ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಹಳಿ ತಪ್ಪಿದ ಆಡಳಿತ..ಹದ್ದುಮೀರಿದ ಅಧಿಕಾರಿಗಳು…ಶಿಕ್ಷಣ ಸಚಿವರ ನಿಷ್ಕಾಳಜಿ..?!
ಬೆಂಗಳೂರು:ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ನಿರ್ಣಾಯಕ ಘಟ್ಟ ಎನಿಸಿಕೊಳ್ಳುತ್ತೆ ಪದವಿಪೂರ್ವ ಶಿಕ್ಷಣ..ಇದರ ನಿರ್ವಹಣೆಗೆಂದೇ ಪಿಯು ಶಿಕ್ಷಣ ಇಲಾಖೆ ಎನ್ನೋದು ಕೆಲಸ ಮಾಡುತ್ತದೆ.ಆದ್ರೆ ಅಂತದ್ದೊಂದು ಇಲಾಖೆ ನಿಜಕ್ಕೂ ಜೀವಂತವಾಗಿದೆಯೇ..? ಇಲಾಖೆಯ ಉಸ್ತುವಾರಿ ಹೊತ್ತಿರುವ ಸಚಿವರಿಗೆ ನಿಜಕ್ಕೂ ಅಲ್ಲಿ ಏನಾಗುತ್ತಿದೆ ಎನ್ನುವುದರ ಅರಿವು ಇದೆಯೇ..? ಆ ಇಲಾಖೆ ಮಾಡಬೇಕಿರುವುದೇನು..? ಮಾಡುತ್ತಿರುವುದೇನು ಎನ್ನುವುದರ ಮಾಹಿತಿಯಾದರೂ ಅವರಿಗಿದೆಯೇ..?
ಇಲಾಖೆಯ ನಿರ್ದೇಶಕರೆನಿಸಿಕೊಂಡವರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರಾ..? ಅಲ್ಲಿರುವ ಕೆಳ ಹಂತದ ಅಧಿಕಾರಿಗಳ ಕೈಸನ್ನೆಯಲ್ಲಿ ಕುಣಿಯುವ ಗೊಂಬೆಯಾಗಿದ್ದಾರೆಯೇ..? ನಿರ್ದೇಶಕರನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಂತೆ ವರ್ತಿಸುತ್ತಿರುವ ಕೆಲವು ಅಧಿಕಾರಿಗಳ ವರ್ತನೆ-ಧೋರಣೆ ನಿಜಕ್ಕೂ ಸರಿನಾ..? ಕಾಲೇಜುಗಳ ಆರಂಭಕ್ಕೆ ಶೈಕ್ಷಣಿಕ ಮಾನ್ಯತೆ ಕೊಡುವ ಸನ್ನಿವೇಶದಲ್ಲಿ ಏನೆಲ್ಲಾ ಗೋಲ್ಮಾಲ್-ಅಕ್ರಮ-ಹಗರಣ ನಡೆಯುತ್ತಿದೆ..? ಅದರಲ್ಲಿ ಇಲಾಖೆ ಅಧಿಕಾರಿಗಳು ಹೇಗೆಲ್ಲಾ ಶಾಮೀಲಾಗಿದ್ದಾರೆ.? ಯಾರಿಗೆ ಎಷ್ಟೆಲ್ಲಾ ಪಾಲು ಹೋಗುತ್ತಿದೆ..?ಅನೇಕ ವರ್ಷಗಳಿಂದ ಇಲಾಖೆಯಲ್ಲೇ ಗೂಟಾ ಹೊಡೆದುಕೊಂಡಿರುವ ಅಧಿಕಾರಿ ಸಿಬ್ಬಂದಿ ತಮ್ಮ ನೀಯತ್ತನ್ನು ಮಾರಿಕೊಂಡು ಎಷ್ಟು ಅಕ್ರಮ ಸಂಪಾದನೆ ಮಾಡಿಕೊಂಡಿದ್ದಾರೆ..? ಎಲ್ಲೆಲ್ಲಾ ಅವರ ಅಕ್ರಮ ಆಸ್ತಿಗಳಿವೆ..? ಹೀಗೆ ನೂರಾರು ಪ್ರಶ್ನೆಗಳು ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ಹಿನ್ನಲೆಯಲ್ಲಿ ಕೇಳಲ್ಪಡುತ್ತಿವೆ.ಕನ್ನಡ ಫ್ಲ್ಯಾಶ್ ನ್ಯೂಸ್ ತನ್ನ ಬಳಿ ಇರುವ ಸ್ಪೋಟಕ ಮಾಹಿತಿಗಳನ್ನು ಸರಣಿ ವರದಿಗಳ ರೂಪದಲ್ಲಿ ಪ್ರಕಟಿಸಲಿದೆ.
ಸಚಿವ ಮಧು ಬಂಗಾರಪ್ಪ ಅವರೇ ..ಮಲ್ಲೇಶ್ವರಂ 18ನೇ ಕ್ರಾಸ್ ನಲ್ಲಿರುವ ಪಿಯು ಇಲಾಖೆ ಕಚೇರಿಯಲ್ಲಿ ಏನ್ ನಡೀತಿದೆ ಗೊತ್ತಾ..?!
“ಮಲ್ಲೇಶ್ವರಂ 18ನೇ ಕ್ರಾಸ್ ನಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆಯುತ್ತಿರುವ ಕೆಲವೇ ಕೆಲವು ಅಧಿಕಾರಿಗಳ ಅಂದಾದರ್ಬಾರ್, ಅವರಿಗೆ ಸಾಥ್ ನೀಡುತ್ತಿರುವ ಕೆಲವು ಸಿಬ್ಬಂದಿ ದುಂಡಾವರ್ತನೆಯಿಂದ ಸಚಿವ ಮಧುಬಂಗಾರಪ್ಪ ಹಾಗೂ ನಿರ್ದೇಶಕರ ಹೆಸರು ಹಾಗು ಕೆಲಸಕ್ಕೆ ಮಸಿ ಬಳಿಯುವ ಕೆಲಸವಾಗುತ್ತಿದೆ.ಕಚೇರಿಯಲ್ಲಿ ಕೆಲಸ ಮಾಡುವ ಶೇಕಡಾ 90 ರಷ್ಟು ಸಿಬ್ಬಂದಿ ಅಲ್ಲಿರುವ ಕೆಲವರ ವರ್ತನೆ-ಧೋರಣೆಯಿಂದ ರೋಸತ್ತು ಹೋಗಿದ್ದಾರೆ.ಪರಿಸ್ಥಿತಿ ಇವತ್ತು ಸುಧಾರಿಸಬಹುದು..ನಾಳೆ ಸರಿ ಹೋಗ ಬಹುದು ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.ಕೆಲವರ ಅಂದಾದರ್ಬಾರ್ ಹಾಗೂ ಅಟ್ಟಹಾಸ ಮಿತಿಮೀರುತ್ತಿದೆಯಂತೆ.ಇಲಾಖೆಯ ಪ್ರಮುಖ ಹಾಗೂ ಲಾಭದಾಯಕವಾದಂತ ಕೆಲಸಗಳನ್ನು ಈ ಕೆಲವರು ತಮ್ಮ ಹಂತದಲ್ಲಿಯೇ ನಿರ್ವಹಣೆಯಾಗುವಂತೆ ಮಾಡಿಕೊಂಡಿದ್ದಾರಂತೆ.ಹೊಸ ಕಾಲೇಜುಗಳಿಗೆ ಪರ್ಮಿಷನ್ ಕೊಡುವ ಸಂದರ್ಭದಲ್ಲಿ ಇಲಾಖೆ ರೂಪಿಸಿರುವ ನಿಯಾಮವಳಿಗಳ ಉಲ್ಲಂಘನೆ ರಾಜಾರೋಷವಾಗಿ ನಡೆಯುತ್ತಿದೆಯಂತೆ. ಇದರಲ್ಲೇ ದೊಡ್ಡ ಮಟ್ಟದ ಕಿಕ್ ಬ್ಯಾಕ್ ಆ ಕೆಲವರಲ್ಲಿ ಹಂಚಿ ಹೋಗುತ್ತಿದೆಯಂತೆ.ಇವರಿಗೆ ಕಡಿವಾಣ ಹಾಕೋದರಲ್ಲಿ ಅದ್ಹೇಕೆ ನಿರ್ದೇಶಕರು ಮೀನಾಮೇಷ ಎಣಿಸುತ್ತಿದ್ದಾರೋ..? ಅವರ ಮಾತಿಗೆ ಸೊಪ್ಪಾಕುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎನ್ನುವ ಬೇಸರದ ಮಾತು ಸಿಬ್ಬಂದಿಯಿಂದ ಕೇಳಿಬಂದಿದೆ..ಇದೆಲ್ಲವನ್ನು ಸವಿಸ್ತಾರ ವಾಗಿ ಕನ್ನಡ ಫ್ಲ್ಯಾಶ್ ನ್ಯೂಸ್ ಸರಣಿ ವರದಿಗಳಲ್ಲಿ ಬಿಚ್ಚಿಡಲಿದೆ..ಹಾಗಾದರೂ ವ್ಯವಸ್ಥೆ ಬದಲಾಗಬಹುದೆನ್ನುವುದು ನಮ್ಮ ಆಶಯ”
ಹೌದು..ಪದವಿಪೂರ್ವ ಶಿಕ್ಷಣ ಇಲಾಖೆ ಇವತ್ತಿಗೆ ಮೊದಲಿದ್ದಂತಿಲ್ಲ.ಅದು ಅಕ್ರಮ-ಅನ್ಯಾಯ-ಭ್ರಷ್ಟಾಚಾರದ ಗೂಡಾಗಿಬಿಟ್ಟಿದೆ ಎನ್ನುವ ಮಾತು ಕೇಳಿಬರುತ್ತಿದೆ.ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಇಲಾಖೆ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ..ಅವರು ಬೇರೆಯದೇ ಕೆಲಸಗಳಲ್ಲಿ ಬ್ಯುಸಿಯಾಗಿರುವುದನ್ನೇ ಇಲಾಖೆಯ ಅಧಿಕಾರಿಗಳು ಮಿಸ್ಯೂಸ್ ಮಾಡಿಕೊಂಡು ಇಲಾಖೆಯನ್ನು ಅವ್ಯವಸ್ಥೆಯ ಕೇಂದ್ರವಾಗಿಸಿಕೊಂಡಿದ್ದಾರೆ.ಇಲಾಖೆಯ ನಿರ್ದೇಶಕರೆನಿಸಿಕೊಂಡ ಐಎಎಸ್ ಅಧಿಕಾರಿಗಳು ತಮ್ಮ ಕರ್ತವ್ಯ-ಜವಾಬ್ದಾರಿ ನಿರ್ವಹಿಸುವಲ್ಲಿ ಎಲ್ಲೋ ಎಡವಿದ್ದಾರಾ..? ಅವರು ಸ್ವತಂತ್ರವಾಗಿ ತಮ್ಮ ಕೆಲಸ ಮಾಡಲು ಸಾಧ್ಯವಾಗದಷ್ಟು ಅವರ ಕೆಳಹಂತದ ಅಧಿಕಾರಿಗಳ ಕಪಿಮುಷ್ಠಿಗೆ ಸಿಲುಕಿದ್ದಾರಾ ಎನ್ನುವ ಮಟ್ಟದ ಶಂಕೆ ವ್ಯಕ್ತವಾಗುತ್ತಿದೆ.ಮಲ್ಲೇಶ್ವರಂ 18ನೇ ಕ್ರಾಸ್ ನಲ್ಲಿರುವ ಇಲಾಖೆಯ ಸಂಪೂರ್ಣ ಕಚೇರಿಯೇ ಅಲ್ಲಿ ಸರ್ವಾಧಿಕಾರಿಯಂತೆ ಮೆರೆಯುತ್ತಿರುವ ಅಧಿಕಾರಿಯೊಬ್ಬರ ಧೋರಣೆಗೆ ಬೇಸತ್ತಿದೆಯಂತೆ..ಇಡೀ ಇಲಾಖೆ ಸಿಬ್ಬಂದಿಯೇ ಆ ಅಧಿಕಾರಿಗೆ ಹಿಡಿಶಾಪ ಹಾಕುವ ಮಟ್ಟದಲ್ಲಿದೆ ಎಂದ್ರೆ ಇಲಾಖೆ ಹಾಗೂ ಅಲ್ಲಿರುವ ವ್ಯವಸ್ಥೆಯನ್ನು ಯಾವ ರೀತಿ ಹಾಳು ಮಾಡಿರಬಹುದೆನ್ನುವ ಕಲ್ಪನೆ ಮೂಡುವುದು ಸಹಜ.
ಇಲಾಖೆಯ ನಿರ್ದೇಶಕರಾಗಿರುವ ಐಎಎಸ್ ಅಧಿಕಾರಿ ನಿಜಕ್ಕೂ ಸಂಭಾವಿತರು. ಇಲಾಖೆಯನ್ನು ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು.ವ್ಯವಸ್ಥೆಯನ್ನು ಉತ್ತಮಗೊಳಿಸಬೇಕೆನ್ನುವ ದೂರಾಲೋಚನೆಯನ್ನು ಹೊಂದಿದ್ದಾರೆ.ಆದ್ರೆ ಅವರ ಅಧೀನದಲ್ಲಿರುವ ಅಧಿಕಾರಿಯೊಬ್ಬರು ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.ಐಎಎಸ್ ಅಧಿಕಾರಿಯನ್ನೇ ನಿಯಂತ್ರಿಸುವ ಮಟ್ಟದಲ್ಲಿ ನಡೆದುಕೊಳ್ಳುತ್ತಿದ್ದಾರೆಂದ್ರೆ ಇದರ ಹಿನ್ನಲೆ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.ಐಎಎಸ್ ಅಧಿಕಾರಿ ಕೂಡ ಆ ಅಧಿಕಾರಿಯ ಮಾತಿಗೆ ತಲೆ ಅಲ್ಲಾಡಿಸುವ,ಅವರ ಸಲಹೆ ಮೀರಿ ಏನನ್ನೂ ಮಾಡದ ಸ್ಥಿತಿಗೆ ತಲುಪಿದ್ದಾರೆನ್ನುವ ಮಾತಿದೆ.ಕೆಳ ಹಂತದ ಅಧಿಕಾರಿಯ ನಿಯಂತ್ರಣಕ್ಕೊಳಪಡುವಂಥ ಸ್ತಿತಿ ಆ ಐಎಎಸ್ ಅಧಿಕಾರಿಗೆ ಬಂದಿರುವುದಾದರೂ ಏಕೆ..? ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದೆ.
ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಜವಾಬ್ದಾರಿಯುತ ಮಾದ್ಯಮವಾಗಿ ನಮ್ಮ ಕೆಲಸ.ಅದನ್ನು ಮಾಡಲು ಕನ್ನಡ ಪ್ಲ್ಯಾಶ್ ನ್ಯೂಸ್ ಹೊರಟಿದೆ. ಈಗಾಗಲೇ ಶೇಕಡಾ 90 ರಷ್ಟು ಮಾಹಿತಿ ದೊರೆತಿದ್ದು ಇನ್ನೊಂದಷ್ಟು ಮಾಹಿತಿ ದೊರೆಯಬೇಕಿದೆಯಷ್ಟೇ..? ಸರ್ಕಾರದ ಗಮನ ಸೆಳೆಯುವ ಜತೆಗೆ ಸಚಿವ ಮಧುಬಂಗಾರಪ್ಪ ಅವರನ್ನು ಬಡಿದೆಬ್ಬಿಸುವುದು ಕೂಡ ಈ ಸರಣಿ ವರದಿಗಳ ಉದ್ದೇಶ ಹಾಗೂ ಆಶಯವಷ್ಟೇ.. ಶೀಘ್ರವೇ ಆ ಎಲ್ಲಾ ಸ್ಪೋಟಕ ಸರಣಿ ಸುದ್ದಿಗಳನ್ನು ಹೊತ್ತು ನಿಮ್ಮ ಮುಂದೆ ಬರಲಿದ್ದೇವೆ…ದಯವಿಟ್ಟು ನಿರೀಕ್ಷಿಸಿ..