advertise here

Search

NCERT ಪಠ್ಯ ವಿವಾದ: ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಬೇಷರತ್ ಕ್ಷಮೆ

centre apologizes supreme court

ನವದೆಹಲಿ: ಎನ್‌ಸಿಇಆರ್‌ಟಿ (NCERT) ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯ ಕುರಿತು ಅವಹೇಳನಕಾರಿ ಅಂಶಗಳನ್ನು ಪ್ರಕಟಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಮುಂದೆ ಬೇಷರತ್ ಕ್ಷಮೆಯಾಚಿಸಿದೆ. ಈ ವಿಚಾರವನ್ನು ನಾವು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಕೇಂದ್ರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದ್ದಾರೆ.

ಎನ್‌ಸಿಆರ್‌ಟಿ 8ನೇ ತರಗತಿಯ ‘ಎಕ್ಸ್‌ಪ್ಲೋರಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್’ ಎಂಬ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ನ್ಯಾಯಾಂಗದ ಪಾತ್ರ’ (ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ) ಎಂಬ ಅಧ್ಯಾಯವಿತ್ತು. ಇದರಲ್ಲಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಸವಾಲುಗಳನ್ನು ವಿವರಿಸುವಾಗ, ನ್ಯಾಯಾಂಗದಲ್ಲಿ ‘ಭ್ರಷ್ಟಾಚಾರ’ ತಾಂಡವವಾಡುತ್ತಿದೆ ಪ್ರಕರಣಗಳ ವಿಳಂಬಕ್ಕೆ ಇದು ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಈ ವಿಷಯವು ಕಾನೂನು ತಜ್ಞರು ಮತ್ತು ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿತ್ತು.

ಸುಪ್ರೀಂ ಕೋರ್ಟ್ ಆಕ್ರೋಶ:

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡಿತ್ತು. ವಿಚಾರಣೆ ವೇಳೆ ಆಕ್ರೋಶ ವ್ಯಕ್ತಪಡಿಸಿದ ಪೀಠವು, “ಇದು ನ್ಯಾಯಾಂಗದ ಘನತೆಗೆ ಧಕ್ಕೆ ತರುವ ಮತ್ತು ವ್ಯವಸ್ಥಿತವಾಗಿ ಮಸಿ ಬಳಿಯುವ ಷಡ್ಯಂತ್ರದಂತೆ ಕಾಣುತ್ತಿದೆ. ಕಿರಿಯ ವಯಸ್ಸಿನ ಮಕ್ಕಳ ಮನಸ್ಸಿನಲ್ಲಿ ನ್ಯಾಯಾಂಗದ ಬಗ್ಗೆ ಇಂತಹ ತಪ್ಪು ಕಲ್ಪನೆ ಬಿತ್ತುವುದು ಅತ್ಯಂತ ಅಪಾಯಕಾರಿ” ಎಂದು ಎಚ್ಚರಿಸಿತು.

ALSO READ :  "ಸುವರ್ಣ ಕುಟುಂಬದ "ತಾಯಿ"ಜೀವ ಲಲಿತಮ್ಮ ದುರ್ಮರಣ-ಕಂಬನಿ

ಸರ್ಕಾರದ ಪ್ರತಿಕ್ರಿಯೆ:

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿ, “ಈ ತಪ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ. ಶಿಕ್ಷಣ ಸಚಿವಾಲಯದ ಪರವಾಗಿ ನಾನು ಬೇಷರತ್ ಕ್ಷಮೆಯಾಚಿಸುತ್ತೇನೆ. ಆಕ್ಷೇಪಾರ್ಹ ಪಠ್ಯವನ್ನು ಈಗಾಗಲೇ ಹಿಂತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದರು. ಒಟ್ಟು 2.25 ಲಕ್ಷ ಪುಸ್ತಕಗಳನ್ನು ಮುದ್ರಿಸಲಾಗಿದ್ದು, ಅದರಲ್ಲಿ ಕೇವಲ 38 ಪ್ರತಿಗಳು ಮಾತ್ರ ಮಾರಾಟವಾಗಿವೆ. ಅವುಗಳನ್ನೂ ಕೂಡ ಮರಳಿ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ | ಸಿಬಿಐ ತನಿಖೆ ಭೀತಿ: ಕೋರಮಂಗಲದಲ್ಲಿ ನಿವೃತ್ತ ಅಧಿಕಾರಿ ಪರಮೇಶ್ವರಯ್ಯ ಆತ್ಮಹತ್ಯೆ!

ಎನ್‌ಸಿಆರ್‌ಟಿ ಕೂಡ ಈ ಕುರಿತು ಪ್ರತ್ಯೇಕ ಹೇಳಿಕೆ ನೀಡಿದ್ದು, “ನ್ಯಾಯಾಂಗದ ಬಗ್ಗೆ ನಮಗೆ ಅತ್ಯಂತ ಗೌರವವಿದೆ. ಅಂಶಗಳು ಉದ್ದೇಶಪೂರ್ವಕವಲ್ಲದ ತಪ್ಪುಗಳು. 2026-27ನೇ ಶೈಕ್ಷಣಿಕ ಸಾಲಿನಲ್ಲಿ ಇದನ್ನು ಸರಿಪಡಿಸಿ ಹೊಸ ಪಠ್ಯವನ್ನು ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದೆ.


Scroll to Top