“ಕ್ಯಾಮೆರಾಮನ್‌” ಗಳ ಸಾವೆಂದರೆ ಅಷ್ಟೊಂದು “ನಿಕೃಷ್ಟ”ನಾ..?! ಕನಿಷ್ಟ ಸೌಜನ್ಯಕ್ಕೂ “ಸಂತಾಪ-ಸಹಾನುಭೂತಿ” ಬೇಡ್ವಾ..!?


ಕನ್ನಡದ ನ್ಯೂಸ್‌ ಚಾನೆಲ್‌ ಗಳಲ್ಲಿ ಕೆಲಸ ಮಾಡುವ ರಿಪೋರ್ಟರ್‌ ಗಳಿಗೆ ಇರೋ ಬೆಲೆಯಲ್ಲಿ ಅರ್ಧದಷ್ಟು ಬೇಡ..ಕಾಲು ಪರ್ಸೆಂಟ್‌ ನಷ್ಟು ಬೆಲೆಯೂ ಕ್ಯಾಮೆರಾಮನ್‌ ಗಳಿಗಿಲ್ಲ ಎನ್ನೋದು ಕಟು ವಾಸ್ತವ. ಸುದ್ದಿ ಚಾನೆಲ್‌ ಗಳಲ್ಲಿ ರಿಪೋರ್ಟರ್‌ ಮು‍ಖ್ಯನೋ.. ? ಕ್ಯಾಮೆರಾಮನ್‌ ಪಾತ್ರ ಮುಖ್ಯವೋ ಎನ್ನುವ ಪ್ರಶ್ನೆ ಸೃಷ್ಟಿಯಾದ್ರೆ ಒಂದು ಕೈ ಕ್ಯಾಮೆರಾಮನ್‌ ಗಳದ್ದೇ ಹೆಚ್ಚಿರುತ್ತದೆ ಎನ್ನುವುದು ಕೂಡ ಅಷ್ಟೇ ವಾಸ್ತವ. ಕ್ಯಾಮೆರಾಮನ್‌ ಗಳು ಮನಸು ಮಾಡಿದ್ರೆ ರಿಪೋರ್ಟರ್‌ ಗಳ ಸ್ಟೋರಿ ಆಂಗಲ್‌ ನಲ್ಲೇ ಬದಲಿಸಿಬಿಡುವಷ್ಟು ಕೆಪಾಸಿಟಿ ಇರುವಂತವ್ರು ಎನ್ನುವುದಕ್ಕೆ ನೂರು ನಿದರ್ಶನ ಕೊಡಬಹುದು.ಸರ್ಕಾರಗಳನ್ನೇ ಅಲುಗಾಡಿಸಬಲ್ಲಂತ ಶಕ್ತಿ ಅವರ ಕೈ ಚಳಕ ಮತ್ತು ಸೂಕ್ಷ್ಮಗ್ರಹಿಯ ಕಣ್‌ ನೋಟಕ್ಕಿದೆ ಎನ್ನುವುದನ್ನು ಕೂಡ ಈಗಾಗ್ಲೇ ಪ್ರೂವ್‌ ಆಗಿದೆ.ಇಷ್ಟಾದ್ರೂ ಕ್ಯಾಮೆರಾಮನ್‌ ಗಳನ್ನು ಕೇವಲ ನ್ಯೂಸ್‌ ಕವರೇಜ್‌ ಗೆ ಸೀಮಿತಗೊಳಿಸಿರುವುದು ನಮ್ಮ ನ್ಯೂಸ್‌ ಚಾನೆಲ್‌ ಗಳ ವಿಪರ್ಯಾಸ ಮತ್ತು ದುರಂತವೇ ಸರಿ..

ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ. ನಮ್ಮ ನ್ಯೂಸ್‌ ಚಾನೆಲ್‌ ಗಳಲ್ಲಿ ಹಾಗೂ ಅಲ್ಲಿ ಕೆಲಸ ಮಾಡುವ ರಿಪೋರ್ಟರ್‌ ಗಳಲ್ಲಿ(ಎಲ್ಲರೂ ಎಂದು ಹೇಳೊಕ್ಕೆ ಸಾಧ್ಯವಿಲ್ಲ..ಇಂದಿಗೂ ಕೆಲವು ಹೃದಯವಂತ ರಿಪೋರ್ಟರ್ಸ್‌ ಗಳೂ ನಮ್ಮ ನಡುವಿದ್ದಾರೆ.ಕ್ಯಾಮೆರಾಮನ್‌ ಗಳನ್ನು ಮಾನವೀಯತೆಯಿಂದ ಟ್ರೀಟ್‌ ಮಾಡುವವರೂ ಇದ್ದಾರೆ). ಕ್ಯಾಮೆರಾಮನ್‌ ಗಳನ್ನು ನಿಕೃಷ್ಟವಾಗಿ ನೋಡುವಂಥ ಕೆಟ್ಟ ಮನಸ್ತಿತಿಯಿದೆ.ನಾವೇ ದೊಡ್ಡವರು..ಅವರೆಲ್ಲಾ ನಾವು ಹೇಳಿದಂತೆ ಶೂಟ್‌ ಮಾಡಬೇಕಾದ ಅಡಿಯಾಳುಗಳು ಎಂದು ಭಾವಿಸುವವರಿದ್ದಾರೆ.ಶೂಟ್‌ ಗೆಂದು ಕರೆದೊಯ್ಯುವ ಕ್ಯಾಮೆರಾಮನ್‌ ಗಳನ್ನು ಒಂದೆಡೆ ಬಿಟ್ಟು ತಮ್ಮೆಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳುವ ಮಹಾನ್‌ ಖತರ್ನಾಕ್‌ ಗಳಿಗೇನು ಕಡಿಮೆಯಿಲ್ಲ.ಅವರ ಕೆಲಸದ ಅವಸರದ ನಡುವೆ ನೀಡಲಾದ ಅಸೈನ್ಮೆಂಟ್‌ ಪೂರ್ಣಗೊಳಿಸಿದ್ವೋ..? ಕ್ಯಾಮೆರಾಮನ್‌ ಸ್ಥಿತಿ ಏನಾಗಿದೆಯೋ ಎಂದು ಆಲೋಚಿಸುವ ಗೋಜಿಗೇನೆ ಹೋಗಲ್ಲ..ಈ ಕಾರಣಕ್ಕೇನೆ ಇವತ್ತು ಕ್ಯಾಮೆರಾಮನ್‌ ಗಳು ಮತ್ತು ರಿಪೋರ್ಟರ್‌ ಗಳ ಸಂಬಂಧ ಬಹುತೇಕ ಚಾನೆಲ್‌ ಗಳಲ್ಲಿ ಹಳಸಿ ಹೋಗಿದೆ.ಪರಸ್ಪರರ ವಿರುದ್ದ ಕತ್ತಿ ಮಸೆಯುವಂಥ ದ್ವೇಷ ಹೊಗೆಯಾಡುತ್ತಿದೆ.ನಮ್ಮ ಕೆಲಸಕ್ಕೆ ಬೆಲೆ ಕೊಡೋದ್ರ ಜತೆಗೆ ನಮ್ಮನ್ನೂ ಮನುಷ್ಯರಂತೆ ನೋಡಿ ಎನ್ನೋದೇ ಕ್ಯಾಮೆರಾಮನ್‌ ಗಳ ಮನವಿ.

ಬದುಕಿರುವಾಗಲೇ ನಮ್ಮನ್ನು ನಿಕೃಷ್ಟವಾಗಿ ನೋಡುವ ನಮ್ಮ ಸಂಸ್ಥೆಗಳು ಹಾಗೂ ರಿಪೋರ್ಟರ್‌ ಗಳು ಸತ್ತಾಗ ಒಂದನಿ ಕಣ್ಣೀರು ಹಾಕೋದ್ರ ಮನೆ ಹಾಳಾಗಿ ಹೋಗ್ಲಿ,ಸಹಾನುಭೂತಿಗೆ ಒಂದು ಸಂತಾಪದ ಮಾತನ್ನಾಡುವುದಿಲ್ಲ ಬಿಡಿ ಸಾರ್..ನಾವು ಆ ಚಾನೆಲ್‌ ಗಳಲ್ಲಿ ಕೆಲಸ ಮಾಡುತ್ತಿದ್ದೆವು ಒಂದೇ ಒಂದು ಸೌಜನ್ಯವೂ ಇಲ್ಲದಂತೆ ನಮ್ಮನ್ನು ನೆಗ್ಲೆಕ್ಟ್‌ ಮಾಡಿಬಿಡ್ತಾರೆ ಎಂದು ಅನೇಕ ಕ್ಯಾಮೆರಾಮನ್‌ ಗಳು ನೋವು ತೋಡಿಕೊಳ್ಳೋದನ್ನು ನೋಡಿದ್ರೆ ಅಯ್ಯೋ ಎನಿಸುತ್ತೆ. ಅನೇಕ ವರ್ಷಗಳಿಂದಲೂ ಸುಧೀರ್ಘವಾಗಿ ಕೆಲಸ ಮಾಡುತ್ತಿರುವ ಅದೆಷ್ಟೋ  ಕ್ಯಾಮೆರಾಮನ್‌ ಗಳು ಇವತ್ತಿಗೂ ಟೈಮ್‌ ಲೆಸ್‌ ಆಗಿ ದುಡಿಯುತ್ತಿದ್ದಾರೆ.ಆದರೆ ಸಮಾಜದಲ್ಲಿ ಎಲ್ಲರಂತೆ ಆರಾಮಾಗಿ, ಗೌರವಯುತವಾಗಿ ಬದುಕಲು ಸಾಧ್ಯವಿಲ್ಲದಂಥ ಸಂಬಳ ಕೊಟ್ಟು ಶೋಷಣೆ ಮಾಡುತ್ತಿರುವ ಚಾನೆಲ್‌ ಗಳಿಗೇನು ಕೊರತೆಯಿಲ್ಲ ಬಿಡಿ.

ಕ್ಯಾಮೆರಾಮನ್‌ ಗಳ ಬದುಕುಗಳ ಬಗ್ಗೆ ಹೇಳೊಕ್ಕೆ ಕಾರಣವಿದೆ. ಇತ್ತೀಚೆಗೆ ಸಾವನ್ನಪ್ಪಿದ  ಟಿವಿ9 ಕನ್ನಡದ ಕ್ಯಾಮೆರಾಮನ್‌ ಪ್ರಶಾಂತ್‌ ಕುಲಕರ್ಣಿ ನಿಧನ ಇದಕ್ಕೆಲ್ಲಾ ಕಾರಣ. ಯಾದಗಿರಿ ಜಿಲ್ಲೆಯಲ್ಲಿ ಕೆಲಸ ಮಾಡ್ತಿದ್ದ ಆತ ಬೆಂಗಳೂರು ಕಚೇರಿಗೆ ಶಿಫ್ಟ್‌  ಆಗಿದ್ದ. ಕ್ಯಾಮೆರಾಮನ್‌ ಗಳ ವಲಯದಲ್ಲಷ್ಟೇ ಅಲ್ಲ, ಎಲ್ಲಾ ರಿಪೋರ್ಟರ್‌ ಗಳ ನಡುವೆಯೂ ಸ್ನೇಹಜೀವಿ ಎನಿಸಿಕೊಂಡಿದ್ದ.ಆರೋಗ್ಯ ಸರಿಯಿಲ್ಲದಿದ್ದರೂ ಶಿಫ್ಟ್‌ ಗಳೆನ್ನದೆ ಕೆಲಸ ಮಾಡ್ತಿದ್ದ.ಆತನ ಸ್ಥಿತಿಯ ಬಗ್ಗೆ ಮಾಹಿತಿ ಇದ್ದರೂ ಟಿವಿ9 ಆಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನುವ ಮಾತಿದೆ.ಅದು ಆತನ ವೈಯುಕ್ತಿಕ..ಅದನ್ನು ಚೆನ್ನಾಗಿ ನೋಡಿಕೊಳ್ಳಬೇಕಪ್ಪಾ ಎಂದು ಆಯಕಟ್ಟಿನ ಸ್ಥಳದಲ್ಲಿರುವವರು ಹೇಳಿದ್ರಂತೆ.ಅದನ್ನು ಕೇಳಿ ಬೇಸರಗೊಂಡಿದ್ದ ಆತ ತನ್ನ ನೋವನ್ನು ಸಹದ್ಯೋಗಿಗಳ ಬಳಿ ಹೇಳಿಕೊಂಡಿದ್ನಂತೆ.

ALSO READ :  "ರಿಪಬ್ಲಿಕ್‌ ಕನ್ನಡ"ಕ್ಕೆ ಹಿರಿಯ ಪತ್ರಕರ್ತ ಶಿವಶಂಕರ್ ಎಂಟ್ರಿ.. ಗರಿಗೆದರಿದ “ಮರುಹುಟ್ಟಿ”ನ ನಿರೀಕ್ಷೆ..

ಜಾಂಡೀಸ್‌ ಸೇರಿದಂತೆ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದ ಆತ ಯಾದಗಿರಿಯಿಂದ ಬೆಂಗಳೂರಿಗೆ ಬರುವಾಗ ಕುಟುಂಬದ ಸಮ್ಮುಖದಲ್ಲೇ ಅಸ್ವಸ್ಥನಾಗಿದ್ದಾನೆ.ತಕ್ಷಣಕ್ಕೆ ಆಸ್ಪತ್ರೆಗೆ ಸೇರಿಸುವ ಪ್ರಯತ್ನಗಳಾದ್ರೂ ಆತ ಬದುಕುಳಿಯಲಿಲ್ಲ.ಈ ವರ್ತಮಾನ ಚಾನೆಲ್‌ ನ ಹೆಡ್‌ ಆಫೀಸ್‌ ಗೆ ನೀಡ್ತಿದ್ದಂತೆ ಪಾಪ,ಆತನೊಂದಿಗೆ ಆತ್ಮೀಯವಾಗಿದ್ದ ಕ್ಯಾಮೆರಾಮನ್‌ ಗಳು ಕಣ್ಣೀರಾಗಿದ್ದಾರೆ.ಕೆಲ ರಿಪೋರ್ಟರ್‌ ಗಳು ಸಾಂತ್ವನ-ಸಂತಾಪ ವ್ಯಕ್ತಪಡಿಸಿದ್ದಾರೆ.ಆದ್ರೆ ದುರಂತ ಏನ್‌ ಗೊತ್ತಾ.. ಆಯಕಟ್ಟಿನ ಹುದ್ದೆಗಳಲ್ಲಿರುವ ಕೆಲವರು ಹೌದಾ..ಆತನ ಆಯಸ್ಸು ಅಷ್ಟೇ ಇತ್ತು ಅನ್ಸುತ್ತೆ..ಹೋಗ್ಲಿ ಬಿಡಿ..ಒಂದು ಎವಿ ಮಾಡಿಸಿ, ಬುಲೆಟಿನ್‌ ನಲ್ಲಿ ಓಡಿಸಿಬಿಡಿ ಎಂದ್ರಂತೆ.. ಇದನ್ನು ಅಲ್ಲೇ ಇದ್ದು ಕೇಳಿಸಿಕೊಂಡ ಕ್ಯಾಮೆರಾಮನ್‌ ಗಳು ಹಾಗೂ ಡೆಸ್ಕ್ ಸಿಬ್ಬಂದಿಗೆ ಕೆಂಡದಂಥ ಕೋಪ ಬಂದಿದೆ.ಥೂ ನಿಮ್‌ ಜನ್ಮಕ್ಕಿಷ್ಟು ಎಂದು ಶಾಪ ಹಾಕಿಕೊಂಡಿದ್ದಾರೆ. ಆಂಕರ್‌ ಗಳು ವಿಷಾದದ ದ್ವನಿಯಲ್ಲಿ ಸುದ್ದಿ ಓದಿದ್ದಾರೆ. ದಿನದ ಒಂದಷ್ಟು  ಬುಲೆಟಿನ್‌ ಗಳಲ್ಲಿ ಅದು ಪ್ರಸಾರವಾಯ್ತು..ನಂತರ ಸಾಕು ಬಿಡ್ರಿ..ಬೇರೆಯದನ್ನು ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.. ಆಗಲೇ ತನ್ನ  ಸಂಸ್ಥೆ ಎಂದು ತಲೆ ಮೇಲೆ ಹೊತ್ತುಕೊಂಡು ಕೆಲಸ ಮಾಡುವ ಅದೆಷ್ಟೋ ಮಾದ್ಯಮಮಿತ್ರರಿಗೆ ಕ್ಯಾಮೆರಾಮನ್‌ ನಂತೆ ನಮ್ಮ ಪರಿಸ್ತಿತಿನೂ ಹೀಗೆಯೇ ಆಗುತ್ತಾ..? ಇವತ್ತು ಅವನಿಗಾಯ್ತು..ನಾಳೆ ನಮಗೂ ಹೀಗೆನಾ..? ಎಂದು ಮಾತ್ನಾಡಿಕೊಂಡಿದ್ದಾರಂತೆ.

ಅಲ್ಲಿ ಕೆಲಸ ಮಾಡುವ ಕೆಲ ಕ್ಯಾಮೆರಾಮನ್‌ ಗಳೇ ಹೇಳುವಂತೆ ಸಂಸ್ಥೆಗೋಸ್ಕರ ದುಡಿಯುತ್ತಿದ್ದ ಒಬ್ಬ ಕ್ಯಾಮೆರಾಮನ್‌ ಸಾವಾಗಿದ್ರೂ ಅವತ್ತು ಇಡೀ ಟಿವಿ9 ಕಚೇರಿಯಲ್ಲಿ ನ್ಯೂಸ್‌ ನಲ್ಲಿ ಅದು ಪ್ರಸಾರವಾಯ್ತೆನ್ನುವುದನ್ನು ಬಿಟ್ಟರೆ ದೊಡ್ಡವರ ಬಾಯಲ್ಲಾಗಲಿ..ಮುಖದಲ್ಲಾಗಲಿ..ಅಯ್ಯೋ ಪಾಪ..ಸಾಯಬಾರದಿತ್ತು.. ಸಾಯುವಂಥ ವಯಸ್ಸಾ ಅದು ಎಂಬ ನೋವಿನ ಮಾತಾಗಲಿ, ವಿಷಾದದ ನುಡಿಯಾಗಲಿ ಬರಲೇ ಇಲ್ವಂತೆ. ಚಾನೆಲ್‌ ನ ನೊಟೀಸ್‌ ಬೋರ್ಡ್‌ ನಲ್ಲಿ ಸೌಜನ್ಯ  ಕ್ಕೂ ಒಂದು ಪ್ರಕಟಣೆ ಇರಲಿಲ್ಲವಂತೆ..ಬಹುತೇಕ ಸಿಬ್ಬಂದಿಗೆ ನಮ್ಮ ಕ್ಯಾಮೆರಾಮನ್‌ ಒಬ್ಬ ಸಾವನ್ನಪ್ಪಿದ್ದಾನೆ ಎನ್ನೋದೇ ತಿಳಿಯಲಿಲ್ಲವಂತೆ.

ಆತನ ಅಗಲಿಕೆಗೆ ಕನಿಷ್ಟಕ್ಕೂ ಶೃದ್ಧಾಂಜಲಿ  ಸಲ್ಲಿಸಲಿಲ್ಲವಂತೆ. ತಮ್ಮ ಚಾನೆಲ್‌ ನ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಒಬ್ಬ ಒಳ್ಳೆಯ ಹಾಗೂ ಸಹೃದಯದ  ಕ್ಯಾಮೆರಾ ಮನ್‌ ನಮ್ಮನ್ನೆಲ್ಲಾ ಅಗಲಿದ್ದಾನೆ ಎನ್ನುವ ನೋವು ದೊಡ್ಡವರೆನಿಸಿಕೊಂಡ ಬಹುತೇಕರ ಮುಖದಲ್ಲಿ ಇರಲೇ ಇಲ್ವಂತೆ..!ಕಾಟಾಚಾರಕ್ಕೆ ಎನ್ನುವಂತೆ  ಆತನ ಕುಟುಂಬದ ಸದಸ್ಯರನ್ನು ಸಂಪರ್ಕಿಸಲಾಯಿತು ಎನ್ನಲಾಗಿದೆ. ಅವನ ದುಡಿಮೆಯ ಉಳಿತಾಯದ ಒಂದಷ್ಟು ಹಣ ಕುಟುಂಬದ ಕೈ ಸೇರಲೇಬೇಕು ಸೇರುತ್ತದೆ.ಆದರೆ ಮ್ಯಾನೇಜ್ಮೆಂಟ್‌ ಎನಿಸಿಕೊಂಡವರು ಕ್ಯಾಮೆರಾಮನ್‌ ಕುಟುಂಬಕ್ಕೆ ಮಾನವೀಯತೆ ನೆಲೆಯಲ್ಲಿ ಏನ್‌ ಮಾಡಬೇಕೂ ಅದನ್ನು ಕೊಟ್ಟಿದೆಯಾ.? ಗೊತ್ತಿಲ್ಲ. ಕೆಲವರ ಪ್ರಕಾರ ಚಾನೆಲ್‌ ಮುಖೇನ ಪರಿಹಾರದ ರೂಪದಲ್ಲಿ ಏನಾದ್ರೊಂದಷ್ಟು ನೆರವು ಕ್ಯಾಮೆರಾಮನ್‌ ಕುಟುಂಬಕ್ಕೆ ಸಂದಾಯವಾಗಿರುವುದು ಡೌಟ್‌ ಅಂತೆ..! ಕೊಟ್ಟಿದ್ದರೆ ಮನುಷ್ಯರೆನಿಸಿಕೊಳ್ತಾರೆ.. ನಿರ್ಲಕ್ಷ್ಯಿಸಿದಿದ್ರೆ  ಕಟುಕರು ಎನಿಸಿಕೊಳ್ತಾರೆ ಬಿಡಿ..

ಇದು ಕೇವಲ ಟಿವಿ9 ಕ್ಯಾಮೆರಾಮನ್‌ ಒಬ್ಬನ ಸಾವಿನ  ಘಟನೆಯಲ್ಲ..ನ್ಯೂಸ್‌ ಚಾನೆಲ್‌ ಗಳಲ್ಲಿ ಕೆಲಸ ಮಾಡುತ್ತಾ ಸಾವನ್ನಪ್ಪಿದ ಬಹುತೇಕ  ಕ್ಯಾಮೆರಾಮನ್‌ ಗಳ ವಿಷಯದಲ್ಲೂ ಹೀಗೆಯೇ ಆಗ್ತಿದೆ. ತಮ್ಮದೇನೇ ಸಮಸ್ಯೆಗಳಿರಲಿ,ಅದನ್ನೆಲ್ಲಾ ಬದಿಗೊತ್ತಿ ಚಾನೆಲ್‌ ಗಾಗಿ ಕೆಲಸ ಮಾಡುವ ಕ್ಯಾಮೆರಾಮನ್‌ ಗಳ ಬಗ್ಗೆ ಕನಿಷ್ಟ  ಕಾಳಜಿ ಚಾನೆಲ್‌ ಗಳಿಗೆ ಇರಬೇಕಾಗ್ತದೆ.ಅವರ ಒಳಿತು ಕೆಡಕು,ಬೇಕು ಬೇಡಗಳನ್ನು ವಿಚಾರಿಸುವುದರ ಜತೆಗೆ ಅವರ ಆರೋಗ್ಯದ ಬಗ್ಗೆ ಬಗ್ಗೆ ಆಗಾಗ ತಪಾಸಣೆ ನಡೆಸಬೇಕಾದ ಅಗತ್ಯವಿದೆ.ಬಹುಷಃ ಇವತ್ತು ಮಾದ್ಯಮಮಿತ್ರರನ್ನು  ಆರೋಗ್ಯ ತಪಾಸಣೆಗೆ ಒಳಪಡಿಸಿದ್ರೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಅಘಾತಕರ ಮಾಹಿತಿ ಹೊರಬೀಳಬಹುದೇನೋ..? ಡೆಡ್‌ ಲೈನ್‌ ಎನ್ನುವ ಗುಮ್ಮನನ್ನು ಬಿಟ್ಟು ಚಾನೆಲ್‌ ಸಿಬ್ಬಂದಿಯನ್ನ   ಸದಾ ಒತ್ತಡದಲ್ಲಿ  ಕೆಲಸ ಮಾಡುವಂತೆ ಮಾಡುವ ಮ್ಯಾನೇಜ್ಮೆಂಟ್‌ ಗಳೇ ಈ ಸಾವುಗಳಿಗೆ ಎಲ್ಲೋ ಒಂದೆಡೆ ನೈತಿಕ ಹೊಣೆಯಾಗುತ್ತಿವೆಯಾ ಎನಿಸುತ್ತದೆ.

ಇದನ್ನೂ ಓದಿ | ಸ್ಯಾಂಡಲ್‌ವುಡ್ Vs ಮೀಡಿಯಾ – ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಜಯ’ದರ್ಬಾರ್: ಕೆಂಡಾಮಂಡಲವಾದ ಸಿನಿ ಪತ್ರಕರ್ತರು!

ಕ್ಯಾಮೆರಾಮನ್‌ ಗಳಷ್ಟೇ ಅಲ್ಲ ಸದಾ ಒತ್ತಡದಲ್ಲಿ ಕೆಲಸ ಮಾಡುವ ಮಾದ್ಯಮಮಿತ್ರರು ತಮ್ಮನ್ನು ದುಡಿಸಿಕೊಳ್ಳುವ ಮ್ಯಾನೇಜ್ಮೆಂಟ್‌ ಗಳ ಸ್ವಾರ್ಥವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ..ಜೀವ ಇದ್ದರೆ ಜೀವನ ಎನ್ನುವುದನ್ನು ಮನಗಾಣಬೇಕಿದೆ. ಶಿಫ್ಟ್‌ ಗಳನ್ನು ಲೆಕ್ಕಿಸದೆ ರೆಸ್ಟ್‌ ಲೆಸ್‌ ಆಗಿ ಕೆಲಸ ಮಾಡುವವರು ತಮ್ಮ ಆರೋಗ್ಯ-ಆಹಾರ-ಆರಾಮದ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಿದೆ.ನಿರ್ಲಕ್ಷ್ಯ ಮಾಡಿದ್ರೆ ಸಾವಿನ ಮೂಲಕ ಒಂದು ಹೆಡ್‌ ಲೈನೋ..ಬ್ರೇಕಿಂಗೋ..ಎವಿ ಸುದ್ದಿನೋ ಆಗ್ತಿರಾ ಅಷ್ಟೇ..ಆತ್ಮೀಯರೆನಿಸಿಕೊಂಡವರು ನಿಮ್ಮನ್ನು ನೆನೆದು ಕಣ್ಣೀರಾಗಬಹುದು..ಆದ್ರೆ  ಸಹಾನುಭೂತಿ-ಸಂತಾಪ-ವಿಷಾದ ವ್ಯಕ್ತಪಡಿಸಿ ಮ್ಯಾನೇಜ್ಮೆಂಟ್‌ ಗಳು ನಿಮ್ಮನ್ನು ಮರೆತೇ ಬಿಡಬಹುದು..ಹುಷಾರ್…ಆ ಎಚ್ಚರಿಕೆ ನಿಮಗಿರಲಿ..  


Leave a Comment