advertise here

Search

ನಿರ್ದೇಶಕ ಅನಿಶ್ ಕಿಡ್ನಾಪ್ ಕೇಸ್: ನಟಿ ಐಶ್ವರ್ಯಾ ಸೇರಿ 11 ಮಂದಿ ಅರೆಸ್ಟ್! ಏನಿದು ಅಸಲಿ ಕಥೆ?

sandalwood director anish kidnap

ಬೆಂಗಳೂರು: ರಾಜಧಾನಿಯಲ್ಲಿ ಸಿನಿಮೀಯ ಶೈಲಿಯ ಅಪಹರಣವೊಂದು ನಡೆದಿದ್ದು, ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಿರ್ದೇಶಕರೊಬ್ಬರನ್ನು ಹಣಕಾಸಿನ ವಿಚಾರಕ್ಕಾಗಿ ಅಪಹರಿಸಿ, ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ನಟಿ ಸೇರಿದಂತೆ ಒಟ್ಟು 11 ಆರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಕ್ರೌಡ್ ಫಂಡೆಡ್ (Crowd Funded) ಮೂಲಕ ‘ಜೀವನದ ಭಾಷೆ’ ಎಂಬ ಸೈಕೋ ಥ್ರಿಲ್ಲರ್ ಸಿನಿಮಾ ನಿರ್ದೇಶಿಸಿದ್ದ ಟಿ.ಎ. ಅನಿಶ್ ಅವರು ಈ ಕೃತ್ಯದ ಸಂತ್ರಸ್ತರು. ಸಿನಿಮಾ ನಿರ್ಮಾಣವಾಗಿ ದೀರ್ಘಕಾಲ ಕಳೆದಿದ್ದರೂ ಬಿಡುಗಡೆಯಾಗದ ಕಾರಣ, ಹೂಡಿಕೆದಾರರು (Investors) ಮತ್ತು ಚಿತ್ರತಂಡದ ನಡುವೆ ತೀವ್ರ ಮನಸ್ತಾಪ ಉಂಟಾಗಿತ್ತು. ಹಣ ಹಿಂತಿರುಗಿಸುವ ವಿಚಾರವಾಗಿ ಇವರ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಹನಿಟ್ರ್ಯಾಪ್ ಮಾದರಿಯಲ್ಲಿ ಕಿಡ್ನಾಪ್!

ನಿರ್ದೇಶಕ ಅನಿಶ್ ಇತ್ತೀಚೆಗೆ ತಮ್ಮ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಈ ವಿಚಾರವನ್ನು ಅವರು ಇಂದಿರಾನಗರದಲ್ಲಿ ವಾಸವಿದ್ದ ನಟಿಯೊಬ್ಬರ ಬಳಿ ಹಂಚಿಕೊಂಡಿದ್ದರು. ಆದರೆ, ಈ ನಟಿಯೇ ಆರೋಪಿಗಳೊಂದಿಗೆ ಕೈಜೋಡಿಸಿ ನಿರ್ದೇಶಕನನ್ನು ಬಲೆಗೆ ಬೀಳಿಸಿದ್ದಾರೆ. ಕಾರು ಮಾರಾಟದ ನೆಪದಲ್ಲಿ ಅನಿಶ್ ಅವರನ್ನು ಕರೆಸಿಕೊಂಡ ಆರೋಪಿಗಳು, ಅಲ್ಲಿಂದ ಅವರನ್ನು ಅಪಹರಿಸಿದ್ದಾರೆ.

ಕಿಡ್ನಾಪ್ ಮಾಡಿದ ಆರೋಪಿಗಳು ನಿರ್ದೇಶಕನನ್ನು ಬ್ಯಾಡರಹಳ್ಳಿ ಸಮೀಪದ ಮನೆಯೊಂದರಲ್ಲಿ ಇರಿಸಿ ಗೃಹಬಂಧನದಲ್ಲಿಟ್ಟಿದ್ದರು. ಅಲ್ಲಿ ಅನಿಶ್ ಅವರ ಮೇಲೆ ಕ್ರಿಕೆಟ್ ಬ್ಯಾಟ್ ಮತ್ತು ಹಾಕಿ ಸ್ಟಿಕ್‌ಗಳಿಂದ ಮನಬಂದಂತೆ ಹಲ್ಲೆ ನಡೆಸಲಾಗಿದೆ. ಅಷ್ಟಕ್ಕೇ ನಿಲ್ಲದ ಆರೋಪಿಗಳು, ನಂತರ ಅವರನ್ನು ನೆಲಮಂಗಲ ಸಮೀಪದ ಮಂದಾರಗಿರಿ ಬೆಟ್ಟಕ್ಕೆ ಕರೆದೊಯ್ದು ಅಲ್ಲಿಯೂ ಪೈಶಾಚಿಕವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಸಂತ್ರಸ್ತನ ಬಳಿಯಿದ್ದ ಚಿನ್ನದ ಆಭರಣ ಹಾಗೂ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ.

ALSO READ :  ವಿಧಾನಸೌಧಕ್ಕೆ ನಿರ್ಬಂಧ ಹೇರಿದ್ರೂ ಮಾದ್ಯಮಗಳೇಕೆ ಮೌನ? ನಿದ್ರೆಯಲ್ಲಿದೆಯಾ ಸಂಘ-ಕ್ಲಬ್..

ಪೊಲೀಸರ ಕಾರ್ಯಾಚರಣೆ ಮತ್ತು ಬಂಧನ

ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಲಭ್ಯವಾದ ಖಚಿತ ಮಾಹಿತಿ ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ನಿರ್ದೇಶಕ ಅನಿಶ್ ಅವರನ್ನು ರಕ್ಷಿಸಿದ್ದಾರೆ.

ಆಗ್ನೇಯ ವಿಭಾಗದ ಡಿಸಿಪಿ ಸುಜೀತಾ ಹೇಳಿಕೆ: “ದಿನಾಂಕ 11ರಂದು ಆಸ್ಪತ್ರೆಯಿಂದ ಎಂಎಲ್‌ಸಿ (MLC) ವರದಿ ಬಂದಿತ್ತು. ಸಂತ್ರಸ್ತನ ಕೈಕಾಲುಗಳ ಮೇಲೆ ತೀವ್ರ ಗಾಯಗಳಾಗಿದ್ದವು. ಹಣಕಾಸಿನ ವಿಚಾರವಾಗಿ ಪರಿಚಯಸ್ಥರೇ ಈ ಕೃತ್ಯ ಎಸಗಿದ್ದಾರೆ. ನಿರ್ದೇಶಕನನ್ನು ಕರೆಸಿಕೊಳ್ಳುವಲ್ಲಿ ನಟಿಯ ಪಾತ್ರವಿದ್ದು, ಸದ್ಯ ಒಬ್ಬ ಯುವತಿ ಸೇರಿ 11 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ.”

ಇದನ್ನೂ ಓದಿ | ಯಾದಗಿರಿ ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್: ಡೊಂಗಿ ಸ್ವಾಮೀಜಿಗಳ ಕರಾಳ ಮುಖ!

ತನಿಖೆಯಲ್ಲಿ ಬಯಲಾದ ಅಂಶಗಳು:

ಸಿನಿಮಾ ರಿಲೀಸ್ ಆಗದ ಕಾರಣ ಹೂಡಿಕೆದಾರರು ಒತ್ತಡ ಹೇರುತ್ತಿದ್ದರು. ಕಿಡ್ನಾಪ್ ಮಾಡಲು ಅನಿಶ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದೇ ಈ ನಟಿ ಎಂದು ತಿಳಿದುಬಂದಿದೆ. ಹಲ್ಲೆಯ ವೇಳೆ ನಿರ್ದೇಶಕರಿಂದ ಹಣ ಮತ್ತು ಚಿನ್ನವನ್ನೂ ಕಸಿದುಕೊಳ್ಳಲಾಗಿದೆ.

ಸದ್ಯ ಆಡುಗೋಡಿ ಪೊಲೀಸರು ಬಂಧಿತ 11 ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.


Scroll to Top