advertise here

Search

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ‘ರೆಸಾರ್ಟ್’ ರಾಜಕಾರಣ: ಈ ಮೀಟಿಂಗ್‌ನ ಹಿಂದಿರುವ ಅಸಲಿ ಮರ್ಮವೇನು?

kspcb employees union resort

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ನೌಕರರ ಸಂಘದ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಮಂಡಳಿಯ ಆಡಳಿತ ಮಂಡಳಿಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಆದರೆ, ಈ ಬಾರಿ ನಡೆಯುತ್ತಿರುವ ಬೆಳವಣಿಗೆಗಳು ಕೇವಲ ಸಾಂಘಿಕ ಚಟುವಟಿಕೆಯಲ್ಲ, ಬದಲಾಗಿ ಅದೊಂದು ‘ರೆಸಾರ್ಟ್ ರಾಜಕಾರಣ’ದ ರೂಪ ಪಡೆದುಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಫೆಬ್ರವರಿ 28 ರಂದು ಬೆಳಿಗ್ಗೆ 11 ಗಂಟೆಗೆ ನೌಕರರ ಸಂಘದ ಮಹಾಸಭೆ ನಡೆಯಲಿದೆ. ಸಾಮಾನ್ಯವಾಗಿ ಇಂತಹ ಸಭೆಗಳು ಕಚೇರಿ ಆವರಣದಲ್ಲಿ ನಡೆಯಬೇಕಿತ್ತು. ಆದರೆ, ಈ ಸಭೆಯನ್ನು ನಗರದ ಹೊರವಲಯದ ಒಂದು ದುಬಾರಿ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿದೆ. ಸರ್ಕಾರಿ ಸಂಸ್ಥೆಯೊಂದರ ನೌಕರರ ಸಭೆಯನ್ನು ಇಂತಹ ದುಬಾರಿ ರೆಸಾರ್ಟ್‌ನಲ್ಲಿ ಏರ್ಪಡಿಸುವ ಅಗತ್ಯವೇನಿತ್ತು? ಎಂಬುದು ಈಗ ನೌಕರರ ವಲಯದಲ್ಲಿರುವ ಪ್ರಮುಖ ಪ್ರಶ್ನೆ.

ಕುದುರೆ ವ್ಯಾಪಾರದ ತಂತ್ರಗಾರಿಕೆ?

ಈ ಹಿಂದೆ ರಾಜ್ಯ ರಾಜಕೀಯದಲ್ಲೂ ಕೂಡಾ ಕುದುರೆ ವ್ಯಾಪಾರಕ್ಕಾಗಿ ಗೋಲ್ಡನ್‌ ಪಾಮ್ಸ್‌ ಹೋಟೆಲ್‌ ಮತ್ತು ಸ್ಪಾ ತುಂಬಾ ಫೇಮಸ್‌ ಆಗಿತ್ತು. ಅದೇ ತರಹ ಈಗ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಭೆ ಅದೇ ಹೋಟೆಲ್‌ನಲ್ಲಿ ನಡೆಯುತ್ತಿದೆ.

ಮೂಲಗಳ ಪ್ರಕಾರ, ಈ ಸಭೆಯ ಹಿಂದೆ ಪಿಆರ್‌ ಓ ಹಾಗೂ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಅವರ ಆಪ್ತ ಕಾರ್ಯದರ್ಶಿ (OSD) ಮುನಿರಾಜು ಅವರ ಪ್ರಭಾವ ಹೆಚ್ಚಾಗಿದೆ ಎನ್ನಲಾಗಿದೆ. ಮುಂಬರುವ ಚುನಾವಣೆಯಲ್ಲಿ ತಾವು ಪ್ರಬಲ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಜ್ಜಾಗಿರುವ ಅವರು, ತಮ್ಮ ಪರವಾಗಿ ಮತಗಳನ್ನು ಸೆಳೆಯಲು ಮತ್ತು ಸದಸ್ಯರ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಈ ‘ರೆಸಾರ್ಟ್ ಮೀಟಿಂಗ್’ ಆಯೋಜಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇಲ್ಲಿ ‘ಕುದುರೆ ವ್ಯಾಪಾರ’ (Horse Trading) ನಡೆಯಲಿದೆ ಎಂಬುದು ನೌಕರರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

ALSO READ :  ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

ಸಂಘದ ಸಭೆ ಕಚೇರಿಯಲ್ಲಿ ನಡೆಯುವ ಬದಲು ರೆಸಾರ್ಟ್‌ನಲ್ಲಿ ನಡೆಯುತ್ತಿರುವುದು, ಮಂಡಳಿಯ ಸಾಮಾನ್ಯ ನೌಕರರಲ್ಲಿ ಅಸಮಾಧಾನ ಮೂಡಿಸಿದೆ. ಇದು ಕೇವಲ ಚುನಾವಣೆ ಗೆಲ್ಲುವ ತಂತ್ರವಲ್ಲ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಡೆಯುತ್ತಿರುವ ಸಭೆ ಎಂದು ನೌಕರರು ಆರೋಪಿಸುತ್ತಿದ್ದಾರೆ. ಸಾರ್ವಜನಿಕ ಹಣ ಅಥವಾ ನೌಕರರ ಸಂಘದ ಹಣವನ್ನು ಇಂತಹ ವೈಭವೋಪೇತ ಮೀಟಿಂಗ್‌ಗಳಿಗೆ ಬಳಸುವುದು ಎಷ್ಟು ಸರಿ ಎಂಬುದು ಎಲ್ಲರ ಪ್ರಶ್ನೆ.

ನೌಕರರ ಸಂಘದ ಮಹಾಸಭೆಗೆ ಸಂಬಂಧಿಸಿದಂತೆ ನಿಕಟ ಪೂರ್ವ ಅಧ್ಯಕ್ಷರಾದ ಕೆ. ಎಂ ರಾಜುರವರನ್ನು ಕರೆ ಮಾಡಿದಾಗ ಅವರು ಸ್ವೀಕರಿಸಲಿಲ್ಲ. 

ಇದನ್ನೂ ಓದಿ | 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧ: ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಘನತೆಯನ್ನು ಎತ್ತಿಹಿಡಿಯಬೇಕಾದ ಅಧಿಕಾರಿಗಳೇ ಇಂತಹ ರಾಜಕೀಯ ಚದುರಂಗದಾಟದಲ್ಲಿ ತೊಡಗಿರುವುದು ವಿಷಾದನೀಯ. ನಾಳೆಯ ಸಭೆಯು ನಿಜಕ್ಕೂ ಸಂಘದ ಹಿತಕ್ಕಾಗಿ ನಡೆಯುತ್ತಿದೆಯೋ ಅಥವಾ ಮುನಿರಾಜು ಅವರ ವೈಯಕ್ತಿಕ ಚುನಾವಣಾ ಪ್ರಚಾರಕ್ಕೆ ವೇದಿಕೆಯಾಗುತ್ತಿದೆಯೋ ಎಂಬುದನ್ನು ಕಾದು ನೋಡಬೇಕಿದೆ.


Scroll to Top