

ಚಿತ್ರದುರ್ಗ: ತೀವ್ರ ಕುತೂಹಲ ಮೂಡಿಸಿದ್ದ ಚಿತ್ರದುರ್ಗ ಮುರುಘಾ ಮಠದ (Murugha Mutt) ಹೆಣ್ಣುಮಕ್ಕಳ ಹಾಸ್ಟೆಲ್ ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೆನ್ನುವ ಆರೋಪದಲ್ಲಿ ಜೈಲು ಸೇರಿದ್ದ ಮುರುಘಾ ಶ್ರೀ (Murugha Shree) ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.ಚಿತ್ರದುರ್ಗದ 2ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯ ಶ್ರೀಗಳನ್ನು ನಿರ್ದೋಷಿ ಎಂದು ತೀರ್ಪು ನೀಡಿದ್ದು,ತೀರ್ಪು ಹೊರಬೀಳುತ್ತಿದ್ದಂತೆ ಕೋರ್ಟ್ ಹೊರ ವಲಯದಲ್ಲಿ ಭಕ್ತ ಸಾಗರದ ಸಂತೋಷ ಮುಗಿಲುಮುಟ್ಟಿತ್ತು.
2022ರ ಆಗಸ್ಟ್ 26 ರಂದು ಮೈಸೂರಿನ (Mysuru) ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಪ್ರಕರಣದ ಬಗ್ಗೆ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾ.ಗಂಗಾಧರಪ್ಪ ಚನ್ನಬಸಪ್ಪ ಹಡಪದ್ ಅವರಿದ್ದ ಪೀಠ ಶ್ರೀಗಳನ್ನು ನಿರ್ದೋಷಿ ಅಂತ ತೀರ್ಪು ಪ್ರಕಟಿಸಿದೆ. ಅವರ ಮೇಲೆ ದಾಖಲಾಗಿರುವ ವಿವಿಧ ಪ್ರಕರಣಗಳ ಪೈಕಿ ಮೊದಲ ಪ್ರಕರಣದಲ್ಲಿ ಅವರು 3 ವರ್ಷಗಳ ಬಳಿಕ ಖುಲಾಸೆಯಾದಂತಾಗಿದೆ.

ಏನಾಗಿತ್ತು ಪ್ರಕರಣ? ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2022ರ ಆ.26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೊ ಕೇಸ್ (POCSO Case) ದಾಖಲಾಗಿತ್ತು. ಮುರುಘಾ ಶರಣರು ತಮ್ಮ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೆನ್ನುವುದು ಅವರ ಮೇಲಿದ್ದ ಆರೋಪ.ಈ ಹಿನ್ನಲೆಯಲ್ಲಿ ಹಾಸ್ಟೆಲ್ ನ ವಿದ್ಯಾರ್ತಿನಿಯರೇ ಈ ಪ್ರಕರಣದಲ್ಲಿ ಎ1 ಮುರುಘಾಶ್ರೀ, ಎ2 ಲೇಡಿ ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಮ್ಯಾನೇಜ ರ್ ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ ಅವರ ವಿರುದ್ಧ ದೂರು ನೀಡಿದ್ದರು. ತೀವ್ರ ಒತ್ತಡದ ನಂತರವೂ ಇವರೆಲ್ಲದ ವಿರುದ್ದ ಕೇಸ್ ದಾಖಲಾಗಿತ್ತು.
ಮೇಲ್ಕಂಡ ಪ್ರಕರಣವು ಅದೇ ವರ್ಷ ಆ.27ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗವಾಗಿತ್ತು. 2022ರ ಸೆ.01 ರಂದು ಮುರುಘಾಶ್ರೀ, ವಾರ್ಡನ್ ರಶ್ಮಿ ಬಂಧನಕ್ಕೊಳಗಾಗಿದ್ದರು. 2022ರ ಅ.13 ರಂದು ಮುರುಘಾಶ್ರೀ ವಿರುದ್ಧ ಮಠದ ಅಡುಗೆ ಸಹಾಯಕಿಯಿಂದ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿತ್ತು. ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೂ ಲೈಂಗಿಕ ಶೋಷಣೆ ಆಗಿತ್ತೆಂದು ಮಹಿಳೆ ಆಪಾದಿಸಿದ್ದರು.

ಈ ಪ್ರಕರಣದಲ್ಲಿ ಮುರುಘಾಶ್ರೀ ಎ1, ಎ2 ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ, ಎ6 ಮುರುಘಾಶ್ರೀ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ದ ಕೇಸ್ ದಾಖಲಾಗಿತ್ತು,ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ ಚಿತ್ರದುರ್ಗ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದ ತಂಡವು 694 ಪುಟಗಳ ಚಾರ್ಜ್ಶೀಟ್ ನ್ನು 2022ರ ಅ.27 ರಂದು ಸಲ್ಲಿಸಿತ್ತು. ಅದರಲ್ಲಿ 347 ಪುಟಗಳ ಎ ಮತ್ತು ಬಿ ಎಂದು ಎರಡು ಸೆಟ್ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಆಶ್ಚರ್ಯವೆಂದರೆ 2023ರ ಜ.10ಕ್ಕೆ ದಾಖಲಾದ 2ನೇ ಪೋಕ್ಸೊ ಪ್ರಕರಣದಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು 761 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಇಷ್ಟೆಲ್ಲ ಸಾಕ್ಷ್ಯಾಧಾರ ಹಾಗೂ ಚಾರ್ಜ್ ಶೀಟ್ ಮೇಲೆ ಚಿತ್ರದುರ್ಗ ನ್ಯಾಯಾಲಯ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆಯೇ ಅಂದರೆ 2023ರ ನ.8 ರಂದು ಮುರುಘಾಶ್ರೀಗೆ ಹೈಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿತ್ತು.ನ.16ರಿಂದು ಅವರು ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗಿದ್ದರು.
ಆದರೆ 2ನೇ ಪೋಕ್ಸೋ ಕೇಸಿನಲ್ಲಿ ಜಾಮೀನು ಪಡೆಯದ ಹಿನ್ನೆಲೆಯಲ್ಲಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ನ.20ರಂದು ಮುರುಘಾಶ್ರೀ ಬಂಧನಕ್ಕೊಳಗಾದರು. ಕೋರ್ಟ್ ಮುಂದೆ ಹಾಜರುಪಡಿಸಿದಾಗ ಅದೇ ಸಂಜೆ ಹೈಕೋರ್ಟ್ ಸೂಚನೆ ಮೇರೆಗೆ ಬಿಡುಗಡೆಯಾಗಿದ್ದರು. ಇದರ ಬೆನ್ನಲ್ಲಿ ಸಂತ್ರಸ್ತೆಯರು ಮುರುಘಾ ಶ್ರೀಗಳ ಜಾಮೀನು ರದ್ದತಿ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.ಆಗ ಸಾಕ್ಷಿ ವಿಚಾರಣೆ ಪೂರ್ಣ ಆಗುವವರೆಗೆ ಮುರುಘಾಶ್ರೀ ಬಂಧನದಲ್ಲಿಡುವಂತೆ ಸುಪ್ರಿಂ ಆದೇಶ ಮಾಡಿತ್ತು. ಹೀಗಾಗಿ 2024ರ ಮೇ.27 ರಂದ ಕೋರ್ಟ್ ಎದುರು ಶರಣಾದ ಮುರುಘಾ ಶ್ರೀಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿತ್ತು. ಬಳಿಕ ಸಂತ್ರಸ್ತೆಯರಿಬ್ಬರು ಸೇರಿದಂತೆ 13 ಜನರ ಸಾಕ್ಷಿ ವಿಚಾರಣೆ ಅಂತ್ಯವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಮುರುಘಾಶ್ರೀಗೆ ಬಿಡುಗಡೆ ಭಾಗ್ಯ ಸಿಕ್ಕಿತ್ತು.
ಇಂದು ಮದ್ಯಾಹ್ನ ಚಿತ್ರದುರ್ಗದ ಕೋರ್ಟ್ ಮುರುಘಶ್ರೀಗಳನ್ನು ನಿರ್ದೋಷಿ ಎಂದು ತೀರ್ಮಾನಿಸಿರುವುದರಿಂದ ಮಠದ ಭಕ್ತಾದಿಗಳಲ್ಲಿ ಹರ್ಷ ಸಂಭ್ರಮ ಮನೆ ಮಾಡಿತ್ತು.ಆದರೆ ಸಂತ್ರಸ್ಥರು ಇದನ್ನು ಮೇಲಿನ ಹಂತದ ಕೋರ್ಟ್ ನಲ್ಲಿ ಪ್ರಶ್ನಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.










