advertise here

Search

ಶಿವಮೊಗ್ಗದ ಬಾಲಕ ಸಂಕೇತ್ ಮರ್ಡರ್-ಕ್ರಿಕೆಟ್ ಕಿರಿಕ್ಕೋ, ಜಾತಿ ದ್ವೇಷವೋ ?

shimoga sanketh murder case

ಮಲೆನಾಡೆಂಬ ಮಲೆನಾಡೇ ಶಿವಮೊಗ್ಗದಲ್ಲಿ ನಡೆದ ಆ ಬಾಲಕನ ಕೊಲೆಗೆ ಡಿಸ್ಟರ್ಬ್ ಆಗಿದೆ. ಆಟ-ಪಾಠ ಎಂದ್ಕೊಂಡು ಹಾಯಾಗಿರಬೇಕಾದ ವಯಸ್ಸಲ್ಲಿ ಮೀಸೆ ಮೂಡದ ಕಿರಾತಕರಿಂದ ಹೆಣವಾಗಿ ಹೋಗಿದ್ದಾನೆ. ಮುದ್ದಿನ ಮಗನನ್ನು ಕಳೆದುಕೊಂಡ ಕುಟುಂಬ ದಿಕ್ಕು ತೋಚದೆ ಕಂಗಾಲಾಗಿದೆ. ಸರ್ಕಾರ ಪರಿಹಾರಾರ್ಥವಾಗಿ 15ಲಕ್ಷ ಹಣ ಕೊಟ್ಟಿದ್ರೂ ಹೋದ ಮಗ ಬರ್ತಾನಾ ಎಂದು  ಕಣ್ಣೀರಿಡುತ್ತಿದೆ. ವಾಸವಾಗಿದ್ದ ಏರಿಯಾದಲ್ಲಿ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಆ ಹುಡುಗನ ಅಗಲಿಕೆಗೆ ಇಡೀ ಊರಿಗೆ ಊರೇ ಸಂತಾಪ ಸೂಚಿಸ್ತಿದೆ. ಕೊಲೆಗಾರರನ್ನು ಬಂಧಿಸುವುದಲ್ಲ, ಗಲ್ಲಿಗೆ ಏರಿಸ್ಬೇಕೆನ್ನುವ ಕೂಗು ಜೋರಾಗಿ ಕೇಳಿಬರ್ತಿದೆ. ಆದರೆ ಇದನ್ನು ಕಮ್ಯುನಲ್ ಗೊಳಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೂಡ ಕೆಲವರು ಯತ್ನಿಸ್ತಿದಾರೆ ಎನ್ನುವುದು ಕೂಡ ಗಮನಿಸ್ಬೇಕಾದ ವಿಷಯ.

ಹಬ್ಬದ ಸಂಭ್ರಮಕ್ಕೆ ಸೂತಕದ ಛಾಯೆ: ಕರಾಳ ರಾತ್ರಿಯ ಘಟನೆ

ಅದು ಫೆಬ್ರವರಿ 23ರ ರಾತ್ರಿ. ಇಡೀ ಶಿವಮೊಗ್ಗದಲ್ಲಿ ಮಾರಿಹಬ್ಬದ ಸಂಭ್ರಮ. ತಾವು ಸಾಕಿದ ಕುರಿ-ಕೋಳಿಗಳನ್ನು ಕ್ಷುದ್ರದೇವತೆಯಾದ ಮಾರಮ್ಮಗೆ ಬಲಿಕೊಟ್ಟು ಸಂಭ್ರಮಿಸಲು ಶಿವಮೊಗ್ಗ ಅಣಿಯಾಗುತ್ತಿತ್ತು. ಎಲ್ಲರೂ ತಮ್ಮ ತಮ್ಮ ಸಂಬಂಧಿಗಳನ್ನು ಕರೆದು ಹಬ್ಬದಾಚರಣೆಯಲ್ಲಿ ಒಂದಾಗಲು ಆತುರದಿಂದ ಕಾಯುತ್ತಿತ್ತು. ಅದರ ನಡುವಲ್ಲೇ ಶಿವಮೊಗ್ಗದ ಬೈಪಾಸ್ ರಸ್ತೆಯ ಊರಗಡೂರಿನಲ್ಲಿ  ಮೀಸೆ ಮೂಡದ ಕಿರಾತಕರ ಪಡೆ  ಬಾಲಕನ ಉಸಿರನ್ನೇ ನಿಲ್ಲಿಸಿತ್ತು. ಊರಿನಲ್ಲಿ ನೆಲೆಸಿದ್ದ ಹಬ್ಬದ ಸಂಭ್ರಮಕ್ಕೆ ಸೂತಕದ ಛಾಯೆ ಬಡಿದಿತ್ತು. ಹಿಂದೂಗಳಿಗಿಂತ ಮುಸ್ಲಿಮರೇ ಹೆಚ್ಚಾಗಿರುವ ಊರಗಡೂರಿನಲ್ಲಿ ಈ ಘಟನೆ ಎಲ್ಲರನ್ನು ಶೋಕಸಾಗರದಲ್ಲಿ ಮುಳುಗಿಸಿಬಿಡ್ತು. ನಮ್ಮ ಮನೆಯಲ್ಲೇ ಮಗನೊಬ್ಬ ಕೊಲೆಯಾಗಿ ಹೋಗಿದ್ದಾನೆ ಎನ್ನುವ ನೋವು ಅಲ್ಲಿತ್ತು. ಕೊಲೆಗಾರರು ಯಾವ ಸಮುದಾಯದವರೇ ಆಗಿದ್ರು ಅವರನ್ನು ಶಿಕ್ಷಿಸದೆ ಬಿಡದಂತೆ ಸಾಮೂಹಿಕ ಕೂಗು ಕೇಳಿಬಂತು.

ಅಂದ್ಹಾಗೆ ಅಲ್ಲಿ ಹೆಣವಾಗಿ ಹೋದಾತ 15ವರ್ಷದ ಸಂಕೇತ್. ಎಲ್ಲರ ಮನೆಮಗನಾಗಿ ಹೋಗಿದ್ದ.ಎಸ್ ಎಸ್ ಎಲ್ ಸಿಯಲ್ಲಿ ಓದುತ್ತಿದ್ದ ಸಂಕೇತ್ ನನ್ನು ಆತ ಟ್ಯೂಷನ್ ಮುಗಿಸಿಕೊಂಡು ಬರುವ ವೇಳೆಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿತ್ತು ಹಂತಕರ ಪಡೆ. ಅದು ಪ್ರಜ್ಷಾಪೂರ್ವಕವಾಗಿ ನಡೆದೋಯ್ತೋ ಅಥವಾ ಹಳೆಯ ಜಿದ್ದಿನಲ್ಲಿ ನಡೆದ ಘರ್ಷಣೆಯ ಕಾರಣಕ್ಕೆ ನಡೆದೋಯ್ತೋ ಗೊತ್ತಿಲ್ಲ. ಆದ್ರೆ ಹಲ್ಲೆಯಿಂದ ತೀವ್ರ ಅಸ್ವಸ್ಥನಾಗಿದ್ದ ಸಂಕೇತ್ ಚಿಕಿತ್ಸೆಗೆಂದು ಕರೆದೊಯ್ಯುವಾಗ ಮಾರ್ಗಮದ್ಯೆಯೇ ಉಸಿರು ಚೆಲ್ಲಿದ್ದಾನೆ. ಈ ಘಟನೆಯಲ್ಲಿ ಪ್ರತ್ಯೇಕ ಕೋಮಿನ ಹುಡುಗ್ರು ಇದ್ದುದ್ದರಿಂದಲೇನೋ ಘಟನೆಗೆ ಕೋಮಿನ ಬಣ್ಣ ಬಳಿಯುವ ಪ್ರಯತ್ನಗಳು ಶಿವಮೊಗ್ಗದಲ್ಲಿ ನಡೆಯಿತು. ಈ ಕಾರಣದಿಂದ ಶಿವಮೊಗ್ಗದ ಸಧ್ಯದ ಸ್ಥಿತಿ ಬೂದಿಮುಚ್ಚಿದ ಕೆಂಡದಂತೆಯೇ ಇದೆ.

ಎಸ್ಪಿಯವರ ‘ಆಕಸ್ಮಿಕ’ ಹೇಳಿಕೆ ಮತ್ತು ಸಾರ್ವಜನಿಕರ ಆಕ್ರೋಶ

ಎಸ್ಪಿ ನಿಖಿಲ್‌ರವರು “ಇದೊಂದು ಆಕಸ್ಮಿಕ ದುರಂತ” ಎಂದು ಹೇಳಿದ್ದಾಗಲೇ ಶಿವಮೊಗ್ಗದಲ್ಲಿ ದೊಡ್ಡ ಆಕ್ರೋಶ ವ್ಯಕ್ತವಾಗಿತ್ತು. ಎಸ್ಪಿ ನಿಖಿಲ್ ಘಟನೆ ಬಗ್ಗೆ ಪೂರ್ವಾಪರ ವಿಚಾರಿಸದೆ ಇದೊಂದು ಆಕಸ್ಮಿಕ ಎನ್ನುವಷ್ಟು ಇನ್ ಸೆನ್ಸಿಟೇವ್ ಆದ್ರಾ ಎಂದು ಜನ ಮಾತ್ನಾಡಿಕೊಳ್ಳುವಂತಾಯ್ತು. ಆದ್ರೆ ಒಬ್ಬ ಎಸ್ಪಿಯಾಗಿ ಹೇಗೆ ಸಿಚುವೇಷನ್ ನ್ನು ಕಂಟ್ರೋಲ್ ಮಾಡ್ಬೇಕೆನ್ನುವುದನ್ನು ಚೆನ್ನಾಗಿ ಅರಿತಿರುವ ನಿಖಿಲ್ ಅವರು ಇನ್ನೇನನ್ನು ಹೇಳಬೇಕಿತ್ತೋ ಗೊತ್ತಿಲ್ಲ. ಸಾವಿನ ಬಗ್ಗೆ ಸಹಾನುಭೂತಿ ಇಟ್ಕೊಂಡೇ ವಾಸ್ತವದ ಬಗ್ಗೆ ಮಾತ್ನಾಡಬೇಕೇ ವಿನಃ ಇದರಲ್ಲಿ ಅನ್ಯಕೋಮಿನ ಹುಡುಗ್ರ ಕೈವಾಡವಿದೆ ಎಂದು ಹೇಳಬೇಕಿತ್ತಾ..? ಹಾಗೇನಾದ್ರೂ ಹೇಳಿದಿದ್ರೆ ಏನಾಗಬಹುದಿತ್ತು ನೀವೇ ಊಹಿಸಿ. ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ. ಘಟನೆಗೆ ಕಾರಣವಾದವ್ರನ್ನು ಬಂಧಿಸಲಾಗಿದೆ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಾಂದರ್ಭಿಕವಾಗಿ ನಿಖಿಲ್ ಮಾತನಾಡಿದ್ದಾರೆ. ಆದರೆ ಇದನ್ನೇ ಕೆಲವರು ಬೇರೆ ರೀತಿಯಲ್ಲಿ ಪೋಟ್ರೈಟ್ ಮಾಡುವ ಪ್ರಯತ್ನವನ್ನೂ ಮಾಡ್ತಿದಾರೆ.

ಇನ್ನು ಅವತ್ತು ರಾತ್ರಿ ನಡೆದ ಕೊಲೆಗೆ ಮೇಲ್ನೋಟಕ್ಕೆ ಕ್ರಿಕೆಟ್ ಕಿರಿಕ್ ಕಾರಣ ಎನ್ನಲಾಗ್ತಿದೆ. ಕ್ರಿಕೆಟ್ ವಿಚಾರದಲ್ಲಿ ಆತನ ಸ್ನೇಹಿತನ ಮೇಲೆ ಅಪ್ರಾಪ್ತ ಬಾಲಕರ ಗುಂಪು ಹಲ್ಲೆ ನಡೆಸುತ್ತಿತ್ತಂತೆ. ಆ ವೇಳೆ ಅದೇ ಮಾರ್ಗವಾಗಿ ಮನೆಗೆ ಹೋಗ್ತಿದ್ದ ಸಂಕೇತ್ ನೋಡಿ ಜಗಳ ಬಿಡಿಸಲು ಎಂಟ್ರಿ ಕೊಟ್ಟಿದ್ದಾನೆ. ಆ ವೇಳೆ ಅವರ ನಡುವೆ ಏನೆಲ್ಲಾ ನಡೆಯಿತೋ ಗೊತ್ತಿಲ್ಲ, ಸ್ನೇಹಿತನ ನೆರವಿಗೆ ಬಂದ ಸಂಕೇತ್‌ನನ್ನೆ ಟಾರ್ಗೆಟ್ ಮಾಡ್ಕೊಂಡು ಹಲ್ಲೆ ಮಾಡಿದ್ದಾರೆ. ಪಾಪ..ಹಲ್ಲೆಯ ತೀವ್ರತೆಗೆ ಸಂಕೇತ್ ಕುಸಿದುಬಿದ್ದಿದ್ದಾನೆ. ಇದನ್ನು ನೋಡ್ತಿದ್ದಂಗೆ ಹಂತಕರು  ಅಲ್ಲಿಂದ ಓಡಿ ಹೋಗಿದ್ದಾರೆ.ಅವರನ್ನು ಹಿಡಿಯುವುದಕ್ಕಿಂತ ಸ್ನೇಹಿತನನ್ನು ಉಳಿಸೋದು ಮುಖ್ಯವಾಗಿದ್ದರಿಂದ ಮನೆಯವರಿಗೆ ಹೇಗೋ ವಿಷಯ ಮುಟ್ಟಿಸಿದ್ದಾನೆ.ಪೋಷಕರು ಬಂದು ಆತನನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲು ಹೋಗ್ತಿದ್ದಾಗ ಅನ್ ಫಾರ್ಚುನೇಟ್ ಸಂಕೇತ್  ಕೊನೆಯುಸಿರೆಳೆದಿದ್ದಾನೆ. 

ಅಂದ್ಹಾಗೆ ಸಂಕೇತ್ ಬಗ್ಗೆ ಹೇಳುವುದಾದ್ರೆ ವಯಸ್ಸಿನ್ನೂ 15, ಶೈಕ್ಷಣಿಕ ಜೀವನದ ನಿರ್ಣಾಯಕ ಘಟ್ಟವಾದ ಎಸ್‌ಎಸ್‌ಎಲ್‌ಸಿ ಓದ್ತಿದ್ದ ಇನ್ನೊಂದಷ್ಟು ದಿನ ಕಳೆದಿದ್ರೆ ಪರೀಕ್ಷೆಯನ್ನೂ ಬರೆದುಬಿಡ್ತಿದ್ದ.ಅದೇ ಕಾರಣಕ್ಕೆ ಸ್ಕೂಲ್ ನಲ್ಲಿ ನಡೀತಿದ್ದ ಸ್ಪೆಷಲ್ ಕ್ಲಾಸ್ ಅಟೆಂಡ್ ಮಾಡುತ್ತಿದ್ದ.ಅನೇಕ ದಿನಗಳಿಂದ್ಲೂ ಮನೆಗೆ ಬರುವುದು ಸಂಜೆ ತಡವಾಗುತ್ತಿತ್ತು.ಆದ್ರೆ ಸಮಸ್ಯೆಗಳಾಗುತ್ತಿರಲಿಲ್ಲ.ಆದರೆ 23ರ ರಾತ್ರಿ ಆತನ ಗ್ರಹಚಾರ ಕೆಟ್ಟಿತ್ತೋ ಅಥವಾ ಹಂತಕರ ಕೈಯಲ್ಲಿ ಆತನ ಜೀವ ಹೋಗಬೇಕೆನ್ನುವುದು ಫೈಸಲ್ ಆಗಿತ್ತೋ ಗೊತ್ತಿಲ್ಲ ದುರ್ಘಟನೆಯಲ್ಲಿ ಕೊನೆಯುಸಿರೆಳೆದುಬಿಟ್ಟ.

ಸಂಕೇತ್ ಬಗ್ಗೆ ಊರಗಡೂರಿನಲ್ಲಿ ಒಳ್ಳೆಯ ಹೆಸರಿದೆ. ಯಾರ ಜತೆಯೂ ಕಿರಿಕ್ ಮಾಡಿಕೊಳ್ಳದ ಸೌಮ್ಯ ಸ್ವಭಾವದ ಹುಡುಗ. ಕ್ರಿಕೆಟ್ ಆಡೋ ಹುಚ್ಚಿದ್ರಿಂದ ಶಾಲೆ ಆಸುಪಾಸಿನಲ್ಲಿದ್ದ ಮೈದಾನದಲ್ಲಿ ಸಮಾನಮನಸ್ಕ ಸ್ನೇಹಿತರೊಂದಿಗೆ ಆಟವಾಡ್ಲಿಕ್ಕೆ ಹೋಗ್ತಿದ್ದ. ಆದರೆ ಯಾರ ಜತೆಗೂ ದ್ವೇಷ ಕಟ್ಟಿಕೊಳ್ಳುವಂಥ ಸ್ವಭಾವವೇ ಆತನದಲ್ಲ. ಯಾರೊಂದಿಗೂ ಹೊಡೆದಾಡಿದವನಲ್ಲ. ಎಲ್ಲಾ ಕೋಮಿನಲ್ಲೂ ಆತನ ಸ್ನೇಹಿತರಿದ್ದರು. ಹಾಗೆ ನೋಡಿದ್ರೆ ಮುಸ್ಲಿಂ ಸಮುದಾಯವೇ ಮನೆಯ ಸುತ್ತಮುತ್ತವಿದ್ದರೂ ಎಲ್ಲರ ಪ್ರೀತಿಗೂ ಪಾತ್ರನಾಗಿದ್ದ. ಆತ ಎಷ್ಟರ ಮಟ್ಟಿಗೆ ಮುಸ್ಲಿಂ ಬಾಂಧವರೊಂದಿಗೆ ಆತ್ಮೀಯತೆ ಹೊಂದಿದ್ದ ಎನ್ನುವುದಕ್ಕೆ ಆತನ ಶವ ಕಂಡು ಕಣ್ಣೀರಿಟ್ಟವರಲ್ಲಿ ಮುಸ್ಲಿಮರೇ ಹೆಚ್ಚಾಗಿದ್ದರೆನ್ನುವುದೇ ಸಾಕ್ಷಿ.

ಕ್ರಿಕೆಟ್ ಕಿರಿಕ್ ಮತ್ತು ಡ್ರಗ್ಸ್ ಮಾಫಿಯಾದ ನಂಟು

ಇಂಥಾ ಹುಡುಗ ಸಂಕೇತ್ ನನ್ನು ಮುಗಿಸಿದವರೆಲ್ಲಾ ಡ್ರಾಪ್ ಔಟ್ ವಿದ್ಯಾರ್ಥಿಗಳೆನ್ನಲಾಗ್ತಿದೆ. ಓದು ತಲೆಗತ್ತದೆ ಬೀದಿ ಬೀದಿಗಳಲ್ಲಿ ಅಲೆಯುವ ಚಪ್ಪರ್ ಗಳಾಗಿದ್ರು. ಊರಗಡೂರಿನ ಜನ ಸಂಪರ್ಕವಿಲ್ಲದ ಪ್ರದೇಶಗಳನ್ನು ಅಡ್ಡಾ ಮಾಡಿಕೊಂಡು ಬೆಳಿಗ್ಗೆಯಿಂದ ಸಂಜೆವರೆಗೆ ಕಾಲಹರಣ ಮಾಡೋದೇ ಕ್ಯಾಮೆ ಆಗೋಗಿತ್ತು. ಈ ಹುಡುಗ್ರ ಉಪಟಳದ ಬಗ್ಗೆ ಪೊಲೀಸ್ ವರೆಗೂ ದೂರು ಹೋಗಿತ್ತಾದ್ರೂ ನೆಗ್ಲೆಕ್ಟ್ ಮಾಡಿದ್ರಂತೆ. ದೂರು ಬಂದಾಗ್ಲೇ ಗ್ರಹಚಾರ ಬಿಡಿಸಿದಿದ್ರೆ ಸಂಕೇತ್ ನ ಮರ್ಡರ್ ಆಗ್ತಿರಲಿಲ್ಲವೇನೋ ಅನ್ನಿಸುತ್ತೆ. ಇದು ಒಂದ್ ಕಡೆಯಾದ್ರೆ ಸಂಕೇತ್ ನ ಮೇಲೆ ಮಾರಣಾಂತಿಕ ಹಲ್ಲೆಯಾಗುವ ವೇಳೆ ಹುಡುಗ್ರು ಡ್ರಗ್ಸ್ ಸೇವಿಸಿದ್ರಾ ಎನ್ನುವ ಅನುಮಾನ ಕೂಡ ಕಾಡ್ತಿದೆ. ಅವರೆಲ್ಲಾ ಗಾಂಜಾ ಗಿರಾಕಿಗಳಾಗಿದ್ರು. ಅನೇಕ ಬಾರಿ ಗಾಂಜಾ ಹೊಡ್ಕಂಡು ಹೋಗೋ ಬರೋವ್ರಿಗೆ ಕಿರಿಕ್ ಮಾಡಿಕೊಂಡಿರುತ್ತಿದ್ದ ಬಗ್ಗೆಯೂ ದೂರುಗಳಿವೆ. ಕೊಲೆಯಾಗುವ ವೇಳೆ ಈ ಹಂತಕರೆಲ್ಲಾ ಡ್ರಗ್ ಸೇವಿಸಿದ್ರಾ ಎನ್ನುವ ಆಂಗಲ್ ನಲ್ಲೂ ಇನ್ವೆಸ್ಟಿಗೇಷನ್ ನಡೀತಿದೆ.

ಕ್ರಿಕೆಟ್ ಕಿರಿಕ್ ಬಿಟ್ರೆ ಬೇರೆ ಯಾವುದಾದ್ರೂ ಕಾರಣಕ್ಕೆ ಸಂಕೇತ್ ನನ್ನು ಕೊಲೆ ಮಾಡಲಾಯ್ತಾ ಎನ್ನುವುದು ಚರ್ಚೆ ವಿಷಯ. ಕೋಮು ದ್ವೇಷದ ಕಾರಣಕ್ಕೆ ಕೊಲೆಯಾಯ್ತೆಂದು ಅನುಮಾನಿಸುವುದಕ್ಕೆ ಸಂಕೇತ್ ನೇನು ಹಿಂದೂಪರ ಕಾರ್ಯಕರ್ತನಾಗಿರಲಿಲ್ಲ. ಅಥವಾ ಹಿಂದುತ್ವದ ಪ್ರತಿಪಾದಕನೇನೂ ಆಗಿರಲಿಲ್ಲ. ಕೊಲೆಯಲ್ಲಿ ಜಾತಿ ಏನಾದ್ರೂ ಕೆಲಸ ಮಾಡಿದೆಯಾ ಎಂದು ಹುಡುಕುವ ಕೆಲಸವನ್ನು ಕೂಡ ಕೆಲವ್ರು ಮಾಡ್ತಿದಾರೆ. ಆದರೆ ಸಧ್ಯಕ್ಕೆ ಅದನ್ನು ಪುಷ್ಟೀಕರಿಸುವಂತ ಹಿನ್ನಲೆಯೇನೂ ಇದ್ದಂಗೆ ಕಾಣ್ತಿಲ್ಲವಂತೆ. ಆದರೂ ಕೋಮು ಸಂಘರ್ಷಕ್ಕೆ ಹಾಟ್ ಸ್ಪಾಟ್ ಆಗುತ್ತಿರುವ ಶಿವಮೊಗ್ಗದ ನೆಲದಲ್ಲಿ ಮತ್ತೊಂದು ದುರಂತ ನಡೆಯಬಾರದೆನ್ನುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಊರಗಡೂರು ಮತ್ತು ಶಿವಮೊಗ್ಗದ ಮೋಸ್ಟ್ ಸೆಂಸಿಟೀವ್‌ ಸ್ಪಾಟ್ ಗಳಲ್ಲಿ ಪೊಲೀಸ್ ಬಿಗಿಪಹರೆ ಹಾಕಲಾಗಿದೆ. ಈ ಘಟನೆಯನ್ನು ಯಾರಾದ್ರೂ ಎನ್ ಕ್ಯಾಶ್ ಮಾಡಿಕೊಳ್ಳಲು ಯತ್ನಿಸಿದ್ರೆ, ಅಥವಾ ಪ್ರೂವ್ ಆಗದ ಹೊರತು ಇದಕ್ಕೆ ಜಾತಿ ಬಣ್ಣ ಕಟ್ಟಬಾರದು ಎನ್ನುವ ಎಚ್ಚರಿಕೆಯನ್ನು ಕೊಡಲಾಗಿದೆ. ಪೊಲೀಸ್ರು ಕೂಡ ಸಣ್ಣ ಲೋಪ ಆಗದಂತೆ ಕಟ್ಟೆಚ್ಚರ ವಹಿಸಿ ಕೆಲಸ ಮಾಡ್ತಿದಾರೆ. 

ALSO READ :  ಕೆಂಗೇರಿ ಕೆರೆಪಾಲಾಗಿದ್ದ ಅಣ್ಣ-ತಂಗಿ ಶವ ಪತ್ತೆ: ಪೌರಕಾರ್ಮಿಕ ತಾಯಿಯ ಆಕ್ರಂದನ!

ತನಿಖೆಯಿಂದ ತಿಳಿದು ಬಂದ ಮಾಹಿತಿಗಳ ಮೇರೆಗೆ ಎಸ್ಪಿ ನಿಖಿಲ್,  ಮೇಲ್ನೋಟಕ್ಕೆ ಇದು ಬೇರೆ ಕಾರಣಗಳಿಗೆ ನಡೆದ ಕೊಲೆ ಎನಿಸ್ತಿಲ್ಲ. ಕ್ರಿಕೆಟ್ ನಲ್ಲಾದ ಕಿರಿಕ್ಕೆ ಕೊಲ್ಲುವಷ್ಟರ ಮಟ್ಟಿಗಿನ ದ್ವೇಷಕ್ಕೆ ಕಾರಣವಾಯ್ತೆಂದು ಅನ್ನಿಸ್ತಿದೆ. ಏಕೆಂದರೆ ಕ್ರಿಕೆಟ್ ವಿಚಾರದಲ್ಲಿ ಸಂಕೇತ್ ಜತೆಗಿದ್ದ ಹುಡುಗ್ರ ಗುಂಪಿಗೂ ಪ್ರತೀಕಾರಕ್ಕೆ ಕಾಯುತ್ತಿದ್ದ ಹಂತಕರ ಗುಂಪಿಗೂ ವಾರಗಳ ಹಿಂದಷ್ಟೇ ಗಲಾಟೆಯಾಗಿತ್ತಂತೆ. ಮುಂದುವರೆಸದೆ ಅಲ್ಲೇ ಕಾಂಪ್ರಮೈಸ್ ಮಾಡ್ಕೊಂಡಿದ್ರಂತೆ. ಆದರೆ ಸಂಕೇತ್ ಗುಂಪಿನ ಮೇಲೆ ದ್ವೇಷದ ಹೊಗೆ ಆಡುತ್ತಲೇ ಇತ್ತಂತೆ. ಅದೇನ್ ಕೆಟ್ಟ ಘಳಿಗೆನೋ ಏನೋ ಗೊತ್ತಿಲ್ಲ. ಕೊಲೆಯಾಗುವ ಸಂಜೆ ಸಂಕೇತ್ ನ ಸ್ನೇಹಿತ ಆ ಗುಂಪಿನ ಕೈಗೆ ಸಿಕ್ಕಾಕೊಂಡಿದ್ದಾನೆನ್ನಿಸುತ್ತೆ.ಸುಮ್ನೆ ಕಿರಿಕ್ ತಗೆದುಕೊಂಡು ಜಗಳ ಶುರುಮಾಡಿದ್ದಾರೆ.ಕಾಕತಾಳೀಯ ಎನ್ನುವಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವಭಾವಿಯ ಸ್ಪೆಷಲ್ ಕ್ಲಾಸ್ ಮುಗಿಸಿಕೊಂಡು ಸಂಕೇತ್ ಅದೇ ದಾರಿಯಲ್ಲಿ ಬರ್ತಿದ್ದ. ತನ್ನ ಸ್ನೇಹಿತನನ್ನು ಹೊಡೆಯುತ್ತಿದ್ದ ದೃಶ್ಯ ಕಂಡು ಗಲಾಟೆಗೆ ಹೋಗದೆ ಅವನನ್ನು ಅವರಿಂದ ಬಿಡಿಸಲು ಹೋಗಿದ್ದಾನೆ. ಈತನನ್ನು ನೋಡ್ತಿದ್ದಂಗೆ ಇವರಿಗೆ ಏನನ್ನಿಸ್ತೋ ಏನೋ ಆ ಸ್ನೇಹಿತನನ್ನು ಬಿಟ್ಟು ಇವನೊಂದಿಗೆ ಕಿರಿಕ್ ಮಾಡಿಕೊಂಡು ಹೊಡೆಯೊಕ್ಕೆ ಪ್ರಾರಂಭಿಸಿದ್ದಾರೆ. ಅವರ ದಾಳಿಯ ತೀವ್ರತೆಗೆ ಕೆಳಕ್ಕೆ ಬಿದ್ದಿದ್ದಾನೆ. ಅದನ್ನು ನೋಡ್ತಿದ್ದಂಗೆ ಅಲ್ಲಿದ್ದ ಹುಡುಗ್ರು ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ಹೇಗೋ ಕರೆದೊಯ್ಯುವ ಪ್ರಯತ್ನಗಳಾದ್ರೂ ಸಂಕೇತ್ ಪಾಪ ಬದುಕುಳಿಯಲೇ ಇಲ್ಲ.

ಕೋಮು ಬಣ್ಣ ಮತ್ತು ರಾಜಕೀಯ ಹಗ್ಗಜಗ್ಗಾಟ

ಇನ್ನೊಂದೆಡೆ ಘಟನೆಗೆ ಕೋಮು ಬಣ್ಣ ಹಚ್ಚುವ ಕೆಲಸ ಜವಾಬ್ದಾರಿಯುತರಿಂದಲೇ ನಡೆಯುತ್ತಿರುವುದು ದುರಂತದ ವಿಷಯ. ಶಾಸಕ ಚನ್ನಬಸಪ್ಪ ಪಾದಯಾತ್ರೆ ಮೂಲಕ ಬಾಲಕನ ಮನೆಗೆ ತೆರಳಿ ಮೃತನ ಪಾರ್ಥಿವ ಶರೀರದ ದರ್ಶನ ಪಡೆದ ನಂತರ ಅದಕ್ಕೆ ಜಾತಿ ಬಣ್ಣ ಹಚ್ಚುವ ಕೆಲಸ ಮಾಡಿದ್ದು ದುರಾದೃಷ್ಟಕರ. ತನಿಖೆ ಪ್ರಗತಿಯಲ್ಲಿರುವಾಗ ಕೋಮುಗಳ ನಡುವೆ ಬೆಂಕಿ ಹಚ್ಚುವ ರೀತಿಯಲ್ಲಿ ರಿಯಾಕ್ಟ್ ಮಾಡಿದ್ದಾರೆ. ಕೊಲೆ ಮಾಡಿದವರು ಮುಸ್ಲಿಮರೆನ್ನುವ ಕಾರಣಕ್ಕೆ ಆ ಇಡೀ ಸಮುದಾಯವನ್ನು ಟಾರ್ಗೆಟ್ ಮಾಡಿದ್ದಾರೆ. ಅವರಿಂದ ಬದುಕಲು ಆಗದ ವಾತಾವರಣ ನಿರ್ಮಾಣವಾಗ್ತಿದೆ ಎನ್ನುವ ಲಹರಿಯಲ್ಲಿ ಮಾತ್ನಾಡಿದ್ದಾರೆ. ಸಾಲದ್ದಕ್ಕೆ ಯಾವುದೇ ಅನ್ಯಕೋಮು ಬಣ್ಣ ಮತ್ತು ರಾಜಕೀಯ ಹಗ್ಗಜಗ್ಗಾಟತರಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆವಹಿಸುವ ಕೆಲಸ ಮಾಡುತ್ತಿರುವ ಪೊಲೀಸರನ್ನು ಕೂಡಾ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿರುವಾಗ ಪ್ರಚೋದನಾಕಾರಿಯಾಗುವಂಥ ಹೇಳಿಕೆ ನೀಡಬಾರದೆನ್ನುವ ಕನಿಷ್ಟ ಸೂಕ್ಷ್ಮವೂ ಇಲ್ಲದಂತೆ ಶಾಸಕ ಚನ್ನಬಸಪ್ಪ ವರ್ತಿಸಿದ್ದಾರೆ. ಹಿಂದೂ ಮುಸ್ಲಿಂರ ನಡುವೆ ಇರುವ ಅಲ್ಪಸ್ವಲ್ಪ ಸಾಮರಸ್ಯ , ಸಮನ್ವಯವನ್ನು ಹಾಳು ಮಾಡಿ ಅಲ್ಲೊಂದು ದ್ವೇಷದ ಕಿಡಿ ಬೆಂಕಿಯ ಜ್ವಾಲೆಯಾಗಿ ವ್ಯಾಪಿಸಿ ಈ ಬೆಂಕಿಯ ಶಾಖದಲ್ಲಿ ಚಳಿ ಕಾಯಿಸುವ ಪ್ಲ್ಯಾನ್ ಏನಾದ್ರೂ ಶಾಸಕರು ಮಾಡಿಕೊಂಡಿದ್ದಾರಾ? ಗೊತ್ತಾಗ್ತಿಲ್ಲ.    

ಹಿಂದು-ಮುಸ್ಲಿಂ ಭಾಯಿ ಭಾಯಿ ಎನ್ನುವಂತಿದ್ದ ವಾತಾವರಣ ಇವತ್ತು ಶಿವಮೊಗ್ಗದಲ್ಲಿ ಇಲ್ಲವಾಗಿದೆ. ಕೋಮುದ್ವೇಷದ ವಿಷಯಕ್ಕೆ ಬಂದ್ರೆ ಮಲೆನಾಡು ಶಿವಮೊಗ್ಗ ಕರಾವಳಿಯನ್ನೇ ಓವರ್ ಟೇಕ್ ಮಾಡುವಷ್ಟು ಹಾರ್ಡ್ ಕೋರ್ ಆಗ್ತಿದೆ. ಅಮಾಯಕ ಜನರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಅದರ ಪ್ರಯೋಜನ ಪಡೆದುಕೊಳ್ಳೊಕ್ಕೆ ಲೀಡರ್ಸ್ ಎನ್ನುವವರು ಹೊಂಚಾಕಿಕೊಂಡು ಇರ್ತಾರೆ.ಸಂಕೇತ್ ನ ಸಾವನ್ನು ಇದೇ ಆಂಗಲ್ ನಲ್ಲಿ ಬಳಸಿಕೊಳ್ಳುವ ಪ್ಲ್ಯಾನ್ ನಡೆಯುತ್ತಿದೆ ಎನ್ನುವ ಮಾಹಿತಿಯಿದೆ. ಇದಕ್ಕಾಗಿ ವ್ಯವಸ್ಥಿತ ಷಡ್ಯಂತ್ರ ಕೂಡ ನಡೆಯುತ್ತಿದೆಯಂತೆ ಎನ್ನುವ ಮಾಹಿತಿ ಪೊಲೀಸ್ ಇಂಟಲಿಜೆನ್ಸ್ ನಿಂದ ದೊರೆತಿದೆಯಂತೆ. ಅದಕ್ಕೆ ಅವಕಾಶ ಮಾಡಿಕೊಡದಿರಲು ಎಸ್ಪಿ ನಿಖಿಲ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡ್ತಿದೆ. ಆ ಕಾರಣಕ್ಕೆ ಎಸ್ಪಿ ನಿಖಿಲ್ ಅನೇಕರ ದೃಷ್ಟಿಯಲ್ಲಿ ವಿಲನ್ ಅಂತೆ ಕಾಣಿಸಲಾರಂಭಿಸಿದ್ದಾರೆ. ಆದರೆ ಅದಕ್ಕೆ ಅವರು ತಲೆಕೆಡಿಸಿಕೊಂಡಂತಿಲ್ಲ.

ಇದನ್ನೂ ಓದಿ | ಸಾವಿನಲ್ಲೂ ಸಾರ್ಥಕತೆ: ಮಂಡ್ಯದ ಯುವಕನ ಅಂಗಾಂಗ ದಾನ, ಆರು ಜನರ ಬಾಳಿಗೆ ಬೆಳಕು!

ಮೃತನ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ

ಸಂಕೇತ್ ಸಾವಿನ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಹಾನುಭೂತಿ ಮಾತುಗಳು ಕೇಳಿಬರ್ತಿವೆ. ಜತೆಗೆ ಕೋಮು ಬಣ್ಣ ಬೆರೆಸುವ ಪ್ರಯತ್ನಗಳು ನಡೀತಿವೆ. ಈ ನಡುವೆ, ರಾಜ್ಯ ಸರ್ಕಾರವು ಮೃತನ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಕರೆ ಮೂಲಕ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಒಟ್ಟು 15 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನು ಯಾರೇ ಮಾಡಿರಲಿ, ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಅವರಿಗೆ ಸೂಕ್ತ ಶಿಕ್ಷೆಯಾಗಲಿದೆ. ಆದರೆ ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ನಾವೇನೇ ಸಮಾಧಾನ ಹೇಳಿದ್ರೂ ಅದು ಸಾಲುವುದಿಲ್ಲ. ಇಂಥಾ ಪ್ರಕರಣಗಳಾಗದಂತೆ ಎಚ್ಚರ ವಹಿಸಬೇಕಿದೆ. ಇಂಥಾ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಪೊಲೀಸರಿಗೆ ಸೂಚಿಸಿರುವುದಾಗಿ ಗೃಹ ಸಚಿವ ಪರಮೇಶ್ವರ್ ಕೂಡ ತಿಳಿಸಿದ್ದಾರೆ.

ಅದೇನೇ ಇರಲಿ, ಕೊಲೆಯಾದ ಬಾಲಕ ಸಂಕೇತ್ ನದ್ದು ಅನ್ಯಾಯದ ಸಾವು. ಹಾಗೆ ನಡೆಯಲೇಬಾರದಿತ್ತು. ಆದರೆ ನಡೆದೋಗಿದೆ. ಈಗಾಗಲೇ ಪ್ರಕರಣ ಸಂಬಂಧ 7 ಹಂತಕರ ಬಂಧನವಾಗಿದೆ. ಅವರನ್ನು ಶಿಕ್ಷಿಸಲು ಕಾನೂನಿದೆ. ಕಾನೂನು ತನ್ನ ವ್ಯಾಪ್ತಿಯಲ್ಲಿ ಸಮರ್ಥವಾಗಿ ಕೆಲಸ ಮಾಡ್ತದೆ. ಪೊಲೀಸ್ರು ಕೂಡ ಅದನ್ನು ಮಾಡಲು ಸಮರ್ಥರಿದ್ದಾರೆ. ಆದರೆ ಮೀಸೆ ಮೂಡದ ಆ ಹಂತಕರ ಉದ್ದೇಶ ನಿಜವಾಗ್ಲೂ ಏನಾಗಿತ್ತು..? ಜಾತಿ ಕಾರಣಕ್ಕೆ ಆತನನ್ನು ಕೊಲೆ ಮಾಡಲಾಯ್ತಾ..? ಅಥವಾ ಅದು ಕ್ರಿಕೆಟ್ ನಲ್ಲಾದ ಕಿರಿಕ್ ಗೆ ನಡೆದ  ರಿವೇಂಜ್ ಮರ್ಡರ್ರಾ..? ಅಥವಾ ಗಾಂಜಾ ಮತ್ತಲ್ಲಿ ವಿವೇಚನೆ ಕಳಕೊಂಡು ನಡೆದ ಬ್ರೂಟಲ್ ಅಸಾಲ್ಟಾ..? ಈ ಎಲ್ಲಾ ಪ್ರಶ್ನೆಗಳಿಗೂ ಮೊದಲ ಉತ್ತರ ಸಿಗಬೇಕಿದೆ. ಅದಕ್ಕೆ ಉತ್ತರ ಕಂಡುಕೊಳ್ಳಲು ಪೊಲೀಸ್ರು ಬೆಲ್ಟ್ ಟೈಟ್ ಮಾಡಿಕೊಂಡು ಕೆಲಸ ಪ್ರಾರಂಭಿಸಿದ್ದಾರೆ. ಆದರೆ ಅದು ಲಾಜಿಕಲ್ ಎಂಡ್ ಗೆ ಬರುವ ಮುನ್ನವೇ ಸಂಕೇತ್ ಸಾವನ್ನು ರಾಜಕೀಯಗೊಳಿಸುವ, ಕೋಮು ಸಂಘರ್ಷಕ್ಕೆ ಮುಖ್ಯ ವಸ್ತುವನ್ನಾಗಿಸುವ ಪ್ರಯತ್ನ ಕೆಲವು ಪಟ್ಟಭದ್ರರಿಂದ ನಡೆಯುತ್ತಿದೆ. ಒಂದ್ವೇಳೆ ಇವ್ರ ಪ್ಲ್ಯಾನ್-ಫಾರ್ಮೂಲಾ ವರ್ಕೌಟ್ ಆಗಿದ್ದಾದಲ್ಲಿ ಶಿವಮೊಗ್ಗ ಮತ್ತೊಮ್ಮೆ ನಿಗಿನಿಗಿ ಕೆಂಡವಾಗುವುದರಲ್ಲಿ ಡೌಟೇ ಇಲ್ಲ.


Scroll to Top