ರೈಲ್ವೆ ಟಿಕೆಟ್ ಮುಂಗಡ ಬುಕ್ಕಿಂಗ್ ಅವಧಿಯಲ್ಲಿ 120 ದಿನಗಳಿಂದ 60 ದಿನಗಳಿಗೆ ಕಡಿತಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದ್ದು, ನವೆಂಬರ್ 1ರಿಂದ ನೂತನ ನಿಯಮ ಜಾರಿಗೆ ಬರಲಿದೆ.
ರೈಲ್ವೆ ಮುಂಗಡ ಟಿಕೆಟ್ ಬುಕ್ಕಿಂಗ್ 120 ದಿನ ಅಂದರೆ 4 ತಿಂಗಳ ಮುನ್ನವೇ ಮಾಡಬಹುದಿತ್ತು. ಆದರೆ ನೂತನ ಆದೇಶದ ಪ್ರಕಾರ 60 ದಿನ ಅಂದರೆ ಎರಡು ತಿಂಗಳಿಗೆ ಮಾತ್ರ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಅಕ್ಟೋಬರ್ 31ರವರೆಗೆ ಮುಂಗಡ ಟಿಕೆಟ್ ಬುಕ್ಕಿಂಗ್ 120 ದಿನಗಳ ಅವಧಿಯವರೆಗೆ ಚಾಲ್ತಿಯಲ್ಲಿರುತ್ತದೆ.
ಪರಿಷ್ಕೃತ ಬದಲಾವಣೆಗಳು ವಿಭಿನ್ನ ಮುಂಗಡ ಕಾಯ್ದಿರಿಸುವಿಕೆ ಮಿತಿ ತಾಜ್ ಎಕ್ಸ್‌ಪ್ರೆಸ್ ಮತ್ತು ಗೋಮತಿ ಎಕ್ಸ್‌ಪ್ರೆಸ್‌ನಂತಹ ಕೆಲವು ಹಗಲಿನ ಎಕ್ಸ್‌ಪ್ರೆಸ್ ರೈಲುಗಳಿಗೆ ಅನ್ವಯಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದು, ಹೊಸ ಬದಲಾವಣೆ ನ.1 ರಿಂದ ಜಾರಿಯಾಗಲಿದೆ.
ವಿದೇಶಿ ಪ್ರವಾಸಿಗರಿಗೆ 365 ದಿನಗಳ ಮುಂಗಡ ಬುಕ್ಕಿಂಗ್ ಆಯ್ಕೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ರೈಲ್ವೇ ಯಾವ ಕಾರಣಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಅವಧಿಯನ್ನು ಕಡಿತ ಮಾಡಿದೆ ಎನ್ನುವನ್ನು ತಿಳಿಸಿಲ್ಲ.
ಅಧಿಕೃತ ಟಿಕೆಟ್ ಬುಕಿಂಗ್ ಪಾಲುದಾರ IRCTC ಜೊತೆಗೆ, ಮೇಕ್‌ಮೈಟ್ರಿಪ್, ಪೇಟಿಎಂ ಮತ್ತು ರೈಲ್ ಯಾತ್ರಿ ಮುಂತಾದ ಥರ್ಡ್-ಪಾರ್ಟಿ ಪ್ಲಾಟ್ ಫಾರ್ಮ್‌ಗಳಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ರೈಲ್ವೇ ಟಿಕೆಟ್ ಬುಕ್ಕಿಂಗ್ ಅವಧಿ ಕಡಿತ ಮಾಡಿದ ನಿರ್ಧಾರ ಪ್ರಕಟಗೊಂಡ ಬೆನ್ನಲ್ಲೇ ಐಆರ್ ಟಿಸಿ ಷೇರು ಮೌಲ್ಯ ಶೇ.2.4ರಷ್ಟು ಅಂದರೆ 21.70 ರೂ.ಗೆ ಇಳಿಕೆಯಾಗಿ 870.90 ರೂ. ವ್ಯವಹಾರ ಮುಗಿಸಿತು.