ಬೆಂಗಳೂರು: ನ್ಯೂಸ್ ಚಾನೆಲ್ ಗಳ ಪರದೆ ಮೇಲೆ ನಿರೂಪಕರು,ರಿಪೋರ್ಟರ್ಸ್ ಗಳು ಚೆನ್ನಾಗಿ ಕಾಣುವುದರಲ್ಲಿ ತೆರೆ ಹಿಂದೆ ಕೆಲಸ ಮಾಡುವ ಮೇಕಪ್ ಮ್ಯಾನ್ ಗಳ ಪಾತ್ರ ನಿರ್ಣಾಯಕವಾಗಿರುತ್ತೆ.ತೆರೆ ಮೇಲೆ ಬಂದವರು ಸುದ್ದಿಯಾಗುತ್ತಾರೆ.ಆದರೆ ತೆರೆ ಹಿಂದೆ ಕೆಲಸ ಮಾಡಿದವರು ಪ್ರಚಲಿತಕ್ಕೆ ಬರುವುದೇ ಇಲ್ಲ.ಬಿಟಿವಿ ನ್ಯೂಸ್ ಚಾನೆಲ್ ನಲ್ಲಿ ಅನೇಕ ವರ್ಷಗಳಿಂದಲೂ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಚೇತನ್ ಎನ್ನುವ ಮಿತಭಾಷಿ,ನಿರುಪದ್ರವಿ,ಅಜಾತಶತೃ ಯುವಕ ಸಣ್ಣ ವಯಸ್ಸಿನಲ್ಲೇ ಶಾಶ್ವತವಾಗಿ ನೇಪಥ್ಯಕ್ಕೆ ಸರಿದಿದ್ದಾನೆ.
ಬಿಟಿವಿ ನ್ಯೂಸ್ ಚಾನೆಲ್ ನಲ್ಲಿ ಹಿರಿಯ ಮೇಕಪ್ ಮ್ಯಾನ್ ಆಗಿದ್ದ ಚೇತನ್ ಗೆ 27 ವರ್ಷ ವಯಸ್ಸಾಗಿತ್ತು. ಬಿಟಿವಿ ನ್ಯೂಸ್ ಚಾನೆಲ್ ಶುರುವಾದಾಗಿನಿಂದಲೂ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಚೇತನ್ ಮಿತಭಾಷಿ.ಯಾರೊಂದಿಗೂ ಮಾತನಾಡದೆ ತನ್ನ ಪಾಡಿಗಿದ್ದುಕೊಂಡು ಕೆಲಸ ಮಾಡುತ್ತಿದ್ದ ನಿರುಪದ್ರವಿ. ತಾನಾಯಿತು ತನ್ನ ಕೆಲಸವಾಯಿತೆನ್ನುವ ನಿರ್ಲಿಪ್ತ ಭಾವನೆಯಲ್ಲಿದ್ದ ಚೇತನ್ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ.ಬೆರೆಯುತ್ತಿರಲಿಲ್ಲ ಎಂದು ಆತನ ಒಡನಾಡಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಚೇತನ್ ಕಳೆದ ನಾಲ್ಕೈದು ದಿನಗಳಿಂದೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ಆಸ್ಪತ್ರೆಗೆ ದಾಖಲಾದ ದಿನದಿಂದಲೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿರಲಿಲ್ಲ. ವೈದ್ಯರ ಆರೈಕೆ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಚೇತನ್ ದಿಡೀರ್ ಸಾವಿಗೆ ಬಿಟಿವಿ ಬಳಗ ದಿಗ್ಬ್ರಾಂತಿ ವ್ಯಕ್ತಪಡಿಸಿದೆ.ಸಣ್ಣ ವಯಸ್ಸಿನಲ್ಲೇ ಅಸುನೀಗಿದ ಚೇತನ್ ಕುಟುಂಬಕ್ಕೆ ಆತನ ಅಗಲಿಕೆ ನೋವನ್ನು ಭರಿಸುವಂಥ ಶಕ್ತಿಯನ್ನು ನೀಡಲಿ.ಆತನ ಸಾವಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಸಂತಾಪ ಸೂಚಿಸುತ್ತದೆ.