ಡೋಂಟ್ ಮಿಸ್ ಇಟ್… ಅರಚೋದು..ಅಬ್ಬರಿಸೋದು-ವಿಷಯವನ್ನು ವಿಕೃತಗೊಳಿಸುವುದೇ ಆಂಕರಿಂಗ್ ಎನ್ನುವ ಲೆಕ್ಕಾಚಾರಕ್ಕೆ ಅಪವಾದದಂತಿದ್ದ ವಿದ್ಯಾ ಮಲ್ನಾಡ್ ನಿರೂಪಣೆ..


ಬೆಂಗಳೂರು:ಇನ್ನೊಬ್ಬರ ಮನೆ-ಸಂಸಾರ, ವೈಯುಕ್ತಿಕ ವಿಷಯವನ್ನೇ ಟಿಆರ್ ಪಿ ಗೋಸ್ಕರ ಬಂಡವಾಳವಾ ಗಿಸಿಕೊಂಡು ಬೇಳೆ ಬೇಯಿಸಿಕೊಳ್ಳುವುದೇ ಬಹುತೇಕ ಮಾದ್ಯಮಗಳ ಕಸುಬಾಗಿ ಹೋಗಿದೆ.ಇದು ಸಾರ್ವಜನಿಕ ವಲಯದಲ್ಲಿ ಮಾದ್ಯಮಗಳ ಬಗ್ಗೆ ಛೀ..ಥೂ ಎಂದು ಉಗಿಯುವ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿರುವುದು ದುರಂತ.( ನ್ಯೂಸ್ ಚಾನೆಲ್ ಗಳಲ್ಲಿ ಬಹುತೇಕ ಇಂಥದ್ದೇ ಮನೆಹಾಳು ಮಾಡುವ ಸುದ್ದಿಗಳೇ ಬರುತ್ತಿರುವುದರಿಂದ ಪಾಪ…ಇದನ್ನು ಬಿಟ್ಟು ಬೇರೆ ನೋಡಬೇಕಾದ ಪರ್ಯಾಯ ಆಯ್ಕೆಯೇ ವೀಕ್ಷಕರಿಗೆ ಸಿಗುತ್ತಿಲ್ಲ).
ಟಿವಿಗಳವರು ನಮ್ಮ ಸಮಸ್ಯೆ ಬಗೆಹರಿಸುತ್ತಾರೆ.ಅಲ್ಲಿಗೆ ಹೋದರೆ ನಮ್ಮ ಸಮಸ್ಯೆಗೆಲ್ಲಾ ಮುಕ್ತಿ ಸಿಕ್ಕಿ ಬಿಡುತ್ತದೆನ್ನುವ ಹುಚ್ಚು ಭ್ರಮೆಯಿಂದ ಜನರೂ ಹೊರಬಂದಂತೆ ಕಾಣ್ತಿಲ್ಲ. ಏಕೆಂದರೆ ಟಿವಿ ಚಾನೆಲ್ ನಲ್ಲಿ ಬಿತ್ತರವಾದ ಯಾವ ಬೀದಿಗೆ ಬಿದ್ದ ರಂಪಾಟಗಳು ಕೂಡ ಸುಖಾಂತ್ಯ ಕಂಡಿರುವ ನಿದರ್ಶನಗಳೇ ಇಲ್ಲ. ನಿಮ್ಮ ಸಮಸ್ಯೆಗೆಲ್ಲಾ ಮುಕ್ತಿ ಕೊಡಿಸುತ್ತೇವೆಂದು ಸುಳ್ಳು ಸೃಷ್ಟಿಸಿ, ಭ್ರಮೆ ಹುಟ್ಟಿಸಿ ಸಂತ್ರಸ್ಥರನ್ನು ಚಾನೆಲ್ ಗೆ ಕರೆತರುವ ಮಾದ್ಯಮಗಳು ಟಿಆರ್ ಪಿಗೋಸ್ಕರ ಮಾಡುತ್ತಿರುವುದೇನು..? ಬಗೆಹರಿಯಬಹುದಾದ ಸಮಸ್ಯೆಗಳನ್ನು ಜಠಿಲಗೊಳಿಸಿ,ಸಂಬಂಧಗಳ ನಡುವೆ ಶಾಶ್ವತವಾಗಿ ಕಂದಕವೊಂದನ್ನು ಸೃಷ್ಟಿಸುವಂತ ಹೀನಾತೀಹೀನ ಕೆಲಸ ಮಾಡ್ತಿರುವುದು ಕೂಡ ಸುಳ್ಳಲ್ಲ.

ಬಹುತೇಕ ಮಾದ್ಯಮಗಳ ಮನಸ್ತಿತಿಯೇ ಪ್ರಕ್ಷುಬ್ದವಾಗಿರುವ ಪರಿಸ್ಥಿತಿಯಲ್ಲಿ ಒಂದು ಮಾದ್ಯಮದ ಮನಸ್ಥಿತಿ ಮತ್ತು ಅಜೆಂಡಾ ಮಾತ್ರ ತೀರಾ ಭಿನ್ನ ಎನಿಸಿದ್ದು ಸುಳ್ಳಲ್ಲ. ಒಂದು ವಿಭಿನ್ನ ಕಾರಣದಿಂದ,ಆರೋಗ್ಯಕರ ವಾತಾವರಣ ಸೃಷ್ಟಿಸುವ ಉದ್ದೇಶದಿಂದ, ಜೀವಪರ-ಮಾನವಪರ ಕಾಳಜಿಯಿಂದಾಗಿ ಗಮನಸೆಳೆಯಿತು..ಎಲ್ಲಾ ವಿಷಯಗಳಲ್ಲೂ ಆ ಮಾದ್ಯಮ ತೆಗೆದುಕೊಳ್ಳುತ್ತಿರಬಹು ದಾದ ಎಲ್ಲಾ ನಿಲುವು-ಧೋರಣೆ ಬಗ್ಗೆ ನಮಗೂ ಸಹಮಿತವಿಲ್ಲದಿರಬಹುದು.ಆದರೆ ಆ ಒಂದು ನಿರ್ದಿಷ್ಟ ಪ್ರಕರಣವನ್ನು ಚಾನೆಲ್ ಕೊಂಡೊಯ್ದ ಬಗೆ- ನಿರೂಪಕಿ ಎನಿಸಿಕೊಂಡಾಕೆ ನಿರೂಪಿಸಿದ ರೀತಿ ನಿಜಕ್ಕೂ ಅತ್ಯದ್ಭುತ ಹಾಗೂ ಅಂತಃಕರಣದಿಂದ ಕೂಡಿತ್ತೆನ್ನುವುದು ಕೂಡ ಸತ್ಯ.ಟಿಆರ್ ಪಿಗಿಂತ ಅಲ್ಲಿ ಬಾಳಿ ಬದುಕಬೇಕಾದ ಜೀವಗಳೇ ಮುಖ್ಯ ಎನ್ನುವ ಆಶಯ ಸಾರುವ-ಉದ್ದೇಶವನ್ನು ಕಾರ್ಯಗತಗೊಳಿಸುವಂತ ಅತ್ಯಂತ ಮಾನವೀಯ ಕಳಕಳಿ ಆ ಮಹಿಳಾ ಆಂಕರ್ ನಲ್ಲಿದ್ದುದು ಸಮಾಧಾನ ತರಿಸಿದ್ದರ ಜತೆಗೆ ಹೆಮ್ಮೆಯನ್ನೂ ಮೂಡಿಸಿತು..ಇಂತದ್ದೊಂದು ಮನುಷ್ಯತ್ವದ ಪರ ನಿಂತ-ಅದಕ್ಕಾಗಿಯೇ ವಾದಿಸಿದ ಆಕೆಗೆ ಒಂದು ಹ್ಯಾಟ್ಯಾಫ್-ಭೇಷ್ ಎನ್ನಲೇಬೇಕು.

ನಾವು ಹೇಳಬೇಕಾದ್ದುದು ಗ್ಯಾರಂಟಿ ನ್ಯೂಸ್ (GUARANTEE NEWS CHANNEL)ಬಗ್ಗೆ.ಯೆಸ್..ಬನ್ನೇರುಘಟ್ಟದ ಫ್ಯಾಮಿಲಿಯೊಂದರ ಸ್ಟೋರಿ ನಿರಂತರವಾಗಿ ವೈರಲ್ ಆಗ್ತಿರುವುದು ಎಲ್ಲರಿಗೂ ಗೊತ್ತಿರೋದೇ.ಧರ್ಮಸ್ಥಳದ ಬುರುಡೆ ಪ್ರಕರಣದ ಹಿಂದೆ ಬಿದ್ದಿದ್ದ ಎಲ್ಲಾ ಮಾದ್ಯಮಗಳ ಆಧ್ಯತೆಯನ್ನೇ ಬದಲಿಸಿ ಎಲ್ಲರ ಕುತೂಹಲವನ್ನು ತನ್ನತ್ತ ಕೇಂದ್ರೀಕರಿ ಸಿಕೊಂಡ ಹೆಗ್ಗಳಿಕೆ ಈ ಸ್ಟೋರಿದು.ಸಪ್ತಪದಿ ತುಳಿದು ಮದುವೆಯಾದ ಗಂಡ,ಆತನಿಂದ ಪಡೆದ ಮುದ್ದಾದ ಮಕ್ಕಳನ್ನೇ ಅಕ್ಷರಶಃ ಧಿಕ್ಕರಿಸಿ ನಡೆವಂತೆ ಮಾಡಿದ ಪರಪುರುಷನೊಂದಿಗಿನ ಅನೈತಿಕ ಸಂಬಂಧ ಹಾಗೂ ಅದು ಸೃಷ್ಟಿಸಿದ ರಾದ್ದಾಂತಗಳ ಸುತ್ತ ಹೆಣೆದುಕೊಂಡಿರುವ ಈ ಸ್ಟೋರಿ ವಾರದಿಂದಲೂ ವೈರಲ್ ಆಗ್ತಿದೆ.ಟಿಆರ್ ಪಿಗಾಗಿ ಏನಾದರೊಂದು ಮಸಾಲ ಐಟಂ ಬೇಕೆನ್ನುವ ಹೀನ-ಕೆಟ್ಟ-ಅನಾರೋಗ್ಯಕರ ಮನಸ್ಥಿತಿಗೆ ಬಂದಿರುವ ಮಾದ್ಯಮಗಳಿಗೆ ರಸಗವಳವಾದ ಪ್ರಕರಣವಿದು.
ದಿನವಿಡೀ ಬೇರೇನೂ ವಿದ್ಯಾಮಾನಗಳೇ ದೊರೆತಿಲ್ಲ ಎನ್ನುವ ರೇಂಜ್ನಲ್ಲಿ ಸೈಕಿಕ್ ಆಗಿ ಸುದ್ದಿ ಪ್ರಸಾರಕ್ಕೆ ಪೈಪೋಟಿ ನಡೆಸಿದ್ವು ನಮ್ಮ ಮಾದ್ಯಮಗಳು.ಒಮ್ಮೆ ಸಂತ್ರಸ್ಥ ಗಂಡನನ್ನು ಕರೆಯಿಸುವುದು, ಸ್ಟುಡಿಯೋದಲ್ಲಿ ಕೂರಿಸುವುದು, ಆತನೊಂದಿಗೆ ಗಂಟೆಟ್ಟಲೇ ಮಾತನಾಡುವುದು, ಮೋಸ ಮಾಡಿ ಹೋದಳೆನ್ನುವ ಹೆಂಡ್ತಿ ಸಂಪರ್ಕಕ್ಕೆ ಯತ್ನಿಸುವುದು,ಸಾಧ್ಯವಾದರೆ ಇಬ್ಬರ ಸಂಪರ್ಕ ಸಾಧಿಸಿ ಅವರಿಬ್ಬರ ನಡುವೆ ಆಗುವ ಮಾತಿನ ಚಕಮಕಿಯನ್ನೇ ಸುದ್ದಿ ಎನ್ನುವ ರೀತಿಯಲ್ಲಿ ಬಿಂಬಿಸಿ ಮಜಾ ಪಡೆಯುವುದು ಅದರ ಮೂಲಕ ಟಿಆರ್ ಪಿಯನ್ನು ಹೆಚ್ಚಿಸಿಕೊಳ್ಳುವುದೇ ಬಹುತೇಕ ಮಾದ್ಯಮಗಳ ಯೋಗ್ಯತೆಯಾಗಿಬಿಟ್ಟಿದೆ.ಅಂತದ್ದರಲ್ಲಿ ಗ್ಯಾರಂಟಿ ನ್ಯೂಸ್( ಬೇರೆ ಸುದ್ದಿಗಳ ವಿಷಯದಲ್ಲಿ ಗ್ಯಾರಂಟಿ ಟಿವಿಯು ಕೂಡ ಇತರೆ ಮಾದ್ಯಮಗಳಂತೆ ಟಿಆರ್ ಪಿ ಹಿಂದೆ ಬಿದ್ದು ಕೆಲಸ ಮಾಡಿರುವುದನ್ನು ಅಲ್ಲಗೆಳೆಯೊಕ್ಕೆ ಸಾಧ್ಯವಿಲ್ಲ). ಒಡೆದು ಹೋದ ಮನಸು-ಛಿದ್ರಗೊಂಡ ಸಂಸಾರ- ಬೀದಿಗೆ ಬಿದ್ದ ಒಂದಿಡೀ ಕುಟುಂಬದ ಬದುಕುಗಳನ್ನು ಸರಿಪಡಿಸಲು ಮಾಡಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಬನ್ನೇರುಘಟ್ಟದ ಆ ಕುಟುಂಬದ ಸ್ಟೋರಿಯನ್ನು ಇತರೆ ಮಾದ್ಯಮಗಳು ಬಿಂಬಿಸಿದ ರೀತಿ, ಪ್ರಸ್ತುತಪಡಿಸಿದ ರೀತಿಗೂ ಗ್ಯಾರಂಟಿ ನ್ಯೂಸ್ ಬಿತ್ತರಿಸಿದ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ.ಒಂದಷ್ಟು ಚಾನೆಲ್ ಗಳು ಹಾದಿರಂಪ ಬೀದಿ ರಂಪವಾಗಿದ್ದ ಆ ಘಟನೆಯನ್ನು ತಮ್ಮ ಟಿಆರ್ ಪಿ ಗೋಸ್ಕರ ಅಸ್ತ್ರವಾಗಿ ಬಳಸಿಕೊಂಡಿದ್ದನ್ನು ರಾಜ್ಯದ ಜನ ಗಮನಿಸಿದ್ದಾರೆ.ಅದರಲ್ಲೂ ಕೆಲ ಚಾನೆಲ್ ಗಳ ಆಂಕರ್ಸ್ ಗಳು ಅಬ್ಬರಿಸಿದ ಪರಿಯಂತೂ ಹೇಸಿಗೆ ಹುಟ್ಟಿಸುತ್ತಿತ್ತು.ಅವರ ಕಾರ್ಯಕ್ರಮ ಪ್ರಸ್ತುತಿಯನ್ನು ಮಂತ್ರಕ್ಕಿಂತ ಉಗುಳೇ ಹೆಚ್ಚಾದಂತೆ ಇತ್ತು.ಬಹುತೇಕ ಎಲ್ಲರೂ ಗಂಡ-ಹೆಂಡತಿ-ಮಕ್ಕಳನ್ನು ಮುಂದಿಟ್ಟುಕೊಂಡು ಸ್ಟೋರಿಯನ್ನು ಗಂಟೆಗಟ್ಟಲೇ ರಬ್ಬರ್ ನಂತೆ ಎಳೆದು ತಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದು ಕೂಡ ಸತ್ಯ.ಹಾಗೆಂದ ಮಾತ್ರಕ್ಕೆ ಗ್ಯಾರಂಟಿ ಚಾನೆಲ್ ನ ಉದ್ದೇಶವೂ ಅದಾಗಿರಲಿಲ್ಲ ಎಂದೇನಲ್ಲ.

ಆದ್ರೆ ಆ ಕಾರ್ಯಕ್ರಮವನ್ನು ಟೇ ಕ್‌ಆಫ್ ಮಾಡಿದ ರೀತಿ, ಪ್ರೊಜೆಕ್ಟ್ ಮಾಡಿದ ರೀತಿ ನಿಜಕ್ಕೂ ಒಂದು ಮಾದ್ಯಮದ ಸಾಮಾಜಿಕ ಜವಾಬ್ದಾರಿ,ಮಾನವ ಅಂತಃಕರಣ ತಟ್ಟುವಂತಿತ್ತು.ಬಹುತೇಕರು ಅವರಿಬ್ಬರ ನಡುವೆ ತಂದಿಟ್ಟು ಆ ಟ್ರೈಯಾಂಗಲರ್ ಸ್ಟೋರಿಯಲ್ಲಿದ್ದ ಅನಗತ್ಯ-ಅಸಂಗತ ಸಂಗತಿಗಳನ್ನು ಅತಿರಂಜನೀಯವಾಗಿ ತೋರಿಸುವುದಕ್ಕೇನೆ ಆಧ್ಯತೆ ಕೊಟ್ಟಂತಿತ್ತು.ಆ ಕುಟುಂಬ ಒಂದಾಗಬಾರದು..ಬಿರುಕು ಮತ್ತಷ್ಟು ಹೆಚ್ಚಾಗಬೇಕು,ಗಂಡ-ಹೆಂಡತಿ ಆ ಮಕ್ಕಳು ಮತ್ತೆ ಒಂದಾಗಬಾರದೆನ್ನುವ ದುರುದ್ದೇಶದಲ್ಲೇ ಸ್ಟೋರಿ ಕೈಗೆತ್ತಿಕೊಂಡಂತಿತ್ತು.ಆದರೆ ಗ್ಯಾರಂಟಿ ಚಾನೆಲ್ ಮಾತ್ರ ಆ ಸಂಸಾರವನ್ನು ಒಗ್ಗೂಡಿಸುವ ಪ್ರಯತ್ನವನ್ನು..ಗಂಡ-ಹೆಂಡತಿಯ ಬಾಂಧವ್ಯವನ್ನು ಮರು ಜೋಡಿಸುವ, ಮಕ್ಕಳನ್ನು ಪೋಷಕರ ಮಡಿಲಿಗೆ ಸೇರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿತು ಎನ್ನಿಸಿತು. ಆ ಪ್ರಯತ್ನದಲ್ಲಿ ಮಾನವ ಅಂತಃಕರಣ ಮತ್ತು ಒಂದು ಮಾದ್ಯಮದ ಸಾಮಾಜಿಕ ಬದ್ಧತೆ ಎದ್ದುಕಾಣುತ್ತಿತ್ತು.
ದಾಂಪತ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾದ ಮೇಲೆ ಸಾರ್ವಜನಿಕವಾಗಿ ತಲೆಮರೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಷ್ಟೇ ಆಕ್ಟೀವ್ ಆಗಿದ್ದ ಘಟನೆಯ ಸೂತ್ರಧಾರಿ ಲೀಲಾಳನ್ನು ಸ್ಟುಡಿಯೋಗೆ ಕರೆಯಿಸಿಕೊಂಡಿದ್ದು ಕಡಿಮೆ ಸಾಧನೆಯೇನಲ್ಲ.ಬಹುತೇಕ ಚಾನೆಲ್ ಗಳೆಲ್ಲಾ ಗಂಡ ಮಂಜುನಾಥ್ ನನ್ನು ಸಂದರ್ಶಿಸುವಲ್ಲಿ ಯಶಸ್ವಿಯಾಗಿದ್ವು.ಆದ್ರೆ ಯಾರು ಸಮಸ್ಯೆಯ ಮೂಲವಾಗಿದ್ಲೋ, ಆಕೆಯಿಂದಲೇ ಪರಿಹಾರ ಸಿಗೊಕ್ಕೆ ಸಾಧ್ಯ ಎನ್ನುವುದನ್ನು ಖಾತ್ರಿ ಪಡಿಸಿಕೊಂಡ ಗ್ಯಾರಂಟಿ ಟೀಮ್ ಆಕೆಯನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.ಕಾರ್ಯಕ್ರಮವನ್ನು ನಿರೂಪಿಸಿದ ಆಂಕರ್ ವಿದ್ಯಾ ಮಲ್ನಾಡ್(VIDYA MALNAD) .ಅವರ ಉಳಿದ ಕಾರ್ಯಕ್ರಮಗಳ ನಿರೂಪಣೆಯೇ ಒಂದು ತೂಕವಾದ್ರೆ ನಿನ್ನೆಯ ಕಾರ್ಯಕ್ರಮದ ನಿರೂಪಣೆಯ ತೂಕವೇ ಇನ್ನೊಂದಾಗಿತ್ತು.( ಅಬ್ಬರಿಸುವುದು, ಅರಚಾಡುವುದು, ಅತಿರಂಜನೀಯಗೊಳಿಸುವುದು,ವಿಕೃತವಾಗಿಸುವುದೇ ಆಂಕರಿಂಗ್ ಎಂದುಕೊಂಡ ಬಹುತೇಕ ಆಂಕರ್ಸ್ ವಿದ್ಯಾ ಮಲ್ನಾಡ್ ಎನ್ನುವ ಹೆಣ್ಣುಮಗಳ ಅತ್ಯದ್ಭುತ ಹಾಗೂ ಅಂತಕಃರಣ ತುಂಬಿದ ನಿರೂಪಣೆಯನ್ನು ನೋಡಲೇಬೇಕು..ಗುಣಕ್ಕೆ ಮತ್ಸರ ಬೇಡ..ನೋಡದಿದ್ದವರು ಬುದ್ದಿ-ಮನಸನ್ನು ಸ್ವಲ್ಪ ವಿಶಾಲ ಮಾಡಿಕೊಂಡು ನೋಡಿ..ಅದರಲ್ಲಿ ಕಲಿಯುವಂತದ್ದು ತುಂಬಾ ಇದೆ).

ಸಮಸ್ಯೆಯನ್ನು ಜಠಿಲಗೊಳಿಸುವುದು, ಕಂದಕವನ್ನು ಮತ್ತಷ್ಟು ಹೆಚ್ಚಿಸುವುದು,ಸಂಸಾರವನ್ನೇ ಸಂಪೂರ್ಣ ಹಾಳು ಮಾಡುವಂಥ ಯಾವುದೇ ಉದ್ದೆಶಗಳು ಆಂಕರ್ ವಿದ್ಯಾ ಮಲ್ನಾಡ್ ಅವರ ನಿರೂಪಣೆಯಲ್ಲಿದ್ದಂತೆ ಕಾಣಲಿಲ್ಲ.ಬದಲಿಗೆ ಹಳಿ ತಪ್ಪಿದ ಆ ಜೀವ-ಜೀವನಗಳನ್ನು ಮತ್ತೆ ಲಯಕ್ಕೆ ತರುವ ತುಡಿತ ಆ ನಿರೂಪಣೆಯಲ್ಲಿದ್ದಂತೆ ತೋರಿತು.ಅದಕ್ಕಾಗಿ ಆಕೆ ಸುಮಾರು 4 ಗಂಟೆಗಳವರೆಗೆ ಮಾಡಿದ ಪ್ರಯತ್ನವಂತೂ ಅತ್ಯದ್ಭುತ.. ಕುಟುಂಬದಂತ ಸಾಮಾಜಿಕ ಹಾಗೂ ವೈಯುಕ್ತಿಕ ವ್ಯವಸ್ಥೆ ಹಾಗೂ ಅದರೊಳಗಿನ ಸಂಬಂಧಗಳು ಹಾಳಾದ್ರೆ, ಮನಸುಗಳು ವಿಷಮವಾದ್ರೆ ಏನೆಲ್ಲಾ ಆಗಬಹುದು ಎನ್ನುವುದನ್ನು ಕಲ್ಲು ಮನಸು ಮಾಡಿಕೊಂಡು ಕೂತಿದ್ದ ಆಕೆಗೆ ಮನದಟ್ಟು ಮಾಡಿಕೊಡುವ ಪ್ರಯತ್ನವನ್ನು ಒಂದು ಹೆಣ್ಣಾಗಿ, ತಾಯಾಗಿ ವಿದ್ಯಾ ಮಲ್ನಾಡ್ ಪ್ರಾಮಾಣಿಕತೆ ಮತ್ತು ಶೃದ್ದೆಯಿಂದ ಮಾಡಿದ್ರು. ಅನೈತಿಕ ಸಂಬಂಧವಿಟ್ಟುಕೊಂಡ ಸಂತೋಷ್ ನೇ ನನ್ನ ಸರ್ವಸ್ವ..ಆತನ ಮುಂದೆ ಸಪ್ತಪದಿ ತುಳಿದು 15 ವರ್ಷಗಳಷ್ಟು ಸಂಸಾರ ನಡೆಸಿದ ಗಂಡ, ಪ್ರೀತಿಯ ಪ್ರತೀಕವಾಗಿ ಹುಟ್ಟಿದ ಮಕ್ಕಳೂ ತೃಣಸಮಾನರು ಎನ್ನುವ ರೇಂಜ್ ನಲ್ಲಿ ಅಬ್ಬರಿಸುತ್ತಿದ್ದಾಕೆಗೆ ಪ್ರತಿ ಕ್ಷಣವೂ ಆಕೆಯ ದುಡುಕು ನಿರ್ದಾರ-ಕ್ಷಣಿಕ ಸುಖ ನೀಡುವ ದೈಹಿಕ ವಾಂಛೆಯ ಪ್ರಮಾದಗಳನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಲೇ ಇದ್ದರು.
ಹಠಕ್ಕೆ ಬಿದ್ದು ರಚ್ಚೆ ಹಿಡಿಯುವ ಮಕ್ಕಳಂತೆ ವರ್ತಿಸಿದಾಗಲೂ ತಾಳ್ಮೆ ಕಳೆದುಕೊಳ್ಳದೆ ಅವುಗಳ ಪರಿಣಾಮವನ್ನು ಮನದಟ್ಟು ಮಾಡಲು ಯತ್ನಿಸುತ್ತಿದ್ದರು.ಮಕ್ಕಳ ವಿಷಯ ಬಂದಾಗಲಂತೂ ಸ್ವಲ್ಪ ಭಾವುಕರಾಗಿಯೇ ನಿರೂಪಣೆ ಮಾಡಿದ್ದು ವಿಶೇಷ.ಎಲ್ಲಾ ಮಾಡಿದ್ರೂ ತನಗೆ ಗಂಡ-ಮಕ್ಕಳು ಸಂಸಾರಕ್ಕಿಂತ ದೈಹಿಕ ಸಂಬಂಧವಿರಿಸಿಕೊಂಡಿರುವ ಸಂತೋಷ್ ನ ಸಾಂಗತ್ಯ-ಸಖ್ಯವೇ ಬೇಕೆಂಬ ಮೊಂಡುತನ ಮುಂದುವರೆಸಿದಾಗ.ಅಯ್ಯಯ್ಯೋ ಹಾಳಾಗಿ ಹೋಗ್ತಿರುವ ಸಂಸಾರ ಸರಿ ಮಾಡಬೇಕೆನ್ನುವ ತನ್ನ ಉದ್ದೇಶ ಈಡೇರುತ್ತಿಲ್ಲವಲ್ಲ ಎನ್ನುವ ನೋವು-ಆಕ್ರೋಶಕ್ಕೆ ತಾಳ್ಮೆ ಕಳೆದುಕೊಂಡವರಂತೆ ವರ್ತಿಸಿದ್ದು ಕಾಣಿಸಿತು.ತನ್ನ ಪ್ರಯತ್ನ ವಿಫಲವಾಯ್ತಲ್ಲ..ಒಂದು ಹೆಣ್ಣಾಗಿ..ತಾಯಾಗಿ ಇನ್ನೊಂದು ಸಂಸಾರವನ್ನು ಒಂದಾಗಿಸಲು ಸಾಧ್ಯವಾಗ್ಲಿಲ್ವಲಾ..ಹಾಯಿ ತಪ್ಪಿದ ನಾವೆಯನ್ನು ದಡ ಸೇರಿಸಲಾಗಲಿಲ್ವಲಾ ಎಂದು ನೊಂದುಕೊಳ್ಳುತ್ತಿದ್ದುದು ಕೂಡ ಮುಖಭಾವದಲ್ಲಿ ಗೋಚರಿಸುತ್ತಿತ್ತು.ಈ ಮನಸ್ಥಿತಿ-ಔದಾರ್ಯತೆ-ನಿಜವಾದ ಹೆಣ್ತನ-ಮಾತೃತ್ವ ಎಲ್ಲಾ ಆಂಕರ್ ಗಳಲ್ಲೂ ಇರಲು ಸಾಧ್ಯನಾ..? ಅನುಮಾನ.
ನಿರೂಪಕರಿ ವಿದ್ಯಾ ಮಲ್ನಾಡ್ ಅವರ ಪ್ರಯತ್ನ ಸ್ವತಃ ಸುದ್ದಿ ಸಂಪಾದಕರಾದ ರಾಧಾ ಹಿರೇಗೌಡರ್ (RADHA HIREGOUDAR)ಅವರ ಅಂತಕಃರಣ ಕಲುಕಿದ್ದು ವಿಶೇಷ.ಕಾರ್ಯಕ್ರಮ ಮುಗಿಸುವ ವೇಳೆ ದಿವ್ಯಾ ಅವರ ಪ್ರಯತ್ನದ ಬಗ್ಗೆ ರಾಧಾ ಅವರು ಮಾತನಾಡಿದ ರೀತಿಯೂ ಅತ್ಯದ್ಭುತ.ಈ ಕಥಾನಕದ ಪಾತ್ರದಾರಿಗಳನ್ನು ಉದ್ದೇಶಿಸಿ ಮಾತನಾಡಿದ ಶೈಲಿ ಎಂಥವರ ಅಂತಃಕರಣ ತಟ್ಟುವಂತದ್ದು.ಇಂಥಾ ಕೌಟುಂಬಿಕ ಸವಾಲಿನ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಲು ಅದರಲ್ಲೂ ಸಂಸಾರ ಸರಿಯಾಗಬೇಕು..ಜೀವಗಳು ಒಂದಾಗಬೇಕೆನ್ನುವ ಸಿಂಗಲ್ ಪಾಯಿಂಟ್ ಅಜೆಂಡಾವನ್ನು ನಾಲ್ಕು ಗಂಟೆಗಳ ಕಾಲ ಪ್ರತಿಪಾದಿಸುತ್ತಲೇ ಹೋಗುವಂತದ್ದು ಸಾಮಾನ್ಯವಾದ ಮಾತಾ..? ಅದನ್ನು ವಿದ್ಯಾ ಮಲ್ನಾಡ್ ಸಮರ್ಥವಾಗಿ ಹಾಗೆಯೇ ಅತ್ಯದ್ಭುತವಾಗಿ ನಿರೂಪಿಸಿದ್ದಾರೆ ಎನ್ನುವ ರಾಧಾ ಅವರ ಮಾತು ಅಕ್ಷರಶಃ ಸತ್ಯ ಎನಿಸುವಂತಿತ್ತು.
ಈ ಅಂತಿಮ ಪ್ರಯತ್ನದಲ್ಲಿ ವಿದ್ಯಾ ಮಲ್ನಾಡ್ ಸೋತಿರಬಹುದೇನೋ..? ಆದರೆ ಮನುಷ್ಯತ್ವವೊಂದನ್ನು ಗೆಲ್ಲಿಸುವ ಪ್ರಯತ್ನದಲ್ಲಿ ವಿಜಯಶಾಲಿಯಾಗಿದ್ದಾರೆ ಎನ್ನಿಸಿತು. ನಿಜಕ್ಕೂ ಯಾವತ್ತಿಗೂ ಪ್ರತಿಯೊಬ್ಬರೂ ಕುಳಿತು ನೋಡಲೇಬೇಕೆನಿಸುವ ಅತ್ಯಂತ ಅಪರೂಪದ-ಮಾನವೀಯತೆಯ ಸ್ಪರ್ಷವಿರುವ ಬೆರಳೆಣಿಕೆಯ ಕಾರ್ಯಕ್ರಮವೊಂದು ಗ್ಯಾರಂಟಿ ನ್ಯೂಸ್ ನಲ್ಲಿ ಪ್ರಸಾರವಾಯಿತು.ಈ ಕಾರಣಕ್ಕೊಂದು ಗ್ಯಾರಂಟಿ ನ್ಯೂಸ್ ಬಳಗಕ್ಕೆ ಧನ್ಯವಾದಗಳು..ಟಿಆರ್ ಪಿ ಬೆನ್ನಿಗೆ ಬಿದ್ದು ಮನುಷ್ಯತ್ವ ಹಾಗೂ ಸಾಮಾಜಿಕ ಬದ್ಧತೆಯನ್ನೇ ಮರೆಯುತ್ತಿರುವ ಬಹುತೇಕ ಕನ್ನಡ ಮಾದ್ಯಮಗಳ ಮನಸ್ತಿತಿ ಬಿಟ್ಟು ಇಂಥ ಇನ್ನೊಂದಷ್ಟು ಕಾರ್ಯಕ್ರಮಗಳು ನಿಮ್ಮಲ್ಲಿಪ್ರಸಾರವಾಗಲಿ..ಮಾದ್ಯಮಗಳ ಬಗ್ಗೆ ಜನರಲ್ಲಿ ಕಳೆದು ಹೋಗುತ್ತಿರುವ ನಂಬಿಕೆಯ ಪುನರುತ್ಥಾನಕ್ಕೆ ನಿಮ್ಮ ವಾಹಿನಿ ನಿಲುವುಗನ್ನಡಿಯಾಗಲಿ…ಆಲ್ ದಿ ಬೆಸ್ಟ್..