ಬೆಂಗಳೂರು: ಚಿತ್ರರಂಗ ಮತ್ತು ಮಾಧ್ಯಮಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದಿಲ್ಲದೆ ಮತ್ತೊಂದರ ಅಸ್ತಿತ್ವ ಕಷ್ಟ. ಆದರೆ, ದಶಕಗಳ ಕಾಲ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆಯಿಂದ ನಡೆದುಕೊಂಡು ಬಂದಿದ್ದ ಈ ಪವಿತ್ರ ಸಂಬಂಧಕ್ಕೆ ಈಗ ‘ಅಧಿಕಾರ’ದ ಗ್ರಹಣ ಹಿಡಿದಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆ ಗಾಂಧಿನಗರದ ಗಲ್ಲಿಗಳಲ್ಲಿ ಜೋರಾಗಿ ಕೇಳಿಬರುತ್ತಿದೆ. ಇದಕ್ಕೆ ಕಾರಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ನೂತನ ಸಾರಥಿ ಜಯಮಾಲಾ (jayamala) ಅವರ ಸುತ್ತ ಎದ್ದಿರುವ ವಿವಾದದ ಬಿರುಗಾಳಿ.
‘ಅಮ್ಮ’ನಂತಿದ್ದವರೇ ಈಗ ಅಂತರ ಕಾಯ್ದುಕೊಂಡರೇ?
ಚಲನಚಿತ್ರ ವಾಣಿಜ್ಯ ಮಂಡಳಿಯ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ‘ಬಂಡಾಯ’ ಈಗ ಶುರುವಾಗಿದೆ. ಅಧ್ಯಕ್ಷ ಸ್ಥಾನದ ಚುನಾವಣೆಗೂ ಮುನ್ನ ಪತ್ರಕರ್ತರನ್ನು ಕಂಡರೆ ಅಕ್ಕರೆ, ಸೌಜನ್ಯದಿಂದ ಮಾತನಾಡಿಸುತ್ತಿದ್ದ ಅದೇ ಜಯಮಾಲಾ ಅವರು, ಪಟ್ಟಕ್ಕೇರುತ್ತಿದ್ದಂತೆಯೇ ‘ಸರ್ವಾಧಿಕಾರಿ’ಯಂತೆ ವರ್ತಿಸುತ್ತಿದ್ದಾರೆ ಎಂಬುದು ಸಿನಿ ಪತ್ರಕರ್ತರ ಆಪಾದನೆ. ಎರಡು ಕ್ಷೇತ್ರಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಬೇಕಿದ್ದವರೇ, ಈಗ ಅಂತರ ಕಾಯ್ದುಕೊಳ್ಳುವ ಮೂಲಕ ಗೋಡೆ ಕಟ್ಟಲು ಹೊರಟಿದ್ದಾರಾ? ಎಂಬ ಅಸಮಾಧಾನ ಸ್ಫೋಟಗೊಂಡಿದೆ.
ಪತ್ರಕರ್ತರ ಶಪಥ: ಮಂಡಳಿಯ ಮೆಟ್ಟಿಲು ಹತ್ತೊಲ್ಲ!
ನೂತನ ಅಧ್ಯಕ್ಷೆಯ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತಿರುವ ಬಹುತೇಕ ಸಿನಿ ಪತ್ರಕರ್ತರು ಈಗ ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. “ಜಯಮಾಲಾ ಅಧ್ಯಕ್ಷರಾಗಿರುವವರೆಗೆ ನಾವು ವಾಣಿಜ್ಯ ಮಂಡಳಿಯ ಮೆಟ್ಟಿಲು ತುಳಿಯುವುದಿಲ್ಲ” ಎಂಬ ಶಪಥ ಮಾಡಿದ್ದಾರಂತೆ. ಮಂಡಳಿಯ ಯಾವುದೇ ಕಾರ್ಯಚಟುವಟಿಕೆಗಳನ್ನು ಕವರ್ ಮಾಡದಿರಲು ಅಥವಾ ಪ್ರಸಾರ ಮಾಡದಿರಲು (Boycott) ನಿರ್ಧರಿಸುವ ಮೂಲಕ ಮಾಧ್ಯಮ ಲೋಕ ತನ್ನ ಸ್ವಾಭಿಮಾನದ ಪಣವನ್ನಿಟ್ಟಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | ಜೋಗಿಯಿಂದ ‘ಕೆಡಿ’ತನಕ್ಕೆ ಜಾರಿದರೇ ಪ್ರೇಮ್? ‘ಸರ್ಸೆ’ ಹಾಡಿನ ಅಶ್ಲೀಲತೆಗೆ ಕನ್ನಡಿಗರ ಧಿಕ್ಕಾರ!
ವಿವಾದಕ್ಕೆ ತುಪ್ಪ ಸುರಿದ ಆ ‘ಎಂಟು’ ಅಂಶಗಳಾವವು:
ಪತ್ರಕರ್ತರನ್ನು ತೀರಾ ನಿಕೃಷ್ಟವಾಗಿ ಮತ್ತು ಮುಜುಗರ ತರುವ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಈ ಕೆಳಗಿನ ಆಪಾದನೆಗಳು ಸಾಕ್ಷಿ ನುಡಿಯುತ್ತಿವೆ:
ಶೌಚಾಲಯಕ್ಕೂ ಬೀಗ!: ಪತ್ರಕರ್ತರು ಮಂಡಳಿಯ ಟಾಯ್ಲೆಟ್ ಬಳಸಬಾರದು ಎಂದು ಅದಕ್ಕೆ ಬೀಗ ಹಾಕಲು ಸೂಚಿಸಿರುವುದು ಅತ್ಯಂತ ಕೀಳುಮಟ್ಟದ ನಡೆ ಎಂದು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಂಚದ ಕಳಂಕ: ಸಮಾಜದ ಕಣ್ಣಾಗಿರುವ ಪತ್ರಕರ್ತರ ವಿರುದ್ಧವೇ ಲಂಚದ ಆಪಾದನೆ ಹೊರಿಸುವ ಮೂಲಕ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಯತ್ನಿಸಲಾಗುತ್ತಿದೆ.
ಮಾಧ್ಯಮಗಳಿಗೆ ‘ಫರ್ಮಾನ್’: ಮಂಡಳಿಯ ಯಾವುದೇ ಸಭೆ ಅಥವಾ ಕಾರ್ಯಕ್ರಮಗಳಿಗೆ ಪತ್ರಕರ್ತರನ್ನು ಆಹ್ವಾನಿಸದಂತೆ ಮೌಖಿಕ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.
ಮಾಹಿತಿ ಹರಣ: ವಾಣಿಜ್ಯ ಮಂಡಳಿಯ ಒಳಗಿನ ಯಾವುದೇ ವಿಚಾರಗಳು ಹೊರಗೆ ಸೋರಿಕೆಯಾಗಬಾರದು ಎಂಬ ಗುಪ್ತಚರ ಮಾದರಿಯ ಕಠಿಣ ನಿಯಮ ಜಾರಿಗೆ ತರಲಾಗಿದೆ.
ಲಘು ಮಾತುಗಳ ಪ್ರಹಾರ: “ಪತ್ರಕರ್ತರು ಮಂಡಳಿಯಲ್ಲಿ ಊಟ ಮಾಡುತ್ತಾರೆ, ನೀರು ಕುಡಿಯುತ್ತಾರೆ, ಗೂಳಿಯಂತೆ ನುಗ್ಗುತ್ತಾರೆ” ಎಂಬ ಅವಹೇಳನಕಾರಿ ಮಾತುಗಳು ಪತ್ರಕರ್ತರ ಸ್ವಾಭಿಮಾನಕ್ಕೆ ಪೆಟ್ಟು ನೀಡಿವೆ.
ಚಾನೆಲ್ ಹೆಡ್ಗಳಿಗೆ ಚಾಡಿ: ಪತ್ರಕರ್ತರ ವೃತ್ತಿಜೀವನಕ್ಕೆ ಸಂಚಕಾರ ತರುವ ಉದ್ದೇಶದಿಂದ ನೇರವಾಗಿ ಅವರ ಚಾನೆಲ್ ಮುಖ್ಯಸ್ಥರಿಗೇ ಚಾಡಿ ಹೇಳುವ ಮೂಲಕ ಅವರ ಬಾಯಿ ಮುಚ್ಚಿಸುವ ತಂತ್ರಗಾರಿಕೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಕ್ರಮಗಳ ಮುಚ್ಚಿಡುವ ತಂತ್ರವೇ?: ಮಂಡಳಿಯಲ್ಲಿ ನಡೆಯುತ್ತಿರುವ ಎನ್ನಲಾದ ಅಕ್ರಮಗಳು ಎಲ್ಲಿ ಮಾಧ್ಯಮಗಳ ಮೂಲಕ ಬಯಲಾಗುತ್ತವೋ ಎಂಬ ಭಯದಿಂದ ಮೇಡಂ ಈ ರೀತಿ ಮಾಡುತ್ತಿದ್ದಾರಾ? ಎಂಬ ಅನುಮಾನ ವ್ಯಕ್ತವಾಗಿದೆ.
ಸ್ವಾಭಿಮಾನಕ್ಕೆ ಸವಾಲು: ಸಿನೆಮಾ ಪತ್ರಕರ್ತರ ದಿಟ್ಟ ಹೆಜ್ಜೆ
ಸಿನೆಮಾ ಪತ್ರಕರ್ತರೆಂದರೆ ಕೇವಲ ಸುದ್ದಿ ಬಿತ್ತರಿಸುವವರಲ್ಲ, ಅವರು ಚಿತ್ರರಂಗದ ಏಳುಬೀಳುಗಳ ಸಾಕ್ಷಿಗಳು. ಅಧಿಕಾರ ಬರುತ್ತದೆ, ಹೋಗುತ್ತದೆ; ಆದರೆ ವೃತ್ತಿಪರತೆ ಶಾಶ್ವತ. ಅಧ್ಯಕ್ಷರಾಗುವ ಮೊದಲು ತೋರಿದ ವಿನಯವಂತಿಕೆ ಮರೆಯಾಗಿ, ಈಗ “ನಾನು ಹೇಳಿದಂತೆ ಪತ್ರಕರ್ತರು ಕೇಳಬೇಕು” ಎನ್ನುವ ಮನಸ್ಥಿತಿ ಬೆಳೆಸಿಕೊಂಡಿರುವುದು ದುರಂತ. ಆದರೆ, “ನಾವು ಸ್ವಾಭಿಮಾನ ಮರೆತು ಬದುಕುವವರಲ್ಲ” ಎಂದು ಪತ್ರಕರ್ತರು ಸಿಡಿದೆದ್ದಿದ್ದಾರೆ.
ಮಾಜಿ ಅಧ್ಯಕ್ಷರ ಮಾತು
ಅಧ್ಯಕ್ಷರ ಬಗ್ಗೆ ಕೇಳಿಬಂದಿರುವ ಈ ಆಪಾದನೆ ನಿಜಕ್ಕೂ ಗಂಭೀರವಾದದ್ದು. ಮಾದ್ಯಮ ಮತ್ತು ಸಿನೆಮಾರಂಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ನಮ್ಮ ಸಿನೆಮಾ ರಂಗ ಉಸಿರಾಡುತ್ತಿರುವುದು, ಜೀವಂತಿಕೆ ಇರುವುದರಲ್ಲಿ ನಮ್ಮ ಸಿನಿ ಪತ್ರಕರ್ತರ ಪಾತ್ರ ಹಿರಿದು. ಇದನ್ನು ಅತ್ಯಂತ ಜತನ ಹಾಗೂ ಜವಾಬ್ದಾರಿಯಿಂದ ಕಾಯ್ದುಕೊಂಡು ಬಂದಿದ್ದೇವೆ. ಆದರೆ ಹೊಸ ಅಧ್ಯಕ್ಷರು ಬರುತ್ತಿದ್ದಂತೆ ಈ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಸರಿಯಲ್ಲ. ನಮ್ಮ ಸಿನೆಮಾ ರಂಗದ ಚಟುವಟಿಕೆಗಳನ್ನೇ ಬ್ಯಾನ್ ಮಾಡುತ್ತೇವೆ ಎಂದು ನಮ್ಮ ಮಾದ್ಯಮ ಮಿತ್ರರು ಬಂಡಾಯ ಸಾರಿರುವುದು ನಮಗೆ ಅಘಾತ ತಂದಿದೆ. ಕೆಲವು ಮಾದ್ಯಮ ಮಿತ್ರರು ಇದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ನಮ್ಮಿಬ್ಬರ ನಡುವಿನ ಸಂಬಂಧ ಹಳಸುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಕೂಡಲೇ ನಮ್ಮ ಮಂಡಳಿಯ ಹಿರಿಯರೊಂದಿಗೆ ಈ ಬಗ್ಗೆ ಚರ್ಚಿಸಿ ಸಮಸ್ಯೆಯನ್ನು ಸೌಹಾರ್ಯತವಾಗಿ ಬಗೆಹರಿಸಲು ಯತ್ನಿಸುತ್ತೇವೆ. ಎಂದು ಹಿರಿಯ ನಿರ್ಮಾಪಕ ಹಾಗೂ ಮಾಜಿ ಅಧ್ಯಕ್ಷರಾದ ಭಾ.ಮ ಹರೀಶ್ ಹೇಳಿದ್ದಾರೆ.

ಸಿನೆಮಾ ರಂಗ ಮತ್ತು ಮಾಧ್ಯಮದ ನಡುವಿನ ಈ ಸಂಘರ್ಷ ಖಂಡಿತವಾಗಿಯೂ ಅಗತ್ಯವಿರಲಿಲ್ಲ. ಅಹಂಕಾರ ಮತ್ತು ಅಧಿಕಾರ ದರ್ಪದ ನಡುವೆ ಚಿತ್ರರಂಗದ ಹಿತಾಸಕ್ತಿ ಬಲಿಯಾಗುತ್ತಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿ ಉಳಿಯುವ ಮುನ್ನ, ಅಧ್ಯಕ್ಷರು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳುತ್ತಾರಾ? ಅಥವಾ ಮಾಧ್ಯಮಗಳಿಲ್ಲದ ‘ಒಂಟಿ’ ಚಿತ್ರರಂಗದ ಪಯಣ ಮುಂದುವರಿಯುತ್ತಾ? ಕಾದು ನೋಡಬೇಕಿದೆ.











