ಎಕ್ಸೆಲ್ ಕಾಲೇಜಿನಿಂದ ವಿಷವಾಯಿತಾ ಗುರುವಾಯನಕೆರೆ? ಮೀನುಗಳ ಮಾರಣಹೋಮಕ್ಕೆ ಯಾರು ಹೊಣೆ!


ಬೆಳ್ತಂಗಡಿ: ಪ್ರಕೃತಿ ರಮಣೀಯವಾಗಿರುವ, ಬೆಳ್ತಂಗಡಿ ತಾಲೂಕಿನ ಜೀವನಾಡಿಯಾಗಿರುವ ಗುರುವಾಯನಕೆರೆಯ ಬೃಹತ್ ಕೆರೆ ಈಗ ಸಾವಿನ ಮನೆಯಾಗಿ ಮಾರ್ಪಟ್ಟಿದೆ. ಕಳೆದ ಕೆಲವು ದಿನಗಳಿಂದ ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದ್ದು, ಎಕ್ಸೆಲ್ ಕಾಲೇಜಿನಿಂದ ಹೊರ ಬರುವ ತ್ಯಾಜ್ಯದಿಂದಾಗಿ ಕೆರೆ ನೀರು ಸಂಪೂರ್ಣ ಮಲಿನಗೊಂಡಿರುವುದು ಈ ಪರಿಸರ ದುರಂತಕ್ಕೆ ಸಾಕ್ಷಿಯಾಗಿದೆ ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಮಾರ್ಚ್ 6ರಂದು ಕೆರೆಯಲ್ಲಿ ಹಠಾತ್ತನೆ ಮೀನುಗಳು ಸತ್ತು ತೇಲುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿತ್ತು. ಕೆರೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ತಕ್ಷಣ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಮಾರ್ಚ್ 16ರಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರಾಧಿಕಾರಿ ಮಹೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿಗಳೇ ನೇರ ಹೊಣೆ: ಸಾರ್ವಜನಿಕರ ಆರೋಪ

ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವುದಕ್ಕೆ ಸ್ಥಳೀಯ ಎಕ್ಸೆಲ್ ಕಾಲೇಜಿನಿಂದ ಹೊರಬರುತ್ತಿರುವ ಕೊಳಚೆ ನೀರೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಎಸ್‌ಟಿಪಿ ಘಟಕದ ವೈಫಲ್ಯ: ಕಾಲೇಜಿನ ಸಾಲಜಿನ ಸಂಸ್ಕರಣಾ ಘಟಕ (STP) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಭೇಟಿ ನೀಡುವಾಗ ಮಾತ್ರ ಕೊಳಚೆ ನೀರು ಬಿಡುವುದನ್ನು ನಿಲ್ಲಿಸಿ, ನಂತರ ಮತ್ತೆ ಕೆರೆಗೆ ಮಲಿನ ನೀರನ್ನು ಹರಿಸಲಾಗುತ್ತಿದೆ ಎಂಬುದು ಸ್ಥಳೀಯರ ದೂರು.

ಆಮ್ಲಜನಕದ ಕೊರತೆ: ಕೆರೆಯಲ್ಲಿನ ನೀರು ವಿಷಕಾರಿಯಾಗುತ್ತಿರುವುದರಿಂದ ಮೀನುಗಳು ಆಮ್ಲಜನಕಕ್ಕಾಗಿ ಹಾತೊರೆಯುತ್ತಿವೆ. ಈಗಾಗಲೇ ದೊಡ್ಡ ಗಾತ್ರದ ಕ್ಯಾಟ್‌ಫಿಶ್‌ಗಳು ಸೇರಿದಂತೆ ಸಾವಿರಾರು ಮೀನುಗಳು ಮೃತಪಟ್ಟಿವೆ.

ಆಡಳಿತಾತ್ಮಕ ವೈಫಲ್ಯ: ಕಳೆದ ವರ್ಷವೂ ಇಂತಹುದೇ ಘಟನೆ ನಡೆದಾಗ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿತ್ತು. ಆದರೆ, ಕುವೆಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಈ ಮರುಕಳಿಸುವಿಕೆಗೆ ಕಾರಣವಾಗಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

ಮೀನುಗಾರಿಕೆ ಗುತ್ತಿಗೆದಾರನಿಗೆ ಲಕ್ಷಾಂತರ ನಷ್ಟ

ಪಂಚಾಯತ್‌ನಿಂದ ಮೂರು ವರ್ಷಗಳ ಅವಧಿಗೆ 6 ಲಕ್ಷ ರೂಪಾಯಿ ನೀಡಿ ಮೀನುಗಾರಿಕೆ ಹಕ್ಕು ಪಡೆದಿದ್ದ ರಿಯಾದ್ ಎಂಬ ವ್ಯಾಪಾರಿ ಈಗ ಬೀದಿಗೆ ಬೀಳುವಂತಾಗಿದೆ. ಮಂಗಳವಾರ ಮೀನು ಹಿಡಿಯಲು ಹೋದಾಗ ಕೆರೆಯ ತುಂಬಾ ಸತ್ತ ಮೀನುಗಳೇ ಕಂಡುಬಂದಿವೆ. “ನಾನು ಸಾಲ ಮಾಡಿ ಹರಾಜಿನಲ್ಲಿ ಭಾಗವಹಿಸಿದ್ದೆ. ಆದರೆ ಇಂದು ಮೀನುಗಳ ಸಾವಿನಿಂದ ಅಪಾರ ನಷ್ಟವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು,” ಎಂದು ಅವರು ಕುವೆಟ್ಟು ಪಂಚಾಯತ್‌ಗೆ ಲಿಖಿತ ದೂರು ನೀಡಿದ್ದಾರೆ.

ALSO READ :  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 'ರೆಸಾರ್ಟ್' ರಾಜಕಾರಣ: ಈ ಮೀಟಿಂಗ್‌ನ ಹಿಂದಿರುವ ಅಸಲಿ ಮರ್ಮವೇನು?

ಎಕ್ಸೆಲ್ ಕಾಲೇಜಿನ ಪ್ರತಿಕ್ರಿಯೆ

 ಎಕ್ಸೆಲ್ ಕಾಲೇಜಿನಿಂದ ಗುರುವಾಯನಕೆರೆಗೆ ಕೊಳಚೆ ನೀರು  ಹೋಗುತ್ತಿದೆ ಎಂಬ ಸುದ್ದಿ ಬಗ್ಗೆ ಕನ್ನಡ ಫ್ಯ್ಲಾಶ್ ನ್ಯೂಸ್ ಕಾಲೇಜಿನ ಪ್ರಿನ್ಸಿಪಾಲರನ್ನು ಸಂಪರ್ಕಿಸಿದ್ದಾಗ, ಪ್ರಿನ್ಸಿಪಾಲರು ಈ ಆರೋಪವನ್ನು ನಿರಾಕರಿಸಿದ್ದಾರೆ ಮತ್ತು “ಕೊಳಚೆ ನೀರು ಕೆರೆಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾರೋ ನಮ್ಮ ಕಾಲೇಜಿಗೆ ಮಸಿ ಬಳಿಯಲು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ” ಎಂದು ದೂರಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಮಹೇಶ್ವರಿಯವರ ಹೇಳಿಕೆ

“ಗುರುರಾಯನ ಕೆರೆಯಲ್ಲಿ ಮೀನುಗಳು ಸತ್ತಿರುವುದು ನಿಜ. ಎಕ್ಸೆಲ್ ಸ್ಕೂಲ್ ನಿಂದ ತ್ಯಾಜ್ಯ ಹೊರಹಾಕಿದ್ದರಿಂದ ಈ ಘಟನೆ ಸಂಭವಿಸಿದೆ. ಎಕ್ಸೆಲ್ ಸ್ಕೂಲ್ ನವರು ಎಸ್ಟಿಪಿ (STP) ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಅವರ ಆವರಣದಿಂದ ತ್ಯಾಜ್ಯ ನೀರು ಕೆರೆಗೆ ಸೇರುತ್ತಿತ್ತು. ಈ ಹಿಂದೆ ಕೂಡ ಈ ಬಗ್ಗೆ ಕೇಂದ್ರ ಕಚೇರಿಗೆ ವರದಿ ಮಾಡಲಾಗಿದೆ. ಬೇಸಿಗೆಯಲ್ಲಿ ಬಿಸಿಲು ಹೆಚ್ಚಾದಾಗ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಆದರೆ, ಕಲುಷಿತ ನೀರು ಸೇರಿಕೊಂಡಿರುವುದು ಮೀನುಗಳ ಸಾವಿಗೆ ಮುಖ್ಯ ಕಾರಣ. ನೀರಿನ ಗುಣಮಟ್ಟದ ವಿಶ್ಲೇಷಣೆಯಲ್ಲಿ ಇದು ದೃಢಪಟ್ಟಿದೆ” ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ಮಹೇಶ್ವರಿಯವರು ಕನ್ನಡ ಫ್ಯ್ಲಾಶ್‌ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ.

ಕೆರೆ ರಕ್ಷಣೆಯ ಇಚ್ಛಾಶಕ್ತಿ ಇಲ್ಲವೇ?

ಗುರುವಾಯನಕೆರೆಯ ಈ ಪರಿಸ್ಥಿತಿಗೆ ಅಧಿಕಾರಿಗಳ ಮಧ್ಯದ ಗೊಂದಲ ಮತ್ತು ನಿರ್ಲಕ್ಷ್ಯವೇ ಕಾರಣ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಕಳೆದ ವರ್ಷ ಉಪಲೋಕಾಯುಕ್ತರಾದ ಜಸ್ಟಿಸ್ ಡಿ. ವೀರಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಹೂಳೆತ್ತುವ ಬಗ್ಗೆ ಸೂಚನೆ ನೀಡಿದ್ದರೂ, ಇಂದಿಗೂ ಅದರ ಅನುಷ್ಠಾನವಾಗಿಲ್ಲ.

ಇದನ್ನೂ ಓದಿ | “ಕ್ಯಾಮೆರಾಮನ್‌” ಗಳ ಸಾವೆಂದರೆ ಅಷ್ಟೊಂದು “ನಿಕೃಷ್ಟ”ನಾ..?! ಕನಿಷ್ಟ ಸೌಜನ್ಯಕ್ಕೂ “ಸಂತಾಪ-ಸಹಾನುಭೂತಿ” ಬೇಡ್ವಾ..!?

ಪರಿಸರಾಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಕುವೆಟ್ಟು ಪಂಚಾಯತ್ ಅಧ್ಯಕ್ಷ ವಿನೇಶ್ ಉಪಸ್ಥಿತರಿದ್ದರು. ಅಧಿಕಾರಿಗಳು ಕೇವಲ ಭೇಟಿ ನೀಡಿ ಹೋಗುವುದರ ಬದಲು, ಕೆರೆಗೆ ಮಲಿನ ನೀರು ಸೇರುವುದನ್ನು ಶಾಶ್ವತವಾಗಿ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಕೆರೆ ಸಂಪೂರ್ಣ ವಿಷಮಯವಾಗುವುದು ಖಚಿತ.

ಕಾಲೇಜು ಮತ್ತು ಪಂಚಾಯತ್ ಆಡಳಿತದ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂಜರಿಯುತ್ತಿರುವುದು ಏಕೆ? ನಷ್ಟ ಅನುಭವಿಸಿದ ಮೀನುಗಾರರಿಗೆ ಪರಿಹಾರ ನೀಡುವವರು ಯಾರು? ಈ ಜೀವನಾಡಿಯ ಉಳಿವಿಗಾಗಿ ಶಾಶ್ವತ ಪರಿಹಾರ ಯಾವಾಗ ಸಿಗಲಿದೆ? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.


Leave a Comment