ಬೆಂಗಳೂರು: ವೈದ್ಯಕೀಯ ಲೋಕದ ಪವಿತ್ರ ತಾಣವೆಂದೇ ಕರೆಸಿಕೊಳ್ಳುವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ನೆಫ್ರೋ-ಯೂರೋಲಜಿ ವಿಭಾಗವೀಗ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆಯೇ? ಎಂಬ ಗಂಭೀರ ಪ್ರಶ್ನೆ ಎದ್ದಿದೆ. ಇಲ್ಲಿನ ನೆಫ್ರೋ-ಯೂರೋಲಜಿಸ್ಟ್ ಡಾ. ಶಿವಲಿಂಗಯ್ಯ ಅವರ ವಿರುದ್ಧ ಕೇಳಿಬಂದಿರುವ ಸಾಲು ಸಾಲು ಹಗರಣಗಳು ಮತ್ತು ಅವರ ರಕ್ಷಣೆಗೆ ನಿಂತಿರುವ ‘ಪ್ರಭಾವಿ’ ರಾಜಕಾರಣಿಗಳ ಕುರಿತು ಸ್ಫೋಟಕ ಮಾಹಿತಿಗಳು ಹೊರಬಂದಿವೆ.
ಆಶಾ ಪರ್ವೀನ್ ವರದಿಯಲ್ಲಿ ಏನಿದೆ?
ವಿಕ್ಟೋರಿಯಾ ಆಸ್ಪತ್ರೆಯ ಮಾಜಿ ಆಡಳಿತಾಧಿಕಾರಿ ಆಶಾ ಪರ್ವೀನ್ ಅವರು ಡಾ. ಶಿವಲಿಂಗಯ್ಯ ಅವರ ವಿರುದ್ಧ ಸುಮಾರು 30 ಪುಟಗಳ ಸುದೀರ್ಘ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಶಿವಲಿಂಗಯ್ಯ ಅವರು ಎಸಗಿದ್ದಾರೆ ಎನ್ನಲಾದ ಅಕ್ರಮಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ.
ಸಿಬ್ಬಂದಿಯೊಂದಿಗೆ ದುರ್ನಡತೆ: ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವುದು ಮತ್ತು ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡುವುದು.
ಲಂಚದ ಆರೋಪ: ಕರ್ತವ್ಯ ಲೋಪದ ದೂರುಗಳನ್ನು ನಿರ್ಲಕ್ಷಿಸಿ, ಪ್ರತಿಯೊಂದಕ್ಕೂ ಲಂಚ ಪಡೆಯುತ್ತಿರುವ ಗಂಭೀರ ಆರೋಪ.
ಸಾಮಗ್ರಿಗಳ ದುರ್ಬಳಕೆ: ಆಸ್ಪತ್ರೆಗೆ ಲಾಂಡ್ರಿ ಯಂತ್ರಗಳ ಖರೀದಿಯಲ್ಲಿ ಹಗರಣ ಹಾಗೂ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ತಂದಿದ್ದ ಸಾಮಗ್ರಿಗಳನ್ನು ತಮ್ಮ ಸ್ವಂತ ಮನೆ ನಿರ್ಮಾಣಕ್ಕೆ ಬಳಸಿಕೊಂಡಿರುವ ಗಂಭೀರ ಆರೋಪ ಇವರ ಮೇಲಿದೆ.
ಲೋಕಾಯುಕ್ತಕ್ಕೆ ತಲುಪಿದ ದೂರು
ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಆಚಾರ್ಯ ಅವರು ಈ ಎಲ್ಲಾ ಹಗರಣಗಳ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆಶಾ ಪರ್ವೀನ್ ಅವರು ನೀಡಿದ 30 ಪುಟಗಳ ವರದಿಯನ್ನು ಆಧರಿಸಿ ಸಮಗ್ರ ತನಿಖೆ ನಡೆಸಬೇಕು ಎಂಬುದು ಇವರ ಆಗ್ರಹವಾಗಿದೆ. ಆದರೆ, ಭ್ರಷ್ಟಾಚಾರದ ಆರೋಪ ಹೊತ್ತಿರುವ ವೈದ್ಯರು ಇಂದಿಗೂ ಯಾವುದೇ ಭಯವಿಲ್ಲದೆ ಆರಾಮಾಗಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಈ ‘ಲೂಟಿ’ ದಂಧೆಗೆ ರಾಜ್ಯ ಸರ್ಕಾರ ಮತ್ತು ಲೋಕಾಯುಕ್ತ ಸಂಸ್ಥೆ ಯಾವಾಗ ಬ್ರೇಕ್ ಹಾಕಲಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಹಗರಣ ಬಯಲಿಗೆಳೆದವರಿಗೆ ವರ್ಗಾವಣೆ ಶಿಕ್ಷೆ?
ಆಶ್ಚರ್ಯಕರ ಸಂಗತಿಯೆಂದರೆ, ಇಷ್ಟೆಲ್ಲಾ ಹಗರಣಗಳನ್ನು ಪುರಾವೆ ಸಮೇತ ಎಳೆ ಎಳೆಯಾಗಿ ಬಿಚ್ಚಿಟ್ಟ ದಕ್ಷ ಅಧಿಕಾರಿ ಆಶಾ ಪರ್ವೀನ್ ಅವರನ್ನೇ ಸರ್ಕಾರ ಎತ್ತಂಗಡಿ ಮಾಡಿದೆ. ಈ ವರ್ಗಾವಣೆಯ ಹಿಂದೆ ಡಾ. ಶಿವಲಿಂಗಯ್ಯ ಅವರ ಕೈವಾಡವಿದೆ ಎನ್ನಲಾಗುತ್ತಿದ್ದು, ಭ್ರಷ್ಟಾಚಾರವನ್ನು ಪ್ರಶ್ನಿಸಿದವರಿಗೆ ಶಿಕ್ಷೆ ನೀಡಲಾಗುತ್ತಿದೆಯೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಇದನ್ನೂ ಓದಿ | ಆಸ್ಪತ್ರೆಯಲ್ಲೇ ಅಕ್ರಮದ ಲೂಟಿ: ಡಾ. ಶಿವಲಿಂಗಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು!
‘ಕಾಣದ ಕೈಗಳ’ ಕೃಪಾಕಟಾಕ್ಷ?
ಡಾ. ಶಿವಲಿಂಗಯ್ಯ ಅವರ ವಿರುದ್ಧ ಲೋಕಾಯುಕ್ತಕ್ಕೆ ಅಧಿಕೃತ ದೂರು ನೀಡಿದರೂ ಯಾವುದೇ ಸೂಕ್ತ ಕ್ರಮ ಜರುಗುತ್ತಿಲ್ಲ. ಇದಕ್ಕೆ ಕಾರಣ ಅವರ ಹಿಂದಿರುವ ಪ್ರಬಲ ರಾಜಕೀಯ ಶಕ್ತಿಗಳು ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.
ಡಿ.ಕೆ. ಶಿವಕುಮಾರ್ ಪ್ರಭಾವ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗಿನ ಪ್ರಭಾವ ಬಳಸಿ ಶಿವಲಿಂಗಯ್ಯ ಅವರು ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಏಕೆಂದರೆ ಡಾ. ಶಿವಲಿಂಗಯ್ಯ ಕೂಡಾ ಕನಕಪುರದವರು. ನಾನು ಡಿಕೆಶಿಯವರ ಹೋಂ ಡಾಕ್ಟರ್, ನನಗೆ ಡಿಸಿಎಂ ತುಂಬಾ ಆತ್ಮಿಯರು ಎಂದು ಹೇಳುತ್ತಾರಂತೆ.
ಸಚಿವ ಶರಣಪ್ರಕಾಶ್ ಪಾಟೀಲ್ ರಕ್ಷಣೆ: ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹಾಗೂ ಇತರ ಹಿರಿಯ ಅಧಿಕಾರಿಗಳು ಶಿವಲಿಂಗಯ್ಯ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆಯೇ? ಎಂಬ ಅನುಮಾನದ ಬೆರಳು ಸಚಿವರತ್ತ ಚಾಚಿದೆ.











