ಕ್ರೈಸ್ತರ ಪ್ರಮುಖ ಹಬ್ಬವೇ  ಕ್ರಿಸ್ಮಸ್‌..ಈ  ಆಚರಣೆ ಶುರುವಾಗುವುದೇ ಮಧ್ಯರಾತ್ರಿಯಿಂದ..ಅದಕ್ಕೆ ಕಾರಣವೂ ಇದೆ.ಪ್ರಭು ಏಸುಕ್ರಿಸ್ತರ ಜನನವಾಗಿದ್ದೇ ಮಧ್ಯರಾತ್ರಿ.ಆದರೆ ದುರಂತ ನೋಡಿ ಕ್ರಿಸ್ಮಸ್‌ ಭಾರೀ ಸಂಭ್ರಮದಿಂದ ಆಚರಿಸಲ್ಪಡುವ ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಮಧ್ಯರಾತ್ರಿಯ ಸಂಭ್ರಮಕ್ಕೆ ಅವಕಾಶವೇ ಇಲ್ಲ..ಭದ್ರತೆಯ ನೆವವೊಡ್ಡಿ ಮಧ್ಯರಾತ್ರಿಯ ಆಚರಣೆಗೆ ನಿರ್ಬಂಧ ಹೇರಲಾಗುತ್ತಿದೆ.ಈ ಕೆಟ್ಟ ನಿರ್ಬಂಧದ  ಸಂಪ್ರದಾಯವನ್ನು ಸಿದ್ದು ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಾದ್ರೂ  ತೆಗೆದುಹಾಕಲಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಹಿರಿಯ ಪತ್ರಕರ್ತರೂ ಆಗಿರುವ ಸಾಮಾಜಿಕ ಕಾರ್ಯಕರ್ತ ಆಲ್ವಿನ್‌ ಮೆಂಡೊನ್ಸಾ ಈ ಒಂದು ಮನವಿಯನ್ನು ಸರ್ಕಾರದ ಮಟ್ಟದಲ್ಲಿ ಮಾಡಿಕೊಂಡಿದ್ದಾರೆ.  ಕರ್ನಾಟಕವನ್ನು ಸಿದ್ದು ನೇತೃತ್ವದ ಕಾಂಗ್ರೆಸ್‌ ಸರ್ಕಾರ ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿ ಮಾಡುವುದಾಗಿ ಹೇಳಿತ್ತು.ಚುನಾವಣಾಪೂರ್ವದಲ್ಲಿ ನೀಡಲಾಗಿದ್ದ ಈ ಭರವಸೆ ಈಡೇರಿಸಲು ಸರ್ಕಾರ ಈ ತಾರತಮ್ಯ ನೀಗಿಸಬೇಕೆಂದು ಸಿಎಂ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿಗಳನ್ನು ಸಲ್ಲಿಸಿದ್ದಾರೆ. ‘

ದೇಶದೆಲ್ಲೆಡೆ ಮಧ್ಯರಾತ್ರಿ ವೇಳೆ  ಕ್ರಿಸ್ಮಸ್’ ಆಚರಣೆಗೆ ಅವಕಾಶವಿದೆ.ಆದರೆ ಅದು  ಕರ್ನಾಟಕದಲ್ಲಿ ಏಕೆ ಇಲ್ಲ ಎಂದು ಆಲ್ವಿನ್‌ ಮೆಂಡೊನ್ಸಾ ಪ್ರಶ್ನಿಸಿದ್ದಾರೆ. ‘ಕ್ರಿಸ್ಮಸ್’ ಹಬ್ಬ ಅರ್ಥಪೂರ್ಣವಾಗಿ ಆಚರಣೆಗೊಳ್ಳಬೇಕಿದ್ದರೆ ಮಧ್ಯರಾತ್ರಿ ಆಚರಣೆಗೆ ಹೇರಿರುವ ನಿರ್ಬಂಧವನ್ನ ತತ್‌ ಕ್ಷಣ ತೆರವು ಮಾಡಬೇಕೆಂದು ಮನವಿ ಮಾಡಿದ್ದಾರೆ.’ಕ್ರಿಸ್ಮಸ್’ಗೆ ಎಲ್ಲೂ ಇಲ್ಲದ ನಿರ್ಬಂಧ ಕರ್ನಾಟಕದಲ್ಲಿ ಯಾಕೆ?  ಎಂದು ಸರ್ಕಾರವನ್ನು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿ ಮಾಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಇದೀಗ ಕ್ರೈಸ್ತ ಧರ್ಮೀಯರ ಸಮಸ್ಯೆ ಸವಾಲಾಗಿ ಪರಿಣಮಿಸಿದೆ.

ದೇಶದೆಲ್ಲೆಡೆ ಇರುವಂತೆ ಕರಾವಳಿ ಸಹಿತ ರಾಜ್ಯದ ಎಲ್ಲಾ ಚರ್ಚ್‌ಗಳಲ್ಲೂ ಸಂಪ್ರದಾಯದಂತೆ ಮಧ್ಯರಾತ್ರಿ ಕ್ರಿಸ್ಮಸ್ ಹಬ್ಬ ಆಚರಣೆಗೆ ಅವಕಾಶ ಕಲ್ಪಿಸಬೇಕಿದೆ. ‘ವಿವಿಧತೆಯಲ್ಲಿ ಏಕತೆ’ ಎಂಬುದು ನಮ್ಮ ದೇಶದ ವೈಶಿಷ್ಟ್ಯ ಎಂಬುದು ಸತ್ಯ. ಬಹುಶಃ ಅದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿ ಮಾಡುವ ಭರವಸೆಯನ್ನು ನೀಡಿ ಗೆದ್ದು ಅಧಿಕಾರಕ್ಕೆ ಬಂದಿದೆ. ಪ್ರಸ್ತುತ ಸರ್ಕಾರವು ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವ ನೀಡಿರುವ ಭರವಸೆಯನ್ನು ಈಡೇರಿಸಬೇಕೆಂದು ಆಲ್ವಿನ್ ಮೆಂಡೋನ್ಸಾ ಒತ್ತಾಯಿಸಿದ್ದಾರೆ.

“ಕ್ರಿಸ್ಮಸ್‌ ಆಚರಣೆ ಎಂದರೆ ಅದು “ಮಿಡ್‌ ನೈಟ್‌ ಮಾಸ್” (‌ ಮಧ್ಯರಾತ್ರಿ ನಡೆಯುವ ವಿಶೇಷ ಬಲಿಪೂಜೆ).ಈ ವೇಳೆ ಕ್ರೈಸ್ತ ಬಾಂಧವರು  ಕ್ರಿಸ್ತನ ಜನನವನ್ನು ಕೊಂಡಾಡುತ್ತಾರೆ.ಸಂಭ್ರಮಿಸುತ್ತಾರೆ.ಸಹಜವಾಗಿ ನಾವು ನೋಡಿದಂಗೆ ಈ ವೇಳೆ ಗಲಾಟೆ-ದೊಂಬಿಗಳೇ ಆಗುವುದಿಲ್ಲ.ಏಕೆ ಈ ನಿರ್ಬಂಧ ಹೇರಲಾಗಿದೆಯೋ ಗೊತ್ತಿಲ್ಲ.ಇದು ಕ್ರೈಸ್ತರ ಧಾರ್ಮಿಕ ಭಾವನೆಗೂ ಧಕ್ಕೆ ಉಂಟು ಮಾಡಿದಂತಲ್ಲವೇ..? ಸರ್ಕಾರಗಳಿಗೆ ಏಕೆ ಇದು ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ. ಒಂದ್ವೇಳೆ ಭದ್ರತೆನೇ ಹಬ್ಬಕ್ಕೆ ತೊಡಕಾಗುತ್ತಿದೆ ಎನ್ನುವುದಾದರೆ ಪೊಲೀಸ್‌ ಇಲಾಖೆ-ಜಿಲ್ಲಾಡಳಿತ ಎನ್ನೋದು ಇರುವುದಾದರೂ ಏಕೆ..? ಬೇರೆ ಹಬ್ಬಗಳ ವೇಳೆ ಕೊಡುವಷ್ಟೇ ಭದ್ರತೆಯನ್ನು ನಮಗೂ ನೀಡಲಿ..ಅದಕ್ಕೆ ಏನ್‌ ಪ್ರಾಬ್ಲಮ್.ಅದನ್ನು ಬಿಟ್ಟು ಸುಮ್ಮನೆ ನೆವ ಹೇಳೋದು ಎಷ್ಟು ಸರಿ..?” -ಆಲ್ವಿನ್‌ ಮೆಂಡೊನ್ಸಾ-ಹಿರಿಯ ಪತ್ರಕರ್ತ,ಸಾಮಾಜಿಕ ಕಾರ್ಯಕರ್ತ

ಏನಿದು  ಕ್ರಿಸ್ಮಸ್ ಮಧ್ಯರಾತ್ರಿ ಆಚರಣೆಗೆ ನಿರ್ಬಂಧ ಹೇರಲಾಗಿರುವ ವಿಚಾರ?:‘ಕ್ರಿಸ್ಮಸ್’ ಎಂಬುದು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುವ ಹಬ್ಬ. ಜಗತ್ತಿಗೆ ಶಾಂತಿಯನ್ನು ಬೋಧಿಸಿ ಪರಮಾತ್ಮನಾಗಿರುವ ಪ್ರಭು ಏಸು ಕ್ರಿಸ್ತನ ಜನ್ಮ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಶಾಂತಿಯ ಸಂದೇಶವನ್ನು ಸಾರುವುದೇ ಕ್ರಿಸ್ಮಸ್ ಹಬ್ಬ. ಹಾಗಾಗಿಯೇ ದೇಶದೆಲ್ಲೆಡೆ, ಹಾಗೂ ರಾಜ್ಯಾದ್ಯಂತ ಡಿಸೆಂಬರ್ 24ರ ಮಧ್ಯರಾತ್ರಿವರೆಗೂ ಚರ್ಚ್‌ಗಳಲ್ಲಿ ಪ್ರಾರ್ಥನೆ ಕಾರ್ಯಕ್ರಮಗಳು ನೆರವೇರುತ್ತವೆ. ಏಸು ಕ್ರಿಸ್ತನ ಜನ್ಮದಿನವಾದ ಡಿಸೆಂಬರ್ 25ರ ಆರಂಭದ ಗಳಿಗೆಯಲ್ಲೇ ಡಿಸೆಂಬರ್ 24ರ ಮಧ್ಯರಾತ್ರಿ ಕ್ರಮಿಸುವ ಸಂದರ್ಭದಲ್ಲೇ ವಿಶೇಷ ಪ್ರಾರ್ಥನೆ ನೆರವೇರುವುದು ಶತಮಾನಗಳಿಂದಲೇ ಇರುವ ಸಂಪ್ರದಾಯ.

ಆದರೆ ಈ ಸಾಂಪ್ರದಾಯಿಕ ಆಚರಣೆಯು ಕೆಲವು ವರ್ಷಗಳ ಹಿಂದಿನವರೆಗೂ ದಕ್ಷಿಣಕನ್ನಡ ಸಹಿತ ರಾಜ್ಯದೆಲ್ಲೆಡೆ ಚರ್ಚ್‌ಗಳಲ್ಲೂ ತಡರಾತ್ರಿವರೆಗೂ ನೆರವೇರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಭದ್ರತೆಯ ನೆಪವೊಡ್ಡಿ ಕ್ರಿಸ್ಮಸ್ ಹಬ್ಬದ ರಾತ್ರಿ ಪ್ರಾರ್ಥನೆಗೆ ಜಿಲ್ಲಾಡಳಿತ ಅವಕಾಶ ನೀಡದಿರುವುದರಿಂದಾಗಿ ಕ್ರೈಸ್ತ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಮಂಗಳೂರು ಮೂಲದ ಪತ್ರಕರ್ತರೂ ಆದ ಆಲ್ವಿನ್ ಮೆಂಡೋನ್ಸಾ ಅವರು ರಾಜ್ಯ ಸರ್ಕಾರದ ಗಮನಸೆಳೆದಿದ್ದಾರೆ. ಎಲ್ಲಾ ಧರ್ಮಗಳ ಆಚರಣೆಗೆ ಅವಕಾಶ ಕಲ್ಪಿಸುತ್ತಿರುವ ಕರ್ನಾಟಕ ಸರ್ಕಾರ ಕ್ರೈಸ್ತ ಸಮುದಾಯದ ವಿಚಾರದಲ್ಲಿ ತಾರತಮ್ಯ ನಡೆಸುತ್ತಿರುವುದು ಸರಿಯಲ್ಲ ಎಂದವರು ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ದೇಗುಲಗಳ ಜಾತ್ರಾ ಮಹೋತ್ಸವಗಳಿಗೆ, ವಿವಿಧ ಪ್ರಾರ್ಥನಾ ಮಂದಿರಗಳ ಕಾರ್ಯಕ್ರಮಗಳೂ ರಾತ್ರಿಯಿಡೀ ನೆರವೇರಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಅವಕಾಶ ನೀಡುತ್ತದೆ. ಆದರೆ, ಕ್ರೈಸ್ತ ಧರ್ಮೀಯರ ಪವಿತ್ರ ಹಬ್ಬವಾಗಿರುವ ‘ಕ್ರಿಸ್ಮಸ್’ ಪ್ರಾರ್ಥನಾ ಕಾರ್ಯಕ್ರಮವನ್ನು ರಾತ್ರಿ ವೇಳೆ ಆಚರಿಸಲು ಅವಕಾಶ ನೀಡದಿರುವ ಕ್ರಮವು ತಾರತಮ್ಯದ ನಡೆಯಲ್ಲದೆ ಬೇರೇನೂ ಅಲ್ಲ ಎಂಬುದು ವಿಷಾದದ ಸಂಗತಿ ಎಂದು  ಹೇಳಿದ್ದಾರೆ.

ಪ್ರಸಕ್ತ ಡಿಜಿಟಲ್, ತಂತ್ರಜ್ಞಾನ ಯುಗದಲ್ಲಿ ಭದ್ರತೆಗೆ ಸವಾಲಾಗುವ ಪರಿಸ್ಥಿತಿ ಇಲ್ಲ. ಎಲ್ಲೆಲ್ಲೂ ಸಿಸಿಟಿವಿ ಹಾಗೂ ಇನ್ನಿತರ ಸುಸಜ್ಜಿತ ವ್ಯವಸ್ಥೆ ಇರುವಾಗ ಧಾರ್ಮಿಕ ಕೈಂಕರ್ಯದ ಆಚರಣೆ ಯಾವುದೇ ಆತಂಕವಿಲ್ಲದೆಯೇ ನೆರವೇರಬಹುದು ಎಂದು ಸಲಹೆ ಮುಂದಿಟ್ಟಿರುವ ಆಲ್ವಿನ್ ಮೆಂಡೋನ್ಸಾ, ‘ಸರ್ವ ಸಮುದಾಯದ ಶಾಂತಿಯ ತೋಟ’ ಎಂಬ ಸೂತ್ರವನ್ನು ಪುನರುಚ್ಚರಿಸುತ್ತಾ ಆಡಳಿತ ನಡೆಸುತ್ತಿರುವ ಕರ್ನಾಟಕ ಸರ್ಕಾರವು ಎಲ್ಲಾ ಧರ್ಮಗಳಿಗೆ ಅವಕಾಶವಿರುವಂತೆಯೇ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆಯೇ ಕರಾವಳಿಯ ಜಿಲ್ಲೆಗಳಲ್ಲೂ ಕ್ರಿಸ್ಮಸ್ ಹಬ್ಬದ ಪ್ರಾರ್ಥನಾ ಕಾರ್ಯಕ್ರಮಗಳನ್ನು ಸಾಂಪ್ರದಾಯದಂತೆ ಮಧ್ಯರಾತ್ರಿಯೂ ಆಚರಿಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಈ ನಿರ್ಬಂದವನ್ನು ತೆರವುಗೊಳಿಸಿ ಕ್ರೈಸ್ತರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಬೇಕು.ಭದ್ರತೆಯ ನೆವದಲ್ಲೇ ಈ ನಿರ್ಬಂಧ ಮುಂದುವರೆಸಿಕೊಂಡು ಬಂದಿರುವ ಅವೈಜ್ಞಾನಿಕ.ಏಕೆಂದರೆ ಕ್ರೈಸ್ತರು ಶಾಂತಿ ಪ್ರಿಯರು.ಅವರಿಂದ ಗಲಭೆ ಗೊಂದಲಗಳಾಗಿರುವ ಉದಾಹರಣೆಗಳೇ ಕಡಿಮೆ.ಅಂತದ್ದರಲ್ಲಿ ಈ ನಿರ್ಬಂಧವನ್ನು ಮುಂದುವರೆಸಿಕೊಂಡು ಬಂದಿರುವುದು ಯಾವ ನ್ಯಾಯ. ಭದ್ರತೆ ಕಲ್ಪಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತೆ ಎಂದರೆ ನಮ್ಮ ಪೊಲೀಸರ ಮೂಲಕ ಅದನ್ನು ಕಲ್ಪಿಸಬಹುದಲ್ವಾ..ಹಾಗೆ ಮಾಡೋದನ್ನು ಬಿಟ್ಟು ಕ್ರೈಸ್ತರ ವಿಧಿವತ್ತಾದ ಸಂಪ್ರದಾಯವನ್ನು ತಡೆಹಿಡಿಯುತ್ತಾ ಅವರ ಸಂಭ್ರಮಕ್ಕೆ ತಣ್ಣೀರೆರಚುತ್ತಾ ಬಂದಿರುವುದು ಸರಿಯಲ್ಲ ಎನ್ನುವುದು ಆಲ್ವಿನ್‌ ಅವರ ವಾದವನ್ನು ಬೆಂಬಲಿಸುವವರ ಅಭಿಪ್ರಾಯ. ಆಲ್ವಿನ್‌ ಮೆಂಡೊನ್ಸಾ ಅವರು ಮಾಡಿರುವ ಮನವಿಯನ್ನು ಸಿದ್ದು ಸರ್ಕಾರ ಪರಿಗಣಿಸುತ್ತೋ ಅಥವಾ ಭದ್ರತೆಯ ನೆವವೊಡ್ಡಿ ಹಿಂದಿನ ಸರ್ಕಾರಗಳು ಹೇರುತ್ತಾ ಬಂದಿದ್ದ ನಿರ್ಬಂಧವನ್ನು ಮುಂದುವರೆಸುತ್ತೋ ಎನ್ನುವುದನ್ನು ಕಾದು ನೋಡಬೇಕಿದೆ.

Spread the love

Leave a Reply

Your email address will not be published. Required fields are marked *