಗದಂತೆ ನೋಡಿಕೊಂಡ ಹೆಗ್ಗಳಿಕೆ ದೇವಶೆಟ್ಟಿ ಅವರದು.ತನ್ನ ಕೆಲಸವನ್ನು ಅಷ್ಟು ಶೃದ್ಧೆ-ಜತನ-ಆಸ್ಥೆಯಿಂದ ಮಾಡಿದ ಹೊರತಾಗ್ಯೂ ಯಾವುದೋ ಸನ್ನಿವೇಶದಲ್ಲಿ ತಮಗಾದ ಸಣ್ಣ ಅವಮಾನ-ಮುಜುಗರಕ್ಕೆ ಬೇಸತ್ತು, ಕೈತುಂಬಾ ಸಂಬಳವಿದ್ರೂ ಸ್ವಾಭಿಮಾನಕ್ಕೆ ಜೋತುಬಿದ್ದು ಕೆಲಸಕ್ಕೆ ರಾಜೀನಾಮೆ ನೀಡಿದವರು ಈ ದೇವಶೆಟ್ಟಿ. ಅದಾದ ನಂತರ ಒಂದಷ್ಟು ದಿನ ನಾಗರಾಜ್ ಅವರ ಮಾಲೀಕತ್ವದ ಫ್ರೀಡಮ್ ಟಿವಿಯಲ್ಲಿ ಕೆಲಸ ಮಾಡಿದ್ರೂ ಅದ್ಹೇಕೋ ಕೆಲಸ ತೃಪ್ತಿ ನೀಡುತ್ತಿಲ್ಲ ಎಂದ್ಹೇಳಿ ಹೊರಬಂದರು.ಆನಂತರ ಸಿಕ್ಕಿದ್ದೇ ಸುವರ್ಣ ಟಿವಿಯ ಸಿನೆಮಾ ಬ್ಯೂರೋ ಹೆಡ್.

ಸಾಮರ್ಥ್ಯ ಮೀರಿ ಶ್ರಮಿಸಿದ ದೇವಶೆಟ್ಟಿ ಸಿನೆಮಾ ಕಾರ್ಯಕ್ರಮಗಳಿಗೆ ಮೆರುಗು ನೀಡಲು ಯತ್ನಿಸಿದರು.ಪರಿಣಾಮ ಎನ್ನುವಂತೆ ಟಿಆರ್ ಪಿ ಕೂಡ ಏರಿಕೆ ಆಗಿತ್ತು.ಇದರ ನಡುವೆಯೇ ಅದೇನು ಅನ್ನಿಸಿತೋ ಗೊತ್ತಿಲ್ಲ.ಮಾನ್ಯರೇ ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂಬ ಸಣ್ಣ ಸಾಲನ್ನು ಬರೆದು ಕೆಲಸಕ್ಕೆ ಶರಣು ಹೊಡೆದು ಬಂದಿದ್ದಾರೆ. ತನ್ನ ಸ್ವಾಭಿಮಾನಕ್ಕೆ ಧಕ್ಕೆ ತರುವ ಬೆಳವಣಿಗೆಯಾದ್ರೆ ಅದು ಎಂಥಾ ಹುದ್ದೆಯೇ ಇರಲಿ..ಎಷ್ಟೇ ಸಂಬಳ ನೀಡುತ್ತಿರಲಿ,,ಎಷ್ಟೇ ಹೆಗ್ಗಳಿಕೆ-ಖ್ಯಾತಿ ಕೊಡುವಂತಿದ್ದರಲಿ, ಅಲ್ಲಿ ನಾನಿರೊಲ್ಲ ಎನ್ನುವ ಮನಸ್ತಿತಿಯ ಮಹೇಶ ದೇವಶೆಟ್ಟಿ, ಸುವರ್ಣ ನ್ಯೂಸ್ ಗೆ ಏಕೆ ರಾಜೀನಾಮೆ ನೀಡಿದರೆನ್ನುವುದು ಸಧ್ಯಕ್ಕೆ ರಹಸ್ಯವಾಗೇ ಉಳಿದಿದೆ.

‘ಕನ್ನಡ ಫ್ಲ್ಯಾಸ್ ನ್ಯೂಸ್ ಜತೆಗೆ ಉತ್ತಮ ಬಾಂಧವ್ಯ ಹೊಂದಿರುವ ಮಹೇಶ ದೇವಶೆಟ್ಟಿ ಅವರು ಕೆಲ ದಿನಗಳಿಂದೆ ಕರೆ ಮಾಡಿದ್ದಾಗ ಯಾಕೋ ವೃತ್ತಿ ವಾಕರಿಗೆ ತರಿಸುತ್ತಿದೆ.ಏಕತಾನತೆ ಬೇಸರ ತರಿಸಿದೆ.ಬದಲಾವಣೆಗೆ ಮನಸು ತುಡಿಯುತ್ತಿದೆ ಎಂದಾಗ್ಲೇ ಕೆಲಸ ಬಿಡುವ ಸುಳಿವು ನೀಡಿದ್ರು ಅನ್ನಿಸುತ್ತೆ.ಹೇಳಿದಂತೆ ಈಗ ಕೆಲಸ ಬಿಟ್ಟಿದ್ದಾರೆ. ಯಾವ ಚಾನೆಲ್ ಗಳ ಸಹವಾಸ ಬೇಡ ಎನ್ನಿಸುತ್ತೆ ಎಂದು ಅವರು ಹೇಳಿದಂತೆ ಇನ್ನ್ಯಾವ ಚಾನೆಲ್ ಸೇರುವ ಸಾಧ್ಯತೆ ಕಡಿಮೆ ಅನ್ನಿಸುತ್ತದೆ.ಸಿನೆಮಾ ರಂಗದೊಂದಿಗೆ ಅತ್ಯದ್ಭುತವಾದ ನಂಟು-ಸಂಬಂಧ-ಸಂಪರ್ಕ-ಮಾಹಿತಿ ಇರುವ ಅವರು ಇದೇ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾಣವೊಂದನ್ನು ಸೃಷ್ಟಿಸಿ ಅದರಲ್ಲೇ ವಿನೂತನ ಪ್ರಯೋಗ ಮಾಡುವ ಸಾಧ್ಯತೆಗಳಿವೆ ಎನ್ನಿಸುತ್ತದೆ.ಅದೇನೇ ಆಗಲಿ ಮಹೇಶ ದೇವಶೆಟ್ಟಿ ಅವರನ್ನು ಉಳಿಸಿಕೊಳ್ಳುವ ಯತ್ನವನ್ನು ಸುವರ್ಣ ನ್ಯೂಸ್ ಬಳಗ ಮಾಡಬಹುದಿತ್ತು.ಅದ್ಹೇಕೆ ಮಾಡಲಿಲ್ಲವೋ ಗೊತ್ತಾಗ್ತಿಲ್ಲ.ಆದರೆ ದೇವಶೆಟ್ಟಿ ಚಾನೆಲ್ ನಿಂದ ಹೊರನಡೆದಿರುವುದರಿಂದ ದೊಡ್ಡ ನಷ್ಟ ಎನ್ನುವುದರಲ್ಲಿ ಕ್ಲೀಷೆಯೇ ಇಲ್ಲ. ದೇವಶೆಟ್ಟಿ ಏನೇ ಮಾಡಲಿ ಅದರಲ್ಲಿ ಅವರಿಗೆ ಯಶಸ್ಸು ಸಿಗಲಿ ಎನ್ನುವುದು ನಮ್ಮ ಆಶಯ-ಹಾರೈಕೆ