ಬಹುತೇಕ ‘ಬಕೆಟ್ ಹಿಡಿಯುವ’ (ಚಮಚಾಗಿರಿ ಮಾಡುವ) ಪತ್ರಕರ್ತರಿಂದಾಗಿ ತನಿಖಾ ಪತ್ರಿಕೋದ್ಯಮವೇ ಸತ್ತುಹೋಗಿದೆಯೇನೋ ಎಂಬ ಇಂದಿನ ಆತಂಕದ ಸನ್ನಿವೇಶದಲ್ಲಿ, ಈ ಇಬ್ಬರು ಪತ್ರಕರ್ತರ ಕಾರ್ಯ ನಿಜಕ್ಕೂ ಶ್ಲಾಘನೀಯ. ಪತ್ರಿಕೋದ್ಯಮದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಮಾತ್ರ ಈ ಪತ್ರಕರ್ತರ ಸಾಹಸದ ಆಳ ಅರ್ಥವಾಗಲು ಸಾಧ್ಯ. ಇಂದಿನ ಮಾಧ್ಯಮ ರಂಗಕ್ಕೆ ಬೇಕಿರುವುದು ಇವರಲ್ಲಿರುವಂತಹ ಎದೆಗಾರಿಕೆ ಮತ್ತು ನೇರವಂತಿಕೆ.
ಮರೆಯಾಗುತ್ತಿರುವ ಬದ್ಧತೆ
ಇತ್ತೀಚೆಗೆ ಬಜೆಟ್ ಮಂಡಿಸಿದ ಸಂಭ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಧ್ಯಮದವರಿಗೆ ಆಯೋಜಿಸಿದ್ದ ‘ಮದ್ಯ ಮತ್ತು ಮಾಂಸದ’ ಔತಣಕೂಟದ ಬಗ್ಗೆ ಹಿರಿಯ ಪತ್ರಕರ್ತ ಸತೀಶ್ ಚಪ್ಪರಿಕೆ ಅವರು ಕುಟುಕಿದ್ದರು. ಆ ಸಂದರ್ಭದಲ್ಲಿ ಅವರು ಹಳೆಯ ಕಾಲದ ಪತ್ರಕರ್ತರ ಬದ್ಧತೆಯನ್ನು ನೆನಪಿಸಿಕೊಂಡರು. ಮುಖ್ಯಮಂತ್ರಿಯೇ ಪತ್ರಕರ್ತರ ಭುಜದ ಮೇಲೆ ಸಲುಗೆಯಿಂದ ಕೈ ಹಾಕಿದಾಗ, “ಕೈ ಎತ್ತಿ” ಎಂದು ಹೇಳುವಂತಹ ನಿಷ್ಠುರ ಮನಸ್ಥಿತಿ ಇಂದು ನಶಿಸಿಹೋಗಿದೆಯೇ? ಎಂಬ ಪ್ರಶ್ನೆ ಕಾಡುತ್ತದೆ.
ಇವತ್ತಿನ ಪತ್ರಿಕೋದ್ಯಮ ಬಹುತೇಕ ಬಿಕರಿಯಾಗಿ ಹೋಗಿದೆ. “ಪ್ರಶ್ನೆ ಮಾಡಿದರೆ ಎಲ್ಲಿ ಸಚಿವರು-ಶಾಸಕರು ಬೇಸರಿಸಿಕೊಳ್ಳುತ್ತಾರೋ?”, “ಅವರಿಂದ ಆಗಬೇಕಾದ ವೈಯಕ್ತಿಕ ಕೆಲಸಗಳು ಎಲ್ಲಿ ಕೈತಪ್ಪುತ್ತವೋ?” ಅಥವಾ “ನಿಯತವಾಗಿ ಬರುವ ‘ಪ್ರಸಾದ’ಕ್ಕೆ ಎಲ್ಲಿ ಕಲ್ಲು ಬೀಳುತ್ತದೋ?” ಎನ್ನುವ ಹಿಂಜರಿಕೆ ಅನೇಕರಲ್ಲಿದೆ. ಈ ಕಾರಣದಿಂದಲೇ ಶೇ. 90ರಷ್ಟು ಪತ್ರಕರ್ತರಲ್ಲಿ ಬದ್ಧತೆಯನ್ನು ದುರ್ಬೀನು ಹಾಕಿ ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಭರವಸೆಯ ಬೆಳಕು
ಹಾಗಂತ ಪತ್ರಿಕೋದ್ಯಮದ ಮೇಲೆ ಸಂಪೂರ್ಣ ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ. ಯಾವುದೇ ಒತ್ತಡ ಅಥವಾ ಆಮಿಷಕ್ಕೆ ಒಳಗಾಗದೆ ಕೆಲಸ ಮಾಡುತ್ತಿರುವ ಪತ್ರಕರ್ತರು ಇಂದಿಗೂ ನಮ್ಮ ನಡುವಿದ್ದಾರೆ. ವೃತ್ತಿಗೆ ಬಂದ ಕೆಲವೇ ವರ್ಷಗಳಲ್ಲಿ ಬಂಗಲೆ, ಐಷಾರಾಮಿ ಕಾರು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಮಾಡಿಕೊಂಡವರ ನಡುವೆ, “ಉಸಿರು ಬಿಟ್ಟೇವು ಆದರೆ ಸಿದ್ಧಾಂತ ಬಿಡೆವು” ಎಂದು ಬದುಕುತ್ತಿರುವವರೇ ಪತ್ರಿಕೋದ್ಯಮದ ನಿಜವಾದ ಸಾಕ್ಷಿಪ್ರಜ್ಞೆ.

ಇತ್ತೀಚಿನ ಎರಡು ಸನ್ನಿವೇಶಗಳು ಪತ್ರಿಕೋದ್ಯಮದ ಮೇಲಿನ ಆಶಾವಾದವನ್ನು ಜೀವಂತವಾಗಿರಿಸಿವೆ. ಉತ್ತರ ಕರ್ನಾಟಕದ ಪ್ರಭಾವಿ ಸ್ವಾಮೀಜಿಯೊಬ್ಬರ ಲೈಂಗಿಕ ಹಗರಣದ ಬಯಲು. ಮತ್ತೇ ನಟಿ ರಶ್ಮಿಕಾ ಮಂದಣ್ಣ ಅವರ ಜೀವನಕ್ಕೆ ಸಂಬಂಧಿಸಿದ ವಿಚಾರಗಳು.
ಈ ಎರಡು ಪ್ರಕರಣಗಳು ಜನಮಾನಸದಲ್ಲಿ ಸಂಚಲನ ಮೂಡಿಸಲು ಕಾರಣಕರ್ತರಾದವರು ಇಬ್ಬರು ಪತ್ರಕರ್ತರು: ಸಂಯುಕ್ತ ಕರ್ನಾಟಕದ ಸಹಾಯಕ ಸಂಪಾದಕ ಶಿವಕುಮಾರ ಮೆಣಸಿನಕಾಯಿ ಮತ್ತು ಸಿನಿಮಾ ಪತ್ರಿಕೋದ್ಯಮದ ದಿಗ್ಗಜ, ‘ಕೊನೇ ಆಟ’ದ ಮುಖ್ಯಸ್ಥ ಮಹೇಶ್ ದೇವಶೆಟ್ಟಿ.
ಶಿವಕುಮಾರ ಮೆಣಸಿನಕಾಯಿ ಅವರ ಸಾಹಸ
ಗುಮ್ಮಟ ನಗರಿಯ ಪ್ರಭಾವಿ ಸ್ವಾಮೀಜಿ, ಒಂದು ದೊಡ್ಡ ಸಮುದಾಯದ ಬೆಂಬಲ ಹೊಂದಿದ್ದರೂ ಅವರ ಲೈಂಗಿಕ ಹಗರಣವನ್ನು ಧೈರ್ಯವಾಗಿ ಬಯಲಿಗೆಳೆದವರು ಶಿವಕುಮಾರ ಮೆಣಸಿನಕಾಯಿ. ಸುದ್ದಿಯ ಆಳಕ್ಕಿಳಿದು ಸತ್ಯವನ್ನು ಹೆಕ್ಕಿ ತೆಗೆಯುವ ಕೆಲವೇ ಕೆಲವು ಪತ್ರಕರ್ತರಲ್ಲಿ ಇವರೂ ಒಬ್ಬರು. ಇವರು ಸಂಯುಕ್ತ ಕರ್ನಾಟಕಕ್ಕೆ ಬಂದ ಮೇಲೆ ಪತ್ರಿಕೆಯ ಸ್ವರೂಪವೇ ಬದಲಾಗಿದೆ ಎನ್ನುವುದು ಅತಿಶಯೋಕ್ತಿಯಲ್ಲ. ಮಠದ ಪ್ರಭಾವಕ್ಕೆ ಮಣಿಯದೆ ವರದಿ ಪ್ರಕಟಿಸಲು ಸ್ವಾತಂತ್ರ್ಯ ನೀಡಿದ ಪತ್ರಿಕೆಯ ಆಡಳಿತ ಮಂಡಳಿಗೂ ಒಂದು ‘ಹ್ಯಾಟ್ಸಾಫ್’ ಹೇಳಲೇಬೇಕು.
ಫೆಬ್ರವರಿ 2ರಂದು ನಡೆದ ಘಟನೆಯನ್ನು ಸಾಕ್ಷ್ಯ ಸಮೇತ ಎಳೆಎಳೆಯಾಗಿ ಬಿಚ್ಚಿಡುವಲ್ಲಿ ಮೆಣಸಿನಕಾಯಿ ಅವರು ತೋರಿದ ಎದೆಗಾರಿಕೆ ಅಪ್ರತಿಮ. ಈ ಹಾದಿಯಲ್ಲಿ ಅವರಿಗೆ ಬಂದ ಬೆದರಿಕೆ, ಆಮಿಷ ಅಥವಾ ಭಕ್ತ ಸಮುದಾಯದ ಆಕ್ರೋಶ ಅಲ್ಪವೇನಲ್ಲ. ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳು ನಡೆದರೂ ಜಗ್ಗದೆ, ಆ ‘ಮುಖವಾಡ’ವನ್ನು ಜಗತ್ತಿನ ಮುಂದೆ ಬೆತ್ತಲುಗೊಳಿಸಿದರು.
ನ್ಯಾಯದ ಪರ ನಿಂತ ಲೇಖನಿ
ನೊಂದ ಯುವತಿಯೊಬ್ಬಳು ತನ್ನ ಅನ್ಯಾಯವನ್ನು ವಿವರಿಸಿದಾಗ, ಕ್ಷಣವೂ ತಡಮಾಡದೆ ನ್ಯಾಯದ ಪರ ನಿಂತವರು ಶಿವಕುಮಾರ್. ಆಡಳಿತ ಮಂಡಳಿಯಿಂದ “ಗೋ ಅಹೆಡ್” ಎಂಬ ಬೆಂಬಲ ಸಿಕ್ಕಾಗ ಆನೆಬಲ ಬಂದಂತಾಯಿತು. ಸರಣಿ ವರದಿಗಳ ಪರಿಣಾಮ ಇಂದು ಹೇಗಿದೆಯೆಂದರೆ, ಯಾವ ಸಮುದಾಯ ಸ್ವಾಮೀಜಿಯನ್ನು ಬೆಂಬಲಿಸುತ್ತಿತ್ತೋ, ಅದೇ ಸಮುದಾಯ ಈಗ ಅವರನ್ನು ಮಠ ಬಿಟ್ಟು ತೊಲಗುವಂತೆ ಒತ್ತಾಯಿಸುತ್ತಿದೆ. ಇದೇ ಪತ್ರಿಕೋದ್ಯಮದ ಶಕ್ತಿ.
ಇದೇ ಪ್ರಕರಣವನ್ನು ಬೇರೆ ಯಾರಾದರೂ ಹಣ ಮಾಡಲು ಬಳಸಿಕೊಳ್ಳಬಹುದಿತ್ತು (ಡೀಲ್ ಕುದುರಿಸಬಹುದಿತ್ತು). ಆದರೆ ಶಿವಕುಮಾರ್ ಅವರಂತಹ ಪ್ರಾಮಾಣಿಕ ಪತ್ರಕರ್ತರ ಕೈಗೆ ಈ ಪ್ರಕರಣ ಸಿಕ್ಕಿದ್ದರಿಂದ ಸಂತ್ರಸ್ತೆಗೆ ನ್ಯಾಯ ಸಿಗುವಂತಾಯಿತು.
ಶಿವಕುಮಾರ್ ಅವರೇ, ನಿಮ್ಮ ಲೇಖನಿಯಿಂದ ಇಂತಹ ಇನ್ನಷ್ಟು ಸ್ಪೋಟಕ ಮತ್ತು ಸತ್ಯನಿಷ್ಠ ಸುದ್ದಿಗಳು ಹೊರಬರಲಿ.










