heart touching story… ಒಂದು ಚಿನ್ನದ ನೆಕ್ಲೆಸ್.. ಮಗನ ಭವಿಷ್ಯವನ್ನೇ ಬಂಗಾರವನ್ನಾಗಿಸಿದ ನೈಜ ಕಥೆ..!


ಸುಮಾರು 11 ವರುಷಗಳ ಹಿಂದೆ… 13 ವರ್ಷದ ಬಾಲಕ ಒಂದು ಸಾಧಾರಣ ಮೊತ್ತದ ಕ್ರಿಕೆಟ್ ಬ್ಯಾಟ್ ಮತ್ತು ಕಿಟ್‍ಗಾಗಿ ಅಪ್ಪ- ಅಮ್ಮನ ಜೊತೆ ಹಠ ಮಾತ್ರವಲ್ಲ.. ರಂಪಾಟವನ್ನೇ ಮಾಡಿದ್ದ. ನಾನು ಕ್ರಿಕೆಟ್ ಆಡಬೇಕು.. ನನಗೆ ಬ್ಯಾಟ್ ಬೇಕು ಎಂದು ಕಿರುಚಾಡುತ್ತಿದ್ದ ಮಗನ ಮೇಲೆ ತಾಳ್ಮೆ ಕಳೆದುಕೊಂಡ ಅಪ್ಪ ಸರಿಯಾಗಿಯೇ ಪೆಟ್ಟು ಕೊಟ್ಟಿದ್ದ. ಇದರಿಂದ ಇನ್ನಷ್ಟು ಸಿಟ್ಟು ಮಾಡಿಕೊಂಡ ಆ ಬಾಲಕ ಸೀದಾ ಬಾತ್ ರೂಮ್‍ಗೆ ಹೋಗಿ ಲಾಕ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದ.
ನನಗೆ ಕ್ರಿಕೆಟ್ ಬ್ಯಾಟ್ ಕೊಡದಿದ್ರೆ ಮನೆ ಬಿಟ್ಟು ಹೋಗುತ್ತೇನೆ ಎಂದು ಅಳುತ್ತಲೇ ಅಮ್ಮನ ಬಳಿ ಹೇಳಿಕೊಂಡಿದ್ದ. ಅಷ್ಟೇ.. ಅಮ್ಮನ ಹೃದಯ ಒಂದು ಕ್ಷಣ ನೀರಿನಂತೆ ಕರಗಿ ಹೋಯ್ತು. ಅಪ್ಪನ ಏಟಿಗಿಂತಲೂ ತನಗೆ ಕ್ರಿಕೆಟ್ ಕಿಟ್ ಬೇಕು ಎಂದು ಜೋರಾಗಿ ಅಳುತ್ತಿದ್ದ, ಮಗನ ಕಿರುಚಾಟ.. ಹಠಕ್ಕೆ ಮಾತೃ ಹೃದಯವನ್ನು ಘಾಸಿಗೊಂಡಿತ್ತು. ಸರಿ ನಿನಗೆ ಕ್ರಿಕೆಟ್ ಕಿಟ್ ತಾನೇ ಬೇಕು.. ಆಯ್ತು ನಾಳೆ ತೆಗೆದುಕೊಂಡು ಬರೋಣ ಅಂತ ಸಮಾಧಾನಪಡಿಸಿದ್ದ ಅಮ್ಮನ ಕೈಯಲ್ಲೂ ದುಡ್ಡು ಇರಲಿಲ್ಲ.. ಅಪ್ಪನ ಕೈಯಲ್ಲೂ ದುಡ್ಡು ಇರಲಿಲ್ಲ.

ಅದರಲ್ಲೂ ಶಿಸ್ತಿನ ಸಿಪಾಯಿ ಅಪ್ಪ ಯಾವುದೇ ಕಾರಣಕ್ಕೂ ಕ್ರಿಕೆಟ್ ಕಿಟ್ ಕೊಡಿಸಲ್ಲ ಅಂತ ಕಡ್ಡಿ ಮುರಿದಂಗೆ ಹೇಳಿದಾಗ ಮಗ ಜೋರಾಗಿ ಅಳುತ್ತಾನೆ.. ಇತ್ತ ತಾಯಿಗೆ ಯಾರನ್ನು ಸಮಾಧಾನಪಡಿಸೋದು ಅಂತ ಗೊಂದಲ. ಕೊನೆಗೂ ಪೆಟ್ಟಿಗೆಯಿಂದ ತನ್ನ ಚಿನ್ನದ ನೆಕ್ಲೆಸ್ ಅನ್ನು ಗಂಡನ ಕೈಗಿಟ್ಟು, ಇದನ್ನು ಮಾರಾಟ ಮಾಡಿ ಮಗನಿಗೆ ಕ್ರಿಕೆಟ್ ಬ್ಯಾಟ್ ಮತ್ತು ಕಿಟ್ ಕೊಡಿಸುವಂತೆ ಕೇಳಿಕೊಂಡಾಗ ಆ ಹುಡುಗನ ಮುಖದಲ್ಲಿ ಮಂದಹಾಸದ ನಗೆ ಮೂಡಿತ್ತು. ಭವಿಷ್ಯದ ಕನಸು ಕಣ್ಣ ಮುಂದೆ ಹಾದುಹೋದಂತೆ ಭಾಸವಾಯ್ತು. ಮನೆಯಲ್ಲಿ ಇಷ್ಟೊಂದು ಕಷ್ಟ ಇದೆ ಅಂತ ಆ ಸಣ್ಣ ಪ್ರಾಯದ ಹುಡುಗನ ಮನಸ್ಸಿನಲ್ಲಿ ಯೋಚನೆ ಇರಲಿಲ್ಲ. ಬದಲಾಗಿ ನಾನು ಕ್ರಿಕೆಟಿಗನಾಗಬೇಕು.. ಟೀಮ್ ಇಂಡಿಯಾದಲ್ಲಿ ಆಡಬೇಕು ಎಂಬ ತುಡಿತ ಮಾತ್ರ ಇತ್ತು.

ಆ ಕನಸನ್ನು ಬೆನ್ನಟ್ಟಿ ಹೊರಟ ಈ ಹುಡುಗನ ಗುರಿ ಸ್ಪಷ್ಟವಾಗಿತ್ತು. ತಾನು ಹೀಗೆ ಬೆಳೆಯಬೇಕು ಎಂಬ ಧ್ಯೇಯ ಆತನಲ್ಲಿತ್ತು. ಅಪ್ಪ -ಅಮ್ಮನ ಮನಸ್ಸನ್ನು ನೋಯಿಸಬೇಕು ಎಂಬುದು ಆತನ ಉದ್ಧೇಶ ಆಗಿರಲಿಲ್ಲ. ನನ್ನ ಕನಸು ನನಸಾಗಬೇಕು ಎಂಬುದಷ್ಟೇ ಆತನ ನಿಲುವು ಆಗಿತ್ತು. ಬದುಕಿನ ಸವಾಲುಗಳನ್ನು ಬೆನ್ನಟ್ಟಿ ಯಶ ಸಾಧಿಸುತ್ತೇನೆ ಅನ್ನೋ ಆತ್ಮವಿಶ್ವಾಸವೇ ಇವತ್ತು ಆ ಹುಡುಗನ್ನು ಈ ಮಟ್ಟಕ್ಕೆ ಬೆಳೆಸಿ ನಿಲ್ಲಿಸಿದೆ. ಬಡವರ ಮಕ್ಕಳು ಬೆಳೆಯಬೇಕು ಅಂತ ಹೇಳುವುದು ಸುಲಭ.. ಆದ್ರೆ ಹೇಗೆ ಬೆಳೆಯಬೇಕು ಎಂಬುದಕ್ಕೆ ಈ ಹುಡುಗ ಸಾಗಿ ಬಂದ ಹಾದಿಯೇ ಅತ್ಯುತ್ತಮ ನಿದರ್ಶನ.
ಹೌದು, ಅಂತು – ಇಂತು, ಈ ಹಠಮಾರಿ ಹುಡುಗ, 2000 ರೂಪಾಯಿ ಮೌಲ್ಯದ ಕ್ರಿಕೆಟ್ ಕಿಟ್ ಅನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಕ್ರಿಕೆಟ್ ಕಲಿಯಲು ಹೊರಟ ನಂತ್ರ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.. ಕಾರ್ಗಿಲ್ ಯೋಧನ ಮಗ ಟೀಮ್ ಇಂಡಿಯಾದ ಯೋಧನಾಗಿದ್ದೇ ಒಂದು ರೋಚಕ ಪಯಣ. ಕ್ರಿಕೆಟ್ ಶ್ರೀಮಂತರ ಆಟ ಅನ್ನುವವರಿಗೆ ಈ ಹುಡುಗನ ಯಶೋಗಾಥೆಯೇ ಒಂದು ಸ್ಫೂರ್ತಿ. ಸಾಧನೆ.. ಯಶಸ್ಸಿಗೆ ಬರೀ ದುಡ್ಡು ಮುಖ್ಯವಲ್ಲ. ಪ್ರತಿಭೆ ಇದ್ರೆ ಯಶಸ್ಸು.. ದುಡ್ಡು ಎಲ್ಲವೂ ತಾನಾಗಿಯೇ ಬರುತ್ತೆ ಅನ್ನೋದಕ್ಕೆ ಈ ಹುಡುಗನ ಕ್ರಿಕೆಟ್ ಜರ್ನಿಯೇ ಸಾಕ್ಷಿ.
ಅಂದ ಹಾಗೇ ಈತನ ಹೆಸರು ಧ್ರುವ್ ಜುರೆಲ್. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಚೊಚ್ಚಲ ಶತಕ ದಾಖಲಿಸಿ ಸದ್ದು ಮಾಡಿದ್ದಾನೆ. ಕೆ.ಎಲ್. ರಾಹುಲ್, ಜಡೇಜಾ ಶತಕಕ್ಕಿಂತಲೂ ಜುರೇಲ್ ಶತಕ ಹೆಚ್ಚು ಸುದ್ದಿ ಮಾಡಿದೆ. ಕಾರಣ ಧ್ರುವ್ ಜುರೆಲ್ ಬೆಳೆದು ಬಂದ ರೀತಿ ಒಂದು ಕ್ಷಣ ಅಚ್ಚರಿಯನ್ನುಂಟು ಮಾಡುತ್ತಿದೆ. ಹಾಗೇ ನೋಡಿದ್ರೆ ಜುರೆಲ್ ಬದುಕಿ ಬಂದಿದ್ದೇ ಪವಾಡ. ಐದನೇ ವಯಸ್ಸಿನಲ್ಲಿ ಬಸ್ ಚಕ್ರದಡಿ ಕಾಲು ಸಿಲುಕಿಕೊಂಡು ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಕೊಂಡಿದ್ದ ಹುಡುಗನಿಗೆ ಅದು ಹೇಗೆ ಕ್ರಿಕೆಟ್ ಮೇಲೆ ಲವ್ ಆಯ್ತೋ ಗೊತ್ತಿಲ್ಲ. ಆದ್ರೆ ಯಶಸ್ವಿ ಜೈಸ್ವಾಲ್, ಪೃಥ್ವಿ ಶಾ, ರಿಂಕ್ ಸಿಂಗ್ ಮಾದರಿಯಲ್ಲಿ ಬಡತನ, ಹಸಿವಿನಿಂದಲೇ ಕ್ರಿಕೆಟ್ ಆಟವನ್ನು ಪ್ರೀತಿಸುತ್ತಾ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವುದು ಅಂದ್ರೆ ಅದರ ಹಿಂದಿನ ತಪಸ್ಸು, ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಧ್ರುವ್ ಜುರೆಲ್ ತಂದೆ ನೇಮ್ ಸಿಂಗ್ ಜುರೆಲ್. ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು. ಕಾರ್ಗಿಲ್ ಯುದ್ಧದ ಸೇನಾನಿ. ಮಗ ಎನ್‍ಡಿಎ ಪರೀಕ್ಷೆ ಬರೆದು ಭಾರತೀಯ ಸೇನೆ ಸೇರಬೇಕು ಎಂಬುದು ಅಪ್ಪನ ಮಹಾದಾಸೆಯಾಗಿತ್ತು. ಅದಕ್ಕಾಗಿಯೇ ಮಗನ ಕ್ರಿಕೆಟ್ ಮೇಲಿನ ಪ್ರೀತಿಗೆ ಅಡ್ಡಿಪಡಿಸುತ್ತಿದ್ದರು. ಆದ್ರೆ ಮಗನ ಆಸೆ ಟೀಮ್ ಇಂಡಿಯಾದಲ್ಲಿ ಆಡಬೇಕು ಎಂಬುದು. ಮಗನ ಹಠ, ಕಣ್ಣೀರಿಗೆ ಅಪ್ಪ ಕ್ಯಾರ್ ಮಾಡ್ತಾ ಇರಲಿಲ್ಲ. ಆದ್ರೆ ತಾಯಿ ರಂಜಿನಿ ಮಾತ್ರ ಗಟ್ಟಿ ಮನಸ್ಸು ಮಾಡಿ ಮಗನ ಪರವಾಗಿ ನಿಂತಿದ್ದರು. ತಮಾಷೆ ಅಂದ್ರೆ ಧ್ರುವ್ ಸ್ಥಳೀಯ ಟೂರ್ನಿಗಳಲ್ಲಿ ಆಡುತ್ತಿರುವ ವಿಚಾರ ಅಪ್ಪ ನೇಮ್ ಸಿಂಗ್‍ಗೆ ಗೊತ್ತೇ ಇರಲಿಲ್ಲ.
ಸ್ಥಳೀಯ ಪತ್ರಿಕೆಗಳಲ್ಲಿ ಬಾಲಕ ಧ್ರುವ್ ಜುರೆಲ್ ಆಟದ ವೈಖರಿಯ ಸುದ್ದಿಯನ್ನು ನೋಡಿ ಈತ ತನ್ನ ಮಗ ಎಂಬುದು ಕೂಡ ನೇಮ್ ಸಿಂಗ್ ಗೊತ್ತಾಗುತ್ತಿರಲಿಲ್ಲ. ಕೊನೆಗೂ ಈ ವಿಚಾರ ಗೊತ್ತಾದಾಗ ಮತ್ತೆ ಮನೆಯಲ್ಲಿ ರಂಪಾಟ..ಆಗ ಧ್ರುವ್ ಜುರೆಲ್ ಹಠ ಹಿಡಿದು ಕ್ರಿಕೆಟ್ ಕಿಟ್ ಗಿಟ್ಟಿಸಿಕೊಂಡು ಅಮ್ಮನ ಮಾತು ತಪ್ಪಿದ ಮಗನಾಗಿಬಿಟ್ಟಿದ್ದ. ಕ್ರಿಕೆಟ್ ಕಿಟ್ ಹೆಗಲ ಮೇಲೆ ಹಾಕೊಂಡು ಉತ್ತರ ಪ್ರದೇಶದ ಆಗ್ರಾದಿಂದ ಸೀದಾ ಟ್ರೈನ್ ಹತ್ತಿ ಹೋಗಿದ್ದು ನೋಯ್ಡಾಗೆ. ಅಲ್ಲಿ ಖ್ಯಾತ ತರಬೇತುದಾರ ಫೂಲ್‍ಚಂದ್ ಕೊಠಡಿಗೆ ಪ್ರವೇಶಿಸಿದ್ದ. ಸ್ವಲ್ಪನೂ ಗಲಿಬಿಲಿಗೊಳ್ಳದೇ, ಸರ್, ನನ್ನ ಹೆಸರು ಧ್ರುವ್ ಜುರೆಲ್. ನಿಮ್ಮ ಅಕಾಡೆಮಿಗೆ ನನ್ನನ್ನು ಸೇರಿಸಿಕೊಳ್ಳಿ ಎಂದು ಧೈರ್ಯದಿಂದಲೇ ಮನವಿ ಮಾಡಿಕೊಂಡಿದ್ದ 13ರ ಹರೆಯ ಧ್ರುವ್ ಜುರೆಲ್. ಕೋಚ್ ಫೂಲ್‍ಚಂದ್ ಅಚ್ಚರಿಯಿಂದಲೇ ಈ ಹುಡುಗನ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಬೆರಗಿನಿಂದಲೇ ನೋಡಿದ್ರು. ಈ ಹುಡುಗನಲ್ಲಿ ಏನೋ ಒಂದು ರೀತಿಯ ಪ್ರತಿಭೆ ಇದೆ ಎಂಬುದನ್ನು ಮೊದಲ ನೋಟದಲ್ಲೇ ಗುರುತಿಸಿದ್ರು. ಆದ್ರೂ ಹುಡುಗ ಮನೆ ಬಿಟ್ಟು ಓಡಿ ಬಂದಿದ್ದಾನೋ ಅನ್ನೋ ಅನುಮಾನ ಕೂಡ ಅವರಿಗೆ ಕಾಡಿತ್ತು.

ಯಾಕಂದ್ರೆ ಸಾಮಾನ್ಯವಾಗಿ ಅಕಾಡೆಮಿಗೆ ಬರೋ ಹುಡುಗರು ತಮ್ಮ ಪೋಷಕರ ಜೊತೆ ಬರುತ್ತಾರೆ. ಆದ್ರೆ ಈ ಹುಡುಗ ಒಬ್ಬಂಟಿಯಾಗಿ ಬಂದಿದ್ದಾನೆ. ಹೀಗಾಗಿ ಅಪ್ಪ ನೇಮ್ ಸಿಂಗ್ ಅವರ ಫೋನ್ ನಂಬರ್ ಕೇಳಿದಾಗ, ಜುರೆಲ್ ಮನೆ ಬಿಟ್ಟು ಬಂದ್ರೂ ಧೈರ್ಯದಿಂದಲೇ ಫೋನ್ ನಂಬರ್ ಕೊಟ್ಟುಬಿಟ್ಟ. ಫೂಲ್ ಚಂದ್ ಫೋನ್ ಮಾಡುವುದಕ್ಕಿಂತ ಮುನ್ನವೇ ಸರ್, ನನಗೆ ನಿಮ್ಮ ಅಕಾಡೆಮಿಯಲ್ಲಿ ಅವಕಾಶ ಕೊಡಿ.. ನಾನು ನನ್ನ ಗೆಳೆಯನ ಮನೆಯಲ್ಲಿರುವುದಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇನೆ ಎನ್ನುತ್ತಿದ್ದ. ಆತ್ತ ಈ ಹುಡುಗ ಮನೆ ಬಿಟ್ಟು ಬಂದಿರೋದನ್ನು ನೇಮ್ ಸಿಂಗ್ ಖಚಿತಪಡಿಸಿಕೊಂಡಾಗ ಮತ್ತೆ ಧ್ರುವ್ ಜುರೆಲ್, ನಾನು ಮತ್ತೆ ಆಗ್ರಾಗೆ ಒಬ್ಬಂಟಿಯಾಗಿ ಹೊಗುತ್ತೇನೆ ಎಂದಿದ್ದ. ಆದ್ರೆ ಕೋಚ್ ಫೂಲ್ ಚಂದ್ ಈ ಹುಡುಗ ಧೈರ್ಯವನ್ನು ಮೆಚ್ಚಿ ತಮ್ಮ ಅಕಾಡೆಮಿಯಲ್ಲಿ ತರಬೇತಿ ನೀಡಲು ಶುರು ಮಾಡಿದ್ರು. ಸ್ಥಳೀಯ ಕ್ಲಬ್ ಕ್ರಿಕೆಟ್ ಕ್ಲಬ್‍ಗಳಲ್ಲಿ ಆಡುವಂತೆ ಅವಕಾಶ ನೀಡಿದ್ರು. ಇದು ಧ್ರುವ್ ಜುರೆಲ್ ಕ್ರಿಕೆಟ್ ಬದುಕಿನ ಟರ್ನಿಂಗ್ ಪಾಯಿಂಟ್.
ಈ ನಡುವೆ, ಮಗನ ಕ್ರಿಕೆಟ್ ಪ್ರತಿಭೆಯನ್ನು ನೋಡಿದ ನೇಮ್ ಸಿಂಗ್ ಸಂಪೂರ್ಣವಾಗಿ ಬದಲಾಗಿಬಿಟ್ರು. ಮಗ ಕ್ರಿಕೆಟ್ ಜಗತ್ತಿನಲ್ಲಿ ಏನೋ ಸಾಧನೆ ಮಾಡುತ್ತಾನೆ ಅನ್ನೋ ವಿಶ್ವಾಸ ಮೂಡಿತ್ತು. ಹೀಗೆ ಸ್ಥಳೀಯ ಹಾಗೂ ವಿವಿಧ ವಯೋಮಿತಿಯಲ್ಲಿ ಆಡುತ್ತಿದ್ದ ಧ್ರುವ್ ಜುರೆಲ್ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ. ಅದರಲ್ಲೂ ಒಂದು ಬಾರಿ ಸ್ಥಳೀಯ ಕ್ಲಬ್ ಟೂರ್ನಿಯೊಂದರಲ್ಲಿ ಧ್ರುವ್ ಜುರೆಲ್, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ.. ಬೆಸ್ಟ್ ಫೀಲ್ಡರ್ ಸೇರಿದಂತೆ ಐದಾರು ಟ್ರೋಫಿಗಳನ್ನು ಗೆದ್ದುಕೊಂಡಿದ್ದ. ಈ ಪಂದ್ಯವನ್ನು ನೋಡಿದ್ದ ನೇಮ್ ಸಿಂಗ್ ಮಗನ ಜೊತೆ ಮನೆಗೆ ಬರುವಾಗ ಹೆಮ್ಮೆಯಿಂದ ಬೀಗುತ್ತಿದ್ದರು. ಜುರೆಲ್ ಗಳಿಸಿದ್ದ ಟ್ರೋಫಿ, ಕ್ರಿಕೆಟ್ ಕಿಟ್‍ನೊಂದಿಗೆ ಸ್ಕೂಟಿಯ ಸವಾರಿಯನ್ನು ನೇಮ್ ಸಿಂಗ್ ಈಗಲೂ ನೆನಪಿಸಿಕೊಳ್ಳುತ್ತಾರೆ. ಅಲ್ಲದೆ ಮಗನಿಗೆ ಅಂದು ಕ್ರಿಕೆಟ್ ಕಿಟ್ ಕೊಡಿಸಲ್ಲ ಅಂದಿದ್ದ ನೇಮ್ ಸಿಂಗ್ ಹೊಸ ಕಿಟ್ ಕೂಡ ಕೊಡಿಸಿದ್ದರು.
ಹಾಗಂತ ಧ್ರುವ್ ಜುರೆಲ್ ಒಂದು ದಿನ ಕೂಡ ಅಭ್ಯಾಸವನ್ನು ತಪ್ಪಿಸುತ್ತಿರಲಿಲ್ಲ. 19 ವಯೋಮಿತಿ ಏಷ್ಯಾಕಪ್, 19 ವಯೋಮಿತಿ ವಿಶ್ವಕಪ್‍ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಲ್ಲದೆ ಉಪನಾಯನಾಗಿಯೂ ಆಯ್ಕೆಯಾಗಿದ್ದ ಧ್ರುವ್ ಜುರೆಲ್, ಉತ್ತರ ಪ್ರದೇಶ ರಣಜಿ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದ. 2022ರಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದ ಜುರೆಲ್, 2023ರಲ್ಲಿ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ್ದ. ಮೂರು ವರ್ಷ 20 ಲಕ್ಷಕ್ಕೆ ಆರ್ ಆರ್ ತಂಡದ ಸದಸ್ಯನಾಗಿದ್ದ ಜುರೆಲ್, 2025ರ ಐಪಿಎಲ್‍ನಲ್ಲಿ 14 ಕೋಟಿಗೆ ಆರ್‍ಆರ್ ತಂಡ ಖರೀದಿ ಮಾಡಿತ್ತು. ಅಲ್ಲದೆ ಆರ್‍ಆರ್ ತಂಡದ ಪರ ಅತ್ಯುತ್ತಮ ಆಟವನ್ನೇ ಪ್ರದರ್ಶಿಸಿದ್ದ. 2024ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಪಾದರ್ಪಣೆ ಮಾಡಿದ್ದ. ಹಾಗೇ ಜಿಂಬಾಬ್ವೆ ವಿರುದ್ಧ ಚೊಚ್ಚಲ ಟಿ-20 ಪಂದ್ಯಕ್ಕೆ ಎಂಟ್ರಿಕೊಟ್ರೂ ಇನ್ನೂ ಏಕದಿನ ತಂಡದಲ್ಲಿ ಕಾಣಿಸಿಕೊಂಡಿಲ್ಲ.
ಇದಕ್ಕೆ ಕಾರಣವೂ ಇದೆ. ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪಿಂಗ್‍ಗೆ ಸಾಕಷ್ಟು ಪೈಪೋಟಿ ಇದೆ. ರಿಷಬ್ ಪಂತ್ ಟೆಸ್ಟ್‍ನಲ್ಲಿ ಫಸ್ಟ್ ಚಾಯ್ಸ್ ಆಗಿದ್ರೆ, ಏಕದಿನ ಕ್ರಿಕೆಟ್‍ನಲ್ಲಿ ಕೆ.ಎಲ್. ರಾಹುಲ್, ಟಿ-20ಯಲ್ಲಿ ಸಂಜು ಸ್ಯಾವiನ್ಸ್ ಜೊತೆ ಪೈಪೋಟಿ ಇದೆ. ಹಾಗೇ ಕೆ. ಭರತ್ ಕೂಡ ಮುಂಚೂಣಿಯಲ್ಲಿದ್ದಾನೆ. ಹೀಗಾಗಿ ಧ್ರುವ್ ಜುರೆಲ್ ಅವಕಾಶಕ್ಕಾಗಿ ಕಾಯುತ್ತಿದ್ದ. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ರಿಷಬ್ ಪಂತ್‍ಗೆ ಸ್ಥಾನವನ್ನೇ ಅಲುಗಾಡಿಸಿದ್ದಾನೆ. ಕಳೆದ ಇಂಗ್ಲೆಂಡ್ ಸರಣಿಯಲ್ಲಿ ಪಂತ್ ಗಾಯಗೊಂಡಾಗ ಧ್ರುವ್ ಜುರೆಲ್ ಕೀಪಿಂಗ್ ಮಾಡಿದ್ದ. ಇದೀಗ ಪಂತ್ ಅನುಪಸ್ಥಿತಿಯಲ್ಲಿ ಕೆರೆಬಿಯನ್ನರ ವಿರುದ್ಧ ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಜುರೆಲ್, ಭವಿಷ್ಯದಲ್ಲಿ ಭಾರತ ಟೆಸ್ಟ್ ತಂಡದ ಮೂರನೇ ಕ್ರಮಾಂಕದ ಮೇಲೂ ಕಣ್ಣಿಟ್ಟಿದ್ದಾನೆ.
ಅಷ್ಟಕ್ಕೂ ಧ್ರುವ್ ಜುರೆಲ್ ಕ್ರಿಕೆಟ್ ಜರ್ನಿಯಲ್ಲಿ ಹಲವಾರು ಕ್ರಿಕೆಟಿಗರು ಪ್ರಭಾವ ಬೀರಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಎಮ್.ಎಸ್. ಧೋನಿಯೇ ಜುರೆಲ್‍ಗೆ ಸ್ಪೂರ್ತಿ ಹಾಗೂ ಮಾದರಿ. ಹಾಗೇ, ಆರ್‍ಆರ್ ತಂಡದ ಹೆಡ್ ಕೋಚ್ ಕುಮಾರ ಸಂಗಕ್ಕರ, ಇಂಗ್ಲೆಂಡ್‍ನ ಜಾಯ್ ರೂಟ್, ಹಾಲಿ ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಭೀರ್ ಕೂಡ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಇದನ್ನು ಶಿಸ್ತಿನಿಂದಲೇ ಪಾಲಿಸಿಕೊಂಡು ಬಂದಿರುವ ಜುರೆಲ್ ಇಂದು ಯಶಸ್ಸಿನ ಉತ್ತುಂಗಕ್ಕೇರಿದ್ದಾನೆ. ತಾನು ಅಂದುಕೊಂಡಿರುವುದನ್ನು ಸಾಧಿಸಿ ತೋರಿಸಿದ್ದಾನೆ. ತಂಡದಲ್ಲಿ ಇರಲಿ.. ಇಲ್ಲದೆ ಇರಲಿ.. ಆಡಲಿ, ಆಡದೇ ಇರಲಿ.. ಅಭ್ಯಾಸ ಮಾತ್ರ ನಿರಂತರ. ಇದು ಧ್ರುವ್ ಜುರೆಲ್ ಕ್ರಿಕೆಟ್ ಬದುಕಿನಲ್ಲಿ ಅನುರಿಸರಿಕೊಂಡು ಬಂದಿರುವ ಪರಿಪಾಠ.
ಇದೀಗ ಹೆಡ್‍ಲೈನ್ ಸುದ್ದಿಯಾಗಿರುವ ಜುರೆಲ್, ತನ್ನ ಅರ್ಧಶತಕವನ್ನು ತನ್ನ ತಂದೆಗೆ ಗನ್ ಪಾಯಿಂಟ್ ಸೆಲೆಬ್ರೆಷನ್ ಮೂಲಕ ಅರ್ಪಣೆ ಮಾಡಿದ್ರೆ, ಶತಕವನ್ನು ಭಾರತೀಯ ಯೋಧರಿಗೆ ಸೆಲ್ಯೂಟ್ ಮೂಲಕ ಅರ್ಪಿಸಿದ್ದಾನೆ. ಸೈನಿಕರ ಕಷ್ಟವೇನು ಎಂಬುದನ್ನು ನೋಡಿ ಬೆಳೆದಿದ್ದ ಜುರೆಲ್, ಅಪ್ಪನ ಶಿಸ್ತು ಮತ್ತು ಅಮ್ಮನ ತ್ಯಾಗವನ್ನು ಮರೆತಿಲ್ಲ. 2022ರಲ್ಲಿ ಮೊದಲ ಬಾರಿ ಐಪಿಎಲ್‍ನಲ್ಲಿ ಸಿಕ್ಕಿದ್ದ 20 ಲಕ್ಷ ಹಣದಲ್ಲಿ ಅಮ್ಮನಿಗೆ ಚಿನ್ನದ ಸರವನ್ನು ಸಪ್ರೈಸ್ ಆಗಿ ಉಡುಗೊರೆ ಕೊಟ್ಟಿದ್ದ. ಹಾಗಂತ ಅಮ್ಮನ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದ್ರೆ ಅಮ್ಮನ ತ್ಯಾಗಕ್ಕೆ ಸಣ್ಣ ಕಾಣಿಕೆಯನ್ನು ನೀಡಿದ್ದಾನೆ.
ಅದೇನೇ ಇರಲಿ.. ಅಂದು ಅಮ್ಮನ ಚಿನ್ನದ ನೆಕ್ಲೆಸ್ ಇಂದು ಮಗನ ಕ್ರಿಕೆಟ್ ಬದುಕನ್ನು ಬಂಗಾರವನ್ನಾಗಿಸಿದೆ. ಅಮ್ಮನ ತ್ಯಾಗ, ಪ್ರೀತಿ, ಮಮತೆಗೆ ಎಂದೆಂದೂ ಬೆಲೆ ಕಟ್ಟಲು ಆಗಲ್ಲ..ಹಾಗೇ. ಸರ್ಕಾರಿ ಉದ್ಯೋಗ ಬೇಕು ಎಂಬ ಅಪ್ಪನ ಆಸೆಯೂ ತಪ್ಪಲ್ಲ..ಕ್ರಿಕೆಟಿಗನಾಗಬೇಕು ಎಂದು ಕನಸು ಕಾಣೋದೇ ಪ್ರಮಾದ ಎಂದು ಹೇಳುವುದು ಸರಿಯಲ್ಲ.. ಯಾಕಂದ್ರೆ ನಮ್ಮ ಗುರಿ, ಬದ್ಧತೆ, ಶಿಸ್ತು, ಪರಿಶ್ರಮವಿದ್ರೆ ಮಾತ್ರ ಅಸಾಧ್ಯ ಎಂಬುದನ್ನು ಸಾಧ್ಯ ಎಂದು ಸಾಬೀತುಪಡಿಸಲು ಸಾಧ್ಯ.
ಧ್ರುವ್ ಜುರೆಲ್.. ನಿನ್ನ ಕ್ರಿಕೆಟ್ ಜರ್ನಿಯೇ ಒಂದು ರೋಚಕ ಅಧ್ಯಾಯ. ನಿನ್ನಂತಹ ಹಲವಾರು ಕ್ರಿಕೆಟಿಗರು ಇದೇ ರೀತಿಯಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನಪಡೆದುಕೊಂಡಿದ್ದಾರೆ. ಅಷ್ಟಕ್ಕೂ ಟೀಮ್ ಇಂಡಿಯಾದಲ್ಲಿ ಶ್ರೀಮಂತರ ಮಕ್ಕಳಿಲ್ಲ. ಬಹುತೇಕ ಬಡವರ ಮಕ್ಕಳೇ ಟೀಮ್ ಇಂಡಿಯಾವನ್ನು ಶ್ರೀಮಂತಗೊಳಿಸಿದ್ದಾರೆ. ಅದಕ್ಕೆ ಹೇಳೋದು ಪ್ರತಿಭೆ ಅನ್ನೋದು ಯಾರಪ್ಪನ ಸ್ವತ್ತು ಅಲ್ಲ.