ಶಿವಮೊಗ್ಗ ಜಿಲ್ಲೆ ಸಾಗರ ಡಿಪೋದ ಶ್ರೀಶೈಲ ಬಿರಾದಾರ್ ಕಿರುಕುಳಕ್ಕೆ ಡ್ರೈವರ್ ನಾಗಪ್ಪ ಬಲಿ..!

ಶಿವಮೊಗ್ಗ/ಬೆಂಗಳೂರು: ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ನಿಗಮಗಳಲ್ಲಿ ಏನೆಲ್ಲಾ ಬದಲಾವಣೆ ಮಾಡಿದ್ರೂ ಅದೆಲ್ಲಕ್ಕಿಂತ ಮೊದಲು ಅಮೂಲಾಗ್ರ ಬದಲಾವಣೆ ಆಗಬೇಕಿರುವುದು ಅಧಿಕಾರಿಗಳ ಆಡಳಿತ ವೈಖರಿ-ಸಿಬ್ಬಂದಿ ಜತೆಗಿನ ವ್ಯವಹಾರದಲ್ಲಿ..ಕೆಳ ಹಂತದ ಸಿಬ್ಬಂದಿಯನ್ನು ಕಾಲಕಸಕ್ಕಿಂತ ಕಡೆಯಾಗಿ ನೋಡುವ ಅಧಿಕಾರಿಗಳ ದೌರ್ಜನ್ಯ-ಆಟಾಟೋಪಕ್ಕೆ ಶಿವಮೊಗ್ಗ ವಿಭಾಗೀಯ ಕಚೇರಿಯ ಸಾಗರ ಡಿಪೋದ ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಆಪಾದನೆ ಕೇಳಿಬಂದಿದೆ.

ಶಿವಮೊಗ್ಗ ವಿಭಾಗೀಯ ಕಚೇರಿಗೆ ಶಿವಮೊಗ್ಗ, ಸಾಗರ,ಶಿಕಾರಿಪುರ, ಭದ್ರಾವತಿ ಸೇರಿದಂತೆ ಐದು ಡಿಪೋಗಳು ಬರುತ್ತವೆ,ಈ ಪೈಕಿ ಸಾಗರ ಡಿಪೋದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ನಾಗಪ್ಪ ಎಂಬುವವರೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಅವರ ಸಾವಿಗೆ ಡಿಪೋ ಮ್ಯಾನೇಜರ್ ಶ್ರೀಶೈಲ ಬಿರಾದಾರ್ ಕಾರಣ ಎನ್ನುವುದು ಮೃತ ನಾಗಪ್ಪನ ಕುಟುಂಬದವರು ನೀಡಿರುವ ದೂರಿನ ಹಿನ್ನಲೆಯಲ್ಲಿ ಕೇಳಿಬರುತ್ತಿದೆ.

ನಾಗಪ್ಪ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೂ ಡಿಪೋ ಮ್ಯಾನೇಜರ್ ಬಿರಾದಾರ್ ವಿನಾಕಾರಣ ಗೋಳೋಯ್ದುಕೊಳ್ಳುತ್ತಿದ್ದರಂತೆ.ಡ್ಯೂಟಿ ಕೊಡದೆ ಸತಾಯಿಸುತ್ತಿದ್ದರಂತೆ.ಈ ಕಾರಣಕ್ಕೆ ನಾಗಪ್ಪ ಕಳೆದ ಕೆಲ ತಿಂಗಳಿಂದ ಡ್ಯೂಟಿಗೆ ಹೋಗದೆ ಮನೆಯಲ್ಲೇ ಇರುತ್ತಿದ್ದರಂತೆ.ಈ ಬಗ್ಗೆ ಕುಟುಂಬದವರು ಕೇಳಿದಾಗ ಮೇಲಾಧಿಕಾರಿಗಳ ಕಿರುಕುಳದ ಬಗ್ಗೆ ಬಾಯಿಬಿಟ್ಟಿದ್ದಾರೆ.,ಅದಕ್ಕೆ ಮನೆಯವ್ರು ಸಮಾಧಾನ ಮಾಡಿದ್ದಾರೆ.ಆದರೂ ಮಾನಸಿಕವಾಗಿ ಖಿನ್ನತೆಗೆ ಜಾರಿದ್ದ ಅವರು ಸರಿಯಾಗಿ ಊಟ-ತಿಂಡಿ-ನಿದ್ದೆಯನ್ನೇ ಮಾಡುತ್ತಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
05-01-2025 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಅದೃಷ್ಟವಶಾತ್ ಮನೆಯವ್ರು ಇದನ್ನು ಗಮನಿಸಿ ತಕ್ಷಣಕ್ಕೆ ಸಾಗರದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆ ತಂದಿದ್ದಾರೆ.ಪರಿಸ್ಥಿತಿ ನೋಡಿದ ವೈದ್ಯರು ಉಳಿಯುವುದು ಡೌಟ್ ಎಂದೇ ಹೇಳಿದ್ದರಂತೆ.ನಿನ್ನೆ ಅಂದರೆ 07-01-2025 ರಂದು ಅಲ್ಲಿಂದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ತೀವ್ರ ನಿಗಾಘಟಕದಲ್ಲಿದ್ದ ನಾಗಪ್ಪ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಇಷ್ಟಕ್ಕೆಲ್ಲಾ ಡಿಪೊ ಮ್ಯಾನೇಜರ್ರೇ ಕಾರಣ ಎಂದು ಕುಟುಂಬದವರು ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಂದ್ಹಾಗೆ ಡಿಪೋ ಮ್ಯಾನೇಜರ್ ಶ್ರೀಶೈಲ ಬಿರಾದಾರ್ ಬಗ್ಗೆ ಒಳ್ಳೆಯ ಮಾತುಗಳಿಲ್ಲ.ಕೆಳ ಹಂತದ ಸಿಬ್ಬಂದಿಗೆ ಕಿರುಕುಳ ನೀಡೋದು ಕಾಮನ್ ಅಂತೆ.ಅನೇಕ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಈ ಬಗ್ಗೆ ದೂರು ಕೂಡ ನೀಡಿದ್ದರಂತೆ,ಕ್ರಮ ಜಾರಿಯಾಗದಿದ್ದಾಗ ಸಚಿವ ರಾಮಲಿಂಗಾರೆಡ್ಡಿ ಅವರ ಕಚೇರಿಗೂ ದೂರು ನೀಡಿದ್ದರಂತೆ.ಆದರೆ ಅಲ್ಲಿಯೂ ಏನೂ ಆಗಲಿಲ್ಲವಂತೆ. ನಾಗಪ್ಪ ಅವರಿಗೆ ಅನೇಕ ರೀತಿಯಲ್ಲಿ ಕಿರುಕುಳ: ನೀಡುತ್ತಿದ್ದುದು ಸತ್ಯ.ಇದನ್ನು ಖುದ್ದು ನಾಗಪ್ಪ ಅವರೇ ನಮ್ಮ ಬಳಿ ಹೇಳಿಕೊಂಡಿದ್ದರು ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ನಾಗಪ್ಪರ ಸಹದ್ಯೋಗಿಗಳು ತಿಳಿಸಿದ್ದಾರೆ.
ಸಾಗರ ಡಿಪೋದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಪಾಲಿಗೆ ಕಂಟಕಪ್ರಾಯದಂತೆ ಆಗಿರುವ ಶ್ರೀ ಶೈಲ ಬಿರಾದಾರ್ ಅವರ ವಿರುದ್ಧ ಮೇಲ್ಕಂಡ ಪ್ರಕರಣದಲ್ಲಿ ಕ್ರೆಮ ಜಾರಿಯಾಗಬೇಕು.ಅವರ ವಿರುದ್ಧ ವ್ಯಾಪಕ ಆಪಾದನೆಗಳಿದ್ದರೂ ಕ್ರಮ ಕೈಗೊಳ್ಳದ ಶಿವಮೊಗ್ಗ ವಿಭಾಗೀಯ ಕಚೇರಿ ಅಧಿಕಾರಿಗಳ ವಿರುದ್ದವೂ ಕ್ರಮ ಜಾರಿಯಾಗಬೇಕಿದೆ ಎನ್ನಿಸುತ್ತೆ.ಇಲ್ಲವಾದಲ್ಲಿ ನಾಗಪ್ಪ ಅವರಂತ ಇನ್ನಷ್ಟು ಅಮಾಯಕ-ನಿಷ್ಪಾಪಿ ಸಿಬ್ಬಂದಿ ಬದುಕಿಗೆ ಬೆನ್ನಾಕಿ ಸಾವಿನತ್ತ ಮುಖ ಮಾಡೋದು ಕಾಮನ್ ಆಗ್ಹೋಗಬಹುದೇನೋ..? ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಏನ್ ಮಾಡ್ತಾರೆ ಕಾದುನೋಡ್ಬೇಕಷ್ಟೆ..









