”ಡಾಕ್ಟರ್‌ ಆನ್‌ ವ್ಹೀಲ್‌” ಖ್ಯಾತಿಯ ಡಾ.ಸುನೀಲ್‌ ಹೆಬ್ಬಿ ಮೇಲೆ ಯಲಹಂಕದ ಕೇಂದ್ರೀಯ ವಿಹಾರ್‌  ಅಪಾರ್ಟ್ಮೆಂಟ್‌ ಅಸೋಸಿಯೇಷನ್‌ ಪದಾಧಿಕಾರಿಗಳಿಂದ ಹಲ್ಲೆ

ಬೆಂಗಳೂರು:ನಿಮ್ಮ ನಡುವೆ ಏನೇ ಅನ್ಯಾಯವಾದ್ರೂ ಸಹಿಸಿಕೊಳ್ಳಬೇಕು,.,ಅದನ್ನು ಪ್ರಶ್ನಿಸಲೇಬೇಡಿ..?  ನೀವೂ ಎಷ್ಟೇ ಬುದ್ಧಿವಂತರಾಗಿರ್ರಿ..ಎಷ್ಟೇ ಕಾನೂನು ತಿಳ್ಕೊಂಡಿರ್ರಿ… ಅನ್ಯಾಯವನ್ನು ತುಟಿ ಕಚ್ಚಿ ಸಹಿಸಿಕೊಳ್ಳಬೇಕೇ ಹೊರತು ಪ್ರಶ್ನಿಸುವ ಗೋಜಿಗೆ ಹೋಗಲೇಬೇಡಿ…ಹೋದರೆ ಏನಾಗುತ್ತೆ ಗೊತ್ತಾ..? ಇದಕ್ಕೆ ವೃತ್ತಿಯಲ್ಲಿ ವೈದ್ಯರೂ ಪ್ರವೃತ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಡಾ.ಸುನೀಲ್ ಹೆಬ್ಬಿ ಅವರಿಗಾದ ಸ್ಥಿತಿಯೇ ಜೀವಂತ ಸಾಕ್ಷಿಯಂತಿದೆ.ಅಷ್ಟಕ್ಕೂ ಸುನೀಲ್ ಹೆಬ್ಬಿ ಮಾಡಿದ ತಪ್ಪೇನು ಗೊತ್ತಾ..? ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಕೆಲವರು ನಡೆಸುತ್ತಿದ್ದರೆನ್ನಲಾದ ಅಕ್ರಮ ಪ್ರಶ್ನಿಸಿದ್ದು ಅಷ್ಟೇ..ಆ ಅಕ್ರಮಕ್ಕೆ ಬಲಿಪಶುಗಳಾಗುತ್ತಿದ್ದ ನಾಗರಿಕರನ್ನು ರಕ್ಷಿಸಲು ಕಾನೂನುಬದ್ಧವಾಗಿ ಮುಂದಾಗಿದ್ದು ಅಷ್ಟೇ..ಸಾಮಾಜಿಕ ಕಳಕಳಿಯಲ್ಲಿ ನಡೆಸಿದ ಹೋರಾಟದ ಫಲವಾಗಿ ವೈದ್ಯ ಹೆಬ್ಬಿ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಯಲಹಂಕ ವ್ಯಾಪ್ತಿಯಲ್ಲಿ ಅತ್ಯಂತ ಪ್ರಸಿದ್ದವಾಗಿರುವ ಅಪಾರ್ಟ್ಮೆಂಟ್‌ ಗಳಲ್ಲಿ ಕೇಂದ್ಯ ವಿಹಾರ ಕೂಡ ಒಂದು.೭೦೦ ಕ್ಕೂ ಹೆಚ್ಚು ಪ್ಲಾಟ್ಸ್‌ ಗಳಿರುವ ವಸತಿ ಸಮುಚ್ಛಯದಲ್ಲಿ ನಮ್ಮ ರಾಜ್ಯದವರು ಸೇರಿದಂತೆ ಹೊರರಾಜ್ಯದ ನೂರಾರು ಜನ ವಾಸವಾಗಿದ್ದಾರೆ.ಈ ಪೈಕಿ ಡಾಕ್ಟರ್‌ ಆನ್‌ ವ್ಹೀಲ್‌ ಖ್ಯಾತಿಯ ಡಾ.ಸುನೀಲ್‌ ಹೆಬ್ಬಿ ಕೂಡ ಒಬ್ಬರು,ಕೇವಲ ವೈದ್ಯರಾಗದೆ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಹೆಬ್ಬಿ ಅವರ ಮೇಲೆ ಅದೇ ಅಪಾರ್ಟ್ಮೆಂಟ್‌ ನ ವೆಲ್ಫೇರ್‌ ಅಸೋಸಿಯೇಷನ್‌ ನಲ್ಲಿರುವ ಕೆಲವು ಪದಾಧಿಕಾರಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.

ಅಪಾರ್ಟ್ಮೆಂಟ್‌ ನ ಅಸೋಸಿಯೇಷನ್‌ ಅವರು ನಿಯಮಬಾಹಿರವಾಗಿ ಶುಲ್ಕ ಸಂಗ್ರಹ ಮಾಡ್ತಿದ್ದಾರೆಂಬ ಆರೋಪದ ಹಿನ್ನಲೆಯಲ್ಲಿ ದೂರು ನೀಡಿ ಖಾತೆಯನ್ನು ರದ್ದು ಮಾಡಿದ್ದಕ್ಕೆ ವ್ಯಗ್ರಗೊಂಡು ಹೆಬ್ಬಿ ಮೇಲೆ ನಡೆಸಿದ್ದಾರೆನ್ನುವುದು ಹೆಬ್ಬಿ ಅವರ ಆರೋಪ.ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್‌ ಠಾಣೆಗೂ ಅವರು ದೂರು ಕೊಟ್ಟಿದ್ದಾರೆ.ಆದರೆ ತಮ್ಮ ಮೇಲೆ ನಡೆದಿರುವುದು ಕೊಲೆಯತ್ನ ಎನ್ನುವುದನ್ನು ಒತ್ತಿ ಹೇಳಿದ್ದರೂ ಪೊಲೀಸರು ಆ ಸೆಕ್ಷನ್‌ ನ್ನು ಎಲ್ಲಿಯೂ ಸೇರಿಸಿಲ್ಲ ಎನ್ನುವುದು ಹೆಬ್ಬಿ ಅವರ ಆಪಾದನೆ.

ಡಾ.ಸುನೀಲ್‌ ಹೆಬ್ಬಿ ಅವರ ಮೇಲೆ ನಡೆದಿರುವ ಹಲ್ಲೆಯಿಂದ ಸಾಮಾಜಿಕ ಕಾರ್ಯಕರ್ತರ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.ಸಾಮಾಜಿಕ ಕಳಕಳಿಯಲ್ಲಿ ಕೆಲಸ ಮಾಡುವ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತದೆ ಎಂದರೆ ಅನ್ಯಾಯ ಪ್ರಶ್ನಿಸುವ ಧೈರ್ಯವನ್ನು ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿರುವ ಸಾಮಾಜಿಕ ಕಾರ್ಯಕರ್ತರು ಸೂಕ್ತ ಭದ್ರತೆಗಾಗಿ ಪೊಲೀಸ್‌ ಕಮಿಷನರ್‌ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

ಡಾ.ಸುನೀಲ್ ಅವರ ಪ್ರಕಾರ ಅಂದು ನಡೆದಿದ್ದೇನು..? 14-04-2024 ರಂದು  ತಾನು ವಾಸಕ್ಕೆ ಇರುವ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ನಲ್ಲಿ ಸಂಜೆ ಸುಮಾರು 7 ರ ಹೊತ್ತಿಗೆ ಕಾರನ್ನು ಪಾರ್ಕ್ ಮಾಡುತ್ತಿದ್ದರು.ಇದ್ದಕ್ಕಿದ್ದಂತೆ ಹಿಂದಿನಿಂದ ಮೂರ್ನಾಲ್ಕು ಜನ ಪ್ರತ್ಯಕ್ಷರಾಗಿದ್ದಾರೆ.ಅವರೆಲ್ಲಾ ಅಪಾರ್ಟ್ಮೆಂಟ್ ನ ವೆಲ್ಫೇರ್ ಅಸೋಸಿಯೇಷನ್ ನಲ್ಲಿ ಪದಾಧಿಕಾರಿಗಳಾಗಿದ್ದು ಪರಿಚಿತರಾಗಿರುತ್ತಾರಂತೆ.ಎದುರಾದವರೇ ಏಕಾಏಕಿ ಅವಾಚ್ಯ ಶಬ್ದಗಳಿಂದ  ಅವೆರನ್ನು ನಿಂದಿಸಲು ಶುರುಮಾಡಿದ್ದಾರೆ.ನಮ್ಮ ಅಸೋಸಿಯೇಷನ್ ನ 7 ಕೋಟಿ ಹಣದ ಖಾತೆಯನ್ನು ಕಂಪ್ಲೆಂಟ್ ಕೊಟ್ಟು ರದ್ದು ಮಾಡಿಸ್ತಿಯೇನೋ ಎಂದು ಬೈಯ್ದಾಡುತ್ತಾ ಕತ್ತಿನ ಪಟ್ಟಿ ಹಿಡಿದು ಎಳೆದಾಡಿದ್ದಾರೆ.ಅಷ್ಟರೊಳಗೆ ಇನ್ನೊಂದು ನಾಲ್ಕೈದು ಜನ ಅವರೊಂದಿಗೆ ಸೇರಿಕೊಂಡು ಬೈಯ್ಯುತ್ತಾ..ಎಳೆಯುತ್ತಾ ಹಲ್ಲೆ ಮಾಡಿದ್ದಾರೆ.ಅಪಾರ್ಟ್ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೆನ್ನಲಾದ ಶಿವಪ್ರಸಾದ್, ಉಗ್ರಪ್ಪ,ಸಂತೋಷ್ ಯಾದವ್,ಸುನೀಲ್ ಯಾದವ್ ,ರಮಾಕಾಂತ್ ಯಾದವ್ ಹಾಗೂ ಅವರ ಗುಂಪು ಇವರ ಕತ್ತನ್ನು ಹಿಸುಕಿದ್ದಷ್ಟೇ ಅಲ್ಲ ಅವರನ್ನು ಮಲಗಿಸಿಕೊಂಡು ಕತ್ತಿನ ಮೇಲೆ ಕಾಲಿಟ್ಟು ತುಳಿದಿದ್ದಾರಂತೆ.ಅವರ ಗುಪ್ತಾಂಗಗಳ ಮೇಲೂ ಪ್ರಹಾರ ನಡೆಸಿದ್ದಾರಂತೆ.

ದಾಳಿಯಿಂದ ತಪ್ಪಿಸಿಕೊಳ್ಳೊಕ್ಕೆ ಪೊಲೀಸ್ ಸಹಾಯವಾಣಿ 112 ಗೆ ಕಾಲ್ ಮಾಡಿದ್ದಾರೆ.ಅವರು ನಿರೀಕ್ಷಿತ ಸಮಯದಲ್ಲಿ ಬರಲಿಲ್ಲ.ಅಂಬುಲೆನ್ಸ್ ಗೆ ಕರೆ ಮಾಡಿದ್ರೂ ಬರಲಿಲ್ಲ.ತಕ್ಷಣಕ್ಕೆ ತನ್ನದೇ ಆದ ಡಾಕ್ಟರ್ ಆನ್ ವ್ಹೀಲ್  ಮಿನಿ ಅಂಬುಲೆನ್ಸ್ ನಲ್ಲಿ ಮೊದಲು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಕೆ.ಸಿ ಜನರಲ್ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಿದ್ದಾರೆ.ಎಳೆದಾಡಿ ಬಡಿದಿರುವುದರಿಂದ ಮೈ-ಕೈ ಕಾಲಿಗೆ ನೋವಾಗಿದೆ.

ಯಾರು ಈ ಡಾಕ್ಟರ್ ಹೆಬ್ಬಿ..ಏನದು ಡಾಕ್ಟರ್ ಆನ್ ವ್ಹೀಲ್ಸ್: ಡಾ.ಸುನೀಲ್ ಹೆಬ್ಬಿ ವೈದ್ಯಕೀಯ ಸೇವೆಯನ್ನು ಕೇವಲ ನಾಲ್ಕು ಗೋಡಗೆ ಸೀಮಿತಗೊಳಿಸದೆ ಸಾರ್ವಜನಿಕವಾಗಿ ದೊರೆಯಬೇಕೆನ್ನುವ ಉಮೇದಿನಲ್ಲಿ ವೈದ್ಯಕೀಯ ಕ್ರಾಂತಿಗೆ ಕಾರಣವಾದವರು,ಅದಕ್ಕಾಗಿ ರೂಪಿಸಿದ ಪರಿಕಲ್ಪನೆ ಅತ್ಯದ್ಭುತ ಹಾಗೂ ಮಾದರಿಯಾಗುವಂತದ್ದು. ಯಾರಿಂದಲೂ ಹಣ ಸಹಾಯ ಪಡೆಯದೆ ತಮ್ಮದೇ ಉಳಿತಾಯದ ಹಣದಲ್ಲಿ ಕಾರನ್ನು ಕೊಂಡು ಅದನ್ನೇ ಮಿನಿ ಅಂಬುಲೆನ್ಸ್ ಆಗಿ ರೂಪಾಂತರಿಸಿದವರು.ಅವರ ಈ ಮೂವಿಂಗ್ ವೈದ್ಯಕೀಯ ಸೇವೆಗೆ ಅವರಿಟ್ಟ ಹೆಸರು ಡಾಕ್ಟರ್ ಆನ್ ವ್ಹೀಲ್.

ಕಳೆದ 13 ವರ್ಷಗಳಿಂದಲೂ ಸತತವಾಗಿ  ಡಾಕ್ಟರ್ ಆನ್ ವ್ಹೀಲ್ ಕಾನ್ಸೆಪ್ಟ್ ಮೂಲಕ ವೈದ್ಯಕೀಯ ಸೇವೆಯನ್ನು ಮುಫತ್ತಾಗಿ ಮಾಡುತ್ತಾ ಬಂದಿರುವ ಸುನೀಲ್ ಹೆಬ್ಬಿ ಅವರಿಗೆ ಸಾಮಾಜಿಕವಾಗಿ ದೊಡ್ಡ ಹೆಸರಿದೆ.ವೈದ್ಯಕೀಯ ಸೇವೆ ಎನ್ನುವುದು ಹಣ ಮಾಡುವ ಲಾಭದ ವ್ಯವಹಾರವಾಗಿರುವಾಗ ಡಾ,ಸುನೀಲ್ ಹೆಬ್ಬಿ ಬೆಂಗೂರಿನ ಯಾವುದೇ ಮೂಲೆಯಲ್ಲಿ ಸಮಸ್ಯೆ ಇದೆ ಎಂದು ಯಾರೇ ಕರೆದರೂ ಅಲ್ಲಿಗೆ ತಲುಪಿ ವೈದ್ಯಕೀಯ ಸೇವೆ ಸಲ್ಲಿಸುವ ಮೂಲಕ ಎಷ್ಟೋ ಅನಾಹುತ ತಪ್ಪಿಸಿರುವ ನಿದರ್ಶನಗಳಿವೆ.

ಇಂಥದ್ದೊಂದು ಅತ್ಯದ್ಬುತವಾದ ಕೆಲಸ ಮಾಡುತ್ತಾ ಬಂದಿರುವ ಸುನೀಲ್ ಹೆಬ್ಬಿ ಅವರಿಗೆ ವೃತ್ತಿ ಜತೆಗೆ ಸಾಮಾಜಿಕ ಸೇವೆ ಮಾಡಬೇಕೆಂಬ ತುಡಿತ ಜಾಗೃತವಾದ ದಿನದಿಂದಲೇ ಸಾಮಾಜಿಕ ಚಟುವಟಿಕೆಗಳತ್ತ ತಮ್ಮನ್ನು ತೊಡಗಿಸಿಕೊಂಡು ಅದರಲ್ಲೆ ದುಡಿಸಿಕೊಳ್ಳುತ್ತಿದ್ದಾರೆ.ಸಾಮಾಜಿಕ ಕಾಳಜಿಯ ಯಾವುದೇ ವಿಷಯಗಳಿದ್ದರೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಸಮಾಜಮುಖಿ ಹಾಗೂ ಮಾನವಮುಖಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

ಸಮಾಜದಲ್ಲಿ ಎಲ್ಲಿ..ಯಾವುದೇ ರೀತಿಯ ಅನ್ಯಾಯವಾದ್ರೂ ದ್ವನಿ ಎತ್ತುವ ಸುನೀಲ್ ಹೆಬ್ಬಿ ಅವರು ವಾಸವಿರುವ ಯಲಹಂಕದ ಕೇಂದ್ರಿಯ ವಿಹಾರ್ ಅಪಾರ್ಟ್ಮೆಂಟ್ ನಲ್ಲಿಯೇ ದೊಡ್ಡ ಮಟ್ಟದ ಅಕ್ರಮ ನಡೆಯುತ್ತಿದೆ ಎನ್ನುವ ಶಂಕೆ ಬಂದಿದೆ.ಅದನ್ನು ಕೆದಕುತ್ತಾ ಹೋದಂತೆಲ್ಲಾ ನಿವಾಸಿಗಳನ್ನು ಅಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದಲ್ಲಿರುವ ಕೆಲವರು ಸುಲಿಗೆ ಮಾಡುತ್ತಿದ್ದಾರೆನ್ನುವುದು ಗೊತ್ತಾಗಿದೆಯಂತೆ,ಸಹಕಾರಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಶೀಲನೆ ಮಾಡಿದಾಗ ಇದು ದೃಢಪಟ್ಟಿದೆ. ಇದರ ಬಗ್ಗೆ ಕ್ಷೇಮಾಭಿವೃದ್ಧಿ ಸಂಘದಲ್ಲಿ ಪ್ರಶ್ನಿಸಿದಾಗ ವಿರೋಧ ವ್ಯಕ್ತವಾಗಿದೆ.ಅಷ್ಟೆಕ್ಕೆ ಸುಮ್ಮನಾಗದ ಡಾ.ಹೆಬ್ಬಿ ಮತ್ತೊಂದು ಹೆಜ್ಜೆ ಮುಂದಾಗಿ ಅಸೋಸಿಯೇಷನ್ ನ ಖಾತೆಯನ್ನೇ ರದ್ದು ಮಾಡಿಸಿದ್ದಾರೆ.ಒಂದು ಮೂಲದ ಪ್ರಕಾರ ಇದರಲ್ಲಿ ಕೋಟ್ಯಾಂತರ ಹಣ ಇತ್ತೆನ್ನಲಾಗಿದೆ.

ತಮ್ಮ ವ್ಯವಹಾರ ನಿರ್ವಹಣೆಗೆ ಇದ್ದ ಹಣದ ಮೂಲವನ್ನೇ ಸ್ಥಗಿತ ಮಾಡಿಸಿದ್ದರಿಂದ ನಖಶಿಖಾಂತ ಉರಿದುಕೊಂಡಿದ್ದ ಅಸೋಸಿಯೇಷನ್ ನ ಕೆಲವರು ಇವರ ವಿರುದ್ಧ ಷಡ್ಯಂತ್ರತ ರೂಪಿಸಿದ್ದರಂತೆ.ಆ ಷಡ್ಯಂತ್ರದ ಭಾಗವಾಗೇ ಇದನ್ನೆಲ್ಲಾ ನಡೆಸಿದ್ದಾರೆನ್ನುವುದು ಸುನೀಲ್ ಆರೋಪ.

ನನಗೆ ಜೀವ ಭಯವಿದೆ..ಪೊಲೀಸ್ ರಕ್ಷಣೆ ಬೇಕು: ತಮ್ಮ ಮೇಲೆ ನಡೆದಿರುವ ಹಲ್ಲೆಯಿಂದ ಡಾ.ಸುನೀಲ್ ಹೆಬ್ಬಿ ಅಕ್ಷರಶಃ ಕನಲಿ ಹೋಗಿದ್ದಾರೆ. ಶಿವಪ್ರಸಾದ್, ಉಗ್ರಪ್ಪ,ಸಂತೋಷ್ ಯಾದವ್,ಸುನೀಲ್ ಯಾದವ್ ,ರಮಾಕಾಂತ್ ಯಾದವ್ ಅವರಿಂದ ತನ್ನ ಜೀವಕ್ಕೆ ತೊಂದರೆಯಿದೆ. ಅವರ ಅಕ್ರಮಕ್ಕೆ ನಾನು ಬ್ರೇಕ್ ಹಾಕಿದೆ ಎಂದು ಕುದಿಯುತ್ತಿರುವ ಅವರು ನನ್ನ ಮೇಲೆ ಯಾವ್ ಕ್ಷಣದಲ್ಲಿ ಏನ್ ಬೇಕಾದ್ರೂ ಮಾಡಬಹುದು..ನನಗೆ ರಕ್ಷಣೆ ಬೇಕು ಎಂದಿರುವ ಹೆಬ್ಬಿ ಪೊಲೀಸ್ ಸೆಕ್ಯೂರಿಟಿಗೂ ಮನವಿ ಮಾಡಿದ್ದಾರೆ.ಅಲ್ಲದೇ ಇಷ್ಟೆಲ್ಲಾ ಅನ್ಯಾಯ ನನ್ನ ಜತೆಗಾದ್ರೂ ಪೊಲೀಸ್ ರು ಮಾತ್ರ ಕೊಲೆಯತ್ನಕ್ಕೆ ಸಂಬಂಧಿಸಿದ ಯಾವುದೇ ಸೆಕ್ಷನ್‌ ಸೇರಿಸಿಲ್ಲ.ಅದ್ಯಾಕೆ ಎನ್ನುವುದು ಗೊತ್ತಾಗ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೋರಾಟ ಮಾಡೋದೇ ತಪ್ಪಾ;;? ತನ್ನ ಮೇಲೆ ನಡೆದ ಹಲ್ಲೆಯಿಂದ ಮಾನಸಿಕವಾಗಿ ನೊಂದಿರುವ ಡಾ.ಸುನೀಲ್‌ ಹೆಬ್ಬಿ ವೈದ್ಯ ವೃತ್ತಿ ಜತೆಗೆ ಸಾಮಾಜಿಕ ಕಾಳಜಿಯಲ್ಲಿ ಕೆಲಸ ಮಾಡೋದೇ ತಪ್ಪಾ..? ಅಷ್ಟಕ್ಕೂ ನಾನು ಮಾಡಿದ ತಪ್ಪಾದ್ರೂ ಏನು..? ಅನ್ಯಾಯ ನಡೆಯುತ್ತಿರುವುದನ್ನು ಪ್ರಶ್ನಿಸಿ ನಿವಾಸಿಗಳಿಗೆ ಆಗುತ್ತಿದ್ದ ಅನ್ಯಾಯ ತಪ್ಪಿಸಿದ್ದೇನಾ..? ಹೀಗೆಲ್ಲಾ ಆದ್ರೆ ಹೋರಾಟ ಮಾಡಲಿಕ್ಕೆ ಯಾರು ಮುಂದೆ ಬರ್ತಾರೆ ಹೇಳಿ,..? ನಮ್ಮ ಪೊಲೀಸ್‌ ವ್ಯವಸ್ಥೆ ನಮ್ಮಂಥ ಹೋರಾಟಗಾರರಿಗೆ ರಕ್ಷಣೆ ನೀಡದಿದ್ರೆ ಯಾರೂ ಹೋರಾಟ ಮಾಡಲಿಕ್ಕೆ ಮುಂದೆ ಬರೊಲ್ಲ ಎಂದು ಆತಂಕ ವ್ಯಕ್ತಪಡಿಸ್ತಾರೆ.

ಸೂಕ್ತ ರಕ್ಷಣೆ ಕೋರಿ ಪೊಲೀಸ್‌ ಕಮಿಷನ್ ಅವರಿಗೆ ಪತ್ರ: ಡಾ,ಸುನೀಲ್‌ ಹೆಬ್ಬಿ ವೈದ್ಯವೃತ್ತಿ ಜತೆಗೆ ಸಾಮಾಜಿಕ ಕಳಕಳಿಯ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ತಾವು ವಾಸವಿರುವ ಅಪಾರ್ಟ್ಮೆಂಟ್‌ ನಲ್ಲೇ ನಡೆಯುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ನಡೆಸಿದ್ದಾರೆ.ಅಲ್ಲಿಯೇ ಅವರಿಗೆ ನ್ಯಾಯ ಸಿಕ್ಕಿಲ್ಲ.ನಿವಾಸಿಗಳಿಗೆ ಆಗುತ್ತಿದ್ದ ಅನ್ಯಾಯವನ್ನು ಪ್ರಶ್ನಿಸಿದ್ದಾರೆ.ಅದರ ವಿರುದ್ಧ ಹೋರಾಟ ನಡೆಸಿದ್ದಾರೆ.ಆದರೆ ಅದನ್ನು ಸಹಿಸದ ಕೆಲವು ದುಷ್ಟರು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಇದು ಸಮಾಜಕ್ಕೆ ಕೆಟ್ಟ ಸಂದೇಶವೊಂದನ್ನು ರವಾನಿಸುತ್ತದಲ್ವಾ..? ಹೆಬ್ಬಿಯಂಥ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆ ನಮ್ಮ ಇಡೀ ಸಾಮಾಜಿಕ ಕಾರ್ಯಕರ್ತರ ಸಮುದಾಯದ ಮೇಲೆ ನಡೆದ ದೌರ್ಜನ್ಯವಾಗಿದೆ.ಇದನ್ನು ನಾವು ಖಂಡಿಸುತ್ತೇವೆ.

ಸಾಮಾಜಿಕ ಕಳಕಳಿಯಲ್ಲಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರಿಗೆ ಪೊಲೀಸ್‌ ರಿಂದ ರಕ್ಷಣೆ ಸಿಗಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯಾರ್‌ ತಾನೇ ಹೋರಾಟ ಮಾಡೊಕ್ಕೆ ಮುಂದೆ ಬರ್ತಾರೆ ಹೇಳಿ ಎಂದು ಸಾಮಾಜಿಕ ಕಾರ್ಯಕರ್ತರಾದ ಎಚ್.ಎಂ.ವೆಂಕಟೇಶ್‌ ಪ್ರಶ್ನಿಸಿದ್ದಾರೆ.ಹೆಬ್ಬಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಪೊಲೀಸ್‌ ಕಮಿಷನರ್‌ ಗೆ ಪತ್ರವನ್ನು ಬರೆದಿದ್ದಾರೆ.

Spread the love

Leave a Reply

Your email address will not be published. Required fields are marked *