advertise here

Search

ಟಿಆರ್‌ಪಿ ಕುಸಿತಕ್ಕೆ ಸಿಬ್ಬಂದಿಯ ವೇತನ ಕಡಿತ, ನಾಯಕತ್ವದ ವೈಫಲ್ಯಕ್ಕೆ ಮ್ಯಾನೇಜ್ಮೆಂಟ್ ಕೆಂಗಣ್ಣು!

suvarna news trp crisis

ಒಂದು ಕಾಲದ ನಂಬರ್ ಒನ್ ಚಾನೆಲ್, ಇಂದು ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ. ಸುವರ್ಣ ನ್ಯೂಸ್ ಇತಿಹಾಸದಲ್ಲೇ ಇಂದಿನಷ್ಟು ಕಳಪೆ ಪ್ರದರ್ಶನವನ್ನು ಮ್ಯಾನೇಜ್ಮೆಂಟ್ ಕಂಡಿರಲಿಲ್ಲ. ಏಷ್ಯಾನೆಟ್ (Asianet) ಮತ್ತು ರಾಜೀವ್ ಚಂದ್ರಶೇಖರ್ ಅವರ ನೇತೃತ್ವದ ಆಡಳಿತ ಮಂಡಳಿಗೆ ಇಂದು ಚಾನೆಲ್‌ನ ಟಿಆರ್‌ಪಿ ಕುಸಿತವು ನುಂಗಲಾರದ ತುಪ್ಪವಾಗಿದೆ. ಈ ವೈಫಲ್ಯದ ಹೊಣೆಯನ್ನು ಹೊತ್ತುಕೊಳ್ಳಬೇಕಾದವರು ಯಾರು? ಎಂಬ ಪ್ರಶ್ನೆ ಇಂದು ಚಾನೆಲ್‌ನ ಪ್ರತಿಯೊಬ್ಬ ಸಿಬ್ಬಂದಿಯ ಮನದಲ್ಲಿ ಮೂಡಿದೆ. ಅದರ ಪರಿಣಾಮವೇ, ಇಂದು ಸಿಬ್ಬಂದಿಗಳ ವೇತನದಲ್ಲಿ ಕಡಿತಗೊಳಿಸಿರುವ 20% ಕಟ್!

ಯಾವುದೇ ಸಮರ್ಪಕ ಕಾರಣ ನೀಡದೆ, ಕಳೆದ ತಿಂಗಳು ಸಿಬ್ಬಂದಿಗಳ ವೇತನದಲ್ಲಿ 20% ಕಡಿತ ಮಾಡಲಾಗಿದೆ ಎಂದು ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳೇ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, “ಪರ್ಫಾರ್ಮೆನ್ಸ್ ಸುಧಾರಿಸದಿದ್ದರೆ ಮುಂದಿನ ತಿಂಗಳು 50% ಕಡಿತವಾದರೂ ಆಶ್ಚರ್ಯವಿಲ್ಲ” ಎಂದು ಮ್ಯಾನೇಜ್ಮೆಂಟ್ ಎಚ್ಚರಿಕೆಯನ್ನು ನೀಡಿದೆ ಎನ್ನಲಾಗುತ್ತಿದೆ. ಇದು ಇನ್‌ಡೈರೆಕ್ಟ್ ಆಗಿ ಚಾನೆಲ್‌ನ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಅವರಿಗೆ ನೀಡಿರುವ ಗಂಭೀರ ಎಚ್ಚರಿಕೆ ಎಂಬುದು ಎಲ್ಲರಿಗೂ ವೇದ್ಯ. ಚಾನೆಲ್‌ನ ಸಂಕಷ್ಟಕ್ಕೆ ಸಿಬ್ಬಂದಿ ಬಲಿಯಾಗುತ್ತಿರುವುದು ದುರದೃಷ್ಟಕರ.

ALSO READ :  ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಅಂತ್ಯ: ಹೊಸ ಸರ್ಕಾರ ರಚನೆಗೆ ಸಿದ್ಧತೆ

ಅಜಿತ್ ಹನುಮಕ್ಕನವರ್ ವೈಫಲ್ಯಕ್ಕೆ ಕಾರಣವೇನು?

ಟಿಆರ್‌ಪಿ ರೇಸ್‌ನಲ್ಲಿ ‘ನ್ಯೂಸ್ ಫಸ್ಟ್’ ಹಾಗೂ ಇತರ ಚಾನೆಲ್‌ಗಳಿಗಿಂತ ಹಿಂದೆ ಬಿದ್ದಿರುವುದು ಮ್ಯಾನೇಜ್‌ಮೆಂಟ್‌ಗೆ ತೀವ್ರ ಬೇಸರ ತಂದಿದೆ. ಅಜಿತ್ ಹನುಮಕ್ಕನವರ್ ಅವರ ನೇತೃತ್ವದಲ್ಲಿ ಚಾನೆಲ್ ತನ್ನ ಪಥವನ್ನು ತಪ್ಪಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸೌಜನ್ಯ ಕೇಸ್‌ನಲ್ಲಿನ ಏಕಪಕ್ಷೀಯ ನಿಲುವು, ರಾಜಕೀಯವಾಗಿ ಒಂದು ಬಲಪಂಥೀಯ ಸಿದ್ಧಾಂತಕ್ಕೆ ಅತಿಯಾಗಿ ಬದ್ಧವಾಗಿರುವುದು, ಮತ್ತು ಸಾರ್ವಜನಿಕರಿಗೆ ಬೇಕಾದ ವಿಷಯಗಳಿಗಿಂತ ಬೇರೆಯದೇ ವಿಚಾರಗಳಿಗೆ ಆದ್ಯತೆ ನೀಡಿರುವುದು, ಈ ಎಲ್ಲವೂ ಟಿಆರ್‌ಪಿ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ. ಮ್ಯಾನೇಜ್ಮೆಂಟ್ ಇವರನ್ನು ಬದಲಾಯಿಸಲು ಸಿದ್ಧವಿದ್ದರೂ, ಅವರು ಎಲೆಕ್ಷನ್ ಅಥವಾ ಬೇರೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆಂತರಿಕ ಕಲಹ ಮತ್ತು ಮೀಡಿಯಾ ಟೆಕ್ ಹಗರಣದ ನೆರಳು

ಚಾನೆಲ್‌ನೊಳಗೆ ಸದ್ಯ ನಡೆಯುತ್ತಿರುವುದು ಬರಿ ವೇತನ ಕಡಿತವಲ್ಲ, ಇದು ಆಂತರಿಕ ಅಶಾಂತಿಯ ಸ್ಫೋಟ. ವರದಿಗಾರರನ್ನು ಮತ್ತು ಎಡಿಟರ್‌ಗಳನ್ನು ಬದಿಗಿರಿಸಿ, ತಮ್ಮದೇ ಆದ ವಲಯವನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನಗಳು ಚಾನೆಲ್‌ನ ಕೆಲಸದ ವಾತಾವರಣವನ್ನು ಹಾಳುಮಾಡಿದೆ. ಅದರಲ್ಲೂ ಮೀಡಿಯಾ ಟೆಕ್ (MediaTech) ಕಂಪನಿಯ ಹಗರಣದ ವಿಚಾರವು ಏಷಿಯಾನೆಟ್ ಮ್ಯಾನೇಜ್‌ಮೆಂಟ್‌ಗೆ ಭಾರೀ ಡ್ಯಾಮೇಜ್ ತಂದಿದೆ ಎಂದು ತಿಳಿದುಬಂದಿದೆ. ಇದನ್ನು ನಮ್ಮ ಫ್ಲ್ಯಾಶ್‌ನ್ಯೂಸ್‌ ವರದಿ ಮಾಡುತ್ತಲೇ ಬಂದಿದೆ. ಈ ಹಗರಣವು ಚಾನೆಲ್‌ನ ವಿಶ್ವಾಸಾರ್ಹತೆಯನ್ನು ಬುಡಮೇಲು ಮಾಡಿದೆ.

ಇದನ್ನೂ ಓದಿ | “ಸುವರ್ಣ ನ್ಯೂಸ್‌” ನಲ್ಲಿ ಬದಲಾಗ್ತಿದೆಯೇ “ಹೊಣೆಗಾರಿಕೆ”ಯ ಹೆಗಲು..! ಅಜಿತ್‌ ಹನುಮಕ್ಕನವರ್‌ ಸ್ಥಾನಕ್ಕೆ ನೂತನ “ಸಾರಥಿ”…!

ಒಟ್ಟಾರೆಯಾಗಿ, ಸುವರ್ಣ ನ್ಯೂಸ್ ಇಂದು ಹಾದಿ ತಪ್ಪಿದ ಹಡಗಿನಂತಾಗಿದೆ. ಸಿಬ್ಬಂದಿಗಳು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ, ಮ್ಯಾನೇಜ್ಮೆಂಟ್ ಅಸಮಾಧಾನಗೊಂಡಿದೆ, ಆದರೆ ಈ ಅಧೋಗತಿಗೆ ಕಾರಣರಾದವರು ಮಾತ್ರ ಗದ್ದುಗೆಯನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಸುವರ್ಣ ನ್ಯೂಸ್ ತನ್ನ ಹಳೆಯ ವೈಭವವನ್ನು ಮರಳಿ ಪಡೆಯಬೇಕಾದರೆ, ಕೇವಲ ಸಿಬ್ಬಂದಿಗಳ ವೇತನ ಕಡಿತದಿಂದ ಸಾಧ್ಯವಿಲ್ಲ. ಬದಲಾಗಿ, ನಾಯಕತ್ವದ ಬದಲಾವಣೆ ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಮರಳುವ ಧೈರ್ಯವನ್ನು ಆಡಳಿತ ಮಂಡಳಿ ತೋರಿಸಬೇಕಿದೆ.


Scroll to Top