ಬೆಂಗಳೂರಿನಲ್ಲಿ ನಡೆದ 19ನೇ ಕಸ್ಟಮ್ಸ್ ಸಮಾಲೋಚನಾ ಗುಂಪಿನ (ಸಿಸಿಜಿ) ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಸದಸ್ಯರಾದ (ಕಸ್ಟಮ್ಸ್) ಶ್ರೀ ಸುರ್ಜಿತ್ ಭುಜಬಲ್ ವಹಿಸಿದರು
ಕಸ್ಟಮ್ಸ್ ಸಲಹಾ ಗುಂಪು CII, FICCI, ASSOCHAM, FIEO, MAIT, NASSCOM, PHDCCI, STPI ನಂತಹ ಕೈಗಾರಿಕಾ ಸಂಘಟನೆಗಳ ಪ್ರಮುಖ ಪ್ರತಿನಿಧಿಗಳು ಹಾಗೂ ಕಸ್ಟಮ್ಸ್ ದಲ್ಲಾಳಿಗಳು, ಸರಕು ಸಾಗಣೆದಾರರು, ಬೃಹತ್ ದ್ರವ ಸರಕು ನಿರ್ವಹಣಾಕಾರರು, ಬಂದರು ನಿರ್ವಾಹಕರು ಮತ್ತು ಬ್ಯಾಂಕುಗಳು ಸೇರಿದಂತೆ ಲಾಜಿಸ್ಟಿಕ್ಸ್ ಪಾಲುದಾರರ ಸಂಘಗಳನ್ನು ಒಳಗೊಂಡಿದೆ

ಕಸ್ಟಮ್ಸ್ ಸಮಾಲೋಚನಾ ಗುಂಪಿನ (ಸಿಸಿಜಿ) 19 ನೇ ಸಭೆಯು ಜುಲೈ 2-3, 2025 ರಂದು ಬೆಂಗಳೂರಿನಲ್ಲಿ ಹಣಕಾಸು ಸಚಿವಾಲಯದ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ (ಸಿಬಿಐಸಿ) ಸದಸ್ಯ (ಕಸ್ಟಮ್ಸ್) ಶ್ರೀ ಸುರ್ಜಿತ್ ಭುಜಬಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
2011 ರಿಂದ, ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಸರಕುಗಳ ಕಸ್ಟಮ್ಸ್ ಕ್ಲಿಯರೆನ್ಸ್‌ಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಸಿಸಿಜಿ ಅತ್ಯುನ್ನತ ರಾಷ್ಟ್ರೀಯ ವೇದಿಕೆಯಾಗಿದೆ. ಈ ಗುಂಪಿನಲ್ಲಿ CII, FICCI, ASSOCHAM, FIEO, MAIT, NASSCOM, PHDCCI, STPI ನಂತಹ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕಸ್ಟಮ್ಸ್ ದಲ್ಲಾಳಿಗಳು, ಸರಕು ಸಾಗಣೆದಾರರು, ಬೃಹತ್ ದ್ರವ ಸರಕು ನಿರ್ವಹಣಾಕಾರರು, ಬಂದರು ನಿರ್ವಾಹಕರು ಮತ್ತು ಬ್ಯಾಂಕುಗಳು ಸೇರಿದಂತೆ ಲಾಜಿಸ್ಟಿಕ್ಸ್ ಪಾಲುದಾರರ ಸಂಘಟನೆಗಳು ಸೇರಿವೆ. ಈ ವರ್ಷ 35 ರಫ್ತು ಉತ್ತೇಜನ ಮಂಡಳಿಗಳು ಮತ್ತು ವಾಯು ಸರಕು ಸಾಗಣೆ ವಲಯವನ್ನು ಪ್ರತಿನಿಧಿಸುವ ಎರಡು ಸಂಘಟನೆಗಳನ್ನು ಸಹ ಸಿಸಿಜಿಗೆ ಸೇರಿಸಲಾಯಿತು.
ಸಭೆಯಲ್ಲಿ ಸಿಬಿಐಸಿ ಮತ್ತು ಅದರ ಪ್ರಾದೇಶಿಕ ಕಚೇರಿಗಳ ಹಿರಿಯ ಅಧಿಕಾರಿಗಳು ಹಾಗೂ ಆರ್ ಬಿ ಐ, ಡಿ ಜಿ ಎಫ್ ಟಿ, ಭಾರತೀಯ ಮಾನಕ ಬ್ಯೂರೋ (ಬಿಐಎಸ್), ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ), ಅಂಚೆ ಇಲಾಖೆ, ಹಡಗು ಸಚಿವಾಲಯ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾಣಿ ಕ್ವಾರಂಟೈನ್ ಇಲಾಖೆ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿ ಡಿ ಎಸ್ ಸಿ ಒ) ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ ಎಸ್ ಎಸ್ ಎ ಐ) ಪ್ರತಿನಿಧಿಗಳು ಭಾಗವಹಿಸಿದ್ದರು.
ಎರಡು ದಿನಗಳ ಈ ಸಭೆಯಲ್ಲಿ ಒಟ್ಟು 181 ಕಾರ್ಯಸೂಚಿ ಅಂಶಗಳನ್ನು ಪಾಲುದಾರರು ಪ್ರಾಯೋಜಿಸಿದ್ದರು ಮತ್ತು ಅವುಗಳ ಬಗ್ಗೆ ಚರ್ಚಿಸಲಾಯಿತು.
ಸಂವಾದದ ಸಮಯದಲ್ಲಿ, ಶ್ರೀ ಸುರ್ಜಿತ್ ಭುಜಬಲ್ ಅವರು ವ್ಯಾಪಾರ ಸೌಲಭ್ಯವನ್ನು ಹೆಚ್ಚಿಸುವಲ್ಲಿ ಮತ್ತು ವ್ಯಾಪಾರ ಮಾಡಲು ಸುಲಭ ವಾತಾವರಣವನ್ನು ಉತ್ತೇಜಿಸುವಲ್ಲಿ ಸಿಸಿಜಿ ವಹಿಸಿದ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ಸಿಸಿಜಿ ನೀತಿ-ಮಟ್ಟದಲ್ಲಿ ಮತ್ತು ಕಾರ್ಯಾಚರಣೆಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ಸ್ಪಂದಿಸುವ ಆಡಳಿತದ ಮಾದರಿ ಎಂದು ಸಾಬೀತಾಗಿದೆ ಎಂದು ಅವರು ಹೇಳಿದರು. ನವೆಂಬರ್ 2024 ರಲ್ಲಿ ನಡೆದ ಹಿಂದಿನ ಸಿಸಿಜಿ ಸಭೆಯನ್ನು ಅವರು ಉಲ್ಲೇಖಿಸಿ, ಈ ಸಮಯದಲ್ಲಿ 136 ಕಾರ್ಯಸೂಚಿ ಅಂಶಗಳಲ್ಲಿ 116 ನೀತಿ ಸುತ್ತೋಲೆಗಳು, ಕಾರ್ಯಾಚರಣೆಯ ಸೂಚನೆಗಳು ಮತ್ತು ಕಸ್ಟಮ್ಸ್ ಕ್ಲಿಯರೆನ್ಸ್ ಗೇಟ್‌ವೇ ಆದ ICEGATE ಅಡಿಯಲ್ಲಿ ಹೊಸ ಉಪವ್ಯವಸ್ಥೆಗಳ ಅಭಿವೃದ್ಧಿಯ ಮೂಲಕ ಯಶಸ್ವಿಯಾಗಿ ಪರಿಹರಿಸಲಾಗಿದೆ ಎಂದು ಹೇಳಿದರು.
ವ್ಯಾಪಾರ ಮೂಲಸೌಕರ್ಯ, ನೀತಿಗಳು ಮತ್ತು ನಿಯಂತ್ರಕ ಚೌಕಟ್ಟಿನ ಕುರಿತು ಬಹು-ಸಚಿವಾಲಯದ ಪ್ರಯತ್ನಗಳನ್ನು ಸಂಘಟಿಸುವ ರಾಷ್ಟ್ರೀಯ ವ್ಯಾಪಾರ ಸೌಲಭ್ಯ ಕ್ರಿಯಾ ಯೋಜನೆ (ಎನ್ ಟಿ ಎಫ್ ಎ ಪಿ) ಯೊಂದಿಗೆ ಸಿಸಿಜಿಯ ಕೆಲಸದ ಹೊಂದಾಣಿಕೆಯನ್ನು ಶ್ರೀ ಭುಜಬಲ್ ಎತ್ತಿ ತೋರಿಸಿದರು.
ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು:
ಸೀಮಿತ ಬಂದರು ಸಂಗ್ರಹಣಾ ಮೂಲಸೌಕರ್ಯದ ಅತ್ಯುತ್ತಮ ಬಳಕೆಯನ್ನು ಸಕ್ರಿಯಗೊಳಿಸಲು ಬೃಹತ್ ದ್ರವ ಸರಕುಗಳ ಬಿಡುಗಡೆಗೆ ಹೊಸ ನೀತಿಯ ಪರಿಚಯ.
ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಮಾರಾಟವಾಗುವ ಆಭರಣಗಳ ಮೇಲಿನ ಸುಂಕದ ಕೊರತೆ ಹಕ್ಕುಗಳಿಗಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್ ಒ ಪಿ) ಅಭಿವೃದ್ಧಿ.
ವ್ಯಾಪಾರ ಸೌಲಭ್ಯವನ್ನು ಹೆಚ್ಚಿಸಲು ಅಧಿಕೃತ ಆರ್ಥಿಕ ನಿರ್ವಾಹಕ (ಎಇಒ) ಚೌಕಟ್ಟಿನ ಪರಿಶೀಲನೆ.
ಸಣ್ಣ ರಫ್ತುದಾರರನ್ನು ಬೆಂಬಲಿಸಲು ಸಿಬಿಐಸಿ ಮತ್ತು ಅಂಚೆ ಇಲಾಖೆಯ ನಡುವಿನ ಸಹಯೋಗವನ್ನು ಬಲಪಡಿಸುವುದು.
ನಿಯಂತ್ರಕ ಅನುಸರಣೆ ಪ್ರಕ್ರಿಯೆಗಳನ್ನು ಸರಳಗೊಳಿಸಲು ಇ-ಬ್ಯಾಂಕ್ ಗ್ಯಾರಂಟಿ ಮಾಡ್ಯೂಲ್ ನ ಸಂಪೂರ್ಣ ಬದಲಾವಣೆ.
ನಿರ್ದಿಷ್ಟ ವ್ಯಾಪಾರ ಕಾಳಜಿಗಳನ್ನು ನಿರ್ಣಯಿಸಲು ಮತ್ತು ಹೆಚ್ಚಿನ ಸೌಲಭ್ಯಕ್ಕಾಗಿ ಅವಕಾಶಗಳನ್ನು ಗುರುತಿಸಲು ವಲಯ ಮಟ್ಟದ ಅಧ್ಯಯನಗಳನ್ನು ನಡೆಸಲು ಒಪ್ಪಂದ.
ಸಭೆಯಲ್ಲಿ ಹಲವಾರು ವಲಯ-ನಿರ್ದಿಷ್ಟ ಪ್ರಸ್ತುತಿಗಳನ್ನು ಸಹ ಮಾಡಲಾಯಿತು. ರತ್ನಗಳು ಮತ್ತು ಆಭರಣ ರಫ್ತು ಉತ್ತೇಜನಾ ಮಂಡಳಿಯು ಪ್ರಯೋಗಾಲಯ ನಿರ್ಮಿತ ವಜ್ರ ವಲಯದ ಬಗ್ಗೆ ಒಳನೋಟಗಳನ್ನು ಪ್ರಸ್ತುತಪಡಿಸಿತು. ಭಾರತೀಯ ಮಾನಕ ಬ್ಯೂರೋ (ಬಿಐಎಸ್) ಗುಣಮಟ್ಟ ನಿಯಂತ್ರಣ ಆದೇಶಗಳ (ಕ್ಯೂಸಿಒ) ಚೌಕಟ್ಟನ್ನು ವಿವರಿಸಿತು ಮತ್ತು ಅನುಸರಣೆಯ ಕುರಿತು ವ್ಯಾಪಾರ ಪಾಲುದಾರರಿಗೆ ಮಾರ್ಗದರ್ಶನ ನೀಡಿತು. ಅಂಚೆ ಇಲಾಖೆಯು ಡಿಒಪಿ ಮತ್ತು ಸಿಬಿಐಸಿ ಜಂಟಿಯಾಗಿ ಜಾರಿಗೆ ತಂದ ಸಣ್ಣ ರಫ್ತುದಾರರನ್ನು ಬೆಂಬಲಿಸುವ ರಾಷ್ಟ್ರೀಯ ಉಪಕ್ರಮವಾದ ಡಾಕ್ ಘರ್ ನಿರ್ಯಾತ್ ಕೇಂದ್ರವು ಮಾಡಿದ ಕೆಲಸವನ್ನು ಪ್ರದರ್ಶಿಸಿತು. ಹೆಚ್ಚುವರಿಯಾಗಿ, ಜೆ ಎನ್ ಪಿ ಟಿ ಅಧ್ಯಕ್ಷರು ಮಹಾರಾಷ್ಟ್ರದ ವಾಧ್ವಾನ್ ನಲ್ಲಿ ಪ್ರಸ್ತಾವಿತ ಮೆಗಾ-ಪೋರ್ಟ್ ಯೋಜನೆಯ ಕುರಿತು ಇತ್ತೀಚಿನ ಮಾಹಿತಿ ಒದಗಿಸಿದರು.
19 ನೇ ಸಿಸಿಜಿ ಸಭೆಯು, ಪಾಲುದಾರರ ನಿರಂತರ ತೊಡಗಿಸಿಕೊಳ್ಳುವಿಕೆ, ನೀತಿ ಹೊಣೆಗಾರಿಕೆ ಮತ್ತು ಭಾರತದ ಅಂತರರಾಷ್ಟ್ರೀಯ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸುವ ಸಿಬಿಐಸಿಯ ಬದ್ಧತೆಯನ್ನು ಪುನರುಚ್ಚರಿಸಿತು.