ಊಟಕ್ಕಿಲ್ಲದ ಉಪ್ಪಿನಕಾಯಿ,… ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ..ಆನೆ ಬಾಯಿಗೆ ಹಪ್ಪಳ..ಎನ್ನುವ ಗಾಧೆಗಳನ್ನು ನೆನಪಿಸುವಂತಿದೆ ಬಿಎಂಟಿಸಿ ಆಡಳಿತದ ಧೋರಣೆ.ಕಾರ್ಮಿಕ ಸಿಬ್ಬಂಧಿಯ ಕಲ್ಯಾಣಕ್ಕಾಗಿ ಜಾರಿಗೊಳಿಸುತ್ತಿರುವ ಕಾರ್ಯಕ್ರಮ ಹಾಗೂ ಯೋಜನೆಗಳು ಅವರ ಪ್ರಯೋಜನಕ್ಕೆ ಬಾರದಂತಾಗ್ತಿದೆ..ಇದಕ್ಕೆ ಸಾಕ್ಷಿಯಾಗುತ್ತಾ ಬಂದಿರುವುದು ಸಮವಸ್ತ್ರದ ಯೋಜನೆ.ದುರಂತ ಎಂದ್ರೆ ಈ ಬಾರಿಯೂ ಆ ಅಮಾನವೀಯ ಪರಂಪರೆ ಮುಂದುವರೆದಿದೆ.

ಜಗತ್ತಿಗೆ ಜಗತ್ತೇ ಬದಲಾಗುತ್ತಿದೆ.ನಮ್ಮ ಜೀವನಶೈಲಿಗಳು ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿವೆ.ಹಾಗೆಯೇ ನಾವು ಬಳಸುತ್ತಿದ್ದ ಎಲ್ಲಾ ವಸ್ತುಗಳ ದರವೂ ದುಬಾರಿಯಾಗುತ್ತಿದೆ.ಆದರೆ ಎಲ್ಲಾ ಬದಲಾದರೂ ಬಿಎಂಟಿಸಿಯ ಆಡಳಿತದ ಮನಸ್ಥಿತಿ ಮಾತ್ರ ಬದಲಾದಂತೆ ಕಾಣುತ್ತಿಲ್ಲ ಎನ್ನುವುದು ಕಾರ್ಮಿಕರ ಕಲ್ಯಾಣಕ್ಕೆ ಖರ್ಚು ಮಾಡುತ್ತಿರುವ ವಸ್ತುಗಳ ವಿಷಯದಲ್ಲೇ ಪದೇ ಪದೇ ಸಾಬೀತಾಗುತ್ತಿದೆ.
ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗುತ್ತಲಿದ್ದರೆ ಬಿಎಂಟಿಸಿ ಆಡಳಿತಕ್ಕೆ ಮಾತ್ರ ಜಗತ್ತು ಬದಲಾಗುತ್ತಿದೆ ಎನ್ನುವ ಅರಿವೇ ಇದ್ದಂತಿಲ್ಲ.ಬಹುಷಃ ಇದ್ದರೂ ನಾವೇಕೆ ಬದಲಾಗಬೇಕೆನ್ನುವ ಮನಸ್ಥಿತಿನೋ ಗೊತ್ತಿಲ್ಲ.ಏಕೆಂದರೆ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಅಲ್ಲಿನ ಸಿಬ್ಬಂದಿಗೆ ಪೂರೈಸಲಾಗುತ್ತಿರುವ ಸಾಮಾಗ್ರಿಗಳಿಗೆ ಮಾರುಕಟ್ಟೆ ದರವನ್ನು ನೀಡುತ್ತಿದ್ದರೆ ಬಿಎಂಟಿಸಿ ಮಾತ್ರ ಓಬಿರಾಯನ ಕಾಲದ ದರದಲ್ಲೇ ಸಾಮಾನು-ಸಾಮಾಗ್ರಿಗಳನ್ನು ನೀಡುತ್ತಾ ಬಂದಿದೆ…

ಬಿಎಂಟಿಸಿ ಫಿಕ್ಸ್ ಮಾಡಿರುವ ಹಣದಲ್ಲಿ ಏನೂ ಬರೊಲ್ಲ ಸರ್: ಈ ಬಗ್ಗೆ ಬಿಎಂಟಿಸಿ ಸಿಬ್ಬಂದಿಯನ್ನು ಕೇಳಿದ್ರೆ, ಸರ್.ಇದರಲ್ಲಿ ಏನೂ ಬರೊಲ್ಲ.ಬೇಕಾದ್ರೆ ನೀವೇ ಮಾರ್ಕೆಟ್ ನಲ್ಲಿ ಹೋಗಿ ವಿಚಾರಿಸಿ,ಈ ದರದಲ್ಲಿ ಅವರು ಹೇಳಿದ ಬಟ್ಟೆ ಖರೀದಿ ಮಾಡಿ ಹೊಲಿಸಿಕೊಂಡು ಬಂದಿದ್ದೇ ಆದಲ್ಲಿ ನಾವು ನೀವು ಹೇಳಿದಂತೆ ಕೇಳುತ್ತೇವೆ.ಪ್ರತಿ ವರ್ಷ ಇವರ ಹಣೆಬರಹವೇ ಇಷ್ಟು ಸರ್.ಇವ್ರು ಕೊಡೋ ಹಣಕ್ಕೆ ನಮ್ಮ ಜೇಬಿಂದ ಇನ್ನಷ್ಟು ಹಣ ಸೇರಿಸಿ ಯೂನಿಫಾರ್ಮ್ ಹೊಲಿಸಿಕೊಳ್ಳುತ್ತೇವೆ.ಅದನ್ನು ನಮ್ಮ ಕರ್ಮ ಎಂದುಕೊಂಡೇ ಬಂದಿದ್ದೇವೆ.ನಮ್ಮ ಗೋಳನ್ನು ಯಾರಿಗೆ ಹೇಳಿಕೊಳ್ಳೋಣ ಹೇಳಿ..ಹೇಳಿದ್ರೂ ಪ್ರಯೋಜನವಿಲ್ಲ..ವ್ಯವಸ್ಥೆ ಬದಲಾಗುತ್ತೆ ಎನ್ನುವ ಯಾವುದೇ ನಿರೀಕ್ಷೆ ನಮ್ಮಲ್ಲಿಲ್ಲ..ಹಾಗಾಗಿ ಸದುಮ್ಮನಾಗಿದ್ದೇವೆ.ನಮ್ಮ ಮಾನ ನಾವೇಕೆ ಹಾಳು ಮಾಡಿಕೊಳ್ಳೋದು ಎಂದು ನಮ್ಮ ಕೈಯಿಂದ್ಲೇ ಹಣ ಹಾಕಿ ಬಟ್ಟೆ ಹೊಲಿಸಿಕೊಳ್ಳುತ್ತಿದ್ದೇವೆ.-ಹೆಸರು ಹೇಳಲಿಚ್ಚಿಸದ ಬಿಎಂಟಿಸಿ ಡ್ರೈವರ್
ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಬಿಎಂಟಿಸಿ ತನ್ನ ಸಿಬ್ಬಂದಿಗೆ ಯೂನಿಫಾರ್ಮ್ ಹೊಲಿಸಿಕೊಳ್ಳಲು ನೀಡುತ್ತಾ ಬಂದಿರುವ ಹಣದ ಲೆಕ್ಕ ಗಮನಿಸಿದ್ರೆ ಅಚ್ಚರಿ ಜತೆಗೆ ನಾಚಿಕೆ ಆಗುತ್ತದೆ..ಬಿಎಂಟಿಸಿ ಮನಸ್ತಿತಿ ಬಗ್ಗೆ ಸಿಟ್ಟು-ಆಕ್ರೋಶ ಮೂಡುತ್ತದೆ.ಹಳೇ ಕಾಲದಲ್ಲಿ ಫಿಕ್ಸ್ ಆಗಿರಬಹುದಾದ ದರವನ್ನೇ ಈಗಲೂ ನೀಡುತ್ತಾ ಬಂದಿರುವುದು ಯಾವ ನ್ಯಾಯ ಎನಿಸುತ್ತದೆ.

30-10-2025 ರಂದು ಸಿಬ್ಬಂದಿ ಮತ್ತು ಕಾರ್ಯಾಚರಣೆ ವಿಭಾಗದ ನಿರ್ದೇಶಕರ ಕಚೇರಿಯಿಂದ ಹೊರಡಿಸಲಾದ ಆದೇಶದಲ್ಲಿ ಬಿಎಂಟಿಸಿಯು ತನ್ನ ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಅವರ ಯೂನಿಫಾರ್ಮ್ ಹೊಲಿಸಲು ನಿಗಧಿಮಾಡಿರುವ ಮೊತ್ತ ಗಮನಿಸಿದ್ರೆ ಅಚ್ಚರಿ ಆಗುತ್ತದೆ. ನಿರ್ದೇಶಕರ ಕಚೇರಿಯಿಂದ ಹೊರಡಿಸಿರುವ ಆದೇಶ ಇಂತಿದೆ. ಪುರುಷ ಸಿಬ್ಬದಿಗೆ ಖಾಕಿ ಸೂಟ್ಸ್ ಅಂದರೆ 2 ಪ್ಯಾಂಟ್ ಮತ್ತು 2 ಶರ್ಟ್ ಗಳಿಗೆ 5.6 ಮೀಟರ್ ನಂತೆ ಬಟ್ಟೆಗೆ 742 ರೂ ಮತ್ತು ಹೊಲಿಗೆ ವೆಚ್ಚ 350 ರೂ ನೀಡಲಿದೆ. ಹಾಗೆಯೇ ನೀಲಿ ಸೂಟಿಂಗ್ಸ್ ಗೆ 2 ಪ್ಯಾಂಟ್ ಮತ್ತು 2 ಶರ್ಟ್ ಗಳಿಗೆ 5.6 ಮೀಟರ್ ನಂತೆ ಬಟ್ಟೆಗೆ 750 ರೂ ಮತ್ತು ಹೊಲಿಗೆ ವೆಚ್ಚ 350 ರೂ ನೀಡಲಿದೆ.ಹಾಗೆಯೇ ಬಿಳಿ ಸೂಟಿಂಗ್ಸ್ ಗೆ 2 ಪ್ಯಾಂಟ್ ಮತ್ತು 2 ಶರ್ಟ್ ಗಳಿಗೆ 5.6 ಮೀಟರ್ ನಂತೆ ಬಟ್ಟೆಗೆ 731 ರೂ ಮತ್ತು ಹೊಲಿಗೆ ವೆಚ್ಚ 350 ರೂ ನೀಡಲಿದೆ.ಇನ್ನು ಮಹಿಳಾ ಸಿಬ್ಬಂದಿಗೆ 6.20 ರಿಂದ 6.30 ಮೀಟರ್ ಖಾಕಿ ಸೀರೆ ಮತ್ತು ರವಿಕೆಗೆ 1707 ರೂ ರೂ ಹೊಲಗೆ ವೆಚ್ಚವಾಗಿ 100 ರೂ ನೀಡಲಿದೆ.ಹಾಗೆಯೇ ನೀಲಿ ಸೀರೆ ಮತ್ತು ರವಿಕೆಗೂ 1707 ರೂ ಮತ್ತು ಹೊಲಿಗೆ ವೆಚ್ಚವಾಗಿ 100 ರೂ ನೀಡಲಿದೆಯಂತೆ.2 ಜತೆ ಪ್ಯಾಂಟ್ ಮತ್ತು 2 ಶರ್ಟ್ ಗಳತೆ ಬ್ರೌನ್ ಸೂಟಿಂಗ್ ಮತ್ತು ಕ್ರೀಂ ಶರ್ಟ್ ಗೆ 731 ರೂ ತ್ತು ಹೊಲಿಗೆ ವೆಚ್ಚವಾಗಿ 350 ರೂ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ನಾನು ಬಿಎಂಟಿಸಿ ಉಪಾಧ್ಯಕ್ಷನಾಗಿ ದ್ದಾಗಲೇ ಯೂನಿಫಾರ್ಮ್ ದರದ ಬಗ್ಗೆ ದ್ವನಿ ಎತ್ತಿದ್ದೆ.ಇದರ ಬಗ್ಗೆ ಬದಲಾವಣೆ ಆಗಬೇಕಿರು ವುದು ಸತ್ಯ.ಪಾಪ ನಮ್ಮ ಸಿಬ್ಬಂದಿ ಉಳಿದ ಎಲ್ಲಾ ಇಲಾಖೆ ನೌಕರರಿಗಿಂತ ಚೆನ್ನಾಗಿ ಕಾಣಬೇಕು. ಅವರು ಒಳ್ಳೆಯ ಮತ್ತು ಉತ್ತಮ ಗುಣಮಟ್ಟದ ಯೂನಿಫಾರ್ಮ್ ಹಾಕಬೇಕೆನ್ನುವುದು ನನ್ನಂತೆಯೆ ಎಲ್ಲರ ಆಸೆ.ಇದರ ಬಗ್ಗೆ ನನಗೆ ಮಾಹಿತಿ ಬಂದಿದೆ.ಸಚಿವ ರಾಮಲಿಂಗಾರೆಡ್ಡಿ ಮತ್ತು ಎಂಡಿ ಜತೆ ಈ ಬಗ್ಗೆ ಮಾತನಾಡುತ್ತೇನೆ.ಇತರೆ ನಿಗಮ-ಮಂಡಳಿಗಳಲ್ಲಿ ಸಿಬ್ಬಂದಿಗೆ ಪೂರೈಸಲಾಗುತ್ತಿರುವ ಯೂನಿಫಾರ್ಮ್ ಮಾದರಿಯನ್ನು ಪರಿಶೀಲಿಸಿ ಅದರ ಆಧಾರದ ಮೇಲೆ ನಮ್ಮಲ್ಲೂ ಬದಲಾವಣೆ ತರಲು ಪ್ರಯತ್ನಿಸುತ್ತೇನೆ. ಸಾರಿಗೆ ಸಿಬ್ಬಂದಿ ನಮ್ಮ ಆಸ್ತಿ..ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಹಾಗು ಬಾಧ್ಯಸ್ಥಿಕೆ ಕೂಡ.ಅವರನ್ನು ಚೆನ್ನಾಗಿ ನೋಡಿಕೊಳ್ಳಲೇಬೇಕು.ಅವರ ಕಾಳಜಿ-ಕ್ಷೇಮಾಭಿವೃದ್ಧಿ ನಮ್ಮ ಹೊಣೆ..ಇದರಲ್ಲಿ ಹಿಂದೆ ಏನೆಲ್ಲಾ ತಪ್ಪುಗಳಾಗಿವೆಯೋ ಅದು ನನಗೆ ಗೊತ್ತಿಲ್ಲ.ಮುಂದೆ ಆ ರೀತಿ ಆಗಬಾರದು.ಹಾಗಾಗಿ ತಕ್ಷಣವೇ ಸಾರಿಗೆ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಸಮಾಲೋಚನೆ ನಡೆಸುತ್ತೇನೆ.- ವಿ.ಎಸ್.ಆರಾಧ್ಯ-ಬಿಎಂಟಿಸಿ ಅಧ್ಯಕ್ಷ


ಯೂನಿಫಾರ್ಮ್ ಗೆ ನಿಗದಿಪಡಿಸಲಾಗಿರುವ ದರವನ್ನು ಕೇಳಿದ್ರೆ ಜನಸಾಮಾನ್ಯರು ಕಕ್ಕಾಬಿಕ್ಕಿಯಾಗಿದ್ದಾರೆ.
ಅಲ್ಲಾ ಸ್ವಾಮಿ ಬಿಎಂಟಿಸಿ ಆಡಳಿತ ಹೊರಡಿಸಿರುವ ಈ ದರದಲ್ಲಿ ಇವತ್ತಿನ ಕಾಲಕ್ಕೆ ಏನನ್ನೂ ತೆಗೆದುಕೊಳ್ಳೊಕ್ಕೆ ಬರಲ್ಲ.ಕಾಲ ಬದಲಾಗಿದೆ ಎನ್ನುವುದು ಬಿಎಂಟಿಸಿ ನಿರ್ದೇಶಕರಿಗೆ ಗೊತ್ತಿಲ್ಲವೋ ಅಥವಾ ಗೊತ್ತಿದ್ದರೂ ನಾಟಕ ಆಡುತ್ತಿದ್ದಾರೋ? ಎಂದು ಪ್ರಶ್ನಿಸಿದ್ದಾರೆ.
ಅದೇನೇ ಆಗಲಿ, ರಾಮಲಿಂಗಾರೆಡ್ಡಿ ಅವರು ಒಬ್ಬ ಸಂವೇದನಾಶೀಲ ಸಚಿವ ಎಂದು ನಾವು ಭಾವಿಸಿದ್ದೇವೆ.ಸರ್ಕಾರದಲ್ಲಿರುವ ಎಲ್ಲಾ ಸಚಿವರಿಗಿಂತ ಅವರ ಕಾರ್ಯಶೈಲಿ ವಿಭಿನ್ನ ಎಂದುಕೊಂಡಿದ್ದೇವೆ.ಆದರೂ ಅವರ ಅವಧಿಯಲ್ಲಿ ಬಿಎಂಟಿಸಿ ಸಿಬ್ಬಂದಿಯ ಯೂನಿಫಾರ್ಮ್ ವಿಷಯದಲ್ಲಿ ಇಂತದ್ದೊಂದು ಸಮಸ್ಯೆ-ಗೊಂದಲ-ಅನ್ಯಾಯ ಏಕೆ ಆಗುತ್ತಿದೆ ಎನ್ನುವುದೇ ಪ್ರಶ್ನಾರ್ಥಕವಾಗಿದೆ.ರಾಮಲಿಂಗಾರಡ್ಡಿ ಅವರಿಗೆ ನಿಜಕ್ಕೂ ತಮ್ಮ ಸಿಬ್ಬಂದಿಯ ಬಗ್ಗೆ ಕಾಳಜಿ-ಕರುಣೆ ಇದ್ದರೆ ಈ ಕೂಡಲೇ ಮಾರುಕಟ್ಟೆಯ ಸ್ಪರ್ದಾತ್ಮಕ ದರದಲ್ಲಿ ಬಟ್ಟೆಗಳ ದರ ಫಿಕ್ಸ್ ಮಾಡಬೇಕು.ಯೂನಿಫಾರ್ಮ್ ವಿಷಯದಲ್ಲಿ ಇನ್ನೆಂದೂ ಇಂಥಾ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳಬೇಕಿದೆ.










