ಬೆಂಗಳೂರು: ಕನ್ನಡ ನಾಡುನುಡಿಯ ಹಬ್ಬ ರಾಜ್ಯೋತ್ಸವ ಆಚರಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ.ಅಷ್ಟರಲ್ಲೇ ಕನ್ನಡ ನಾಡುನುಡಿಯ ಪ್ರಾತಿನಿಧಿಕ ಸಂಸ್ಥೆಯಾಗಿ ಕೆಲಸ ಮಾಡಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ.ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ಅವರ ಧೋರಣೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.ಅವರ ನಿಲುವಿಗೆ ಬೇಸತ್ತು ಸಾಕಷ್ಟು ಕನ್ನಡದ ಕಟ್ಟಾಳುಗಳು ಹೊರಬರಲು ನಿರ್ದರಿಸಿದ್ದು ಇದರ ಮೊದಲ ಪ್ರಯತ್ನ ಎನ್ನುವಂತೆ ಕನ್ನಡದ ಕಟ್ಟಾಳು, ಕನ್ನಡಪರ ಹೊರಾಟಗಾರ, ಸಾಮಾಜಿಕ ಕಾರ್ಯಕರ್ತ,ಆರ್ ಟಿಐ ಗೆ ಕರ್ನಾಟಕದಲ್ಲಿ ನೆಲೆ-ಬೆಲೆ ದೊರಕಿಸಿಕೊಟ್ಟಿರುವ ಜೆ.ಎಂ.ರಾಜಶೇಖರ್ ನೊಂದು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವ ಸಾಕಷ್ಟು ಬೆಳವಣಿಗೆ, ಅಧ್ಯಕ್ಷರ ಕನ್ನಡ ವಿರೋಧಿ ಧೋರಣೆಯಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿರುವ ಅವರು,ತಮ್ಮ ರಾಜೀನಾಮೆಗೆ ಸಂಬಂಧಿಸಿದ ಕಾರಣಗಳನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.ಅದರ ಸಂಪೂರ್ಣ ಮಾಹಿತಿ ಕೆಳಕಂಡಂತಿದೆ.
ಜೆ.ಎಂ.ರಾಜಶೇಖರ್ ಆದ ನಾನು ನನ್ನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯನಾಗಿ ಮುಂದುವರೆಯಲು ಸಾಧ್ಯವಿಲ್ಲ ಆದ್ದರಿಂದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಕುರಿತು,
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಾನು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ರಾಣೆಬೆನ್ನೂರು ನಗರದ ನಿವಾಸಿಯಾಗಿದ್ದೆ, ನನ್ನ ಸದಸ್ಯತ್ವ ಸಂಖ್ಯೆ 20925 ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ.
1 , ವಿಜಯದಶಮಿಯ ದಿನದಂದೇ ಈ ನಿರ್ಧಾರವನ್ನು ಪ್ರಕಟಿಸುತ್ತಿದ್ದೇನೆ.
2 , ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಹೆಮ್ಮೆ ಪಡಬೇಕಾಗಿದ್ದ ಸಂಸ್ಥೆ ಇಂದು ಸಾಹಿತಿಗಳ ಆತ್ಮಗೌರವವನ್ನೇ ಪ್ರಶ್ನಿಸುತ್ತಿದೆ. ನೈತಿಕ ಪ್ರಜಾಪ್ರಭುತ್ವದ ಬದ್ಧತೆಯನ್ನು ಕಳೆದುಕೊಂಡು ಸಂಸ್ಥೆ ಕಳೆ ಕಳೆದುಕೊಂಡಿದೆ.
3 , ಸಾಹಿತಿಗಳ ಸಂಸ್ಥೆ ಬುದ್ದಿಜೀವಿಗಳ ಮೌಲ್ಯಾಧಾರಿತ ಸಂಸ್ಥೆ ಎಂಬ ಹಮ್ಮು ಬಿಮ್ಮು ಈಗಿಲ್ಲ. ಸಾಹಿತಿಗಳಿಗೆ ಬಹಿರಂಗವಾಗಿ ಅವಮಾನ ಮಾಡಲಾಗುತ್ತಿದೆ.
4 , ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯಗಳಿಗೆ ವಿರುದ್ಧವಾಗಿ ಸಂಸ್ಥೆ ಸರ್ಕಾರಕ್ಕೆ ತನ್ನ ಪ್ರಭುತ್ವ ಸಲಹಾ ಶಕ್ತಿಯನ್ನು ಕಳೆದುಕೊಂಡು ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಜಾತಿ ಗುಂಪುಗಾರಿಗೆ, ರೌಡಿಶೀಟರುಗಳಿಗೆ ಮನ್ನಣೆ, ಅಧಿಕಾರ ದಾಹಿಗಳ ಶೋಷಣೆ , ದೌರ್ಜನ್ಯ, ದಬ್ಬಾಳಿಕೆ ವ್ಯಾಪಕವಾಗಿ ನಡೆಯುತ್ತಿದೆ.
5 , ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾನ್ವಿತ ಸದಸ್ಯರುಗಳನ್ನು ಸದಸ್ಯತ್ವದಿಂದ ಕಿತ್ತು ಹಾಕುವುದು ಮಹಿಳೆಯರಿಗೆ ಆದ್ಯತೆ ನೀಡದೆ ಇರುವುದು. ವಯಕ್ತಿಕ ಹಿತಾಸಕ್ತಿಗಾಗಿ ಮೆರೆಯುವುದು. ಸೇರಿದಂತೆ ಪಾರದರ್ಶಕ ಚಟುವಟಿಕೆಗಳಿಗೆ ಮತ್ತು ಕನ್ನಡಿಗ ನಾಗರೀಕರ ಮಹಾರಾಜರ ತೆರಿಗೆ ಹಣವನ್ನು ದುಂದು ಮಾಡಿ, ಸ್ವಾರ್ಥಕ್ಕಾಗಿ ಸಾಹಿತ್ಯದ ಹೆಸರಿನಲ್ಲಿ ದೇಶ ವಿದೇಶ ಸುತ್ತುವುದು, ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಕುಟುಂಬದ ಮತ್ತು ಚುನಾವಣೆಯಲ್ಲಿ ಸಹಾಯ ಮಾಡಿದವರ ಮ್ಯಾನ್ಮಾರ ತೀರ್ಥ ಯಾತ್ರೆ ಮೋಜು ಮಸ್ತಿ ಮಾಡಿರುವುದು. ಹೀಗೆ ಸಾಲು ಸಾಲು ಅಪಚಾರಗಳ ಅಸಹನೀಯ ಬೆಳವಣಿಗೆ.
6 , ಮನಸೋ ಇಚ್ಛೆ ನಡವಳಿಕೆಗಳು ಆಡಳಿತ ಮಂಡಳಿಯ ಪ್ರಭುತ್ವ ವಿರೋಧಿ ನೀತಿ. ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡವನ್ನು ಕೆಂಪು ಬಣ್ಣ ಹೊಡೆಸಿ ರಕ್ತಸಿಕ್ತ ಮಾಡಿರುವುದು ಕನ್ನಡಿಗ ನಾಗರೀಕ ಮಹಾರಾಜರ ಮೇಲೆ ಕೆಂಪು ಶಕ್ತಿಯನ್ನು ಪ್ರದರ್ಶಿಸುತ್ತಿರುವುದರ ಸಂಕೇತವಾಗಿ ದೌರ್ಜನ್ಯವನ್ನು ಪ್ರತಿನಿಧಿಸುವ ರೀತಿ ತಲೆತಗ್ಗಿಸುವಂತಿದೆ.
7 , ಸಾಹಿತಿಗಳ ಸಂಸ್ಥೆಯನ್ನು ಸಾಹಿತ್ಯೇತರರರು ಆಕ್ರಮಣದ ಆಪೋಶನ ತೆಗೆದುಕೊಂಡು ಕನ್ನಡ ನುಡಿ ಪ್ರಕಟಿಸಿ ಪ್ರಸಾರಿಸಿ ತಲುಪಿಸದೆ ಇರುವುದು. ಮನಸೋ ಇಚ್ಛೆ ಸದಸ್ಯರಿಗೆ ಪೂರ್ವ ತಿಳುವಳಿಕೆ ನೋಟೀಸು ನೀಡದೆ ಮೂಲ ನಿಯಮಾವಳಿ ಮತ್ತು ನಿಬಂಧನೆಗಳನ್ನು ತಿದ್ದುಪಡಿ ಮಾಡಿರುವುದು ಏಕ ವ್ಯಕ್ತಿ ಕೇಂದ್ರಿತ ಸರ್ವಾಧಿಕಾರಕ್ಕೆ ದಬ್ಬಾಳಿಕೆ ಮೂಲಕ ಸಾಮೂಹಿಕ ಸನ್ನಿಗೆ ಸದಸ್ಯರನ್ನು ದೂಡಿ ತಿದ್ದುಪಡಿಯ ಅಟ್ಟಹಾಸವನ್ನು ಮಾಡಿರುವುದು ನಾನು ಓರ್ವ ಸಾಹಿತಿಯಾಗಿ ಸಮಾಜದ ಮುಂದೆ ಪ್ರತಿಭಟನೆಯನ್ನು ಮಾಡದೇ ಇದ್ದರೆ, ಅದು ಕನ್ನಡಿಗ ಮತದಾರ ನಾಗರೀಕ ಮಹಾರಾಜರ ಆತ್ಮಗೌರವಕ್ಕೆ ದ್ರೋಹ ಬಗೆದಂತಾಗುತ್ತದೆ ಎಂದು ಅರ್ಥ ಮಾಡಿಕೊಂಡು ಸದಸ್ಯತ್ವ ಸ್ಥಾನದಿಂದ ಸಾಹಿತಿಗಳನ್ನು ಸದಸ್ಯತ್ವ ಸ್ಥಾನದಿಂದ ಕಿತ್ತೊಗೆಯುವ ಮುನ್ನವೇ ಸಂಸ್ಥೆಯಿಂದ ಹೊರ ಬರುವುದು ಸರಿ ಎಂದು ನಿರ್ಧರಿಸಿ ರಾಜೀನಾಮೆ ಪತ್ರ ರವಾನಿಸಿದ್ದೇನೆ.
8 , ಶತಮಾನೋತ್ಸವ ದಾಟಿ ಪರಿಷತ್ತು ಮುನ್ನಡೆ ಇಟ್ಟಿದ್ದರೂ ಸಹ ಸಂಸ್ಥೆ ಹುಟ್ಟಿದ ದಿನದಿಂದ ಈ ದಿನದವರೆಗೆ ಮೃತ ಸದಸ್ಯರ ಹೆಸರುಗಳನ್ನೂ ತೆಗೆದು ಹಾಕಿಲ್ಲ ಎಂದರೆ ಇದಕ್ಕಿಂತ ಭ್ರಷ್ಟಾಚಾರ ಬೇರೆ ಬೇಕೇ? ಇದೆ ಕಾರಣಕ್ಕಾಗಿ ನಾನು ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯದವರೆಗೂ ಹೋರಾಟ ಮಾಡಿದ್ದೇನೆ. ಈಗಿನ ರಾಜ್ಯ ಮತ್ತು ಜಿಲ್ಲಾ ಅದ್ಯಕ್ಷರುಗಳಿಗೆ ಕಾನೂನು ತಿಳುವಳಿಕೆ ಪತ್ರ ನೀಡಿದ್ದೇನೆ. ಆರು ತಿಂಗಳು ದಾಟಿ ಹೋದರು ಸಹ ದಾವಣಗೆರೆ ಜಿಲ್ಲಾಧ್ಯಕ್ಷರನ್ನು ಹೊರತು ಪಡಿಸಿ ಬೇರಾರೂ ಉತ್ತರಿಸಿಲ್ಲ.
9 , ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದೇವರನ್ನು ಕಂಡಿದ್ದ ನನಗೆ ಅಲ್ಲಿ ದೇವರನ್ನೇ ಹೊರ ಹಾಕಲಾಗಿದೆ ಎಂಬ ಅರಿವು ಅನುಭವ ಅನುಭೂತಿ ಸ್ಪರ್ಶವಾಗಿದೆ. ನಾನು ಸುದೀರ್ಘ ಕಾಲ ಪರಿಷತ್ತಿನ ಆತ್ಮ ಗೌರವ ಕಾಪಾಡಲು ದಶಕಗಳ ಗಟ್ಟಲೆ ಹೋರಾಟ ಮಾಡಿದರೂ ಸಹ ಸಕಾರಾತ್ಮಕವಾದ ಫಲಿತಾಂಶ ಸಮಾಜದ ಮೂಲದಿಂದಲೂ ದೊರೆತಿಲ್ಲ. ಮೃತ ಮತದಾರರ ಹೆಸರುಗಳಿಂದಲೇ ಮತ ಹಾಕೀಕೊಂಡವರು, ಮೃತ ಸದಸ್ಯರ ಮತ ಹಾಕಿದವರು, ವಿವಿಧ ಆಮಿಷಗಳಿಗೆ ಆತ್ಮಗೌರವನ್ನೇ ಒತ್ತೆ ಹಾಕಿದ ಮತದಾರ ಪ್ರಭುಗಳು ಇರುವ ವ್ಯವಸ್ಥೆಯನ್ನು ಬದಲಾಯಿಸುವ ಪ್ರಕ್ರಿಯೆಗಳ ಒಂದಂಶದ ಅಥವಾ ಒಂದು ಔನ್ಸ್ ಸಕಾರಾತ್ಮಕ ಫಲಿತಾಂಶವೂ ಇಲ್ಲದ ಮೇಲೆ ಕೇವಲ ಮತ ಚಲಾಯಿಸುವುದಕ್ಕಾಗಿ ಪರಿಷತ್ತಿನ ಅಂಗಳದಲ್ಲಿ ಸಾಹಿತಿಗಳಲ್ಲದವರ ಮುಂದೆ ನಿಂತು ಕೈಕಟ್ಟಿ, ತಲೆ ತಗ್ಗಿಸಿ ನಿಲ್ಲಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ.
ನಾನು ಯಾರದೇ ವಯಕ್ತಿಕ ವ್ಯಕ್ತಿತ್ವವನ್ನು ಗೌರವಿಸುತ್ತೇನೆ ಹೊರತು ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಗೆ ಕುಂದು ಬರುವಂತೆ ನಡೆದುಕೊಂಡ ಗುಂಪುಗಾರಿಕೆಯನ್ನು ಆತ್ಮ ಸಂತೋಷದಿಂದ ವಿರೋಧಿಸಿ ಸದಸ್ಯತ್ವವನ್ನು ಬಿಟ್ಟು ಹೊರ ಬರುತ್ತಿದ್ದೇನೆ. ಧನ್ಯವಾದ ಕನ್ನಡ ಮಾತೆಗೆ ಅರ್ಪಿಸುತ್ತಾ… ಎಂದು ವಿವರಿಸಿ ರಾಜಶೇಖರ್ ಅವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಕನ್ನಡ ನಾಡುನುಡಿಯ ಪ್ರಾತಿನಿಧಿಕ ಸಂಸ್ಥೆಯಾಗಿ ಕೆಲಸ ಮಾಡಬೇಕಾದ ಸಾಹಿತ್ಯ ಪರಿಷತ್ತಿನ ಮೇಲೆ ಸಾಕಷ್ಟು ಆಪಾದನೆ ಕೇಳಿಬರುತ್ತಿರುವ ಸಂದರ್ಭದಲ್ಲೆ ಕನ್ನಡದ ಕಟ್ಟಾಳು ಎಂ.ಜೆ ರಾಜಶೇಖರ್ ಅವರು ನೀಡಿರುವ ರಾಜೀನಾಮೆ ಕೋಲಾಹಲವನ್ನೇ ಸೃಷ್ಟಿಸಿದೆ.