ಮುಂಜಾನೆಯ ಮಂಜಿನ ನಡುವೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಪುನೀತರಾಗಬೇಕೆಂದು ಹೊರಟಿದ್ದ ಆ ಕುಟುಂಬಕ್ಕೆ ರಾಷ್ಟ್ರೀಯ ಹೆದ್ದಾರಿಯೇ ಮೃತ್ಯುಕೂಪವಾಯಿತು. ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಗಾರುಪಾಳ್ಯಂ ಪಲಮಕುಲಪಲ್ಲಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಮೂಲದ ದಂಪತಿ ಹಾಗೂ ಅವರ 4 ವರ್ಷದ ಪುಟ್ಟ ಹೆಣ್ಣು ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ದ ಕಾರು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯಂ ಮಂಡಲದ ಪಲಮಕುಲಪಲ್ಲಿ ಬಳಿ ಬರುತ್ತಿದ್ದಂತೆ ಈ ದುರಂತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಅತಿ ವೇಗದಲ್ಲಿದ್ದ ಕಾರು ರಸ್ತೆಯ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಳಗೆ ಕುಳಿತಿದ್ದ ಕುಟುಂಬಕ್ಕೆ ಹೊರಬರಲು ಅವಕಾಶವೇ ಸಿಗದಂತೆ ಅಲ್ಲೆ ಸಾವನ್ನಪ್ಪಿದ್ದಾರೆ.
ಬಲಿಯಾದವರು ಯಾರು?
ಮೃತಪಟ್ಟವರನ್ನು ಬೆಂಗಳೂರಿನ ರಾಜಾಜಿನಗರ ನಿವಾಸಿಗಳೆಂದು ಗುರುತಿಸಲಾಗಿದೆ. ಈ ಭೀಕರ ಅಪಘಾತದಲ್ಲಿ ದಂಪತಿ ಹಾಗೂ ಅವರ ನಾಲ್ಕು ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆತನ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರು ಆಸ್ಪತ್ರೆಗೆ ರವಾನಿಸುವ ಸಾಧ್ಯತೆಯಿದೆ.
ಇದನ್ನೂ ಓದಿ | ಪಿಇಎಸ್ ವಿವಿಯಲ್ಲಿ ವಿದ್ಯಾರ್ಥಿಗೆ ‘ಭಯೋತ್ಪಾದಕ’ ಪಟ್ಟ: ಪ್ರೊಫೆಸರ್ ಅಮಾನತು!
ಅಪಘಾತ ನಡೆದ ಸ್ಥಳದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳು ಮತ್ತು ರಕ್ತದ ಓಕುಳಿ ನೋಡಿದ ಪ್ರತ್ಯಕ್ಷದರ್ಶಿಗಳು ಕಣ್ಣೀರು ಹಾಕಿದ್ದಾರೆ. ಹೆದ್ದಾರಿಯ ಬದಿಯಲ್ಲಿ ಅಕ್ರಮವಾಗಿ ಲಾರಿಗಳನ್ನು ನಿಲ್ಲಿಸುತ್ತಿರುವುದು ಹಾಗೂ ಚಾಲಕನ ಅತಿ ವೇಗ ಅಥವಾ ನಿದ್ದೆ ಮಂಪರು ಈ ದುರಂತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಬಂಗಾರುಪಾಳ್ಯಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.










