ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗಳದಲ್ಲಿ ಹಗರಣದ ಸ್ವರೂಪ ಪಡೆಯುವ ಶಂಕೆ ಮೂಡಿಸಿರುವ  ಮತ್ತೊಂದು ಸುದ್ದಿ ಸದ್ದು ಮಾಡಿದೆ. ಬೀದಿನಾಯಿಗಳಿಗೆ ಅಳವಡಿಸಲು ಹೊರಟಿರುವ ಮೈಕ್ರೋಚಿಪ್ ಈಗ ಹಗರಣದ ಸ್ವರೂಪ ಪಡೆದುಕೊಳ್ಳುತ್ತಿದೆ.ಅನಗತ್ಯ ಹಾಗೂ ಅಪಾಯಕಾರಿಯಾಗಿರುವ ಮೈಕ್ರೋಚಿಪ್ ಅಳವಡಿಕೆ ನಿಯಮಬಾಹಿರ ಕೃತ್ಯ ಎಂದು ಪ್ರಾಣಿಪ್ರಿಯರು ಈಗ ವರಾತ ತೆಗೆದಿದ್ದಾರೆ. ನಾಯಿಗಳ ಸೆನ್ಸಸ್ ನಲ್ಲಿ ನಡೆಯಿತೆನ್ನಲಾದ ಹಗರಣದ ನಂತರ ಪಶುಪಾಲನಾ ಇಲಾಖೆಯಲ್ಲಿ ನಡೆಯೊಕ್ಕೆ ಹೊರಟಿರುವ ಹಗರಣ ಇದೆನ್ನಲಾಗಿದೆ.

ಬೃಹತ್ತಾಗಿ ಬೆಳೆದಿರುವ ಬೆಂಗಳೂರಿನಲ್ಲಿ  ಬೀದಿನಾಯಿಗಳು ಎಷ್ಟಿವೆ ಎಂದು ಕೇಳಿದ್ರೆ ಕರಾರುವಕ್ಕಾಗಿ ಹೇಳೊಕ್ಕೆ ಬರುವುದಿಲ್ಲ.ಒಂದು ಅಂದಾಜು 2,79,335 ಎಂದಿತ್ತು  ಬಿಬಿಎಂಪಿ. ಯಾಕೆ ಕರಾರುವಕ್ಕಾಗಿ ಹೇಳೊಕ್ಕೆ ಬರೊಲ್ಲ ಎಂದು ಕೇಳಿದ್ರೆ ಬೀದಿನಾಯಿಗಳೆಲ್ಲವನ್ನು ಗಲ್ಲಿಗಲ್ಲಿಗೆ ಹೋಗಿ ಹುಡುಕಿ ಸೆನ್ಸಸ್ ಮಾಡೊಕ್ಕೆ ಆಗೊಲ್ಲ,ಹಾಗಾಗಿ ಏನೇ ಹೇಳಿದ್ರೂ ಅದು ಬಹುಷಃ ಎನ್ನುವ ಪದದಲ್ಲೇ ಉಲ್ಲೇಖಿಸಬೇಕು ಎಂದಿದ್ದಾಗಲೇ ಸಾರ್ವಜನಿಕ ವಲಯದಲ್ಲಿ ಏನೋ ವ್ಯತ್ಯಾಸವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಹೋಗಲಿ ಬಿಡಿ….ಎಂದು ಸುಮ್ಮನಾದ್ರೂ ಈಗ ಪಶುಪಾಲನ ಇಲಾಖೆ ಕೈಗೆತ್ತಿಕೊಳ್ಳೊಕ್ಕೆ ಹೊರಟಿರುವ ಮೈಕ್ರೋಚಿಪ್ ಅಳವಡಿಕೆ ಇದೆಯೆಲ್ಲಾ ಅದು ಎಂಥವರಿಗೂ ಅವೈಜ್ನಾನಿಕ ಹಾಗೂ ಪ್ರಕೃತಿ ಸಹಜ ಎನಿಸುವುದೇ ಇಲ್ಲ..ಏಕೆಂದರೆ ಬೀದಿನಾಯಿಗಳ ವಿಚಾರದಲ್ಲಿ ಮಾಡೊಕ್ಕೆ ಸಾಕಷ್ಟು ಸುಧಾರಣೆಯ ಕೆಲಸಗಳಿದ್ದರೂ ಅವನ್ನೆಲ್ಲಾ ಬಿಟ್ಟು ಚಿಪ್ ಅಳವಡಿಸ್ತೀನಿ ಎಂದು ಹೊರಟಿರುವುದು ಪ್ರಾಣಿದಯಾ ಸಂಘಗಳನ್ನು ನಖಶಿಖಾಂತ ಉರಿಸಿದೆ.ಇದು ಕೇವಲ ಹಣ ಲೂಟಿಯ ಸ್ಕೀಂ ಎನ್ನುವುದು ಮೈಕ್ರೋಚಿಪ್ ಅಳವಡಿಕೆ ವಿರುದ್ದ ದೊಡ್ಡ ಜನಾಂದೋಲನವನ್ನೇ ರೂಪಿಸ್ಲಿಕ್ಕೆ ಹೊರಟಿರುವ ಪ್ರಾಣಿಪ್ರಿಯ ಹಾಗೂ ಪ್ರಾಣಿಕಲ್ಯಾಣ ಮಂಡಳಿಯ ಪ್ರಮುಖ ಅರುಣ್ ಪ್ರಸಾದ್ ಆರೋಪ.

 ಕೆ.ಪಿ. ರವಿಕುಮಾರ್: ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ
ಕೆ.ಪಿ. ರವಿಕುಮಾರ್, ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ

ಪಶುಸಂಗೋಪನಾ ಇಲಾಖೆ ಪ್ರಕಾರ ಮೈಕ್ರೋಚಿಪ್ ಅಳವಡಿಕೆ ಯಾಕೆ ಕಡ್ಡಾಯ..:  ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಸುವ ಅಗತ್ಯವನ್ನು  ಬಿಬಿಎಂಪಿಯ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರಾದ  ಕೆಪಿ ರವಿಕುಮಾರ್ ಈ ರೀತಿ ಹೇಳ್ತಾರೆ. ಅವರ ಪ್ರಕಾರ

“2.8 ಲಕ್ಷ ಬೀದಿನಾಯಿಗಳ ಪೈಕಿ ಸುಮಾರು 1.4 ಲಕ್ಷ ನಾಯಿಗಳಿಗೆ ಮೈಕ್ರೋಚಿಪ್ ಅಳವಡಿಸುವ ಹಿಂದಿನ ಉದ್ದೇಶ ಬೀದಿ ನಾಯಿಗಳ ಕಂಪ್ಲೀಟ್ ವಿವರಣೆಯನ್ನು ಒಂದು ಚಿಪ್ ನಲ್ಲಿ ಕ್ರೋಢೀಕರಿಸುವುದು. ಅಗತ್ಯಬಿದ್ದಾಗ ಕೋಡ್ ನ್ನು ಸ್ಕ್ಯಾನ್ ಮಾಡಿದ್ರೆ ಅದರ ಎಲ್ಲಾ ಮಾಹಿತಿ ಸಿಗುತ್ತದೆ.ಇದರಿಂದ ನಾಯಿಯ ವಿವರ, ಯಾವ ಏರಿಯಾದ್ದು,ಅದಕ್ಕೆ ಎಬಿಸಿ ಮಾಡಲಾಗಿದೆಯಾ..? ಎಆರ್ ವಿ ನೀಡಲಾಗಿದೆಯಾ..? ವ್ಯಾಕ್ಸಿನೇಷನ್ ಕೊಡಲಾಗಿದೆಯಾ ಎನ್ನುವ ಮಾಹಿತಿ ದೊರೆಯುತ್ತದೆ.ಇದರಿಂದ ಪದೇ ಪದೇ ವ್ಯಾಕ್ಸಿನೇಷನ್ ಮಾಡುವ ತಾಪತ್ರೆಯ ತಪ್ಪಿದಂತಾಗುತ್ತದೆ”

ಅರುಣ್ ಪ್ರಸಾದ್.,ಪ್ರಾಣಿಪ್ರಿಯರು, ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ
ರುಣ್ ಪ್ರಸಾದ್.,ಪ್ರಾಣಿಪ್ರಿಯರು, ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ

ಆದರೆ ಇದರ ಅಗತ್ಯ ಏನಿದೆ ಎನ್ನುವುದು ಅರುಣ್ ಪ್ರಸಾದ್ ಸೇರಿದಂತೆ ಅನೇಕ ಪ್ರಾಣಿಪ್ರಿಯರು ಹಾಗೂ ವನ್ಯಜೀವಿ ಸಂರಕ್ಷಕರ ವಾದ. ಬೀದಿನಾ ಯಿಗಳ ವಿಚಾರದಲ್ಲಿ ಬಿಬಿಎಂಪಿಯಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಏಜೆನ್ಸಿಯಾಗಲಿ ದಿಢೀರ್ ಮೈಕ್ರೋಚಿಪ್ ಅಳವಡಿಕೆಯಂಥ ನಿರ್ಧಾರ ಕೈಗೊಳ್ಳುವಂತಿಲ್ಲ.ಪ್ರಾಣಿಕಲ್ಯಾಣ ಮಂಡಳಿಯಲ್ಲಿ ಈ ಬಗ್ಗೆ ನಿರ್ದಾರವಾಗಬೇಕು..ಸರ್ಕಾರದ ಗೆಜೆಟ್ ನಲ್ಲಿ ಇದರ ಉಲ್ಲೇಖವಾಗಬೇಕು. ಅದಾಗದ ಹೊರತು ಬಿಬಿಎಂಪಿ ಪಶುಪಾಲನಾ ಇಲಾಖೆ ಬೀದಿನಾಯಿಗಳ ವಿಚಾರದಲ್ಲಿ ಇಂತದ್ದೊಂದು ನಿರ್ಣಯ ಕೈಗೊಂಡಿರುವುದು ಅಕ್ರಮ ಎನ್ನಲಾಗುತ್ತಿದೆ.

ಮೈಕ್ರೋಚಿಪ್ ಅಳವಡಿಸುವ ಭರಾಟೆಯಲ್ಲಿ ಬೀದಿನಾಯಿಗಳ ಆರೋಗ್ಯ ಹಾಗೂ ಜೀವದೊಂದಿಗೂ ಬಿಬಿಎಂಪಿ ಚೆಲ್ಲಾಟವಾಡಿದಂತಾಗುತ್ತಿದೆ.ಮೈಕ್ರೋಚಿಪ್ ಅಳವಡಿಸಿ ಕೈತೊಳೆದುಕೊಂಡ್ರೆ ಹೇಗೆ..? ನಮಗೂ ಬೀದಿನಾಯಿಗಳಿಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಕೂರುವಂಗಿಲ್ಲ.ಅಲ್ಲದೇ ಕುತ್ತಿಗೆಯೊಳಗೆ ರಂದ್ರ ಕೊರೆದು ಅಳವಡಿಸುವ  ಮೈಕ್ರೋಚಿಪ್ ಜಾರಿ ದೇಹದೊಳಗೆ ಜಾರಿದ್ರೆ ಅದು ಇನ್ಫೆಕ್ಷನ್ ಆಗುವ ಆತಂಕವಿದೆ.ಇದು ಬೀದಿನಾಯಿಗಳ ಜೀವಕ್ಕೇ ಮಾರಕವಾದ್ರೆ ಇದರ ಹೊಣೆ ಯಾರು ಹೊರುವುದು ಎಂದು ಪ್ರಶ್ನಿಸ್ತಾರೆ ಅರುಣ್ ಪ್ರಸಾದ್.

ಕಿರಣ್, ಗ್ರೀನ್ ಆರ್ಮಿ ಫೋರ್ಸ್ ಸಂಸ್ಥಾಪಕ 
ಕಿರಣ್, ಗ್ರೀನ್ ಆರ್ಮಿ ಫೋರ್ಸ್ ಸಂಸ್ಥಾಪಕ 

ಮತ್ತೋರ್ವ ವನ್ಯಜೀವಿ ಸಂರಕ್ಷಕ ಹಾಗೂ ಗ್ರೀನ್ ಆರ್ಮಿ ಫೋರ್ಸ್ ಸಂಸ್ಥಾಪಕ  ಕಿರಣ್ ಮೈಕ್ರೋಚಿಪ್ ಅಳವಡಿಕೆ ಬಿಬಿಎಂಪಿ ಪಶುಪಾಲನಾ ಇಲಾಖೆಯ ಅತೀ ದೊಡ್ಡ ಮೂರ್ಖ ನಿರ್ದಾರ ಎನ್ತಾರೆ.ಮಾಡೊಕ್ಕೆ ಸಿಕ್ಕಾಪಟ್ಟೆ ಕೆಲಸಗಳಿವೆ.ಅದನ್ನು ಮಾಡೋದು ಬಿಟ್ಟು ಚಿಪ್ ಅಳವಡಿಸ್ತಾರಂತೆ.ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯೇ ನಡೆದಿಲ್ಲ.ಈ ವಿಷಯವನ್ನು ಸಾರ್ವಜನಿಕ ಚರ್ಚೆಗೇನೆ ಬಿಟ್ಟಿಲ್ಲ.ನಮ್ಮನ್ನೆಲ್ಲಾ ಮಾತುಕತೆಗೇನೆ ಆಹ್ವಾನಿಸಿಲ್ಲ.ಇವರ ಇಷ್ಟಕ್ಕೆ ಬಂದಂತೆ ನಿರ್ದಾರ ಮಾಡಿದ್ದಾರೆ.

ಕಳಪೆ ಗುಣಮಟ್ಟದ ಮೈಕ್ರೋಚಿಪ್ ಅಳವಡಿಸಿದ್ರೆ ಬೀದಿನಾಯಿಗಳಿಗೆ ಕಂಟಕ ಗ್ಯಾರಂಟಿ:  ಮೈಕ್ರೋಚಿಪ್ ಗಳನ್ನು ಅಳವಡಿಸುವ ಕೆಲಸ ನಡೆದೇ ಇಲ್ಲವೆಂದೇನಿಲ್ಲ.ಕೆಲವರು ಖಾಸಗಿಯಾಗಿ ತಮ್ಮ ಸಾಕುನಾಯಿಗಳಿಗೆ ಈ ಮೈಕ್ರೋಚಿಪ್ ಅಳವಡಿಸುತ್ತಾರೆ.ಆದರೆ ಆ ಮೈಕ್ರೋಚಿಪ್ ಗಳಿಗೂ ಬಿಬಿಎಂಪಿ ಅಳವಡಿಸಲು ಹೊರಟಿರುವ ಮೈಕ್ರೋಚಿಪ್ ಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ.4 -5 ಸಾವಿರ ಮೌಲ್ಯದ ಒಳ್ಳೆ ಗುಣಮಟ್ಟದ ಮೈಕ್ರೋಚಿಪ್ ಗಳನ್ನು ಅಳವಡಿಸುತ್ತಾರೆ.ಅವುಗಳಿಂದ ನಾಯಿಗಳ ಜೀವಕ್ಕೆ ಕಂಟಕವಿರುವುದಿಲ್ಲ.

ಆದರೆ ಬಿಬಿಎಂಪಿಯವರು ಅಳವಡಿಸಲು ಹೊರಟಿರುವುದು 195 ಮೌಲ್ಯದ ಮೈಕ್ರೋಚಿಪ್ ಗಳನ್ನು.ಅವುಗಳ ಗುಣಮಟ್ಟ-ಬಾಳಿಕೆ-ಅಡ್ಡಪರಿಣಾಮ ದಂಥ ಸಾಧಕ-ಬಾಧಕಗಳ ಬಗ್ಗೆ  ಅವರವರೇ ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ.ಇದು ಎಷ್ಟರ ಮಟ್ಟಿಗೆ ಒಳ್ಳೇದು ಎನ್ನುವುದನ್ನು ಅವರೇ ಹೇಳಬೇಕಿದೆ. ಸೂಕ್ಷ್ಮವಾಗಿ ಗಮನಿಸಿದ್ರೆ ಇದು ಬಿಬಿಎಂಪಿ ಪಶುಪಾಲನೆ ಇಲಾಖೆಯ ಯಡವಟ್ಟಿನ ನಿರ್ದಾರ ಎನ್ನಬಹುದು.ಬೀದಿನಾಯಿಗಳ ಜೀವಕ್ಕೇನೆ ತೊಂದರೆಯಾದರೂ ಅದಕ್ಕೆ ನಾವೇ ಹೊಣೆ ಎಂದು ಬರೆದುಕೊಟ್ಟು ಬಿಬಿಎಂಪಿ ಪಶುಪಾಲನೆ ಇಲಾಖೆ ಮೈಕ್ರೋಚಿಪ್ ಅಳವಡಿಸಬೇಕು.ಇಲ್ಲದಿದ್ದರೆ ಅದರ ಬಗ್ಗೆ ಉಗ್ರಹೋರಾಟ ನಡೆಸೋದು ಕನ್ಪರ್ಮ್ ಎಂದು ಕಿರಣ್ ಎಚ್ಚರಿಸಿದ್ದಾರೆ.

ಒಂದು ಮೈಕ್ರೋಚಿಪ್ ಬೆಲೆ 195 ರೂ,1,84,671 ಬೀದಿನಾಯಿಗಳು-,3 ಕೋಟಿ 81 ಲಕ್ಷ ಖರ್ಚು :ಬಿಬಿಎಂಪಿ ಪಶುಪಾಲನಾ ಇಲಾಖೆಗೆ ಇದು ಪ್ರಾಣಿವಿರೊಧಿ ಎನ್ನುವುದು ಗೊತ್ತಿದ್ದರೂ ಬಹುತೇಕರ ವಿರೋಧಗಳ ನಡುವೆಯೇ ಟೆಂಡರ್ ಕರೆದಿದೆ.ಪಶುಪಾಲನೆ ಇಲಾಖೆ ಮಾಡಿಕೊಂಡಿರುವ ವ್ಯವಸ್ಥೆಯ ಒಂದಷ್ಟು ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.

ಪೂರ್ವ ವಲಯದಲ್ಲಿಎಬಿಸಿ(-ಎಬಿಸಿ-ಸಂತಾನಹರಣ ಶಸ್ತ್ರಚಿಕಿತ್ಸೆ)ಗೊಳಪಟ್ಟ 26043 ಬೀದಿನಾಯಿಗಳಿದ್ದು ಪ್ರತಿ ನಾಯಿಗೆ 195 ರೂನಂತೆ ಎಲ್ಲಾ ನಾಯಿಗಳಿಗೆ ಅದನ್ನು ಅಳವಡಿಸೊಕ್ಕೆ 50 ಲಕ್ಷದ 78 ಸಾವಿರದ 385 ರೂ ಖರ್ಚಾಗಲಿದೆ.ಹಾಗೆಯೇ ಪಶ್ಚಿಮ ವಲಯದ 14,013 ನಾಯಿಗಳಿಗೆ 27 ಲಕ್ಷದ 32 ಸಾವಿರದ 535 ರೂ ಗಳನ್ನು ಮೈಕ್ರೋಚಿಪ್ ಅಳವಡಿಸೊಕ್ಕೆ ಖರ್ಚು ಮಾಡಲಾಗುವುದು.

ಇನ್ನು ದಕ್ಷಿಣ ವಲಯದ 14,621 ಬೀದಿನಾಯಿಗಳಿಗೆ 28,51,095 ರೂ ಖರ್ಚಾಗಲಿದೆ.ಹಾಗೆಯೇ ಆರ್ ಆರ್ ನಗರ ವಲಯದಲ್ಲಿರುವ 27,833 ಬೀದಿನಾಯಿಗಳಿಗೆ 54,27,435 ರೂ ತಗುಲಲಿದೆ.ದಾಸರಹಳ್ಳಿ ವಲಯದಲ್ಲಿರುವ 13,611 ಬೀದಿನಾಯಿಗಳಿಗೆ 26,54,145 ರೂ,    ಬೊಮ್ಮನಹಳ್ಳಿ ವಲಯದ 26,792 ಬೀದಿನಾಯಿಗಳಿಗೆ 52,24,440, ಯಲಹಂಕದಲ್ಲಿರುವ 25,372 ಬೀದಿನಾಯಿಗಳಿಗೆ  49,47,540 ರೂ ಹಾಗೂ ಮಹಾದೇವಪುರದ ಎಬಿಸಿ ಕೇಂದ್ರಗಳ ಮಾಹಿತಿಯಂತೆ 36,386  ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಸಲು 70,95,270 ರೂಗಳನ್ನು ಖರ್ಚು ಮಾಡೊಕ್ಕೆ ಬಿಬಿಎಂಪಿ ಪಶುಪಾಲನೆ ಇಲಾಖೆ ಮುಂದಾಗಿದೆ.

ಪ್ರಾಣಿಪ್ರಿಯರು ಹಾಗೂ ಪ್ರಾಣಿದಯಾ ಸಂಘಗಳು ಹಾಗೂ ವನ್ಯಜೀವಿ ಸಂರಕ್ಷಕರ ತೀವ್ರ ವಿರೋಧದ ನಡುವೆಯೂ ಪಶುಪಾಲನಾ ಇಲಾಖೆ ಮೈಕ್ರೋಚಿಪ್ ಗಳನ್ನು ಅಳವಡಿಸೊಕ್ಕೆ ಕೋಟ್ಯಾಂತರ ಖರ್ಚು ಮಾಡೊಕ್ಕೆ ಮುಂದಾಗಿದೆ.ಆದರೆ ಯಾವುದೇ ಕಾರಣಕ್ಕೂ ಪ್ರಾಣಿವಿರೋಧಿಯಾಗಿರುವ ಈ ಯೋಜನೆಗೆ ಅವಕಾಶ ಮಾಡಿಕೊಡಬಾರದೆಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರಿಗೂ ಮನವಿ ಸಲ್ಲಿಸಲಾಗಿದೆ.

ಹಾಗಾಗಿ ಯೋಜನೆ ಅನುಷ್ಟಾನದ ಚೆಂಡು ಇದೀಗ ರಾಕೇಶ್ ಸಿಂಗ್ ಅವರ ಅಂಗಳದಲ್ಲಿದೆ.ಅದಕ್ಕೆ ಯಾವ ರೀತಿಯ ಸ್ವರೂಪ ಕೊಡುತ್ತಾರೋ ಎನ್ನುವುದನ್ನು ಸಧ್ಯಕ್ಕೆ ಕಾದುನೋಡಬೇಕಿದೆಯಷ್ಟೇ..?!

Spread the love

Leave a Reply

Your email address will not be published. Required fields are marked *