ಕನ್ನಡದ ಕುಳ್ಳ ದ್ವಾರಕೀಶ್ ಇನ್ನಿಲ್ಲ,ಕನ್ನಡ ಚಿತ್ರರಂಗಕ್ಕೆ ಇದು ಬಹುದೊಡ್ಡ ನಷ್ಟ ಎನ್ನುವುದು ಕ್ಲೀಷೆಯಾಗಬಹುದೇನೋ..?ಆದರೆ ಕೆಲವರು ಸಾವುಗಳು ಮಾತ್ರ ಅನೇಕ ಕಾರಣಗಳಿಂದ ಬಹುದೊಡ್ಡ ಶೂನ್ಯ-ನಷ್ಟ ಎನಿಸುತ್ತದೆ.,ದ್ವಾರಕೀಶ್ ವಿಷಯದಲ್ಲಿ ಆ ಮಾತು ನೂರಕ್ಕೆ ನೂರು ಸತ್ಯ..ಏಕಂದ್ರೆ ದ್ವಾರಕೀಶ್ ಬದುಕಿದ ರೀತಿ ಹಾಗಿತ್ತು.ಹೆಚ್ಚು ಚಿತ್ರಗಳನ್ನು ನಿರ್ಮಿಸಿ,ನಿರ್ದೇಶಿಸಿದ ಹೆಗ್ಗಳಿಕೆ ಅವರದು.ಲಾಭದಷ್ಟೇ ನಷ್ಟವನ್ನು ಅನುಭವಿಸಿದ ನಿರ್ಮಾಪಕ.ಅನೇಕ ಕಾರಣಗಳಿಂದ ವಿವಾದ ಮೈಮೇಲೆ ಎಳೆದುಕೊಂಡವರು.ಆದ್ರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸ್ಥಿತಪ್ರಜ್ಞರಾಗಿ ಚಿತ್ರಜೀವನ ಹಾಗೂ ವೈಯುಕ್ತಿಕ ಬದುಕನ್ನು ಜೀವಿಸಿದವರು ದ್ವಾರಕೀಶ್
ದ್ವಾರಕೀಶ್ ವೃತ್ತಿಜೀವನದಲ್ಲಿ ಕಂಡಷ್ಟೇ ಏಳುಬೀಳುಗಳನ್ನು ವೈಯುಕ್ತಿಕ ಬದುಕಿನಲ್ಲೂ ಎದುರಿಸಿದವರು.ಕೋಟಿಗಳನ್ನು ಆ ಕಾಲದಲ್ಲೇ ಹಾಕಿ ಗಳಿಸಿ,ಕಳೆದುಕೊಂಡವರು.ಹತ್ತು ಸೋಲುಗಳ ನಡುವೆ ಒಂದು ಗೆಲುವನ್ನು ಕಂಡವರು.ಆದ್ರೆ ಯಾವುದನ್ನೂ ತಲೆಗಚ್ಚಿಕೊಳ್ಳದೆ ಕಾಲಾಯ ತಸ್ಮೈ ನಮಃ ಎಂದು ಸುಮ್ಮನಾದವರು,ವೃತ್ತಿಯಲ್ಲಿ ಎಷ್ಟೇ ಏರುಪೇರುಗಳಾದ್ರೂ ಅದನ್ನು ಸಹಿಸಿಕೊಂಡ ಹಾಗೂ ಎದುರಿಸಿದ ದ್ವಾರಕೀಶ್ ಒಂದೆರೆಡು ಕೆಟ್ಟ ಸಂದರ್ಭಗಳನ್ನು ಯಾವತ್ತಿಗೂ ಮರೆಯಲು,ಜೀರ್ಣಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲವಂತೆ,ತಮ್ಮ ಆತ್ಮೀಯರ ಜತೆ ಪದೇ ಪದೇ ಈ ವಿಷಯಗಳನ್ನು ಮೆಲುಕು ಹಾಕುತ್ತಿದ್ದರಂತೆ.
ಅಂದ್ಹಾಗೆ ದ್ವಾರಕೀಶ್ ಅವರನ್ನು ಜನ್ಮಪೂರ್ತಿಯಾಗಿ ಕಾಡಿದ ಒಂದರೆಡು ಘಟನೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ,
ವಿನೋದ್ ರಾಜ್ “ಅಪ್ಪ”ನ ಹೆಸರು ಹೇಳ್ತೀನೆಂದು ಘೋಷಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ರು: ಅದು ಡ್ಯಾನ್ಸ್ ರಾಜ ಡ್ಯಾನ್ಸ್ ಚಿತ್ರ ಬಿಡುಗಡೆಗೊಂಡು ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದ್ದ 1987 ರ ದಿನಗಳು.ಚಿತ್ರ ಶತದಿನೋತ್ಸವ ಕಾಣೋದು ಪಕ್ಕಾ ಎಂದು ಇಡೀ ಚಿತ್ರರಂಗ ಮಾತನಾಡಿಕೊಳ್ಳುತ್ತಿತ್ತು.ಆ ಉತ್ಸಾಹದಲ್ಲಿ ಒಮ್ಮೆ ದ್ವಾರಕೀಶ್ ಚಿತ್ರ ಶತದಿನ ಕಾಣುತ್ತಿದ್ದಂತೆ ನಾಯಕ ನಟ ವಿನೋದ್ ರಾಜ್ ಗೆ ಸಂಬಂಧಿಸಿದಂತ ವೈಯುಕ್ತಿಕ ವಿಚಾರವೊಂದನ್ನು ಇಡೀ ನಾಡಿಗೆ ತಿಳಿಸುತ್ತೇನೆಂದು ಹೇಳಿಬಿಟ್ಟಿದ್ರಂತೆ.ಅದು ಏನಂದು ಕೆಲವರು ಪ್ರಶ್ನಿಸಿದ್ದಾಗ ವಿನೋದ್ ರಾಜ್ ಅವರ ಅಪ್ಪ ಯಾರೆನ್ನುವುದನ್ನು ಬಹಿರಂಗಪಡಿಸುತ್ತೇನೆಂದು ಹೇಳಿ ಗಾಬರಿ ಮೂಡಿಸಿದ್ದರಂತೆ,ಇದು ಆ ಕಾಲಕ್ಕೆ ದೊಡ್ಡ ವಿವಾದವನ್ನೇ ಸೃಷ್ಟಿಸಿಬಿಟ್ಟಿತ್ತು.ದ್ವಾರಕೀಶ್ ಬಗ್ಗೆ ಬೃಹತ್ ಪ್ರತಿಭಟನೆ-ಆಕ್ರೋಶ ವ್ಯಕ್ತವಾಗೊಕ್ಕೆ ಕಾರಣವಾಗಿತ್ತಂತೆ.ಪರಿಣಾಮ ಏನಾಯ್ತು ಗೊತ್ತಾ ಈ ಗುಟ್ಟು ಜಗತ್ತಿಗೆ ತಿಳಿಯೋದು ಬೇಡ…ವಿನೋದ್ ರಾಜ್ ಅಪ್ಪ ಯಾರೆಂದು ಗೊತ್ತಾಗುವುದು ಬೇಡ ಎಂದು ನೂರು ದಿನಗಳಿಗಿಂತ ಮುನ್ನವೇ ಅತ್ಯದ್ಭುತ ಪ್ರದರ್ಶನ ಕಾಣುತ್ತಿದ್ದ ಚಿತ್ರವನ್ನೇ ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಿಸಲಾಯಿತು.ಅಂದ್ಹಾಗೆ ಅದನ್ನು ಎತ್ತಂಗಡಿ ಮಾಡಿದವರು ಯಾರು ಎನ್ನುವುದು ಚಿತ್ರರಂಗಕ್ಕೇ ಗೊತ್ತು.
ಅಂದ್ಹಾಗೆ ಈ ಘಟನೆ ದ್ವಾರಕೀಶ್ ಅವರ ಬಗ್ಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಗೊಕ್ಕೆ ಕಾರಣವಾಯಿತು.ಚಿತ್ರರಂಗದ ಸಾಕಷ್ಟು ಜನ ಅವರನ್ನು ವಿರೋಧಿಸಲಿಕ್ಕೆ ಶುರುಮಾಡಿದ್ರು.ಇದೇ ಕಾರಣಕ್ಕೆ ದ್ವಾರಕೀಶ್ ಅವರಿಗೆ ದೊಡ್ಡ ಮಟ್ಟದ ಅವಕಾಶಗಳು ಕೈಯಿಂದ ಜಾರಲಾರಂಭಿಸಿದ್ವು.
ವಿಷ್ಣುಗಾಗಿ ರಾಜ್ ರನ್ನು ದೂರ ಮಾಡಿಕೊಂಡಿದ್ದ ದ್ವಾರಕೀಶ್:ಇದು ಇವತ್ತಿಗೂ ಚಿತ್ರರಂಗದಲ್ಲಿ ದ್ವಾರಕೀಶ್ ಅವರ ಬಗ್ಗೆ ತೀವ್ರ ಚರ್ಚೆಯಾಗೊಕ್ಕೆ ಕಾರಣವಾಗಿದೆ.ಕೆಲವೊಂದು ಕಾರಣಗಳಿಂದ ಕನ್ನಡದ ಇಬ್ಬರು ಸ್ಟಾರ್ ನಟರಾದ ಡಾ.ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಅವರ ನಡುವೆ ಎಲ್ಲವೂ ಸರಿಯಿರಲಿಲ್ಲ.ಚೆನ್ನಾಗಿದ್ದ ಅವರಿಬ್ಬರ ನಡುವೆ ಕೆಲವರು ತಂದಿಟ್ಟು ಮಜಾ ತೆಗೆದುಕೊಂಡರೆನ್ನುವ ಮಾತಿದೆ.ಆ ಕಾಲದಲ್ಲಿ ವಿಷ್ಣುವರ್ಧನ್ ಅವರನ್ನು ಹಾಕ್ಕೊಂಡು ಸಾಕಷ್ಟು ಚಿತ್ರಗಳನ್ನು ನಿರ್ಮಿಸಿ,ನಿರ್ದೇಶಿಸಿ ಗೆದ್ದಿದ್ದರು ದ್ವಾರಕೀಶ್, ವಿಷ್ಣು-ದ್ವಾರಕೀಶ್ ಜೋಡಿ ಹಿಟ್ ಜೋಡಿ ಎನಿಸಿಕೊಂಡಿತ್ತು.
ಗಂಧದ ಗುಡಿ ಚಿತ್ರದ ವೇಳೆ ನಡೆದಂಥ ಅಚಾತುರ್ಯವೊಂದು ಡಾ,ರಾಜ್ ಹಾಗೂ ವಿಷ್ಣು ಅವರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿಬಿಡ್ತು.ಅವತ್ತಿನ ಮಟ್ಟಿಗೆ ಅವರ ಹಳಸಿದ ಸಂಬಂಧ ಸರಿಮಾಡೊಕ್ಕೆ ಪ್ರಯತ್ನಿಸಿದವರಲ್ಲಿ ದ್ವಾರಕೀಶ್ ಕೂಡ ಒಬ್ಬರು.ಆದರೆ ಅದು ಸಾಧ್ಯವಾಗದೇ ಹೋಯ್ತು.ಅಂಥಾ ಸಂದರ್ಭದಲ್ಲಿ ದ್ವಾರಕೀಶ್ ಯಾರ ಪರ ಎನ್ನುವ ಚರ್ಚೆ ಹುಟ್ಟಿಕೊಂಡ್ಡಿದ್ದು ಸುಳ್ಳಲ್ಲ..ಆ ವೇಳೆ ಡಾ.ರಾಜ್ ಬಗ್ಗೆ ಒಳ್ಳೆಯ ಅಭಿಪ್ರಾಯ ಮತ್ತು ಉತ್ತಮ ಬಾಂಧವ್ಯ ಇದ್ದ ಹೊರತಾಗ್ಯೂ ದ್ವಾರಕೀಶ್ ವಿಷ್ಣುವರ್ಧನ್ ಬೆನ್ನಿಗೆ ನಿಂತುಬಿಟ್ಟರು..ಇದು ಡಾ.ರಾಜ್ ,ಅವರ ಕುಟುಂಬ ಹಾಗೂ ಅಭಿಮಾನಿಗಳಲ್ಲಿ ದೊಡ್ಡ ಅಕ್ರೋಶವನ್ನೇ ಮೂಡಿಸ್ತು.ಅದೇ ಕೊನೇ ಅವಕಾಶಗಳಿದ್ದಾಗ್ಯೂ ಯಾವತ್ತಿಗೂ ಡಾ.ರಾಜ್ ಜತೆ ದ್ವಾರಕೀಶ್ ಚಿತ್ರ ಮಾಡಲಿಲ್ಲ.ಡಾ..ರಾಜ್ ಕೂಡ ದ್ವಾರಕೀಶ್ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿಬಿಟ್ಟಿದ್ದರಂತೆ.ಆದರೆ ನೆನಪಿರಲಿ ಡಾ,.ರಾಜ್ ಹಾಗೂ ದ್ವಾರಕೀಶ್ ಅವರು ಯಾವತ್ತಿಗೂ ಅನ್ಯೋನ್ಯವಾಗೇ ಇದ್ದರು.ಡಾ.ರಾಜ್ ಸತ್ತಾಗ ದ್ವಾರಕೀಶ್ ಯಾವ ಪರ ಅತ್ತಿದ್ದರು ಎನ್ನುವುದನ್ನು ಚಿತ್ರರಂಗ ಇವತ್ತಿಗೂ ಮರೆತಿಲ್ಲ.
ಪ್ರಾಣಸ್ನೇಹಿತ ವಿಷ್ಣು ಜತೆಗಿನ ಹಳಸಿದ ಸಂಬಂಧ-ಸಾವು:ಇದರ ನಡುವೆ ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ವಿಷ್ಣುವರ್ಧನ್ ಜತೆಗಿನ ಸಂಬಂಧ ಕೂಡ ಒಂದು ವಿಷಮ ಗಳಿಗೆಯಲ್ಲಿ ಹಾಳಾಗಿಬಿಡುತ್ತದೆ,ದಶಕಗಳ ಕಾಲ ಅವರಿಬ್ಬರ ನಡುವೆ ಶರಂಪರ ದ್ವೇಷ ಹೊಗೆಯಾಡುತ್ತಿತ್ತು.ಯಾರೇ ಪ್ರಯತ್ನಿಸಿದ್ರೂ ಹಠವಾದಿಗಳಿಬ್ಬರು ಒಂದಾಗುವ ಮನಸು ಮಾಡಲೇ ಇಲ್ಲ.ಆದ್ರೆ ಹೇಗೋ ಅದು ರಾಯರು ಬಂದರು ಮಾವನ ಮನೆ ಚಿತ್ರದ ಮೂಲಕ ಮತ್ತೆ ಬೆಸೆಯಿತು.ಆ ನಂತರ ಅವರಿಬ್ಬರು ಸೇರಿ ಚಿತ್ರಗಳನ್ನು ಮಾಡಿದರು.ಅದು ಆಪ್ತಮಿತ್ರದಂಥ ಸೂಪರ್ ಡೂಪರ್ ಹಿಟ್ ಚಿತ್ರದವರೆಗೂ ಮುಂದುವರೆಯಿತು.ಆದ್ರೆ ವಿಷ್ಣು ಜತೆಗಿನ ಸಿಟ್ಟು-ಮುನಿಸಿನಿಂದಾಗಿ ದ್ವಾರಕೀಶ್ ಮಾನಸಿಕವಾಗಿ ಕುಗ್ಗಿ ಹೋಗಿದ್ರು,ಈ ಕಾರಣಕ್ಕೆ ಅವರು ಕೊರಗದ ದಿನಗಳೇ ಇರಲಿಲ್ಲವಂತೆ,ಪ್ರಾಣಸ್ನೇಹಿತ ವಿಷ್ಣು ಸತ್ತ ಮೇಲಂತೂ ದ್ವಾರಕೀಶ್ ಮಾನಸಿಕವಾಗಿ ಕುಗ್ಗಿ ಹೋಗಿದ್ರಂತೆ
ಆಪ್ತಮಿತ್ರ, ಚೌಕದಂಥ ಚಿತ್ರದಿಂದ ಮಾಡಿದ ದುಡ್ಡನ್ನು ದ್ವಾರಕೀಶ್ ಆಯುಷ್ಮಾನ್ ಭವದಲ್ಲಿ ಕಳೆದುಕೊಂಡರೆನ್ನುವ ಮಾತಿದೆ.ಜೀರ್ಣಿಸಿಕೊಳ್ಳುವ ವಯಸ್ಸಿದ್ದವರೆಗೂ ಸೋಲನ್ನು ಎದುರಿಸಿದ್ದ ದ್ವಾರಕೀಶ್ ಗೆ ಇಳಿವಯಸ್ಸಿನಲ್ಲಿ ಆ ಚೈತನ್ಯ-ಎದೆಗಾರಿಕೆ ಇರಲೇ ಇಲ್ಲ.ಆರ್ಥಿಕ ನಷ್ಟದಿಂದಾಗಿ ಕುಗ್ಗಿ ಹೋಗಿದ್ದ ದ್ವಾರಕೀಶ್ ಕೆಲ ದಿನಗಳಿಂದೇ ಸತ್ತೇ ಹೋದರು ಎನ್ನುವ ಸುದ್ದಿ ಕೂಡ ಪಸರ್ ಆಗಿತ್ತು.ಆದ್ರೆ ನಾನಿನ್ನೂ ಬದುಕಿದ್ದೇನೆ ಎಂದು ದ್ವಾರಕೀಶ್ ನಗುಮೊಗದಿಂದಲೇ ನುಡಿದಿದ್ದರು.
ದ್ವಾರಕೀಶ್ ಸಾಯುವ ಕ್ಷಣಗಳವರೆಗೂ ದಿಲ್ ದಾರ್ ಆಗಿ ಬದುಕಿದವರು. ಬದುಕನ್ನು ತುಂಬಾ ಪ್ರೀತಿಸಿದವರು.ಅವರಷ್ಟು ಸೋಲು-ವೈಫಲ್ಯ ಕಂಡ ನಟ,ನಿರ್ಮಾಪಕ,ನಿರ್ದೇಶಕ ಮತ್ತೊಬ್ಬರಿಲಿಕ್ಕಿಲ್ಲವೇನೋ..? ಹಾಗೆಯೇ ಅವರಷ್ಟು ಗೆಲುವಿನ ಸಿಹಿ ಉಂಡವರು ಮತ್ತೊಬ್ಬರಿರಲು ಸಾಧ್ಯವಿಲ್ಲ.ಸೋತಾಗ ಕುಗ್ಗದೆ-ಗೆದ್ದಾಗ ಹಿಗ್ಗದೆ ಸ್ಥಿತಪ್ರಜ್ಞರಾಗಿ ಉಳಿದಿದ್ದು ದ್ವಾರಕೀಶ್ ಹೆಗ್ಗಳಿಕೆ.