advertise here

Search

ಟಿವಿ-9 ಕನ್ನಡಕ್ಕೆ ಇದೆಂಥಾ ದುಸ್ತಿತಿ..!?  ಟಿಆರ್ ಪಿಯಲ್ಲಿ ನಿರಂತರ ಪತನ..ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಗ್ಯಾರಂಟಿ..!

tv9 kannada trp ratings

ಟಿವಿ 9 ಕನ್ನಡದ ಅವನತಿ ಆರಂಭವಾಗಿದೆಯೇ..? ಅದರ ಜನಪ್ರಿಯತೆ ಕಾಲಕಳೆದಂತೆಲ್ಲಾ ಕಳಾಹೀನವಾಗುತ್ತಿದೆಯೇ..? ತೇಜಸ್ಸು ಕ್ಷೀಣಿಸಲಾರಂಭಿಸಿದೆಯೇ..?ಎಲ್ಲಕ್ಕಿಂತ ಹೆಚ್ಚಾಗಿ ವೀಕ್ಷಕರು ಇಟ್ಟುಕೊಂಡು ಬಂದಿದ್ದ ವಿಶ್ವಾಸ-ನಂಬಿಕೆ ಉಳಿಸಿಕೊಳ್ಳುವಲ್ಲಿ ಚಾನೆಲ್ ನ  ಕರ್ನಾಟಕದ ತಂಡ ವಿಫಲವಾಗುತ್ತಿದೆಯೇ..?  ಚಾನೆಲ್ ಗಳ ಜನಪ್ರಿಯತೆ ಮತ್ತು ವೀಕ್ಷಣೆಯ ವ್ಯಾಪ್ತಿ ಹಾಗೂ ವಾಣಿಜ್ಯ ಮಾರುಕಟ್ಟೆಯ ವಿಸ್ತರಣೆ ನಿರ್ದರಿಸುವಂಥ ಟಿಆರ್ ಪಿ( ಟೆಲಿರೇಟಿಂಗ್ ಪಾಯಿಂಟ್) ಮಾನದಂಡದಲ್ಲಿ ಹಿನ್ನಡೆ ಅನುಭವಿಸುತ್ತಿರುವುದೇ ಇಂತದೊಂದಿಷ್ಟು ಅನುಮಾನ ಕಾಡ್ಲಿಕ್ಕೆ ಕಾರಣ. ಒಂದಷ್ಟು ವಾರ ಅಂಬಾನಿ ಒಡೆತನದ ನೆಟ್ ವರ್ಕ್ 18 ಗ್ರೂಪ್ ನ ನ್ಯೂಸ್ 18 ಕನ್ನಡ ಟಿವಿ9ನ್ನು ಹಿಂದಿಕ್ಕಿದ್ರೆ ಈ ವಾರ ಪಬ್ಲಿಕ್ ಟಿವಿ ಟಿವಿ9ನ್ನು ಬೀಟ್ ಮಾಡಿ ಮುಂದಕ್ಕೆ ಹೋಗಿದೆ. ನಂಬರ್ ಗೇಮ್ ನಲ್ಲಿ ಹಿಂದೆ ಬಿದ್ದಿರಬಹುದು, ಆದರೆ  ಜನರ ದೃಷ್ಟಿಯಲ್ಲಿ ಈಗಲಷ್ಟೇ ಅಲ್ಲಾ, ಶಾಶ್ವತಕ್ಕೂ ನಾವೇ ನಂಬರ್ ಎನ್ನುವ ಹಳೆಯ ಡೈಲಾಗ್ ನ ಗ್ರಾಮಾಪೋನ್ ತಿರುಗಿಸಿಕೊಂಡು ಇಲ್ಲಿನ ಟಿವಿ9 ಕನ್ನಡದ ಬ್ರಹಸ್ಪತಿಗಳು  ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಿರುವುದು ಮಾತ್ರ ದುರಂತ.

ಟಿವಿ9 ಕನ್ನಡದ ಜನಪ್ರಿಯತೆ ಕುಂದಿ ಅವನತಿಯು ಪ್ರಾರಂಭವಾಯಿತಾ?

ಟಿವಿ9 ಕನ್ನಡಕ್ಕೆ ಅವನತಿಯ ದಿನಗಳು ಆರಂಭವಾದವಾ.?ಜನಪ್ರಿಯತೆ ಕುಂದಲಾರಂಭಿಸಿದೆಯಾ..? ಇದು ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಬಹುದು. ಹಾಗಂತ ಅವನತಿ ಎನ್ನೋದನ್ನು ತೀರಾ ನೆಗೆಟಿವ್ ಆದಂಥ ರೀತಿಯಲ್ಲಿ ವಿಶ್ಲೇಷಿಸಬೇಕೆಂದೇನಿಲ್ಲ. ಟಿಆರ್ ಪಿ ಎನ್ನುವುದರ ಬಗ್ಗೆ ಗೊತ್ತಿಲ್ಲದ, ತಲೆಕೆಡಿಸಿಕೊಳ್ಳದ ಬಹುತೇಕ ಜನರಿಗೆ ಟಿವಿ9 ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಎಂದರೆ ನಂಬಲು ಅಸಾಧ್ಯ..ಅದು ಅವರಿಗೆ ಅಗತ್ಯವೂ ಇಲ್ಲದ ವಿಷಯ ಕೂಡ. ಆದರೆ ಸುದ್ದಿ ಕ್ಷೇತ್ರದ ಮಟ್ಟಿಗೆ ಇವೆಲ್ಲಾ ತುಂಬಾ ಸೀರಿಯಸ್ ಆಗಿ ಪರಿಗಣಿಸಲ್ಪಡುವುದರಿಂದ ಎಚ್ಚೆತ್ತುಕೊಳ್ಳುವುದು ಉತ್ತಮ ಎನ್ನುವ ಕಾಳಜಿಯಿಂದಷ್ಟೇ ಇದರ ಬಗ್ಗೆ ಈ ವರದಿ.

ಜನರ ದೃಷ್ಟಿಯಲ್ಲಿ ಇದೆಲ್ಲಾ ನಗಣ್ಯ-ಅನಪೇಕ್ಷಿತ ಅಥವಾ ಗಂಭೀರವಾದ ವಿಚಾರ ಅಲ್ಲದೇ ಇರಬಹುದು. ಆದರೆ ಸುದ್ದಿ ಮಾದ್ಯಮ ಕ್ಷೇತ್ರದಲ್ಲಿ ಟಿವಿ9 ಕನ್ನಡದ ಹಿನ್ನಡೆಯನ್ನು ಅದರ ಮ್ಯಾನೇಜ್ಮೆಂಟ್ ಅತ್ಯಂತ ಸೀರಿಯಸ್ಸಾಗಿ ತೆಗೆದುಕೊಳ್ಳಬೇಕಾಗುತ್ತದೆ. ಎಚ್ಚರ ತಪ್ಪಿದ್ರೆ ಏನಾದ್ರೂ ಆಗಬಹುದೆನ್ನುವುದಕ್ಕೆ ಅನೇಕ ವಾರಗಳಿಂದ್ಲೂ ಟಿಆರ್ ಪಿಯಲ್ಲಿ ಅನುಭವಿಸಲಾರಂಭಿಸಿರುವ ಹಿನ್ನಡೆಯೇ ಸಾಕ್ಷಿ. ಬೆಂಗಳೂರು ಕಚೇರಿಯಲ್ಲಿ ಏನೋ ಸಮಸ್ಯೆಯಾಗುತ್ತಿದೆ.. ಜವಾಬ್ದಾರಿ ವಹಿಸಿಕೊಂಡಂಥವರು ಎಲ್ಲೋ ಎಡವುತ್ತಿದ್ದಾರೆ..ಅವರ ಎಡವಟ್ಟುಗಳಿಂದಲೇ ಇದೆಲ್ಲಾ ಆಗುತ್ತಿದೆ. ಇದಕ್ಕೆ ಅವಕಾಶ ಕೊಡಬಾರದೆನ್ನುವ ಸೂಕ್ಷ್ಮತೆಗೆ ಒತ್ತು ಕೊಟ್ಟಿದಿದ್ದರೆ ಟಿವಿ9 ಕನ್ನಡಕ್ಕೆ ಇಂಥಾ ಸ್ಥಿತಿ ಬರುತ್ತಿರಲಿಲ್ಲವೇನೋ..? ಅನ್ನಿಸುತ್ತದೆ.

ಕಳೆದೊಂದಷ್ಟು ವಾರಗಳಿಂದಲೂ ಟಿವಿ9 ಕನ್ನಡವನ್ನು ನ್ಯೂಸ್ 18 ಕನ್ನಡ ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದಿತ್ತು. (ಟಿವಿ 9 ಕನ್ನಡವನ್ನು ಹಿಂದಿಕ್ಕುವುದೇ ಸಾಧ್ಯವೇ ಇಲ್ಲ..! ಟಿಆರ್ ಪಿಯಲ್ಲಿ ಏನೋ ನಡೆದಿದೆ ಎಂದು ಟಿವಿ9 ಕನ್ನಡದಲ್ಲಿಯೇ ಅನುಮಾನಿಸಿ ಮಾತನಾಡಿದಿದ್ದೆಯಂತೆ. ಆದರೆ ಇದು ಒಂದು ವಾರದ ಕಥೆಯಾದ್ರೆ ಏನೋ ನಡೆದಿದೆ ಎಂದು ಅನುಮಾನಿಸಬಹುದು. ಆದರೆ ಅದೆಷ್ಟೋ ವಾರಗಳವರೆಗೂ ನ್ಯೂಸ್ 18 ಕನ್ನಡ ಟಿವಿ9 ಕನ್ನಡವನ್ನು ಹಿಂದಿಕ್ಕಿ ಮರ್ಮಾಘಾತ ಮಾಡಿದಾಗ ಇಲ್ಲ ಇದರಲ್ಲಿ ಸತ್ಯವಿದೆ ಎಂದು ಟಿವಿ9 ಕನ್ನಡ ಅರಿತುಕೊಂಡಿದಿದ್ದರೆ ಟಿವಿ9 ಕನ್ನಡದಲ್ಲಿ ಒಂದಷ್ಟು ಬದಲಾಗುತ್ತಿತ್ತೇನೋ..? ಆದರೆ ಅತಿಯಾದ ಆತ್ಮವಿಶ್ವಾಸಕ್ಕೆ ಬಲಿಯಾಗಿ ತೋರಿದ ನಿರ್ಲಕ್ಷ್ಯದಿಂದಲೇ ಹಿನ್ನಡೆ ಅನುಭವಿಸುವಂತಾಯ್ತೆನ್ನುವ ಮಾತುಗಳನ್ನು ಟಿವಿ9 ಕನ್ನಡದ ಅದೆಷ್ಟೋ ಮಾದ್ಯಮಮಿತ್ರರು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ. ಟಿವಿ9 ಕನ್ನಡದ ಈ ಸ್ಥಿತಿಗೆ ಅಲ್ಲಿ ಕುಳಿತು ಅಂದಾದರ್ಬಾರ್ ಮಾಡುತ್ತಿರುವ ಆಪಾದನೆಗೆ ಸಿಲುಕಿರುವ ಕೆಲವುಬ್ರಹಸ್ಪತಿಗಳೇ ನೇರ ಕಾರಣ ಎಂದು ನೊಂದ ಸಿಬ್ಬಂದಿನೇ ಹೇಳುತ್ತಿದ್ದಾರೆ.

ಯಾಕೆ ಹೀಗಾಯ್ತು..ಇದಕ್ಕೆ ಹೊಣೆ ಯಾರು..?

ಟಿವಿ9 ಕನ್ನಡ ಟಿಆರ್ ಪಿಯಲ್ಲಿ ಹಿನ್ನಡೆ ಅನುಭವಿಸಲಿಕ್ಕೆ ಕಾರಣವೇ ಸುದ್ದಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆಲವು ಬ್ರಹಸ್ಪತಿಗಳಂತೆ. ಸುದ್ದಿಗಳ ಆಯ್ಕೆ ವಿಚಾರದಿಂದ ಹಿಡಿದು ಅದನ್ನು ಪ್ರಸೆಂಟ್ ಮಾಡುವುದರಲ್ಲಿ ಸಂಪೂರ್ಣ ಎಡವುತ್ತಿದ್ದಾರಂತೆ. ಮೊದಲೆಲ್ಲಾ ವಸ್ತುನಿಷ್ಟವಾಗಿ ಸುದ್ದಿಗಳಿಗೆ ಕೊಡುತ್ತಿದ್ದ ಪ್ರಾತಿನಿಧ್ಯತೆ-ಆಧ್ಯತೆ-ಪ್ರಾಮುಖ್ಯತೆ-ಪ್ರಾಶಸ್ತ್ಯತೆಯನ್ನು ಇಂದು ನೀಡುವವರೇ ಇಲ್ಲವಾಗಿದೆ. ಸದ್ದು ಮಾಡುವಂತ ಸುದ್ದಿಗಳೇ ಇಲ್ಲವಾಗಿದೆ. ಮಾನವೀಯ ಕಾಳಜಿಯ ಸುದ್ದಿಗಳಂತೂ ಇಲ್ಲವೇ ಇಲ್ಲ..ಹಗರಣ-ಭ್ರಷ್ಟಾಚಾರದ ಸುದ್ದಿಗಳನ್ನಂತೂ ಕೇಳಲೇಬೇಡಿ.. ನಾಗರಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿ ಪರಿಹಾರ ನೀಡುವಂತ ಸುದ್ದಿಗಳಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದ್ದ ಟಿವಿ9 ಕನ್ನಡದಲ್ಲಿ ಇಂದು ಅಂಥಾ ಸುದ್ದಿಗಳನ್ನು ಮಾಡದಂತೆ ತಡೆಯುವ ಪಟ್ಟಭದ್ರ ಹಿತಾಸಕ್ತಿಗಳು ತುಂಬಾ ಸ್ಟ್ರಾಂಗ್ ಆಗಿ ಕೆಲಸ ಮಾಡುತ್ತಿವೆಯಂತೆ. ಉಳ್ಳವರ ಓಲೈಕೆ ಮಾಡುವ, ಆಳುವವರ ಬಕೆಟ್ ಹಿಡಿಯುವ ಪ್ರವೃತ್ತಿನೇ ಹೆಚ್ಚಾಗಿರುವುದರಿಂದ ಸುದ್ದಿ ವಿಚಾರದಲ್ಲಿ ಕ್ವಾಲಿಟಿನೂ ಇಲ್ಲ..ವ್ಯಾಲ್ಯೂನೂ ಇಲ್ಲವಾಗಿದೆ.

ವಸ್ತುನಿಷ್ಟತೆಗಿಂತ ಲಾಭಕ್ಕೆ ಹೆಚ್ಚು ಒತ್ತು..?! 

ಇಂತದ್ದೊಂದು ಅನುಮಾನ ಮೂಡಲು ಕಾರಣ ಅಲ್ಲಿನ ಕೆಲ ವರದಿಗಾರರು, ಸುದ್ದಿ ಮನೆಯೊಳಗೆ ಕೆಲಸ ಮಾಡುವ ಕೆಲವು ಮಾದ್ಯಮ ಮಿತ್ರರು, ಸುದ್ದಿ ಆಯ್ಕೆ ಮತ್ತು ಪ್ರಸಾರದ ವಿಚಾರದಲ್ಲಿ ಅಲ್ಲಿನ ಸಂಪಾದಕೀಯ ಮತ್ತು ಮ್ಯಾನೇಜ್ಮೆಂಟ್ ನ ಧೋರಣೆ ಬಗ್ಗೆ ವ್ಯಕ್ತಪಡಿಸಿದ ಬೇಸರದ ಅಭಿಪ್ರಾಯ. ಇತ್ತೀಚೆಗೆ ಅಂದರೆ ಒಂದು ಐದಾರು ವರ್ಷಗಳಿಂದ ಇತ್ತೀಚೆಗೆ ಟಿವಿ9ನಲ್ಲಿ ಪ್ರಸಾರವಾಗುವ ಸುದ್ದಿಗಳ ಗುಣಮಟ್ಟವೇ ಕಳೆದೋಗಿದೆ. ಮೊದಲೆಲ್ಲಾ ಎಕ್ಸ್ ಕ್ಲ್ಯೂಸಿವ್ ಸುದ್ದಿಗಳ ಹೆಡ್ ಕ್ವಾರ್ಟರ್ಸ್‌ ಅಂತನೇ ಟಿವಿ9 ಕರೆಯಿಸಿಕೊಳ್ಳುತ್ತಿತ್ತು. ಆದರೆ ವ್ಯವಹಾರಿಕವಾಗಿ ಆಲೋಚಿಸುವಂಥವರು ಆಯಕಟ್ಟಿನ ಸ್ಥಳಗಳಲ್ಲಿ ವಕ್ಕರಿಸಿದರೋ ಆಗಿನಿಂದಲೇ ಸುದ್ದಿಗಳ ಗುಣಮಟ್ಟ ಎಕ್ಕುಟ್ಟಿಹೋಯ್ತೆನ್ನುವ ಬೇಸರ, ಟಿವಿ9ನಲ್ಲಿ ಮೊದಲಿಂದಲೂ ಕೆಲಸ ಮಾಡುತ್ತಿರುವ ಮಾದ್ಯಮಮಿತ್ರರದ್ದು. “ಕ್ವಾಲಿಟಿ ನ್ಯೂಸ್ ಗಳನ್ನು ನೋಡಿ ಎಷ್ಟು ವರ್ಷಗಳಾದವೋ ನಮಗೇ ಗೊತ್ತಿಲ್ಲ ಸರ್…ಈಗ ಏನಿದ್ದರೂ  ಸುದ್ದಿಯಿಂದ ಏನಿದೆ ಲಾಭ ಎಂದು ಲೆಕ್ಕ ಹಾಕುವವರ ಜಮಾನ ಸರ್..ನಮ್ಮ ಕಣ್ಣೆದುರೇ ಸುದ್ದಿಗಳಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ನಡೆಯುವ ಅನ್ಯಾಯ-ಅಕ್ರಮಗಳನ್ನು ನೋಡಿದ್ರೆ ಹೊಟ್ಟೆ ಉರಿಯುತ್ತೆ.. ಹೇಗಿದ್ದ ಟಿವಿ9 ಏಕೆ ಹೀಗಾಯ್ತು ಎಂಬ ಬೇಸರ-ನೋವು ಉಂಟಾಗುತ್ತೆ. ಏನೂ ಇಲ್ಲದೆ ನಮ್ಮ ಕಣ್ಮುಂದೆ ಅಡ್ಡಾಡುತ್ತಿದ್ದವರಲ್ಲಿ ಒಂದಷ್ಟು ಜನ ಇವತ್ತು ಕೋಟಿ ಕುಳಗಳಾಗಿ ಮೆರೆಯುತ್ತಿದ್ದಾರೆ. ನಮ್ಮ ಜೀವನ ಮಟ್ಟ ಮಾತ್ರ ಆರಕ್ಕೇರಿಲ್ಲ..ಮೂರಕ್ಕೆ ಇಳಿಯಲಿಲ್ಲ ಎನ್ನುವಂತಾಗಿದೆ” ಎಂದು ಟಿವಿ9ನಲ್ಲಿ ಕೆಲಸ ಮಾಡುತ್ತಿರುವ ಮಾದ್ಯಮ ಮಿತ್ರರು ಅಳಲನ್ನು ತೋಡಿಕೊಳ್ಳುತ್ತಾರೆ. 

ಮೊದಲೇ ಹೇಳಿದಂತೆ ಇತ್ತೀಚೆಗೆ ಒಂದಷ್ಟು ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಸುದ್ದಿ ಗುಣಮಟ್ಟಕ್ಕೆ ಹೇಳಿಕೊಳ್ಳುವಂತ ಒತ್ತನ್ನೇನು ನೀಡಿದಂತಿಲ್ಲ.ಡೆಸ್ಕ್ ನಲ್ಲಿರುವ ಸುದ್ದಿ ಸಂಪಾದಕರು, ಮುಖ್ಯಸ್ಥರು ಏನು ಹೇಳುತ್ತಾರೋ ಅದೇ ಸುದ್ದಿ ಎನ್ನುವಂತಾಗಿದೆ. ಬ್ರಹಸ್ಪತಿಗಳೆನಿಸಿಕೊಂಡವರು ತೆಗೆದುಕೊಳ್ಳುವ ನಿರ್ದಾರಗಳ ಅನ್ವಯವೇ ಸುದ್ದಿ ಪ್ರಸಾರವಾಗುತ್ತದೆ. ನೆಗೆಟಿವ್ ಆದಂಥ ಸುದ್ದಿಗಳಿಗೆ ಅವಕಾಶವೇ ಇಲ್ಲದಂತಾಗಿದೆ.ಟಿವಿ9 ಪರದೆಯಲ್ಲಿ ಅಕ್ರಮ-ಭ್ರಷ್ಟಾಚಾರದ ಸುದ್ದಿ ನೋಡಿ ಎಷ್ಟೋ ವರ್ಷಗಳೇ ಆಗೋಗಿವೆ.ಒಳ್ಳೆಯ ಸುದ್ದಿಗಳನ್ನು ಟೆಲಿಕಾಸ್ಟ್  ಮಾಡಲಾಗದೆ ತಡೆಹಿಡಿಯಲಾಗುತ್ತಿದೆಯಂತೆ. ವರದಿಗಾರರು ಕೊಡುವ ಎಷ್ಟೋ  ಒಳ್ಳೆಯ ಸುದ್ದಿಗಳು ಬ್ರಹಸ್ಪತಿಗಳ ನಡುವೆ ಚರ್ಚೆಯಾಗಿ ತಿರಸ್ಕ್ರತವಾಗುತ್ತಿವೆಯಂತೆ. ಸ್ಥಳೀಯ ಮ್ಯಾನೇಜ್ಮೆಂಟ್ ತೀರ್ಮಾನ ಮಾಡುವ ಸುದ್ದಿಗಳೇ ಪರದೆ ಮೇಲೆ ಕಾಣಸಿಗುತ್ತದೆ.

ಮೂಲ ಉದ್ದೇಶವನ್ನೇ ಮರೆಯಿತಾ TV9 ಕನ್ನಡ!

ಉತ್ತಮ ಸಮಾಜಕ್ಕಾಗಿ ಎನ್ನುವ ಶೀರ್ಷಿಕೆಯಡಿಯಲ್ಲಿ 2006ರಲ್ಲಿ ಅಸ್ಥಿತ್ವಕ್ಕೆ ಬಂದ ಟಿವಿ9 ಕನ್ನಡಕ್ಕೆ 2 ದಶಕಗಳ ಭವ್ಯ ಇತಿಹಾಸವಿದೆ. ಸುದ್ದಿ  ಮಾದ್ಯಮ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನೇ ಬರೆದಿದ್ದಲ್ಲದೇ ಸುದ್ದಿಯ ಗ್ರಾಮರನ್ನೇ ಬದಲಿಸಿದ ಹೆಗ್ಗಳಿಕೆ ಕೂಡ ಟಿವಿ9ದ್ದು. ಸುದ್ದಿ ಹೀಗೆಯೇ ಇರಬೇಕು ಎನ್ನುವ ಸಿದ್ದಸೂತ್ರಕ್ಕೆ ಆಧುನಿಕತೆಯ ಟಚ್ ಕೊಟ್ಟು ಅದು ಜನರಿಗೆ ಅನಾಯಾಸವಾಗಿ ಹಾಗೂ ಮನಮುಟ್ಟುವಂತೆ ತಲುಪುವುದಕ್ಕೆ ಟಿವಿ9 ಕನ್ನಡವೇ ಕಾರಣ. ಹಾಗಾಗಿನೇ ಟಿವಿ9 ಕನ್ನಡ ಕರ್ನಾಟಕದಲ್ಲಿ ಮನೆ-ಮನಗಳ ಮಾತಾಗಿದ್ದು. ಆನಂತರ ಬಂದ ಸುವರ್ಣ, ಪಬ್ಲಿಕ್, ಈಟಿವಿ ನ್ಯೂಸ್, ಸಮಯ, ಜನಶ್ರೀ, ದಿಗ್ವಿಜಯ, ರಿಪಬ್ಲಿಕ್ ಸೇರಿದಂತೆ ಯಾವೊಂದು  ಚಾನೆಲ್ ಗಳು ದಶಕಗಳವರೆಗೂ  ಕೂಡ ಟಿಆರ್ ಪಿಯಲ್ಲಿ ಟಿವಿ9 ಕನ್ನಡದ ಹತ್ತಿರಕ್ಕೂ ಬರಲು ಸಾಧ್ಯವಾಗಲಿಲ್ಲ. ಯಾವ ಚಾನೆಲ್ ಗಳು ಎಷ್ಟೇ ದೊಡ್ಡ ಹಾಗೂ ಸ್ಪೋಟಕ ಎನ್ನುವಂತ ಸುದ್ದಿ ಕೊಟ್ಟರೂ ವೀಕ್ಷಕರು ಅದು ಟಿವಿ9 ಕನ್ನಡದಲ್ಲಿ ಬಂದರೇನೇ ಸತ್ಯ ಎನ್ನುವಷ್ಟರ ಮಟ್ಟಿಗೆ ಚಾನೆಲ್ ನ್ನು ತಮ್ಮ ತಲೆಯ ಮೇಲೆ ಹೊತ್ತು ತಿರುಗುತ್ತಿದ್ದರು.ಮನಸಲ್ಲಿ ಉಳಿಸಿಕೊಂಡಿದ್ದರು.

ಆದರೆ ಅದೇ ಭ್ರಮೆಯಲ್ಲಿದ್ದ ಟಿವಿ9 ಕನ್ನಡಕ್ಕೆ ಜ್ಞಾನೋದಯವಾಗಿದ್ದು ಇತ್ತೀಚಿನ ವರ್ಷಗಳಲ್ಲಿ. ಟಿವಿ9ಗಿಂತ ಮುನ್ನವೇ ಸಣ್ಣಪುಟ್ಟ ಚಾನೆಲ್ ಗಳೆಲ್ಲಾ ಬ್ರೇಕಿಂಗ್-ಎಕ್ಸ್ ಕ್ಲ್ಯೂಸಿವ್ ನ್ಯೂಸ್ ನೀಡಲಾರಂಭಿಸಿದ್ವು.ಇದೇ ಕಾರಣಕ್ಕೇನೋ, ಯಾವುದೇ ಚಾನೆಲ್ ಇರಲಿ, ಮೊದಲು ಸುದ್ದಿ ಎನ್ನೋದು ಟಿವಿ9ನಲ್ಲಿಯೇ ಬರಬೇಕೆಂದು ಬಯಸಿ ಅದಕ್ಕಷ್ಟೇ ಕೊಡುತ್ತಿದ್ದ ಜನರು ಕೂಡ ತಮ್ಮ ನಿಲುವು ಬದಲಿಸಿ ಟಿವಿ9ಗಿಂತ ಮುನ್ನವೇ ಬೇರೆ ಚಾನೆಲ್ ಗಳಿಗೆ ನೀಡಲಾರಂಭಿಸಿದ್ರು. ಟಿವಿ9 ಕನ್ನಡ ಅಷ್ಟೇ ಅಲ್ಲ, ಬೇರೆ ಚಾನೆಲ್ ಗಳಲ್ಲಿ ಸುದ್ದಿ ಪ್ರಸಾರವಾದರೂ ಇಂಪ್ಯಾಕ್ಟ್ ಆಗುತ್ತದೆನ್ನುವುದನ್ನು ವೀಕ್ಷಕರು ಅರ್ಥ ಮಾಡಿಕೊಂಡ್ರು. ಹಾಗಾಗಿಯೇ ಅದೆಷ್ಟೋ ಶೇಕಡಾವಾರು ವೀಕ್ಷಕರು ಬೇರೆ ಚಾನೆಲ್ ಗಳಿಗೆ ಡೈವರ್ಟ್ ಆದ್ರು. ಅದರ ಪರಿಣಾಮ ಟಿಆರ್ ಪಿಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿತ್ತು.

ALSO READ :  ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

ಕಾಗೆ ಕಷ್ಟಪಟ್ಟು ಕಟ್ಟುವ ಗೂಡಲ್ಲಿ ಕೋಗಿಲೆ ವಾಸ ಮಾಡಿತು ಎನ್ನುವ ಗಾಧೆ ನೆನಪಿಸುತ್ತದೆ ಟಿವಿ9 ಕನ್ನಡದ ಸಧ್ಯದ ಸ್ಥಿತಿ. ವಿದ್ಯುನ್ಮಾನ ಮಾದ್ಯಮಕ್ಕೆ ಓಂಕಾರ-ಶ್ರೀಕಾರ ಎಲ್ಲವನ್ನು ಹಾಡಿದ ಮಹೇಂದ್ರ ಮಿಶ್ರಾ ಎನ್ನುವ ದಿಗ್ಗಜ ಕಟ್ಟಿದ ಟಿವಿ9 ಕನ್ನಡವನ್ನು ಚಾನೆಲ್ ನ ಕೇಂದ್ರದ ಮ್ಯಾನೇಜ್ಮೆಂಟ್, “ಮಾದ್ಯಮ”ದ ಗಂಧಗಾಳಿಯೇ ಗೊತ್ತಿಲ್ಲದ, ಕನ್ನಡ ನೆಲದ ಸುದ್ದಿಯ ಸೂಕ್ಷ್ಮ-ಸೊಗಡನ್ನೇ ಅರಿಯದ ಕೆಲವರ ಕೈಗೆ ಕೊಟ್ಟ ಪರಿಣಾಮವೇ ಇವತ್ತು ತೀವ್ರ ಹಿನ್ನಡೆ ಅನುಭವಿಸುವಂತಾಗಿದೆ. ಕೆಲವೇ ಕೆಲವರ ಕಪಿಮುಷ್ಠಿಯಲ್ಲಿ ಚಾನೆಲ್ ನ ಗುಣಮಟ್ಟ ನಲುಗಿ ಹೋಗುತ್ತಿದೆಯಂತೆ. ಸುದ್ದಿ ಮನೆಯಲ್ಲಿ ಕೆಲಸ ಮಾಡುತ್ತಿರುವ ವೃತ್ತಿನಿಷ್ಟರು ಅಷ್ಟೇ ಬದ್ಧತೆಯಲ್ಲಿ ಕೆಲಸ ಮಾಡುತ್ತಿದ್ದರೆ, ಚಾನೆಲ್ ನ ಗುಡ್ ವಿಲ್ ನ್ನು ಅಡವಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಕೆಲವರು ಮಾತ್ರ ಕೊಬ್ಬಿ ಹೋಗಿದ್ದಾರಂತೆ. ಮ್ಯಾನೇಜ್ಮೆಂಟ್ ನಲ್ಲಿರುವವರನ್ನು ಅಡ್ಜೆಸ್ಟ್-ಮ್ಯಾನೇಜ್ಮೆಂಟ್ ಮಾಡಿಕೊಂಡರೆ ಟಿವಿ 9 ಕನ್ನಡದಲ್ಲಿ ಏನ್ ಬೇಕಾದ್ರೂ ಆಗಬಹುದು ಎನ್ನುವ ಮಾತು ಸುದ್ದಿಸಂತೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ( ಟಿವಿ9 ನಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರ ಆಸ್ತಿ-ಗಳಿಕೆ-ಸಂಪಾದನೆಯ ಬಗ್ಗೆ ತನಿಖೆಯಾದರೆ ಯಾರ್ಯಾರು ಎಷ್ಟೆಷ್ಟು ಕೋಟಿಗಿದ್ದಾರೆ..ಎಲ್ಲೆಲ್ಲಿ ಬಂಗಲೆ-ಸೈಟ್-ಜಮೀನು ಮಾಡಿಕೊಂಡು ಆರಾಮಾಗಿದ್ದಾರೆ ಎನ್ನುವ ಸತ್ಯ ಬಯಲಾಗಬಹುದೇನೋ..? ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವುದೇ ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. 

ಮಹೇಂದ್ರ ಮಿಶ್ರಾ ಟಿವಿ9 ಸಂಸ್ಥಾಪಕ

ಕೆಲವರು ಎಂಜಾಯ್ ಮಾಡ್ತಿರುವ ಇಂದಿನ ವೈಭೋಗ, ಮಹೇಂದ್ರ ಮಿಶ್ರಾ ಅಂಡ್ ಟೀಮ್ ನ ಭಿಕ್ಷೆ..!

.ಟಿವಿ9 ಕನ್ನಡ ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣವೇ ವಿದ್ಯುನ್ಮಾನ ಜಗತ್ತಿನ ಮಾಂತ್ರಿಕ ಮಹೇಂದ್ರ ಮಿಶ್ರಾ. ಡಿಡಿ ಚಂದನ, ಈ ಟಿವಿಯಲ್ಲಿ ಬರುತ್ತಿದ್ದ ಸುದ್ದಿಯನ್ನೇ ನ್ಯೂಸ್ ಎಂದು ನಂಬುತ್ತಿದ್ದ ಕಾಲಕ್ಕೆ ಹಿಂದಿ ಚಾನೆಲ್ ಗಳಲ್ಲಿ ಕೆಲಸ ಮಾಡಿದ್ದ ಅನುಭವಿ ಮಹೇದ್ರ ಮಿಶ್ರಾ ಕನ್ನಡ ಸುದ್ದಿ ಜಗತ್ತಿನಲ್ಲಿ ಕ್ರಾಂತಿ ಮಾಡ್ಲಿಕ್ಕೆಂದೇ ನಿರ್ದರಿಸಿದ್ದರು. ಸುದ್ದಿಯ ಗ್ರಾಮರನ್ನೇ ಬದಲಿಸಲು ನಿರ್ದರಿಸಿದ್ದ ಮಿಶ್ರಾಗೆ ಸಾಥ್ ಕೊಟ್ಟಿದ್ದು ಶಿವಶಂಕರ್ ಎನ್ನುವ ಇನ್ನೊಬ್ಬ ದಿಗ್ಗಜ. ಅವರೊಂದಿಗೆ ರವಿಕುಮಾರ್, ಮಾರುತಿ, ಮನೋಜ್, ದಿವಾಕರ್,ಎಂಎಸ್ ರಾಘವೇಂದ್ರ, ಪ್ರಸನ್ನ ಲೂಯಿಸ್..ಲಕ್ಷ್ಮಣ ಹೂಗಾರ್..ಹೀಗೆ ಅನುಭವಿಗಳ ದೊಡ್ಡ ತಂಡವೇ ಬೆನ್ನಿಗಿತ್ತು. ಇವರೆಲ್ಲರ ಪರಿಶ್ರಮದಿಂದಲೇ ಟಿವಿ9 ಕನ್ನಡ ಪ್ರಾರಂಭವಾಯ್ತು.ನಿರೀಕ್ಷೆಯಂತೆಯೇ ಕೆಲವೇ ದಿನಗಳಲ್ಲಿ ಕರ್ನಾಟಕಾದ್ಯಂತ ಮನೆ ಮಾತಾಯ್ತು. ಅಲ್ಲಿಂದ ಆರಂಭವಾದ ವಿಜಯದ ದಿಗ್ವಿಜಯ ಯಾತ್ರೆ ಮೊನ್ನೆಮೊನ್ನೆಯವರೆಗೂ ಸಾಗಿಯೇ ಬಂದಿತ್ತು. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಟಿವಿ9 ಮ್ಯಾನೇಜ್ಮೆಂಟ್ ನಲ್ಲಿ ಆದ ಬದಲಾವಣೆಗಳು ಟಿವಿ9 ಕನ್ನಡಕ್ಕಂತೂ ಸಕಾರಾತ್ಮಕವಾಗಿರಲೇ ಇಲ್ಲ.ಟಿವಿ9 ಕನ್ನಡದ ಪರಿಸ್ತಿತಿ ಎಷ್ಟು ಕೆಟ್ಟದಾಗಿತ್ತೆಂದರೆ ಕೇಂದ್ರದ ಮ್ಯಾನೇಜ್ಮೆಂಟನ್ನೇ ಯಾಮಾರಿಸುವಂಥ ಕೆಲವು ಪ್ರಳಯಾಂತಕರು ಕೋರ್ ಟೀಮ್ ನಲ್ಲಿದ್ದಾರೆ.ಅವರು ಹೇಳಿದ್ದನ್ನೇ ಮ್ಯಾನೇಜ್ಮೆಂಟ್ ಕೂಡ ಕೇಳಿಕೊಂಡು ಮಕ್ಕಾರ್ ಆಗ್ತಿದೆಯಂತೆ.

ಸುದ್ದಿ ವಿಷಯದಲ್ಲಿ ಟಿವಿ9 ಕನ್ನಡ ವಿಶ್ವಾಸಾರ್ಹತೆ ಕಳೆದುಕೊಳ್ಳಲು ಮುಖ್ಯ ಕಾರಣವೇ ಆಡಳಿತದೊಳಗಿರುವ ಅವ್ಯವಸ್ಥೆ.ಭಾಷೆ ಬಾರದವರನ್ನು ಹೇಗೆಲ್ಲಾ ಯಾಮಾರಿಸ್ಬೇಕೆನ್ನುವುದು ಇಲ್ಲಿರುವವರಿಗೆ ಚೆನ್ನಾಗಿ ಗೊತ್ತು.ಮ್ಯಾನೇಜ್ಮೆಂಟ್ ಕೂಡ ಇದನ್ನು ಕ್ರಾಸ್ ಚೆಕ್ ಮಾಡಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲವಂತೆ.ಟಿಆರ್ ಪಿಯಲ್ಲಿ ಪತನ ಕಂಡರೂ ಜನ ನಮ್ಮನ್ನು ನಂಬರ್1 ಎಂದು ನಿರ್ದರಿಸಿಯಾದ ಮೇಲೆ ಯಾರೇನು ಮಾಡ್ಲಿಕ್ಕಾಗುತ್ತೆ..ಬಿಡಿ ತಲೆಕೆಡಿಸಿಕೊಳ್ಳಬೇಡಿ ಎನ್ನುವ ಫರ್ಮಾನ್ ನ್ನು ಮ್ಯಾನೇಜ್ಮೆಂಟ್ ಹೊರಡಿಸಿರುವುದರಿಂದಲೇ ಚಾನೆಲ್ ದಿನಕಳೆದಂತೆಲ್ಲಾ ಪತನದತ್ತ ಹೊರಳುತ್ತಿದೆ ಎನ್ನುವುದು ಸುದ್ದಿ ಮನೆಯಲ್ಲಿ ಕೆಲಸ ಮಾಡುತ್ತಿರುವ ಸುದ್ದಿ ಮಿತ್ರರ ಅಳಲು.

ಟಿವಿ9 ಕೇಂದ್ರ ಮ್ಯಾನೇಜ್ಮೆಂಟ್ ಟಿಆರ್ ಪಿ ಕುಸಿತವನ್ನೆಲ್ಲಾ ಗಮನಿಸೋದಿಲ್ವಾ..?!

ಟಿವಿ9 ನಲ್ಲಿ ಕೆಲಸ ಮಾಡುತ್ತಿರುವ ಮಾದ್ಯಮಮಿತ್ರರೇ ಇಂತದ್ದೊಂದು ಪ್ರಶ್ನೆ ಮಾಡ್ತಾರೆ. ಕರ್ನಾಟಕದಲ್ಲಿ ಟಿವಿ9 ಶಾಶ್ವತಕ್ಕೂ ನಂಬರ್ 1 ಆಗಿಯೇ ಇರಬೇಕೆನ್ನುವುದು ಅಲಿಖಿತ ನಿಯಮವಾಗಿದ್ದ ಕಾಲವೊಂದಿತ್ತು. ಚಾನೆಲ್  ಕಟ್ಟಿದ ದಶಕದವರೆಗೂ ಆಳಿದ  ಮಹೇಂದ್ರಮಿಶ್ರಾಗೆ ಅಷ್ಟೇ ಚೆನ್ನಾಗಿ ಸಾಥ್ ಕೊಟ್ಟಿದ್ದರು ಮಾರುತಿ,ರವಿಕುಮಾರ್. ಆದರೆ  ಮಾರುತಿ,ರವಿಕುಮಾರ್ ಜೋಡಿ ಚಾನೆಲ್ ನಿಂದ ಹೊರಬಿದ್ದಿದ್ದೇ ಬಿದ್ದಿದ್ದು ಟಿವಿ9 ಹೇಳೋರಿಲ್ಲ..ಕೇಳೋರಿಲ್ಲದಂತಾಯ್ತು. ಒಡೆಯನಿಲ್ಲದ ಮನೆಯಂತಾಯ್ತು. ಉಸ್ತುವಾರಿ ನೋಡಿಕೊಳ್ಳಲಿಕ್ಕಂತ ಬಂದವರಿಗೆ ಚಾನೆಲ್ ನಡೆಸೋದು ಗೊತ್ತಿರಲಿಲ್ಲವೋ..ಅಥವಾ ಇಲ್ಲಿದ್ದ ಬ್ರಹಸ್ಪತಿಗಳು ಅವರನ್ನು ಯಾಮಾರಿಸ್ತಾ ಬಂದರೋ ಗೊತ್ತಿಲ್ಲ, ಟಿವಿ9 ಕನ್ನಡ ಎಲ್ಲಾ ರೀತಿಯಲ್ಲೂ ಪತನ ಕಾಣಲಾರಂಭಿಸ್ತು.

ಮಾರುತಿ,ರವಿಕುಮಾರ್ ಅವರ ಬಗ್ಗೆ ಎಷ್ಟೇ ಆರೋಪಗಳಿರಬಹುದು,ಆಕ್ಷೇಪಗಳಿರಬಹುದು ಆದರೆ ಟಿವಿ9 ಎನ್ನುವ ಸಂಸ್ಥೆಯನ್ನು ಹೇಗೆ ನಡೆಸಬೇಕು..ಎಂಥಾ ಸುದ್ದಿಗಳನ್ನು ನೀಡಬೇಕೆನ್ನುವ ನ್ಯೂಸ್ ಸೆನ್ಸ್ ಇತ್ತು.ವೀಕ್ಷಕರ ನಾಡಿ ಜತೆಗೆ ಅವರ ಅಭಿರುಚಿಯನ್ನ ಚೆನ್ನಾಗಿ ಬಲ್ಲವರಾಗಿದ್ದರು. ಹಾಗಾಗಿ ಮಿಶ್ರಾನಂಥ ಮಾದ್ಯಮ ದಿಗ್ಗಜ ಚಾನೆಲ್ ನಿಂದ ಹೊರಬಿದ್ದ ಮೇಲೂ ಅದರ ಜನಪ್ರಿಯತೆ-ವಿಶ್ವಾಸಾರ್ಹತೆಗೆ ಸಣ್ಣ ಸೋಂಕು ತಗುಲದಂತೆ ಜತನದಿಂದ ಕಾಯ್ದುಕೊಂಡು ಬಂದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.ಆದರೆ ದುರಂತ ನೋಡಿ ಟಿವಿ9 ಗೆ ಕರ್ನಾಟಕದಲ್ಲಿ ಒಂದು ಚಾರ್ಮ್ ಕೊಟ್ಟ ಅವರಿಬ್ಬರನ್ನು ಮ್ಯಾನೇಜ್ಮೆಂಟ್ ಅತ್ಯಂತ ನಿರ್ದಯತೆಯಿಂದ ಹೊರದೂಡಿತು.ತಮಗಾದ ಅವಮಾನಕ್ಕೆ  ನ್ಯೂಸ್ ಫಸ್ಟ್ ಚಾನೆಲ್ ಕಟ್ಟಿ ಯಶಸ್ವಿಯಾಗುವ  ಮೂಲಕ ತಕ್ಕ ಉತ್ತರ ನೀಡಿದ್ದು ಕೂಡ ಕಡಿಮೆ ಸಾಧನೆಯೇನಲ್ಲ.

ಪ್ರಶ್ನೆ ಇರೋದು ಹೇಗಿದ್ದ ಚಾನೆಲ್ ನ್ನು ಹೇಗೆಲ್ಲಾ ಹಾಳು ಮಾಡಿ,ಆದ್ವಾನಗೊಳಿಸಿರುವ ಅಪಖ್ಯಾತಿ ಸಧ್ಯಕ್ಕೆ ಚಾನೆಲ್ ನ ಉಸ್ತುವಾರಿ ನೋಡಿಕೊಳ್ಳುತ್ತಿರುವವರಿಗೆ ಸಲ್ಲಲೇಬೇಕು.ಒಂದೆರೆಡು ವಾರಗಳಲ್ಲ, ತಿಂಗಳುಗಳವರೆಗೂ ಟಿವಿ9 ಟಿಆರ್ ಪಿಯಲ್ಲಿ ನಿರಂತರ ಪತನ ಕಾಣುತ್ತಿದ್ದರೂ ಇದಕ್ಕೆ ಕಾರಣ ಹುಡುಕಿ,ಅದಕ್ಕೆ ಕಾರಣವಾದವರನ್ನು ಮುಲಾಜಿಲ್ಲದೆ ಕತ್ತಿಡಿದು ತಳ್ಳುವ ಕೆಲಸವನ್ನು ಮ್ಯಾನೇಜ್ಮೆಂಟ್ ಮಾಡಬೇಕಿತ್ತು.ಆದರೆ ಆ ಕೆಲಸ ಈವರೆಗೂ ನಡೆದೇ ಇಲ್ಲವಂತೆ.ನಿಷ್ಟೆ-ಬದ್ಧತೆ-ಪ್ರಾಮಾಣಿಕತೆಯಿಂದ  ಕೆಲಸ ಮಾಡುವವರು ಇವತ್ತಿಗೂ ಕತ್ತೆಗಳಂತೆ ದುಡಿಯುತ್ತಲೇ ಇದ್ದಾರೆ. ಹಾಗೆಯೇ ಮ್ಯಾನೇಜ್ಮೆಂಟ್ ಲೆವಲ್ ನಲ್ಲಿ ಬಕೆಟ್-ಸಿಂಟೆಕ್ಸ್ ಹಿಡಿಯುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಬಂದಿರುವ ಅದೆಷ್ಟೋ ನಾಲಾಯಕ್ ಗಳ ಸ್ಥಾನಮಾನದಲ್ಲಿ ನಯಾಪೈಸೆ ಪಲ್ಲಟವಾಗಿಲ್ಲ.ಯಾರಿಗೆ ಏನೆಲ್ಲಾ ತಲುಪಿಸಬೇಕೋ..ಅದನ್ನು ತಲುಪಿಸಿ ತಾವು  ಎಲ್ಲಾ ರೀತಿಯಲ್ಲೂ ಸೇಫ್ ಆಗುವ ಕೆಲಸ ಸಾಕಷ್ಟು ಜನರಿಂದ ನಡೆಯುತ್ತಿದೆ ಎನ್ನುವ ನೋವು ಪಾಪ ಅದೆಷ್ಟೋ ಪ್ರಾಮಾಣಿಕ ಪತ್ರಕರ್ತರದ್ದು.

ಇದನ್ನೂ ಓದಿ | ನ್ಯೂಸ್‌ 18 ಗೆ ಬಿಗ್ ಶಾಕ್- ಪಬ್ಲಿಕ್‌ ಟಿವಿ ನಂಬರ್‌ 1, 3ನೇ ಸ್ಥಾನಕ್ಕೆ ತಳ್ಳಲ್ಪಟ್ಟ ಟಿವಿ9, ಸುವರ್ಣ ನ್ಯೂಸ್‌ ಕಳಪೆ ಪ್ರದರ್ಶನ..

ಅಳಿದುಳಿದಿರುವ ಗುಣಮಟ್ಟಕ್ಕೆ ನಿಷ್ಟ-ಪ್ರಾಮಾಣಿಕ ಸಿಬ್ಬಂದಿಯ ಬೆವರಿನ ಶ್ರಮವೇ ಕಾರಣ 

ಟಿವಿ9 ಕನ್ನಡದ ಟಿಆರ್ ಪಿ(TELE RATING POINT)ಕುಸಿತ ಕಂಡಿದೆ ಎಂದಾಕ್ಷಣ ಅದಕ್ಕೆ ಇಡೀ ಚಾನೆಲ್ ನ್ನು ಆಪಾದಿಸುವುದು ತಪ್ಪು.ಸುದ್ದಿ ಮನೆಯಲ್ಲಿ ನಿಷ್ಟೆ-ಪ್ರಾಮಾಣಿಕತೆಯಿಂದ ದುಡಿಯುತ್ತಿರುವವರ ಬೆವರಿನ ಶ್ರಮದಿಂದಲೇ ಟಿವಿ9 ಚಾನೆಲ್ ಅಲ್ಪಸ್ವಲ್ಪ ಪ್ರಮಾಣದ ಗುಣಮಟ್ಟ ಉಳಿಸಿಕೊಂಡಿದೆ.ಆದರೆ ಕೆಲವರ ಹೆಗಲ ಮೇಲೆ ಸುದ್ದಿಯ ಜವಾಬ್ದಾರಿ ಕೊಟ್ಟು ಲಾಭ ಬೇರೆಯವರು ಮಾಡಿಕೊಳ್ಳುತ್ತಿದ್ದಾರೆನ್ನುವುದೇ  ಬೇಸರಕ್ಕೆ ಕಾರಣವಂತೆ.ಆದರೆ ಮೇಜರ್ ಸರ್ಜರಿ ಆಗದೇ ಹೋದರೆ ಅಳಿದುಳಿದ ಚಾನೆಲ್ ಗಳೂ ಟಿವಿ9 ಕನ್ನಡವನ್ನು ಹಿಂದಿಕ್ಕುವುದರಲ್ಲಿ ಅನುಮಾನವೇ ಇಲ್ಲ.ಏಕೆಂದರೆ ಸುದ್ದಿ ವಿಚಾರದಲ್ಲಿ ಎಷ್ಟೋ ಚಾನೆಲ್ ಗಳು ಟಿವಿ9 ಕನ್ನಡಕ್ಕಿಂತ ಮುನ್ನವೇ ಸುದ್ದಿಯನ್ನು ಬ್ರೇಕ್ ಮಾಡಲಾರಂಭಿಸಿವೆ.ಸುದ್ದಿ ವಿಚಾರದಲ್ಲಿ ನ್ಯಾಯ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಎಷ್ಟೋ ಸುದ್ದಿ ಮೂಲಗಳು ಹಾಗೂ ನಾಗರಿಕರು ಟಿವಿ9 ಗೆ ಪರ್ಯಾಯವಾಗಿ ಬೇರೆ ಚಾನೆಲ್ ಗಳತ್ತ ವಾಲುತ್ತಿದ್ದಾರೆ.ಇದು ಟಿವಿ9 ಕನ್ನಡದ ತೆರೆ ಮೇಲೆ ಎದ್ದು ಕಾಣುತ್ತಿದೆ ಕೂಡ. ಟಿವಿ9 ಕನ್ನಡ ಸುದ್ದಿ ವಿಚಾರದಲ್ಲಿ ದಿನೇ ದಿನೇ ಸೊರಗುತ್ತಿರುವುದಕ್ಕೆ..ಸೋತು ಹೋಗಲು ಬೆಂಗಳೂರಿನ ಕಚೇರಿಯ ಮೇಲೆ ಕೇಂದ್ರದ ಮ್ಯಾನೇಜ್ಮೆಂಟ್ ನಿಯಂತ್ರಣ ಸಾಧಿಸುವಲ್ಲಿ ವಿಫಲವಾಗಿರುವುದೇ ಕಾರಣ ಎನ್ನಲಾಗುತ್ತಿದೆ.

ಟಿಆರ್ ಪಿ ಯಲ್ಲಿ ಎಷ್ಟೇ ಕುಸಿತ ಕಂಡರೂ ಜನರ ದೃಷ್ಟಿಯಲ್ಲಿ ನಾವೇ ಯಾವತ್ತಿದ್ರೂ ನಂಬರ್ 1 ಎಂಬ ಭ್ರಮೆಯನ್ನು ಕಳಚಿ, ಕರ್ನಾಟಕದ ಟೀಮ್ ಹೇಳಿದ್ದನ್ನೇ ಸತ್ಯ ಎಂದು ನಂಬುವುದನ್ನು ಬಿಟ್ಟು ಒಂದು ಅಮೂಲಾಗ್ರ ಬದಲಾವಣೆಯನ್ನು ಕೇಂದ್ರದ  ಮ್ಯಾನೇಜ್ಮೆಂಟ್ ಮಾಡದೆ ಹೋದರೆ ವ್ಯವಸ್ಥೆ ಬದಲಾಗಲು ಸಾಧ್ಯವೇ ಇಲ್ಲ..ಟಿವಿ 9 ಕನ್ನಡವನ್ನು ತಮ್ಮ ಸ್ವಾರ್ಥಕ್ಕೆ, ಹಿತಾಸಕ್ತಿಗೆ,ಬೇಳೆ ಬೇಯಿಸಿಕೊಳ್ಳೊಕ್ಕೆ ಅಡವಿಡುತ್ತಾ ಬಂದಿರುವವರನ್ನು ಚಾನೆಲ್ ನ ಹಿತದೃಷ್ಟಿಯಿಂದ ಇನ್ನಾದ್ರೂ ಮ್ಯಾನೇಜ್ಮೆಂಟ್ ಕಿತ್ತು ಬಿಸಾಕದೇ ಹೋದಲ್ಲಿ  ಟಿವಿ9 ಕನ್ನಡ ಇನ್ನೊಂದಷ್ಟು ವರ್ಷಗಳಲ್ಲಿ ಯಾವ ಸ್ಥಿತಿ ತಲುಪಿರುತ್ತೋ ಗೊತ್ತಿಲ್ಲ..ವೈಭವದಿಂದ ಮೆರೆದ ಚಾನೆಲ್ ಈ ರೀತಿ ಪತನ ಕಾಣಬಾರದೆನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಹಾರೈಕೆ-ಅರಕೆ ಕೂಡ.


Political News

ತಮಿಳುನಾಡು ಮತದಾರರ ಪಟ್ಟಿಯಲ್ಲಿ ಭಾರಿ ಕಡಿತ; 74 ಲಕ್ಷ ಮತದಾರರ ಹೆಸರು ನಾಪತ್ತೆ!

ವಿಧಾನಸೌಧಕ್ಕೆ ನಿರ್ಬಂಧ ಹೇರಿದ್ರೂ ಮಾದ್ಯಮಗಳೇಕೆ ಮೌನ? ನಿದ್ರೆಯಲ್ಲಿದೆಯಾ ಸಂಘ-ಕ್ಲಬ್..

ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ: 5 ಲಕ್ಷ ಲಂಚ ಪಡೆಯುವಾಗ ಅರೆಸ್ಟ್!

ಟ್ರಂಪ್‌ ಆರ್ಥಿಕ ಸಂಘರ್ಷ: ಸುಪ್ರೀಂ ಕೋರ್ಟ್ ತಡೆ ನಡುವೆಯೂ ಶೇ.10ರಷ್ಟು ಆಮದು ಸುಂಕ ಜಾರಿ!

“ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ” ಟ್ರಂಪ್ ಹೇಳಿಕೆ

ಎಐ ಶೃಂಗಸಭೆಯಲ್ಲಿ ಹೈಡ್ರಾಮಾ: ಅರೆಬೆತ್ತಲೆ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು!

ವಿಕ್ಟೋರಿಯಾ(ನೆಫ್ರೋ) ಆಸ್ಪತ್ರೆಯ “ಯಮರೂಪಿ” ವೈದ್ಯರ ನಿರ್ಲಕ್ಷ್ಯಕ್ಕೆ ಜೀವಂತ “ಶವ” ವಾದ ರಂಜಿತ್!

“ಧರ್ಮಪತ್ನಿ”ಯ ಕಂಪೆನಿ ವಿರುದ್ಧ “ಭ್ರಷ್ಟಾಚಾರ”ದ ಆರೋಪ..ಸುವರ್ಣನ್ಯೂಸ್‌ ಸಂಪಾದಕ ಅಜಿತ್‌ ಹನುಮಕ್ಕನವರ್‌  ಗೆ  “ಮುಜುಗರ”..!?

Scroll to Top