ಬೆಂಗಳೂರು: ಡಾ.ಮೈತ್ರಿ..ಈ ಹೆಸರು ಯಾರಿಗೆ ಗೊತ್ತಿರಲಿಕ್ಕಿಲ್ಲ ಹೇಳಿ. ಸಾಧ್ಯವೇ ಇಲ್ಲ. ಕೆಪಿಎಸ್ಸಿ ಯಲ್ಲಿ ನಡೆಯುತ್ತಿದ್ದ ಹಗರಣವನ್ನು ಹೊರತೆಗೆಯುವುದರಲ್ಲಿ ಮುಂಚೂಣಿಯಲ್ಲಿ ನಿಂತವರೇ ಈ ಡಾ.ಮೈತ್ರಿ. ಖಾಸಗಿ ನ್ಯೂಸ್ ಚಾನೆಲ್ ನ ಸ್ಟುಡಿಯೋದಲ್ಲಿ ಪ್ಯಾನಲ್ ಡಿಸ್ಕಷನ್ ನಲ್ಲಿ ಕೂತಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಸ್ಟುಡಿಯೋದಿಂದ ಹೊರಹೋಗುವಂತೆ ಮಾಡಿದ ಗಟ್ಟಿಗಿತ್ತಿ ಈ ಡಾ.ಮೈತ್ರಿ.
ಆಮೇಲೆ ಕೆಎಎಸ್ ಅಧಿಕಾರಿಯಾಗಿ ಸಾಕಷ್ಟು ಇಲಾಖೆಗಳಲ್ಲಿ ಕೆಲಸ ಮಾಡಿದ್ರೂ ಮೈತ್ರಿ ಪ್ರಚಾರಕ್ಕೆ ಬಂದಿದ್ದೇ ಕಡಿಮೆ..ಎಲ್ಲೂ ಅವರು ಬಹಿರಂಗವಾಗಿ ಕಾಣಿಸಿಕೊಂಡವರೇ ಅಲ್ಲ..ಅಂಥಾ ಮೈತ್ರಿ ಮತ್ತೆ ಸುದ್ದಿಯಲ್ಲಿದ್ದಾರೆ.ಅದಕ್ಕೆ ಕಾರಣವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ..ಹೌದು ಹೇಳೋರಿಲ್ಲ..ಕೇಳೋರಿಲ್ಲದಂತಾಗಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಆಡಳಿತಾಧಿಕಾರಿಯಾಗಿ ಡಾ.ಮೈತ್ರಿ ಸರ್ಕಾರದಿಂದ ನಿಯೋಜನೆಗೊಂಡಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ಆಡಳಿತ ವೈಫಲ್ಯ, ಭ್ರಷ್ಟಾಚಾರ,ಹಗರಣ-ಅಕ್ರಮಗಳಿಂದ ಗಬ್ಬೆದ್ದು ನಾರುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಡಾ.ಮೈತ್ರಿ ಅವರು ಆಗಮಿಸುತ್ತಿರುವುದನ್ನು ಮಂಡಳಿಯಲ್ಲಿರುವ ಅವ್ಯವಸ್ಥೆಯಿಂದ ಬೇಸತ್ತು ಹೋಗಿರುವವರಿಗೆ ತೀವ್ರ ಸಂತಸ ತಂದಿದೆ.ಯಾರಿಂದಲೂ ಸಾಧ್ಯವಾಗದಂಥ ಕೆಲಸ ಡಾ.ಮೈತ್ರಿ ಅವರಿಂದ ಖಂಡಿತಾ ಸಾಧ್ಯವಾಗುತ್ತೆನ್ನುವ ವಿಶ್ವಾಸ ಹಲವರಲ್ಲಿದೆ.ಸರ್ಕಾರ ಕೂಡ ಪ್ರಜ್ನಾಪೂರ್ವಕವಾಗಿಯೇ ಡಾ ಮೈತ್ರಿ ಅವರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆಡಳಿತಾಧಿಕಾರಿ ಹುದ್ದೆಗೆ ನಿಯೋಜಿಸಿದೆ ಎನ್ನುವ ಮಾತುಗಳಿವೆ.
ಪರಿಸರಾಧಿಕಾರಿ ಶಿವಕುಮಾರ್ ವಿರುದ್ದದ ಲೈಂಗಿಕ ಹಗರಣದ ತನಿಖಾ ವರದಿಯೇ ಸಲ್ಲಿಕೆಯಾಗಿಲ್ಲ..ಏಕೆ..?
“ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿರುವ ಬಹುತೇಕ ಅಧಿಕಾರಿಗಳ ವಿರುದ್ದ ಅನೇಕ ರೀತಿಯ ಆಪಾದನೆ-ಆರೋಪ ಗಳಿವೆ.ಅದು ಬಹುತೇಕ ಭ್ರಷ್ಟಾಚಾರ-ಹಗರಣಕ್ಕೆ ಸಂಬಂಧಿ ಸಿದ್ದು…ಅದನ್ನು ಬಿಟ್ಟರೆ ಕೆಲವು ಅಧಿಕಾರಿಗಳ ಹೆಸರು ಮಹಿಳಾ ಸಿಬ್ಬಂದಿ ಜತೆ ಥಳಕು ಹಾಕ್ಕೊಂಡಿರುತ್ತೆ. ಮಂಡಳಿ ಯಲ್ಲಿ ಭಾರೀ ಸುದ್ದಿ ಮಾಡಿದ ಅಂತದ್ದೇ ಒಂದು ಪ್ರಕರಣ,ರಾಜರಾಜೇಶ್ವರಿ ವಲಯದ ಪರಿಸರಾಧಿಕಾರಿ ಶಿವಕುಮಾರ್ ವಿರುದ್ಧ ಮಹಿಳೆಯೊಂದಿಗೆ ಕೇಳಿಬಂದ ಲವ್ವಿಡವ್ವಿ ಹಾಗೂ ಆಕೆಯನ್ನು ಅಕ್ರಮಗಳಿಗೆ ಬಳಸಿಕೊಳ್ಳುತ್ತಿದ್ದರೆನ್ನುವ ಆಪಾದನೆ.
ಆ ಬಗ್ಗೆ ಕುಂಬಳಗೋಡು ಭಾಗದ ಕೈಗಾರಿಕಾ ಮಾಲೀಕರೊಬ್ಬರು ಸದಸ್ಯ ಕಾರ್ಯದರ್ಶಿಗೆ ದೂರನ್ನು ನೀಡಿದ್ದರು.ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಹಿಂದಿದ್ದ ಸುಭಾಷ್ ಚಂದ್ರ ರೇ ಅವರು, ಹಿರಿಯ ಪರಿಸರಾಧಿಕಾರಿ ಅವರಿಗೆ ಆದೇಶಿಸಿದ್ದರು.ಆದರೆ ದುರಂತ ನೋಡಿ,ತನಿಖೆಗೆ ಆದೇಶ ಕೊಟ್ಟು ಅನೇಕ ತಿಂಗಳುಗಳೇ ಆಗಿವೆ.ಆದರೆ ತನಿಖಾ ವರದಿಯೂ ಸಲ್ಲಿಕೆಯಾಗಿಲ್ಲ..ಶಿವಕುಮಾರ್ ವಿರುದ್ಧವೂ ಕ್ರಮ ಜಾರಿಯಾಗಲಿಲ್ಲ.ಮಹಿಳೆಯೊಂದಿಗೆ ಶಿವಕುಮಾರ್ ಗೆ ಸಂಬಂಧವಿದ್ದ ಬಗ್ಗೆ ಬಸವೇಶ್ವರ ನಗರದಲ್ಲಿರುವ ನಿಸರ್ಗ ಭವನದಲ್ಲಿಯೇ ಮಾತುಗಳಿವೆ.
ಆಕೆ ಕಚೇರಿಗೆ ಬಂದೋಗುತ್ತಿದ್ದುದ್ದರ ಬಗ್ಗೆಯೂ ಮಾತನಾಡುವವರಿದ್ದಾರೆ.ಆಕೆಯನ್ನು ಯಾರು ನೇಮಕ ಮಾಡಿಕೊಂಡಿದ್ದು ಎನ್ನುವುದು ಸ್ಪಷ್ಟವಾಗಿಲ್ಲ.ಸಂಬಂಧವೇ ಪಡದವರೇನಾದ್ರೂ ಕಚೇರಿಯಲ್ಲಿ ಕೆಲಸ ಮಾಡಿ್ದ್ರೆ ಅದು ದೊಡ್ಡ ಕ್ರೈಮ್. ಒಂದ್ವೇಳೆ ಶಿವಕುಮಾರ್ ಜತೆಗಿದ್ದಳೆನ್ನಲಾದ ಮಹಿಳೆ ಕೂಡ ಅದೇ ಕೆಟಗರಿಗೆ ಸೇರಿದವಳೆನ್ನುವುದು ದೃಡಪಟ್ಟಲ್ಲಿ ಶಿವಕುಮಾರ್ ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೇಳುವವರಿದ್ದಾರೆ.
ಆದರೆ ಇಂತದ್ದೊಂದು ಗಂಭೀರ ಪ್ರಕರಣವನ್ನು ಆಡಳಿತ ಮಂಡಳಿ ಲಘುವಾಗಿ ಪರಿಗಣಿಸಿದ್ದು ಮಾತ್ರ ದುರಾದೃಷ್ಟಕರ. ಮಂಡಳಿಯಲ್ಲಿರುವ ಕೆಲವರ ಹೊಣೆಗೇಡಿತನದ ಬಗ್ಗೆ ಮೊದಲೇ ಮಾಹಿತಿ ಇರುವ ಪರಿಣಾಮ ಶಿವಕುಮಾರ್ ಇವತ್ತು ಝಾಮ್ ಝೂಮ್ ಆಗಿ ಅಡ್ಡಾಡಿಕೊಂಡಿದ್ದಾರೆ. ಮೇಘಾಲಯಕ್ಕೆ ಟ್ರೈನಿಂಗ್ ಗೆಂದು ಹೋಗಿದ್ದಾರೆ.ಆರೋಪಿತನನ್ನು ಈ ರೀತಿ ಆರಾಮಾಗಿ ಅಡ್ಡಾಡಿಕೊಂಡಿರಲು ಬಿಟ್ಟಿರೋದೇ ಮೊದಲ ತಪ್ಪು..ಈ ಪ್ರಕರಣವನ್ನು ಡಾ.ಮೈತ್ರಿ ಎಷ್ಟು ಗಂಭೀರ ವಾಗಿ ತೆಗೆದುಕೊಳ್ಳುತ್ತಾರೆನ್ನುವುದನ್ನು ಕಾದು ನೋಡಬೇಕಿದೆ.”
ಡಾ.ಮೈತ್ರಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆಡಳಿತಾಧಿಕಾರಿಯಾಗಿ ಬರುತ್ತಾರೆನ್ನುವ ಸುದ್ದಿಯೇ ಭ್ರಷ್ಟರು,ಸೋಮಾರಿಗಳ ಎದೆಯಲ್ಲಿ ನಡುಕ ಸೃಷ್ಟಿಸಿದೆ.ಗಾಢನಿದ್ರೆಯಲ್ಲಿದ್ದವರೆಲ್ಲಾ ಮೈ ಕೊಡವಿ ಏಳುವಂತೆ ಮಾಡಿದೆ.ಡಾ.ಮೈತ್ರಿ ಅವರ ಹೆಸರನ್ನು ಕೇಳುತ್ತಿದ್ದಂತೆ ಭಯಗೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನೆ ಡಿಸ್ಕಷನ್ ಪ್ಯಾನೆಲ್ ನಿಂದ ಎದ್ದೋಗುವಂತೆ ಮಾಡಿದ ಈ ಗಟ್ಟಿಗಿತ್ತಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿರುವ ಭ್ರಷ್ಟರು-ಕಳ್ಳರು-ಸೋಮಾರಿಗಳ ನಡ ಮುರಿಯದೆ ಇರ್ತಾರಾ ಎನ್ನುವಂಥ ಚರ್ಚೆಯನ್ನೂ ಹುಟ್ಟಿಹಾಕಿದೆ.
ಕೆಪಿಎಸ್ ಸಿಯಲ್ಲಿನ ಅಕ್ರಮಗಳು ಸದ್ದು ಮಾಡುತ್ತಿದ್ದಾಗ ಅದರ ವಿರುದ್ಧ ಹೋರಾಟದ ಧ್ವನಿಯನ್ನು ತೆಗೆದ ದಿನಗಳಲ್ಲಿ ಡಾ.ಮೈತ್ರಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು.ಕೆಎಎಸ್ ಪೂರ್ಣಗೊಂಡು ಕೆಲಸಕ್ಕೆ ನೇಮಕಗೊಂಡ ಮೇಲೆ ಕಳೆದು ಹೋಗಿಬಿಟ್ಟರು.ಅವರ ಹೆಸರನ್ನು ಮತ್ತೆ ಕೇಳೊಕ್ಕೆ ಸಾಧ್ಯವಾಗಿದ್ದೇ ಈಗ.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅವರು ಆಡಳಿತಾಧಿಕಾರಿಯಾಗಿ ಆಗಮಿಸುತ್ತಿದ್ದಾರೆನ್ನುವ ಸುದ್ದಿ ಸಖತ್ ಸದ್ದು ಮಾಡುತ್ತಿರುವುದಂತೂ ಸತ್ಯ.
ಮಾಲಿನ್ಯ ನಿಯಂತ್ರಣ ಮಂಡಳಿ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಡಾ.ಮೈತ್ರಿ ಮುಂದೆ ಸಾಕಷ್ಟು ಸವಾಲುಗಳಿವೆ.ಪರಿಸ್ಥಿತಿ ಅವರು ಅಂದುಕೊಂಡಷ್ಟು ಸಲೀಸಾಗಿಲ್ಲ..ಹಾಗೆಯೇ ಅವರು ಬಂದಾಕ್ಷಣ ಎಲ್ಲವನ್ನು ಬದಲಿಸಿ ಮಂಡಳಿಯ ಮಾಲಿನ್ಯವನ್ನು ಸಂಪುರ್ಣ ತೊಡೆದು ಹಾಕಿಬಿಡ್ತಾರೆನ್ನುವುದು ಕೂಡ ಭ್ರಮೆಯಾಗಬಹುದು..ಏಕೆಂದರೆ ಇಲ್ಲಿರುವ ಕೆಲ ಭ್ರಷ್ಟರು-ಸೋಮಾರಿಗಳ ಕೈ ವಿಧಾನಸೌಧದವರೆಗೂ ಹಬ್ಬಿದೆ.ಅವರೆಲ್ಲಸೇರಿ ಡಾ.ಮೈತ್ರಿ ಅವರ ಬಾಯನ್ನೇ ಮುಚ್ಚಿಸಬಹುದು..ಅಥವಾ ಒಂದು ಹೆಜ್ಜೆ ಮುಂದೆ ಹೋಗಿ ಅವರನ್ನೆ ಇಲ್ಲಿಂದ ವರ್ಗಾವಣೆಯನ್ನೂ ಮಾಡಿಸುವ ಆತಂಕವಿದೆ.ಏಕೆಂದ್ರೆ ಇಲ್ಲಿರುವ ಅಧಿಕಾರಿ ಸಿಬ್ಬಂದಿಯ ಕೆಪಾಸಿಟಿಯೆ ಅಂತದ್ದು.ಇದು ಮೈತ್ರಿ ಅವರಿಗೂ ಬಹುಷಃ ಗೊತ್ತಿರಬಹುದು..ಗೊತ್ತಿದ್ದರೆ ಒಳ್ಳೇದು ಕೂಡ..
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹಾಳೆದ್ದು ಹೋಗಿರುವ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಬರಬೇಕಿದೆ.ಅಧಿಕಾರಿ-ಸಿಬ್ಬಂದಿ ಯನ್ನು ಕಂಟ್ರೊಲ್ ಗೆ ತೆಗೆದುಕೊಳ್ಳಬೇಕಿದೆ.ವಲಯ ಮಟ್ಟದಲ್ಲಿ ಕೆಲವು ಪರಿಸರಾಧಿಕಾರಿಗಳು ನಡೆಸುತ್ತಿರುವ ಅಂದಾದರ್ಬಾರ್ ಹಾಗೂ ಲಂಚಗುಳಿತನಕ್ಕೆ ಬ್ರೇಕ್ ಹಾಕಬೇಕಿದೆ.ಒಂದಷ್ಟು ಭ್ರಷ್ಟರ ಹೆಡೆಮುರಿ ಕಟ್ಟಬೇಕಿದೆ.ಈ ಕೆಲಸದ ಜತೆಗೆ ಸಿಬ್ಬಂದಿ ನೇಮಕಾತಿಯಲ್ಲಿ ನಡೆಯುತ್ತಿರುವ ಅಕ್ರಮ-ಮಾನವಸಂಪನ್ಮೂಲ ಪೂರೈಕೆಯ ಹೊರಗುತ್ತಿಗೆಯಲ್ಲಿ ಅಧಿಕಾರಿಗಳ ಕಮಿಷನ್ ವ್ಯವಹಾರ..ಹೀಗೆ ಅವರು ಬ್ರೇಕ್ ಹಾಕಬೇಕಿರುವುದು ಒಂದಕ್ಕಾ..ಎರಡಕ್ಕಾ…ಹಾಗಾಗಿನೇ ಇದು ಡಾ.ಮೈತ್ರಿ ಅವರಿಗೆ ನಿಜವಾಗಿಯೂ ಒಂದು ಸವಾಲೇ ಸರಿ..ಆ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ಡಾಮೈತ್ರಿ ಅವರು ಯಶಸ್ವಿಯಾಗಲಿ ಎನ್ನುವುದೇ ನಮ್ಮ ಹಾರೈಕೆ.