ಲೋಕಾ ಫೈಟ್‌, ಬಿಜೆಪಿಯಲ್ಲಿ ಅಷ್ಟೇ ಅಲ್ಲ, ರಾಜಕೀಯದಲ್ಲೂ ಈಶ್ವರಪ್ಪ ಭವಿಷ್ಯ ನಿರ್ದರಿಸಲಿದೆಯಾ..?! 

ಶಿವಮೊಗ್ಗ: ಇಡೀ ಶಿವಮೊಗ್ಗವೇ ಏಕೆ, ರಾಜ್ಯ ಬಿಜೆಪಿ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪ್ರಶ್ನೆಯೇ ಇದು..ಬಿಜೆಪಿ ಸ್ಪರ್ದಿ ವಿರುದ್ಧ ಜಿದ್ದಿನ ಸ್ಪರ್ದೆ ಬೇಡ ಎಂದ್ರೂ..ದೆಹಲಿ ಮಟ್ಟದ ಹೈಕಮಾಂಡ್‌  ನಿಂದ ಫರ್ಮಾನ್‌ ಹೊರಟ್ರೂ  ಬಿ.ವೈ ವಿಜಯೇಂದ್ರ ವಿರುದ್ದ ಸ್ಪರ್ದೆ ಮಾಡಿಯೇ ತೀರುತ್ತೇನೆ ಎಂದು ಈಶ್ವರಪ್ಪ ಹೊರಟಿರುವುದೇಕೆ…? ಬಿಎಸ್‌ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣವನ್ನು ಮುಗಿಸಿಯೇ ತೀರುತ್ತೇನೆ ಎಂದು ಭೀಷ್ಮಪ್ರತಿಜ್ಞೆ ಮಾಡಿರುವುದೇಕೆ..? ಬಹುತೇಕ ತನ್ನ ಸೋಲು ಕಟ್ಟಿಟ್ಟ ಬುತ್ತಿ ಎನ್ನೋದು ಗೊತ್ತಿದ್ರೂ ಅದಕ್ಕೆ ಹೆದರದೆ ಎದುರಾಗಬಹುದಾದ ಸವಾಲುಗಳನ್ನು ಎದುರಿಸ್ಲಿಕ್ಕೆ ಸಿದ್ದವಾಗಿರುವುದೇಕೆ..? ಗೆದ್ದರೆ ಓ..ಕೆ ಒಂದ್ವೇಳೆ ಸೋತರೆ ಬಿಜೆಪಿ ಅಭ್ಯರ್ಥಿ ವಿರುದ್ಧವೇ ತೊಡೆ ತಟ್ಟಿದ್ದಕ್ಕೆ ಪಕ್ಷದ ಮಟ್ಟದಲ್ಲಿ ಏನೆಲ್ಲಾ ಆಗಬಹುದು..? ತನ್ನ ರಾಜಕೀಯ ಭವಿಷ್ಯ ಹೇಗೆ ಕವಲೊಡೆಯಬಹುದು..ಅತಂತ್ರವಾಗಬಹುದೆನ್ನುವ ಸೂಕ್ಷ್ಮ-ಪರಿಜ್ಞಾನ ಇದ್ದ ಹೊರತಾಗ್ಯೂ ಏಕೆ ಅಷ್ಟೊಂದು ಹಠ-ಮೊಂಡುತನ-ಪ್ರತೀಕಾರ-ಜಿದ್ದಿನ ಮನಸ್ತಿತಿಯೋ ಗೊತ್ತಾಗ್ತಿಲ್ಲ..ಈಶ್ವರಪ್ಪ ಅವರನ್ನು ಹಲವಾರು ದಶಕಗಳಿಂದ ಹತ್ತಿರದಿಂದ ಬಲ್ಲವರು,ಅವರ ರಾಜಕೀಯವನ್ನು ಕಂಡವರಿಗೂ ಯಾಕೆ ಈಶ್ವರಪ್ಪ ಹೀಗೆ ಮಾಡುತ್ತಿದ್ದಾರೆನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಕಾಡುತ್ತಲೇ ಇದೆ.

ಯೆಸ್.ಎರಡನೇ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ.ಕಾಂಗ್ರೆಸ್‌ ನಿಂದ ಗೀತಾ ಶಿವರಾಜ್‌ ಕುಮಾರ್‌ ನಾಮಪತ್ರ ಸಲ್ಲಿಕೆಯಾಗಿದೆ.ಶಿವಮೊಗ್ಗದಲ್ಲಿ ಯಾವ್‌ ರೀತಿಯ ನಾಮಪತ್ರ ಸಲ್ಲಿಕೆ ವಾತಾವರಣ ಇದೆ ಎಂದ್ರೆ ಜನರನ್ನು ಸೇರಿಸುವುದು ಕೂಡ ಪ್ರತಿಷ್ಟೆಯಾಗಿದೆ.ಈಶ್ವರಪ್ಪ ಕೂಡ ಅಷ್ಟೇ ಭರಾಟೆಯಲ್ಲಿ ನಾಮಪತ್ರ ಸಲ್ಲಿಸಿದ್ದಾಗಿದೆ.18-04-2024 ರಂದು ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಕೂಡ ಅಪಾರ ಜನಸ್ತೋಮದ ನಡುವೆ ನಾಮಪತ್ರ ಸಲ್ಲಿಸಲಿದ್ದಾರೆ.ಗೀತಾ ಶಿವರಾಜ್‌ ಕುಮಾರ್‌ ಅವರಿಗಿಂತ ತನ್ನ ವಿರುದ್ಧ ತೊಡೆ ತಟ್ಟಿರುವ-ಸೇಡು ಪ್ರತೀಕಾರ ಧೋರಣೆ ಪ್ರದರ್ಶಿಸುತ್ತಿರುವ ಕೆ.ಎಸ್‌ ಈಶ್ವರಪ್ಪ ಅವರಿಗೆ ಠಕ್ಕರ್‌ ಕೊಡ್ಲಿಕ್ಕೆ ಇಷ್ಟವಿಲ್ಲದಿದ್ದರೂ ರಾಘವೇಂದ್ರ ಪ್ರತಿಷ್ಟೆಗಾದ್ರೂ ಜನಸಾಗರವನ್ನೇ ಸೇರಿಸಬೇಕಿದೆ.ಸೇರಿಸಲೂಬಹುದು.

ಇದೆಲ್ಲಾ ಸರಿ..ಯಾರ ಮನವೊಲಿಕೆಗೂ ತಗ್ಗದೆ-ಬಗ್ಗದೆ ಈಶ್ವರಪ್ಪ ತನ್ನ ವಿರುದ್ದ ತೊಡೆತಟ್ಟಿರುವುದು ಖುದ್ದು ರಾಘವೇಂದ್ರಗೂ ಆಶ್ಚರ್ಯ ಮೂಡಿಸಿರುವುದು ಸತ್ಯ.ಯಾಕೆ ಈ ಬಾರಿ ಹೀಗಾಯ್ತು..ಕೊನೇ ಕ್ಷಣದಲ್ಲಿ  ಹಿರಿಯರ ಮನವೊಲಿಕೆಯಿಂದ ಕಣದಿಂದ ಹಿಂದಕ್ಕೆ ಸರಿಯಬಹುದೆಂದು ಎಂಬ ಲೆಕ್ಕಾಚಾರ ಕೂಡ ತಲೆಕೆಳಗಾಗಿದೆ.ಯಾವತ್ತೂ ಇಲ್ಲದ ಹಠಮಾರಿ ಧೋರಣೆ ಪ್ರ‍ದರ್ಶಿಸುತ್ತಿರುವುದು ಕೂಡ ಆಶ್ಚರ್ಯದೊಂದಿಗೆ ಅನೇಕ ಅನುಮಾನ ಮೂಡಿಸಿದೆ.ಯಾಕೆ..ಹೀಗಾಗುತ್ತಿದೆ ಎಂಬ ಪ್ರಶ್ನೆಗೆ ಅನೇಕ  ರೀತಿಯ ವಿಶ್ಲೇಷಣೆ-ವ್ಯಾಖ್ಯಾನಗಳು ಕೇಳಿಬರುತ್ತಿವೆ.ಅದರ ಒಂದಷ್ಟು ಝಲಕ್‌ ಇಲ್ಲಿದೆ.

ಕೆಎಸ್‌ ಈಶ್ವರಪ್ಪ ಅವರ ಹಿಂದಿರುವ ಅವರೆಲ್ಲಾ ಯಾರು..? ಒಂದಂತೂ ಸತ್ಯ, ಈಶ್ವರಪ್ಪ ಏನೇ ಬಂಡಾಯದ ಮಾತನ್ನಾಡಿದ್ರೂ ಸಿದ್ದಾಂತ-ಬದ್ಧತೆ ವಿಷಯ ಬಂದಾಗ ಪಕ್ಷದ ಶಿಸ್ತಿನ ಸಿಪಾಯಿ.ಬಿ.ಎಸ್‌ ಯಡಿಯೂರ ಪ್ಪ ಅವರಂಥ ಹಿರಿಯರೇ ಬಿಜೆಪಿ ತೊರೆದು ಕೆಜೆಪಿ ಸೇರಿದಾಗಲೂ ಅವರ ಆಪ್ತರಾಗಿದ್ರೂ ಈಶ್ವರಪ್ಪ ಪಕ್ಷ ಬಿಡಲಿಲ್ಲ..ಪಕ್ಷ ತನ್ನ ತಾಯಿ ಇದ್ದಂತೆ,ನಾನು ನನ್ನ ತಾಯಿಗೆ ಮೋಸ ಮಾಡೊಲ್ಲ ಎಂದ್ಹೇಳುತ್ತಲೇ ಬಂದರು.ಅಂಥಾ ಈಶ್ವರಪ್ಪ ಈ ಬಾರಿ ಬಿ.ವೈ ರಾಘವೇಂದ್ರ ಅವರ ವಿರುದ್ಧವೇ ತೊಡೆತಟ್ಟಿದಾಗ ಯಾರ್ಯಾರೋ ಮನವೊಲಿಸಲು ಬಂದ್ರೂ ಅದಕ್ಕೆ ಕ್ಯಾರೆ ಎನ್ನದೆ ನನ್ನ ನಿರ್ದಾರ ಅಚಲ ಎಂದಿದ್ದರು.ಅನೇಕರು ಹೈಕಮಾಂಡ್‌ ಮಾತಿಗೆ ಕಟ್ಟುಬಿದ್ದು ಕೊನೇ ಕ್ಷಣದಲ್ಲಿ ಸ್ಪರ್ದೆಯಿಂದ ಹಿಂದಕ್ಕೆ ಸರಿಯಬಹುದೆಂದೇ ಭಾವಿಸಿದ್ದರು.ಅವರಿಗೂ ಈಶ್ವರಪ್ಪ ಅವರ ನಿರ್ದಾರ ಗೊಂದಲದ ಗೂಡಾಗಿಬಿಟ್ಟಿದೆ.ಯಾಕ್ಹೀಗೆ ಆಗುತ್ತಿದೆ ಎಂದು ತಲೆಯಲ್ಲಿ ಹುಳು ಬಿಟ್ಟುಕೊಳ್ಳಲಾರಂಭಿಸಿರುವುದು ಕೂಡ ಸತ್ಯ.

ಯಾರ ಮಾತಿಗೆ ಸೊಪ್ಪಾಕದಿದ್ರೂ ಹೈಕಮಾಂಡ್-ವರಿಷ್ಟರ ಆದೇಶಕ್ಕಾದ್ರೂ ಈಶ್ವರಪ್ಪ ಬೆಲೆ ಕೊಡಬಹುದೆಂದೇ ಹೇಳಲಾಗುತ್ತಿತ್ತು.ಆದ್ರೆ ಅದಕ್ಕೂ ಬಗ್ಗದಿರುವುದನ್ನು ನೋಡಿದಾಗ ಈಶ್ವರಪ್ಪ ಅವರಿಗೆ ದಿಢೀರ್‌  ಇಷ್ಟೊಂದು ಧೈರ್ಯ-ಹಠ ಮೂಡೊಕ್ಕೆ ಸಾಧ್ಯವೇ ಇಲ್ಲ.ಅವರು ಅಂಥ ವ್ಯಕ್ತಿತ್ವದವರೂ ಅಲ್ಲ,ಆದ್ರೆ ಅವರ ನಡುವಳಿಕೆಯಲ್ಲಿನ ವೈಚಿತ್ರ್ಯವನ್ನು ಗಮನಿಸಿದ್ರೆ ಅವರ ಹಿಂದೆ ಯಾವುದೋ ಶಕ್ತಿಗಳಿವೆ..ಅವರನ್ನು ಯಾರೋ ಆಟವಾಡಿಸುತ್ತಿದ್ದಾರೆ.ಅವರ ಸನ್ನೆಗಳಂತೆಯೇ ನಟಿಸುತ್ತಿದ್ದಾರೆ.ಅವರ ಸೂಚನೆಯಂತೆಯೇ ನಡೆದುಕೊಳ್ಳುತ್ತಿದ್ದಾರೆ.ಅವರ ಆದೇಶವನ್ನು  ಚಾಚೂತಪ್ಪದೆ ಪಾಲಿಸುತ್ತಿದ್ದಾರೆ ಎನ್ನುವ ಅನುಮಾನ ಮೂಡಲಾರಂಭಿಸಿದೆಯಂತೆ.ಅದು ಸಹಜವೂ ಹೌದು..ಇದು ಬೇರೆ ಪಕ್ಷದವರಿಗಿಂತ ಬಿಜೆಪಿಯಲ್ಲೇ ಚರ್ಚೆಯಾಗುತ್ತಿದೆ.ಆದರೆ ಪಕ್ಷ ವಿರೋಧಿ ಎನ್ನುವಷ್ಟರ ಮಟ್ಟಿಗೆ “ಕಟ್ಟರ್‌” ಆಗಿ-“ಹಾರ್ಡ್‌ ಕೋರ್‌” ಆಗಿ  ವರ್ತಿಸುತ್ತಿರುವುದನ್ನು ನೋಡಿದ್ರೆ ಅವರ ಹಿಂದಿರುವ ಶಕ್ತಿ ಅಥವಾ ವ್ಯಕ್ತಿಗಳು ಸಾಮಾನ್ಯರಾಗಿರಲಿಕ್ಕಂತೂ ಸಾಧ್ಯವಿಲ್ಲ ಎನ್ನೋ ಮಾತು ಕೇಳಿ ಬರುತ್ತಿದೆ.ಈಶ್ವರಪ್ಪ ಅವರನ್ನು ಹಾಗೆ ಆಡಿಸುತ್ತಿರಬಹುದಾದ ಆ ಶಕ್ತಿ-ವ್ಯಕ್ತಿಗಳು ರಾಜಕೀಯದೊಂದಿಗೆ ಥಳಕು ಹಾಕ್ಕೊಂಡಿರಬಹುದಾ..? ಖಂಡಿತಾ ಸಾಧ್ಯವಿದೆ ಎನ್ನುವ ಮಾತು ಪಕ್ಷದ ಆಂತರಿಕ ವಿದ್ಯಾಮಾನಗಳಿಂದಲೇ ಕೇಳಿಬರುತ್ತಿದೆ.

ಅವರೆಲ್ಲಾ ಯಾರು ಎನ್ನುವುದಕ್ಕೆ ಪಕ್ಷದ ವಲಯದಲ್ಲೇ ಒಂದಷ್ಟು ಊಹೆಗಳು-ಅಭಿಪ್ರಾಯ-ಅನಿಸಿಕೆಗಳು ವ್ಯಕ್ತವಾಗುತ್ತಿದೆ. ಈಶ್ವರಪ್ಪರಿಗೆ ಹತ್ತಿರವಾಗಿರುವ, ಯಡಿಯೂರಪ್ಪ ಹಾಗೂ ಅವರ ಕುಟುಂಬದವರನ್ನು ಪಕ್ಷದ ವಲಯದಲ್ಲಿ ಅತಿಯಾಗಿ ದ್ವೇಷಿಸುವವರೇ ಇಂತದ್ದೊಂದು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವುದು ಸ್ಪಷ್ಟ.ಯಡಿಯೂರಪ್ಪ ಹಾಗೂ ಮಗ ವಿಜಯೇಂದ್ರ ಪಕ್ಷದಲ್ಲಿ ತುಂಬಾ ಪ್ರಬಲವಾಗಿ ಬೆಳೆಯುತ್ತಿರುವುದು ಅದರಲ್ಲೂ ವಿಜಯೇಂದ್ರ ಬೆಳೆಯುತ್ತಿರುವ ಪರಿಯಿಂದ ಕೊತ ಕೊತ ಕುದಿಯುತ್ತಿರಬಹುದಾದ ಪಕ್ಷದ ಕೆಲವು ಮುಖಂಡರೇ ಈಶ್ವರಪ್ಪ ಅವರನ್ನು ಇದಕ್ಕಾಗಿ ದಾಳ-ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆನ್ನುವುದು ಸರ್ವೇಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು.

ಬಿ.ಎಸ್‌ ಯಡಿಯೂರಪ್ಪ ಅವರನ್ನು ಕಾಡುತ್ತಿರುವ ವಯೋಸಹಜ ಆರೋಗ್ಯ ಸಮಸ್ಯೆ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರೀಯವಾಗಿ ಇರುವುದಕ್ಕೆ ಬಿಡುವುದಿಲ್ಲ ಎನ್ನುವುದು ಗೊತ್ತಿರುವ ವಿಚಾರ.ಇದನ್ನು ಸ್ವಯಂವೇದ್ಯ ಮಾಡಿಕೊಂಡಿರುವ ಯಡಿಯೂರಪ್ಪ ತಮ್ಮ ಮಕ್ಕಳು ಬಿಜೆಪಿ ಮಟ್ಟಿಗೆ ರಾಜಕೀಯದಲ್ಲಿ ನಿರ್ಣಾಯಕ ಎನ್ನುವಂಥ ಮಟ್ಟದಲ್ಲಿ ಬೆಳೆಸಬೇಕೆನ್ನುವ ಚಿಂತನೆಯಲ್ಲಿದ್ದಂತೆ ಕಾಣುತ್ತಿದೆ.ಹಾಗಾಗಿ ರಾಜ್ಯ ಮಟ್ಟದಲ್ಲಿ ಮುಂದಿನ ಸಿಎಂ ಕ್ಯಾಂಡಿಡೇಟ್‌ ವಿಜಯೇಂದ್ರ ಎನ್ನುವ ರೇಂಜ್ನಲ್ಲಿ ಅವರನ್ನು ಪ್ರೊಜೆಕ್ಟ್‌ ಕೂಡ ಮಾಡುತ್ತಿದ್ದಾರೆ.ರಾಜಕೀಯ ಮಹತ್ವಾಕಾಂಕ್ಷಿಯಾಗಿರುವ ವಿಜಯೇಂದ್ರ ಕೂಡ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನದಲ್ಲಿ ಗೆಲ್ಲಿಸಿ ಹೈಕಮಾಂಡ್‌ ಮಟ್ಟಕ್ಕೆ ತನ್ನ ಪ್ರಭಾವ ರುಜುವಾತುಪಡಿಸಬೇಕೆನ್ನುವ ಉಮೇದಿನಲ್ಲಿ ಕಾಲಿಗೆ ಚಕ್ರ ಹಾಕ್ಕೊಂಡು ಕೆಲಸ ಮಾಡುತ್ತಿದ್ದಾರೆ.

ಸಧ್ಯಕ್ಕೆ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ವಿರೋಧಿಸುತ್ತಿದ್ದವರಿಗೆ ಈಗ ದೊಡ್ಡ ತಲೆ ನೋವಾಗಿರುವುದು ವಿಜಯೇಂದ್ರರೇ ಹೊರತು ಯಡಿಯೂರಪ್ಪ ಅಲ್ಲ.ಯಡಿಯೂರಪ್ಪ ವಿರೋಧಿಗಳಿಗೆ ಆತಂಕ ಇರುವದು ವಿಜಯೇಂದ್ರ ಬಗ್ಗೆ.ಅವರು ಬೆಳೆದಷ್ಟು ತಮ್ಮ ಪ್ರಭಾವಳಿ ಕಡಿಮೆ ಆಗುತ್ತಿದೆ.ನಾವು ಡಮ್ಮಿ ಆಗುತ್ತೇವೆ ಎನ್ನುವ ಕಾರಣಕ್ಕೆ ಎಲ್ಲೆಲ್ಲಿ ಸಾಧ್ಯವಾಗುತ್ತೋ ಅಷ್ಟರ ಮಟ್ಟಿಗೆ ವಿಜಯೇಂದ್ರಗೆ ಠಕ್ಕರ್‌ ಕೊಡ್ಲಿಕ್ಕೆ ಆ ಮೂಲಕ  ಯಡಿಯೂರಪ್ಪ ಅವರನ್ನು ಡಮ್ಮಿ ಮಾಡುವ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ.ಇದಕ್ಕೆ ಹೇಳಿ ಮಾಡಿಸಿದ ಸಂದರ್ಭವಾಗಿ ಸಿಕ್ಕಿದ್ದೇ ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡ ಹಾಗೂ ಕೆ.ಎಸ್‌ ಈಶ್ವರಪ್ಪ ಅವರ ಅತೃಪ್ತಿ-ಅಸಹನೆ-ಬೇಗುದಿ ಹಾಗೂ ಯಡಿಯೂರಪ್ಪ ವಿರುದ್ದದ ಆಕ್ರೋಶ.

ಕೆ.ಎಸ್‌ ಈಶ್ವರಪ್ಪಗೆ ಟಿಕೆಟ್‌ ವಿಚಾರದಲ್ಲಿ ಬೇಸರವಿದ್ದುದು ನಿಜ.ಆದ್ರೆ ಅದು ತಣ್ಣಗಾಗದಿರುವ ಮಟ್ಟದಲ್ಲಂತೂ ಇರಲಿಲ್ಲ.ಏಕೆಂದರೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ಮುನಿಸು-ಬೇಸರ-ವಾಕ್ಸಮರ ಅದೆಷ್ಟ್‌ ಬಾರಿ ನಡೆದಿಲ್ಲ..ಆದ್ರೆ ಹಾಗೆ ನಡೆದಾಗಲೆಲ್ಲಾ ಅದು ಹೈಕಮಾಂಡ್‌ ಮದ್ಯಪ್ರವೇಶದಿಂದ ಶಮನವಾಗಿಲ್ವೇ…ಈ ಬಾರಿಯ ಸನ್ನಿವೇಶವೂ ಹಾಗೆನೇ ಇತ್ತು.ಆದ್ರೆ ಅದು ಶಮನವಾಗೊಕ್ಕೆ ಅತೃಪ್ತರು ಬಿಡಲಿಲ್ಲ ಅಷ್ಟೇ.ಯಡಿಯೂರಪ್ಪ ಬಗ್ಗೆ ಇರುವ ಬೇಸರ-ಅಸಮಾಧಾನ ತಣ್ಣಗಾಗೊಕ್ಕೆ ಬಿಡದೆ ಅದು ಜ್ವಾಲಾಗ್ನಿ ಆಗುವಂತೆ ಮಾಡುವಲ್ಲಿ ಅತೃಪ್ತರು ಯಶಸ್ವಿಯಾಗಿದ್ದಾರೆ.ಈಶ್ವರಪ್ಪ ತಣ್ಣಗಾಗೊಕ್ಕೆ ಅವಕಾಶಗಳಿದ್ದರೂ ತಮ್ಮ ಬೇಳೆ ಬೇಯಿಸಿಕೊಳ್ಳೊಕ್ಕೆ ಅದ್ಯಾವುದಕ್ಕೂ ಅವಕಾಶ ಕೊಡದೆ ಎಷ್ಟರ ಮಟ್ಟಿಗಾಗುತ್ತೋ ಅಷ್ಟರ ಮಟ್ಟಿಗೆ ಯಡಿಯೂರಪ್ಪ ಹಾಗೂ ಕುಟುಂಬದ ಬಗ್ಗೆ ವಿಷಕಾರುವಂತೆ ಮಾಡುತ್ತಿದ್ದಾರೆ.

ಈಶ್ವರಪ್ಪ ಎನ್ನೋ ಅಸ್ತ್ರವಿಟ್ಟುಕೊಂಡು ಯಡಿಯೂರಪ್ಪ ಹಾಗೂ ಕುಟುಂಬದ ಮೇಲಿನ ದ್ವೇಷ ತೀರಿಸಿಕೊಳ್ಳೊಕ್ಕೆ ಯತ್ನಿಸಿದವರು ಯಾರೆನ್ನುವುದು ಗೊತ್ತಿದ್ದರೂ ಅದನ್ನು ಚುನಾವಣೆ ಹೊತ್ತಿಲಲ್ಲಿ ಬಹಿರಂಗಪಡಿಸುವುದು ಸೂಕ್ತವಲ್ಲ.ಏಕಂದ್ರೆ ಅವರು ಯಾರೆನ್ನುವುದನ್ನು ಯಡಿಯೂರಪ್ಪ, ರಾಘವೇಂದ್ರ ಹಾಗೂ ವಿಜಯೇಂದ್ರ ತಮ್ಮ ಇಂಟಲಿಜೆನ್ಸಿ ಮೂಲಕ ಪತ್ತೆ ಮಾಡಿಕೊಂಡಿರುತ್ತಾರೆ.ಆದರೆ ಆ ಅತೃಪ್ತರ ಬಣದಲ್ಲಿ ಈ ಬಾರಿ ಕೆಲ ಟಿಕೆಟ್‌ ವಂಚಿತರೂ ಇದ್ದಾರೆನ್ನುವ ಮಾಹಿತಿಯಿದೆ.ಯಡಿಯೂರಪ್ಪ ಅವರನ್ನು ರಾಜಕೀಯ ಮುಗಿಸಲು ಯತ್ನಿಸಿದ ಆರ್‌ ಎಸ್‌ ಎಸ್‌ ಮುಖಂಡರೊಬ್ಬರು ಇದೆಲ್ಲದರ ಹಿಂದಿನ ಮಾಸ್ಟರ್‌ ಮೈಂಡ್‌ ಆಗಿ ಕೆಲಸ ಮಾಡುತ್ತಿದ್ದಾರೆನ್ನುವುದು ಬಿಎಸ್‌ ವೈ ಕುಟುಂಬದ ಇಂಟಲಿಜೆನ್ಸ್‌ ಮಾಹಿತಿಯಂತೆ.ಅವರು ಯಾರು ಎನ್ನುವುದನ್ನು ಪಕ್ಷದ ಚೌಕಟ್ಟಿನಲ್ಲೆ ಬಹಿರಂಗಪಡಿಸುವುದಾಗಿ ಹೇಳುತ್ತಿದ್ದಾರಂತೆ.

ಆದರೆ ಅದೆಲ್ಲಾ ಓ.ಕೆ ಅತೃಪ್ತರು ತೋಡಿದರೆನ್ನಾದ  ಅಖಾಡಕ್ಕೆ ಬಿದ್ದಂತಿರುವ ಕೆಎಸ್‌ ಈಶ್ವರಪ್ಪ  ಅದರಿಂದ ಮೇಲಕ್ಕೇಳೊಕ್ಕೆ ಸಾಧ್ಯವಿದೆಯಾ..? ಈಶ್ವರಪ್ಪ ಅಂದುಕೊಂಡಂತೆ ಆಗದೇ ಹೋದರೆ ಅವರಿಗಾಗಬಹುದಾದ ನಷ್ಟವನ್ನು ಈ ಅತೃಪ್ತರು ತುಂಬಿ ಕೊಡುತ್ತಾರಾ..? ಅದಕ್ಕೆ ಯಡಿಯೂರಪ್ಪ ಫ್ಯಾಮಿಲಿ ಅವಕಾಶ ಮಾಡಿಕೊಡುತ್ತಾ..? ತಮ್ಮ ವಿರುದ್ದ ಕೆಲಸ ಮಾಡಿದ ಹೊರತಾಗ್ಯೂ  ಈಶ್ವರಪ್ಪ ಅಂದುಕೊಂಡಂತೆ ಸಾಧಿಸದೆ ಹೋದರೆ ಅವರನ್ನು ರಾಜಕೀಯವಾಗಿ ಇರೊಕ್ಕೆ ಅವಕಾಶ ಮಾಡಿಕೊಡ್ತದಾ ಯಡಿಯೂರಪ್ಪ ಫ್ಯಾಮಿಲಿ..ಖಂಡಿತಾ ಇಲ್ಲ ಎನ್ನುತ್ತಿವೆ ಪಕ್ಷದ ಮೂಲಗಳು.ಮೋದಿ ಹೆಸರನ್ನು ಸಧ್ಯಕ್ಕೆ ಶ್ರೀರಕ್ಷೆಯಾಗಿ ಬಳಸಿಕೊಂಡು ಬಚಾವ್‌ ಆಗಬಹುದೆಂದು ಅಂದುಕೊಂಡಿದ್ರೆ ಅದು ಮೂರ್ಖತನ..ಹೈಕಮಾಂಡ್‌ ಮಟ್ಟದಲ್ಲೇ ಈಶ್ವರಪ್ಪ ಅವರ ಪೊಲಿಟಿಕಲ್‌ ಕರಿಯರ್‌ ಹಾಗೂ ಫ್ಯೂಚರ್‌ ಎರಡನ್ನೂ ಬರ್ಬಾದ್‌ ಮಾಡದೆ ಬಿಡ್ತಾರಾ..? ಈ ಸತ್ಯ ಈಶ್ವರಪ್ಪ ಅವರಿಗೆ ಗೊತ್ತಿಲ್ವಾ..ಅಂತದ್ದೊಂದು ಆತಂಕ ಈಶ್ವರಪ್ಪರಿಗೂ ಇದೆಯಂತೆ.ಹಾಗಾಗಿ ಲೋಕಸಭಾ ಚುನಾವಣೆಯ ಫಲಿತಾಂಶ ಈಶ್ವರಪ್ಪ ಬಿಜೆಪಿಯಲ್ಲಷ್ಟೇ ಅಲ್ಲ ರಾಜಕೀಯದಲ್ಲಿ ಅವರ ಅಳಿವು-ಉಳಿವನ್ನು ಬಹುತೇಕ ನಿರ್ದರಿಸಲಿದೆ ಎನ್ನಲಾಗ್ತಿದೆ.

 

Spread the love

Leave a Reply

Your email address will not be published. Required fields are marked *