KSRTC ಗಳಿಕೆಗೆ BMTC ಕೊಕ್ಕೆ..!? : ವಾರಾಂತ್ಯದಲ್ಲಿನ BMTC ಬಸ್ ಗಳ ಭರಾಟೆಗೆ ಥಂಡಾ ಹೊಡೆದ KSRTC..?!
ಬೆಂಗಳೂರು: ಉಚಿತ ಬಸ್ ಸೌಲಭ್ಯ ಕಲ್ಪಿಸಿದ ಮೇಲೆ ಧಾರ್ಮಿಕ ಸ್ಥಳಗಳಿಗೆ ಹೆಚ್ಚು ಬಸ್ ಗಳನ್ನು ಕಲ್ಪಿಸುವ ವ್ಯವಸ್ಥೆಯಾಗಿದೆ.ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಮನವಿ ಮೇರೆಗೆ ಧರ್ಮಸ್ಥಳಕ್ಕೆ ಹೆಚ್ಚು ಬಸ್ ಗಳನ್ನು ಬಿಡಲಾಗುತ್ತಿದೆ.ಹಾಗೆಯೇ ಕುಕ್ಕೆ ಸುಬ್ರಮಣ್ಯ, ಮಲೈ ಮಹದೇಶ್ವರ ಬೆಟ್ಟಕ್ಕೂ ಬಿಡಲಾಗಿದೆ.ಮಹಿಳೆಯರಿಗೆ ಉಚಿತ ಧಾರ್ಮಿಕ ಕ್ಷೇತ್ರಗಳ ಸಂದರ್ಶನವೂ ಆಗುತ್ತಿದೆ.ಹಾಗೆಯೇ ನಷ್ಟದಲ್ಲಿದ್ದ ಸಾರಿಗೆ ನಿಗಮಗಳು ಚೇತರಿಕೆಯನ್ನೂ ಪಡೆದಿವೆ.
ಇದು ನಿಜಕ್ಕೂ ಸಂತೋಷದ ವಿಷಯ.ಆದ್ರೆ ಇದೇ ಸಂತೋಷ ಸಾರಿಗೆ ನಿಗಮಗಳ ವಿಷಯದಲ್ಲಿ ದೊಡ್ಡ ಸಂಘರ್ಷ ಉಂಟುಮಾಡುವ ಸಾಧ್ಯತೆಗಳು ದಟ್ಟವಾಗಿರುವಂತೆ ತೋರುತ್ತಿದೆ.ಏಕೆಂದರೆ ಮೊದಲು ಹಬ್ಬ ಹರಿದಿನಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳು ಸಾಲದೇ ಹೋದಾಗ ಮನವಿ/ಒಪ್ಪಂದದ ಮೇರೆಗೆ ಬಿಎಂಟಿಸಿ ಬಸ್ ಗಳನ್ನು ಎರವಲು ಪಡೆದು ಕಾರ್ಯಾಚರಣೆ ಮಾಡಲಾಗುತ್ತಿತ್ತು.ಆದ್ರೆ ಈಗ ಪ್ರತಿ ವಾರಾಂತ್ಯದಲ್ಲಿಯೂ ಬಿಎಂಟಿಸಿ ಬಸ್ ಗಳನ್ನು ಧಾರ್ಮಿಕ ಸ್ಥಳಗಳಿಗೆ ಕಾರ್ಯಚರಣೆ ಮಾಡಲಾಗುತ್ತಿದೆಯಂತೆ.ಇದರಿಂದ ಕೆಎಸ್ ಆರ್ ಟಿಸಿಗೆ ಬರುತ್ತಿದ್ದ ಗಳಿಕೆಯೆಲ್ಲಾ ಬಿಎಂಟಿಸಿ ಪಾಲಾಗುತ್ತಿದೆಯಂತೆ.
ಅರರೆ…ಬಿಎಂಟಿಸಿ ಬಸ್ ಗಳನ್ನು ಬಿಡೋದರಲ್ಲಿ ತಪ್ಪೇನಿದೆ.ಕೆಎಸ್ ಆರ್ ಟಿಸಿಯಲ್ಲಿ ಬಸ್ ಗಳ ಕೊರತೆ ಇರೋ ದ್ರಿಂದ ಹೀಗೊಂದು ವ್ಯವಸ್ಥೆ ಮಾಡಿಕೊಂಡಿರಬಹುದೇನೋ ಎಂಬ ಆಲೋಚನೆ ಬರೋದು ಸಹಜ.ಆದ್ರೆ ಪರಿಸ್ತಿತಿ ಹಾಗಿಲ್ಲವಂತೆ. ಕೆಎಸ್ ಆರ್ ಟಿಸಿಯಲ್ಲಿ ಕಾರ್ಯಾಚರಣೆ ಮಾಡಲಿಕ್ಕೆ ಬಸ್ ಗಳಿದ್ದರೂ ಬಿಎಂಟಿಸಿಯಿಂದ ಪ್ರತಿ ಡಿಪೋಗಳಿಂದ ಇಂತಿಷ್ಟು ಎಂಬ ಸಂಖ್ಯೆಯಲ್ಲಿ ಬಸ್ ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎನ್ನುವುದು ಕೆಎಸ್ ಆರ್ ಟಿಸಿ ಮೂಲಗಳ ಮಾಹಿತಿ.
ಕೆಎಸ್ ಆರ್ ಟಿಸಿಯಲ್ಲಿ ನಿರ್ದಿಷ್ಟ ಸಂಖ್ಯೆಯ ಬಸ್ ಗಳಿಲ್ಲದ ಸನ್ನಿವೇಶದಲ್ಲಿ ಬಿಎಂಟಿಸಿಯಿಂದ ಬಸ್ ಗಳನ್ನು ಬಿಟ್ಟಿದ್ದರೆ ಸಮಸ್ಯೆ-ಅಭ್ಯಂತರ ಇರುತ್ತಿರಲಿಲ್ಲವೇನೋ..? ಆದ್ರೆ ಧಾರ್ಮಿಕ ಸ್ಥಳಗಳಿಗೆ ಕಾರ್ಯಾಚರಣೆ ಮಾಡೊಕ್ಕೆ ಕೆಎಸ್ ಆರ್ ಟಿಸಿ ಬಳಿ ಬಸ್ ಗಳಿದ್ದರೂ ಬಿಎಂಟಿಸಿಯಿಂದ ಕಾರ್ಯಾಚರಣೆ ಮಾಡಲಾಗುತ್ತಿರುವುದೇ ಈಗ ಚರ್ಚೆಯ ದೊಡ್ಡ ವಿಷಯವಾಗಿಬಿಟ್ಟಿದೆ.ತಮ್ಮ ಮುಂದೆಯೇ ಬಿಎಂಟಿಸಿ ಬಸ್ ಗಳು ಕಾರ್ಯಾಚರಣೆ ಮಾಡಿದರೆ ಕೆಎಸ್ ಆರ್ ಟಿಸಿ ಡ್ರೈವರ್ಸ್-ಕಂಡಕ್ಟರ್ಸ್ ಗೆ ಏನಾಗಬೇಡಿ ಹೇಳಿ..ಸಧ್ಯ ಆಗುತ್ತಿರುವುದೇ ಹಾಗಂತೆ.
ಧಾರ್ಮಿಕ ಪುಣ್ಯ ಸ್ಥಳಗಳಿಗೆ ಕೆಎಸ್ ಆರ್ ಟಿಸಿ ಬಸ್ ಕಾರ್ಯಾಚರಣೆ ಮಾಡುವುದರಿಂದ ಅಪಾರ ಮೊತ್ತ ಗಳಿಕೆ ಮಾಡುತ್ತಿತ್ತು.ಅದರಲ್ಲೂ ವಾರಾಂತ್ಯ ಬಂತೆಂದ್ರೆ ದುಪ್ಪಟ್ಟಾಗುತ್ತಿತ್ತು ಗಳಿಕೆ.ಇದರಿಂದ ಡ್ರೈವರ್ಸ್-ಕಂಡಕ್ಟರ್ಸ್ ಗೂ ಇನ್ಸೆಂಟಿವ್ ಬರ್ತಿತ್ತು.ನಷ್ಟದಲ್ಲಿದ್ದ ಕೆಎಸ್ ಆರ್ ಟಿಸಿ ಗೆ ಆದಾಯದ ಚೇತರಿಕೆಯನ್ನೂ ನೀಡಿತ್ತು. ಈ ನಡುವೆ ಒಂದಷ್ಟು ಸನ್ನಿವೇಶದಲ್ಲಿ ಬಸ್ ಗಳ ಕೊರತೆ ಎದುರಾದಾಗ ಬಿಎಂಟಿಸಿ ಸಹಾಯವನ್ನು ಕೇಳಲಾಗಿತ್ತಂತೆ.ಆಗ ಪ್ರಾಯೋಗಿಕ ಎನ್ನುವಂತೆ ಬಸ್ ಗಳನ್ನ ಬಿಡಲಾಗಿತ್ತು.ಅಷ್ಟಕ್ಕೆ ಸುಮ್ಮನಾಗಬಹುದಿತ್ತೇನೋ ಬಿಎಂಟಿಸಿ.
ಆದ್ರೆ ಈ ರೂಟ್ ನಲ್ಲಿ ಗಳಿಕೆ ಚೆನ್ನಾಗಿ ಬರಲಾರಂಭಿಸುತ್ತಿದ್ದಂತೆ ಬಿಎಂಟಿಸಿ ಪ್ರತಿ ವಾರಾಂತ್ಯದಲ್ಲಿಯೂ ಧಾರ್ಮಿಕ ಸ್ಥಳಗಳಿಗೆ ಬಸ್ ಗಳನ್ನು ಬಿಡೊಕ್ಕೆ ಶುರುಮಾಡಿಬಿಡ್ತಂತೆ.ಈಗ ಅದು ಯಾವ್ ಸ್ಥಿತಿ ತಲುಪಿದೆ ಎಂದ್ರೆ ಕೆಎಸ್ ಆರ್ ಟಿಸಿ ಗಳಿಕೆಯನ್ನೆಲ್ಲಾ ಬಿಎಂಟಿಸಿ ನುಂಗಾ ಕ್ತಿದೆಯಂತೆ.(ಎಲೆಕ್ಟ್ರಿಕಲ್ ಬಸ್ ಡಿಪೋ ಹೊರತುಪಡಿಸಿ )ಪ್ರತಿ ಡಿಪೋದಿಂದ ಕನಿಷ್ಟ 20 ಬಸ್ ಗಳನ್ನು ವಾರಾಂತ್ಯದಲ್ಲಿ ಧರ್ಮಸ್ಥಳ, ಮಲೈಮಹದೇಶ್ವರ ಬೆಟ್ಟಕ್ಕೆ ಕಾರ್ಯಾ ಚರಣೆ ಮಾಡುತ್ತಿದೆಯಂತೆ ಬಿಎಂಟಿಸಿ. ನಷ್ಟದಲ್ಲಿದ್ದ ಬಿಎಂಟಿಸಿ ಲಾಭಕ್ಕೆ ತೆರಳಿದ್ರೆ,ಕೆಎಸ್ ಆರ್ ಟಿಸಿ ಗಳಿಕೆಯಲ್ಲಿ ತೀವ್ರ ಇಳಿಮುಖ ವಾಗಿದೆಯಂತೆ. ಇದು ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ನಡುವೆ ಸದ್ಯಕ್ಕೆ ಮುಸುಕಿನ ಗುದ್ದಾಟ ಸೃಷ್ಟಿಸಿದೆ.ಇದಕ್ಕೆ ಪರಿಹಾರ ಕಂಡುಕೊಳ್ಳ ದಿದ್ರೆ ದೊಡ್ಡ ಸಂಘರ್ಷವೇ ಏರ್ಪಡಬಹುದಾದ ವಾತಾವರಣ ನಿರ್ಮಾಣವಾಗಿದೆಯಂತೆ.
ವಾರಾಂತ್ಯದ ಹೆಚ್ಚುವರಿ ಬಸ್ ಗಳಿಂದ ಬಿಎಂಟಿಸಿಗೆ ಕೋಟ್ಯಾಂತರ ಗಳಿಕೆ:ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಕೇವಲ ಒಂದು ಬಿಎಂಟಿಸಿ ಡಿಪೋದ ವಾರಾಂತ್ಯದ ಗಳಿಕೆ ವಿವರ ಸಿಕ್ಕಿದೆ.ಆ ವಿವರ ನೋಡಿದಾಗ ಬಿಎಂಟಿಸಿಗೆ ಆಗುತ್ತಿರುವ ಲಾಭದ ಬಗ್ಗೆ ಸಂತೋಷವಾದ್ರೆ ಕೆಎಸ್ ಆರ್ ಟಿಸಿಗೆ ಆಗಿರುವ ನಷ್ಟದ ಬಗ್ಗೆ ಅಯ್ಯೋ ಎನಿಸುತ್ತೆ.ಏಕೆಂದ್ರೆ ಮಾರ್ಚ್ 07,08,09,10 ರಂದು ಬಿಎಂಟಿಸಿಯಿಂದ ಹೊರ ಜಿಲ್ಲೆಗೆ ಆಪರೇಟ್ ಆದ ಬಸ್ ಗಳ ಸಂಖ್ಯೆ 25.ಆ ಪೈಕಿ ಹೆಚ್ಚಿನ ಅಂದ್ರೆ 19 ಬಸ್ ಗಳು ಧಾರ್ಮಿಕ ಪುಣ್ಯಕ್ಷೇತ್ರಕ್ಕೆ ಕಾರ್ಯಾಚರಣೆಯಾಗಿವೆ.ಈ 25 ರಲ್ಲಿ 20ಕ್ಕೂ ಹೆಚ್ಚು ಬಸ್ ಗಳು ಧರ್ಮಸ್ಥಳಕ್ಕೆ ಕಾರ್ಯಾಚರಣೆಗೊಂಡಿವೆ,ಈ ಅವಧಿಯಲ್ಲಿ ಬಿಎಂಟಿಸಿಗೆ ಬಂದಿರುವ ಆದಾಯ ಎಷ್ಟು ಗೊತ್ತೆ..ಬರೋಬ್ಬರಿ 17 ಲಕ್ಷದ 33 ಸಾವಿರದ,780 ರೂ.
ಸಮಸ್ಯೆನೂ ಇಲ್ಲ..ಸಂಘರ್ಷನೂ ಇಲ್ಲ..ಎಲ್ಲವೂ ಸರಿಯಾಗಿದೆ..?:
“ಈ ವಿಚಾರದಲ್ಲಿ ಏಕೆ ಗೊಂದಲಗಳಾಗುತ್ತಿವೆ ಎಂದು ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಅಧಿಕಾರಿಗಳನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಪ್ರಶ್ನಿಸಿದಾಗ, ಗೊಂದಲವೂ ಇಲ್ಲ..ಸಮಸ್ಯೆನೂ ಇಲ್ಲ.ಎರಡೂ ನಿಗಮಗಳ ಆಡಳಿತ ಈ ವಿಚಾರದಲ್ಲಿ ಯಾವುದೇ ಸಂಘರ್ಷಕ್ಕಿಳಿಯುವ ಪ್ರಶ್ನೆಯೇ ಇಲ್ಲ.ಈಗ ಸಮಸ್ಯೆ ಆಗುತ್ತಿದೆ..ಇದು ಸಂಘರ್ಷಕ್ಕೆ ಎಡೆ ಮಾಡಿಕೊಡಬಹುದು ಎಂಬ ವಿಚಾರವನ್ನು ನಮ್ಮ ಗಮನಕ್ಕೆ ತರುತ್ತಿದ್ದೀರಿ. ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಪರಿಸ್ತಿತಿ ತಿಳಿಗೊಳಿಸುವ ಕೆಲಸ ಮಾಡುತ್ತೇವೆ.ಈ ವಿಷಯವನ್ನು ಸಾರಿಗೆ ಸಚಿವರ ಗಮನಕ್ಕೂ ತರಲಾಗುವುದು. ಸಮಸ್ಯೆ ಆಗುತ್ತಿರುವ ವಿಷಯ ಈವರಗೂ ನಮ್ಮ ಗಮನಕ್ಕೆ ಬಂದಿಲ್ಲ..ಈ ಬಗ್ಗೆ ಡ್ರೈವರ್ಸ್-ಕಂಡಕ್ಟರ್ಸ್ ಗಳು ಕೂಡ ಅಳಲು-ಅಹವಾಲು ತೋಡಿಕೊಂಡಿಲ್ಲ ಎಂದ್ರು”
ಇದನ್ನೇ ಆಧಾರವಾಗಿಟ್ಟುಕೊಂಡು ಬಿಎಂಟಿಸಿ ವ್ಯಾಪ್ತಿಯಲ್ಲಿರುವ 50 ಡಿಪೋಗಳಿಂದ ಮೇಲ್ಕಂಡ ಧಾರ್ಮಿಕ ಸ್ಥಳಗಳಿಗೆ ಬಸ್ ಗಳು ಆಪರೇಟ್ ಆದ್ರೆ ಎಷ್ಟು ಪ್ರಮಾಣದ ಲಾಭ ಬರಬಹುದೆ್ನುವುದನ್ನು ನಾವೇ ಊಹಿಸಬಹುದೇನೋ..?
ಯಾವ್ಯಾವ ಡಿಪೋಗಳಿಂದ ಎಷ್ಟೆಷ್ಟು ಬಸ್ ಗಳನ್ನು ಕಾರ್ಯಾಚರಣೆ ಮಾಡಲಾಗಿದೆ ಎನ್ನುವುದರ ಮಾಹಿತಿ ದೊರೆತರೆ ನಿರ್ದಿಷ್ಟ ಗಳಿಕೆ ಸಿಗುತ್ತದೆ.ಆದ್ರೆ ಒಂದಂತೂ ಸತ್ಯ. ಕೋಟಿಗಳಲ್ಲಿ ಗಳಿಕೆ ಮಾಡುತ್ತಿರುವುದಂತೂ ಸತ್ಯ..ಅಂದ್ಹಾಗೆ ನೆನಪಿರಲಿ ಕೆಎಸ್ ಆರ್ ಟಿಸಿಯ ಕೆಲವು ಅಧಿಕಾರಿಗಳು ಹೇಳುವಂತೆ ಇದೆಲ್ಲಾ ಕೆಎಸ್ ಆರ್ ಟಿಸಿ ಪಾಲಂತೆ.ಅದನ್ನು ಬಿಎಂಟಿಸಿ ಕಿತ್ತುಕೊಂಡಿದೆಯಂತೆ.
RTO ದಿಂದ ಅನುಮತಿ-KSRTC ಜತೆ ಒಪ್ಪಂದ ಆಗಿದೆಯೋ ಇಲ್ಲವೋ..?ಆರ್ ಟಿ ಐ ರೂಲ್ಸ್ ಉಲ್ಲಂಘನೆ ಆಗಿದೆಯಾ..? ಬಿಎಂಟಿಸಿ ಬಸ್ ಗಳು ಕೇವಲ ನಗರದ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸುವ ಪರವಾನಗಿ ಪಡೆದಿರುತ್ತವೆ.ಹಾಗಾಗಿ ಅವುಗಳು ಬೆಂಗಳೂರಿನಲ್ಲೇ ಸಂಚರಿಸಬೇಕಾಗುತ್ತದೆ.ನಗರವನ್ನು ಬಿಟ್ಟು ಹೊರಗೆ ಹೋಗಲು ಪ್ರತ್ಯೇಕವಾದ ಪರವಾನಗಿ ಅಥವಾ ಅನುಮತಿ ಪಡೆಯಬೇಕಾಗುತ್ತಿದೆ ಎನ್ನುವ ಮಾತುಗಳಿವೆ.ಇದಕ್ಕಾಗಿ ಆರ್ ಟಿ ಓದಿಂದ ಬಿಎಂಟಿಸಿ ಆಡಳಿತ ಅನುಮತಿ ಪಡೆದಿದೆಯೋ ಇಲ್ಲವೋ ಗೊತ್ತಿಲ್ಲ.ಬಿಎಂಟಿಸಿ ಸಿಬ್ಬಂದಿ ಹೇಳುವ ಪ್ರಕಾರ ಪರ್ಮಿಷನ್ ತೆಗೆದುಕೊಂಡಿರುವ ಸಾಧ್ಯತೆಗಳು ಕಡಿಮೆಯಂತೆ.
ಹಾಗೆಯೇ ತನ್ನ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್ ಗಳ ಕಾರ್ಯಾಚರಣೆಗೆ ಕೆಎಸ್ ಆರ್ ಟಿಸಿ ಕೂಡ ಅನುಮತಿ ಕೊಡಬೇಕಂತೆ.ಆ ಅನುಮತಿ ಸಿಕ್ಕಿರುವುದು ಕೂಡ ಅನುಮಾನವಂತೆ.ಒಂದೆರೆಡು ದಿನಗಳ ಕಥೆಯಾಗಿದಿದ್ರೆ ಕೆಎಸ್ ಆರ್ ಟಿಸಿ ಅನುಮತಿ ಕೊಡುವುದರಲ್ಲಿ ಉದಾರಿಯಾಗುತ್ತಿತ್ತೇನೋ..? ಆದರೆ ಪ್ರತಿ ವಾರಾಂತ್ಯದಲ್ಲಿ ಬಿಎಂಟಿಸಿ ಬಸ್ ಗಳನ್ನು ತನ್ನ ವ್ಯಾಪ್ತಿಯಲ್ಲಿ ಸಂಚರಿಸುವುದಕ್ಕೆ ಅವಕಾಶ ಕೊಡುವ ಮೂಲಕ ತನ್ನ ಲಾಭಕ್ಕೆ ತಾನೇ ಕಂಟಕ ತಂದುಕೊಳ್ಳಲು ಯಾರ್ ತಾನೇ ಸಿದ್ದರಿರುತ್ತಾರೆ ಹೇಳಿ..ಹಾಗಾಗಿ ಕೆಲವು ಸನ್ನಿವೇಶಗಳನ್ನು ಬಿಟ್ಟರೆ ಕೆಎಸ್ ಆರ್ ಟಿಸಿ ಪ್ರತಿ ವಾರಾಂತ್ಯದಲ್ಲಿ ತನ್ನ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್ ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತದೆ ಎನ್ನುವುದೇನೋ ಡೌಟ್.
ಬೆಂಗಳೂರು ಹೊರವಲಯದಲ್ಲಿ ಸಂಚರಿಸುವಷ್ಟು ಸುರಕ್ಷಿತ-ಆರಾಮದಾಯಕನಾ ಬಿಎಂಟಿಸಿ ಬಸ್ ಗಳು? ಅಲ್ಲವೇ ಅಲ್ಲ ಎನ್ನುತ್ವೆ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಮೂಲಗಳು.ಇದಕ್ಕೆ ಕಾರಣಗಳೂ ಇವೆ. ಬಿಎಂಟಿಸಿ ಬಸ್ ಗಳ ರಚನೆ,ಸ್ವರೂಪ ಕೆಎಸ್ ಆರ್ ಟಿಸಿ ಬಸ್ ಗಳಿಗಿಂತ ವಿಭಿನ್ನವಾಗಿರುತ್ತೆ ಹಾಗೂ ಸೀಟು ಕೆಪಾಸಿ ಟಿ ಕಡ್ಮೆ ಇರುತ್ತದೆ.ಏಕೆಂದರೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸೀಟು ಕೆಪಾಸಿಟಿ 50-52 ಇದ್ದರೆ ಬಿಎಂಟಿಸಿಯಲ್ಲಿ 42-43 ಅಷ್ಟೇ.ಅಲ್ಲದೇ ಬಿಎಂಟಿಸಿ ಬಸ್ ಗಳು ಸ್ಥಳೀಯವಾಗಿ ಪ್ರಯಾಣಿಕರು ಹೊತ್ತೊಯ್ಯುವ ಹಿನ್ನಲೆಯಲ್ಲಿ ಮಾಡ ಲ್ಪಟ್ಟಿರುತ್ತವೆ. ಆದರೆ ಕೆಎಸ್ ಆರ್ ಟಿಸಿ ಬಸ್ ಗಳು ಹೆಚ್ಚು ದೂರ ಸಂಚರಿಸಬೇಕಿರುವುದ ರಿಂದ ಪ್ರಯಾಣಿಕರಿಗೆ ಬೇಕಾದ ಆರಾಮದಾಯಕ ವ್ಯವಸ್ಥೆಯನ್ನು ನೀಡಬೇಕಿರುತ್ತದೆ.
ಬಿಎಂಟಿಸಿ ಬಸ್ ಗಳಲ್ಲಿ 350 ದೂರವಿರುವ ಧರ್ಮಸ್ಥಳಕ್ಕೆ ಪ್ರಯಾಣಿಸುವುದೆಂದರೆ ಅದು ಎಂಥಾ ಅನುಭವ ಕೊಡಬಹುದು ನೀವೇ ಊಹಿಸಿ.ರಾತ್ರಿಯೆಲ್ಲಾ ಜನ ದೂರದ ಊರುಗಳಿಗೆ ತೆರಳೊಕ್ಕೆ ಜನ ಕೆಎಸ್ ಆರ್ ಟಿಸಿ ಬಸ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಹೊರತು ಬಿಎಂಟಿಸಿ ಬಸ್ ಗಳನ್ನಲ್ಲ.ಇದು ಬಿಎಂಟಿಸಿ ಆಡಳಿತಕ್ಕೆ ಗೊತ್ತಿರದ ವಿಚಾರವೇನಲ್ಲ.ಆದ್ರೆ ಹರಿದು ಬರುತ್ತಿರುವ ಲಾಭವನ್ನು ಕಳೆದುಕೊಳ್ಳಲು ಇಚ್ಛೆ ಇರದೆ ಬಿಎಂಟಿಸಿ ಬಸ್ ಗಳನ್ನೇ ಕಾರ್ಯಾ ಚರಣೆ ಮಾಡುತ್ತಿದ್ದಾರೆ.ಆದರೆ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸಿ ಬಾಧೆ ಪಡುತ್ತಿರುವ ಅದೆಷ್ಟೋ ಜನ ಮಾತ್ರ ಪ್ರಯಾಣದ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸುತ್ತಿರುವುದು ಕೂಡ ಅಷ್ಟೇ ಸತ್ಯ. ಬೆಂಗಳೂರಿನಲ್ಲಿ ಸಂಚರಿಸಲಿಕ್ಕೆಂದು ಇರುವ ಬಸ್ ಗಳನ್ನು ನೂರಾರು ಕಿಲೋಮೀಟರ್ ದೂರದ ಧರ್ಮಸ್ಥಳ, ಮಲೈಮಹದೇಶ್ವರ ಬೆಟ್ಟಕ್ಕೆ ಕಳುಹಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಲಾರಂಭಿಸಿದ್ದಾರೆ.
ವಾರಾಂತ್ಯದ ಕೆಎಸ್ ಆರ್ ಟಿಸಿ ಲಾಭಕ್ಕೆ ಬಿಎಂಟಿಸಿಯಿಂದ ಕುತ್ತು: ವಾರಾಂತ್ಯದಲ್ಲಿ ಬಿಎಂಟಿಸಿ ಬಸ್ ಗಳನ್ನು ಧರ್ಮಸ್ಥಳ, ಮಲೈಮಹದೇಶ್ವರ ಬೆಟ್ಟಕ್ಕೆ ಕಾರ್ಯಾಚರಣೆಗೊಳಿ ಸುವ ವಿಚಾರದಲ್ಲಿ ಮೇಲ್ನೋಟಕ್ಕೆ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ನಡುವೆ ಸಮನ್ವಯ ಇದ್ದಂತೆ ತೋರಬಹುದು.ಆದ್ರೆ ಅದು ಖಂಡಿತಾ ಸತ್ಯವಲ್ಲ. ತನ್ನ ಲಾಭವನ್ನು ಬಿಎಂಟಿಸಿ ತಿನ್ನುತ್ತಿದೆಯೆಲ್ಲಾ ಎನ್ನುವ ಅಸಹನೆ-ಆಕ್ರೋಶ-ಅಸಮಾಧಾನ ಕೆಎಸ್ ಆರ್ ಟಿಸಿಗಿದೆಯಂತೆ.
ಒಂದೇ ಇಲಾಖೆಯಾಗಿದ್ರೂ ದೈನಂದಿನ “ಗಳಿಕೆ-ಲಾಭ”ದ ವಿಚಾರದಲ್ಲಿ ಯಾವು ದೇ ಕಾಂಪ್ರಮೈಸ್ ಮಾಡಿಕೊಳ್ಳಲಿಕ್ಕಾಗೊಲ್ಲ.ನಮಗೆ ಹೆಚ್ಚು ಗಳಿಕೆ ಇರೋದೆ ವಾರಾಂತ್ಯದಲ್ಲಿ, ಅದರಲ್ಲೂ ಧರ್ಮಸ್ಥಳ ಹಾಗೂ ಮಲೈಮಹದೇಶ್ವರ ಬೆಟ್ಟಕ್ಕೆ ಬಸ್ ಗಳನ್ನು ಬಿಟ್ಟ ಮೇಲೆ ಹೆಚ್ಚಿನ ಲಾಭ ನೋಡುವಂತಾಗಿತ್ತು.ಆದ್ರೆ ಈಗ ಅದನ್ನು ಬಿಎಂಟಿಸಿಯವರು ನುಂಗಿ ಹಾಕುತ್ತಿದ್ದಾರೆ.ನಮಗೆ ಬರುತ್ತಿದ್ದ ಲಾಭವೆಲ್ಲಾ ಬಿಎಂಟಿಸಿಗೆ ಹೋಗುತ್ತಿದೆ.ಹಬ್ಬ ಹರಿದಿನಗಳ ಸಂದರ್ಭದಲ್ಲಿ ಬಸ್ ಗಳನ್ನು ಕಾರ್ಯಾಚರಣೆ ಮಾಡುವುದೇನೋ ಸರಿ…ಆದ್ರೆ ಪ್ರತಿ ವಾರಾಂತ್ಯದಲ್ಲಿ ನೂರಾರು ಬಸ್ ಗಳನ್ನು ಕಾರ್ಯಾಚರಣೆ ಮಾಡಿ ನಮ್ಮ ಗಳಿಕೆಗೆ ಕುತ್ತು ತರುವುದು ಯಾವ ನ್ಯಾಯ..? ಎಂದು ಕೆಎಸ್ ಆರ್ ಟಿಸಿಯ ಕೆಲವು ಅಧಿಕಾರಿಗಳು ಪ್ರಶ್ನಿಸಿದ್ದಾರೆ
ಕೆಎಸ್ ಆರ್ ಟಿಸಿ ಆಡಳಿತ ಬಿಎಂಟಿಸಿ ಬಗ್ಗೆ ಹೀಗೊಂದು ಬೇಸರ ವ್ಯಕ್ತಪಡಿಸುವುದರಲ್ಲಿಯೂ ನ್ಯಾಯವಿದೆ. ಧರ್ಮಸ್ಥಳ-ಮಲೈಮಹದೇಶ್ವರದಂಥ ಪುಣ್ಯಕ್ಷೇತ್ರಗಳಿಗೆ ಬಸ್ ಕಾರ್ಯಾಚರಣೆ ಮಾಡುತ್ತಿರುವುದರಿಂದ ಕೆಎಸ್ ಆರ್ ಟಿಸಿ ಬೊಕ್ಕಸಕ್ಕೆ ಹೆಚ್ಚಿನ ಗಳಿಕೆಯಾಗುತ್ತಿತ್ತು.ಅದಕ್ಕೆ ಕುತ್ತು ತರುವಂತದ್ದು ಎಷ್ಟು ಸರಿ..? ಬಿಎಂಟಿಸಿಗೆ ಆ ಅಧಿಕಾರ ಕೊಟ್ಟವರು ಯಾರು..? ಈ ಬಗ್ಗೆ ಎರಡು ನಿಗಮಗಳ ನಡುವೆ ಸಹಮತ ಇದೆಯೇ..? ಎನ್ನುವ ಪ್ರಶ್ನೆ ಕಾಡುತ್ತಿದೆ.
ಈ ಬೆಳವಣಿಗೆ ಎರಡು ನಿಗಮಗಳ ನಡುವೆ ಸಂಘರ್ಷವನ್ನೂ ಸೃಷ್ಟಿಸಿದೆಯಂತೆ.ಬಿಎಂಟಿಸಿ ಬಸ್ ಗಳು ವಾರಾಂತ್ಯದಲ್ಲಿ ಧಾರ್ಮಿಕ ಸ್ಥಳಗಳಿಗೆ ಹೋದ್ರೆ ಅಲ್ಲಿನ ಕೆಎಸ್ ಆರ್ ಟಿಸಿ ಡಿಪೋಗಳಲ್ಲಿ ಬಸ್ ಗಳನ್ನು ನಿಲುಗಡೆ ಮಾಡಲಿಕ್ಕೆ ಅಧಿಕಾರಿಗಳು ಬಿಡುತ್ತಿಲ್ಲ ಎನ್ನುವ ಆರೋಪವನ್ನು ಸಾಕಷ್ಟು ಡ್ರೈವರ್ಸ್-ಕಂಡಕ್ಟರ್ಸ್ ಮಾಡುತ್ತಿದ್ದಾರೆ. ಡಿಪೋದ ಹೊರಗೆ ಬಸ್ ಗಳನ್ನು ನಿಲ್ಲಿಸಿ ಅಲ್ಲಿಯೇ ಮಲಗಿಕೊಳ್ಳುವಂಥ ಪರಿಸ್ತಿತಿಯಿದೆಯಂತೆ.
ಕಾಂಗ್ರೆಸ್ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭಾಗ್ಯದಿಂದ ಧಾರ್ಮಿಕ ಸ್ಥಳಗಳಿಗೆ ತೆರಳುವ ಮಹಿಳೆಯರ ಸಂಖ್ಯೆಯು ಹೆಚ್ಚಿದೆ.ಇದರಿಂದ ಡ್ರೈವರ್ಸ್-ಕಂಡಕ್ಟರ್ಸ್ ಗೂ ಇನ್ಸೆಂಟಿವ್ ಬರುತ್ತಿತ್ತು.ಈಗ ಅದೆಲ್ಲಾ ಬಿಎಂಟಿಸಿ ಡ್ರೈವರ್ಸ್-ಕಂಡಕ್ಟರ್ಸ್ ಪಾಲಾಗುತ್ತಿದೆ ಎನ್ನುವ ಆಕ್ರೋಶ ಸಿಬ್ಬಂದಿಯಲ್ಲಿದೆ..ತಮ್ಮ ಗಳಿಕೆ ತುತ್ತಿಗೆ ಇನ್ನೊಬ್ಬರು ಕೈ ಹಾಕಿದಾಗ ಇಂತದ್ದೊಂದು ಆಕ್ರೋಶ-ಅಸಮಾಧಾನ ಮೂಡುವುದು ಸಹಜವಲ್ಲವೇ..?
ಒಟ್ಟಿನಲ್ಲಿ ವಾರಾಂತ್ಯದ ಗಳಿಕೆ ಗೊಂದಲ ಎರಡು ನಿಗಮಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟು ಅದು ಬೇರೆಯದೇ ಆಯಾಮಗಳನ್ನು ಪಡೆಯುವ ಮುನ್ನ ಸರ್ಕಾರ ಗೊಂದಲ ಸರಿಪಡಿಸಬೇಕಿದೆ