ಗದಗ: ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರು ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣವು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಈ ಇಡೀ ಪ್ರಕರಣವು ರಾಜಕೀಯ ಪ್ರೇರಿತ ಮತ್ತು ಮುಂಚಿತವಾಗಿ ಹೆಣೆಯಲಾದ ಸಂಚು ಎಂಬ ಸಂಶಯಕ್ಕೆ ಪುಷ್ಠಿ ನೀಡುವಂತೆ ಈಗ ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿ ಅವರ ಸುದ್ದಿಗೋಷ್ಠಿ ಮತ್ತು ಆಡಿಯೋ ಬಯಲಾಗಿದೆ.
ಸ್ವಾಮೀಜಿ ಕಿಂಗ್‌ಪಿನ್ ಎಂಬ ಆರೋಪ ಮತ್ತು ಶ್ರೀಗಳ ಸ್ಪಷ್ಟನೆ
ವೈರಲ್ ಆಗಿದ್ದ ಆಡಿಯೋದಲ್ಲಿ ಶಾಸಕರಿಗೆ ಖೆಡ್ಡಾ ತೋಡುವ ಬಗ್ಗೆ ಮಾತನಾಡಿದ್ದು ತಾನೇ ಎಂದು ಒಪ್ಪಿಕೊಂಡಿರುವ ಕುಮಾರ ಮಹಾರಾಜರು, ಆದರೆ ಲೋಕಾಯುಕ್ತ ದಾಳಿಗೂ ತಮಗೂ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ವೈಮನಸ್ಸಿಗೆ ಮುಖ್ಯ ಕಾರಣ ಮಠದ ಅಧಿಕಾರ ಮತ್ತು 20 ಲಕ್ಷ ರೂಪಾಯಿಯ ‘ಡೀಲ್’.
ಸ್ವಾಮೀಜಿ ನೀಡಿದ ಸ್ಫೋಟಕ ಮಾಹಿತಿ:
ಶಾಸಕ ಚಂದ್ರು ಲಮಾಣಿ ಅವರು ಸ್ವಾಮೀಜಿಯನ್ನು ಮಠದಿಂದ ಹೊರಹಾಕಲು ಊರಿನ ಹಿರಿಯರಿಗೆ 20 ಲಕ್ಷ ರೂಪಾಯಿ ಆಮಿಷವೊಡ್ಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಒಳ ಮೀಸಲಾತಿ ಮತ್ತು ಬಂಜಾರ ಸಮಾಜದ ತಾಲ್ಲೂಕು ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಇಬ್ಬರ ನಡುವೆ ದ್ವೇಷದ ಕಿಡಿ ಹೊತ್ತಿಕೊಂಡಿತ್ತು. ಆಡಿಯೋ ರಹಸ್ಯ: “ಹೌದು, ನಾನು ಶಾಸಕನ ವಿರುದ್ಧ ಮಾತನಾಡಿದ್ದೇನೆ. ನನ್ನನ್ನು ಮಠದಿಂದ ಹೊರಹಾಕಲು ಯತ್ನಿಸಿದಾಗ ನಾನು ಸುಮ್ಮನಿರಲು ಸಾಧ್ಯವೇ?” ಎಂಬುದು ಶ್ರೀಗಳ ಪ್ರಶ್ನೆ.
ಸೋನು ಲಮಾಣಿ ಪಾತ್ರವೇನು? ರಹಸ್ಯ ಬಯಲಾಗುತ್ತಾ?
ಈ ಇಡೀ ಟ್ರ್ಯಾಪ್ ಪ್ರಕರಣದಲ್ಲಿ ಸೋನು ಲಮಾಣಿ ಎಂಬ ಹೆಸರನ್ನು ಸ್ವಾಮೀಜಿಯೇ ಉಲ್ಲೇಖಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಾಸಕ ಲಮಾಣಿ ಅವರ ತೇಜೋವಧೆಯಿಂದ ಸೋನು ಲಮಾಣಿಗೆ ಸಿಗುವ ಲಾಭವೇನು? ಒಂದು ವೇಳೆ ಸೋನು ಲಮಾಣಿ ಅವರ ಕೈವಾಡವಿಲ್ಲದಿದ್ದರೆ, ಸ್ವಾಮೀಜಿ ಆ ಹೆಸರನ್ನು ಏಕೆ ಪ್ರಸ್ತಾಪಿಸುತ್ತಿದ್ದರು?
ಇದೀಗ ಸೋನು ಲಮಾಣಿ ಅವರು ‘ಮಾನನಷ್ಟ ಮೊಕದ್ದಮೆ’ ಹೂಡುವ ಮಾತನಾಡುತ್ತಿರುವುದು ತನಿಖೆಯಿಂದ ನುಣುಚಿಕೊಳ್ಳುವ ಪ್ಲ್ಯಾನ್ ಇರಬಹುದೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿದೆ. ಸೋನು ಅವರನ್ನು ಸರಿಯಾಗಿ ವಿಚಾರಣೆ ನಡೆಸಿದರೆ, ಈ ‘ಖೆಡ್ಡಾ’ದ ಅಸಲಿ ಸೂತ್ರಧಾರಿಗಳು ಯಾರು ಎಂಬುದು ಹೊರಬರುವುದು ಖಚಿತ.
ಸ್ವಾಮೀಜಿ ತಮ್ಮ ಸುದ್ದಿಗೋಷ್ಠಿಯಲ್ಲಿ ಕೇಳಿದ ಒಂದು ಮಾರ್ಮಿಕ ಪ್ರಶ್ನೆ ಎಂದರೆ— “ದಾಳಿ ನಾನು ಮಾಡಿಸಿದ್ದು ಎನ್ನುವುದಾದರೆ, ಶಾಸಕರು ಹಣವನ್ನೇಕೆ ಪಡೆದರು? ಹಣ ಪಡೆದದ್ದು ತಪ್ಪಲ್ಲವೇ?”. ಈ ಪ್ರಶ್ನೆಯು ಶಾಸಕರ ಬೆಂಬಲಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ, ಲೋಕಾಯುಕ್ತ ದಾಳಿಯ ಸಮಯದಲ್ಲಿ ಆಡಿಯೋದಲ್ಲಿ ಹೇಳಿದಂತೆಯೇ ಎಲ್ಲವೂ ನಡೆದಿದೆ ಎಂದರೆ, ಇದರ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಇದನ್ನೂ ಓದಿ | ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ: 5 ಲಕ್ಷ ಲಂಚ ಪಡೆಯುವಾಗ ಅರೆಸ್ಟ್!
ಶಿರಹಟ್ಟಿ ಕ್ಷೇತ್ರದ ಅಭಿವೃದ್ಧಿಗಿಂತ ಹೆಚ್ಚಾಗಿ ಈಗ ಸೇಡಿನ ರಾಜಕಾರಣ ಸದ್ದು ಮಾಡುತ್ತಿದೆ. ರಾತ್ರಿ 1 ಗಂಟೆಗೆ ಬಂದ ಬೆದರಿಕೆ ಕರೆಗಳು ಸ್ವಾಮೀಜಿಯವರಲ್ಲಿ ಭೀತಿ ಹುಟ್ಟಿಸಿವೆ. ಒಂದು ಕಡೆ ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಶಾಸಕರು, ಇನ್ನೊಂದೆಡೆ ದ್ವೇಷದ ಹಿನ್ನೆಲೆಯಲ್ಲಿ ದಾಳಿ ಮಾಡಿಸಿದ ಆರೋಪ ಹೊತ್ತಿರುವ ಸ್ವಜಾತಿ ಮುಖಂಡರು ಮತ್ತು ಸ್ವಾಮೀಜಿ. ಈ ಪ್ರಕರಣದ ತನಿಖೆ ಆಳಕ್ಕೆ ಇಳಿದರೆ ಬಂಜಾರ ಸಮಾಜದ ರಾಜಕೀಯ ಧ್ರುವೀಕರಣದ ಅಸಲಿ ಮುಖವಾಡ ಕಳಚಲಿದೆ.










