ಆಸ್ಕರ್ ಅಂಗಳದಲ್ಲಿ ‘ಕಾಂತಾರ’ನಿಗೆ ತಪ್ಪಿದ ಲಕ್: ಟಾಪ್-15 ವರೆಗೆ ಹೋಗಿ ಮಕಾಡೆ ಮಲಗಿದ ಭಾರತೀಯ ಸಿನಿಮಾಗಳು!


ಕನ್ನಡದ ಹೆಮ್ಮೆಯ ‘ಕಾಂತಾರ’ ಚಾಪ್ಟರ್ 1 ಆಸ್ಕರ್ ಅಂಗಳದಲ್ಲಿ ಇತಿಹಾಸ ಬರೆಯಲಿದೆ ಎಂದು ಕಾದು ಕುಳಿತಿದ್ದ ಕೋಟ್ಯಾಂತರ ಕನ್ನಡಿಗರಿಗೆ ಮತ್ತು ಭಾರತೀಯ ಸಿನಿಮಾ ಪ್ರೇಮಿಗಳಿಗೆ ತೀವ್ರ ನಿರಾಶೆಯಾಗಿದೆ. ಅಕಾಡೆಮಿ ಅವಾರ್ಡ್ಸ್‌ನ ಟಾಪ್-15 ರೇಸ್‌ನಲ್ಲಿ ಜಾಗ ಪಡೆದಿದ್ದ ರಿಷಬ್ ಶೆಟ್ಟಿ ಅಭಿನಯದ ಈ ಸಿನಿಮಾ, ಅಂತಿಮ ಟಾಪ್-5 ನಾಮಿನೇಷನ್ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲಗೊಂಡಿದೆ.

ಜಗತ್ತಿನ 80 ದೇಶಗಳ ನಡುವೆ ಭೀಕರ ಪೈಪೋಟಿ

ಆಸ್ಕರ್ ಎನ್ನುವುದು ಬರೀ ಪ್ರಶಸ್ತಿಯಲ್ಲ, ಅದು ವಿಶ್ವದ ಸಿನಿಮಾ ದಿಗ್ಗಜರ ನಡುವಿನ ಮಹಾ ಸಂಗ್ರಾಮ ಎನ್ನಬಹುದು. ಈ ಬಾರಿ ಸುಮಾರು 80ಕ್ಕೂ ಹೆಚ್ಚು ದೇಶಗಳ ಶ್ರೇಷ್ಠ ಸಿನಿಮಾಗಳು ಈ ಸ್ಪರ್ಧೆಯಲ್ಲಿದ್ದವು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ: ಚಾಪ್ಟರ್ 1’ ಮತ್ತು ‘ಮಹಾವತಾರ್ ನರಸಿಂಹ’ ಸೇರಿದಂತೆ ಭಾರತದ ‘ತನ್ವಿ ದಿ ಗ್ರೇಟ್’ ಚಿತ್ರಗಳು ಈ ಪ್ರತಿಷ್ಠಿತ ವೇದಿಕೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು. ಆರಂಭದಲ್ಲಿ ಈ ಚಿತ್ರಗಳು ಟಾಪ್-15ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾಗ ಭಾರತಕ್ಕೆ ಈ ಬಾರಿ ಆಸ್ಕರ್ ಗ್ಯಾರಂಟಿ ಎನ್ನಲಾಗಿತ್ತು. ಆದರೆ, ಅಂತಿಮ ಹಂತದಲ್ಲಿ ಭಾರತದ ಯಾವುದೇ ಸಿನಿಮಾ ಸದ್ದು ಮಾಡದಿರುವುದು ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದೆ.

ಪ್ರಚಾರದ ಕೊರತೆಯೇ ಮುಳುವಾಯ್ತಾ?

ಆಸ್ಕರ್ ಅಂಗಳದಲ್ಲಿ ಕೇವಲ ಕಂಟೆಂಟ್ ಚೆನ್ನಾಗಿದ್ದರೆ ಸಾಲದು, ಅಲ್ಲಿ ಪ್ರಚಾರ (Promotion) ಕೂಡ ಅಷ್ಟೇ ಪ್ರಬಲವಾಗಿರಬೇಕು. ಹಾಲಿವುಡ್ ಮಾರುಕಟ್ಟೆಯಲ್ಲಿ ಭಾರತೀಯ ಸಿನಿಮಾಗಳು, ಅದರಲ್ಲೂ ಪ್ರಾದೇಶಿಕ ಸಿನಿಮಾಗಳು ಗುರುತಿಸಿಕೊಳ್ಳುವುದು ಇಂದಿಗೂ ದೊಡ್ಡ ಸವಾಲೇ ಸರಿ. ಬಾಲಿವುಡ್ ಚಿತ್ರಗಳಿಗೆ ಸಿಗುವ ಗ್ಲೋಬಲ್ ರೀಚ್ ಅಥವಾ ಪ್ರಚಾರದ ಶಕ್ತಿ ನಮ್ಮ ದಕ್ಷಿಣ ಭಾರತದ ಚಿತ್ರಗಳಿಗೆ ಇಂದಿಗೂ ಸವಾಲಾಗಿ ಪರಿಣಮಿಸಿದೆ. 

ALSO READ :  ಬಿಜೆಪಿ ವಿಧಾನಪರಿಷತ್ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆ: ಕಾಂಗ್ರೆಸ್ ನಿಂದ ಸ್ಪರ್ಧೆ?

‘ಕಾಂತಾರ’ ಚಾಪ್ಟರ್ 1 ಅದ್ಭುತ ಮೇಕಿಂಗ್ ಹೊಂದಿದ್ದರೂ, ಅಂತರಾಷ್ಟ್ರೀಯ ಮಟ್ಟದ ಪ್ರಭಾವ ಮತ್ತು ಪ್ರಚಾರದ ಅಬ್ಬರದಲ್ಲಿ ಜಗತ್ತಿನ ಬೇರೆ ದೇಶಗಳ ಸಿನಿಮಾಗಳ ಎದುರು ಹಿಂದೆ ಬಿದ್ದಿದೆ ಎನ್ನುತ್ತಾರೆ ಸಿನಿ ವಿಶ್ಲೇಷಕರು.

‘ಕಾಂತಾರ 1’ ಚಿತ್ರದ ಟೀಸರ್ ಮತ್ತು ಮೇಕಿಂಗ್ ನೋಡಿ ಈ ಸಿನಿಮಾ ಖಂಡಿತವಾಗಿ ಗ್ಲೋಬಲ್ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಹೊಂಬಾಳೆ ಸಂಸ್ಥೆ ಕೂಡ ಆಸ್ಕರ್ ನಾಮಿನೇಷನ್‌ಗಾಗಿ ಸಾಕಷ್ಟು ಶ್ರಮವಹಿಸಿತ್ತು. ಆದರೆ, ಟಾಪ್-15 ಹಂತಕ್ಕೇರಿ ಅಲ್ಲಿಂದ ವಾಪಸ್ ಬಂದಿರುವುದು ಅಭಿಮಾನಿಗಳಿಗೆ “ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎಂಬಂತಾಗಿದೆ.

ಇದನ್ನೂ ಓದಿ | ರಿಲೀಸ್ ಆಯ್ತು ‘ಧುರಂಧರ್ 2’ ಟ್ರೇಲರ್: ಸೇಡಿನ ಜ್ವಾಲೆಯಾಗಿ ಮರಳಿದ ರಣವೀರ್ ಸಿಂಗ್!

ಆದರೂ, ಆಸ್ಕರ್‌ನಂತಹ ಬೃಹತ್ ವೇದಿಕೆಯಲ್ಲಿ ಕನ್ನಡದ ಸಿನಿಮಾವೊಂದು ಟಾಪ್-15 ವರೆಗೆ ಧೈರ್ಯದಿಂದ ಹೋಗಿದ್ದೇ ಒಂದು ಸಾಧನೆ. ಮುಂದಿನ ದಿನಗಳಲ್ಲಿ ನಮ್ಮ ಚಿತ್ರಗಳು ಈ ತಪ್ಪುಗಳಿಂದ ಪಾಠ ಕಲಿತು ಆಸ್ಕರ್ ಮುಕುಟವನ್ನು ಮುಡಿಗೇರಿಸಿಕೊಳ್ಳಲಿ ಎಂಬುದೇ ಪ್ರತಿಯೊಬ್ಬ ಕನ್ನಡಿಗನ ಆಶಯ.


Leave a Comment