advertise here

Search

WHY SENIOR J‌OURNALIST LAXMAN HOOGAR QUIT JOURNALISM/ “ಪತ್ರಿಕೋದ್ಯಮ”ದ ಗಟ್ಟಿ ದ್ವನಿ “ಲಕ್ಷ್ಮಣ್ ಹೂಗಾರ್” ಮೌನಿಯಾಗಿದ್ದೇಕೆ..? ಇಲ್ಲಿವೆ ಅವರೇ ನೀಡುವ ಕಾರಣ..!


ಲಕ್ಷ್ಮಣ್ ಹೂಗಾರ್.. ...ಕನ್ನಡ ಪತ್ರಿಕೋದ್ಯಮ ಇವತ್ತಿಗೂ ಮಿಸ್ ಮಾಡಿಕೊಳ್ಳುತ್ತಿರುವ ಹೆಸರಿದು.. ಬಹುತೇಕ ಪತ್ರಕರ್ತರು ಅಗತ್ಯಕ್ಕೋ-ಅನಿವಾರ್ಯಕ್ಕೋ ಪರಿಸ್ಥಿತಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಇಂದಿನ ಪ್ರಕ್ಷುದ್ಧ ಪರಿಸ್ತಿತಿಯಲ್ಲಿ ಲಕ್ಷ್ಮಣ್ ಹೂಗಾರ್ ಎನ್ನುವಂತ ಪತ್ರಕರ್ತನ ಅನುಪಸ್ತಿತಿ ತೀವ್ರವಾಗಿ ಕಾಡದೆ ಇರೊಲ್ಲ…ಇತ್ತೀಚೆಗೆ ಸಾಮಾಜಿಕ ಜಾಲತಾಣ ಗಳಲ್ಲಿ  ಲಕ್ಷ್ಮಣ್ ಹೂಗಾರ್ ಅವರ ಕಣ್ಮರೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.ಅಷ್ಟೊಂದು ಆಕ್ಟೀವ್ ಆಗಿದ್ದ ಲಕ್ಷ್ಮಣ್  ಎಲ್ಲಿ ಹೋದರು..? ಎಲ್ಲಿದ್ದಾರೆ..? ಏನಾದರು..?ಏನ್ ಮಾಡುತ್ತಿದ್ದಾರೆ..?ಪತ್ರಿಕೋದ್ಯಮದ ಸಂಗ-ಸಹವಾಸ-ಸಾಂಗತ್ಯವನ್ನೇ ಬಿಟ್ರಾ..? ಪರ್ಯಾಯವನ್ನೇನಾದ್ರೂ ಹುಡುಕಿಕೊಂಡಿದ್ದಾರಾ..? ಪತ್ರಿಕೋದ್ಯಮಕ್ಕಿಂತ ಅವರು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದಲ್ಲೇ ನೆಮ್ಮದಿಯಾಗಿದ್ದಾರಾ..? ಎನ್ನುವ ದಂಡಿ..ದಂಡಿ ಪ್ರಶ್ನೆ ಮಾಡುತ್ತಲೇ ಇದ್ದಾರೆ.ಸುದ್ದಿ ಜಗತ್ತಿನ ವಿದ್ಯಾಮಾನಗ ಳನ್ನು ಇದ್ದದ್ ಇದ್ದಾಂಗೆ ಹೇಳುತ್ತಾ ಬಂದಿರುವ ಕನ್ನಡ ಫ್ಲ್ಯಾಶ್ ನ್ಯೂಸ್ ಗೂ ಲಕ್ಷ್ಮಣ್ ಹೂಗಾರ್ ಬಗ್ಗೆ ಮಾಹಿತಿ ಕಲೆಹಾಕಿ  ಬರೆಯುವ ಮನವಿ-ಒತ್ತಾಯ ಕೇಳಿಬಂದಿದ್ರಿಂದ ಅವರನ್ನು ಮೊಬೈಲ್ ನಲ್ಲಿಯೇ ಸಂಪರ್ಕಿಸಿ ಮಾಹಿತಿ ಕಲೆ ಹಾಕಿ ಈ ಲೇಖನವನ್ನು ಮುಂದಿಡುತ್ತಿದ್ದೇನೆ.ಅನೇಕ ದಿನಗಳಿಂದ ಕಾಡುತ್ತಿದ್ದ ಪ್ರಶ್ನೆ-ಸಂದೇಹಗ ಳಿಗೆಲ್ಲಾ ಲಕ್ಷ್ಮಣ್ ಹೂಗಾರ್ ಅವರ ಸಂದರ್ಶನ ಉತ್ತರ-ಪರಿಹಾರ-ಸ್ಪಷ್ಟತೆ ನೀಡಬಹುದೆನ್ನುವುದು ನಮ್ಮ ಅನಿಸಿಕೆ.

ಹಿರಿಯ ಪತ್ರಕರ್ತ ಲಕ್ಷ್ಮಣ್ ಹೂಗಾರ್‌ ಅವರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಒಬ್ಬರು ಹಾಕಿದ್ದ ಪೋಸ್ಟ್‌ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆಗ ಶುರುವಾಯಿತು ನೋಡಿ,ಲಕ್ಷ್ಮಣ್‌ ಹೂಗಾರ್‌ ಅವರನ್ನು ಹುಡುಕುವ ಪ್ರಯತ್ನ.ಆಗಲೇ ನನಗೂ ಅವರನ್ನು ಮಾತನಾಡಿಸಬೇಕೆನ್ನಿಸಿತು.ನನ್ನ ಫೇಸ್‌ ಬುಕ್‌ ಪೇಜ್‌ ನಲ್ಲಿ ಅವರ ಬಗ್ಗೆ ಖಂಡಿತಾ ಮಾಹಿತಿ ಕೊಡುವುದಾಗಿ ಪೋಸ್ಟ್‌ ಹಾಕಿದ್ದೆ. ಅವರಿಗೇ ಪರ್ಸನಲ್‌ ಆಗಿ ಮೆಸೇಜ್‌ ಹಾಕಿ ನಂಬರ್‌ ಪಡೆದುಕೊಂಡಿದ್ದೆ.ಅವರು ಕೂಡ ಆತ್ಮೀಯವಾಗಿ ಪ್ರತಿಕ್ರಿಯೆ ನೀಡಿ ಟಿವಿ9 ದಿನಗಳ ನೆನಪನ್ನು ಮೆಲುಕಾಕಿದ್ರು.ಇಂದು ಮದ್ಯಾಹ್ನ( 02-05-2026) ಅವರಿಗೆ ಕರೆ ಮಾಡಿಯೇ ಬಿಟ್ಟೆ.ಸರ್‌ ನಾನು ಥಾಮಸ್‌ ಅಂದೆ..ಟಿವಿ9 ನಲ್ಲಿ ಒಟ್ಟಿಗೆ ಕೆಲಸ ಮಾಡ್ತಿದ್ವಿ ಗೊತ್ತಾ ಸರ್‌..ಎಂದು ಕೇಳಿದ್ಕೆ ಯಾಕ್ರಿ ಹಾಗೆ ಕೇಳ್ತಿರಿ..ನಿಮ್ಮ ಪರಿಚಯವಿಲ್ಲದೆ ಏನು..?ಎಂದು ಕೇಳಿದ್ರು. ಎಲ್ಲಿದ್ದೀರಿ ಸರ್‌ ಎಂದು ಕೇಳಿದೆ.ಆಗತಾನೇ ಹೊಲದ ಕೆಲಸ ಮುಗಿಸಿ ಮನೆಗೆ ಬಂದು ಕೂತಿರುವುದಾಗಿ ಹೇಳಿದ್ರು.. ಸ್ವಲ್ಪ ಲೋಕಾಭಿರಾಮವಾಗಿ ಮಾತನಾಡಿದ ಬಳಿಕ ಮುಖ್ಯ ವಿಷಯಕ್ಕೆ ಬಂದೆ.

ಹುಟ್ಟಿದ್ದು ಗುಲ್ಬರ್ಗಾದ ಆಳಂದ-ವೃತ್ತಿ ಕಟ್ಟಿಕೊಟ್ಟಿದ್ದು ಬೆಂಗಳೂರು-ಬದುಕು ನೀಡಿದ್ದು ಚಿತ್ರದುರ್ಗ: ಅಂದ್ಹಾಗೆ ಲಕ್ಷ್ಮಣ್‌ ಹೂಗಾರ್‌ ಅವರದು ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕು.. ಮನೆಯಲ್ಲಿ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲವಂತೆ.ಇದರ ನಡುವೆ  ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದರಿಂದಲೇನೋ ಆಳುವ ವ್ಯವಸ್ಥೆ ಬಗೆಗೊಂದು ಆಕ್ರೋಶ ಮನಸಲ್ಲಿ ಮೂಡಿಸಿಕೊಂಡು ಅದನ್ನೇ ಹೋರಾಟಕ್ಕೆ ಮಾರ್ಗ ಮಾಡಿಕೊಂಡ‌ ವರು. ವಿದ್ಯಾರ್ಥಿದಿಸೆಯಿಂದ್ಲೇ ಹೋರಾಟಕ್ಕೆ ಧುಮುಕಿದ್ರಂತೆ. ಗುಲ್ಬರ್ಗಾದಿಂದ ಸುಮಾರು 600 ಕಿಲೋ ಮೀಟರ್‌ ದೂರದ ಬಯಲುಸೀಮೆಯ ಊರಾದ ಚಿತ್ರದುರ್ಗದ ಸಂಪರ್ಕ ಸಿಕ್ಕಿದ್ದು ಕೂಡ ಇದೇ ಹೋರಾಟಗಳ ಕಾರಣಕ್ಕೆ .ಚಿತ್ರದುರ್ಗದಲ್ಲಿದ್ದ ಸಮಾನಮನಸ್ಕ ಸ್ನೇಹಿತರ ಒಡನಾಟಕ್ಕೆ ಸಿಲುಕಿದ ಹೂಗಾರ್‌ ಹೆಚ್ಚಿನ ಸಮಯವನ್ನು ಚಿತ್ರದುರ್ಗದಲ್ಲೇ ಕಳೆಯುವಂತಾಯ್ತು.ಇದೇ ಸಮಯದಲ್ಲಿ ತೀವ್ರ ಕಾವು ಪಡೆದ ಹೋರಾಟ ಭದ್ರ ಮೇಲ್ದಂಡೆದು..

ಸಂತ್ರಸ್ಥ ರೈತರ ಬೆನ್ನಿಗೆ ನಿಂತು ನಡೆಸಲಾದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಲ್ಲಿ ಹೂಗಾರ್‌ ಕೂಡ ಒಬ್ಬರು.ಅದು ಅವರಿಗೆ ಅಪಾರ ಜನಮನ್ನಣೆ ದೊರಕಿಸಿಕೊಡ್ತು.ಅವರ ಕ್ರಾಂತಿಕಾರಿ ಮಾತುಗಳು ಜನರಲ್ಲಿ ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸ್ತಿತ್ತು.ಈ ಹುಡುಗ ಮುಂದೊಂದು ದಿನ ಏನೋ ಆಗ್ತಾನ್ರಿ ಎಂದು ಜನ ಆಗಲೇ ಹೇಳಿದ್ರಂತೆ.ಹೋರಾಟದ ಕಾರಣಕ್ಕೆ ಪ್ರೆಸ್‌ ಮೀಟ್‌ ಮಾಡೊಕ್ಕೆ ಆಗಾಗ ಬೆಂಗಳೂರಿಗೆ ಬರೋದು ಕಾಮನ್‌ ಆಗಿತ್ತು.ಆಗ ಪ್ರೆಸ್‌ ಮೀಟ್‌ ಮಾಡೊಕ್ಕೆ ಪ್ರೆಸ್‌ ಕ್ಲಬ್‌ ಗೆ ಬಂದಾಗ ಅಲ್ಲಿ ಹಿರಿಯ ಪತ್ರಕರ್ತ ಜೆಸುನಾ ಅವರ ಕಣ್ಣಿಗೆ ಬಿದ್ರಂತೆ.ಅತ್ಯದ್ಭುತವಾಗಿ ಮಾತನಾಡ್ತಾನಲ್ಲ ಎಂದೆನಿಸಿ ಲಕ್ಷ್ಮಣ್‌ ಅವರನ್ನು ಪತ್ರಿಕೋದ್ಯಮಕ್ಕೆ ಆಹ್ವಾನ ಇತ್ತರಂತೆ.ಲಕ್ಷ್ಮಣ್‌ ಹೂಗಾರ್‌ ಇವತ್ತೇನಾದ್ರೂ ಪತ್ರಿಕೋದ್ಯಮದಲ್ಲಿ ಒಂದಷ್ಟು ಹೆಸರು ಮಾಡಿದ್ದಾನೆಂದರೆ ಅದಕ್ಕೆ ಮುಖ್ಯ ಕಾರಣವೇ ಜೆಸುನಾ ಎನ್ನುತ್ತಾರೆ ಅವರು.

ಪತ್ರಕರ್ತನಾಗಬೇಕೆನ್ನುವ ಆಸೆಯಾಗಲಿ,ಇರಾದೆಯಾಗಲಿ,ಕಲ್ಪನೆಯಾಗಲಿ,ನಿರೀಕ್ಷೆಯಾಗಲಿ ಹೂಗಾರ್‌ ಅವರಲ್ಲಿ ಇರಲಿಲ್ಲವಂತೆ. ಏಕಂದ್ರೆ ಓದಿದ್ದು ಐಟಿಐ.ಹೋರಾಟ ಬಿಟ್ಟರೆ ಮಾದ್ಯಮ,ಪತ್ರಿಕೋದ್ಯಮದ ಗಂಧಗಾಳಿಯೂ ಅವರಿಗಿರಲಿಲ್ಲವಂತೆ.ಅವರು ಹೋರಾಟಗಾರನಾಗುವ ಕನಸಿಟ್ಟುಕೊಂಡು ಬೆಂಗಳೂರಿಗೆ ಬಂದವರಂತೆ.ಆದರೆ ಮಾತನಾಡುವ ಶೈಲಿ, ಬವರಣಿಗೆಯ ವೈಖರಿ ಗಮನಿಸಿದ ಜೆಸುನಾ ಅವರು ಅದಾಗ ತಾನೇ ಪ್ರಾರಂಭವಾಗುತ್ತಿದ್ದ ಜನವಾಹಿನಿ ಪತ್ರಿಕೆಗೆ ಪ್ರೆಸ್‌ ಕ್ಲಬ್‌ ನಲ್ಲೇ ರೆಸ್ಯೂಮ್‌ ಬರೆಯಿಸಿ ಹಾಕಿಸಿದ್ರಂತೆ.ಅಲ್ಲಿ ಸೆಲೆಕ್ಟ್‌ ಕೂಡ ಆದರಂತೆ.ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕುರುಬರಹಳ್ಳಿ ಎನ್ನುವ ಗ್ರಾಮದಲ್ಲಿ ಅಪ್ಪಟ ಕೃಷಿಕರಾಗಿ ಕೆಲಸ ಮಾಡುತ್ತಿದ್ದಾರೆ. ನಿಂಬೆ-ನುಗ್ಗೆ ಹೀಗೆ ಹಲವಾರು ಬೆಳೆಗಳನ್ನು ಬೆಳೆದು ಪ್ರಗತಿಪರ ರೈತನಾಗಿ ಬದುಕುತ್ತಿದ್ದಾರೆ. ದಶಕಕ್ಕಿಂತಲೂ ಹೆಚ್ಚು ಅವಧಿಯಿಂದಲೂ ಅವರು ರೈತರಾಗಿ ದುಡಿಯುತ್ತಿದ್ದು ಬೆಳಗ್ಗೆಯಿಂದ ಸಂಜೆವರಗೆ ಹೊಲದಲ್ಲಿ ಬೆವರಳಿಸಿ ಕೆಲಸ ಮಾಡುತ್ತಿದ್ದಾರೆ.ಹೆಚ್ಚಿನ ಸಮಯವನ್ನು ಹೊಲದಲ್ಲೇ ಕಳೆಯುವುದರಿಂದ ಹೊರಗಿನ ಸುದ್ದಿ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಂಡಿದ್ದಾರಂತೆ.

ALSO READ :  ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: ಬುಮ್ರಾಗೆ ಉಪನಾಯಕ ಪಟ್ಟ!

ಒಬ್ಬ ಹೋರಾಟಗಾರನಾಗಿದ್ದ ನನಗೊಂದು ಐಡೆಂಟಿಟಿ ತಂದುಕೊಟ್ಟಿದ್ದು ಪತ್ರಿಕೋದ್ಯಮ.ಅದಕ್ಕೆ ನಾನು ಸದಾ ಋಣಿ.ಮುದ್ರಣ ಮಾದ್ಯಮದಲ್ಲಿ ಜೆಸುನಾ ನನ್ನ ಗಾಡ್‌ ಫಾದರ್‌, ದೃಶ್ಯ ಮಾದ್ಯಮದಲ್ಲಿ ದಿ ಗ್ರೇಟ್‌ ಮಹೇಂದ್ರ ಮಿಶ್ರಾ ಹಾಗೂ ಶಿವಶಂಕರ್(‌ ಈಗಿನ ರಿಪಬ್ಲಿಕ್‌ ಕನ್ನಡದ ಮುಖ್ಯಸ್ಥರು) ಎನ್ನುತ್ತಾರೆ ಲಕ್ಷ್ಮಣ್‌ ಹೂಗಾರ್.‌ಸುವರ್ಣ ಸಿಇಓ ಆಗಿದ್ದ ಶ್ಯಾಮ್‌ ಸುಂದರ್‌, ಪಬ್ಲಿಕ್‌ ಟಿವಿಯ ರಂಗನಾಥ್‌ ಅವರು ತಮ್ಮ ಬೆಳವಣಿಗೆಗೆ ಅಸಾಧಾರಣವಾದ ಪ್ರಭಾವ ಬೀರಿದವರು ಎನ್ನುತ್ತಾರೆ.

ಟಿವಿ9, ಸುವರ್ಣ ನ್ಯೂಸ್‌, ನ್ಯೂಸ್‌ 18 ಕನ್ನಡದಂಥ ಚಾನೆಲ್‌ ಗಳಲ್ಲಿ ಸುಮಾರು ಒಂದೂವರೆ ದಶಕಗಳಷ್ಟು ಅವಧಿ ವರೆಗೆ ಕೆಲಸ ಮಾಡಿದ ಲಕ್ಷ್ಮಣ್‌ ಹೂಗಾರ್‌ ಟಿವಿ ಮಾದ್ಯಮದಲ್ಲಿ ಮೂಡಿಸಿದ ಛಾಪು ಅವರಿಗೊಂದು ಪ್ರತ್ಯೇಕ ಐಡೆಂಟಿಟಿಯನ್ನೇ ತಂದುಕೊಡ್ತು.ಎದುರಿಗೆ ಎಂಥಾ ಖಡಕ್‌ ಪೊಲಿಟಿಷಿಯನ್ನೇ ಅವರಿಗೆ ಮುಲಾಜಿಲ್ಲದೆ ವಸ್ತುನಿಷ್ಟವಾಗಿ ಕೇಳುತ್ತಿದ್ದ ಪ್ರಶ್ನೆಗಳು ಕ್ಷಣ ತಬ್ಬಿಬ್ಬುಗೊಳಿಸ್ತಿದ್ವು.ಇವನ ಸಹವಾಸವೇ ಬೇಡವೆಂದು ತಪ್ಪಿಸಿಕೊಳ್ಳುತ್ತಿದ್ದವರು ಅದೆಷ್ಟೋ.. ಆದರೆ ಇವತ್ತಿನ ಕೆಲವು  ಪತ್ರಕರ್ತರ ಮನಸ್ತಿತಿ ನಿಷ್ಟೂರವಾಗಿ ಎನ್ನುವುದರ ಮನೆ ಹಾಳಾಗಿ ಹೋಗ್ಲಿ ,ಇರೋದ್ರ ಬಗ್ಗೆಯೇ ಪ್ರಶ್ನೆ ಕೇಳಿದ್ರೆ ಎಲ್ಲಿ ಪೊಲಿಟಿಷಿಯನ್‌ ಗಳು ಬೇಸರಿಸಿಕೊಳ್ಳುತ್ತಾರೋ ಎನ್ನುವ ಕಾರಣಕ್ಕೆ ಪ್ರಶ್ನೆ ಮಾಡುವುದನ್ನೇ ಬಿಟ್ಟಿದ್ದಾರೆ. ಒಬ್ಬೊಬ್ಬ ಪೊಲಿಟಿಷಿ ಯನ್‌ ಗಳಿಗೆ ಒಬ್ಬೊಬ್ಬ ರಿಪೋರ್ಟರ್‌ ಎನ್ನುವಂತಾಗಿದೆ.ಅವರಿಗೆ ಇವರೇ ಭಾಷಣ ಬರೆದು ಕೊಡ್ತಾರೆ.. ಏನ್‌ ಮಾತನಾಡಬೇಕೆಂದು ಹೇಳಿಕೊಡ್ತಾರೆ..ವಾಟ್ಸಪ್ ಗಳಲ್ಲಿ ಇವರೇ ಬ್ರೇಕೀಂಗ್‌ ಪಾಯಿಂಟ್ಸ್‌ ಕ್ರಿಯೇಟ್‌ ಮಾಡಿ ಎಲ್ಲೆಡೆ ವೈರಲ್‌ ಮಾಡಿಸ್ತಾರೆ.ಪ್ರೆಸ್‌ ಮೀಟ್‌ ಮಾಡಿಸ್ತಾರೆ.ಸಂಜೆಯಾದ್ರೆ ಕವರನ್ನೋ..ಜೇಬನ್ನೋ ತುಂಬಿಸಿಕೊಂಡು ಹೋಗ್ತಾರೆನ್ನುವ ಮಾತು ವಿಧಾನಸೌಧದ ಪಡಸಾಲೆಯಲ್ಲಿ ಕೆಲಸ ಮಾಡುವ ಪತ್ರಕರ್ತರಿಂದ ಕೇಳಿಬರ್ತಿದೆ.ನಮ್ಮ ಕಾಲಘಟ್ಟದಲ್ಲಿ ಪತ್ರಿಕೋದ್ಯಮ ಹಾಗೂ ಪತ್ರಕರ್ತರು ಈ ಮಟ್ಟಕ್ಕೆ ನೈತಿಕವಾಗಿ ಕುಸಿದಿರಲಿಲ್ಲ ಬಿಡ್ರಿ ಎನ್ನುತ್ತಾರೆ ಹೂಗಾರ್.

ದಿಢೀರ್‌ ಮರೆಯಾಗೊಕ್ಕೆ ಕಾರಣವೇನು..?!ಟಿವಿ ಪರದೆಯಿಂದ ದಿಢೀರ್‌ ತೆರೆಮರೆಗೆ ಸರಿಯೊಕ್ಕೆ ಬೇರೆ ಕಾರಣಗಳೇನು ಇರಲಿಲ್ಲ.ದಶಕಗಳ ಕಾಲ ದುಡಿದ ಪತ್ರಿಕೋದ್ಯಮ ಕಾಲ ಕಳೆದಂತೆಲ್ಲಾ ತನ್ನ ವೃತ್ತಿಪಾವಿತ್ರ್ಯತೆ ಹಾಗೂ ವೃತ್ತಿಪರತೆಯನ್ನು ಕಳೆದುಕೊಳ್ಳುತ್ತಿದೆ.ಎಲ್ಲಾ ಸಂಸ್ಥೆಗಳಲ್ಲಿಯೂ ಒಂದೇ ವಾತಾವರಣವಿದೆ.ಅದಲ್ಲದೇ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಪೂರಕವಾಗಿದ್ದ ಪತ್ರಿಕೋದ್ಯಮ ಇವತ್ತು ಮಾರಕವಾಗ್ತಿದೆ.ಅದೆಲ್ಲಕ್ಕಿಂತ ಹೆಚ್ಚಾಗಿ ವ್ಯಕ್ತಿ,ಸಮಾಜ ಹಾಗೂ  ದೇಶದ ವ್ಯವಸ್ಥೆಯನ್ನು ಪತ್ರಿಕೋದ್ಯಮ ಸುಧಾರಿಸುತ್ತದೆ ಎನ್ನುವ ಮಾತು ಸಂಪೂರ್ಣ ಹುಸಿಯಾಗಿದೆ.ಇಂಥಾ ಅಪಾಯಕಾರಿ ಹಾಗೂ ಸಂಕೀರ್ಣ ಪರಿಸ್ತಿತಿಯಲ್ಲಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ ಎಂದೆನಿಸಿದ ಕಾರಣಕ್ಕೆ ಬೆಂಗಳೂರಿನ ಸಂಪರ್ಕವನ್ನೇ ತೊರೆದು ಇದ್ದಕ್ಕಿದ್ದಂತೆ ಊರಿಗೆ ಬಂದುಬಿಟ್ಡೆ..ನಡುವೆ ಬಿಟ್ಟುಬಂದೆ ಎನ್ನುವ ಬೇಸರವೂ ಇಲ್ಲ.ಇನ್ನೂ ಇರಬೇಕಿತ್ತೇನೋ  ಎನ್ನುವ ಕೊರಗು ನನಗಿಲ್ಲ..ಪತ್ರಿಕೋದ್ಯಮದಲ್ಲಿ ದುಡಿದಿದ್ದು ಸಾಕೆನಿಸಿದ ಕಾರಣಕ್ಕೆ ಹಳ್ಳಿಗೆ ಬಂದು ಕೃಷಿಯನ್ನು ಮುಂದುವರೆಸಿದೆ ಅಷ್ಟೆ..ಎನ್ನುವ ಲಕ್ಷ್ಣಣ್‌ ಹೂಗಾರ್.ತಮ್ಮ ದಶಕಗಳವರೆಗಿನ ಪತ್ರಿಕೋದ್ಯಮದಲ್ಲಿ ಕೆಲಸ ಕೊಟ್ಟು ಅನ್ನಹಾಕಿದ ಎಲ್ಲಾ ಮಾದ್ಯಮ ಸಂಸ್ಥೆಗಳಿಗೆ ತಾನು ಋಣಿ ಎನ್ನುತ್ತಾರೆ.

ಐದಾರು ವರ್ಷಗಳಿಂದ ಪತ್ರಿಕೆಗಳನ್ನು ಓದಿಲ್ಲ..ಟಿವಿ ನೋಡಿಲ್ಲ:ಮಾತಿನ ಲಹರಿಯಲ್ಲಿ ಲಕ್ಷ್ಕಣ್‌ ಹೂಗಾರ್‌ ಕಳೆದ ಐದಾರು ವರ್ಷಗಳಿಂದಲೂ ಪೇಪರ್‌ ಓದಿಲ್ಲ..ಟಿವಿ ನೋಡಿಲ್ಲ ಎನ್ನುವ ಅಘಾತಕಾರಿ ಮಾಹಿತಿ ಹೊರಹಾಕಿದ್ರು.ಪತ್ರಿಕೆಗಳನ್ನು ಓದಿದರೆ,ಟಿವಿ ನ್ಯೂಸ್‌ ನೋಡಿದ್ರೆ ಅದರಿಂದ ಪ್ರಯೋಜನ ವಾಗುತ್ತದೆ ಎನ್ನುವ ಸ್ಥಿತಿಯಲ್ಲಿ ಇವತ್ತು ಮಾದ್ಯಮಗಳಿಲ್ಲ. ಮಾದ್ಯಮಗಳು ಆಳುವ ವರ್ಗಗಳನ್ನು ಓಲೈಸುವ, ಬಹುಪರಾಖ್ ಹಾಕುವ ಸ್ತಿತಿಯಲ್ಲಿವೆ. ಪ್ರಯೋಜನವಿಲ್ಲದ ಇಂಥಾ ಸುದ್ದಿಗಳನ್ನು ಓದಿ ಆಕ್ರೋಶಗೊಳ್ಳುವುದಕ್ಕಿಂತ ತಾನಾಯ್ತು ತನ್ನ ಪಾಡಾಯ್ತು ಎಂದು ಸುಮ್ಮನಿರುವುದು ಒಳ್ಳೇದಲ್ವಾ ಎಂದು ಕೃಷಿ, ಜಮೀನು, ಬೆಳೆ, ಮಳೆ,ಕುಟುಂಬದಂಥ ವಿಚಾರಗಳಲ್ಲೇ ಬ್ಯುಸಿಯಾಗಿಬಿಡ್ತೇನೆ ಎನ್ನುತ್ತಾರೆ. ಜಗತ್ತಿನ ವಿಚಾರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಕ್ಕಿಂತ ತನ್ನ ಹೊಲ, ಬೆಳೆ, ಇಳುವರಿಗೆ ಹೆಚ್ಚಿನ ಆಧ್ಯತೆ ಕೊಟ್ಟರೆ ಉದ್ದಾರವಾದ್ರೂ ಆಗ್ತೇನೆ ಎನ್ನುವ ತತ್ವದ ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದೇನೆ. ಅದೇ ನನಗೆ ತೃಪ್ತಿ ಕೊಟ್ಟಿದೆ..ಕಳೆದು ಹೋಗಿದ್ದು ಕಳೆದಿದ್ದಾಗಿದೆ.ಉಳಿದಿರುವ ಜೀವನವನ್ನು ಅಪ್ಪಟ ಕೃಷಿಕನಾಗಿ ಕಳೆಯುವುದು ನನ್ನ ನಿರ್ದಾರ.ಇದೇ ನನಗೆ ತೃಪ್ತಿ ಕೊಟ್ಟಿದೆ ಎನ್ನುತ್ತಾರೆ.

ಪತ್ರಿಕೋದ್ಯಮಕ್ಕೆ ಮತ್ತೆ  ಎಂದೆಂದೂ ಮರಳಲಾರೆ: ನ್ಯೂಸ್‌ 18 ಕನ್ನಡ ತೊರೆದ ಮೇಲೆ ಸಾಕಷ್ಟು ಆಫರ್ಸ್‌ ಬಂದಿದ್ದು ಸತ್ಯ..ಇವತ್ತಿನವರೆಗೂ ಬೇಡಿಕೆಯಲ್ಲೇ ಇದ್ದೇನೆ.ಆದರೆ ನನಗೆ ಮತ್ತೆ ಮರಳುವ ಆಸೆಯಾಗಲಿ, ಇರಾದೆಯಾಗಲಿ ಇಲ್ಲ..ಏನೂ ಬೇಡ ಎಂದು ಬಂದವನು ನಾನು..ಮತ್ತೆ ಮರಳುವ ಪ್ರಶ್ನೆಯೇ ಇಲ್ಲ.ಏಕೆಂದರೆ ಪತ್ರಿಕೋದ್ಯಮ ಮೌಲ್ಯಾದರ್ಶಗಳನ್ನು ಕಳೆದುಕೊಳ್ಳುತ್ತಿದೆ.ಅವುಗಳ ಸ್ಟೈಲ್‌ ಶೀಟ್‌ ಗೆ ನನ್ನಂಥ ಅಪ್ಪಟ ಹೋರಾಟಗಾರನ ಮನಸ್ಥಿತಿ ಒಪ್ಪೊಲ್ಲ..ಒಗ್ಗುವುದಿಲ್ಲ..ಎಷ್ಟೋ ಸನ್ನಿವೇಶಗಳಲ್ಲಿ ಮುಖ್ಯಸ್ಥರೊಂದಿಗೆ ಸೈದ್ಧಾಂತಿಕ ಸಂಘರ್ಷಗಳು ಏರ್ಪಟ್ಟ ಉದಾಹರಣೆಗಳಿವೆ.ವೃತ್ತಿಯುದ್ದಕ್ಕೂ ಅದನ್ನೇ ಮುಂದುವರೆಸಿಕೊಂಡು ಹೋಗುವುದರಲ್ಲಿ ಅರ್ಥವೇನಿದೆ ಹೇಳಿ..?

ಹಾಗಾಗಿ ಪತ್ರಿಕೋದ್ಯಮದ ಸಹವಾಸವೇ ಬೇಡ ಎಂದು ಮಣ್ಣು ನಂಬಿ ಬಂದಿದ್ದೇನೆ. ಕಷ್ಟಕಾಲದಲ್ಲಿ ನನ್ನನ್ನು ಕೈ ಹಿಡಿದು ಹೆಸರು ತಂದುಕೊಟ್ಟ ಪತ್ರಿಕೋದ್ಯಮಕ್ಕೆ ನಾನು ಅಭಾರಿ.ಆದರೆ ಇವತ್ತಿನ ಪತ್ರಿಕೋದ್ಯಮಕ್ಕೆ ನಮ್ಮಂಥವರು ಅಪಥ್ಯ..ಹಾಗಾಗಿ ಮತ್ತೆಂದೂ ಮರಳದ ದೃಢ ನಿರ್ದಾರ ಮಾಡಿಕೊಂಡು ಬಂದು ಕೃಷಿಯಲ್ಲಿ ಮುಂದುವರೆದಿದ್ದೇನೆ..ಈ ನಿರ್ದಾರವನ್ನು ಹಿಂದೆಯೇ ಮಾಡಬೇಕಿತ್ತೇನೋ ಎನಿಸ್ತಿದೆ.ಏಕೆಂದರೆ ಇದು ಅಪ್ಪಟ ನನ್ನ ಪ್ರಪಂಚ. ಇಲ್ಲಿ ನಾನೇ ಯಜಮಾನ.. ನನ್ನದೇ ನಿರ್ದಾರಗಳು..ಯಾವುದೇ ನಿರ್ಬಂಧಗಳಿಲ್ಲ..ಹಾಗಾಗಿ ನೆಮ್ಮದಿಯಾಗಿದ್ದೇನೆ..ನಾನು ನಂಬಿದ ಭೂಮಿ ನನ್ನ ಕೈಹಿಡಿದಿದೆ..ಇದಕ್ಕೆ ಹಾಕಿದ ಬೆವರು-ಶ್ರಮ ಕೈ ಹಿಡಿದಿದೆ..ಇದರ ಫಲಿತಾಂಶ ನನಗೆ ನೆಮ್ಮದಿ-ಆತೃತೃಪ್ತಿ ಕೊಟ್ಟಿದೆ.ಇದಕ್ಕಿಂತ ಬದುಕಿನಲ್ಲಿ ಇನ್ನೇನು ಬೇಕು ಅಲ್ವೇ..? ಎಂದೆನಿಸಿದೆ.ಹಾಗಾಗಿ   ಮೌಲ್ಯ-ನೈತಿಕತೆ ಎಲ್ಲವನ್ನೂ ಕಳೆದುಕೊಂಡಿರುವ ಇವತ್ತಿನ ಕಾಲಘಟ್ಟದ ಪತ್ರಿಕೋದ್ಯಮದಲ್ಲಿ ನನ್ನತನ ಕಳೆದುಕೊಂಡು ಬದುಕುವುದು ನನಗಿಷ್ಟ ಎನ್ನುತ್ತಾರೆ ಲಕ್ಷ್ಮಣ್‌ ಹೂಗಾರ್.

ಹೇಳಿಕೊಳ್ಳಲಿಕ್ಕೆ ಆಗದಷ್ಟು ಸಾಕಷ್ಟು  ವಿಷಯಗಳಿವೆ.ಅದು ಕೆಲವರಿಗೆ ಅಪ್ರಿಯ-ಅಪಥ್ಯ ಎನ್ನಿಸ ಬಹುದು.ಆದರೆ ಒಬ್ಬ ಹೋರಾಟಗಾರನಾಗಿದ್ದ ನನ್ನನ್ನು ಒಬ್ಬ ಪತ್ರಕರ್ತನಾಗಿ ರೂಪಿಸಿ ಸಾಕಷ್ಟು ಅವಕಾಶಗಳನ್ನು ನೀಡಿ ಕೆಲಸ ಮಾಡಲಿಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ ಎಲ್ಲಾ ಮಾದ್ಯಮ ಸಂಸ್ಥೆಗಳಿಗೂ ನಾನು ಚಿರಋಣಿ ಎನ್ನುವ ಲಕ್ಷಣ್‌ ಹೂಗಾರ್‌ ಈಗ ಒಬ್ಬ ಕೃಷಿಕನಾಗಿ ಸಾರ್ಥಕ ಬದುಕನ್ನು ನಿರ್ವಹಿಸುತ್ತಿದ್ದಾರೆ. ಮೌಲ್ಯಾದರ್ಶಗಳನ್ನು ಕಳಕೊಂಡು ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ನಲುಗುತ್ತಿರುವ ಇವತ್ತಿನ ಪತ್ರಿಕೋದ್ಯಮಕ್ಕೆ ಭವಿಷ್ಯವಿಲ್ಲ.ಇದರಿಂದ ಯಾವ ಸಕಾರಾತ್ಮಕ ಬದಲಾವಣೆಯನ್ನೂ ನಿರೀಕ್ಷಿಸ್ಲಿಕ್ಕೆ ಸಾಧ್ಯವಿಲ್ಲ..ಹಾಗಾಗಿ ಮತ್ತೆ ಪತ್ರಿಕೋದ್ಯಮಕ್ಕೆ ಮರಳುವ ಪ್ರಶ್ನೆಯಿಲ್ಲ ಎನ್ನುತ್ತಾರೆ ಲಕ್ಷ್ಮಣ್‌ ಹೂಗಾರ್‌.ಅವರು ಹೇಳುವುದು ಕೂಡ ಸತ್ಯವಲ್ವೇ..ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ಮಾದ್ಯಮ ಜಗತ್ತಿನಲ್ಲಿ ಉಸಿರಾಡುವ ಶವಗಳಾಗಿರುವುದಕ್ಕಿಂತ ಹೊಸ ಪರ್ಯಾಯ ಹುಡುಕಿಕೊಂಡು ಅಲ್ಲೇ ಸಾರ್ಥಕತೆ ಪಡೆದುಕೊಳ್ಳೋದೇ ಉತ್ತಮ ಅನ್ನಿಸುತ್ತೆ.


Political News

ra.chinthan v/s mumtas nelyadka talkwar ರ.ಚಿಂತನ್‌ v/s ಮುಮ್ತಾಸ್ ನೆಲ್ಯಡ್ಕ “ಟಾಕ್‌ ವಾರ್‌”: ಯಾರು ಸರಿ..ಯಾರು ತಪ್ಪು..!?

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

Scroll to Top