50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವೈದೇಹಿ ಆಸ್ಪತ್ರೆ ಕಡತವನ್ನೇ 1 ವರ್ಷದಿಂದ ಬಚ್ಚಿಟ್ಟುಕೊಂಡಿದ್ದ ಖತರ್ನಾಕ್ ಕಂದಾಯಾಧಿಕಾರಿ ಬಸವಾಚಾರಿ..!!
ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೊಕ್ಕಸ ತುಂಬೊಕ್ಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನಿಷ್ ಮೌದ್ಗಿಲ್ ಅಹಿರ್ನಿಷಿ ಪ್ರಯತ್ನ ಮಾಡ್ತಿದಾರೆ.ಇದರಿಂದ ಪಾಲಿಕೆ ಬೊಕ್ಕಸಕ್ಕೆ ಸಾವಿರಾರು ಕೋಟಿ ಸಂದಾಯವಾಯಿತು. ಮನಿಷ್ ಮೌದ್ಗಿಲ್ ಅವರ ಕಾರ್ಯಕ್ಷಮತೆಯಿಂದ ಪಾಲಿಕೆ ಇತಿಹಾಸದಲ್ಲೇ ಸಂಗ್ರಹವಾಗದಷ್ಟು ಆಸ್ತಿ ತೆರಿಗೆ ಬೊಕ್ಕಸ ಸೇರಿತು.ದಶಕಗಳಿಂದಲೂ ಎಮ್ಮೆ ಚರ್ಮ ದಂತಾಗಿದ್ದ ಕಂದಾಯ ವಿಭಾಗದ ಅಧಿಕಾರಿಗಳು ಮೈ ಕೊಡವಿ ನಿಲ್ಲುವಂತೆ ಮಾಡಿದ್ರು. ಧೂಳಿಡಿದು ಕೂತಿದ್ದ ಆಸ್ತಿ ತೆರಿಗೆ ಕಡತಗಳಿಗೆ ಜೀವ ಬಂತು. ಆಸ್ತಿ ತೆರಿಗೆ ವಂಚಿಸುತ್ತಿದ್ದ ಆಸ್ತಿ ಮಾಲೀಕರ ಎದೆಯಲ್ಲಿ ನಡುಕ ಸೃಷ್ಟಿಸಿದ್ರು.ಇದೆಲ್ಲದರ ಪರಿಣಾಮ ಎನ್ನುವಂತೆ ಹಳ್ಳಹಿಡಿದಿದ್ದ ಆಸ್ತಿ ತೆರಿಗೆ ವ್ಯವಸ್ಥೆ ಹಳಿಗೆ ಬಂದಿದೆ.


ಮನಿಷ್ ಮೌದ್ಗಿಲ್ ಇಷ್ಟೆಲ್ಲಾ ಮಾಡಿದ್ರೂ ಅದ್ಹೇಕೋ ಬಿಬಿಎಂಪಿಯಲ್ಲಿರುವ ಕೆಲವು ಅಧಿಕಾರಿಗಳು ಮಾ ತ್ರ ಆಡಿದ್ದೇ ಆಟ..ಹೂಡಿದ್ದೇ ಲಗ್ಗೆ ಎನ್ನುವಂತಿದ್ದಾರೆ. ಮೌದ್ಗಿಲ್ ಅವರಿಗೇ ಕೌಂಟರ್ ಕೊಡಲಾರಂಭಿ ಸಿದ್ದಾರೆ. ನೀವು ಚಾಪೆ ಕೆಳಗೆ ನುಸುಳಿದ್ರೆ ನಾವು ರಂಗೋಲಿ ಕೆಳಗೆ ನುಸುಳ್ತೇವೆ ಎಂದು ಎದಿರೇಟು ಕೊಸುತ್ತಿದ್ದಾರೆ.ಕಂದಾಯ ವಿಭಾಗದ ಕೆಲ ಅಧಿಕಾರಿ ಸಿಬ್ಬಂದಿ ಕೊಡುತ್ತಿರುವ ಕ್ವಾಟ್ಲೆಗೆ ಮೌದ್ಗಿಲ್ ಅವರೇ ರೋಸಿ ಹೋಗಿದ್ದಾರೆ. ಆದರೂ ಕೆಲ ಭ್ರಷ್ಟ ಅಧಿಕಾರಿ ಸಿಬ್ಬಂದಿ ಹೆಡೆ ಮುರಿ ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.ಅವರ ಪ್ರಯತ್ನದ ಫಲವಾಗೇ ಹಲವು ಭ್ರಷ್ಟರ ಮುಖವಾಡ ಬಯಲಾಗುತ್ತಿದೆ.
ಪಾಲಿಕೆಯ ಆರ್ಥಿಕತೆ ಹೆಚ್ಚು ಡಿಪೆಂಡ್ ಆಗಿರೋದೆ ಆಸ್ತಿ ತೆರಿಗೆ ಮೇಲೆ.ಹೇಳೋರಿಲ್ಲದೆ ಕೇಳೋರಿಲ್ಲದೆ ಹಳ್ಳ ಹಿಡಿದು ಹೋಗಿದ್ದ ಈ ವ್ಯವಸ್ಥೆಯೇ ಕಂದಾಯ ಇಲಾಖೆಯ ಅದೆಷ್ಟೋ ಭ್ರಷ್ಟ ಅಧಿಕಾರಿಸಿಬ್ಬಂದಿಗೆ ಪಂಪಾಸ್ ಹುಲ್ಲುಗಾವಲಿನಂತಾಗಿತ್ತು.ಆದರೆ ಮೌದ್ಗಿಲ್ ಯಾವಾಗ ಕಂದಾಯ ವಿಭಾಗದ ಮೇಲುಸ್ತುವಾತಿ ತೆಗೆದುಕೊಂಡ್ರೋ ವ್ಯವಸ್ಥೆಗೆ ಸಾಣೆ ಹಿಡಿಯುವ ಕೆಲಸ ಶುರುವಾಯ್ತು.ಸಧ್ಯ ಪಾಲಿಕೆಯ ಕಂದಾಯ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ.
ತೆರಿಗೆ ನಿಗಧಿ ಹಾಗೂ ಸಂಗ್ರಹಣೆ ವಿಚಾರದಲ್ಲಿ ಮೌದ್ಗಿಲ್ ಸಿಕ್ಕಾಪಟ್ಟೆ ಖಡಕ್ ಎನ್ನೋದು ಗೊತ್ತಾದ ಮೇಲೂ ಕೆಲವೊಬ್ರು ಅವರನ್ನು ಯಾಮಾರಿಸುವ ಕೆಲಸ ಮಾಡ್ತಿರುವುದು ಆಶ್ಚರ್ಯದ ಜತೆಗೆ ಹೇಸಿಗೆ ಮೂಡಿಸುತ್ತದೆ.ಆದರೆ ಮೌದ್ಗಿಲ್ ಪರಿಚಯಿಸಿರುವ ಹೊಸ ತಂತ್ರಜ್ನಾನದಲ್ಲಿ ಯಾಮಾರಿಸುವುದು ಸುಲಭವೂ ಅಲ್ಲ,. ಸಲೀಸೂ ಅಲ್ಲ..ಇದರ ಪ್ರತಿಫಲ ಎನ್ನುವಂತೆ ಅನೇಕ ತೆರಿಗೆ ವಿಚಾರದಲ್ಲಿ ವಂಚನೆ ಎಸಗುತ್ತಾ ಬಂದಿರುವ ಅಧಿಕಾರಿ-ಸಿಬ್ಬಂದಿ ಸಿಕ್ಕಾಕಿಕೊಳ್ಳುತ್ತಿದ್ದಾರೆ. ಮನಿಷ್ ಮೌದ್ಗಿಲ್ ಅವರು ಬೀಸಿದ ಬಲೆಯಲ್ಲಿ ಮಹಾದೇವಪುರ ವಲಯದ ಕಂದಾಯಾಧಿಕಾರಿ ಸಾಕ್ಷ್ಯಸಮೇತ ಸಿಕ್ಕಾಕೊಂಡಿದ್ದಾರೆ.ಅವರ ಅಮಾನತ್ತಿಗೂ ಶಿಫಾರಸ್ಸು ಮಾಡಿದ್ದಾರೆ.

ಮೌದ್ಗಿಲ್ ಅವರು ಬೀಸಿದ ಬಲೆಗೆ ಸಿಕ್ಕಾಕೊಂಡಿರುವ ಬೃಹತ್ ತಿಮಿಂಗಲವೇ ಮಹಾದೇವಪುರ ವಲಯದ ಕಂದಾಯಾಧಿಕಾರಿ ಬಸವಾಚಾರಿ.ಈ ಮಹಾನುಭಾವ ವೈಟ್ ಫೀಲ್ಡ್ ನಲ್ಲಿರುವ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯ ತೆರಿಗೆ ಪರಿಷ್ಕರಣೆ ಹಾಗು ತೆರಿಗೆ ಸಂಗ್ರಹದ ವಿಚಾರದಲ್ಲಿ ಮಾಡಿದ ದೊಡ್ಡ ವಂಚನೆ ಮೌದ್ಗಿಲ್ ಅವರ ತಪಾಸಣೆ ವೇಳೆ ಬಯಲಾಗಿದೆ.ಅದು ಕೂಡ ಒಂದೆರೆಡು ಕೋಟಿ ಆಸ್ತಿ ತೆರಿಗೆ ವಂಚನೆ ವಿಚಾರವಲ್ಲ, ಮನಿಷ್ ಮೌದ್ಗಿಲ್ ಅವರೇ ಹೇಳಿಕೊಂಡಿರುವಂತೆ ಸುಮಾರು 50 ಕೋಟಿ. ಇದಕ್ಕೆ ಸಂಬಂಧಿಸಿದ ಕಡತವನ್ನು ಈ ಬಸವಾಚಾರಿ ಎನ್ನುವ ಕಂದಾಯಾಧಿಕಾರಿ ಎಲ್ಲರಿಂದ ಮುಚ್ಚಿಟ್ಟು ಕಳೆದ ಒಂದು ವರ್ಷದಿಂದಲೂ ತನ್ನ ಮನೆಯಲ್ಲೇ ಇಟ್ಟುಕೊಂಡು ಅಕ್ರಮಕ್ಕೆ ಸಾಥ್ ಕೊಟ್ಟಿದ್ದನೆನ್ನುವುದು ಮೌದ್ಗಿಲ್ 25-02-2025 ರಂದು ಮಹಾದೇವಪುರ ವಲಯದ ಆಸ್ತಿ ತೆರಿಗೆ ಸಂಗ್ರಹಣೆ ಸಂಬಂಧಿಸಿದಂತೆ ತಪಾಸಣೆ ನಡೆಸಿ ನೀಡಿರುವ ವರದಿ ಸಾರಾಂಶ..
ಆಗಿದ್ದೇನು..? ವೈಟ್ ಫೀಲ್ಡ್ ನಲ್ಲಿರುವ ವೈದೇಹಿ ಆಸ್ಪತ್ರೆ ಮಹಾದೇವಪುರ ವಲಯ ವ್ಯಾಪ್ತಿಗೆ ಒಳಪಡುತ್ತದೆ.ಆಸ್ಪತ್ರೆಯ ವಿಸ್ತೀರ್ಣಕ್ಕೆ ಅನ್ವಯವಾಗುವಂತೆ ಆಸ್ತಿ ತೆರಿಗೆ ನಿಗಧಿ ಆಗಬೇಕಾಗುತ್ತದೆ. ಪ್ರತಿ ವರ್ಷ ಪರಿಷ್ಕರಣೆ ಆಗಬೇಕಿರುತ್ತದೆ.ಇದನ್ನು ಮಾಡಬೇಕಿರುವುದು ಕಂದಾಯ ವಿಭಾಗದ ಅಧಿಕಾರಿಗಳು.ಇದೆಲ್ಲದರ ಮೇಲುಸ್ತುವಾರಿ ಕಂದಾಯಾಧಿಕಾರಿ ವ್ಯಾಪ್ತಿಗೆ ಬರುತ್ತದೆ. ಪರಿಸ್ತಿತಿ ಹೀಗಿರುವಲ್ಲಿ ಆಸ್ಪತ್ರೆಯು ಬಿಬಿಎಂಪಿಗೆ ಪಾವತಿಸಬೇಕಿರುವ ಆಸ್ತಿ ತೆರಿಗೆಯ ಲೆಕ್ಕ ಮಾಡಿದಾಗ ಹತ್ತಿರತ್ತಿರ 50 ಕೋಟಿಯಷ್ಟಿತ್ತೆನ್ನುವುದು ಬಿಬಿಎಂಪಿಮ ಮೂಲಗಳ ಮಾತು.

ಬಾರಿ ಪ್ರಮಾಣದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿಗಳನ್ನು ಜಪ್ತಿ ಮಾಡುವಂತೆ ಬಿಬಿಎಂಪಿ ಆದೇಶಿಸುತ್ತಿರುವುದು ಎಲ್ಲರಿಗು ಗೊತ್ತಿದೆ.ಅಂತದ್ದರಲ್ಲಿ 50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವೈದೆಹಿ ಆಸ್ಪತ್ರೆ ವಿರುದ್ಧ ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಬಸವಾಚಾರಿ ಕಠಿಣ ಕ್ರಮ ಕೈಗೊಂಡು ಆಸ್ತಿ ತೆರಿಗೆ ಪಾವತಿಸುವಂತೆ ನೋಡಿಕೊಳ್ಳಬೇಕಿತ್ತು.ಆದರೆ ಈ ಮಹಾನುಭಾವ ಮಾಡಿದ್ದೆಂಥ ಕೆಲಸ ಎಂದ್ರೆ ಆ ಕಡತ ಕೈಗೆ ಸಿಕ್ಕರೆ ತಾನೇ ಆಸ್ಪತ್ರೆ ಬಂಡವಾಳ ಗೊತ್ತಾಗುವುದು ಎಂದುಕೊಂಡು ಕಡತವನ್ನೇ ಮಾಯ ಮಾಡಿಬಿಟ್ರಂತೆ.ಅಂದ್ರೆ ಪಾಲಿಕೆ ವಲಯ ಕಚೇರಿಯಲ್ಲಿ ಹುಡುಕಿದ್ರೂ ಸಿಗದಂತೆ ಮಾಡಲು ತನ್ನ ಮನೆಗೆ ಕೊಂಡೊಯ್ದು ಬಚ್ಚಿಟ್ಟಿದ್ದರಂತೆ. ಈ ಕಾರ್ಯಕ್ಕೆ ಭಾರಿ ದೊಡ್ಡ ಮೊತ್ತದ ಕಿಕ್ ಬ್ಯಾಕನ್ನೇ ಬಸವಾಚಾರಿ ಪಡೆದಿರುವ ಸಾಧ್ಯತೆಗಳಿವೆಯಂತೆ.50 ಕೋಟಿ ಆಸ್ತಿ ತೆರಿಗೆ ತಪ್ಪಿಸಲು ಕೋಟಿಗಳಲ್ಲೇ ಕಮಿಷನ್ ಪಡೆದಿರಬಹುದೆನ್ನುವ ಸುದ್ದಿ ಮಹಾದೇವಪುರ ವಲಯ ಕಚೇರಿಯಲ್ಲಿ ಕೇಳಿಬರುತ್ತಿದೆ.
ಆದರೆ ಕಳ್ಳ ಎಷ್ಟ್ ದಿನ ಕಳ್ಳಾಟ ಆಡಿಕೊಂಡಿರಲು ಸಾಧ್ಯವೇಳಿ..ಒಂದಲ್ಲಾ ಒಂದ್ ದಿನ ಸಿಕ್ಕಾಕಿಕೊಳ್ಳಲೇಬೇಕೆನ್ನುವಂತೆ ಬಸವಾಚಾರಿಯ ಅಸಲಿಯತ್ತು ಕೂಡ ಮನಿಷ್ ಮೌದ್ಗಿಲ್ ಅವರ ಕಾರ್ಯಾಚರಣೆಯಿಂದ ಹೊರಬಿದ್ದಿದೆ. ವೈದೇಹಿ ಆಸ್ಪತ್ರೆಯ ಬಾಕಿ ಆಸ್ತಿ ತೆರಿಗೆಯ ಕಡತವನ್ನು ವರ್ಷದಿಂದಲೂ ಬಚ್ಚಿಟ್ಟ ಸತ್ಯ ಬಯಲಾಗಿದೆ. ಅಪ್ರಮಾಣಿಕರು-ಅದಕ್ಷರು-ಭ್ರಷ್ಟರನ್ನು ಕಂಡರೆ ಉರಿದುಬೀಳುವ ಮೌದ್ಗಿಲ್ ಬಸವಾಚಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರಲ್ಲದೇ ಅವರ ಅಮಾನತ್ತಿಗೂ ಶಿಫಾರಸ್ಸು ಮಾಡಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.ಅವರು ತಮ್ಮ ತಪಾಸಣೆ ವರದಿಯಲ್ಲಿ ಬಸವಾಚಾರಿ ಅಮಾನತ್ತಿಗೆ ಶಿಫಾರಸ್ಸು ಮಾಡಿರುವ ಸಂಗತಿಯ ದಾಖಲೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.

ಮಹಾದೇವಪುರ ಅತೀ ಹೆಚ್ಚು ಆಸ್ತಿ ತೆರಿಗೆಯನ್ನು ತಂದುಕೊಡುವ ಬಿಬಿಎಂಪಿಯ ಅಗ್ರಗಣ್ಯ ವಲಯ ಎನ್ನುವುದು ಎಷ್ಟು ಸತ್ಯವೋ, ಆಸ್ತಿ ತೆರಿಗೆ ಪಾವತಿಸದ ಆಸ್ತಿ ತೆರಿಗೆ ಕಳ್ಳರ ಕೇಂದ್ರವೂ ಹೌದು..ಐಟಿಬಿಟಿಯಿಂದ ಹಿಡಿದು ದೊಡ್ಡ ಮಟ್ಟದ ಕೈಗಾರಿಕೆಗಳು ಈ ವಲಯದಲ್ಲಿವೆ. ಕಂಪ್ಲೀಟ್ ರೆವಿನ್ಯೂ ಏರಿಯಾ ಆಗಿರೋದ್ರಿಂದ ಸಹಜವಾಗಿಯೇ ಹೆಚ್ಚು ಆಸ್ತಿ ತೆರಿಗೆ ಪಾವತಿಸಬೇಕಾದ ಸ್ತಿತಿ ವಾಣಿಜ್ಯೋದ್ಯಮಿಗಳಿಗಿದೆ.ಆದರೆ ಅಷ್ಟೊಂದು ಹಣ ಏಕೆ ಕಟ್ಟಬೇಕು ಎನ್ನುವ ಕಾರಣದಿಂದ ಬಿಬಿಎಂಪಿಯ ಕಂದಾಯ ವಿಭಾಗದಲ್ಲಿರುವವರನ್ನೇ ಅಡ್ಜೆಸ್ಟ್ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಿದ್ದಾರೆನ್ನುವುದು ಸುಳ್ಳೇನಲ್ಲ..ಇಡೀ ಬಿಬಿಎಂಪಿನೇ ಇದರ ಬಗ್ಗೆ ಹೇಳುತ್ತದೆ. ಪರಿಸ್ತಿತಿ ಹೀಗಿರುವಲ್ಲಿ ಬಸವಾಚಾರಿಯಂಥ ಭ್ರಷ್ಟ ಅಧಿಕಾರಿಗಳು ಎಷ್ಟು ಪ್ರಮಾಣದಲ್ಲಿ ಹಣ ಲೂಟಿ ಮಾಡುತ್ತಿರಬಹುದು ನೀವೇ ಊಹಿಸಿ..
ಅದೇನೇ ಆಗಲಿ ಬಸವಾಚಾರಿಯಂತ ಮಹಾನ್ ಭ್ರಷ್ಟ ಕಂದಾಯಾಧಿಕಾರಿ ಮಹಾದೇವಪುರ ವಲಯದಲ್ಲಿ ಆಸ್ತಿ ತೆರಿಗೆ ವಂಚಕರ ಜತೆ ಮಾಡಿಕೊಂಡಿದ್ದ ಅಡ್ಜೆಸ್ಟ್ ಮೆಂಟ್ ವ್ಯವಹಾರದ ಹೂರಣ ಮೌದ್ಗಿಲ್ ಅವರಂಥ ಖಡಕ್ ಐಎಎಸ್ ಅಧಿಕಾರಿಯ ಪ್ರಯತ್ನದಿಂದ ಬಯಲಾಗಿದ್ದೇ ಸಮಾಧಾನ.ಇದರಿಂದ ಬಸವಾಚಾರಿ ಗಳಿಸಿರಬಹುದಾದ ಕಿಕ್ ಬ್ಯಾಕ್ ಎಷ್ಟು ಎನ್ನುವುದು ಬಯಲಾಗಬೇಕಷ್ಟೆ..

ಕೇವಲ ವೈದೇಹಿ ಆಸ್ಪತ್ರೆ ಪ್ರಕರಣವಲ್ಲ…ಇಂಥಾ ನೂರಾರು ಅಕ್ರಮ ಪ್ರಕರಣಗಳಿವೆ. ...ಮನಿಷ್ ಮೌದ್ಗಿಲ್ ಅವರು ತಪಾಸಣೆ ನಡೆಸಿ ಅಕ್ರಮ ಬಯಲು ಮಾಡುವವರೆಗೂ ಬಸವಾಚಾರಿ ನಡೆಸಿರುವ ಭಾರೀ ಪ್ರಮಾಣದ ಅಕ್ರಮ ಬಹಿರಂಗವಾಗಿರಲೇ ಇಲ್ಲ. ಈ ಪ್ರಕರಣದಲ್ಲಿ ಸಿಕ್ಕಾಕಿಕೊಂಡಿ ರುವ ಕಂದಾಯಾಧಿಕಾರಿ ಬಸವಾಚಾರಿ ಬಗ್ಗೆ ಸಾಕಷ್ಟು ಆರೋಪಗಳಿವೆ.ಅಲ್ಲದೇ ಇಂತದ್ದೊಂದು ಆಪಾದನೆ ಕೇಳಿಬರುತ್ತಿರುವುದು ಮೊದಲೇನಲ್ಲ.ಈ ಹಿಂದೆಯೂ ಅನೇಕ ರೀತಿಯಲ್ಲಿ ಅಕ್ರಮ ಎಸಗಿರುವುದಾಗಿ ಪಾಲಿಕೆ ಮೂಲಗಳು ಹೇಳುತ್ತವೆ. ವೈದೇಹಿ ಪ್ರಕರಣದಲ್ಲಿ ಆತನ ಮತ್ತಷ್ಟು ರಂಕುಗಳು ಬಯಲಾಗಿವೆಯಷ್ಟೆ. ಮಹಾದೇವಪುರ ವಲಯದ ಕಂದಾಯ ವಿಭಾಗದಲ್ಲಿರುವ ಕೆಲವು ಪ್ರಾಮಾಣಿಕ ಸಿಬ್ಬಂದಿ ಹೇಳುವಂತೆ. ವೈದೇಹಿ ಆಸ್ಪತ್ರೆಯ ತೆರಿಗೆ ವಂಚನೆ ಗೆ ಬಸವಾಚಾರಿ ಸಾಥ್ ಕೊಟ್ಟಿರುವುದು ಕೇವಲ ಒಂದು ಸ್ಯಾಂಪಲ್ ಅಷ್ಟೆ..ಇಂಥಾ ನೂರಾರು ಪ್ರಕರಣಗಳಲ್ಲಿ ಇದೇ ಅಡ್ಜೆಸ್ಟ್ ಮೆಂಟ್ ಮಾಡಿಕೊಂಡು ಕಿಕ್ ಬ್ಯಾಕ್ ಪಡೆದಿರುವ ನಿದರ್ಶನಗಳಿವೆ.ಇದರ ಬಗ್ಗೆ ಸಮಗ್ರ ತನಿಖೆಯಾದರೆ ಎಲ್ಲಾ ಹಗರಣ ಬಯಲಾಗುತ್ತದೆ. ವಲಯದಲ್ಲಿ ಭಾರೀ ಮೊತ್ತದ ಆಸ್ತಿ ತೆರಿಗೆ ನಿಗಧಿ ಮತ್ತು ಪರಿಷ್ಕರಣೆ ಮಾಡಿಕೊಂಡಿರುವ ಸಂಸ್ಥೆಗಳ ಬಗ್ಗೆ ತನಿಖೆಯಾದ್ರೆ ಮತ್ತಷ್ಟು ಅಕ್ರಮ ಬಯಲಾಗುವ ಸಾಧ್ಯತೆಗಳಿವೆ ಎಂದು ಹೇಳುತ್ತಾರೆ. ಇಷ್ಟನ್ನೆ ಮಾಡಿರುವ ಮೌದ್ಗಿಲ್ ಅವರು ಬಸವಾಚಾರಿಯ ಸಂಪೂರ್ಣ ಬಂಡವಾಳವನ್ನು ಬಟಾಬಯಲು ಮಾಡಲು ಸಮಗ್ರ ತನಿಖೆ ಮಾಡಲಾರರೇ..? ಮನಸು ಮಾಡಬೇಕಷ್ಟೆ.